ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಮಂಡ್ಯದಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಶಂಕುಸ್ಥಾಪನೆ ಈ ಯೋಜನೆಗಳಲ್ಲಿ ಸೇರಿವೆ.
ಭುವನೇಶ್ವರಿ ದೇವಿ, ಆದಿಚುಂಚನಗಿರಿ ಮತ್ತು ಮೇಲುಕೋಟೆಯ ಗುರುಗಳಿಗೆ ನಮನ ಸಲ್ಲಿಸುವ ಮೂಲಕ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ತಮ್ಮ ಮಾತು ಆರಂಭಿಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಕರ್ನಾಟಕದ ಜನರ ನಡುವೆ ಇರಲು ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು ತಮ್ಮ ಆಶೀರ್ವಾದವನ್ನು ಧಾರೆಯೆರೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿಯವರು ವಿಶೇಷವಾಗಿ ಮಂಡ್ಯದ ಜನತೆಯ ಸ್ವಾಗತವನ್ನು ಶ್ಲಾಘಿಸಿದರು ಮತ್ತು ಅವರು ತಮ್ಮ ಆಶೀರ್ವಾದವನ್ನು ಸಿಹಿಯಲ್ಲಿ ತೋಯಿಸಿದ್ದಾರೆ ಎಂದು ಹೇಳಿದರು. ರಾಜ್ಯದ ಜನತೆಯ ಪ್ರೀತಿ ಮತ್ತು ವಾತ್ಸಲ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಡಬಲ್ ಎಂಜಿನ್ ಸರ್ಕಾರವು ಪ್ರತಿ ನಾಗರಿಕರ ಬೇಡಿಕೆಗಳನ್ನು ತ್ವರಿತಗತಿಯ ಅಭಿವೃದ್ಧಿಯೊಂದಿಗೆ ಈಡೇರಿಸಲು ಶ್ರಮಿಸುತ್ತಿದೆ ಎಂದು ಹೇಳಿದರು. ಸಾವಿರಾರು ಕೋಟಿ ರೂ.ಗಳ ಇಂದಿನ ಮೂಲಸೌಕರ್ಯ ಯೋಜನೆಗಳು ಕರ್ನಾಟಕದ ಜನರಿಗಾಗಿ ಡಬಲ್ ಎಂಜಿನ್ ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕುರಿತು ರಾಷ್ಟ್ರೀಯವಾಗಿ ಸೃಷ್ಟಿಯಾಗಿರುವ ಸಂಚಲನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ದೇಶದ ಯುವಜನರು ಇಂತಹ ಆಧುನಿಕ ಮತ್ತು ಉತ್ತಮ ಗುಣಮಟ್ಟದ ಎಕ್ಸ್‌ಪ್ರೆಸ್‌ವೇಗಳ ಬಗ್ಗೆ ಹೆಮ್ಮೆಪಡುತ್ತಿದ್ದಾರೆ ಎಂದು ಹೇಳಿದರು. ಈ ಎಕ್ಸ್‌ಪ್ರೆಸ್‌ವೇ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ಅವರು ತಿಳಿಸಿದರು. ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಈ ಯೋಜನೆಗಳು 'ಸಬ್ಕಾ ವಿಕಾಸ'ದ ಮನೋಭಾವವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತವೆ ಎಂದು ಹೇಳಿದರು. ಈ ಯೋಜನೆಗಳನ್ನು ಪಡೆದಿದ್ದಕ್ಕಾಗಿ ಕರ್ನಾಟಕದ ಜನತೆಯನ್ನು ಪ್ರಧಾನಿ ಅಭಿನಂದಿಸಿದರು.
ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಬ್ಬರು ಮಹಾನ್ ವ್ಯಕ್ತಿಗಳನ್ನು ಪ್ರಧಾನಿ ಸ್ಮರಿಸಿದರು. ಕರ್ನಾಟಕದ ಮಹಾನ್ ಪುತ್ರರಾದ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶಕ್ಕೆ ಹೊಸ ದೃಷ್ಟಿಕೋನ ಮತ್ತು ಶಕ್ತಿಯನ್ನು ನೀಡಿದರು. ಈ ಮಹನೀಯರು ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿದರು ಮತ್ತು ಮೂಲಸೌಕರ್ಯದ ಮಹತ್ವವನ್ನು ಅರ್ಥಮಾಡಿಕೊಂಡರು. ಇಂದಿನ ಪೀಳಿಗೆಯು ಅವರ ಪ್ರಯತ್ನಗಳ ಲಾಭವನ್ನು ಪಡೆದುಕೊಳ್ಳುವ ಅದೃಷ್ಟವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ ಸುಧಾರಿತ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯು ಅವರ ಹೆಜ್ಜೆಗಳನ್ನು ಅನುಸರಿಸಿಯೇ ನಡೆಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತಮಾಲಾ ಮತ್ತು ಸಾಗರಮಾಲಾ ಯೋಜನೆಯು ಇಂದು ಭಾರತ ಮತ್ತು ಕರ್ನಾಟಕದ ಚಿತ್ರಣವನ್ನು ಬದಲಾಯಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಡೀ ಜಗತ್ತು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡುತ್ತಿರುವಾಗಲೂ ದೇಶದಲ್ಲಿ ಮೂಲಸೌಕರ್ಯ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಬಾರಿಯ ಬಜೆಟ್‌ನಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು. ಮೂಲಸೌಕರ್ಯವು ಉದ್ಯೋಗಗಳು, ಹೂಡಿಕೆ ಮತ್ತು ಗಳಿಕೆಯ ಅವಕಾಶಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ಹೇಳಿದರು. ಕರ್ನಾಟಕದಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ಸಂಬಂಧಿತ ಯೋಜನೆಗಳಲ್ಲಿ ಸರ್ಕಾರ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಪ್ರಮುಖ ನಗರಗಳಾಗಿ ಬೆಂಗಳೂರು ಮತ್ತು ಮೈಸೂರು ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ತಂತ್ರಜ್ಞಾನ ಮತ್ತು ಪರಂಪರೆಯ ಈ ಎರಡು ಕೇಂದ್ರಗಳ ನಡುವಿನ ಸಂಪರ್ಕವು ಹಲವು ಕೋನಗಳಿಂದ ಮುಖ್ಯವಾಗಿದೆ ಎಂದು ಹೇಳಿದರು. ಎರಡು ನಗರಗಳ ನಡುವೆ ಪ್ರಯಾಣಿಸುವಾಗ ಹೆಚ್ಚಿನ ದಟ್ಟಣೆಯ ಬಗ್ಗೆ ಜನರು ಆಗಾಗ್ಗೆ ದೂರುತ್ತಿದ್ದರು ಮತ್ತು ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಒಂದೂವರೆ ಗಂಟೆಗಳಿಗೆ ಕಡಿಮೆ ಮಾಡುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರ ಮತ್ತು ಮಂಡ್ಯದ ಪಾರಂಪರಿಕ ಪಟ್ಟಣಗಳ ಮೂಲಕ ಹಾದು ಹೋಗಿರುವುದರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವುದಲ್ಲದೆ, ಕಾವೇರಿ ಮಾತೆಯ ಉಗಮಸ್ಥಳಕ್ಕೆ ಸುಗಮ ಸಂಚಾರವನ್ನೂ ಸಾಧ್ಯವಾಗಿಸುತ್ತದೆ ಎಂದು ಹೇಳಿದರು. ಮಳೆಗಾಲದಲ್ಲಿ ಯಾವಾಗಲೂ ಭೂಕುಸಿತದಿಂದ ಹಾನಿಗೊಳಗಾಗುತ್ತಿದ್ದ ಬೆಂಗಳೂರು-ಮಂಗಳೂರು ಹೆದ್ದಾರಿಯು ಈ ಪ್ರದೇಶದ ಬಂದರು ಸಂಪರ್ಕದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ಬೆಂಗಳೂರು-ಮಂಗಳೂರು ಹೆದ್ದಾರಿಯ ವಿಸ್ತರಣೆಯಿಂದ ಪರಿಹರಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಸಂಪರ್ಕ ವ್ಯವಸ್ಥೆಯ ಹೆಚ್ಚಳದೊಂದಿಗೆ ಈ ಪ್ರದೇಶದಲ್ಲಿ ಕೈಗಾರಿಕೆಗಳು ಸಹ ಅಭಿವೃದ್ಧಿ ಹೊಂದುತ್ತವೆ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳ ನಿರ್ದಯ ಧೋರಣೆಯನ್ನು ಟೀಕಿಸಿದ ಪ್ರಧಾನಿ, ಬಡವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಬಹುತೇಕ ಹಣ ಲೂಟಿಯಾಗಿದೆ ಎಂದು ಹೇಳಿದರು. 2014ರಲ್ಲಿ ಬಡವರ ನೋವನ್ನು ಅರ್ಥ ಮಾಡಿಕೊಂಡಿರುವ ಸಂವೇದನಾಶೀಲ ಸರಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರವು ಬಡವರ ಸೇವೆಗಾಗಿ ನಿರಂತರವಾಗಿ ಕೆಲಸ ಮಾಡಿದೆ ಮತ್ತು ವಸತಿ, ಕೊಳವೆ ನೀರು, ಉಜ್ವಲ ಅನಿಲ ಸಂಪರ್ಕ, ವಿದ್ಯುತ್, ರಸ್ತೆಗಳು, ಆಸ್ಪತ್ರೆಗಳು ಮತ್ತು ಬಡವರಿಗೆ ವೈದ್ಯಕೀಯ ಚಿಕಿತ್ಸೆಯ ಚಿಂತೆಗಳನ್ನು ಕಡಿಮೆ ಮಾಡಲು ಆದ್ಯತೆ ನೀಡಿದೆ. ಕಳೆದ 9 ವರ್ಷಗಳಲ್ಲಿ ಸರ್ಕಾರವು ಬಡವರ ಮನೆ ಬಾಗಿಲಿಗೇ ಹೋಗಿ ಅವರ ಬದುಕನ್ನು ಸುಗಮಗೊಳಿಸಿದೆ ಮತ್ತು ಮಿಷನ್ ಮೋಡ್‌ನಲ್ಲಿ ಸಂಪೂರ್ಣ ಗುರಿಯನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು.
ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಸರ್ಕಾರದ ವಿಧಾನದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 9 ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ಲಕ್ಷಾಂತರ ಮನೆಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗಿದೆ. 40 ಲಕ್ಷ ಹೊಸ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಕೊಳವೆ ಮೂಲಕ ನೀರು ಸಿಕ್ಕಿದೆ ಎಂದರು. ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ದಶಕಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದರಿಂದ ಈ ಭಾಗದ ಜನರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದರು. ಕರ್ನಾಟಕದ ರೈತರು ಎದುರಿಸುತ್ತಿರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ನೀಡುವುದಲ್ಲದೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಕರ್ನಾಟಕದ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ನೇರವಾಗಿ 12,000 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಇದರಲ್ಲಿ ಮಂಡ್ಯ ಜಿಲ್ಲೆಗೆ ಸೇರಿದ 2.75 ಲಕ್ಷಕ್ಕೂ ಹೆಚ್ಚು ರೈತರು 600 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 6000 ರೂಪಾಯಿ ಕಂತಿಗೆ 4000 ರೂಪಾಯಿಗಳನ್ನು ಸೇರಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಪ್ರಧಾನಿಯವರು ಶ್ಲಾಘಿಸಿದರು. ಡಬಲ್ ಎಂಜಿನ್ ಸರ್ಕಾರದಲ್ಲಿ, ರೈತರು ಡಬಲ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಬೆಳೆಗಳ ಅನಿಶ್ಚಿತತೆಯ ಕಾರಣದಿಂದಾಗಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಬೆಳೆಗಾರರ ದೀರ್ಘ ಬಾಕಿಗೆ ಕಾರಣವಾಯಿತು ಎಂದು ಪ್ರಧಾನಿ ಹೇಳಿದರು. ಎಥೆನಾಲ್ ಅಳವಡಿಕೆಯಿಂದ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಪ್ರಧಾನಿ ಹೇಳಿದರು. ಉತ್ತಮ ಬೆಳೆಗಳ ಸಂದರ್ಭದಲ್ಲಿ, ಹೆಚ್ಚುವರಿ ಕಬ್ಬು ಎಥೆನಾಲ್ ಅನ್ನು ಉತ್ಪಾದಿಸುತ್ತದೆ, ಇದು ರೈತರಿಗೆ ಸ್ಥಿರ ಆದಾಯವನ್ನು ಖಚಿತಪಡಿಸುತ್ತದೆ. ಕಳೆದ ವರ್ಷ ದೇಶದ ಸಕ್ಕರೆ ಕಾರ್ಖಾನೆಗಳು 20 ಸಾವಿರ ಕೋಟಿ ರೂ.ಮೌಲ್ಯದ ಎಥೆನಾಲ್ ಅನ್ನು ತೈಲ ಕಂಪನಿಗಳಿಗೆ ಮಾರಾಟ ಮಾಡಿದ್ದು, ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. 2013-14 ರಿಂದ 70 ಸಾವಿರ ಕೋಟಿ ರೂ.ಮೌಲ್ಯದ ಎಥೆನಾಲ್ ಅನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಲಾಗಿದೆ ಮತ್ತು ಆ ಹಣ ರೈತರಿಗೆ ತಲುಪಿದೆ ಎಂದು ಅವರು ಹೇಳಿದರು. ಈ ಬಾರಿಯ ಬಜೆಟ್‌ನಲ್ಲೂ ಕಬ್ಬು ಬೆಳೆಗಾರರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಕ್ಕರೆ ಸಹಕಾರಿ ಸಂಘಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿಗಳ ನೆರವು ಮತ್ತು ತೆರಿಗೆಯಲ್ಲಿ ರಿಯಾಯಿತಿ ಈ ರೈತರಿಗೆ ಅನುಕೂಲ ಕಲ್ಪಿಸಲಿದೆ ಎಂದು ಅವರು ಹೇಳಿದರು.
ಭಾರತವು ಅವಕಾಶಗಳ ನಾಡು ಮತ್ತು ಪ್ರಪಂಚದಾದ್ಯಂತದ ಜನರು ಭಾರತದ ಬಗ್ಗೆ ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. 2022 ರಲ್ಲಿ ಭಾರತವು ದಾಖಲೆಯ ವಿದೇಶಿ ಹೂಡಿಕೆಗಳನ್ನು ಸ್ವೀಕರಿಸಿದೆ ಮತ್ತು ಕರ್ನಾಟಕವು 4 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆಯನ್ನು ಪಡೆದಿರುವ ಅತಿದೊಡ್ಡ ಫಲಾನುಭವಿಯಾಗಿದೆ ಎಂದು ಅವರು ತಿಳಿಸಿದರು. ಈ ದಾಖಲೆಯ ಹೂಡಿಕೆಯು ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಾಹಿತಿ ತಂತ್ರಜ್ಞಾನದ ಹೊರತಾಗಿ, ಜೈವಿಕ ತಂತ್ರಜ್ಞಾನ, ರಕ್ಷಣಾ ಉತ್ಪಾದನೆ ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಂತಹ ಕೈಗಾರಿಕೆಗಳು ವೇಗವಾಗಿ ವಿಸ್ತರಿಸುತ್ತಿವೆ. ಏರೋಸ್ಪೇಸ್ ಮತ್ತು ಬಾಹ್ಯಾಕಾಶದಂತಹ ಉದ್ಯಮಗಳು ಅಭೂತಪೂರ್ವ ಹೂಡಿಕೆಗಳಿಗೆ ಸಾಕ್ಷಿಯಾಗುತ್ತಿವೆ ಎಂದು ಪ್ರಧಾನಿ ಹೇಳಿದರು.
ಡಬಲ್ ಇಂಜಿನ್ ಸರ್ಕಾರದ ಪ್ರಯತ್ನದಿಂದ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿ ಕಾಮಗಾರಿಗಳು ಮತ್ತು ಬಡವರ ಜೀವನವನ್ನು ಸುಗಮಗೊಳಿಸುವ ಕೆಲಸ ಮಾಡುತ್ತಿರುವ ಮೋದಿಯವರ ಸಮಾಧಿಯನ್ನು ತೋಡುವ ಕನಸು ಕಾಣುತ್ತಿರುವ ಕೆಲವು ರಾಜಕೀಯ ಪಕ್ಷಗಳ ಕ್ರಮಗಳ ಬಗ್ಗೆ ಪ್ರಧಾನಿ ಗಮನಸೆಳೆದರು. ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಮತ್ತು ಭಾರತದ ಜನರ ಆಶೀರ್ವಾದವು ತಮಗೆ ರಕ್ಷಣೆಯ ಗುರಾಣಿಯಾಗಿದೆ ಎಂದು ಅವರು ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ಇಂದಿನ ಯೋಜನೆಗಳಿಗಾಗಿ ಕರ್ನಾಟಕದ ಜನತೆಯನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಕರ್ನಾಟಕದ ವೇಗದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರವು ಅತ್ಯಗತ್ಯವಾಗಿದೆ ಎಂದು ತಮ್ಮ ಭಾಷಣ ಮುಕ್ತಾಯ ಮಾಡಿದರು.
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ, ಮಂಡ್ಯ ಸಂಸದೆ ಶ್ರೀಮತಿ ಸುಮಲತಾ ಅಂಬರೀಶ್ ಮತ್ತು ಕರ್ನಾಟಕ ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಮೂಲಸೌಕರ್ಯ ಯೋಜನೆಗಳ ತ್ವರಿತ ಗತಿಯ ಅಭಿವೃದ್ಧಿಯು ದೇಶದಾದ್ಯಂತ ವಿಶ್ವ ದರ್ಜೆಯ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವ ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಈ ಪ್ರಯತ್ನದಲ್ಲಿ ಪ್ರಧಾನಮಂತ್ರಿಯವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಯೋಜನೆಯು ಎನ್ ಹೆಚ್-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು ಪಥದ ರಸ್ತೆಯನ್ನು ಒಳಗೊಂಡಿದೆ. 118 ಕಿಮೀ ಉದ್ದದ ಈ ಯೋಜನೆಯನ್ನು ಒಟ್ಟು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಇದು ಈ ಪ್ರದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಧಾನಮಂತ್ರಿಯವರು ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಶಂಕುಸ್ಥಾಪನೆ ಮಾಡಿದರು. ಸುಮಾರು 4,130 ಕೋಟಿ ರೂಪಾಯಿ ವೆಚ್ಚದಲ್ಲಿ 92 ಕಿಮೀ ಉದ್ದದ ಈ ಯೋಜನೆಯು ಬೆಂಗಳೂರಿನೊಂದಿಗೆ ಕುಶಾಲನಗರದ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪ್ರಯಾಣದ ಸಮಯವು ಸುಮಾರು 5 ಗಂಟೆಗಳಿಂದ ಕೇವಲ 2.5 ಗಂಟೆಗಳಿಗೆ ಕಡಿಮೆಯಾಗುತ್ತದೆ.
The state-of-the-art road infrastructure projects being launched today in Karnataka will boost connectivity across the state and strengthen economic growth. pic.twitter.com/M6PJpi7Sc4
— PMO India (@PMOIndia) March 12, 2023
Initiatives like 'Bharatmala' and 'SagarMala' are transforming India's landscape. pic.twitter.com/Jmcq47IgSO
— PMO India (@PMOIndia) March 12, 2023
Good infrastructure enhances 'Ease of Living'. It creates new opportunities for progress. pic.twitter.com/BkWMwcaduK
— PMO India (@PMOIndia) March 12, 2023
Irrigation projects which were pending for decades in the country are being completed at a fast pace. pic.twitter.com/bp72C2VHJc
— PMO India (@PMOIndia) March 12, 2023
A move that will significantly benefit our hardworking sugarcane farmers... pic.twitter.com/tzlLwvfeyl
— PMO India (@PMOIndia) March 12, 2023