ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಗೋರಖಪುರದಲ್ಲಿ ಐತಿಹಾಸಿಕ ಗೀತಾ ಪ್ರೆಸ್ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಚಿತ್ರಮಯ ಶಿವ ಪುರಾಣ ಗ್ರಂಥವನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿಯವರು ಗೀತಾ ಪ್ರೆಸ್ ನಲ್ಲಿರುವ ಲೀಲಾ ಚಿತ್ರ ದೇವಾಲಯಕ್ಕೆ ಭೇಟಿ ನೀಡಿ ಶ್ರೀರಾಮನಿಗೆ ಪುಷ್ಪನಮನ ಸಲ್ಲಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರಾವಣ ಮಾಸದಲ್ಲಿ, ಇಂದ್ರದೇವನ ಆಶೀರ್ವಾದದಿಂದ, ಶಿವನ ಅವತಾರವಾದ ಗುರು ಗೋರಖನಾಥ ಆರಾಧನಾ ಸ್ಥಳ ಮತ್ತು ಅನೇಕ ಸಂತರ ಕರ್ಮಭೂಮಿಯಾದ ಗೋರಖಪುರದ ಗೀತಾ ಪ್ರೆಸ್ ನಲ್ಲಿ ಉಪಸ್ಥಿತರಿರುವ ಅವಕಾಶ ದೊರೆತಿದೆ ಎಂದು ಹೇಳಿದರು. ತಮ್ಮ ಗೋರಖಪುರ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ, ಅಭಿವೃದ್ಧಿ ಮತ್ತು ಪರಂಪರೆ ಜೊತೆಜೊತೆಯಾಗಿ ಸಾಗುತ್ತಿರುವುದಕ್ಕೆ ಇದೊಂದು ಅದ್ಭುತ ನಿದರ್ಶನವಾಗಿದೆ ಎಂದು ಹೇಳಿದರು. ಗೀತಾ ಪ್ರೆಸ್ ನಲ್ಲಿ ಕಾರ್ಯಕ್ರಮ ಮುಗಿದ ನಂತರ ಗೋರಖಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲು ಮತ್ತು ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲು ಅವರು ಗೋರಖಪುರ ರೈಲು ನಿಲ್ದಾಣಕ್ಕೆ ತೆರಳುವುದಾಗಿ ಎಂದು ಅವರು ಮಾಹಿತಿ ನೀಡಿದರು. ಉದ್ದೇಶಿತ ರೈಲು ನಿಲ್ದಾಣದ ಚಿತ್ರಗಳು ನಾಗರಿಕರಲ್ಲಿ ಉತ್ಸಾಹವನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು. ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಉಲ್ಲೇಖಿಸಿ, ಇದರಿಂದ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಮಂತ್ರಿಗಳು ತಮ್ಮ ಪ್ರದೇಶದಲ್ಲಿ ರೈಲು ನಿಲುಗಡೆಗಾಗಿ ಪತ್ರಗಳನ್ನು ಬರೆಯಬೇಕಾಗಿದ್ದ ಸಮಯವನ್ನು ನೆನಪಿಸಿಕೊಂಡ ಪ್ರಧಾನಿ, ಇಂದು ಸಚಿವರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲು ಬರುವಂತೆ ಪತ್ರಗಳನ್ನು ಬರೆಯುತ್ತಿದ್ದಾರೆ ಎಂದು ಹೇಳಿದರು. "ವಂದೇ ಭಾರತ್ ರೈಲುಗಳು ಕ್ರೇಜ್ ಆಗಿವೆ" ಎಂದು ಅವರು ಹೇಳಿದರು. ಇಂದಿನ ಯೋಜನೆಗಳಿಗಾಗಿ ಗೋರಖಪುರ ಮತ್ತು ಭಾರತದ ಜನರನ್ನು ಶ್ರೀ ಮೋದಿ ಅಭಿನಂದಿಸಿದರು.
"ಗೀತಾ ಪ್ರೆಸ್ ಕೇವಲ ಮುದ್ರಣಾಲಯವಲ್ಲ, ಇದೊಂದು ಜೀವಂತ ನಂಬಿಕೆಯಾಗಿದೆ, ಗೀತಾ ಪ್ರೆಸ್ ಕಚೇರಿಯು ಕೋಟ್ಯಂತರ ಜನರಿಗೆ ಪುಣ್ಯಕ್ಷೇತ್ರಕ್ಕಿಂತ ಕಡಿಮೆಯಿಲ್ಲ” ಎಂದು ಪ್ರಧಾನಿ ಹೇಳಿದರು. ಗೀತೆಯೊಂದಿಗೆ ಕೃಷ್ಣ ಬರುತ್ತಾನೆ, ಕೃಷ್ಣನೊಂದಿಗೆ ಕರುಣೆ ಮತ್ತು ‘ಕರ್ಮʼಇರುತ್ತದೆ, ಜ್ಞಾನದ ಜೊತೆಗೆ ವೈಜ್ಞಾನಿಕ ಸಂಶೋಧನೆಯೂ ಇದೆ ಎಂದು ಹೇಳಿದರು. "ವಾಸುದೇವ ಸರ್ವಂ ಅಂದರೆ ಎಲ್ಲವೂ ವಾಸುದೇವನಿಂದ ಮತ್ತು ಅವನೇ ಎಲ್ಲವೂ" ಎಂದು ಗೀತೆಯನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು.
1923 ರಲ್ಲಿ ಗೀತಾ ಪ್ರೆಸ್ ರೂಪದಲ್ಲಿ ಹಚ್ಚಿದ ಆಧ್ಯಾತ್ಮಿಕ ಜ್ಯೋತಿ ಇಂದು ಇಡೀ ಮಾನವಕುಲದ ಮಾರ್ಗದರ್ಶಕ ಬೆಳಕಾಗಿದೆ ಎಂದು ಪ್ರಧಾನಿ ಹೇಳಿದರು. ಈ ಮಾನವೀಯ ಮಿಷನ್ನ ಸುವರ್ಣ ಶತಮಾನಕ್ಕೆ ಸಾಕ್ಷಿಯಾಗಲು ಸಾಧ್ಯವಾಗಿದ್ದು ತಮ್ಮ ಅದೃಷ್ಟ ಎಂದು ಅವರು ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ ಸರ್ಕಾರವು ಗೀತಾ ಪ್ರೆಸ್ ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು. ಗೀತಾ ಪ್ರೆಸ್ ನೊಂದಿಗಿನ ಮಹಾತ್ಮ ಗಾಂಧಿಯವರ ಭಾವನಾತ್ಮಕ ಬಾಂಧವ್ಯವನ್ನು ಉಲ್ಲೇಖಿಸಿದ ಪ್ರಧಾನಿ, ಗಾಂಧೀಜಿ ಒಮ್ಮೆ ಕಲ್ಯಾಣ ಪತ್ರಿಕಾ ಮೂಲಕ ಗೀತಾ ಪ್ರೆಸ್ ಗೆ ಬರೆಯುತ್ತಿದ್ದರು ಎಂದು ತಿಳಿಸಿದರು. ಕಲ್ಯಾಣ ಪತ್ರಿಕೆಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂದು ಗಾಂಧೀಜಿಯೇ ಸೂಚಿಸಿದ್ದರು, ಈಗಲೂ ಅದನ್ನು ಪಾಲಿಸಲಾಗುತ್ತಿದೆ ಎಂದು ಅವರು ಹೇಳಿದರು. ಗೀತಾ ಪ್ರೆಸ್ ಕೊಡುಗೆ ಮತ್ತು ಅದರ 100 ವರ್ಷಗಳ ಪರಂಪರೆಯನ್ನು ಗೌರವಿಸಿ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡುವ ಮೂಲಕ ದೇಶವು ತನ್ನ ಗೌರವವನ್ನು ಸಲ್ಲಿಸಿದೆ ಎಂದು ಪ್ರಧಾನಮಂತ್ರಿ ಹರ್ಷ ವ್ಯಕ್ತಪಡಿಸಿದರು. ಈ 100 ವರ್ಷಗಳಲ್ಲಿ, ಗೀತಾ ಪ್ರೆಸ್ ಕೋಟಿಗಟ್ಟಲೆ ಪುಸ್ತಕಗಳನ್ನು ಪ್ರಕಟಿಸಿದೆ, ಅದು ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ ಮತ್ತು ಮನೆ ಮನೆಗೆ ತಲುಪಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಜ್ಞಾನದ ಹರಿವು ಹಲವಾರು ಓದುಗರಿಗೆ ಒದಗಿಸಿದ ಆಧ್ಯಾತ್ಮಿಕ ಮತ್ತು ಬೌದ್ಧಿಕ ತೃಪ್ತಿಯ ಬಗ್ಗೆ ಗಮನ ಸೆಳೆದ ಅವರು ಅದೇ ಸಮಯದಲ್ಲಿ ಸಮಾಜಕ್ಕಾಗಿ ಅನೇಕ ಸಮರ್ಪಿತ ನಾಗರಿಕರನ್ನು ಸೃಷ್ಟಿಸಿದೆ ಎಂದು ಹೇಳಿದರು, ಈ ಯಾಗಕ್ಕೆ ಯಾವುದೇ ಪ್ರಚಾರದ ಅವಶ್ಯಕತೆಯಿಲ್ಲದೆ ನಿಸ್ವಾರ್ಥವಾಗಿ ಸಹಕರಿಸುತ್ತಿರುವ ವ್ಯಕ್ತಿಗಳನ್ನು ಪ್ರಧಾನಿ ಅಭಿನಂದಿಸಿದರು. ಸೇಠಜಿ ಜಯದಯಾಳ್ ಗೋಯಂಡ್ಕ ಮತ್ತು ಭೈಜಿ ಶ್ರೀ ಹನುಮಾನ್ ಪ್ರಸಾದ್ ಪೊದ್ದಾರ್ ಅವರಂತಹ ಚೇತನಗಳಿಗೆ ಪ್ರಧಾನಿ ಗೌರವ ಸಲ್ಲಿಸಿದರು.
ಗೀತಾ ಪ್ರೆಸ್ ನಂತಹ ಸಂಸ್ಥೆಯು ಕೇವಲ ಧರ್ಮ ಮತ್ತು ಕೆಲಸಕ್ಕೆ ಸಂಬಂಧಿಸಿದ್ದಲ್ಲ, ಇದು ರಾಷ್ಟ್ರೀಯ ಸ್ವರೂಪವನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಗೀತಾ ಪ್ರೆಸ್ ಭಾರತವನ್ನು ಬೆಸೆಯುತ್ತದೆ, ಭಾರತದ ಐಕ್ಯತೆಯನ್ನು ಬಲಪಡಿಸುತ್ತದೆ" ಎಂದ ಶ್ರೀ ಮೋದಿ ದೇಶಾದ್ಯಂತ ಇರುವ ಅದರ 20 ಶಾಖೆಗಳ ಬಗ್ಗೆ ತಿಳಿಸಿದರು. ದೇಶದ ಪ್ರತಿ ರೈಲು ನಿಲ್ದಾಣದಲ್ಲಿ ಗೀತಾ ಪ್ರೆಸ್ ಮಳಿಗೆಗಳನ್ನು ಕಾಣಬಹುದು ಎಂದು ಪ್ರಧಾನಿ ಉಲ್ಲೇಖಿಸಿದರು. ಗೀತಾ ಪ್ರೆಸ್ 15 ವಿವಿಧ ಭಾಷೆಗಳಲ್ಲಿ 1600 ಶೀರ್ಷಿಕೆಗಳನ್ನು ಪ್ರಕಟಿಸಿದೆ ಮತ್ತು ವಿವಿಧ ಭಾಷೆಗಳಲ್ಲಿ ಭಾರತದ ಮೂಲ ಚಿಂತನೆಗಳನ್ನು ಜನಸಾಮಾನ್ಯರಿಗೆ ಪ್ರಚಾರ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. "ಗೀತಾ ಪ್ರೆಸ್ ಒಂದು