ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ದರ್ಭಾಂಗದಲ್ಲಿ ಸುಮಾರು 12,100 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಈ ಅಭಿವೃದ್ಧಿ ಯೋಜನೆಗಳು ಆರೋಗ್ಯ, ರೈಲು, ರಸ್ತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳನ್ನು ಒಳಗೊಂಡಿವೆ.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ನೆರೆ ರಾಜ್ಯವಾದ ಜಾರ್ಖಂಡ್‌ನಲ್ಲಿ ಮತದಾನ ನಡೆಯುತ್ತಿದೆ, ಆ ರಾಜ್ಯದ ಜನರು ವಿಕಸಿತ ಭಾರತ ನಿರ್ಮಾಣಕ್ಕಾಗಿ ಮತ ಚಲಾಯಿಸುತ್ತಿದ್ದಾರೆ. ಜಾರ್ಖಂಡ್ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದ ಪ್ರಧಾನ ಮಂತ್ರಿ, ದಿವಂಗತ ಶಾರದಾ ಸಿನ್ಹಾ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಂಗೀತಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಶ್ಲಾಘಿಸಿದರು, ವಿಶೇಷವಾಗಿ ಅವರ ಚಾತ್ ಮಹಾಪರ್ವ್ ಸಂಗೀತ ಸಂಯೋಜನೆಗಳನ್ನು ಶ್ಲಾಘಿಸಿದರು.
ಬಿಹಾರ ರಾಜ್ಯವು ಇಡೀ ಭಾರತದೊಂದಿಗೆ ಪ್ರಮುಖ ಅಭಿವೃದ್ಧಿ ಗುರಿಗಳ ಪ್ರಗತಿಗೆ ಸಾಕ್ಷಿಯಾಗಿದೆ. ಈ ಹಿಂದೆ ಯೋಜನೆಗಳು ಮತ್ತು ಕಾರ್ಯಕ್ರಮಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗುತ್ತಿದ್ದವು. ಆದರೆ ಇಂದು ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. "ನಾವು ವಿಕಸಿತ ಭಾರತ ನಿರ್ಮಿಸುವ ಕಡೆಗೆ ಸದೃಢವಾಗಿ ಹೆಜ್ಜೆ ಹಾಕುತ್ತಿದ್ದೇವೆ". ಗುರಿಯೆಡೆಗೆ ಕೊಡುಗೆ ನೀಡುವುದರೊಂದಿಗೆ ವಿಕಸಿತ ಭಾರತಕ್ಕೆ ಸಾಕ್ಷಿಯಾಗಲು ನಮ್ಮ ಯುವ ಪೀಳಿಗೆಯ ಅದೃಷ್ಟವೂ ಇದೆ ಎಂದು ಅವರು ಹೇಳಿದರು.
ಜನರ ಕಲ್ಯಾಣ ಮತ್ತು ರಾಷ್ಟ್ರ ಸೇವೆಗಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ರಸ್ತೆ, ರೈಲು ಮತ್ತು ಅನಿಲ ಮೂಲಸೌಕರ್ಯ ಕ್ಷೇತ್ರಗಳನ್ನು ಒಳಗೊಂಡಿರುವ ಸುಮಾರು 12,000 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಮೇಲಾಗಿ, ಬಿಹಾರದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದ್ದು, ದರ್ಭಾಂಗದಲ್ಲಿ ಏಮ್ಸ್‌ನ ಕನಸು ನನಸಾಗಿಸಲು ಇಂದು ಮಹತ್ವದ ಹೆಜ್ಜೆ ಇಡಲಾಗಿದೆ. ಪಶ್ಚಿಮ ಬಂಗಾಳದ ಪ್ರದೇಶಗಳನ್ನು ಹೊರತುಪಡಿಸಿ ಮಿಥಿಲಾ, ಕೋಸಿ ಮತ್ತು ತಿರ್ಹತ್ ಪ್ರದೇಶಗಳು ಮತ್ತು ಹತ್ತಿರದ ಪ್ರದೇಶಗಳು ಇದರಿಂದ ಪ್ರಯೋಜನ ಪಡೆಯುತ್ತವೆ. ನೇಪಾಳದಿಂದ ಭಾರತಕ್ಕೆ ಭೇಟಿ ನೀಡುವ ರೋಗಿಗಳಿಗೆ ಇದು ಚಿಕಿತ್ಸೆ ಒದಗಿಸಲಿದೆ. ಇದರಿಂದ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಬಹು ಹೊಸ ಅವಕಾಶಗಳನ್ನು ಸಹ ಸೃಷ್ಟಿಸಲಾಗುವುದು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಮಿಥಿಲಾ, ದರ್ಭಾಂಗ ಮತ್ತು ಇಡೀ ಬಿಹಾರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಭಾರತದಲ್ಲಿ ಜನಸಂಖ್ಯೆಯ ಅತ್ಯಧಿಕ ಪಾಲು ಬಡವರು ಮತ್ತು ಮಧ್ಯಮ ವರ್ಗದ ಜನರನ್ನು ಒಳಗೊಂಡಿದೆ. ಈ ವರ್ಗಗಳ ಜನರು ರೋಗಗಳಿಂದ ನರಳುತ್ತಿದ್ದಾರೆ, ಅವರು ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಹಣ ವ್ಯಯಿಸುತ್ತಿದ್ದಾರೆ. ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಇಡೀ ಕುಟುಂಬವೇ ಹೇಗೆ ದಿಗ್ಭ್ರಮೆಗೊಳ್ಳುತ್ತದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆಸ್ಪತ್ರೆಗಳು ಮತ್ತು ವೈದ್ಯರ ಕೊರತೆ, ಅಧಿಕ ಬೆಲೆಯ ಔಷಧಿಗಳು ಮತ್ತು ಕಡಿಮೆ ರೋಗ ಪತ್ತೆ ಮತ್ತು ಸಂಶೋಧನಾ ಕೇಂದ್ರಗಳ ಕೊರತೆಯಿಂದಾಗಿ ವೈದ್ಯಕೀಯ ಮೂಲಸೌಕರ್ಯದ ಪರಿಸ್ಥಿತಿಯು ಹಿಂದೆ ತುಂಬಾ ಕಳಪೆಯಾಗಿತ್ತು. ಕಳಪೆ ಆರೋಗ್ಯ ಮೂಲಸೌಕರ್ಯ ಮತ್ತು ಬಡವರು ಎದುರಿಸುತ್ತಿರುವ ತೊಂದರೆಗಳಿಂದಾಗಿ ರಾಷ್ಟ್ರದ ಪ್ರಗತಿ ಕುಂಠಿತಗೊಂಡಿದೆ. ಆದ್ದರಿಂದ, ಹಳೆಯ ಆಲೋಚನೆ ಮತ್ತು ಕಾರ್ಯ ವಿಧಾನವನ್ನು ಸಂಪೂರ್ಣ ಬದಲಾಯಿಸಲಾಗಿದೆ ಎಂದು ಹೇಳಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಅಳವಡಿಸಿಕೊಂಡಿರುವ ಸಮಗ್ರ ಕಾರ್ಯ ವಿಧಾನವನ್ನು ಪ್ರಸ್ತಾಪಿಸಿದ ಪ್ರಧಾನಿ, ಸರ್ಕಾರದ ಗಮನ ನೀಡಿರುವ ಕ್ಷೇತ್ರಗಳನ್ನು ವಿವರಿಸಿದರು. ಸರ್ಕಾರದ ಮೊದಲ ಗಮನವೆಂದರೆ, ರೋಗಗಳನ್ನು ತಡೆಗಟ್ಟುವುದಾಗಿದೆ. ಎರಡನೆಯದಾಗಿ ಅನಾರೋಗ್ಯದ ಸರಿಯಾದ ರೋಗ ಪತ್ತೆ ಮಾಡುವುದು, ಮೂರನೆಯದಾಗಿ ಉಚಿತ ಅಥವಾ ಕಡಿಮೆ ವೆಚ್ಚದ ಚಿಕಿತ್ಸೆ ಮತ್ತು ಔಷಧಿಗಳ ಲಭ್ಯತೆಯಾಗಿದೆ. ನಾಲ್ಕನೆಯದು ಉತ್ತಮ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಣ್ಣ ಪಟ್ಟಣಗಳನ್ನು ಸಜ್ಜುಗೊಳಿಸುವುದಾಗಿದೆ ಮತ್ತು ಐದನೆಯದು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ವಿಸ್ತರಣೆಯಾಗಿದೆ.
ಯೋಗ, ಆಯುರ್ವೇದ, ಪೌಷ್ಟಿಕಾಂಶದ ಮೌಲ್ಯ, ಫಿಟ್ ಇಂಡಿಯಾ ಆಂದೋಲನಕ್ಕೆ ಸರ್ಕಾರ ಒತ್ತು ನೀಡಿದೆ. ಸಾಮಾನ್ಯ ಕಾಯಿಲೆಗಳಿಗೆ ಜಂಕ್ ಫುಡ್ ಮತ್ತು ಕಳಪೆ ಜೀವನಶೈಲಿ ಮುಖ್ಯ ಕಾರಣವಾಗಿದೆ ಎಂದು ಪ್ರಧಾನಿ, ಸರ್ಕಾರದ ಪ್ರಯತ್ನಗಳನ್ನು ಪಟ್ಟಿ ಮಾಡಿದರು. ಸ್ವಚ್ಛ ಭಾರತ್ ಅಡಿ, ಪ್ರತಿ ಮನೆಗೆ ಶೌಚಾಲಯ ಮತ್ತು ನಲ್ಲಿ ನೀರು ಒದಗಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದರ್ಭಾಂಗದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಮತ್ತು ಆಂದೋಲನ ಬಲಪಡಿಸಲು ಮುಖ್ಯ ಕಾರ್ಯದರ್ಶಿ ಮತ್ತು ಅವರ ತಂಡ ಮತ್ತು ರಾಜ್ಯದ ಜನತೆ ನಡೆಸಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಅಭಿಯಾನವನ್ನು ಇನ್ನೂ ಕೆಲವು ದಿನಗಳವರೆಗೆ ವಿಸ್ತರಿಸುವಂತೆ ಒತ್ತಾಯಿಸಿದರು.
ಆರಂಭದಲ್ಲೇ ರೋಗ ಪತ್ತೆ ಹಚ್ಚಿದರೆ ಅದರ ತೀವ್ರತೆ ಕಡಿಮೆ ಮಾಡಬಹುದು. ಆದಾಗ್ಯೂ, ರೋಗ ಪತ್ತೆ ಮತ್ತು ಸಂಶೋಧನೆಗೆ ಹೆಚ್ಚಿನ ಹಣ ತೊಡಗಿಸುವುದರಿಂದ, ಜನರ ಆರೋಗ್ಯ ಪರಿಣಾಮಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. "ನಾವು ದೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಪ್ರಾರಂಭಿಸಿದ್ದೇವೆ". ಇದು ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಇಲ್ಲಿಯವರೆಗೆ 4 ಕೋಟಿಗೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯು ಅನೇಕ ಬಡವರ ಚಿಂತೆಯನ್ನು ನಿವಾರಿಸಿದೆ. ಆಯುಷ್ಮಾನ್ ಯೋಜನೆಯಿಂದ ಕೋಟ್ಯಂತರ ಕುಟುಂಬಗಳ ಸುಮಾರು 1.25 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ. ಈ ಯೋಜನೆಯಡಿ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮಾಡಿದ ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ 70 ವರ್ಷ ಮೇಲ್ಪಟ್ಟ ನಾಗರಿಕರನ್ನು ಸೇರಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಪ್ರಸ್ತಾಪಿಸಿದ ಪ್ರಧಾನಿ, “ಈ ಭರವಸೆಯನ್ನು ಈಡೇರಿಸಲಾಗಿದೆ. ಕುಟುಂಬದ ಆದಾಯ ಲೆಕ್ಕಿಸದೆ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಈಗಾಗಲೇ ಪ್ರಾರಂಭವಾಗಿದೆ. ಎಲ್ಲಾ ಫಲಾನುಭವಿಗಳು ಶೀಘ್ರದಲ್ಲೇ ಆಯುಷ್ಮಾನ್ ವಯ ವಂದನಾ ಕಾರ್ಡ್ ಹೊಂದುತ್ತಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ನೀಡುವ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಭಾರತದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ವೈದ್ಯರನ್ನು ಉತ್ತಮ ಆರೋಗ್ಯ ರಕ್ಷಣೆಗಾಗಿ ಸಣ್ಣ ಪಟ್ಟಣಗಳನ್ನು ಸಜ್ಜುಗೊಳಿಸುವ 4ನೇ ಹಂತದ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಸ್ವಾತಂತ್ರ್ಯ ಗಳಿಸಿದ 60 ವರ್ಷಗಳ ನಂತರ ಇಡೀ ರಾಷ್ಟ್ರದಲ್ಲಿ ಕೇವಲ ಒಂದೇ ಏಮ್ಸ್ ಇತ್ತು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹೊಸ ಏಮ್ಸ್ ಸ್ಥಾಪಿಸುವ ಯೋಜಯೂ ಇತ್ತು, ಆದರೆ ಅವು ಪೂರ್ಣಗೊಂಡಿಲ್ಲ. ಈಗಿನ ಸರ್ಕಾರವು ಕಾಯಿಲೆಗಳನ್ನು ಮಾತ್ರ ನೋಡದೆ ದೇಶದ ಮೂಲೆ ಮೂಲೆಗಳಲ್ಲಿ ಹೊಸ ಏಮ್ಸ್ ಸ್ಥಾಪಿಸಿದೆ. ಏಮ್ಸ್ ಗಳ ಒಟ್ಟು ಸಂಖ್ಯೆಯನ್ನು ಇದೀಗ ಸುಮಾರು 24ಕ್ಕೆ ಏರಿಕೆ ಕಂಡಿದೆ. ಕಳೆದ 10 ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದು ಹೆಚ್ಚಿನ ಸಂಖ್ಯೆಯ ವೈದ್ಯರಿಗೆ ಕಾರಣವಾಗುತ್ತವೆ. "ದರ್ಭಾಂಗ ಏಮ್ಸ್ ಬಿಹಾರ ಮತ್ತು ರಾಷ್ಟ್ರದ ಸೇವೆಗಾಗಿ ಅನೇಕ ಹೊಸ ವೈದ್ಯರನ್ನು ಸೃಷ್ಟಿಸಲಿದೆ". ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಸಕ್ರಿಯಗೊಳಿಸಲಾಗುತ್ತಿದೆ. ಇದು ಕರ್ಪುರಿ ಠಾಕೂರ್ ಜಿ ಅವರ ಕನಸು ನನಸಾಗಿಸುವ ದೊಡ್ಡ ಗೌರವವಾಗಿದೆ. ಕಳೆದ 10 ವರ್ಷಗಳಲ್ಲಿ 1 ಲಕ್ಷ ಹೊಸ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಇನ್ನೂ 75,000 ಸೀಟುಗಳನ್ನು ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ. ಹಿಂದಿ ಮತ್ತು ಇತರೆ ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ಆಯ್ಕೆಯನ್ನು ಸಹ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳನ್ನು ಮಾಡುತ್ತಿದೆ. ಮುಜಾಫರ್‌ಪುರದಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್ ಸೌಲಭ್ಯವು ಬಿಹಾರದ ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನ ನೀಡುತ್ತದೆ. ಈ ಒಂದೇ ಸೌಲಭ್ಯವು ವಿವಿಧ ರೀತಿಯ ಕ್ಯಾನ್ಸರ್‌ಗಳ ಚಿಕಿತ್ಸಾ ಅಗತ್ಯಗಳನ್ನು ಪೂರೈಸುತ್ತದೆ, ರೋಗಿಗಳು ಚಿಕಿತ್ಸೆಗಾಗಿ ಇನ್ನು ಮುಂದೆ ದೆಹಲಿ ಅಥವಾ ಮುಂಬೈಗೆ ಪ್ರಯಾಣಿಸಬೇಕಾಗಿಲ್ಲ. ಬಿಹಾರದಲ್ಲಿ ಶೀಘ್ರದಲ್ಲೇ ಹೊಸ ಕಣ್ಣಿನ ಆಸ್ಪತ್ರೆ ಲಭ್ಯವಾಗಲಿದೆ ಎಂದು ಪ್ರಧಾನಿ ಘೋಷಿಸಿ, ಸಂತಸ ವ್ಯಕ್ತಪಡಿಸಿದರು. ವಾರಾಣಸಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಶಂಕರ ನೇತ್ರಾಲಯದಂತೆ ಬಿಹಾರದಲ್ಲಿ ನೇತ್ರ ಆಸ್ಪತ್ರೆ ತೆರೆಯುವಂತೆ ಕಂಚಿ ಕಾಮಕೋಟಿ ಶ್ರೀ ಶಂಕರಾಚಾರ್ಯ ಜಿ ಅವರಿಗೆ ಮನವಿ ಮಾಡಿದ್ದೇನೆ, ಅದರ ಕೆಲಸ ಪ್ರಗತಿಯಲ್ಲಿದೆ ಎಂದರು.
