"ಒಂದು ಶಿವಶಕ್ತಿ ಸ್ಥಳವು ಚಂದ್ರನ ಮೇಲಿದೆ, ಇನ್ನೊಂದು ಕಾಶಿಯಲ್ಲಿದೆ"
"ಕಾಶಿಯಲ್ಲಿನ ಅಂತಾರರಾಷ್ಟ್ರೀಯ ಕ್ರೀಡಾಂಗಣದ ವಿನ್ಯಾಸವು ಭಗವಾನ್ ಮಹಾದೇವ್‌ಗೆ ಸಮರ್ಪಿತವಾಗಿದೆ"
"ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಿದಾಗ, ಅದು ಯುವ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಸ್ಥಳೀಯ ಆರ್ಥಿಕತೆಗೆ ವರದಾನವಾಗುತ್ತದೆ"
"ಈಗ ರಾಷ್ಟ್ರದ ಮನಸ್ಥಿತಿ - ʻಜೋ ಖೇಲೆಗಾ ವೋ ಹಿ ಖಿಲೇಗಾʼ ಎಂಬಂತಿದೆ"
"ಸರ್ಕಾರವು ಕ್ರೀಡಾಪಟುಗಳ ಜೊತೆಯಲ್ಲಿ ಶಾಲೆಯಿಂದ ಒಲಿಂಪಿಕ್ಸ್ ವೇದಿಕೆಗೆ ತಂಡದ ಸದಸ್ಯರಂತೆ ಹೋಗುತ್ತಿದೆ"
"ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಬಂದ ಯುವಕರು ಇಂದು ರಾಷ್ಟ್ರದ ಹೆಮ್ಮೆಯಾಗಿದ್ದಾರೆ"
"ರಾಷ್ಟ್ರದ ಅಭಿವೃದ್ಧಿಗೆ ಕ್ರೀಡಾ ಮೂಲಸೌಕರ್ಯಗಳ ವಿಸ್ತರಣೆ ಅತ್ಯಗತ್ಯ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ವಾರಣಾಸಿಯ ಗಂಜಾರಿ, ರಜತಲಾಬ್ ನಲ್ಲಿ ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ವಾರಣಾಸಿಯ ಗಂಜಾರಿ, ರಜತಲಾಬ್ ನಲ್ಲಿ ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಾರಣಾಸಿಗೆ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, ವಾರಣಾಸಿಯ ಸಂತೋಷವು ಪದಗಳಿಗೆ ಮೀರಿದ್ದಾಗಿದೆ ಎಂದರು. ಕಳೆದ ತಿಂಗಳು 23ರಂದು ʻಚಂದ್ರಯಾನ-3’ ಚಂದ್ರನ ಮೇಲೆ ಇಳಿದ ಜಾಗವನ್ನು ಭಾರತವು ʻಶಿವಶಕ್ತಿ ಬಿಂದುʼ ಎಂದು ನಾಮಕರಣ ಮಾಡಿದೆ. ಇದಾಗಿ ಸರಿಯಾಗಿ ಒಂದು ತಿಂಗಳ ಬಳಿಕ, ಅದೇ ದಿನದಂದು ಕಾಶಿಗೆ ಭೇಟಿ ನೀಡುತ್ತಿದ್ದೇನೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಒಂದು ಶಿವಶಕ್ತಿಯ ಸ್ಥಳವು ಚಂದ್ರನ ಮೇಲಿದೆ, ಇನ್ನೊಂದು ಕಾಶಿಯಲ್ಲಿದೆ" ಎಂದು ಪ್ರಧಾನಿ ಹೇಳಿದರು, ಈ ಮಹತ್ವದ ಸಾಧನೆಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

 

ಮಾತಾ ವಿಂಧ್ಯಾವಾಸಿನಿಗೆ ಹೋಗುವ ಮಾರ್ಗದ ಜಂಕ್ಷನ್‌ನಲ್ಲಿರುವ ಸ್ಥಳದ ಮಹತ್ವ ಮತ್ತು ರಾಜ್ ನಾರಾಯಣ್ ಜೀ ಅವರು ಹುಟ್ಟಿದ ಸ್ಥಳವಾದ ʻಮೋತಿಕೋಟ್ʼ ಗ್ರಾಮಕ್ಕೆ ಅದರ ಸಾಮೀಪ್ಯವನ್ನು ಪ್ರಧಾನಿ ಉಲ್ಲೇಖಿಸಿದರು.

ಭಗವಾನ್ ಮಹಾದೇವ್‌ಗೆ ಸಮರ್ಪಿತವಾದ ಅಂತಾರಾಷ್ಟ್ರೀಯ ಕ್ರೀಡಾಂಗಣದ ವಿನ್ಯಾಸವು ಕಾಶಿಯ ನಾಗರಿಕರಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕ್ರೀಡಾಂಗಣವು ಉತ್ತಮ ಕ್ರಿಕೆಟ್ ಪಂದ್ಯಗಳಿಗೆ ಸಾಕ್ಷಿಯಾಗಲಿದ್ದು, ಯುವ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದರು. "ಇದು ಕಾಶಿ ನಾಗರಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ" ಎಂದು ಅವರು ಉಲ್ಲೆಖಿಸಿದರು.

ಕ್ರಿಕೆಟ್ ಮೂಲಕ ಜಗತ್ತು ಭಾರತದೊಂದಿಗೆ ಸಂಪರ್ಕ ಹೊಂದುತ್ತಿದೆ ಮತ್ತು ಅನೇಕ ಹೊಸ ದೇಶಗಳು ಕ್ರಿಕೆಟ್ ಆಡುತ್ತಿವೆ. ಇದು ಪಂದ್ಯಗಳ ಸಂಖ್ಯೆ ಹೆಚ್ಚಲು ದಾರಿ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ಅಂತರರಾಷ್ಟ್ರೀಯ ಕ್ರೀಡಾಂಗಣವು ಮುಂಬರುವ ವರ್ಷಗಳಲ್ಲಿ ಕ್ರೀಡಾಂಗಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ ಎಂದು ಅವರು ಹೇಳಿದರು. ಬಿಸಿಸಿಐ ನೀಡಿದ ಕೊಡುಗೆಗಾಗಿ ಪ್ರಧಾನಿ ಧನ್ಯವಾದ ಅರ್ಪಿಸಿದರು.

 