ರೀತಿಯಲ್ಲಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಮನೋಭಾವವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ಗೀತಾ ಪ್ರೆಸ್ ತನ್ನ 100 ವರ್ಷಗಳ ಪಯಣವನ್ನು ಪೂರ್ಣಗೊಳಿಸಿರುವುದು ಕಾಕತಾಳೀಯವಲ್ಲ ಎಂದು ಪ್ರಧಾನಿ ಹೇಳಿದರು. 1947 ಕ್ಕೂ ಮೊದಲು ಭಾರತವು ತನ್ನ ಪುನರುಜ್ಜೀವನಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರಯತ್ನಗಳನ್ನು ಮಾಡಿದ ಸಮಯವನ್ನು ಪ್ರಸ್ತಾಪಿಸಿದ ಪ್ರಧಾನಿ, ಭಾರತದ ಪ್ರಜ್ಞೆಯನ್ನು ಜಾಗೃತಗೊಳಿಸಲು ವಿವಿಧ ಸಂಸ್ಥೆಗಳು ರೂಪುಗೊಂಡವು ಎಂದು ಹೇಳಿದರು. ಪರಿಣಾಮವಾಗಿ, 1947 ರ ಹೊತ್ತಿಗೆ ಭಾರತವು ಮನಸ್ಸು ಮತ್ತು ಪ್ರಜ್ಞೆಯಿಂದ ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು ಸಂಪೂರ್ಣವಾಗಿ ಸಿದ್ಧವಾಗಿತ್ತು. ಗೀತಾ ಪ್ರೆಸ್ ಸ್ಥಾಪನೆಯೂ ಅದಕ್ಕೆ ಪ್ರಮುಖ ನೆಲೆಯಾಯಿತು ಎಂದು ಅವರು ಹೇಳಿದರು. ಶತಮಾನಗಳ ಗುಲಾಮಗಿರಿಯು ನೂರು ವರ್ಷಗಳ ಹಿಂದೆ ಭಾರತದ ಪ್ರಜ್ಞೆಯನ್ನು ಮಸುಕುಗೊಳಿಸಿತು ಮತ್ತು ವಿದೇಶಿ ಆಕ್ರಮಣಕಾರರು ಭಾರತದ ಗ್ರಂಥಾಲಯಗಳನ್ನು ಸುಟ್ಟುಹಾಕಿದರು ಎಂದು ಪ್ರಧಾನಿ ವಿಷಾದಿಸಿದರು. "ಬ್ರಿಟಿಷರ ಕಾಲದಲ್ಲಿ ಗುರುಕುಲ ಮತ್ತು ಗುರು ಸಂಪ್ರದಾಯವು ಬಹುತೇಕ ನಾಶವಾಯಿತು" ಎಂದು ಅವರು ಹೇಳಿದರು. ಆ ಸಮಯದಲ್ಲಿ ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಮುದ್ರಣಾಲಯಗಳು ಸಾಮಾನ್ಯ ಜನರ ವ್ಯಾಪ್ತಿಗೆ ನಿಲುಕದೆ ಭಾರತದ ಪವಿತ್ರ ಗ್ರಂಥಗಳು ಕಣ್ಮರೆಯಾಗಲು ಆರಂಭಿಸಿದವು ಎಂದು ಅವರು ಹೇಳಿದರು. “ಗೀತಾ ಮತ್ತು ರಾಮಾಯಣವಿಲ್ಲದೆ ನಮ್ಮ ಸಮಾಜ ಹೇಗೆ ನಡೆಯುತ್ತದೆ? ಮೌಲ್ಯಗಳು ಮತ್ತು ಆದರ್ಶಗಳ ಮೂಲಗಳು ಬತ್ತಲು ಪ್ರಾರಂಭಿಸಿದಾಗ, ಸಮಾಜದ ಹರಿವು ತಂತಾನೇ ನಿಂತು ಹೋಗುತ್ತದೆ” ಎಂದು ಪ್ರಧಾನಿ ಹೇಳಿದರು.
