5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ರಾಷ್ಟ್ರ ಸಮರ್ಪಣೆ ಮತ್ತು ಶಂಕುಸ್ಥಾಪನೆ
103 ಕಿಮೀ ಉದ್ದದ ರಾಯಪುರ - ಖರಿಯಾರ್ ರೋಡ್ ಜೋಡಿ ಮಾರ್ಗ ಮತ್ತು 17 ಕಿಮೀ ಉದ್ದದ ಕೆಯೋಟಿ – ಅಂತಗಢ್ ಹೊಸ ರೈಲು ಮಾರ್ಗ ದೇಶಕ್ಕೆ ಸಮರ್ಪಣೆ
ಕೊರ್ಬಾದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬಾಟ್ಲಿಂಗ್ ಪ್ಲಾಂಟ್ ಉದ್ಘಾಟನೆ
ವೀಡಿಯೋ ಲಿಂಕ್ ಮೂಲಕ ಅಂತಗಢ್ - ರಾಯ್ಪುರ್ ರೈಲಿಗೆ ಹಸಿರು ನಿಶಾನೆ
ಆಯುಷ್ಮಾನ್ ಭಾರತ್ ಅಡಿಯಲ್ಲಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್ಗಳ ವಿತರಣೆಗೆ ಚಾಲನೆ
"ಇಂದಿನ ಯೋಜನೆಗಳು ಛತ್ತೀಸಗಢದ ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಅನುಕೂಲತೆಯ ಹೊಸ ಪ್ರಯಾಣವನ್ನು ಸೂಚಿಸುತ್ತವೆ"
"ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ"
"ಆಧುನಿಕ ಮೂಲಸೌಕರ್ಯವು ಸಾಮಾಜಿಕ ನ್ಯಾಯಕ್ಕೂ ಸಂಬಂಧಿಸಿದೆ"
"ಇಂದು ಛತ್ತೀಸಗಢ ಎರಡು ಆರ್ಥಿಕ ಕಾರಿಡಾರ್ಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ"
"ಹೊಸ ಅವಕಾಶಗಳನ್ನು ಸೃಷ್ಟಿಸಲು ಮತ್ತು ನೈಸರ್ಗಿಕ ಸಂಪತ್ತಿನ ಕ್ಷೇತ್ರಗಳಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ"
"ಎಂ ಎನ್ ಆರ್ ಇ ಜಿ ಎ ಅಡಿಯಲ್ಲಿ ಸಾಕಷ್ಟು ಉದ್ಯೋಗವನ್ನು ಒದಗಿಸಲು ಸರ್ಕಾರವು ಛತ್ತೀಸಗಢಕ್ಕೆ 25000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಒದಗಿಸಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸಗಢದ ರಾಯಪುರದಲ್ಲಿ ಸುಮಾರು 7500 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ಸುಮಾರು 6,400 ಕೋಟಿ ರೂಪಾಯಿ ವೆಚ್ಚದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 750 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ 103 ಕಿಮೀ ಉದ್ದದ ರಾಯಪುರ - ಖರಿಯಾರ್ ರೋಡ್  ಜೋಡಿ ಮಾರ್ಗ, 290 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೆಯೋಟಿ-ಅಂತಗಢ್ ಸಂಪರ್ಕಿಸುವ 17 ಕಿಮೀ ಉದ್ದದ ಹೊಸ ರೈಲು ಮಾರ್ಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದಲ್ಲದೆ, ಕೋರ್ಬಾದಲ್ಲಿ 130 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಾರ್ಷಿಕ 60 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ಬಾಟಲಿಂಗ್ ಘಟಕವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ವೀಡಿಯೋ ಲಿಂಕ್ ಮೂಲಕ ಅಂತಗಢ್ - ರಾಯ್ಪುರ ರೈಲಿಗೆ ಹಸಿರು ನಿಶಾನೆ ತೋರಿದರು. ಇದಲ್ಲದೆ, ಪ್ರಧಾನಮಂತ್ರಿಯವರು ಆಯುಷ್ಮಾನ್ ಭಾರತ್ ಅಡಿಯಲ್ಲಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್ಗಳ ವಿತರಣೆಗೆ ಚಾಲನೆ ನೀಡಿದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಛತ್ತೀಸಗಢದ ಅಭಿವೃದ್ಧಿ ಪಯಣಕ್ಕೆ ಈ ದಿನವು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು, ಏಕೆಂದರೆ ರಾಜ್ಯವು ಮೂಲಸೌಕರ್ಯ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ 7000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪಡೆಯುತ್ತಿದೆ. ಇಂದಿನ ಯೋಜನೆಗಳು ಜನರ ಜೀವನವನ್ನು ಸುಲಭಗೊಳಿಸುತ್ತವೆ ಮತ್ತು ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆಗಳು ಛತ್ತೀಸಗಢದ ಭತ್ತದ ಬೆಳೆಯುವ ರೈತರು, ಖನಿಜ ಉದ್ಯಮ ಮತ್ತು ಪ್ರವಾಸೋದ್ಯಮ ಉದ್ಯಮಕ್ಕೆ ಲಾಭದಾಯಕವಾಗುವುದರ ಜೊತೆಗೆ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಯೋಜನೆಗಳಿಗಾಗಿ ರಾಜ್ಯದ ಜನರನ್ನು ಅಭಿನಂದಿಸಿದ ಪ್ರಧಾನಿಯವರು "ಇಂದಿನ ಯೋಜನೆಗಳು ಛತ್ತೀಸಗಢದ ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಅನುಕೂಲತೆಯ ಹೊಸ ಪ್ರಯಾಣವನ್ನು ಸೂಚಿಸುತ್ತವೆ" ಎಂದು ಹೇಳಿದರು.

ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿನ ವಿಳಂಬವು ಮೂಲಸೌಕರ್ಯಗಳ ಕೊರತೆಗೆ ನೇರವಾಗಿ ಸಂಬಂಧಿಸಿರುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಆದ್ದರಿಂದ, ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು. “ಮೂಲಸೌಕರ್ಯ ಎಂದರೆ ಸುಲಭ ಜೀವನ ಮತ್ತು ಸುಗಮ ವ್ಯವಹಾರ. ಮೂಲಸೌಕರ್ಯ ಎಂದರೆ ಉದ್ಯೋಗಾವಕಾಶಗಳು ಮತ್ತು ವೇಗದ ಅಭಿವೃದ್ಧಿ” ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ಕಳೆದ 9 ವರ್ಷಗಳಲ್ಲಿ ರಾಜ್ಯದ ಸಾವಿರಾರು ಬುಡಕಟ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕವನ್ನು ವಿಸ್ತರಿಸಿರುವ ಛತ್ತೀಸಗಢದಲ್ಲಿ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯನ್ನು ಸಹ ನೋಡಬಹುದು ಎಂದು ಅವರು ಹೇಳಿದರು. ಸುಮಾರು 3,500 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಸುಮಾರು 3000 ಕಿಮೀ ರಸ್ತೆ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ರಾಯಪುರ-ಕೊಡೆಬೋಡ್ ಮತ್ತು ಬಿಲಾಸಪುರ-ಪತ್ರಪಾಲಿ ಹೆದ್ದಾರಿಗಳನ್ನು ಇಂದು ಉದ್ಘಾಟಿಸಲಾಗಿದೆ ಎಂದು ಪ್ರಧಾನಿ ಹೇಳಿದರು. "ಅದು ರೈಲು, ರಸ್ತೆ, ಟೆಲಿಕಾಂ ಯಾವುದೇ ಆಗಿರಲಿ, ಎಲ್ಲಾ ರೀತಿಯ ಸಂಪರ್ಕವನ್ನು ಹೆಚ್ಚಿಸಲು ಸರ್ಕಾರವು ಕಳೆದ 9 ವರ್ಷಗಳಲ್ಲಿ ಛತ್ತೀಸಗಢದಲ್ಲಿ ಅಭೂತಪೂರ್ವ ಕೆಲಸ ಮಾಡಿದೆ" ಎಂದು ಅವರು ಹೇಳಿದರು. 

