ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ರ್ಯಾಂಡ್ ಡ್ಯೂಕ್ ಲುಕ್ಸೆಂಬರ್ಗ್ ಪ್ರಧಾನಮಂತ್ರಿ ಘನತೆವೆತ್ತ ಕ್ಸೇವಿಯರ್ ಬೆಟೆಲ್ ಅವರೊಂದಿಗೆ ವರ್ಚುವಲ್ ಮಾಧ್ಯಮದ ಮೂಲಕ ಇಂದು ದ್ವಿಪಕ್ಷೀಯ ಶೃಂಗಸಭೆ ನಡೆಸಿದರು.
ಕೋವಿಡ್ 19 ಜಾಗತಿಕ ಮಹಾಮಾರಿಯಿಂದ ಲುಕ್ಸೆಂಬರ್ಗ್ ನಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ, ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಉತ್ತಮ ನಾಯಕತ್ವ ನೀಡಿದ ಘನತೆವೆತ್ತ ಕ್ಸೇವಿಯರ್ ಬೆಟೆಲ್ ಅವರನ್ನು ಶ್ಲಾಘಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಕೋವಿಡೋತ್ತರ ಜಗತ್ತಿನಲ್ಲಿ, ಅದರಲ್ಲೂ ಹಣಕಾಸು ತಂತ್ರಜ್ಞಾನ, ಹಸಿರು ಹಣಕಾಸು ನೆರವು, ಬಾಹ್ಯಾಕಾಶ ಆನ್ವಯಿಕಗಳು, ಡಿಜಿಟಲ್ ನಾವಿನ್ಯತೆ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಭಾರತ – ಲುಕ್ಸೆಂಬರ್ಗ್ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಎರಡೂ ರಾಷ್ಟ್ರಗಳ ನಡುವೆ ಹಣಕಾಸು ಮಾರುಕಟ್ಟೆ ನಿಯಂತ್ರಕರು, ಷೇರು ಪೇಟೆ ಮತ್ತು ನಾವಿನ್ಯ ಸಂಸ್ಥೆಗಳ ನಡುವೆ ಸೇರಿದಂತೆ ಹಲವು ಒಪ್ಪಂದಗಳು ಆಖೈರಾಗಿರುವುದನ್ನು ಅವರು ಸ್ವಾಗತಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಪರಿಣಾಮಕಾರಿ ಬಹುಪಕ್ಷೀಯತೆಯ ಸಾಕಾರಕ್ಕಾಗಿ ಸಹಕಾರವರ್ಧನೆ ಮತ್ತು ಕೋವಿಡ್ -19 ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರವನ್ನು ಬಲಪಡಿಸಲು ಸಮ್ಮತಿಸಿದರು. ಅಂತಾರಾಷ್ಟ್ರೀಯ ಸೌರ ಸಹಯೋಗಕ್ಕೆ (ಐಎಸ್.ಎ) ಸೇರ್ಪಡೆಗೊಳ್ಳುವ ಲುಕ್ಸೆಂಬರ್ಗ್ ನ ಘೋಷಣೆಯನ್ನು ಪ್ರಧಾನಮಂತ್ರಿ ಸ್ವಾಗತಿಸಿದರು ಮತ್ತು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ (ಸಿಡಿಆರ್.ಐ) ಒಕ್ಕೂಟಕ್ಕೆ ಸೇರಲು ಆಹ್ವಾನಿಸಿದರು.
ಕೋವಿಡ್-19 ಪರಿಸ್ಥಿತಿ ಸುಧಾರಣೆಯ ಬಳಿಕ ಭಾರತದಲ್ಲಿ ಗ್ರ್ಯಾಂಡ್ ಡ್ಯೂಕ್ ಲುಕ್ಸೆಂಬರ್ಗ್ ಪ್ರಧಾನಮಂತ್ರಿ ಬೆಟೆಲ್ ಅವರನ್ನು ಸ್ವಾಗತಿಸುವ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಬೆಟೆಲ್ ಸಹ ಅನುಕೂಲಕರ ಸಮಯದಲ್ಲಿ ಲುಕ್ಸೆಂಬರ್ಗ್ ಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮೋದಿಯವರನ್ನು ಆಹ್ವಾನಿಸಿದರು.