ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐತಿಹಾಸಿಕ ಕ್ರಮವಾಗಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. 24,470 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಈ 508 ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ವಿಕಸಿತ ಭಾರತದ ಗುರಿಯತ್ತ ವೇಗವಾಗಿ ಸಾಗುತ್ತಿರುವ ನವ ಭಾರತವು ಅಮೃತ ಕಾಲದ ಆರಂಭದಲ್ಲಿದೆ. ಅದರಲ್ಲಿ ಹೊಸ ಶಕ್ತಿ, ಹೊಸ ಸ್ಫೂರ್ತಿಗಳು ಮತ್ತು ಹೊಸ ಸಂಕಲ್ಪಗಳಿವೆ" ಎಂದು ಹೇಳಿದರು. ಇದು ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಸುಮಾರು 1300 ಪ್ರಮುಖ ರೈಲು ನಿಲ್ದಾಣಗಳು ಈಗ ಆಧುನಿಕತೆಯೊಂದಿಗೆ ‘ಅಮೃತ ಭಾರತ ನಿಲ್ದಾಣ’ಗಳಾಗಿ ಮರುಅಭಿವೃದ್ಧಿಯಾಗಲಿವೆ ಮತ್ತು ಹೊಸ ರೂಪ ಪಡೆಯಲಿವೆ ಎಂದು ಅವರು ಹೇಳಿದರು. 1300 ರೈಲು ನಿಲ್ದಾಣಗಳ ಪೈಕಿ ಇಂದು ಸುಮಾರು 25,000 ಕೋಟಿ ರೂಪಾಯಿ ವೆಚ್ಚದಲ್ಲಿ 508 ಅಮೃತ ಭಾರತ ನಿಲ್ದಾಣಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಪುನರಾಭಿವೃದ್ಧಿ ಯೋಜನೆಯು ರೈಲ್ವೆ ಮತ್ತು ಸಾಮಾನ್ಯ ನಾಗರಿಕರ ಜೊತೆಗೆ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬೃಹತ್ ಅಭಿಯಾನವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಇದರ ಪ್ರಯೋಜನವನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ ಪ್ರಧಾನಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ 55 ಅಮೃತ ನಿಲ್ದಾಣಗಳು, ಮಧ್ಯಪ್ರದೇಶದಲ್ಲಿ 1,000 ಕೋಟಿ ರೂಪಾಯಿ ವೆಚ್ಚದಲ್ಲಿ 34 ನಿಲ್ದಾಣಗಳು, 1,500 ಕೋಟಿ ರೂ. ವೆಚ್ಚದಲ್ಲಿ ಮಹಾರಾಷ್ಟ್ರದ 44 ನಿಲ್ದಾಣಗಳು ಮತ್ತು ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಪ್ರಮುಖ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸಲಾಗುವುದು ಎಂದರು. ಪ್ರಧಾನಿಯವರು ಈ ಐತಿಹಾಸಿಕ ಯೋಜನೆಗಾಗಿ ರೈಲ್ವೆ ಸಚಿವಾಲಯವನ್ನು ಶ್ಲಾಘಿಸಿದರು ಮತ್ತು ನಾಗರಿಕರನ್ನು ಅಭಿನಂದಿಸಿದರು.
ವಿಶ್ವದಲ್ಲಿ ಬೆಳೆಯುತ್ತಿರುವ ಭಾರತದ ಸ್ಥಾನಮಾನವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು ಮತ್ತು ಭಾರತದ ಬಗ್ಗೆ ಬೆಳೆಯುತ್ತಿರುವ ಜಾಗತಿಕ ಆಸಕ್ತಿಯನ್ನು ಎತ್ತಿ ತೋರಿಸಿದರು. ಇದಕ್ಕೆ ಎರಡು ಪ್ರಮುಖ ಅಂಶಗಳಿಗೆ ಅವರು ಮನ್ನಣೆ ಶ್ರೇಯ ನೀಡಿದರು. ಮೊದಲನೆಯದಾಗಿ, ಭಾರತದ ಜನರಿಂದ ಸ್ಥಿರವಾದ ಪೂರ್ಣ ಬಹುಮತದ ಸರ್ಕಾರದ ಆಯ್ಕೆ ಮತ್ತು ಎರಡನೆಯದಾಗಿ, ಸರ್ಕಾರವು ಮಹತ್ವಾಕಾಂಕ್ಷೆಯ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಮತ್ತು ಅವರ ಆಕಾಂಕ್ಷೆಗಳಿಗೆ ಅನುಗುಣವಾಗಿ ಜನರ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿರುವುದು. ಭಾರತೀಯ ರೈಲ್ವೇ ಕೂಡ ಇದನ್ನು ಸಂಕೇತಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಿಯವರು ತಮ್ಮ ಅಂಶಗಳನ್ನು ವಿವರಿಸಲು ರೈಲ್ವೆ ವಲಯದ ವಿಸ್ತರಣೆಯ ಸಂಗತಿಗಳನ್ನು ಪ್ರಸ್ತುತಪಡಿಸಿದರು. ಕಳೆದ 9 ವರ್ಷಗಳಲ್ಲಿ, ದಕ್ಷಿಣ ಆಫ್ರಿಕಾ, ಉಕ್ರೇನ್, ಪೋಲೆಂಡ್, ಬ್ರಿಟನ್ ಮತ್ತು ಸ್ವೀಡನ್‌ನ ಒಟ್ಟು ರೈಲ್ವೆ ಜಾಲಕ್ಕಿಂತ ದೇಶದಲ್ಲಿ ಹಾಕಲಾದ ರೈಲು ಹಳಿಗಳ ಉದ್ದವು ಹೆಚ್ಚು ಎಂದು ಅವರು ಹೇಳಿದರು. ಭಾರತೀಯ ರೈಲ್ವೇಯಲ್ಲಿನ ವಿಸ್ತರಣೆಯ ಪ್ರಮಾಣದ ಬಗ್ಗೆ ವಿವರಿಸಿದ ಪ್ರಧಾನಿಯವರು, ಕಳೆದ ವರ್ಷವೊಂದರಲ್ಲೇ ಭಾರತವು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚಿನ ರೈಲು ಹಳಿಗಳನ್ನು ಹಾಕಿದೆ ಎಂದು ಹೇಳಿದರು. ಇಂದು ರೈಲು ಪ್ರಯಾಣವನ್ನು ಸುಲಭವಾಗಿಸುವ ಜತೆಗೆ ಹಿತಕರವಾಗಿಸಲು ಸರಕಾರ ಶ್ರಮಿಸುತ್ತಿದೆ ಎಂದರು. "ರೈಲಿನಿಂದ ನಿಲ್ದಾಣದವರೆಗೆ ಸಾಧ್ಯವಾದಷ್ಟು ಉತ್ತಮ ಅನುಭವವನ್ನು ಒದಗಿಸುವ ನಮ್ಮ ಪ್ರಯತ್ನವಾಗಿದೆ" ಎಂದು ಅವರು ಹೇಳಿದರು. ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮ ಆಸನಗಳು, ಕಾಯುವ ಕೊಠಡಿಗಳ ನವೀಕರಣ ಮತ್ತು ಸಾವಿರಾರು ನಿಲ್ದಾಣಗಳಲ್ಲಿ ಉಚಿತ ವೈಫೈ ಕುರಿತು ಅವರು ಪ್ರಸ್ತಾಪಿಸಿದರು.
ಭಾರತೀಯ ರೈಲ್ವೇಯಲ್ಲಿ ನಡೆದಿರುವ ಅಗಾಧ ಬೆಳವಣಿಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮದ ಭವ್ಯವಾದ ಸಂಘಟನೆಯಿಂದಾಗಿ ರೈಲ್ವೆಯ ಸಾಧನೆಗಳನ್ನು ಇಂದು ಹೆಚ್ಚು ವಿವರವಾಗಿ ಹೇಳಲಾಗುತ್ತಿದೆ ಎಂದರು.
ರೈಲ್ವೆಯನ್ನು ದೇಶದ ಜೀವನಾಡಿ ಎಂದು ಬಣ್ಣಿಸಿದ ಪ್ರಧಾನಿ, ಇದರೊಂದಿಗೆ ನಗರಗಳ ಗುರುತನ್ನು ನಗರದ ಹೃದಯ ಭಾಗವಾಗಿರುವ ರೈಲ್ವೆ ನಿಲ್ದಾಣಗಳೊಂದಿಗೆ ಕೂಡ ಜೋಡಿಸಲಾಗಿದೆ. ಇದರಿಂದ ನಿಲ್ದಾಣಗಳಿಗೆ ಆಧುನಿಕ ರೂಪ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಹಲವಾರು ನಿಲ್ದಾಣಗಳ ಆಧುನೀಕರಣವು ದೇಶದಲ್ಲಿ ಅಭಿವೃದ್ಧಿಗೆ ಹೊಸ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ನಗರಗಳಿಗೆ ಭೇಟಿ ನೀಡುವವರಿಗೆ ಅದರ ಬಗ್ಗೆ ಉತ್ತಮ ಮೊದಲ ಆಕರ್ಷಣೆಯನ್ನು ಉಂಟುಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ನವೀಕರಿಸಿದ ನಿಲ್ದಾಣಗಳು ಪ್ರವಾಸೋದ್ಯಮವನ್ನು ಹೆಚ್ಚಿಸುವುದಲ್ಲದೆ, ಹತ್ತಿರದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. ‘ಒಂದು ನಿಲ್ದಾಣ ಒಂದು ಉತ್ಪನ್ನʼಯೋಜನೆಯು ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತದೆ ಮತ್ತು ಜಿಲ್ಲೆಯ ಬ್ರ್ಯಾಂಡಿಂಗ್‌ಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಸಂಕಲ್ಪವನ್ನು ದೇಶವೂ ತೆಗೆದುಕೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಈ ಅಮೃತ ರೈಲು ನಿಲ್ದಾಣಗಳು ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಸಂಕೇತವಾಗಿವೆ ಮತ್ತು ಪ್ರತಿಯೊಬ್ಬ ನಾಗರಿಕರಲ್ಲಿ ಹೆಮ್ಮೆಯನ್ನು ತುಂಬುತ್ತವೆ" ಎಂದು ಶ್ರೀ ಮೋದಿ ಹೇಳಿದರು. ಅಮೃತ ನಿಲ್ದಾಣಗಳು ಭಾರತದ ಸಾಂಸ್ಕೃತಿಕ ಮತ್ತು ಸ್ಥಳೀಯ ಪರಂಪರೆಯ ಕಿರುನೋಟವನ್ನು ಪ್ರಸ್ತುತಪಡಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕೆ ಉದಾಹರಣೆಗಳನ್ನು ನೀಡಿದ ಅವರು, ಜೈಪುರ ರೈಲು ನಿಲ್ದಾಣಗಳು ರಾಜಸ್ಥಾನದ ಹವಾ ಮಹಲ್ ಮತ್ತು ಅಮೇರ್ ಕೋಟೆಯ ನೋಟವನ್ನು ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರದ ಜಮ್ಮು ತಾವಿ ರೈಲು ನಿಲ್ದಾಣವು ಪ್ರಸಿದ್ಧ ರಘುನಾಥ ಮಂದಿರದಿಂದ ಪ್ರೇರಿತವಾಗಿದೆ ಮತ್ತು ನಾಗಾಲ್ಯಾಂಡ್‌ನ ದಿಮಾಪುರ್ ನಿಲ್ದಾಣವು ಈ ಪ್ರದೇಶದ 16 ವಿವಿಧ ಬುಡಕಟ್ಟುಗಳ ಸ್ಥಳೀಯ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಹೇಳಿದರು. ಪ್ರತಿಯೊಂದು ರೈಲು ನಿಲ್ದಾಣವು ತನ್ನ ಪ್ರಾಚೀನ ಪರಂಪರೆಯ ಜೊತೆಗೆ ದೇಶದ ಆಧುನಿಕ ಆಶಯಗಳ ಸಂಕೇತವಾಗಲಿದೆ ಎಂದು ಅವರು ಹೇಳಿದರು. ಐತಿಹಾಸಿಕ ಮತ್ತು ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ‘ಭಾರತ ಗೌರವ್ ಯಾತ್ರಾ ರೈಲುಗಳನ್ನು’ಬಲಪಡಿಸುವ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು.
ದೇಶದ ಆರ್ಥಿಕ ಬೆಳವಣಿಗೆಗೆ ವೇಗ ನೀಡುವಲ್ಲಿ ರೈಲ್ವೇಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ, ರೈಲ್ವೇಯಲ್ಲಿ ದಾಖಲೆಯ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು. ಈ ವರ್ಷ, ರೈಲ್ವೆಗೆ 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಬಜೆಟ್ ಒದಗಿಸಲಾಗಿದೆ. ಇದು 2014 ಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಿದೆ. ಇಂದು, ಸಮಗ್ರ ವಿಧಾನದೊಂದಿಗೆ ರೈಲ್ವೆಯ ಸಂಪೂರ್ಣ ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಕಳೆದ 9 ವರ್ಷಗಳಲ್ಲಿ ಲೊಕೊಮೊಟಿವ್ ತಯಾರಿಕೆಯು 9 ಪಟ್ಟು ಹೆಚ್ಚಾಗಿದೆ. ಇಂದು 13 ಪಟ್ಟು ಹೆಚ್ಚು ಎಚ್ ಎಲ್ ಬಿ ಬೋಗಿಗಳನ್ನು ತಯಾರಿಸಲಾಗುತ್ತಿದೆ ಎಂದರು.