ಆಧುನಿಕ ಮೂಲಸೌಕರ್ಯಗಳು ಸಾಮಾಜಿಕ ನ್ಯಾಯಕ್ಕೂ ಸಂಬಂಧಿಸಿವೆ ಎಂದ ಪ್ರಧಾನಿಯವರು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರ ವಸತಿ ನೆಲೆಗಳನ್ನು ಸಂಪರ್ಕಿಸುವ ರಸ್ತೆಗಳು ಮತ್ತು ರೈಲು ಮಾರ್ಗಗಳು ಸೇರಿದಂತೆ ಇಂದಿನ ಯೋಜನೆಗಳು ರೋಗಿಗಳು ಮತ್ತು ಮಹಿಳೆಯರಿಗೆ ಆಸ್ಪತ್ರೆಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದರು. ಒಂಬತ್ತು ವರ್ಷಗಳ ಹಿಂದೆ, ಛತ್ತೀಸಗಢದ 20 ಪ್ರತಿಶತಕ್ಕೂ ಹೆಚ್ಚು ಹಳ್ಳಿಗಳು ಯಾವುದೇ ರೀತಿಯ ಮೊಬೈಲ್ ಸಂಪರ್ಕವನ್ನು ಹೊಂದಿರಲಿಲ್ಲ ಆದರೆ ಇಂದು ಅದು ಸುಮಾರು ಶೇ.6ಕ್ಕೆ ಇಳಿದಿದೆ ಮತ್ತು ಈ ಪ್ರದೇಶದ ರೈತರು ಮತ್ತು ಕಾರ್ಮಿಕರು ಹೆಚ್ಚಿನ ಫಲಾನುಭವಿಗಳಾಗಿದ್ದಾರೆ ಎಂದು ಅವರು ಹೇಳಿದರು. ಸಂಪರ್ಕ ಸುಧಾರಿಸಿರುವ ಈ ಬುಡಕಟ್ಟು ಹಳ್ಳಿಗಳಲ್ಲಿ ಹೆಚ್ಚಿನವು ಹಿಂದೆ ನಕ್ಸಲೀಯರ ಹಿಂಸಾಚಾರದಿಂದ ಬಾಧಿತವಾಗಿದ್ದವು ಎಂದು ಅವರು ಗಮನಸೆಳೆದರು. ಉತ್ತಮ 4ಜಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 700 ಕ್ಕೂ ಹೆಚ್ಚು ಮೊಬೈಲ್ ಟವರ್ಗಳನ್ನು ಸ್ಥಾಪಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಸುಮಾರು 300 ಟವರ್ಗಳು ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಮೌನವಾಗಿದ್ದ ಬುಡಕಟ್ಟು ಹಳ್ಳಿಗಳು ಈಗ ರಿಂಗ್ಟೋನ್ಗಳ ಝೇಂಕಾರವನ್ನು ಕೇಳುತ್ತಿವೆ” ಎಂದು ಅವರು ಹೇಳಿದರು. ಮೊಬೈಲ್ ಸಂಪರ್ಕದ ಆಗಮನವು ಹಳ್ಳಿಯ ಜನರಿಗೆ ಅನೇಕ ಕಾರ್ಯಗಳಲ್ಲಿ ಸಹಾಯ ಮಾಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ಇದು ಸಾಮಾಜಿಕ ನ್ಯಾಯ. ಮತ್ತು ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್”ಎಂದು ಪ್ರಧಾನಿ ಹೇಳಿದರು. 

