ಕೇಂದ್ರದ ಸ್ಥಾಪನೆಗೆ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕರು
ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಾಪನೆಗಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ ವಿಶ್ವ ನಾಯಕರು
" ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರವು ಈ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮತ್ತು ಸಾಮರ್ಥ್ಯಕ್ಕೆ ದೊರೆತ ಮನ್ನಣೆಯಾಗಿದೆ"
"ಭಾರತವು ಈ ಪಾಲುದಾರಿಕೆಯನ್ನು ಇಡೀ ಮನುಕುಲದ ಸೇವೆಗಾಗಿ ಒಂದು ದೊಡ್ಡ ಜವಾಬ್ದಾರಿಯಾಗಿ ಸ್ವೀಕರಿಸುತ್ತದೆ"
" ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಾಪನೆಯಿಂದಾಗಿ ಸ್ವಾಸ್ಥ್ಯ ಕ್ಷೇತ್ರಕ್ಕೆ ಜಾಮ್‌ನಗರದ ಕೊಡುಗೆಗಳು ಜಾಗತಿಕ ಮನ್ನಣೆ ಪಡೆಯುತ್ತವೆ"
"ಒಂದು ಗ್ರಹ ನಮ್ಮ ಆರೋಗ್ಯ" ಎಂಬ ಘೋಷಣೆಯನ್ನು ನೀಡುವ ಮೂಲಕ ಡಬ್ಲ್ಯುಎಚ್‌ಒ 'ಒಂದು ಭೂಮಿ, ಒಂದು ಆರೋಗ್ಯ' ಎಂಬ ಭಾರತದ ದೃಷ್ಟಿಕೋನವನ್ನು ಉತ್ತೇಜಿಸಿದೆ"
“ಭಾರತದ ಸಾಂಪ್ರದಾಯಿಕ ಔಷಧ ವ್ಯವಸ್ಥೆಯು ಚಿಕಿತ್ಸೆಗೆ ಸೀಮಿತವಾಗಿಲ್ಲ. ಇದು ಸಮಗ್ರ ಜೀವನ ವಿಜ್ಞಾನವಾಗಿದೆ"
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ (ಜಿಸಿಟಿಎಂ) ಕ್ಕೆ ಮಾರಿಷಸ್ ಪ್ರಧಾನಿ ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಜಿಸಿಟಿಎಂ ಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವದ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವಾಗಿದೆ. ಇದು ಜಾಗತಿಕ ಸ್ವಾಸ್ಥ್ಯದ ಅಂತಾರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮಲಿದೆ. ಬಾಂಗ್ಲಾದೇಶ, ಭೂತಾನ್, ನೇಪಾಳದ ಪ್ರಧಾನ ಮಂತ್ರಿಗಳು ಮತ್ತು ಮಾಲ್ಡೀವ್ಸ್ ಅಧ್ಯಕ್ಷರ ವೀಡಿಯೊ ಸಂದೇಶಗಳನ್ನು ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು. ಕೇಂದ್ರ ಸಚಿವರಾದ ಡಾ ಮನ್ಸುಖ್ ಮಾಂಡವಿಯಾ, ಶ್ರೀ ಸಬಾನಂದ ಸೋನೋವಾಲ್, ಶ್ರೀ ಮುಂಜಾಪರಾ ಮಹೇಂದ್ರಭಾಯಿ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಉಪಸ್ಥಿತರಿದ್ದರು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ ಸ್ಥಾಪನೆಗೆ ಎಲ್ಲಾ ನೆರವು ನೀಡಿದ ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. 107 ಡಬ್ಲ್ಯುಎಚ್‌ಒ ಸದಸ್ಯ ರಾಷ್ಟ್ರಗಳು ತಮ್ಮ ದೇಶದ ನಿರ್ದಿಷ್ಟ ಸರ್ಕಾರಿ ಕಚೇರಿಗಳನ್ನು ಹೊಂದಿವೆ, ಅಂದರೆ ಸಾಂಪ್ರದಾಯಿಕ ಔಷಧದಲ್ಲಿ ಅದರ ನಾಯಕತ್ವಕ್ಕಾಗಿ ಜಗತ್ತು ಭಾರತಕ್ಕೆ ಬರುತ್ತದೆ. ಆದ್ದರಿಂದ ಈ ಕೇಂದ್ರವು ನಿಜವಾದ ಜಾಗತಿಕ ಯೋಜನೆಯಾಗಿದೆ ಎಂದು ಅವರು ಹೇಳಿದರು. ಸಾಂಪ್ರದಾಯಿಕ ಔಷಧಿಗಳ ಉತ್ಪನ್ನಗಳು ಜಾಗತಿಕವಾಗಿ ವಿಪುಲವಾಗಿವೆ ಮತ್ತು ಸಾಂಪ್ರದಾಯಿಕ ಔಷಧದ ಭರವಸೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರವು ಬಹಳ ದೂರ ಸಾಗಲಿದೆ ಎಂದು ಅವರು ಹೇಳಿದರು. ಪ್ರಪಂಚದ ಅನೇಕ ಭಾಗಗಳಲ್ಲಿ ಸಾಂಪ್ರದಾಯಿಕ ಔಷಧವು ಚಿಕಿತ್ಸೆಯ ಮೊದಲ ಮಾರ್ಗವಾಗಿದೆ. ಹೊಸ ಕೇಂದ್ರವು ಡೇಟಾ, ನಾವೀನ್ಯತೆ ಮತ್ತು ಸುಸ್ಥಿರತೆಯ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಸಾಂಪ್ರದಾಯಿಕ ಔಷಧದ ಬಳಕೆಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ಹೇಳಿದರು. ಸಂಶೋಧನೆ ಮತ್ತು ನಾಯಕತ್ವ, ಪುರಾವೆ ಮತ್ತು ಕಲಿಕೆ, ಡೇಟಾ ಮತ್ತು ವಿಶ್ಲೇಷಣೆ, ಸುಸ್ಥಿರತೆ ಮತ್ತು ಸಮಾನತೆ ಹಾಗೂ ನಾವೀನ್ಯತೆ ಮತ್ತು ತಂತ್ರಜ್ಞಾನವು ಈ ಕೇಂದ್ರದ ಐದು ಪ್ರಮುಖ ಕ್ಷೇತ್ರಗಳಾಗಿವೆ ಎಂದು ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಹೇಳಿದರು.

ಮಾರಿಷಸ್‌ನ ಪ್ರಧಾನ ಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಈ ಸಂದರ್ಭಕ್ಕೆ ಮಾರಿಷಸ್ ಭಾಗಿಯಾಗಲು ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಹೇಳಿದರು. ವಿವಿಧ ಸಂಸ್ಕೃತಿಗಳಲ್ಲಿ ದೇಶೀಯ ವೈದ್ಯಕೀಯ ಪದ್ಧತಿ ಮತ್ತು ಗಿಡಮೂಲಿಕೆ ಉತ್ಪನ್ನಗಳ ಪ್ರಾಮುಖ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು. ಕೇಂದ್ರ ಸ್ಥಾಪನೆಗೆ ಇದಕ್ಕಿಂತ ಹೆಚ್ಚು ಸೂಕ್ತ ಸಮಯ ಇರಲಾರದು ಎಂದು ಅವರು ಹೇಳಿದರು. ಕೇಂದ್ರದ ಸ್ಥಾಪನೆಯಲ್ಲಿ ನಾಯಕತ್ವ ವಹಿಸುವಲ್ಲಿ ಪ್ರಧಾನಿ ಮೋದಿಯವರ ವೈಯಕ್ತಿಕ ಕೊಡುಗೆಯನ್ನು ಅವರು ಒತ್ತಿ ಹೇಳಿದರು. "ಈ ಉದಾರ ಕೊಡುಗೆಗಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಜಿ, ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ" ಎಂದು ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ಹೇಳಿದರು. 1989 ರಿಂದ ಮಾರಿಷಸ್‌ನಲ್ಲಿ ಆಯುರ್ವೇದಕ್ಕೆ ನೀಡಿರುವ ಕಾನೂನಾತ್ಮಕ ಮಾನ್ಯತೆಯ ವಿವರಗಳನ್ನು ಅವರು ನೀಡಿದರು. ಜಾಮ್‌ನಗರದಲ್ಲಿ ಆಯುರ್ವೇದ ವೈದ್ಯಕೀಯ ಅಧ್ಯಯನಕ್ಕಾಗಿ ಬರುವ ಮಾರಿಷಸ್‌ನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದ್ದಕ್ಕಾಗಿ ಅವರು ಗುಜರಾತ್‌ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳನ್ನು ತಿಳಿಸಿದರು. ಭಾರತದೊಂದಿಗೆ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಸಂಪರ್ಕ ಮತ್ತು ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ ಯೋಜನೆಯಲ್ಲಿ ಅವರ ವೈಯಕ್ತಿಕ ಪಾಲ್ಗೊಳ್ಳುವಿಕೆಯ ಬಗ್ಗೆ ಪ್ರಧಾನಿಯವರು ಗಮನ ಸೆಳೆದರು. ಅವರು ತಮ್ಮ ಪ್ರೀತಿಯನ್ನು ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಅವರ ನಿರೀಕ್ಷೆಗಳನ್ನು ಭಾರತವು ಈಡೇರಿಸುತ್ತದೆ ಎಂದು ಪ್ರಧಾನಿಯವರು ಭರವಸೆ ನೀಡಿದರು.