ಅಧರ್ಮ ಮತ್ತು ಭಯೋತ್ಪಾದನೆ ಪ್ರಬಲವಾದಾಗ ಮತ್ತು ಸತ್ಯವು ಅಪಾಯದಿಂದ ಮುಚ್ಚಿಹೋದಾಗ ಭಗವದ್ಗೀತೆ ಯಾವಾಗಲೂ ಸ್ಫೂರ್ತಿಯ ಮೂಲವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಗೀತೆಯನ್ನು ಉಲ್ಲೇಖಿಸಿದ ಪ್ರಧಾನಿ, ಧರ್ಮ ಮತ್ತು ಸತ್ಯಕ್ಕೆ ಬಿಕ್ಕಟ್ಟು ಉಂಟಾದಾಗ ಅದನ್ನು ರಕ್ಷಿಸಲು ದೇವರು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ ಎಂದು ವಿವರಿಸಿದರು. ದೇವರು ಯಾವುದಾದರೂ ರೂಪದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ವಿವರಿಸುವ ಗೀತೆಯ ಹತ್ತನೇ ಅಧ್ಯಾಯವನ್ನು ಉಲ್ಲೇಖಿಸಿದ ಪ್ರಧಾನಿ, ಕೆಲವೊಮ್ಮೆ ಗೀತಾ ಪ್ರೆಸ್ ನಂತಹ ಸಂಸ್ಥೆಗಳು ಮಾನವೀಯ ಮೌಲ್ಯಗಳು ಮತ್ತು ಆದರ್ಶಗಳನ್ನು ಪುನರುಜ್ಜೀವನಗೊಳಿಸಲು ಹುಟ್ಟಿಕೊಂಡಿವೆ ಎಂದು ಹೇಳಿದರು. 1923ರಲ್ಲಿ ಸ್ಥಾಪನೆಯಾದ ಕೂಡಲೇ ಗೀತಾ ಪ್ರೆಸ್ ಭಾರತದ ಪ್ರಜ್ಞೆ ಮತ್ತು ಚಿಂತನೆಯ ಹರಿವನ್ನು ವೇಗಗೊಳಿಸಿತು ಎಂದ ಅವರು, ಗೀತೆ ಸೇರಿದಂತೆ ನಮ್ಮ ಧರ್ಮಗ್ರಂಥಗಳು ಮತ್ತೊಮ್ಮೆ ಪ್ರತಿ ಮನೆಗಳಲ್ಲಿ ಪ್ರತಿಧ್ವನಿಸಲು ಪ್ರಾರಂಭಿಸಿದವು ಮತ್ತು ನಮ್ಮ ಮನಸ್ಸು ಭಾರತದ ಮನಸ್ಸಿನೊಂದಿಗೆ ಬೆರೆತುಕೊಂಡಿತು ಎಂದು ಹೇಳಿದರು. "ಸಾಂಪ್ರದಾಯಿಕ ಕುಟುಂಬಗಳು ಮತ್ತು ಹೊಸ ತಲೆಮಾರುಗಳು ಈ ಪುಸ್ತಕಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಾರಂಭಿಸಿದವು ಮತ್ತು ನಮ್ಮ ಪವಿತ್ರ ಪುಸ್ತಕಗಳು ಮುಂದಿನ ಪೀಳಿಗೆಗೆ ಅಡಿಪಾಯವಾಗಲು ಪ್ರಾರಂಭಿಸಿದವು" ಎಂದು ಅವರು ಹೇಳಿದರು.