ಈಶಾನ್ಯ ಭಾಗದ ರೈಲ್ವೇ ವಿಸ್ತರಣೆ ಕುರಿತು ಮಾತನಾಡಿದ ಪ್ರಧಾನಿ, ಜೋಡಿ ಮಾರ್ಗಗಳು, ಗೇಜ್ ಪರಿವರ್ತನೆ, ವಿದ್ಯುದ್ದೀಕರಣ ಮತ್ತು ಹೊಸ ಮಾರ್ಗಗಳ ಕೆಲಸ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು. ಶೀಘ್ರದಲ್ಲೇ, ಈಶಾನ್ಯದ ಎಲ್ಲಾ ರಾಜ್ಯಗಳ ರಾಜಧಾನಿಗಳನ್ನು ರೈಲ್ವೆ ಜಾಲದಿಂದ ಸಂಪರ್ಕಿಸಲಾಗುವುದು ಎಂದು ಶ್ರೀ ಮೋದಿ ಹೇಳಿದರು. 100 ವರ್ಷಗಳ ನಂತರ ನಾಗಾಲ್ಯಾಂಡ್ ತನ್ನ ಎರಡನೇ ನಿಲ್ದಾಣವನ್ನು ಪಡೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಈ ಪ್ರದೇಶದಲ್ಲಿ ಹೊಸ ರೈಲು ಮಾರ್ಗಗಳ ಕಾರ್ಯಯೋಜನೆಯು ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಕಳೆದ 9 ವರ್ಷಗಳಲ್ಲಿ 2200 ಕಿಮೀ ಪ್ರತ್ಯೇಕ ಸರಕು ಸಾಗಣೆ ಕಾರಿಡಾರ್‌ಗಳನ್ನು ನಿರ್ಮಿಸಲಾಗಿದ್ದು, ಗೂಡ್ಸ್ ರೈಲಿನ ಪ್ರಯಾಣದ ಸಮಯವನ್ನು ಕಡಿತಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಈಗ ಸರಕುಗಳು ದೆಹಲಿ ಎನ್ ಸಿ ಆರ್ ನಿಂದ ಪಶ್ಚಿಮ ಬಂದರುಗಳನ್ನು 24 ಗಂಟೆಗಳಲ್ಲಿ ತಲುಪುತ್ತವೆ, ಇದಕ್ಕೆ ಮೊದಲು 72 ಗಂಟೆಗಳು ಬೇಕಾಗಿತ್ತು. ಇತರ ಮಾರ್ಗಗಳಲ್ಲಿ 40 ಪ್ರತಿಶತದಷ್ಟು ಸಮಯದ ಕಡಿತವು ಕಂಡುಬಂದಿದೆ, ಇದು ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ರೈತರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ರೈಲ್ವೆ ಸೇತುವೆಗಳ ಕೊರತೆಯಿಂದ ಎದುರಿಸುತ್ತಿದ್ದ ತೊಂದರೆಗಳನ್ನು ಎತ್ತಿ ತೋರಿಸಿದ ಪ್ರಧಾನಿ, 2014 ಕ್ಕೂ ಮೊದಲು 6000 ಕ್ಕಿಂತ ಕಡಿಮೆ ರೈಲ್ವೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳು ಇದ್ದವು, ಆದರೆ ಇಂದು ಆ ಸಂಖ್ಯೆ 10,000 ಮೀರಿದೆ ಎಂದು ತಿಳಿಸಿದರು. ದೊಡ್ಡ ಮಾರ್ಗಗಳಲ್ಲಿ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳ ಸಂಖ್ಯೆ ಈಗ ಶೂನ್ಯಕ್ಕೆ ಇಳಿದಿದೆ ಎಂದರು. ಪ್ರಯಾಣಿಕರ ಅನುಕೂಲದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ವೃದ್ಧರು ಮತ್ತು ದಿವ್ಯಾಂಗರ ಅಗತ್ಯಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಒತ್ತಿ ಹೇಳಿದರು.