ಪ್ರಧಾನಮಂತ್ರಿಯವರು ಮಾರಿಷಸ್‌ನ ಪ್ರಧಾನಿ ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ಅವರ ಕುಟುಂಬದೊಂದಿಗೆ ಮೂರು ದಶಕಗಳ ಕಾಲದ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರು ಮತ್ತು ಅವರ ಮಾತುಗಳು ಮತ್ತು ಉಪಸ್ಥಿತಿಗಾಗಿ ಅವರಿಗೆ ಧನ್ಯವಾದ ಹೇಳಿದರು. ವೀಡಿಯೊ ಸಂದೇಶಗಳನ್ನು ಕಳುಹಿಸಿದ ನಾಯಕರಿಗೂ ಶ್ರೀ ಮೋದಿ ಧನ್ಯವಾದ ಹೇಳಿದರು.

"ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರವು ಈ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮತ್ತು ಸಾಮರ್ಥ್ಯಕ್ಕೆ ದೊರೆತ ಮನ್ನಣೆಯಾಗಿದೆ" ಎಂದು ಪ್ರಧಾನಿ ಹೇಳಿದರು. "ಭಾರತವು ಈ ಪಾಲುದಾರಿಕೆಯನ್ನು ಇಡೀ ಮನುಕುಲದ ಸೇವೆಗಾಗಿ ಒಂದು ದೊಡ್ಡ ಜವಾಬ್ದಾರಿಯಾಗಿ ಸ್ವೀಕರಿಸುತ್ತದೆ" ಎಂದು ಅವರು ಘೋಷಿಸಿದರು.

ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಳದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, "ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಾಪನೆಯೊಂದಿಗೆ ಸ್ವಾಸ್ಥ್ಯ ಕ್ಷೇತ್ರಕ್ಕೆ ಜಾಮ್‌ನಗರದ ಕೊಡುಗೆಗಳು ಜಾಗತಿಕ ಮನ್ನಣೆ ಪಡೆಯುತ್ತವೆ" ಎಂದು ಹೇಳಿದರು. ಐದು ದಶಕಗಳ ಹಿಂದೆ ವಿಶ್ವದ ಮೊದಲ ಆಯುರ್ವೇದ ವಿಶ್ವವಿದ್ಯಾಲಯವನ್ನು ಜಾಮ್‌ನಗರದಲ್ಲಿ ಸ್ಥಾಪಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು. ನಗರವು ಆಯುರ್ವೇದದಲ್ಲಿ ಬೋಧನೆ ಮತ್ತು ಸಂಶೋಧನೆಗೆ ಗುಣಮಟ್ಟದ ಆಯುರ್ವೇದ ಸಂಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಸ್ವಾಸ್ಥ್ಯದಿಂದ ಇರುವುದೇ ನಮ್ಮ ಅಂತಿಮ ಗುರಿಯಾಗಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ರೋಗಮುಕ್ತವಾಗಿರುವುದು ಜೀವನದ ಪ್ರಮುಖ ಭಾಗವಾಗಿರಬಹುದು, ಆದರೆ ಅಂತಿಮ ಗುರಿ ಸ್ವಾಸ್ಥ್ಯದಿಂದ ಇರುವುದಾಗಿರಬೇಕು ಎಂದು ಹೇಳಿದರು. ಸಾಂಕ್ರಾಮಿಕದ ಅವಧಿಯಲ್ಲಿ ಸ್ವಾಸ್ಥ್ಯದ ಪ್ರಾಮುಖ್ಯದ ಅರಿವಾಯಿತು ಎಂದು ಪ್ರಧಾನಮಂತ್ರಿಯವರು ಹೇಳಿದರು. “ಜಗತ್ತು ಇಂದು ಆರೋಗ್ಯ ಸೇವೆಯ ಹೊಸ ಆಯಾಮವನ್ನು ಹುಡುಕುತ್ತಿದೆ. 'ಒಂದು ಗ್ರಹ ನಮ್ಮ ಆರೋಗ್ಯ' ಎಂಬ ಘೋಷಣೆಯನ್ನು ನೀಡುವ ಮೂಲಕ ಡಬ್ಲ್ಯುಎಚ್‌ಒ 'ಒಂದು ಭೂಮಿ, ಒಂದು ಆರೋಗ್ಯ' ಎಂಬ ಭಾರತೀಯ ದೃಷ್ಟಿಕೋನವನ್ನು ಉತ್ತೇಜಿಸಿರುವುದು ತಮಗೆ ಸಂತಸ ತಂದಿದೆ ಎಂದು ಪ್ರಧಾನಿ ಹೇಳಿದರು.

