ಮಹಾರಾಷ್ಟ್ರದಲ್ಲಿ ʻಪಿಎಂಎವೈ-ನಗರʼ ಯೋಜನೆಯಡಿ ಪೂರ್ಣಗೊಂಡ 90,000ಕ್ಕೂ ಹೆಚ್ಚು ಮನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
ಸೋಲಾಪುರದ ರಾಯನಗರ ಹೌಸಿಂಗ್ ಸೊಸೈಟಿಯ 15,000 ಮನೆಗಳನ್ನು ಸಮರ್ಪಿಸಿದರು
ʻಪಿಎಂ-ಸ್ವನಿಧಿʼ ಯೋಜನೆಯ 10,000 ಫಲಾನುಭವಿಗಳಿಗೆ 1 ಮತ್ತು 2ನೇ ಕಂತುಗಳ ವಿತರಣೆಗೆ ಚಾಲನೆ
“ಶ್ರೀ ರಾಮನ ಆದರ್ಶಗಳನ್ನು ಅನುಸರಿಸುವ ಮೂಲಕ ದೇಶದಲ್ಲಿ ಉತ್ತಮ ಆಡಳಿತ ಹಾಗೂ ಪ್ರಾಮಾಣಿಕತೆ ನೆಲೆಗೊಳ್ಳುವುದನ್ನು ಖಾತರಿಪಡಿಸಲು ನಮ್ಮ ಸರ್ಕಾರ ಮೊದಲ ದಿನದಿಂದಲೂ ಪ್ರಯತ್ನಿಸುತ್ತಿದೆ"
"ಸಾವಿರಾರು ಕುಟುಂಬಗಳ ಕನಸುಗಳು ಸಾಕಾರಗೊಂಡಾಗ ಮತ್ತು ಅವರ ಆಶೀರ್ವಾದವೇ ನನಗೆ ದೊಡ್ಡ ಶ್ರೀಮಂತಿಕೆಯಾದಾಗ ಅದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ"
"ಜನವರಿ 22 ರಂದು ಬೆಳಗಲಿರುವ ʻರಾಮ ಜ್ಯೋತಿʼಯು ಬಡತನದ ಕತ್ತಲೆಯನ್ನು ಹೋಗಲಾಡಿಸಲು ಸ್ಫೂರ್ತಿಯಾಗಲಿದೆ"
'ಕಾರ್ಮಿಕರ ಘನತೆ', 'ಸ್ವಾವಲಂಬಿ ಕಾರ್ಮಿಕ' ಮತ್ತು 'ಬಡವರ ಕಲ್ಯಾಣ'ವು ಸರ್ಕಾರದ ಮಾರ್ಗವಾಗಿದೆ: ಪ್ರಧಾನಿ
"ಬಡವರಿಗೆ ಶಾಶ್ವತ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ನೀರು ಸಿಗಬೇಕು; ಅಂತಹ ಎಲ್ಲಾ ಸೌಲಭ್ಯಗಳು ಸಾಮಾಜಿಕ ನ್ಯಾಯದ ಖಾತರಿ ಒದಗಿಸುತ್ತವೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ 8 ʻಅಮೃತ್ʼ (ಅಟಲ್ ಮಿಷನ್ ಫಾರ್ ರಿಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್) ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಹಾರಾಷ್ಟ್ರದಲ್ಲಿ ʻಪ್ರಧಾನಮಂತ್ರಿ ನಗರ ಆವಾಸ ಯೋಜನೆʼ (ಪಿಎಂಎವೈ-ಅರ್ಬನ್) ಅಡಿಯಲ್ಲಿ ಪೂರ್ಣಗೊಂಡ 90,000ಕ್ಕೂ ಹೆಚ್ಚು ಮನೆಗಳು ಮತ್ತು ಸೋಲಾಪುರದ ರಾಯನಗರ ಹೌಸಿಂಗ್ ಸೊಸೈಟಿಯ 15,000 ಮನೆಗಳನ್ನು ಶ್ರೀ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು. ಸಾವಿರಾರು ಕೈಮಗ್ಗ ಕಾರ್ಮಿಕರು, ವ್ಯಾಪಾರಿಗಳು, ವಿದ್ಯುತ್ ಮಗ್ಗ ಕಾರ್ಮಿಕರು, ಚಿಂದಿ ಆಯುವವರು, ಬೀಡಿ ಕಾರ್ಮಿಕರು, ಚಾಲಕರು ಇದರ ಫಲಾನುಭವಿಗಳಲ್ಲಿ ಸೇರಿದ್ದಾರೆ. ಕಾರ್ಯಕ್ರಮದಲ್ಲಿ ಅವರು ʻಪಿಎಂ-ಸ್ವನಿಧಿʼ ಯೋಜನೆಯ ಮಹಾರಾಷ್ಟ್ರದ 10,000 ಫಲಾನುಭವಿಗಳಿಗೆ 1 ಮತ್ತು 2ನೇ ಕಂತುಗಳ ವಿತರಣೆಗೆ ