ನವದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ “ಒಡಿಶಾ ಪರ್ಬಾ 2024”ರ ಆಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹೋದಯರಿಯರು ಮತ್ತು ಸಹೋದರರಿಗೆ ಶುಭ ಹಾರೈಸಿದರು. ಈ ವರ್ಷ ಸ್ವಾಭವ್ ಕವಿ ಗಂಗಾಧರ್ ಮೆಹರ್ ಅವರ 100ನೇ ಪುಣ್ಯ ಸ್ಮರಣೆಯಾಗಿದೆ ಮತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಭಕ್ತ ದಾಸಿಯಾ ಭೌಹುರಿ, ಭಕ್ತ ಸಲೆಬೆಗ ಮತ್ತು ಒರಿಯಾ ಲೇಖಕರಾದ ಭಗವಂತ, ಶ್ರೀ ಜಗನ್ನಾಥ್ ದಾಸ್ ಅವರಿಗೆ ಪ್ರಧಾನಮಂತ್ರಿಯವರು ಶ್ರದ್ಧಾಂಜಲಿ ಸಲ್ಲಿಸಿದರು.
“ಒಡಿಶಾ ಯಾವಾಗಲೂ ಸಂತರು ಮತ್ತು ಚಿಂತಕರ ಬೀಡು” ಎಂದು ಶ್ರೀ ಮೋದಿ ಹೇಳಿದರು. ಚಿಂತಕರು ಮತ್ತು ಸಂತರು ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸರಳ ಮಹಾಭಾರತದ ಸಾಹಿತ್ಯದ ಮೂಲಕ ಶಕ್ತಿ ತುಂಬಿದ್ದಾರೆ. ಒರಿಯಾ ಭಾಗವತ್ ಜನ ಸಾಮಾನ್ಯರ ಮನೆ ಬಾಗಿಲು ತಲುಪಿದೆ. ಒರಿಯಾ ಭಾಷೆಯಲ್ಲಿ ಮಹಾಪ್ರಭು ಜಗನ್ನಾಥನಿಗೆ ಸಂಬಂಧಿಸಿದ ವ್ಯಾಪಕ ಸಾಹಿತ್ಯವಿದೆ ಎಂದು ಅವರು ಹೇಳಿದರು. ಮಹಾಪ್ರಭು ಜಗನ್ನಾಥನ ಕಥೆಯನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿಯವರು, ಜಗನ್ನಾಥ ಯುದ್ಧವನ್ನು ಮುಂಚೂಣಿಯಿಂದ ಮುನ್ನಡೆಸಿದ ಮತ್ತು ಯುದ್ಧಭೂಮಿಗೆ ಪ್ರವೇಶಿಸುವಾಗ ಮಾಣಿಕ ಗೌದಿನಿ ಎಂಬ ಭಕ್ತನ ಕೈಯಿಂದ ಮೊಸರು ಸೇವಿಸಿ ಸರಳತೆಯ ಪ್ರತೀಕವಾಗಿದ್ದರು. ಮೇಲಿನ ಕಥೆಯಿಂದ ಬಹಳಷ್ಟು ಪಾಠಗಳಿವೆ ಎಂದು ಅವರು ಹೇಳಿದರು, ಒಂದು ಪ್ರಮುಖ ಪಾಠವೆಂದರೆ ನಾವು ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದರೆ ದೇವರು ಆ ಕೆಲಸವನ್ನು ಮುನ್ನಡೆಸುತ್ತಾನೆ. ದೇವರು ಯಾವಾಗಲೂ ನಮ್ಮೊಂದಿಗಿದ್ದಾನೆ ಮತ್ತು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಒಬ್ಬಂಟಿಯಾಗಿದ್ದೇವೆ ಎಂದು ಎಂದಿಗೂ ಭಾವಿಸಬಾರದು ಎಂದು ಶ್ರೀ ಮೋದಿ ಅವರು ಹೇಳಿದರು.
