ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಮಾವೇಶ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳೊಂದಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ದೇಶಾದ್ಯಂತದ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
2017 ರಿಂದ ಸಾವಯವ ಕೃಷಿಕರಾಗಿರುವ ಮಿಜೋರಾಂನ ಐಜ್ವಾಲ್ ನ ಶ್ರೀ ಶುಯಾಯಾ ರಾಲ್ಟೆ ಅವರು ಶುಂಠಿ, ಮಿಜೋ ಮೆಣಸಿನಕಾಯಿ ಮತ್ತು ಇತರ ತರಕಾರಿಗಳನ್ನು ಉತ್ಪಾದಿಸುವ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು ಮತ್ತು ತಮ್ಮ ಉತ್ಪನ್ನಗಳನ್ನು ದೂರದಲ್ಲಿರುವ ನವದೆಹಲಿಯವರೆಗಿನ ಹಲವಾರು ಪ್ರಸಿದ್ಧ ಕಂಪನಿಗಳಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿದೆ ಎಂದು ಮಾಹಿತಿ ತಿಳಿಸಿದರು. ಸಾವಯವ ಕೃಷಿ ಮೂಲಕ ಅವರ ಆದಾಯವನ್ನು ರೂ. 20,000 ಗಳಿಂದ ರೂ. 1,50,000 ವರೆಗೆ ಏರಿಕೆಯಾಗಿದೆ ಎಂಬುದು ಗಮನಾರ್ಹವಾಗಿದೆ.
ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆ ಪ್ರಧಾನಮಂತ್ರಿಯವರು ಮಾಡಿದ ವಿಚಾರಣೆಯ ನಂತರ, ಸಾವಯವ ಕೃಷಿಕರಾಗಿರುವ ಶ್ರೀ ರಾಲ್ಟೆ ಅವರು ಭಾರತದ ಈಶಾನ್ಯ ಪ್ರದೇಶದಲ್ಲಿ ಮಿಷನ್ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿಯ ಅಡಿಯಲ್ಲಿ ಮಾರುಕಟ್ಟೆಯನ್ನು ರಚಿಸಲಾಗಿದೆ. ಅಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ತೊಂದರೆಯಿಲ್ಲದೆ ಮಾರಾಟ ಮಾಡಬಹುದಾದ ವ್ಯವಸ್ಥೆಗಳಿವೆ. ದೇಶದಲ್ಲಿ ಅನೇಕ ರೈತರು ಸಾವಯವ ಕೃಷಿಯತ್ತ ಸಾಗುತ್ತಿದ್ದಾರೆ ಮತ್ತು ರೈತರು ಅದರಲ್ಲೂ, ಈಶಾನ್ಯದ ದೂರದ ಪ್ರದೇಶಗಳ ರೈತರು, ಶ್ರೀ ರಾಲ್ಟೆ ಅವರ ನೇತೃತ್ವದಲ್ಲಿ ಸಾವಯವ ರೀತಿಯ ಕೃಷಿಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, ಈ ಕುರಿತು ಸಂತಸ ವ್ಯಕ್ತಪಡಿಸಿದರು.
ಸಾವಯವ ಕೃಷಿಯು ಜನರ ಮತ್ತು ಭೂಮಿಯ ಆರೋಗ್ಯಕ್ಕೆ ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಕಳೆದ 9 ವರ್ಷಗಳಲ್ಲಿ, ರಾಸಾಯನಿಕ ಮುಕ್ತ ಉತ್ಪನ್ನಗಳ ಮಾರುಕಟ್ಟೆಯು 7 ಪಟ್ಟು ಹೆಚ್ಚು ಪ್ರಗತಿ ಸಾಧಿಸಿದೆ, ಇದು ರೈತರ ಆದಾಯದಲ್ಲಿ ಹೆಚ್ಚಳಕ್ಕೆ ಮತ್ತು ಗ್ರಾಹಕರಿಗೆ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ದೇಶದ ನಾನಾ ಭಾಗಗಳಲ್ಲಿ ಸಾವಯವ ಕೃಷಿ ಮಾಡುತ್ತಿರುವ ರೈತರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಆಸಕ್ತಿ ಇರುವ ಎಲ್ಲರೂ ಸಾವಯವ ಕೃಷಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.