"ನಿಮ್ಮ ಉದ್ದೇಶಗಳು ಶುದ್ಧವಾಗಿದ್ದರೆ, ನಿಮ್ಮ ಮೌಲ್ಯಗಳು ಶುದ್ಧವಾಗಿದ್ದರೆ ಯಶಸ್ಸು ನಿಮ್ಮದಾಗಿರುತ್ತದೆ ಎಂಬುದಕ್ಕೆ ಗೀತಾ ಪ್ರೆಸ್ ಸಾಕ್ಷಿಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಗೀತಾ ಪ್ರೆಸ್ ಒಂದು ಸಂಸ್ಥೆಯಾಗಿ ಸದಾ ಸಾಮಾಜಿಕ ಮೌಲ್ಯಗಳನ್ನು ಪುಷ್ಟೀಕರಿಸಿ ಜನರಿಗೆ ಕರ್ತವ್ಯದ ಮಾರ್ಗವನ್ನು ತೋರಿಸಿದೆ ಎಂದು ಒತ್ತಿ ಹೇಳಿದ ಅವರು, ಗಂಗಾ ನದಿಯ ಸ್ವಚ್ಛತೆ, ಯೋಗ ವಿಜ್ಞಾನ, ಪತಂಜಲಿ ಯೋಗ ಸೂತ್ರದ ಪ್ರಕಟಣೆ, ಆಯುರ್ವೇದಕ್ಕೆ ಸಂಬಂಧಿಸಿದ 'ಆರೋಗ್ಯ ಅಂಕ್', ಜನರಿಗೆ ಭಾರತೀಯ ಜೀವನಶೈಲಿಯನ್ನು ಪರಿಚಯಿಸಲು 'ಜೀವನಾಚಾರ್ಯ ಅಂಕ್', ಸಮಾಜಕ್ಕೆ ಸೇವೆಯ ಆದರ್ಶಗಳು, 'ಸೇವಾ ಅಂಕ್' ಮತ್ತು 'ದಾನ ಮಹಿಮಾ'ಗಳ ಉದಾಹರಣೆಗಳನ್ನು ಅವರು ನೀಡಿದರು. "ಈ ಎಲ್ಲಾ ಪ್ರಯತ್ನಗಳ ಹಿಂದೆ, ರಾಷ್ಟ್ರದ ಸೇವೆಯ ಸ್ಫೂರ್ತಿ ಇದೆ ಮತ್ತು ರಾಷ್ಟ್ರವನ್ನು ಕಟ್ಟುವ ಸಂಕಲ್ಪವಿದೆ" ಎಂದು ಶ್ರೀ ಮೋದಿ ಹೇಳಿದರು.
"ಸಂತರ ತಪಸ್ಸು ಎಂದಿಗೂ ವಿಫಲವಾಗುವುದಿಲ್ಲ, ಅವರ ಸಂಕಲ್ಪಗಳು ಎಂದಿಗೂ ಖಾಲಿಯಾಗುವುದಿಲ್ಲ!" ಎಂದು ಶ್ರೀ ಮೋದಿ ಹೇಳಿದರು. ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಕುರಿತು ತಾವು ಕೆಂಪು ಕೋಟೆಯಿಂದ ಮಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನಿ, ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಒಟ್ಟಾಗಿ ತೆಗೆದುಕೊಂಡು ರಾಷ್ಟ್ರವು ಮುನ್ನಡೆಯುತ್ತಿದೆ ಎಂದು ಹೇಳಿದರು. ಒಂದೆಡೆ, ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತ ಹೊಸ ದಾಖಲೆಗಳನ್ನು ಮಾಡುತ್ತಿದೆ, ಅದೇ ಸಮಯದಲ್ಲಿ, ಕಾಶಿ ಕಾರಿಡಾರ್ ಪುನರಾಭಿವೃದ್ಧಿ ನಂತರ ಕಾಶಿಯಲ್ಲಿರುವ ವಿಶ್ವನಾಥ ಧಾಮದ ದಿವ್ಯ ರೂಪವೂ ಹೊರಹೊಮ್ಮಿದೆ ಎಂದರು. ಕೇದಾರನಾಥ ಮತ್ತು ಮಹಾಕಾಲ ಮಹಾಲೋಕದಂತಹ ತೀರ್ಥಕ್ಷೇತ್ರಗಳ ವೈಭವಕ್ಕೆ ಸಾಕ್ಷಿಯಾಗಿರುವ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. ಶತಮಾನಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಕನಸು ಕೂಡ ನನಸಾಗಲಿದೆ ಎಂಬ ಅಂಶದ ಬಗ್ಗೆಯೂ ಪ್ರಧಾನಿ ಗಮನ ಸೆಳೆದರು. ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಗುರುತನ್ನು ತೋರಿಸುವ ನೂತನ ನೌಕಾ ಧ್ವಜದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಕರ್ತವ್ಯದ ಮನೋಭಾವವನ್ನು ಪ್ರೇರೇಪಿಸಲು ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಯಿತು, ಬುಡಕಟ್ಟು ಸಂಪ್ರದಾಯಗಳು ಮತ್ತು ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ದೇಶಾದ್ಯಂತ ವಸ್ತುಸಂಗ್ರಹಾಲಯಗಳ ಅಭಿವೃದ್ಧಿ ಮಾಡಲಾಗಿದೆ ಮತ್ತು ಕದ್ದು ದೇಶದ ಹೊರಗೆ ಕಳುಹಿಸಲಾದ ಪವಿತ್ರ ಪ್ರಾಚೀನ ವಿಗ್ರಹಗಳನ್ನು ಮರುಸ್ಥಾಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಅಭಿವೃದ್ಧಿ ಹೊಂದಿದ ಮತ್ತು ಆಧ್ಯಾತ್ಮಿಕ ಭಾರತದ ಕಲ್ಪನೆಯನ್ನು ನಮ್ಮ ಋಷಿಮುನಿಗಳು ನಮಗೆ ನೀಡಿದ್ದು, ಇಂದು ಅದು ಸಾಕಾರವಾಗುತ್ತಿರುವುದನ್ನು ನೋಡಬಹುದು ಎಂದು ಅವರು ಹೇಳಿದರು. ನಮ್ಮ ಸಂತರು ಮತ್ತು ಋಷಿಮುನಿಗಳ ಆಧ್ಯಾತ್ಮಿಕ ಅಭ್ಯಾಸವು ಭಾರತದ ಸರ್ವತೋಮುಖ ಅಭಿವೃದ್ಧಿಗೆ ಅಂತಹ ಶಕ್ತಿಯನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. "ನಾವು ನವ ಭಾರತವನ್ನು ನಿರ್ಮಿಸುತ್ತೇವೆ ಮತ್ತು ವಿಶ್ವ ಕಲ್ಯಾಣದ ನಮ್ಮ ದೃಷ್ಟಿಯನ್ನು ಯಶಸ್ವಿಗೊಳಿಸುತ್ತೇವೆ" ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಗೋರಖಪುರದ ಸಂಸದರಾದ ಶ್ರೀ ರವಿ ಕಿಶನ್, ಪ್ರಧಾನ ಕಾರ್ಯದರ್ಶಿ ಶ್ರೀ ವಿಷ್ಣು ಪ್ರಸಾದ್ ಚಂದಗೋಥಿಯಾ ಮತ್ತು ಗೀತಾ ಪ್ರೆಸ್ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಶ್ರೀ ಕೇಶೋರಾಮ್ ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು.
गीता प्रेस विश्व का ऐसा इकलौता प्रिंटिंग प्रेस है, जो सिर्फ एक संस्था नहीं है बल्कि, एक जीवंत आस्था है। pic.twitter.com/zuibgq4YEL
— PMO India (@PMOIndia) July 7, 2023
1923 में गीता प्रेस के रूप में यहाँ जो आध्यात्मिक ज्योति प्रज्ज्वलित हुई, आज उसका प्रकाश पूरी मानवता का मार्गदर्शन कर रहा है। pic.twitter.com/FgIUibxFl3
— PMO India (@PMOIndia) July 7, 2023
गीता प्रेस, भारत को जोड़ती है, भारत की एकजुटता को सशक्त करती है। pic.twitter.com/ijJE1elNkf
— PMO India (@PMOIndia) July 7, 2023
गीताप्रेस इस बात का भी प्रमाण है कि जब आपके उद्देश्य पवित्र होते हैं, आपके मूल्य पवित्र होते हैं तो सफलता आपका पर्याय बन जाती है। pic.twitter.com/JvvrOGDUSa
— PMO India (@PMOIndia) July 7, 2023
ये समय गुलामी की मानसिकता से मुक्त होकर अपनी विरासत पर गर्व करने का समय है: PM @narendramodi pic.twitter.com/wzUepAqoYe
— PMO India (@PMOIndia) July 7, 2023