ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ನಲ್ಲಿಂದು ಶ್ರೀ ಅಲ್ತಾಫ್ ಬುಖಾರಿ ನೇತ್ರತ್ವದ ಜಮ್ಮು ಮತ್ತು ಕಾಶ್ಮೀರದ ಅಪ್ನಿ ಪಕ್ಷದ 24 ಸದಸ್ಯರ ನಿಯೋಗವನ್ನು ಭೇಟಿ ಮಾಡಿದ್ದರು.
ನಿಯೋಗದೊಂದಿಗಿನ ಸಂವಾದದಲ್ಲಿ ಪ್ರಧಾನಮಂತ್ರಿ ಅವರು, ಜಮ್ಮು ಮತ್ತು ಕಾಶ್ಮೀರದ ಪರಿವರ್ತನೆಯಲ್ಲಿ ಜನಭಾಗಿದಾರರಾಗಬೇಕು ಎಂದು ಕರೆ ನೀಡಿದರಲ್ಲದೆ, ಜನರಿಗೆ ಧನಿ ನೀಡುವ ಆಡಳಿತಕ್ಕೆ ಪ್ರಾಮುಖ್ಯತೆ ನೀಡಬೇಕೆಂದರು. ಪ್ರಾಂತ್ಯದಲ್ಲಿ ಕ್ಷಿಪ್ರ ರಾಜಕೀಯ ಏಕೀಕರಣ ಪ್ರಕ್ರಿಯೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ಯುವ ಜನರ ಸಬಲೀಕರಣದ ಕುರಿತು ಪ್ರಧಾನಮಂತ್ರಿ ಅವರು, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಯುವಜನರು ವೇಗವರ್ಧಕ ಏಜೆಂಟರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಕೌಶಲ್ಯಾಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕಿರುವುದನ್ನು ಬಲವಾಗಿ ಪ್ರತಿಪಾದಿಸಿದ ಅವರು, ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಗ್ರ ಪರಿವರ್ತನೆ ಆಗಲಿದೆ ಎಂದರು.
ಪ್ರಾಂತ್ಯದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಭರವಸೆ ನೀಡಿದ ಪ್ರಧಾನಮಂತ್ರಿ ಅವರು, ಪ್ರವಾಸೋದ್ಯಮ ಮತ್ತಿತರ ವಲಯಗಳಲ್ಲಿ ಬಂಡವಾಳ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದರು. ಜಮ್ಮು ಮತ್ತು ಕಾಶ್ಮೀರ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಧಾನಿ ಅವರು ನಿಯೋಗದೊಂದಿಗೆ ಜನಸಂಖ್ಯೆ ಪ್ರಮಾಣದಲ್ಲಿ ಬದಲಾವಣೆ, ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಮತ್ತು ರಾಜ್ಯಕ್ಕೆ ನೀಡುತ್ತಿರುವ ಅನುದಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಸಂಸತ್ತಿನಲ್ಲಿ ತಮ್ಮ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ಸಮಾಜದ ಎಲ್ಲ ವರ್ಗಗಳೊಂದಿಗೆ ಕೆಲಸ ಮಾಡಲು ದೊರೆತಿರುವ ಉತ್ತಮ ಅವಕಾಶವೆಂದುಕೊಂಡು ಕಾರ್ಯೋನ್ಮುಖವಾಗಲಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
ಆಪ್ನಿ ಪಕ್ಷದ ಅಧ್ಯಕ್ಷ ಶ್ರೀ ಅಲ್ತಾಫ್ ಬುಖಾರಿ ಅವರು 2019ರ ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿ ಹಾಗೂ ಕಲಂ 35 ಎ ರದ್ದುಗೊಳಿಸುವ ನಿರ್ಧಾರ ಕೈಗೊಂಡ ಕ್ಷಣ ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಆನಂದ ಭಾಷ್ಪದ ಕ್ಷಣ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳು ಮತ್ತು ದೃಢ ಬೆಂಬಲ ನೀಡುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರಿಗೆ ನಿಯೋಗ ಧನ್ಯವಾದಗಳನ್ನು ಅರ್ಪಿಸಿತು. ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುರಕ್ಷತೆ ಕಾಯ್ದುಕೊಳ್ಳುತ್ತಿರುವುದಕ್ಕೆ ನಿಯೋಗ ಸರ್ಕಾರ ಮತ್ತು ಭದ್ರತಾ ಪಡೆಗಳ ಪ್ರಯತ್ನಗಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿತು