ಯು.ಎಸ್. ರಾಜ್ಯ ಕಾರ್ಯದರ್ಶಿ ಘನತೆವೆತ್ತ ಶ್ರೀ ಆಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಘನತೆವೆತ್ತ ಶ್ರೀ ಲಾಯ್ಡ್ ಆಸ್ಟಿನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಭಾರತದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್ ಅವರೊಂದಿಗೆ "2+2" ಸ್ವರೂಪದ ಬಗ್ಗೆ ನಡೆದ ತಮ್ಮ ಚರ್ಚೆಗಳ ಕುರಿತು ಈ ಇಬ್ಬರು ಕಾರ್ಯದರ್ಶಿಗಳು ಪ್ರಧಾನಮಂತ್ರಿಯವರಿಗೆ ವಿವರಿಸಿದರು.
ಜೂನ್, 2023ರಲ್ಲಿ ಪ್ರಧಾನಮಂತ್ರಿಯವರ ಯು.ಎಸ್. ಭೇಟಿ ಮತ್ತು ಆನಂತರ ನವದೆಹಲಿಯಲ್ಲಿ ನಡೆದ ಶೃಂಗಸಭೆ ಜಿ20 ಸಂದರ್ಭದಲ್ಲಿ ಉಭಯ ನಾಯಕರ ನಡುವಿನ ಸಭೆಗಳ ನಂತರ ರಕ್ಷಣೆ, ಅರೆವಾಹಕಗಳು, ಉದಯೋನ್ಮುಖ ತಂತ್ರಜ್ಞಾನ, ಬಾಹ್ಯಾಕಾಶ, ಆರೋಗ್ಯ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಚರ್ಚಿಸಿದರು.
ಎರಡೂ ದೇಶಗಳು ಎಲ್ಲಾ ಕ್ಷೇತ್ರಗಳಲ್ಲಿ ಹೊಂದಿರುವ ಆಳವಾದ ಸಹಕಾರದ ಬಗ್ಗೆ ಪ್ರಧಾನಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು. ಭಾರತ ಮತ್ತು ಯು.ಎಸ್. ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯು ಪ್ರಜಾಪ್ರಭುತ್ವ, ಬಹುತ್ವ ಮತ್ತು ಕಾನೂನಿನ ನಿಯಮಕ್ಕೆ ಗೌರವವನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅವರುಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ವಿಷಯಗಳಲ್ಲಿ ಭಾರತ ಮತ್ತು ಯು.ಎಸ್. ನಡುವೆ ನಿಕಟ ಸಮನ್ವಯವನ್ನು ಮುಂದುವರೆಸುವ ಅಗತ್ಯವನ್ನು ಅವರುಗಳು ಚರ್ಚಿಸಿದರು.
ಯು.ಎಸ್. ಅಧ್ಯಕ್ಷ ಶ್ರೀ ಬಿಡೆನ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿಯವರು, “ಅವರೊಂದಿಗೆ ಸಂವಹನ ಮತ್ತು ಮಾಹಿತಿ ವಿನಿಮಯವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.
Glad to receive @SecBlinken and @SecDef. The “2+2” Format is a key enabler for further strengthening the India-US Comprehensive Global Strategic Partnership. Our shared belief in democracy, pluralism and the rule of law underpins our mutually beneficial cooperation in diverse… pic.twitter.com/IGku8yJJsj
— Narendra Modi (@narendramodi) November 10, 2023