ಉತ್ತಮ ಆಡಳಿತ ಮಾದರಿ ಅಭಿವೃದ್ಧಿಪಡಿಸಿದ ಬಿಹಾರದ ಮುಖ್ಯಮಂತ್ರಿಯನ್ನು ಪ್ರಧಾನಿ ಶ್ಲಾಘಿಸಿದರು. ಡಬಲ್ ಎಂಜಿನ್ ಸರ್ಕಾರವು ಬಿಹಾರದಲ್ಲಿ ತ್ವರಿತ ಅಭಿವೃದ್ಧಿಗೆ ಬದ್ಧವಾಗಿದೆ, ಸಣ್ಣ ರೈತರು ಮತ್ತು ಕೈಗಾರಿಕೆಗಳನ್ನು ಬಲಪಡಿಸುವ ಮಾರ್ಗಸೂಚಿಯಲ್ಲಿ ಅದು ಕೆಲಸ ಮಾಡುತ್ತದೆ. ಮೂಲಸೌಕರ್ಯ ಅಭಿವೃದ್ಧಿ, ವಿಮಾನ ನಿಲ್ದಾಣಗಳು ಮತ್ತು ಎಕ್ಸ್‌ಪ್ರೆಸ್‌ವೇಗಳೊಂದಿಗೆ ಬಿಹಾರದ ಗುರುತು ಹೆಚ್ಚುತ್ತಿದೆ. ದರ್ಭಾಂಗಾದಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಗೆ ಉಡಾನ್ ಯೋಜನೆಗೆ ಮನ್ನಣೆ ನೀಡಿದ್ದಾರೆ. 5,500 ಕೋಟಿ ರೂಪಾಯಿ ಮೌಲ್ಯದ ಎಕ್ಸ್‌ಪ್ರೆಸ್‌ವೇಗಳು ಮತ್ತು ಸುಮಾರು 3,400 ಕೋಟಿ ರೂಪಾಯಿ ಮೌಲ್ಯದ ಸಿಟಿ ಗ್ಯಾಸ್ ವಿತರಣೆ(ಸಿಜಿಡಿ) ಜಾಲ ಸೇರಿದಂತೆ ಇಂದಿನ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅವರು ಪ್ರಸ್ತಾಪಿಸಿದರು. "ಅಭಿವೃದ್ಧಿಯ ಮಹಾಯಜ್ಞವು ಬಿಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ", ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ಪ್ರದೇಶದ ರೈತರ, ಮಖಾನಾ ಉತ್ಪಾದಕರ ಮತ್ತು ಮೀನುಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಮಿಥಿಲಾ ಸೇರಿದಂತೆ ಬಿಹಾರದ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿ 25,000 ಕೋಟಿ ರೂ.ಗಿಂತ ಹೆಚ್ಚು ಹಣ ಪಡೆದಿದ್ದಾರೆ. ಮಖಾನ ಉತ್ಪಾದಕರ ಪ್ರಗತಿಗಾಗಿ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಗೆ ಒತ್ತು ನೀಡಲಾಗಿದೆ. ಮಖಾನಾ ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರೀಯ ಸಂಸ್ಥೆಯ ಸ್ಥಾನಮಾನ ನೀಡಲಾಗಿದೆ. "ಮಖಾನಗಳು ಜಿಐ ಟ್ಯಾಗ್ ಪಡೆದಿವೆ". ಮೀನು ಸಾಕಣೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ವಿಶ್ವದಲ್ಲಿ ಭಾರತವನ್ನು ಬೃಹತ್ ಮೀನು ರಫ್ತುದಾರ ರಾಷ್ಟ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.
ಕೋಸಿ ಮತ್ತು ಮಿಥಿಲಾದಲ್ಲಿ ಪುನರಾವರ್ತನೆಯಾದ ಪ್ರವಾಹದಿಂದ ಜನರಿಗೆ ಪರಿಹಾರ ಒದಗಿಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಬಿಹಾರದ ಪ್ರವಾಹ ನಿಭಾಯಿಸಲು ಈ ವರ್ಷದ ಬಜೆಟ್‌ನಲ್ಲಿ ಸಮಗ್ರ ಯೋಜನೆ ಘೋಷಿಸಲಾಗಿದೆ. ನೇಪಾಳದ ಸಹಕಾರದೊಂದಿಗೆ 11,000 ಕೋಟಿ ರೂ. ಪ್ರವಾಹ ಪರಿಹಾರ ತಲುಪಿಸಲಾಗುವುದು ಎಂದರು.
"ಬಿಹಾರ ಭಾರತದ ಪರಂಪರೆಯ ಅತಿದೊಡ್ಡ ಕೇಂದ್ರವಾಗಿದೆ". ಈ ಪರಂಪರೆಯನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ, ಸರ್ಕಾರವು "ವಿಕಾಸ್ ಭಿ, ವಿರಾಸತ್ ಭಿ" ಮಂತ್ರ ಅನುಸರಿಸುತ್ತಿದೆ. ನಳಂದಾ ವಿಶ್ವವಿದ್ಯಾಲಯವು ತನ್ನ ದೀರ್ಘಕಾಲದ ಜನಪ್ರಿಯತೆಯನ್ನು ಮರಳಿ ಪಡೆಯಲು ಇಂದು ಮುನ್ನಡೆಯುತ್ತಿದೆ ಎಂದರು.
ಭಾಷೆಗಳ ಸಂರಕ್ಷಣೆಯ ಅಗತ್ಯಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿ, ಭಗವಾನ್ ಬುದ್ಧನ ಬೋಧನೆ ಮತ್ತು ಬಿಹಾರದ ವೈಭವದ ಗತಕಾಲದ ಬೋಧನೆಯನ್ನು ಲಿಪಿ ಮಾಡುವ ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ. ಭಾರತ ಸಂವಿಧಾನದ 8ನೇ ಪರಿಚ್ಛೇದಕ್ಕೆ ಮೈಥಿಲಿ ಭಾಷೆ ಸೇರಿಸಿದ್ದು ಈಗಿನ ಸರಕಾರ ಎಂದು ನೆನಪಿಸಿದರು. "ಮೈಥಿಲಿಯನ್ನು ಜಾರ್ಖಂಡ್ ರಾಜ್ಯದ 2ನೇ ಭಾಷೆಯಾಗಿ ಸ್ಥಾನಮಾನ ನೀಡಲಾಗಿದೆ" ಎಂದರು.
ರಾಮಾಯಣ ಸರ್ಕ್ಯೂಟ್‌ನೊಂದಿಗೆ ಸಂಪರ್ಕ ಹೊಂದಿದ ದೇಶದ 12ಕ್ಕೂ ಹೆಚ್ಚು ನಗರಗಳಲ್ಲಿ ದರ್ಭಾಂಗ ಒಂದಾಗಿದೆ, ಇದರಿಂದಾಗಿ ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ದರ್ಭಾಂಗ-ಸೀತಾಮರ್ಹಿ-ಅಯೋಧ್ಯೆ ಮಾರ್ಗದಲ್ಲಿ ಅಮೃತ್ ಭಾರತ್ ರೈಲು ನಾಗರಿಕರಿಗೆ ಹೆಚ್ಚಿನ ಪ್ರಯೋಜನ ನೀಡಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಮೊದಲು ಮತ್ತು ನಂತರ ಮಹತ್ವದ ಕೊಡುಗೆಗಳನ್ನು ನೀಡಿದ ದರ್ಭಾಂಗಾ ಎಸ್ಟೇಟ್‌ನ ಮಹಾರಾಜ್ ಶ್ರೀ ಕಾಮೇಶ್ವರ್ ಸಿಂಗ್ ಜಿ ಅವರಿಗೆ ಶ್ರೀ ಮೋದಿ ಅವರು ಗೌರವ ಸಲ್ಲಿಸಿದರು. ಶ್ರೀ ಕಾಮೇಶ್ವರ್ ಸಿಂಗ್ ಜಿ ಅವರ ಸಾಮಾಜಿಕ ಕಾರ್ಯವು ದರ್ಭಾಂಗದ ಹೆಮ್ಮೆ ಮತ್ತು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಕಾಶಿಯಲ್ಲೂ ಅವರ ಉತ್ತಮ ಕೆಲಸಗಳ ಬಗ್ಗೆ ಚರ್ಚೆಯಾಗುತ್ತಿದೆ. ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಒತ್ತು ನೀಡಿದ ಅವರು, ಮತ್ತೊಮ್ಮೆ ಅವರನ್ನು ಅಭಿನಂದಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಬಿಹಾರದ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್, ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಮತ್ತು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವ ಶ್ರೀ ಚಿರಾಗ್ ಪಾಸ್ವಾನ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಈ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ದೂರದೃಷ್ಟಿಯಲ್ಲಿ, ಪ್ರಧಾನ ಮಂತ್ರಿ ಅವರು 1,260 ಕೋಟಿ ರೂ. ಮೌಲ್ಯದ ದರ್ಭಾಂಗದಲ್ಲಿ ಏಮ್ಸ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ, ಆಯುಷ್ ಬ್ಲಾಕ್, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ರಾತ್ರಿ ಆಶ್ರಯ ಮತ್ತು ವಸತಿ ಸೌಲಭ್ಯಗಳನ್ನು ಹೊಂದಿರುತ್ತದೆ. ಇದು ಬಿಹಾರ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ತೃತೀಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ.