ನಮ್ಮ ಆದ್ಯತೆ ಭಾರತೀಯ ರೈಲ್ವೇಯನ್ನು ಆಧುನಿಕ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುವುದಾಗಿದೆ, 100 ಪ್ರತಿಶತ ರೈಲು ಮಾರ್ಗದ ವಿದ್ಯುದ್ದೀಕರಣವನ್ನು ಅತಿ ಶೀಘ್ರದಲ್ಲಿ ಸಾಧಿಸಲಾಗುವುದು ಎಂದು ತಿಳಿಸಿದ ಪ್ರಧಾನಿ, ಇದು ಭಾರತದ ಎಲ್ಲಾ ರೈಲುಗಳು ಕೇವಲ ವಿದ್ಯುಚ್ಛಕ್ತಿಯಿಂದ ಮಾತ್ರ ಚಲಿಸುವಂತೆ ಮಾಡುತ್ತದೆ ಎಂದರು. ಕಳೆದ 9 ವರ್ಷಗಳಲ್ಲಿ ಸೌರ ಫಲಕಗಳಿಂದ ವಿದ್ಯುತ್ ಉತ್ಪಾದಿಸುವ ಕೇಂದ್ರಗಳ ಸಂಖ್ಯೆ 1200 ಕ್ಕಿಂತ ಹೆಚ್ಚಿದೆ ಎಂದು ಪ್ರಧಾನಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ರೈಲು ನಿಲ್ದಾಣದಿಂದ ಹಸಿರು ಇಂಧನವನ್ನು ಉತ್ಪಾದಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ಹೇಳಿದರು. ಸುಮಾರು 70,000 ಬೋಗಿಗಳಲ್ಲಿ ಎಲ್ ಇ ಡಿ ದೀಪಗಳನ್ನು ಅಳವಡಿಸಲಾಗಿದೆ ಮತ್ತು 2014 ಕ್ಕೆ ಹೋಲಿಸಿದರೆ ರೈಲುಗಳಲ್ಲಿ ಜೈವಿಕ ಶೌಚಾಲಯಗಳ ಸಂಖ್ಯೆ 28 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಎಲ್ಲಾ ಅಮೃತ ನಿಲ್ದಾಣಗಳನ್ನು ಹಸಿರು ಕಟ್ಟಡಗಳ ಗುಣಮಟ್ಟದಲ್ಲಿ ನಿರ್ಮಿಸಲಾಗುವುದು. 2030 ರ ವೇಳೆಗೆ, ಭಾರತವು ನಿವ್ವಳ ಶೂನ್ಯ ಹೊರಸೂಸುವಿಕೆಯಲ್ಲಿ ಚಲಿಸುವ ರೈಲ್ವೆ ಜಾಲದ ದೇಶವಾಗಲಿದೆ ಎಂದು ಅವರು ಹೇಳಿದರು.
ರೈಲು ನಮ್ಮ ಪ್ರೀತಿಪಾತ್ರರೊಂದಿಗೆ ನಮ್ಮನ್ನು ಸಂಪರ್ಕಿಸಲು ದಶಕಗಳಿಂದ ಕೆಲಸ ಮಾಡಿದೆ, ಅದು ದೇಶವನ್ನು ಸಂಪರ್ಕಿಸುವ ಕೆಲಸ ಮಾಡಿದೆ. ಈಗ ಉತ್ತಮ ಗುರುತು ಮತ್ತು ಆಧುನಿಕ ಭವಿಷ್ಯದೊಂದಿಗೆ ರೈಲನ್ನು ಸಂಪರ್ಕಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ನೂತನ ಸಂಸತ್ ಭವನ, ಕರ್ತವ್ಯ ಪಥ, ಯುದ್ಧ ಸ್ಮಾರಕ ಮತ್ತು ಏಕತಾ ಪ್ರತಿಮೆಯಂತಹ ಯೋಜನೆಗಳಿಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ನಕಾರಾತ್ಮಕ ರಾಜಕೀಯದಿಂದ ದೂರವಾಗಿ, ನಾವು ರಾಷ್ಟ್ರದ ಅಭಿವೃದ್ಧಿಯ ಕಾರ್ಯವನ್ನು ಒಂದು ಧ್ಯೇಯವಾಗಿ ತೆಗೆದುಕೊಂಡಿದ್ದೇವೆ ಮತ್ತು ಮತ ಬ್ಯಾಂಕ್ ಮತ್ತು ಪಕ್ಷ ರಾಜಕೀಯವನ್ನು ಲೆಕ್ಕಿಸದೆ ಅದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಅವರು ಹೇಳಿದರು.