ಎಷ್ಟೇ ನೋವು ಅನುಭವಿಸಿದರೂ ಜಗತ್ತನ್ನು ಉಳಿಸಬೇಕು ಎಂಬ ಒಡಿಶಾ ಕವಿ ಭೀಮ್ ಭೋಯ್ ಅವರ ಸಾಲನ್ನು ಉದಾಹರಿಸಿದ ಪ್ರಧಾನಮಂತ್ರಿಯವರು, ಇದು ಒಡಿಶಾದ ಸಂಸ್ಕೃತಿಯಾಗಿದೆ ಎಂದು ಹೇಳಿದರು. ಪುರಿಧಾಮವು ‘ಏಕ ಭಾರತ ಶ್ರೇಷ್ಠ ಭಾರತ’ ಭಾವನೆಯನ್ನು ಬಲಪಡಿಸಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಒಡಿಶಾದ ವೀರ ಪುತ್ರರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ದಿಕ್ಕು ತೋರಿಸಿದ್ದಾರೆ ಎಂದು ಅವರು ಹೇಳಿದರು. ಪೈಕಾ ಕ್ರಾಂತಿಯ ಹುತಾತ್ಮರ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು. ಪೈಕಾ ಕ್ರಾಂತಿಯ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಅವಕಾಶ ಸಿಕ್ಕಿರುವುದು ಸರ್ಕಾರದ ಸೌಭಾಗ್ಯ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಈ ಸಮಯದಲ್ಲಿ ಇಡೀ ದೇಶ ಉತ್ಕಲ್ ಕೇಸರಿ ಹರೆ ಕೃಷ್ಣ ಮೆಹ್ತಾಬ್ ಜೀ ಅವರನ್ನು ಸ್ಮರಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತ ಇವರ 125 ನೇ ಜನ್ಮ ಶತಮಾನೋತ್ಸವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಿದೆ. ಹಿಂದಿನಿಂದ ಈವರೆಗೆ ಒಡಿಶಾ ದೇಶಕ್ಕೆ ನೀಡಿರುವ ಸಮರ್ಥ ನಾಯಕತ್ವದ ಬಗ್ಗೆಯೂ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು. ಬುಡಕಟ್ಟು ಸಮುದಾಯದಿಂದ ಬಂದ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರು ಭಾರತದ ರಾಷ್ಟ್ರಪತಿಯಾಗಿದ್ದಾರೆ ಮತ್ತು ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅವರ ಸ್ಫೂರ್ತಿಯಿಂದಾಗಿ ಇಂದು ಭಾರತದಲ್ಲಿ ಬುಡಕಟ್ಟು ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಮತ್ತು ಈ ಯೋಜನೆಗಳು ಒಡಿಶಾ ಮಾತ್ರವಲ್ಲದೆ ಇಡೀ ಭಾರತಕ್ಕೆ ಬುಡಕಟ್ಟು ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತಿವೆ ಎಂದು ಅವರು ಹೇಳಿದರು.
ಒಡಿಶಾ ಮಹಿಳಾ ಶಕ್ತಿಯ ನೆಲೆ ಮತ್ತು ಮಾತಾ ಸುಭದ್ರ ಅವರಿಂದ ಶಕ್ತಿ ಪಡೆದುಕೊಂಡಿದೆ. ಒಡಿಶಾ ಮಹಿಳೆಯರು ಪ್ರಗತಿಪಥದಲ್ಲಿ ಸಾಗಿದಾಗ ಮಾತ್ರ ಒಡಿಶಾ ಅಭಿವೃದ್ದಿ ಹೊಂದಲಿದೆ. ಕೆಲ ದಿನಗಳ ಹಿಂದೆ ಒಡಿಶಾದ ತಾಯಂದಿರು ಮತ್ತು ಸಹೋದರಿಯರಿಗಾಗಿ ಜಾರಿಗೆ ತಂದ ಸುಭದ್ರಾ ಯೋಜನೆಯಿಂದ ಅತಿ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂದರು.
ಭಾರತದ ಕಡಲ ಶಕ್ತಿಗೆ ಹೊಸ ಆಯಾಮ ನೀಡುವಲ್ಲಿ ಒಡಿಶಾ ಕೊಡುಗೆಯನ್ನು ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು. ಕಾರ್ತಿಕ ಪೂರ್ಣಿಮೆಯ ದಿನದಂದು ಕಟಕ್‌ನ ಮಹಾನದಿಯ ದಂಡೆಯಲ್ಲಿ ಅದ್ಧೂರಿಯಾಗಿ ಆಯೋಜಿಸಲಾದ ಬಲಿ ಜಾತ್ರೆಯನ್ನು ಒಡಿಶಾದಲ್ಲಿ ನಿನ್ನೆ ಸಂಪನ್ನಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಇದಲ್ಲದೇ, ಬಲಿ ಜಾತ್ರೆಯು ಭಾರತದ ಸಮುದ್ರ ಶಕ್ತಿಯ ಸಂಕೇತವಾಗಿದೆ. ಹಿಂದಿನ ಕಾಲದ ನಾವಿಕರ ಧೈರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಇಂದಿನಂತೆ ಆಧುನಿಕ ತಂತ್ರಜ್ಞಾನದ ಅನುಪಸ್ಥಿತಿಯ ಹೊರತಾಗಿಯೂ ಅವರು ನೌಕಾಯಾನ ಮತ್ತು ಸಮುದ್ರವನ್ನು ದಾಟುವಷ್ಟು ಅವರು ಧೈರ್ಯಶಾಲಿಗಳಾಗಿದ್ದರು ಎಂದು ಹೇಳಿದರು. ವ್ಯಾಪಾರಿಗಳು ಇಂಡೋನೇಷ್ಯಾದ ಬಾಲಿ, ಸುಮಾತ್ರಾ, ಜಾವಾ ಮುಂತಾದ ಸ್ಥಳಗಳಿಗೆ ಹಡಗುಗಳಲ್ಲಿ ಪ್ರಯಾಣಿಸುತ್ತಿದ್ದರು, ಇದು ವ್ಯಾಪಾರವನ್ನು ಉತ್ತೇಜಿಸಲು ಮತ್ತು ವಿವಿಧ ಸ್ಥಳಗಳಿಗೆ ಸಂಸ್ಕೃತಿಯ ವ್ಯಾಪ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿತು ಎಂದು ಅವರು ಹೇಳಿದರು. ಇಂದು ಒಡಿಶಾದ ಕಡಲ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು.
ಕಳೆದ 10 ವರ್ಷಗಳಲ್ಲಿ ನಿರಂತರವಾಗಿ ಹಾಕಿದ ಪ್ರಯತ್ನದಿಂದಾಗಿ ಒಡಿಶಾ ಇಂದು ಹೊಸ ಎತ್ತರಕ್ಕೆ ಏರಿದೆ. ಒಡಿಶಾ ಜನತೆ ಹಿಂದೆಂದೂ ಇಲ್ಲದ ರೀತಿಯಲ್ಲಿ ನಮಗೆ ಆಶೀರ್ವದಿಸಿದ್ದು, ಇದರಿಂದ ಅತ್ಯಂತ ಶಕ್ತಿಶಾಲಿಯಾದ ವಿಶ್ವಾಸದೊಂದಿಗೆ ಮತ್ತು ದೊಡ್ಡ ಕನಸುಗಳು ಮತ್ತು ದೊಡ್ಡ ಗುರಿಗಳನ್ನು ಸಾಕಾರಗೊಳಿಸಲು ಸಜ್ಜಾಗಿದ್ದೇವೆ. ಬರುವ 2036 ರ ವೇಳೆಗೆ ಒಡಿಶಾ ರಾಜ್ಯೋದಯದ ಶತಮಾನೋತ್ಸವನ್ನು ಆಚರಿಸಲಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಬಲಿಷ್ಠ, ಸಮೃದ್ಧ ಮತ್ತು ತ್ವರಿತ ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಸಾಗಲು ಸರ್ಕಾರ ಸೂಕ್ತ ಹಾದಿಯನ್ನು ರೂಪಿಸಿದೆ ಎಂದರು.