ರಸ್ತೆ ಮತ್ತು ರೈಲು ವಲಯಗಳಲ್ಲಿ ಹೊಸ ಯೋಜನೆಗಳ ಮೂಲಕ ಈ ಪ್ರದೇಶದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತಿದೆ. ಪ್ರಧಾನ ಮಂತ್ರಿ ಅವರು ಬಿಹಾರದಲ್ಲಿ ಸುಮಾರು 5,070 ಕೋಟಿ ರೂಪಾಯಿ ಮೌಲ್ಯದ ಬಹುರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಿ ಅವರು ಎನ್ಎಚ್-327ಇ ಚತುಷ್ಪಥ ಗಲ್ಗಾಲಿಯಾ-ಅರಾರಿಯಾ ವಿಭಾಗ ಉದ್ಘಾಟಿಸಿದರು. ಈ ಕಾರಿಡಾರ್ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ(ಎನ್ಎಚ್-27) ಅರಾರಿಯಾದಿಂದ ಪಕ್ಕದ ರಾಜ್ಯವಾದ ಪಶ್ಚಿಮ ಬಂಗಾಳಕ್ಕೆ ಗಲ್ಗಾಲಿಯಾದಲ್ಲಿ ಪರ್ಯಾಯ ಮಾರ್ಗ ಒದಗಿಸುತ್ತದೆ. ಅವರು ಎನ್ಎಚ್-322 ಮತ್ತು ಎನ್ಎಚ್-31ರಲ್ಲಿ 2 ರೈಲು ಸೇತುವೆಗಳನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರು ಬಂಧುಗಂಜ್‌ನಲ್ಲಿ ಎನ್ಎಚ್-110ರಲ್ಲಿ ಪ್ರಮುಖ ಸೇತುವೆ ಉದ್ಘಾಟಿಸಿದರು, ಅದು ಜೆಹಾನಾಬಾದ್‌ನಿಂದ ಬಿಹಾರ್‌ಷರೀಫ್‌ಗೆ ಸಂಪರ್ಕ ಕಲ್ಪಿಸುತ್ತದೆ.
ರಾಮನಗರದಿಂದ ರೋಸೆರಾ, ಬಿಹಾರ-ಪಶ್ಚಿಮ ಬಂಗಾಳ ಗಡಿಯಿಂದ ಎನ್ಎಚ್-131ಎ ಮಣಿಹಾರಿ ವಿಭಾಗ, ಹಾಜಿಪುರದಿಂದ ಬಚ್ವಾರಾ ಮೂಲಕ ಮಹನಾರ್ ಮತ್ತು ಮೊಹಿಯುದ್ದೀನ್ ನಗರ, ಸರ್ವಾನ್- ಮೂಲಕ ಸುಸಜ್ಜಿತ ದ್ವಿಪಥದ ರಸ್ತೆ ನಿರ್ಮಾಣ ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಅವರು ಎನ್ಎಚ್-327ಇಯಲ್ಲಿ ರಾಣಿಗಂಜ್ ಬೈಪಾಸ್‌ಗೆ, ಕಟೋರಿಯಾ, ಲಖ್ಪುರ, ಬಂಕಾ ಮತ್ತು ಪಂಜ್ವಾರ ಎನ್ಎಚ್-333ಎಯಲ್ಲಿ ಬೈಪಾಸ್‌ಗಳು ಮತ್ತು ಎನ್ಎಚ್-82 ರಿಂದ ಎನ್ಎಚ್-33ಗೆ ಚತುಷ್ಪಥ ಸಂಪರ್ಕ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿ ಅವರು 1740 ಕೋಟಿ ರೂ.ಗಿಂತ ಅಧಿಕ ಮೊತ್ತದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಬಿಹಾರದ ಔರಂಗಾಬಾದ್ ಜಿಲ್ಲೆಯ ಚಿರಾಲಪೋತುದಿಂದ ಬಾಘಾ ಬಿಶುನ್‌ಪುರದವರೆಗಿನ 220 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸೋನೆನಗರ ಬೈಪಾಸ್ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿ ಅವರು 1,520 ಕೋಟಿ ರೂ.ಗಿಂತ ಅಧಿಕ ಮೊತ್ತದ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇವುಗಳಲ್ಲಿ ಝಂಜರ್‌ಪುರ-ಲೌಕಾಹ ಬಜಾರ್ ರೈಲು ವಿಭಾಗದ ಗೇಜ್ ಪರಿವರ್ತನೆ, ದರ್ಭಾಂಗಾ ಜಂಕ್ಷನ್‌ನಲ್ಲಿನ ರೈಲ್ವೆ ಸಂಚಾರ ದಟ್ಟಣೆ ನಿವಾರಿಸುವ ದರ್ಭಾಂಗಾ ಬೈಪಾಸ್ ರೈಲು ಮಾರ್ಗ, ಉತ್ತಮ ಪ್ರಾದೇಶಿಕ ಸಂಪರ್ಕ ಸುಗಮಗೊಳಿಸುವ ರೈಲ್ವೆ ಮಾರ್ಗದ ಯೋಜನೆಗಳನ್ನು ದ್ವಿಗುಣಗೊಳಿಸುವುದು ಇತ್ಯಾದಿ ಇವುಗಳಲ್ಲಿ ಸೇರಿವೆ.
ಪ್ರಧಾನಮಂತ್ರಿ ಅವರು ಝಂಜರ್‌ಪುರ-ಲೌಕಾಹ ಬಜಾರ್ ವಿಭಾಗದಲ್ಲಿ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಈ ವಿಭಾಗದಲ್ಲಿ ಮೆಮು ರೈಲು ಸೇವೆಗಳ ಪರಿಚಯವು ಹತ್ತಿರದ ಪಟ್ಟಣಗಳು ಮತ್ತು ನಗರಗಳಲ್ಲಿ ಉದ್ಯೋಗಗಳು, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶ ಒದಗಿಸುತ್ತದೆ.
ಪ್ರಧಾನ ಮಂತ್ರಿ ಅವರು ಭಾರತದಾದ್ಯಂತ ವಿವಿಧ ರೈಲು ನಿಲ್ದಾಣಗಳಲ್ಲಿ 18 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದರು. ಇವುಗಳು ಪ್ರಯಾಣಿಕರಿಗೆ ರೈಲು ನಿಲ್ದಾಣಗಳಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳ ಲಭ್ಯತೆ ಖಚಿತಪಡಿಸುತ್ತವೆ. ಇದು ಜನರಿಕ್ ಔಷಧಿಗಳ ಅರಿವು ಮತ್ತು ಸ್ವೀಕಾರವನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
4,020 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದ ಬಹು ಉಪಕ್ರಮಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ(ಪಿಎನ್‌ಜಿ) ತರುವ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ಶುದ್ಧ ಇಂಧನ ಆಯ್ಕೆಗಳನ್ನು ಒದಗಿಸುವ ದೃಷ್ಟಿಗೆ ಅನುಗುಣವಾಗಿ, ಬಿಹಾರದ 5 ಪ್ರಮುಖ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ(ಸಿಜಿಡಿ) ಜಾಲದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ದರ್ಭಾಂಗಾದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಮಧುಬನಿ, ಸುಪೌಲ್, ಸೀತಾಮರ್ಹಿ ಮತ್ತು ಶೆಯೋಹರ್ ನಲ್ಲಿ ಈ ಯೋಜನೆಗಳು ಜಾರಿಯಾಗಲಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಬರೌನಿ ರಿಫೈನರಿಯ ಬಿಟುಮೆನ್ ಉತ್ಪಾದನಾ ಘಟಕಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಬಿಟುಮೆನ್ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Click here to read full text speech
दरभंगा AIIMS के निर्माण से बिहार के स्वास्थ्य क्षेत्र में बहुत बड़ा परिवर्तन आएगा। pic.twitter.com/OHVMAoo5YB
— PMO India (@PMOIndia) November 13, 2024
हमारी सरकार देश में स्वास्थ्य को लेकर होलिस्टिक अप्रोच के साथ काम कर रही है: PM @narendramodi pic.twitter.com/KEs5GlaJaY
— PMO India (@PMOIndia) November 13, 2024
हमने पाली भाषा को शास्त्रीय भाषा का दर्जा दिया है: PM @narendramodi pic.twitter.com/Atbr8fbMov
— PMO India (@PMOIndia) November 13, 2024