ರೈಲ್ವೇಯೊಂದೇ 1.5 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಒದಗಿಸಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಿ, ಮೂಲಸೌಕರ್ಯಗಳ ಮೇಲೆ ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಉದ್ಯೋಗವನ್ನೂ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು. ಪ್ರಸ್ತುತ, ಉದ್ಯೋಗ ಮೇಳದ ಮೂಲಕ 10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಅಭಿಯಾನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಪ್ರಧಾನಿ ಹೇಳಿದರು. ಇದು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ, ಅಲ್ಲಿ ಅಭಿವೃದ್ಧಿಯು ಯುವಕರಿಗೆ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ ಮತ್ತು ಯುವಕರು ದೇಶದ ಅಭಿವೃದ್ಧಿಗೆ ಹೊಸ ರೆಕ್ಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಶೀರ್ವದಿಸಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಲವಾರು ಪದ್ಮ ಪ್ರಶಸ್ತಿ ಪುರಸ್ಕೃತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಕ್ಕೆ ಪ್ರಧಾನಮಂತ್ರಿಯವರು ಧನ್ಯವಾದ ಹೇಳಿದರು. ಪ್ರತಿಯೊಬ್ಬ ಭಾರತೀಯನಿಗೂ ಆಗಸ್ಟ್ ತಿಂಗಳ ಹೇಗೆ ಮಹತ್ವದ್ದು ಎಂದು ವಿವರಿಸಿದ ಪ್ರಧಾನಿ, ಇದು ಕ್ರಾಂತಿ, ಕೃತಜ್ಞತೆ ಮತ್ತು ಕರ್ತವ್ಯದ ತಿಂಗಳು ಮತ್ತು ಭಾರತದ ಇತಿಹಾಸಕ್ಕೆ ಹೊಸ ದಿಕ್ಕನ್ನು ನೀಡಿದ ಅನೇಕ ಐತಿಹಾಸಿಕ ಸಂದರ್ಭಗಳಿಂದ ತುಂಬಿರುವ ತಿಂಗಳು ಎಂದು ಹೇಳಿದರು. ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ಆಚರಿಸಲಾಗುತ್ತದೆ ಮತ್ತು ಸ್ವದೇಶಿ ಆಂದೋಲನಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಪ್ರಸ್ತಾಪಿಸಿದರು. ಈ ಆಗಸ್ಟ್ 7 ನೇ ದಿನಾಂಕವು ಪ್ರತಿಯೊಬ್ಬ ಭಾರತೀಯನು ಸ್ಥಳೀಯತೆಗೆ ಧ್ವನಿಯಾಗುವ ಸಂಕಲ್ಪವನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಗಣೇಶ ಚತುರ್ಥಿಯ ಪವಿತ್ರ ಹಬ್ಬವನ್ನು ಪ್ರಸ್ತಾಪಿಸಿದ ಅವರು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪರಿಸರ ಸ್ನೇಹಿ ವಸ್ತುವಿನಿಂದ ತಯಾರಿಸಿದ ವಿಗ್ರಹಗಳನ್ನು ಪೂಜಿಸುವಂತೆ ಪ್ರಧಾನಿ ಸಲಹೆ ನೀಡಿದರು. ಸ್ಥಳೀಯ ಕುಶಲಕರ್ಮಿಗಳು, ಕಸುಬುದಾರರು ಮತ್ತು ಸಣ್ಣ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವಂತೆ ಅವರು ಸಲಹೆ ನೀಡಿದರು.
ಆಗಸ್ಟ್ 9 ರ ಕುರಿತು ಮಾತನಾಡಿದ ಪ್ರಧಾನಿ, ಇದು ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದ ಐತಿಹಾಸಿಕ ದಿನ ಮತ್ತು ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸಿತು ಎಂದು ಹೇಳಿದರು. ಇದರಿಂದ ಪ್ರೇರಿತರಾಗಿ ಇಂದು ಇಡೀ ದೇಶ ಪ್ರತಿ ಕೆಟ್ಟ, ಭ್ರಷ್ಟಾಚಾರಿ, ವಂಶಪಾರಂಪರ್ಯ ಮತ್ತು ತುಷ್ಟೀಕರಣ ರಾಜಕೀಯಕ್ಕೆ ಕ್ವಿಟ್ ಇಂಡಿಯಾ ಎಂದು ಘರ್ಜಿಸುತ್ತಿದೆ ಎಂದು ಅವರು ಹೇಳಿದರು.
ಮುಂಬರುವ ವಿಭಜನೆಯ ಭೀಭತ್ಸ ಸಂಸ್ಮರಣಾ ದಿನವನ್ನು ಪ್ರಸ್ತಾಪಿಸಿದ ಪ್ರಧಾನಿ, ವಿಭಜನೆಯಿಂದಾಗಿ ಭಾರಿ ತೆತ್ತ ಅಸಂಖ್ಯಾತ ಜನರನ್ನು ನಾವು ಸ್ಮರಿಸುತ್ತೇವೆ ಮತ್ತು ಆಘಾತದ ನಂತರ ತಮ್ಮನ್ನು ಒಟ್ಟುಗೂಡಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಜನರ ಕೊಡುಗೆಯನ್ನು ಗುರುತಿಸಿದ್ದೇವೆ ಎಂದು ಹೇಳಿದರು. ಈ ದಿನ ನಮ್ಮ ಒಗ್ಗಟ್ಟನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ನೀಡುತ್ತದೆ ಎಂದು ಹೇಳಿದರು. ನಮ್ಮ ಸ್ವಾತಂತ್ರ್ಯ ದಿನವು ನಮ್ಮ ತ್ರಿವರ್ಣಧ್ವಜ ಮತ್ತು ನಮ್ಮ ರಾಷ್ಟ್ರದ ಪ್ರಗತಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದು ಶ್ರೀ ಮೋದಿ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಧ್ವಜ ಮೆರವಣಿಗೆಗಳಲ್ಲಿ ಜನರ ಉತ್ಸಾಹವನ್ನು ಪ್ರಸ್ತಾಪಿಸಿದ ಅವರು ಅಭಿಯಾನದಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಮನವಿ ಮಾಡಿದರು.