ಭಾರತದ ಪೂರ್ವ ಭಾಗವನ್ನು ದೇಶದ ಅಭಿವೃದ್ಧಿಯ ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಸರ್ಕಾರ ಪೂರ್ವ ಭಾರತದ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿ ಮಾಡಿದೆ ಮತ್ತು ಇಂದು ಇಡೀ ಪೂರ್ವ ಭಾರತದಲ್ಲಿ ಸಂಪರ್ಕ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ತ್ವರಿತಗೊಳಿಸಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ 10 ವರ್ಷಗಳ ಹಿಂದೆ ನೀಡುತ್ತಿದ್ದ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು ಬಜೆಟ್ ಅನುದಾನವನ್ನು ಇಂದು ಒಡಿಶಾ ಪಡೆಯುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಡಿಶಾದ ಅಭಿವೃದ್ಧಿಗೆ ಶೇಕಡಾ 30 ರಷ್ಟು ಹೆಚ್ಚು ಶಾಸನಬದ್ಧ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು. ಒಡಿಶಾದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಪ್ರತಿಯೊಂದು ವಲಯದಲ್ಲಿಯೂ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
“ಒಡಿಶಾಗೆ ಬಂದರು ಆಧಾರಿತ ಕೈಗಾರಿಕಾಭಿವೃದ್ಧಿ ಕೈಗೊಳ್ಳಲು ಅಪಾರ ಸಾಮರ್ಥ್ಯವಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಆದ್ದರಿಂದ, ಧಮ್ರಾ, ಗೋಪಾಲಪುರ, ಅಸ್ತರಂಗ, ಪಾಲೂರ್ ಮತ್ತು ಸುವರ್ಣರೇಖಾ ಬಂದರುಗಳನ್ನು ಅಭಿವೃದ್ಧಿಪಡಿಸುವ ಮೂಲಕ ವ್ಯಾಪಾರವನ್ನು ಉತ್ತೇಜಿಸಲಾಗುವುದು ಎಂದು ಅವರು ಹೇಳಿದರು. ಒಡಿಶಾ ಭಾರತದ ಗಣಿಗಾರಿಕೆ ಮತ್ತು ಲೋಹದ ಶಕ್ತಿ ಕೇಂದ್ರವಾಗಿದೆ. ಇದು ಉಕ್ಕು, ಅಲ್ಯೂಮಿನಿಯಂ ಮತ್ತು ಇಂಧನ ಕ್ಷೇತ್ರಗಳಲ್ಲಿ ಒಡಿಶಾದ ಸ್ಥಾನವನ್ನು ಬಲಪಡಿಸಿದೆ ಎಂದು ಹೇಳಿದರು. ಈ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಒಡಿಶಾದಲ್ಲಿ ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯಬಹುದು ಎಂದು ಅವರು ಹೇಳಿದರು.
ಗೋಡಂಬಿ, ಸೆಣಬು, ಹತ್ತಿ, ಅರಿಶಿನ ಮತ್ತು ಎಣ್ಣೆಕಾಳುಗಳ ಉತ್ಪಾದನೆಯು ಒಡಿಶಾದಲ್ಲಿ ಹೇರಳವಾಗಿದೆ. ಈ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ತಲುಪುವಂತೆ ನೋಡಿಕೊಳ್ಳುವುದು ಮತ್ತು ಆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಹೇಳಿದರು. ಒಡಿಶಾದ ಸಮುದ್ರ-ಆಹಾರ ಸಂಸ್ಕರಣಾ ಉದ್ಯಮದಲ್ಲಿ ವಿಸ್ತರಣೆಗೆ ಸಾಕಷ್ಟು ಅವಕಾಶಗಳಿವೆ ಮತ್ತು ಒಡಿಶಾ ಸಮುದ್ರ-ಆಹಾರವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಬ್ರ್ಯಾಂಡ್‌ನನ್ನಾಗಿ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಒಡಿಶಾವನ್ನು ಹೂಡಿಕೆದಾರರಿಗೆ ಆದ್ಯತೆಯ ತಾಣವನ್ನಾಗಿ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ. ಒಡಿಶಾದಲ್ಲಿ ವ್ಯಾಪಾರ ಮಾಡುವುದನ್ನು ಸುಗಮಗೊಳಿಸಲು ಉತ್ತೇಜನ ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಉತ್ಕರ್ಷ್ ಉತ್ಕಲ್ ಮೂಲಕ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು. ಒಡಿಶಾದಲ್ಲಿ ಹೊಸ ಸರ್ಕಾರ ರಚನೆಯಾದ ತಕ್ಷಣ, ಮೊದಲ 100 ದಿನಗಳಲ್ಲಿ 45 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಆಕರ್ಷಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇಂದು ಒಡಿಶಾ ತನ್ನದೇ ಆದ ದೃಷ್ಟಿ ಮತ್ತು ಮಾರ್ಗಸೂಚಿಯನ್ನು ಹೊಂದಿದೆ, ಇದು ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಜಿ ಮತ್ತು ಅವರ ತಂಡದ ಪ್ರಯತ್ನಕ್ಕಾಗಿ ಅವರು ಅಭಿನಂದಿಸಿದರು.