ಈ ಪ್ರಮಾಣದ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಯು ಕ್ರೀಡೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದಲ್ಲದೆ, ಪ್ರಾದೇಶಿಕ ಆರ್ಥಿಕತೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂತಹ ಬೆಳವಣಿಗೆಗಳು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇದರಿಂದ ಹೋಟೆಲ್‌ಗಳು, ತಿಂಡಿ-ತಿನಿಸು ಮಾರಾಟಗಾರರು, ಟ್ಯಾಕ್ಸಿಗಳು ಮತ್ತು ಆಟೋ ಚಾಲಕರು ಹಾಗೂ ಪ್ರದೇಶದ ಅಂಬಿಗರು ಮುಂತಾದವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು. ಇದು ಕ್ರೀಡಾ ತರಬೇತಿ ಮತ್ತು ನಿರ್ವಹಣಾ ಸಂಸ್ಥೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಆ ಮೂಲಕ ಯುವಕರು ಕ್ರೀಡಾ ನವೋದ್ಯಮಗಳಲ್ಲಿ ಸಾಹಸಕ್ಕೆ ಕೈ ಹಾಕಲು  ದಾರಿ ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು. ʻಫಿಸಿಯೋಥೆರಪಿʼ ಕೋರ್ಸ್‌ಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಮುಂಬರುವ ದಿನಗಳಲ್ಲಿ ವಾರಣಾಸಿಯಲ್ಲಿ ಹೊಸ ಕ್ರೀಡಾ ಉದ್ಯಮ ರೂಪುಗೊಳ್ಳುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಪೋಷಕರಲ್ಲಿ ಕ್ರೀಡೆಯ ಬಗ್ಗೆ ಬದಲಾಗುತ್ತಿರುವ ಮನೋಭಾವವನ್ನು ಪ್ರಧಾನಿ ಎತ್ತಿ ತೋರಿಸಿದರು. "ಈಗ ರಾಷ್ಟ್ರದಲ್ಲಿ - ʻಜೋ ಖೇಲೆಗಾ ವೋ ಹಿ ಖಿಲೇಗಾʼ(ಆಡುವವನು ಅರಳುತ್ತಾನೆ)" ಎಂಬ ಮನಸ್ಥಿತಿ ನೆಲೆಸಿದೆ ಎಂದು ಪ್ರಧಾನಿ ಬಣ್ಣಿಸಿದರು. ಪ್ರಧಾನಮಂತ್ರಿಯವರು ಇತ್ತೀಚೆಗೆ ಶಹದೋಲ್‌ಗೆ ಭೇಟಿ ನೀಡಿದ್ದನ್ನು ಮತ್ತು ಅಲ್ಲಿನ ಬುಡಕಟ್ಟು ಹಳ್ಳಿಯೊಂದರಲ್ಲಿ ಯುವಕರೊಂದಿಗೆ ನಡೆಸಿದ ಸಂವಾದವನ್ನು ಸ್ಮರಿಸಿದರು. ಅಲ್ಲಿನ 'ಮಿನಿ ಬ್ರೆಜಿಲ್' ಬಗ್ಗೆ ಸ್ಥಳೀಯರ ಹೆಮ್ಮೆ ಮತ್ತು ಫುಟ್ಬಾಲ್ ಬಗ್ಗೆ ಅವರಿಗಿದ್ದ ಆಳವಾದ ಪ್ರೀತಿಯನ್ನು ಸ್ಮರಿಸಿದರು.

ಕ್ರೀಡೆಯ ವಿಚಾರದಲ್ಲಿ ಕಾಶಿಯಲ್ಲಿ ಆಗಿರುವ ಬದಲಾವಣೆಯ ಬಗ್ಗೆಯೂ ಪ್ರಧಾನಿ ವಿವರಿಸಿದರು. ಕಾಶಿಯ ಯುವಕರಿಗೆ ವಿಶ್ವದರ್ಜೆಯ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದು ಆ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ, ಈ ಕ್ರೀಡಾಂಗಣದ ಜೊತೆಗೆ ಸಿಗ್ರಾ ಕ್ರೀಡಾಂಗಣಕ್ಕೆ 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಅಲ್ಲಿ 50ಕ್ಕೂ ಹೆಚ್ಚು ಕ್ರೀಡೆಗಳಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ದಿವ್ಯಾಂಗ ಸ್ನೇಹಿಯಾಗಲಿರುವ ಮೊದಲ ʻಮಲ್ಟಿ-ಸ್ಪೋರ್ಟ್ಸ್ ಕಾಂಪ್ಲೆಕ್ಸ್ʼ ಆಗಲಿದೆ. ಹೊಸ ನಿರ್ಮಾಣದ ಜೊತೆಗೆ ಹಳೆಯ ವ್ಯವಸ್ಥೆಗಳನ್ನು ಸಹ ಸುಧಾರಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

 

ಭಾರತದ ಇತ್ತೀಚಿನ ಕ್ರೀಡಾ ಯಶಸ್ಸಿಗೆ ಬದಲಾದ ಚಿಂತನಾ ಮತ್ತು ಕಾರ್ಯವಿಧಾನವೇ ಕಾರಣ, ಏಕೆಂದರೆ ಈಗ ಕ್ರೀಡೆಗಳು ಯುವಜನರ ಫಿಟ್ನೆಸ್, ಉದ್ಯೋಗ ಮತ್ತು ವೃತ್ತಿಜೀವನದೊಂದಿಗೆ ಸಂಬಂಧ ಹೊಂದಿವೆ ಎಂದು ಪ್ರಧಾನಿ ಹೇಳಿದರು.

“9 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ, ಈ ವರ್ಷದ ಕ್ರೀಡಾ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ʻಖೇಲೋ ಇಂಡಿಯಾʼದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 70 ಪ್ರತಿಶತದಷ್ಟು ಹೆಚ್ಚಳಗೊಂಡಿದೆ. ಸರ್ಕಾರವು ಕ್ರೀಡಾಪಟುಗಳೊಂದಿಗೆ ಶಾಲೆಯಿಂದ ಒಲಿಂಪಿಕ್ಸ್ ವೇದಿಕೆಯವರೆಗೆ ತಂಡದ ಸದಸ್ಯರಂತೆ ಹೋಗುತ್ತಿದೆ," ಎಂದು ಅವರು ಹೇಳಿದರು. ಬಾಲಕಿಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಮತ್ತು ಟಾಪ್ಸ್ ಯೋಜನೆಯನ್ನು ಅವರು ಉಲ್ಲೇಖಿಸಿದರು.

ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾರತವು ಈ ವರ್ಷದ ಆವೃತ್ತಿಯಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ ಎಂದು ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದರು. ಮುಂಬರುವ ʻಏಷ್ಯನ್ ಗೇಮ್ಸ್ʼ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಪ್ರಧಾನಮಂತ್ರಿಯವರು ಶುಭ ಕೋರಿದರು.

ದೇಶದ ಪ್ರತಿಯೊಂದು ಹಳ್ಳಿ, ನಗರ ಮೂಲೆ ಮೂಲೆಗಳಲ್ಲಿ ಕ್ರೀಡಾ ಸಾಮರ್ಥ್ಯದ ಉಪಸ್ಥಿತಿಯನ್ನು ಶ್ರೀ ಮೋದಿ ಗುರುತಿಸಿದರು ಮತ್ತು ಅವರನ್ನು ಹುಡುಕುವ ಹಾಗೂ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. "ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಬಂದ ಯುವಕರು ಇಂದು ರಾಷ್ಟ್ರದ ಹೆಮ್ಮೆಯಾಗಿದ್ದಾರೆ," ಎಂದು ಶ್ರೀ ಮೋದಿ ಹೇಳಿದರು, ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿರುವುದನ್ನು ಒತ್ತಿ ಹೇಳಿದರು. ʻಖೇಲೋ ಇಂಡಿಯಾʼದ ಉದಾಹರಣೆಯನ್ನು ನೀಡಿದ ಅವರು, ಅದರ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲಾಗುತ್ತದೆ ಮತ್ತು ಅವರನ್ನು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ಪರಿವರ್ತಿಸಲು ಸರ್ಕಾರ ಶ್ರಮಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಕ್ರೀಡಾ ಭ್ರಾತೃತ್ವದ ದಿಗ್ಗಜರ ಉಪಸ್ಥಿತಿಯನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಕಾಶಿ ಬಗ್ಗೆ ಅವರಿಗಿರುವ ಪ್ರೀತಿಗೆ ಧನ್ಯವಾದ ಅರ್ಪಿಸಿದರು.

 

"ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಅಭಿವೃದ್ಧಿಪಡಿಸಲು ಉತ್ತಮ ತರಬೇತುದಾರರು ಮತ್ತು ಉತ್ತಮ ತರಬೇತಿ ಎರಡೂ ಮುಖ್ಯ" ಎಂದು ಒತ್ತಿ ಹೇಳಿದ ಪ್ರಧಾನಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕ್ರೀಡಾಪಟುಗಳನ್ನು ತರಬೇತುದಾರರನ್ನಾಗಿ ನೇಮಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು. ಕಳೆದ ಕೆಲವು ವರ್ಷಗಳಲ್ಲಿ, ಯುವಕರು ವಿವಿಧ ಕ್ರೀಡೆಗಳು ಮತ್ತು ಆಟಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು.

ಹೊಸ ಮೂಲಸೌಕರ್ಯಗಳು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಕ್ರೀಡಾಪಟುಗಳಿಗೆ ಹೊಸ ಅವಕಾಶಗಳನ್ನು ನೀಡುತ್ತವೆ ಎಂದು ಅವರು ಹೇಳಿದರು. ʻಖೇಲೋ ಇಂಡಿಯಾʼ ಅಡಿಯಲ್ಲಿ ನಿರ್ಮಿಸಲಾದ ಮೂಲಸೌಕರ್ಯಗಳು ಬಾಲಕಿಯರಿಗೆ ಪ್ರಯೋಜನಕಾರಿಯಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

 

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕ್ರೀಡೆಯನ್ನು ಪಠ್ಯೇತರ ಚಟುವಟಿಕೆಯಾಗಿ ಪರಿಗಣಿಸದೆ, ಪಠ್ಯದ ಒಂದು ವಿಷಯವಾಗಿ ಪರಿಗಣಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಮಣಿಪುರದಲ್ಲಿ ಸ್ಥಾಪಿಸಲಾಯಿತು. ಉತ್ತರ ಪ್ರದೇಶದಲ್ಲೂ ಕ್ರೀಡಾ ಮೂಲಸೌಕರ್ಯಗಳ ವಿಸ್ತರಣೆಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಗೋರಖ್ ಪುರದಲ್ಲಿ ಕ್ರೀಡಾ ಕಾಲೇಜು ವಿಸ್ತರಣೆ ಮತ್ತು ಮೀರತ್ ನಲ್ಲಿ ಮೇಜರ್ ಧ್ಯಾನ್ ಚಂದ್ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಅವರು ಉಲ್ಲೇಖಿಸಿದರು.

"ರಾಷ್ಟ್ರದ ಅಭಿವೃದ್ಧಿಗೆ ಕ್ರೀಡಾ ಮೂಲಸೌಕರ್ಯಗಳ ವಿಸ್ತರಣೆ ಅತ್ಯಗತ್ಯ" ಎಂದು ಪ್ರಧಾನಿ ಒತ್ತಿ ಹೇಳಿದರು, ದೇಶದ ಖ್ಯಾತಿಯಿಗೆ ಅದರ ಮಹತ್ವವನ್ನು ಉಲ್ಲೇಖಿಸಿದರು. ವಿಶ್ವದ ಹಲವಾರು ನಗರಗಳು ಜಾಗತಿಕ ಕ್ರೀಡಾಕೂಟಗಳನ್ನು ಆಯೋಜಿಸುವುದಕ್ಕಾಗಿ ಹೆಸರುವಾಸಿಯಾಗಿವೆ ಮತ್ತು ಅಂತಹ ಜಾಗತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಮರ್ಥವಾದ ದೇಶದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ. ಈ ಕ್ರೀಡಾಂಗಣವು ಅಭಿವೃದ್ಧಿಯ ಈ ಸಂಕಲ್ಪಕ್ಕೆ ಸಾಕ್ಷಿಯಾಗಲಿದೆ, ಇದು ಕೇವಲ ಇಟ್ಟಿಗೆ ಮತ್ತು ಕಾಂಕ್ರೀಟ್ ರಚನೆಯಾಗುವುದಲ್ಲದೆ ಭಾರತದ ಭವಿಷ್ಯದ ಸಂಕೇತವಾಗಲಿದೆ ಎಂದು ಪ್ರಧಾನಿ ಬಣ್ಣಿಸಿದರು.