ನಾಗರಿಕರು ಪಾವತಿಸುವ ತೆರಿಗೆಯನ್ನು ಭ್ರಷ್ಟಾಚಾರದಲ್ಲಿ ಪೋಲು ಮಾಡಲಾಗುತ್ತದೆ ಎಂಬ ಗ್ರಹಿಕೆಯನ್ನು ಸರ್ಕಾರ ಬದಲಾಯಿಸಿದೆ ಮತ್ತು ಇಂದು ಜನರು ತಮ್ಮ ಹಣವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಭಾವಿಸುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹೆಚ್ಚುತ್ತಿರುವ ಸೌಲಭ್ಯಗಳು ಮತ್ತು ಸುಲಭ ಜೀವನದಿಂದ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ದೇಶದಲ್ಲಿ 2 ಲಕ್ಷ ರೂಪಾಯಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು, ಈಗ 7 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಇಂದು ತೆರಿಗೆ ಇಲ್ಲ ಎಂದು ಪ್ರಧಾನಿ ಹೇಳಿದರು. ಇದರ ಹೊರತಾಗಿಯೂ, ದೇಶದಲ್ಲಿ ಆದಾಯ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚುತ್ತಿದೆ ಮತ್ತು ದೇಶದಲ್ಲಿ ಮಧ್ಯಮ ವರ್ಗದ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ರವಾನಿಸಿದರು. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಶೇ.16ರಷ್ಟು ಹೆಚ್ಚಿದ್ದು, ಇದು ಸರ್ಕಾರದ ಮೇಲಿನ ನಂಬಿಕೆ ಹಾಗೂ ದೇಶದಲ್ಲಿ ನಡೆಯುತ್ತಿರುವ ಆವಿಷ್ಕಾರವನ್ನು ತೋರಿಸುತ್ತದೆ ಎಂದು ಮಾಹಿತಿ ನೀಡಿದರು. ಇಂದು ದೇಶದಲ್ಲಿ ರೈಲ್ವೆ ಹೇಗೆ ಪುನಶ್ಚೇತನಗೊಳ್ಳುತ್ತಿದೆ, ಮೆಟ್ರೋ ಹೇಗೆ ವಿಸ್ತರಣೆಯಾಗುತ್ತಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ ಎಂದರು. ಅವರು ಹೊಸ ಎಕ್ಸ್ ಪ್ರೆಸ್ ವೇ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಪ್ರಸ್ತಾಪಿಸಿದರು. ಅಂತಹ ಬದಲಾವಣೆಗಳು ತೆರಿಗೆದಾರರ ಹಣದಿಂದ ನವ ಭಾರತವನ್ನು ಅಭಿವೃದ್ಧಿಪಡಿಸುವ ಭಾವನೆಯನ್ನು ಉತ್ತೇಜಿಸುತ್ತವೆ ಎಂದು ಹೇಳಿದರು. “ಈ 508 ರೈಲು ನಿಲ್ದಾಣಗಳ ಆಧುನೀಕರಣವು ಈ ದಿಕ್ಕಿನಲ್ಲಿ ತೆಗೆದುಕೊಂಡ ಒಂದು ಹೆಜ್ಜೆಯಾಗಿದೆ. ಅಮೃತ ಭಾರತ ನಿಲ್ದಾಣಗಳು ಭಾರತೀಯ ರೈಲ್ವೆಯ ಈ ಪರಿವರ್ತನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದ ಪ್ರಧಾನಮಂತ್ರಿಯವರು ತಮ್ಮು ಭಾಷಣವನ್ನು ಮುಕ್ತಾಯಗೊಳಿಸಿದರು.