ಒಡಿಶಾ ತನ್ನ ಸಾಮರ್ಥ್ಯವನ್ನು ಸೂಕ್ತ ದಿಕ್ಕಿನಲ್ಲಿ ಸದ್ಭಳಕೆ ಮಾಡಿಕೊಳ್ಳುತ್ತಿದ್ದು, ಅಭಿವೃದ್ದಿಯ ಹೊಸ ಎತ್ತರಕ್ಕೆ ಏರುತ್ತಿದೆ. ಒಡಿಶಾ ತನ್ನ ಕಾರ್ಯತಂತ್ರ ಸ್ಥಳಗಳ ಮೂಲಕ ಲಾಭ ಪಡೆಯುತ್ತಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಸುಲಭವಾಗಿ ತಲುಪುತ್ತಿದೆ. “ಒಡಿಶಾ ಪೂರ್ವ ಮತ್ತು ದಕ್ಷಿಣ ಏಷ್ಯಾದ ಪ್ರಮುಖ ತಾಣವಾಗಿದೆ” ಎಂದರು. ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಒಡಿಶಾದ ಪ್ರಾಮುಖ್ಯತೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದಿಂದ ರಫ್ತು ಹೆಚ್ಚಿಸುವ ಗುರಿಯೊಂದಿಗೆ ಸರ್ಕಾರವೂ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
"ಒಡಿಶಾ ರಾಜ್ಯ ನಗರೀಕರಣವನ್ನು ಉತ್ತೇಜಿಸಲು ಅಪಾರ ಸಾಮರ್ಥ್ಯ ಹೊಂದಿದೆ" ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಸರ್ಕಾರವು ಆ ದಿಕ್ಕಿನಲ್ಲಿ ತಳಮಟ್ಟದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯ ಕ್ರಿಯಾತ್ಮಕ ಮತ್ತು ಉತ್ತಮ ಸಂಪರ್ಕ ಹೊಂದಿರುವ ನಗರಗಳನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ಒಡಿಶಾದ ಎರಡು ಹಂತದ ನಗರಗಳಲ್ಲಿ, ವಿಶೇಷವಾಗಿ ಪಶ್ಚಿಮ ಒಡಿಶಾದ ಜಿಲ್ಲೆಗಳಲ್ಲಿ ಹೊಸ ಮೂಲಸೌಕರ್ಯಗಳ ಅಭಿವೃದ್ಧಿಯು ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು.
ಉನ್ನತ ಶಿಕ್ಷಣ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಒಡಿಶಾದಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಿವೆ. ಒಡಿಶಾ ದೇಶದ ವಿದ್ಯಾರ್ಥಿಗಳಿಗೆ ಇದು ಹೊಸ ಭರವಸೆಯಾಗಿದೆ. ಶಿಕ್ಷಣ ವಲಯದ ನಾಯಕತ್ವ ವಹಿಸಲು ರಾಜ್ಯ ಸನ್ನದ್ಧವಾಗಿದೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಒಡಿಶಾ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಪ್ರಯತ್ನದಲ್ಲೂ ತೊಡಗಿದೆ ಎಂದರು.
ಒಡಿಶಾ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಯಾವಾಗಲೂ ವಿಶೇಷವಾಗಿದೆ. ಒಡಿಶಾದ ಕಲಾ ಪ್ರಕಾರಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ, ಅದು ಒಡಿಸ್ಸಿ ನೃತ್ಯವಾಗಲಿ ಅಥವಾ ಒಡಿಶಾದ ವರ್ಣಚಿತ್ರಗಳಾಗಲಿ ಅಥವಾ ಪಟ್ಟಚಿತ್ರಗಳಲ್ಲಿ ಕಂಡುಬರುವ ಜೀವಂತಿಕೆ ಅಥವಾ ಸೌರ ವರ್ಣಚಿತ್ರಗಳ ಸಂಕೇತ ಗಮನಾರ್ಹವಾದದ್ದು. ಬುಡಕಟ್ಟು ಕಲೆ. ಒಡಿಶಾದ ಸಂಬಲ್‌ಪುರಿ, ಬೊಮ್‌ಕೈ ಮತ್ತು ಕೊಟ್‌ಪಾಡ್ ನೇಕಾರರ ಕುಶಲತೆಯನ್ನು ನೋಡಬಹುದು ಎಂದು ಅವರು ಹೇಳಿದರು. ಕಲೆ ಮತ್ತು ಕರಕುಶಲತೆಯನ್ನು ನಾವು ಎಷ್ಟು ಹರಡುತ್ತೇವೆ ಮತ್ತು ಉಳಿಸುತ್ತೇವೆಯೋ ಅಷ್ಟು ಒಡಿಯಾ ಜನರ ಗೌರವ ಹೆಚ್ಚಾಗುತ್ತದೆ ಎಂದು ಪ್ರಧಾನಿ ಟೀಕಿಸಿದರು.
ಒಡಿಶಾದ ವಾಸ್ತುಶಿಲ್ಪ ಮತ್ತು ವಿಜ್ಞಾನದ ವ್ಯಾಪಕ ಪರಂಪರೆಯನ್ನು ಅನಾವರಣಗೊಳಿಸಿದ ಪ್ರಧಾನಮಂತ್ರಿಯವರು, ಕೋನಾರ್ಕ್‌ನ ಸೂರ್ಯ ದೇವಾಲಯ, ಲಿಂಗರಾಜ್ ಮತ್ತು ಮುಕ್ತೇಶ್ವರ್‌ನಂತಹ ಪುರಾತನ ದೇವಾಲಯಗಳ ವಿಜ್ಞಾನ, ವಾಸ್ತುಶಿಲ್ಪ ಮತ್ತು ವೈಶಾಲ್ಯವು ತಮ್ಮ ಉತ್ಕೃಷ್ಟತೆ ಮತ್ತು ಕರಕುಶಲತೆಯಿಂದ ಎಲ್ಲರನ್ನೂ ಬೆರಗುಗೊಳಿಸಿದೆ ಎಂದು ಹೇಳಿದರು.
ಒಡಿಶಾ ಪ್ರವಾಸೋದ್ಯಮದ ವಿಷಯದಲ್ಲಿ ಅಪಾರ ಸಾಧ್ಯತೆಗಳ ನಾಡಾಗಿದೆ. ಈ ಸಾಧ್ಯತೆಗಳನ್ನು ತಳಮಟ್ಟದಲ್ಲಿ ಜಾರಿಗೆ ತರಲು ಬಹು ಆಯಾಮಗಳಲ್ಲಿ ಕೆಲಸ ಮಾಡುವ ಅಗತ್ಯವಿದೆ. ಇಂದು ಒಡಿಶಾ ಜೊತೆಗೆ, ದೇಶವು ಒಡಿಶಾದ ಪರಂಪರೆ ಮತ್ತು ಅದರ ಅಸ್ಮಿತೆಯನ್ನು ಗೌರವಿಸುವ ಸರ್ಕಾರವನ್ನು ಹೊಂದಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಒಡಿಶಾದಲ್ಲಿ ಜಿ-20 ಸಮ್ಮೇಳನ ನಡೆದಿತ್ತು. ಸರ್ಕಾರ ಅನೇಕ ದೇಶಗಳ ರಾಜ್ಯಗಳ ಮುಖ್ಯಸ್ಥರು ಮತ್ತು ರಾಜತಾಂತ್ರಿಕರ ಮುಂದೆ ಸೂರ್ಯ ದೇವಾಲಯದ ಭವ್ಯವಾದ ನೋಟವನ್ನು ಪ್ರಸ್ತುತಪಡಿಸಿದೆ ಎಂದು ಹೇಳಿದರು. ಮಹಾಪ್ರಭು ಜಗನ್ನಾಥ ದೇವಾಲಯದ ಸಂಕೀರ್ಣದ ಎಲ್ಲಾ ನಾಲ್ಕು ದ್ವಾರಗಳನ್ನು ದೇವಾಲಯದ ರತ್ನ ಭಂಡಾರದೊಂದಿಗೆ ತೆರೆದಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಹೇಳಿದರು.