"ಇಂದು ಛತ್ತೀಸಗಢವು ಎರಡು ಆರ್ಥಿಕ ಕಾರಿಡಾರ್ಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ, ರಾಯಪುರ - ಧನಬಾದ್ ಆರ್ಥಿಕ ಕಾರಿಡಾರ್ ಮತ್ತು ರಾಯಪುರ - ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್ ಗಳು ಇಡೀ ಪ್ರದೇಶದ ಭವಿಷ್ಯವನ್ನು ಬದಲಾಯಿಸಲಿವೆ” ಎಂದು ಪ್ರಧಾನಿ ಪ್ರತಿಪಾದಿಸಿದರು. ಆರ್ಥಿಕ ಕಾರಿಡಾರ್ ಗಳು ಒಮ್ಮೆ ಹಿಂದುಳಿದ ಜಿಲ್ಲೆಗಳು ಎಂದು ಕರೆಯಲಾಗುತ್ತಿದ್ದ ಮತ್ತು ಹಿಂಸಾಚಾರ ಮತ್ತು ಅರಾಜಕತೆಯಿಂದ ಕೂಡಿದ್ದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೂಲಕ ಹಾದು ಹೋಗುತ್ತಿವೆ ಎಂದು ಅವರು ಹೇಳಿದರು. ಇಂದು ಶಂಕುಸ್ಥಾಪನೆಯಾಗಿರುವ ರಾಯಪುರ-ವಿಶಾಖಪಟ್ಟಣ ಆರ್ಥಿಕ ಕಾರಿಡಾರ್ ರಾಯಪುರ ಮತ್ತು ವಿಶಾಖಪಟ್ಟಣ ನಡುವಿನ ಪ್ರಯಾಣವನ್ನು ಅರ್ಧಕ್ಕೆ ಕಡಿಮೆಗೊಳಿಸುವುದರಿಂದ ಈ ಪ್ರದೇಶದ ಹೊಸ ಜೀವನಾಡಿಯಾಗಲಿದೆ ಎಂದು ಅವರು ಹೇಳಿದರು. 6 ಪಥದ ರಸ್ತೆಯು ಧಮತರಿಯ ಭತ್ತದ ಬೆಳೆಯುವ ಪ್ರದೇಶ, ಕಂಕೇರ್ನ ಬಾಕ್ಸೈಟ್ ಸಮೃದ್ಧ ಪ್ರದೇಶ ಮತ್ತು ಕೊಂಡಗಾಂವ್ ನ ಕರಕುಶಲ ಶ್ರೀಮಂತಿಕೆಯನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು. ಈ ರಸ್ತೆಯು ವನ್ಯಜೀವಿ ಪ್ರದೇಶದ ಮೂಲಕ ಹಾದು ಹೋಗುವುದರಿಂದ ವನ್ಯಜೀವಿಗಳ ಅನುಕೂಲಕ್ಕಾಗಿ ಸುರಂಗಗಳು ಮತ್ತು ಪ್ರಾಣಿಗಳು ದಾಟಲು ಸೂಕ್ತ ವ್ಯವಸ್ಥೆಗಳ ನಿರ್ಮಾಣದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. "ದಳ್ಳಿ ರಾಜಹಾರದಿಂದ ಜಗದಲ್ಪುರಕ್ಕೆ ರೈಲು ಮಾರ್ಗ ಮತ್ತು ಅಂತಗಢದಿಂದ ರಾಯಪುರಕ್ಕೆ ನೇರ ರೈಲು ಸೇವೆಯು ದೂರದ ಪ್ರದೇಶಗಳಿಗೆ ಪ್ರಯಾಣಿಸಲು ಸುಲಭವಾಗುತ್ತದೆ" ಎಂದು ಶ್ರೀ ಮೋದಿ ಹೇಳಿದರು. 

"ನೈಸರ್ಗಿಕ ಸಂಪತ್ತು ಸಮೃದ್ಧವಾಗಿರುವ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಮತ್ತು ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರವು ಬದ್ಧವಾಗಿದೆ” ಎಂದು ಪ್ರಧಾನಿ ಹೇಳಿದರು. ಕಳೆದ 9 ವರ್ಷಗಳಲ್ಲಿ ಛತ್ತೀಸಗಢದಲ್ಲಿ ಕೈಗಾರಿಕೀಕರಣಕ್ಕೆ ಹೊಸ ಶಕ್ತಿ ನೀಡಿದ ಪ್ರಯತ್ನಗಳನ್ನು ಅವರು ವಿವರಿಸಿದರು. ಸರ್ಕಾರದ ನೀತಿಗಳಿಂದಾಗಿ ಛತ್ತೀಸಗಢವು ಆದಾಯದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿಶೇಷವಾಗಿ ಗಣಿ ಮತ್ತು ಖನಿಜ ಕಾಯ್ದೆಯ ಬದಲಾವಣೆಯ ನಂತರ ಛತ್ತೀಸಗಢವು ರಾಜಧನ ರೂಪದಲ್ಲಿ ಹೆಚ್ಚಿನ ಹಣವನ್ನು ಪಡೆಯಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. 2014 ರ ಹಿಂದಿನ ನಾಲ್ಕು ವರ್ಷಗಳಲ್ಲಿ, ಛತ್ತೀಸಗಢವು 1300 ಕೋಟಿ ರಾಯಧನವನ್ನು ಪಡೆದಿದ್ದರೆ, 2015-16 ರಿಂದ 2020-21 ರ ನಡುವೆ ಸುಮಾರು 2800 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಜಿಲ್ಲಾ ಖನಿಜ ನಿಧಿ ಹೆಚ್ಚಳದಿಂದ ಖನಿಜ ಸಂಪತ್ತು ಇರುವ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯ ಚುರುಕುಗೊಂಡಿದೆ ಎಂದರು. ಮಕ್ಕಳ ಶಾಲೆಗಳು, ಗ್ರಂಥಾಲಯಗಳು, ರಸ್ತೆಗಳು, ನೀರಿನ ವ್ಯವಸ್ಥೆಯಂತಹ ಹಲವು ಅಭಿವೃದ್ಧಿ ಕಾರ್ಯಗಳಿಗೆ ಈಗ ಜಿಲ್ಲಾ ಖನಿಜ ನಿಧಿಯ ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಛತ್ತೀಸಗಢದಲ್ಲಿ ತೆರೆಯಲಾದ 1 ಕೋಟಿ 60 ಲಕ್ಷಕ್ಕೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ ಇಂದು 6000 ಕೋಟಿ ರೂ.ಗೂ ಹೆಚ್ಚು ಠೇವಣಿಯಾಗಿದೆ ಎಂದು ಹೇಳಿದರು. ಜನ್ ಧನ್ ಖಾತೆಗಳು ಬಡವರಿಗೆ ಸರ್ಕಾರದಿಂದ ನೇರ ಸಹಾಯವನ್ನು ಪಡೆಯಲು ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು. ಛತ್ತೀಸಗಢದ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಪ್ರಧಾನಿ, ಮುದ್ರಾ ಯೋಜನೆಯಡಿ ಛತ್ತೀಸಗಢದ ಯುವಜನರಿಗೆ 40,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರು. ಇವರಲ್ಲಿ ಬುಡಕಟ್ಟು ಮತ್ತು ಬಡ ಕುಟುಂಬಗಳ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು. ಕೊರೋನಾ ಅವಧಿಯಲ್ಲಿ ದೇಶದ ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡಲು ಸರ್ಕಾರವು ಆರಂಭಿಸಿದ ಲಕ್ಷ ಕೋಟಿ ರೂ. ಮೌಲ್ಯದ ವಿಶೇಷ ಯೋಜನೆಯಲ್ಲಿ ಛತ್ತೀಸಗಢದ ಸುಮಾರು 2 ಲಕ್ಷ ಉದ್ಯಮಗಳು ಸುಮಾರು 5000 ಕೋಟಿ ರೂಪಾಯಿಗಳ ನೆರವು ಪಡೆದಿವೆ ಎಂದು ಅವರು ಹೇಳಿದರು. 

ಬೀದಿಬದಿ ವ್ಯಾಪಾರಿಗಳಿಗೆ ಖಾತ್ರಿ ಇಲ್ಲದೆ ಸಾಲ ನೀಡುವ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಛತ್ತೀಸಗಢದ 60 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಸ್ತಾಪಿಸಿದರು. ಹಳ್ಳಿಗಳಲ್ಲಿ ಎಂ ಎನ್ ಆರ್ ಇ ಜಿ ಎ ಅಡಿಯಲ್ಲಿ ಸಾಕಷ್ಟು ಉದ್ಯೋಗವನ್ನು ಒದಗಿಸಲು ಸರ್ಕಾರವು ಛತ್ತೀಸಗಢಕ್ಕೆ 25000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಒದಗಿಸಿದೆ ಎಂದು ಅವರು ಮಾಹಿತಿ ನೀಡಿದರು.

75 ಲಕ್ಷ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ಗಳ ವಿತರಣೆ ಈಗಾಗಲೇ ನಡೆಯುತ್ತಿದೆ ಎಂದು ತಿಳಿಸಿದ ಪ್ರಧಾನಿ, ಬಡ ಮತ್ತು ಬುಡಕಟ್ಟು ಕುಟುಂಬಗಳಿಗೆ ರಾಜ್ಯದ 1500 ಕ್ಕೂ ಹೆಚ್ಚು ದೊಡ್ಡ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನು ಒತ್ತಿ ಹೇಳಿದರು. ಆಯುಷ್ಮಾನ್ ಯೋಜನೆಯು ಬಡವರು, ಗಿರಿಜನರು, ಹಿಂದುಳಿದವರು ಹಾಗೂ ದಲಿತ ಕುಟುಂಬಗಳ ಬದುಕಿಗೆ ನೆರವಿಗೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಛತ್ತೀಸಗಢದ ಪ್ರತಿಯೊಂದು ಕುಟುಂಬಕ್ಕೂ ಅದೇ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಛತ್ತೀಸಗಢ ರಾಜ್ಯಪಾಲ ಶ್ರೀ ಬಿಸ್ವಭೂಷಣ ಹರಿಚಂದನ್, ಛತ್ತೀಸಗಢ ಮುಖ್ಯಮಂತ್ರಿ ಶ್ರೀ ಭೂಪೇಶ್ ಬಾಘೇಲ್, ಛತ್ತೀಸಗಢ ಉಪಮುಖ್ಯಮಂತ್ರಿ ಶ್ರೀ ಟಿ ಎಸ್ ಸಿಂಗ್ ದೇವ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ ಹಾಗೂ ಸಂಸದರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಉತ್ತೇಜನವಾಗಿ, ಸುಮಾರು 6,400 ಕೋಟಿ ರೂಪಾಯಿ ಮೌಲ್ಯದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪ್ರಧಾನ ಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರಕ್ಕೆ ಸಮರ್ಪಿಸಲಾದ ಯೋಜನೆಗಳು ಜಬಲಪುರ್-ಜಗದಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಯಪುರದಿಂದ ಕೊಡೆಬೋಡ್ ಭಾಗದ 33 ಕಿಮೀ ಉದ್ದದ 4-ಪಥದ ರಸ್ತೆಯನ್ನು ಒಳಗೊಂಡಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಕಚ್ಚಾ ಸರಕುಗಳ ಸಾಗಣೆಗೆ ಈ ವಿಭಾಗವು ಮುಖ್ಯವಾಗಿದೆ, ಜಗದಲ್ಪುರ ಬಳಿಯ ಉಕ್ಕಿನ ಸ್ಥಾವರಗಳಲ್ಲಿ ಸಿದ್ಧಪಡಿಸಿದ ಉತ್ಪನ್ನಗಳು ಮತ್ತು ಕಬ್ಬಿಣದ ಅದಿರು-ಸಮೃದ್ಧ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. 53 ಕಿಮೀ ಉದ್ದದ 4-ಪಥದ ಬಿಲಾಸಪುರ-ಪತ್ರಪಾಲಿ ಮಾರ್ಗದ ಎನ್ ಎಚ್-130 ರ ಬಿಲಾಸಪುರದಿಂದ ಅಂಬಿಕಾಪುರ ಭಾಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಉತ್ತರ ಪ್ರದೇಶದೊಂದಿಗೆ ಛತ್ತೀಸಗಢದ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಪಕ್ಕದ ಪ್ರದೇಶಗಳಲ್ಲಿ ಕಲ್ಲಿದ್ದಲು ಗಣಿಗಳಿಗೆ ಸಂಪರ್ಕವನ್ನು ಒದಗಿಸುವ ಮೂಲಕ ಕಲ್ಲಿದ್ದಲಿನ ಚಲನೆಯನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿಯವರು 6-ಪಥದ ಗ್ರೀನ್ಫೀಲ್ಡ್ ರಾಯಪುರ - ವಿಶಾಖಪಟ್ಟಣ ಕಾರಿಡಾರ್ನ ಛತ್ತೀಸ್ಗಢ ವಿಭಾಗದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಇವುಗಳಲ್ಲಿ ಎನ್ ಎಚ್ 130 CD ಯಲ್ಲಿ 43 ಕಿಮೀ ಉದ್ದದ ಆರು ಪಥದ ಝಂಕಿ-ಸರ್ಗಿ ವಿಭಾಗದ ಅಭಿವೃದ್ಧಿ; ಎನ್ ಎಚ್ 130 CD ಯಲ್ಲಿ 57 ಕಿಮೀ ಉದ್ದದ ಆರು ಪಥದ ಸರ್ಗಿ-ಬಸನ್ವಾಹಿ ವಿಭಾಗ; ಮತ್ತು ಎನ್ ಎಚ್ -130 CD ಯ 25 ಕಿಮೀ ಉದ್ದದ ಆರು ಪಥದ ಬಸನ್ವಾಹಿ-ಮರಂಗಪುರಿ ವಿಭಾಗ ಸೇರಿವೆ. ಒಂದು ಪ್ರಮುಖ ಅಂಶವೆಂದರೆ 2.8 ಕಿಮೀ ಉದ್ದದ 6-ಪಥದ ಸುರಂಗ, ಇದು ಉದಾಂತಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅನಿಯಂತ್ರಿತ ವನ್ಯಜೀವಿ ಚಲನೆಗಾಗಿ 27 ಪ್ರಾಣಿಗಳ ಪಾಸ್ಗಳು ಮತ್ತು 17 ಕೋತಿ ಕ್ಯಾನೋಪಿಗಳನ್ನು ಒಳಗೊಂಡಿದೆ. ಈ ಯೋಜನೆಗಳು ಧಮ್ತಾರಿಯಲ್ಲಿನ ಅಕ್ಕಿ ಗಿರಣಿಗಳಿಗೆ ಮತ್ತು ಕಂಕೇರ್ನಲ್ಲಿನ ಬಾಕ್ಸೈಟ್-ಸಮೃದ್ಧ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಕೊಂಡಗಾಂವ್ನ ಕರಕುಶಲ ಉದ್ಯಮಕ್ಕೂ ಪ್ರಯೋಜನವನ್ನು ನೀಡುತ್ತವೆ. ಒಟ್ಟಾರೆಯಾಗಿ, ಈ ಯೋಜನೆಗಳು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ.

750 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ 103 ಕಿಮೀ ಉದ್ದದ ರಾಯಪುರ - ಖರಿಯಾರ್ ರೋಡ್ ಜೋಡಿ ರೈಲು ಮಾರ್ಗವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಛತ್ತೀಸಗಢದ ಕೈಗಾರಿಕೆಗಳಿಗೆ ಬಂದರುಗಳಿಂದ ಕಲ್ಲಿದ್ದಲು, ಉಕ್ಕು, ರಸಗೊಬ್ಬರಗಳು ಮತ್ತು ಇತರ ಸರಕುಗಳ ಸಾಗಣೆಯನ್ನು ಸುಲಭಗೊಳಿಸುತ್ತದೆ. 290 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಕಿಯೋತಿ-ಅಂತಗಢಕ್ಕೆ ಸಂಪರ್ಕ ಕಲ್ಪಿಸುವ 17 ಕಿಮೀ ಉದ್ದದ ಹೊಸ ರೈಲು ಮಾರ್ಗವನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಹೊಸ ರೈಲುಮಾರ್ಗವು ದಳ್ಳಿ ರಾಜಹಾರ ಮತ್ತು ರೌಘಾಟ್ ಪ್ರದೇಶಗಳ ಕಬ್ಬಿಣದ ಅದಿರು ಗಣಿಗಳೊಂದಿಗೆ ಭಿಲಾಯಿ ಉಕ್ಕಿನ ಸ್ಥಾವರಕ್ಕೆ ಸಂಪರ್ಕವನ್ನು ಒದಗಿಸುತ್ತದೆ ಮತ್ತು ದಟ್ಟ ಅರಣ್ಯಗಳ ಮೂಲಕ ಹಾದುಹೋಗುವ ದಕ್ಷಿಣ ಛತ್ತೀಸಗಢದ ದೂರದ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಕೋರ್ಬಾದಲ್ಲಿ 130 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ವಾರ್ಷಿಕ 60 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ಬಾಟಲಿಂಗ್ ಘಟಕವನ್ನು ಸಹ ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ವೀಡಿಯೋ ಲಿಂಕ್ ಮೂಲಕ ಅಂತಗಢ್ - ರಾಯಪುರ ರೈಲಿಗೆ ಹಸಿರು ನಿಶಾನೆ ತೋರಿದರು. ಇದಲ್ಲದೆ, ಪ್ರಧಾನಮಂತ್ರಿಯವರು ಆಯುಷ್ಮಾನ್ ಭಾರತ್ ಅಡಿಯಲ್ಲಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್ಗಳ ವಿತರಣೆಗೆ ಚಾಲನೆ ನೀಡಿದರು. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Space Sector: A Transformational Year Ahead in 2025

Media Coverage

India’s Space Sector: A Transformational Year Ahead in 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India