ಹಿನ್ನೆಲೆ
ಅತ್ಯಾಧುನಿಕ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಬಗ್ಗೆ ಪ್ರಧಾನಿಯವರು ಸದಾ ಒತ್ತು ನೀಡುತ್ತಿದ್ದಾರೆ. ದೇಶಾದ್ಯಂತ ಜನರಿಗೆ ರೈಲ್ವೇ ಆದ್ಯತೆಯ ಸಾರಿಗೆ ವಿಧಾನವಾಗಿದೆ ಎಂದು ಗಮನಿಸಿದ ಅವರು ರೈಲು ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸುವ ಮಹತ್ವವನ್ನು ಒತ್ತಿ ಹೇಳಿದರು. ಈ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಅಮೃತ ಭಾರತ ನಿಲ್ದಾಣ ಯೋಜನೆಯನ್ನು ರಾಷ್ಟ್ರವ್ಯಾಪಿ 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಾರಂಭಿಸಲಾಯಿತು.
ಈ ಯೋಜನೆಯ ಭಾಗವಾಗಿ ಪ್ರಧಾನಮಂತ್ರಿಯವರು 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಅಡಿಗಲ್ಲು ಹಾಕಿದ್ದಾರೆ. ಈ ನಿಲ್ದಾಣಗಳನ್ನು 24,470 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುವುದು. ನಗರದ ಎರಡೂ ಬದಿಗಳನ್ನು ಸರಿಯಾಗಿ ಸಂಯೋಜಿಸಿ, ಈ ನಿಲ್ದಾಣಗಳನ್ನು ‘ಸಿಟಿ ಸೆಂಟರ್’ಗಳಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಸಂಯೋಜಿತ ಕ್ರಮವು ರೈಲ್ವೇ ನಿಲ್ದಾಣದ ಸುತ್ತಲೂ ಕೇಂದ್ರೀಕೃತವಾಗಿರುವ ಪ್ರದೇಶದ ಒಟ್ಟಾರೆ ನಗರಾಭಿವೃದ್ಧಿಯ ಸಮಗ್ರ ದೃಷ್ಟಿಕೋನವಾಗಿದೆ.
ಈ 508 ನಿಲ್ದಾಣಗಳು ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ.
ಪುನರಾಭಿವೃದ್ಧಿಯು ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ ಜೊತೆಗೆ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಂಚಾರ ಪರಿಚಲನೆ, ಇಂಟರ್-ಮೋಡಲ್ ಇಂಟಿಗ್ರೇಷನ್ ಮತ್ತು ಪ್ರಯಾಣಿಕರ ಮಾರ್ಗದರ್ಶನಕ್ಕಾಗಿ ಸಂಕೇತಗಳನ್ನು ಖಾತ್ರಿಪಡಿಸುತ್ತದೆ. ನಿಲ್ದಾಣದ ಕಟ್ಟಡಗಳ ವಿನ್ಯಾಸವು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿರುತ್ತದೆ.
विकसित होने के लक्ष्य की तरफ कदम बढ़ा रहा भारत, अपने अमृतकाल के प्रारंभ में है।
— PMO India (@PMOIndia) August 6, 2023
नई ऊर्जा है, नई प्रेरणा है, नए संकल्प हैं।
इसी आलोक में आज भारतीय रेल के इतिहास में भी एक नए अध्याय की शुरुआत हो रही है: PM @narendramodi pic.twitter.com/anP3WbcCaj
आज पूरी दुनिया की दृष्टि भारत पर है।
— PMO India (@PMOIndia) August 6, 2023
वैश्विक स्तर पर भारत की साख बढ़ी है, भारत को लेकर दुनिया का रवैया बदला है: PM @narendramodi pic.twitter.com/wQkb5HSuBY
अब ट्रेन से लेकर स्टेशन तक एक बेहतर experience देने का प्रयास है। pic.twitter.com/SXyzXqMAp9
— PMO India (@PMOIndia) August 6, 2023
हर अमृत स्टेशन, शहर की आधुनिक आकांक्षाओं और प्राचीन विरासत का प्रतीक बनेगा। pic.twitter.com/UVKutH329q
— PMO India (@PMOIndia) August 6, 2023
नॉर्थ ईस्ट में रेलवे के विस्तार को भी हमारी सरकार ने प्राथमिकता दी है। pic.twitter.com/CXIyyzXeRh
— PMO India (@PMOIndia) August 6, 2023
हमारा जोर भारतीय रेलवे को आधुनिक बनाने के साथ ही पर्यावरण friendly बनाने पर है। pic.twitter.com/4t987rcVEv
— PMO India (@PMOIndia) August 6, 2023
हर भारतीय के लिए अगस्त बहुत विशेष महीना होता है।
— PMO India (@PMOIndia) August 6, 2023
ये महीना क्रांति का है, कृतज्ञता का है, कर्तव्य भावना का है: PM @narendramodi pic.twitter.com/LrOzIjTNbF