ಒಡಿಶಾದ ಪ್ರತಿಯೊಂದು ಅಸ್ಮಿತೆಯನ್ನು ಜಗತ್ತಿಗೆ ತಿಳಿಸಲು ಇನ್ನಷ್ಟು ನವೀನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಬಲಿ ಜಾತ್ರೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಚಾರ ಮಾಡಲು ಬಲಿ ಜಾತ್ರಾ ದಿನವನ್ನು ಘೋಷಿಸಬಹುದು ಮತ್ತು ಆಚರಿಸಬಹುದು ಎಂದು ಅವರು ಉದಾಹರಣೆಯನ್ನು ನೀಡಿದರು. ಒಡಿಸ್ಸಿ ನೃತ್ಯದಂತಹ ಕಲೆಗಳಿಗಾಗಿ ಒಡಿಸ್ಸಿ ದಿನವನ್ನು ಆಚರಿಸುವ ಜೊತೆಗೆ ವಿವಿಧ ಬುಡಕಟ್ಟು ಪರಂಪರೆಗಳನ್ನು ಸಂಭ್ರಮಿಸಲು ದಿನವನ್ನು ನಿಗದಿಮಾಡಬಹುದು. ಪ್ರವಾಸೋದ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಅವಕಾಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಬಹುದು. ಮುಂಬರುವ ದಿನಗಳಲ್ಲಿ ಭುವನೇಶ್ವರದಲ್ಲಿ ಪ್ರವಾಸಿ ಭಾರತೀಯ ಸಮ್ಮೇಳನವೂ ನಡೆಯಲಿದ್ದು, ಒಡಿಶಾಗೆ ಇದು ದೊಡ್ಡ ಅವಕಾಶವಾಗಿದೆ ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ ಜನ ತಮ್ಮ ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಮರೆಯುತ್ತಿರುವ ಪ್ರವೃತ್ತಿಯನ್ನು ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ ಅವರು, ಒರಿಯಾ ಸಮುದಾಯವು ಎಲ್ಲೇ ವಾಸಿಸುತ್ತಿದ್ದರೂ, ಅದರ ಸಂಸ್ಕೃತಿ, ಅದರ ಭಾಷೆ ಮತ್ತು ಅದರ ಹಬ್ಬಗಳ ಬಗ್ಗೆ ಯಾವಾಗಲೂ ಬಹಳ ಉತ್ಸಾಹದಿಂದ ಕೂಡಿರುತ್ತದೆ. ಇತ್ತೀಚಿನ ಗಯಾನಾ ಭೇಟಿಯು ಮಾತೃಭಾಷೆ ಮತ್ತು ಸಂಸ್ಕೃತಿಯ ಶಕ್ತಿಯು ಒಬ್ಬರನ್ನು ಅವರ ಮಾತೃಭೂಮಿಯೊಂದಿಗೆ ಹೇಗೆ ಸಂಪರ್ಕಿಸುತ್ತದೆ ಎಂಬುದನ್ನು ಪುನರುಚ್ಚರಿಸಿದೆ ಎಂದು ಅವರು ಹೇಳಿದರು. ಸುಮಾರು 200 ವರ್ಷಗಳ ಹಿಂದೆ ನೂರಾರು ಕಾರ್ಮಿಕರು ಭಾರತವನ್ನು ತೊರೆದರು, ಆದರೆ ಅವರು ರಾಮಚರಿತ ಮಾನಸವನ್ನು ತಮ್ಮೊಂದಿಗೆ ಕರೆದೊಯ್ದರು ಮತ್ತು ಇಂದಿಗೂ ಅವರು ಭಾರತದ ಭೂಮಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು. ನಮ್ಮ ಪರಂಪರೆಯನ್ನು ಸಂರಕ್ಷಿಸುವ ಮೂಲಕ, ಅಭಿವೃದ್ಧಿ ಮತ್ತು ಬದಲಾವಣೆಗಳು ಸಂಭವಿಸಿದಾಗಲೂ ಅದರ ಪ್ರಯೋಜನಗಳು ಎಲ್ಲರಿಗೂ ತಲುಪಬಹುದು ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಅದೇ ರೀತಿಯಲ್ಲಿ ಒಡಿಶಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಅವರು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ, ನಮ್ಮ ಬೇರುಗಳನ್ನು