 “ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಯು ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಇದು ಸಮಗ್ರ ಜೀವನ ವಿಜ್ಞಾನವಾಗಿದೆ” ಎಂದು ಪ್ರಧಾನಿ ಹೇಳಿದರು. ಆಯುರ್ವೇದವು ಕೇವಲ ಉಪಶಮನ ಮತ್ತು ಚಿಕಿತ್ಸೆಯನ್ನು ಮೀರಿದೆ ಎಂದು ಶ್ರೀ ಮೋದಿ ಹೇಳಿದರು. ಆಯುರ್ವೇದವು ಉಪಶಮನ ಮತ್ತು ಚಿಕಿತ್ಸೆಯ ಹೊರತಾಗಿ, ಸಾಮಾಜಿಕ ಆರೋಗ್ಯ, ಮಾನಸಿಕ ಆರೋಗ್ಯ-ಸಂತೋಷ, ಪರಿಸರ ಆರೋಗ್ಯ, ಸಹಾನುಭೂತಿ, ಅಂತಃಕರಣ ಮತ್ತು ಉತ್ಪಾದಕತೆಯನ್ನು ಒಳಗೊಂಡಿದೆ ಎಂದರು. "ಆಯುರ್ವೇದವನ್ನು ಜೀವನದ ಜ್ಞಾನವೆಂದು ಪರಿಗಣಿಸಲಾಗಿದೆ ಮತ್ತು ಅದನ್ನು ಐದನೇ ವೇದವೆಂದು ಪರಿಗಣಿಸಲಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಉತ್ತಮ ಆರೋಗ್ಯವು ಸಮತುಲಿತ ಆಹಾರದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ನಮ್ಮ ಪೂರ್ವಜರು ಆಹಾರವನ್ನು ಅರ್ಧದಷ್ಟು ಚಿಕಿತ್ಸೆ ಎಂದೇ ಪರಿಗಣಿಸಿದ್ದಾರೆ ಮತ್ತು ನಮ್ಮ ವೈದ್ಯಕೀಯ ವ್ಯವಸ್ಥೆಗಳು ಆಹಾರದ ಸಲಹೆಯಿಂದ ತುಂಬಿವೆ ಎಂದು ಅವರು ವಿವರಿಸಿದರು. ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿರುವುದು ಭಾರತಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಕ್ರಮವು ಮನುಕುಲಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ಜಾಗತಿಕವಾಗಿ ಆಯುರ್ವೇದ, ಸಿದ್ಧ, ಯುನಾನಿ ಸೂತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಪ್ರಧಾನಿಯವರು ಗಮನ ಸೆಳೆದರು. ಏಕೆಂದರೆ ಅನೇಕ ದೇಶಗಳು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಂಪ್ರದಾಯಿಕ ಔಷಧಕ್ಕೆ ಒತ್ತು ನೀಡುತ್ತಿವೆ. ಅಂತೆಯೇ, ಯೋಗವು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದೆ. ಮಧುಮೇಹ, ಸ್ಥೂಲಕಾಯ ಮತ್ತು ಖಿನ್ನತೆಯಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಯೋಗವು ಅಪಾರವಾಗಿ ನೆರವಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ಯೋಗವು ಜನರಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸು, ದೇಹ ಮತ್ತು ಪ್ರಜ್ಞೆಯಲ್ಲಿ ಸಮತೋಲನವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರಧಾನಿಯವರು ಹೊಸ ಕೇಂದ್ರಕ್ಕೆ ಐದು ಗುರಿಗಳನ್ನು ನೀಡಿದರು. ಮೊದಲಿಗೆ, ತಂತ್ರಜ್ಞಾನವನ್ನು ಬಳಸಿಕೊಂಡು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಡೇಟಾಬೇಸ್ ಅನ್ನು ರಚಿಸುವುದು; ಎರಡನೆಯದಾಗಿ, ಈ ಔಷಧಿಗಳಲ್ಲಿ ವಿಶ್ವಾಸವನ್ನು ಹೆಚ್ಚಿಸಲು ಜಿಸಿಟಿಎಂ ಸಾಂಪ್ರದಾಯಿಕ ಔಷಧಿಗಳ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಅಂತರಾಷ್ಟ್ರೀಯ ಮಾನದಂಡಗಳನ್ನು ರೂಪಿಸುವುದು; ಮೂರನೆಯದಾಗಿ, ಜಿಸಿಟಿಎಂ ಸಾಂಪ್ರದಾಯಿಕ ಔಷಧಿಗಳ ಜಾಗತಿಕ ಪರಿಣಿತರು ಒಗ್ಗೂಡಿ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ವಿಕಸನಗೊಳ್ಳಬೇಕು. ವಾರ್ಷಿಕ ಸಾಂಪ್ರದಾಯಿಕ ಔಷಧ ಉತ್ಸವವನ್ನು ನಡೆಸುವ ಸಾಧ್ಯತೆಯ ಬಗ್ಗೆ ಚಿಂತಿಸುವಂತೆ ಅವರು ತಿಳಿಸಿದರು. ನಾಲ್ಕನೆಯದಾಗಿ, ಜಿಸಿಟಿಎಂ ಸಾಂಪ್ರದಾಯಿಕ ಔಷಧಿಗಳ ಕ್ಷೇತ್ರದಲ್ಲಿ ಸಂಶೋಧನೆಗಾಗಿ ನಿಧಿಯನ್ನು ಕ್ರೋಡೀಕರಿಸಬೇಕು. ಅಂತಿಮವಾಗಿ, ರೋಗಿಗಳು ಸಾಂಪ್ರದಾಯಿಕ ಮತ್ತು ಆಧುನಿಕ ಔಷಧಿಗಳೆರಡರಿಂದಲೂ ಪ್ರಯೋಜನ ಪಡೆಯುವಂತಾಗಲು, ಜಿಸಿಟಿಎಂ ನಿರ್ದಿಷ್ಟ ರೋಗಗಳ ಸಮಗ್ರ ಚಿಕಿತ್ಸೆಗಾಗಿ ಶಿಷ್ಟಾಚಾರ (ಪ್ರೋಟೋಕಾಲ್‌) ಗಳನ್ನು ಅಭಿವೃದ್ಧಿಪಡಿಸಬೇಕು.

 ‘ವಸುಧೈವ ಕುಟುಂಬಕಂ’ಎಂಬ ಭಾರತೀಯ ಪರಿಕಲ್ಪನೆಯನ್ನು ಪ್ರಧಾನಿಯವರು  ಪ್ರಸ್ತಾಪಿಸಿದರು ಮತ್ತು ಇಡೀ ಜಗತ್ತು ಯಾವಾಗಲೂ ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸಿದರು. ಡಬ್ಲ್ಯುಎಚ್‌ಒ-ಜಿಸಿಟಿಎಂ ಸ್ಥಾಪನೆಯೊಂದಿಗೆ, ಈ ಸಂಪ್ರದಾಯಕ್ಕೆ ಮತ್ತಷ್ಟು ಪುಷ್ಟಿ ದೊರೆಯುತ್ತದೆ ಎಂದು ಅವರು ಹೇಳಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi