ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಮಾನ್‌ನ ಸುಲ್ತಾನರಾದ ಘನತೆವೆತ್ತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.
ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಯ ಬಳಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ಮರು ನೇಮಕಗೊಂಡಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಒಮಾನ್ ಮತ್ತು ಭಾರತದ ನಡುವಿನ ಶತಮಾನಗಳಷ್ಟು ಹಳೆಯದಾದ ಸ್ನೇಹ ಸಂಬಂಧವನ್ನು ಒತ್ತಿ ಹೇಳಿದ ಘನತೆವೆತ್ತ ದೊರೆಗಳು, ಭಾರತದ ಜನತೆಯ ಪ್ರಗತಿ ಮತ್ತು ಸಮೃದ್ಧಿಗೆ ಶುಭ ಕೋರಿದರು.
ಪ್ರಧಾನಮಂತ್ರಿಯವರು ಆತ್ಮೀಯ ಶುಭಾಶಯಗಳಿಗಾಗಿ ಘನತೆವೆತ್ತ ದೊರೆಯವರಿಗೆ ಧನ್ಯವಾದ ಅರ್ಪಿಸಿದರು. ಇದೇವೇಳೆ, 2023ರ ಡಿಸೆಂಬರ್‌ನಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರವನ್ನು ಆಳಗೊಳಿಸಲು ಕಾರಣವಾದ ದೊರೆಗಳ ಐತಿಹಾಸಿಕ ಭಾರತ ಭೇಟಿಯ ಬಗ್ಗೆಯೂ ಪ್ರಧಾನಿ ಒತ್ತಿ ಹೇಳಿದರು.
ಎರಡೂ ದೇಶಗಳ ಪರಸ್ಪರ ಲಾಭಕ್ಕಾಗಿ ಭಾರತ-ಒಮಾನ್ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ಮತ್ತು ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.
ಪ್ರಧಾನಮಂತ್ರಿಯವರು ಮುಂಬರುವ ಈದ್ ಅಲ್ ಅಧಾ ಹಬ್ಬದ ಸಂದರ್ಭದಲ್ಲಿ ಘನತೆವೆತ್ತ ದೊರೆಗಳು ಮತ್ತು ಒಮಾನ್ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.