ಬಲಪಡಿಸುವ ಜೊತೆಗೆ ಆಧುನಿಕ ಬದಲಾವಣೆಗಳನ್ನು ಮೈಗೂಡಿಸಿಕೊಳ್ಳುವುದು ಮುಖ್ಯವಾಗಿದೆ. ಒಡಿಶಾ ಉತ್ಸವದಂತಹ ಕಾರ್ಯಕ್ರಮಗಳು ಮಾಧ್ಯಮವಾಗಬಹುದು. ಒಡಿಶಾ ಪರ್ಬಾದಂತಹ ಸಮಾರಂಭಗಳು ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಿಸ್ತರಿಸಬೇಕು ಮತ್ತು ದೆಹಲಿಗೆ ಮಾತ್ರ ಸೀಮಿತವಾಗಬಾರದು ಎಂದು ಅವರು ಹೇಳಿದರು. ಹೆಚ್ಚು ಹೆಚ್ಚು ಜನರು ಸೇರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಕೈಗೊಳ್ಳಬೇಕು ಮತ್ತು ಇದರಿಂದ ಶಾಲಾ-ಕಾಲೇಜುಗಳ ಭಾಗವಹಿಸುವಿಕೆ ಹೆಚ್ಚುತ್ತದೆ. ದೆಹಲಿಯಲ್ಲಿರುವ ಇತರ ರಾಜ್ಯಗಳ ಜನರು ಭಾಗವಹಿಸಲು ಮತ್ತು ಒಡಿಶಾವನ್ನು ಹೆಚ್ಚು ಹತ್ತಿರದಿಂದ ತಿಳಿದುಕೊಳ್ಳುವಂತೆ ಅವರು ಸಲಹೆ ಮಾಡಿದರು.
ಮುಂಬರುವ ದಿನಗಳಲ್ಲಿ ಈ ಹಬ್ಬದ ಬಣ್ಣಗಳು ಒಡಿಶಾ ಮತ್ತು ಭಾರತದ ಮೂಲೆ ಮೂಲೆಗಳನ್ನು ತಲುಪುವ ಮೂಲಕ ಸಾರ್ವಜನಿಕ ಭಾಗವಹಿಸುವಿಕೆಗೆ ಪರಿಣಾಮಕಾರಿ ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶ್ರೀ ನರೇಂದ್ರ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ರೈಲ್ವೇ, ವಾರ್ತಾ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಒಡಿಯಾ ಸಮಾಜದ ಅಧ್ಯಕ್ಷ ಶ್ರೀ ಸಿದ್ಧಾರ್ಥ್ ಪ್ರಧಾನ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಒಡಿಶಾ ಪರ್ಬಾ ನವದೆಹಲಿಯಲ್ಲಿನ ಒಡಿಯಾ ಸಮಾಜ್ ಎಂಬ ಟ್ರಸ್ಟ್‌ನಿಂದ ನಡೆಸಲ್ಪಡುವ ಪ್ರಮುಖ ಕಾರ್ಯಕ್ರಮವಾಗಿದೆ. ಅದರ ಮೂಲಕ, ಅವರು ಒಡಿಯಾ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರದ ಕಡೆಗೆ ಅಮೂಲ್ಯವಾದ ಬೆಂಬಲವನ್ನು ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಪ್ರದಾಯದಂತೆ ಈ ವರ್ಷ ಒಡಿಶಾ ಪರ್ಬಾ ನವೆಂಬರ್ 22 ರಿಂದ 24 ರವರೆಗೆ ಆಯೋಜಿಸಲಾಗಿತ್ತು. ಇದು ವರ್ಣರಂಜಿತ ಸಾಂಸ್ಕೃತಿಕ ರೂಪಗಳನ್ನು ಪ್ರದರ್ಶಿಸುವ ಒಡಿಶಾದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುತ್ತದೆ ಮತ್ತು ರಾಜ್ಯದ ರೋಮಾಂಚಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನೀತಿಗಳನ್ನು ಪ್ರದರ್ಶಿಸುತ್ತದೆ. ವಿವಿಧ ವೇದಿಕೆಗಳಾದ್ಯಂತ ಪ್ರಮುಖ ತಜ್ಞರು ಮತ್ತು ಗಣ್ಯ ವೃತ್ತಿಪರರ ನೇತೃತ್ವದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಅಥವಾ ಸಮಾವೇಶವನ್ನು ಆಯೋಜಿಸಲಾಗಿತ್ತು.