 

ನಗರದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಪ್ರಯತ್ನಗಳ ಗರಿಮೆಯು ಕಾಶಿ ಜನತೆಗೆ ಸಲ್ಲುತ್ತದೆ ಎಂದು ಪ್ರಧಾನಿ ಹೇಳಿದರು. "ನೀವಿಲ್ಲದೆ ಕಾಶಿಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮ ಬೆಂಬಲ ಮತ್ತು ಆಶೀರ್ವಾದದಿಂದ ನಾವು ಕಾಶಿಯ ಅಭಿವೃದ್ಧಿಯ ಹೊಸ ಅಧ್ಯಾಯಗಳನ್ನು ಬರೆಯುತ್ತಲೇ ಇರುತ್ತೇವೆ", ಎಂದು ಪ್ರಧಾನಿ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಬಿಸಿಸಿಐ ಅಧ್ಯಕ್ಷ ಶ್ರೀ ರೋಜರ್ ಬಿನ್ನಿ, ಬಿಸಿಸಿಐ ಉಪಾಧ್ಯಕ್ಷರಾದ ಶ್ರೀ ರಾಜೀವ್ ಶುಕ್ಲಾ, ಶ್ರೀ ಜಯ್ ಶಾ, ಮಾಜಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ, ಕಪಿಲ್ ದೇವ್, ದಿಲೀಪ್ ವೆಂಗ್ ಸರ್ಕಾರ್, ಮದನ್ ಲಾಲ್, ಗುಂಡಪ್ಪ ವಿಶ್ವನಾಥ್ ಮತ್ತು ಗೋಪಾಲ್ ಶರ್ಮಾ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವಾರಣಾಸಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಆಧುನಿಕ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ವಾರಣಾಸಿಯ ಗಂಜಾರಿ, ರಜತಲಾಬ್ ನಲ್ಲಿ ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇದು ತಲೆ ಎತ್ತಲಿದೆ. ಈ ಕ್ರೀಡಾಂಗಣದ ವಿಷಯಾಧಾರಿತ ವಾಸ್ತುಶಿಲ್ಪವು ಶಿವನಿಂದ ಸ್ಫೂರ್ತಿ ಪಡೆದಿದೆ. ಅರ್ಧಚಂದ್ರಾಕಾರದ ಛಾವಣಿಯ ಹೊದಿಕೆಗಳು, ತ್ರಿಶೂಲ ಆಕಾರದ ದೀಪಗಳು, ಘಾಟ್ ಮೆಟ್ಟಿಲುಗಳ ಆಧಾರಿತ ಆಸನಗಳು ಮತ್ತು ಮುಂಭಾಗದಲ್ಲಿ ಬಿಲ್ವಪತ್ರೆ ಆಕಾರದ ಲೋಹದ ಹಾಳೆಗಳ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ರೀಡಾಂಗಣವು 30,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರಲಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
PM to participate in Veer Baal Diwas programme on 26 December in New Delhi
December 25, 2024
PM to launch ‘Suposhit Gram Panchayat Abhiyan’

Prime Minister Shri Narendra Modi will participate in Veer Baal Diwas, a nationwide celebration honouring children as the foundation of India’s future, on 26 December 2024 at around 12 Noon at Bharat Mandapam, New Delhi. He will also address the gathering on the occasion.

Prime Minister will launch ‘Suposhit Gram Panchayat Abhiyan’. It aims at improving the nutritional outcomes and well-being by strengthening implementation of nutrition related services and by ensuring active community participation.

Various initiatives will also be run across the nation to engage young minds, promote awareness about the significance of the day, and foster a culture of courage and dedication to the nation. A series of online competitions, including interactive quizzes, will be organized through the MyGov and MyBharat Portals. Interesting activities like storytelling, creative writing, poster-making among others will be undertaken in schools, Child Care Institutions and Anganwadi centres.

Awardees of Pradhan Mantri Rashtriya Bal Puraskar (PMRBP) will also be present during the programme.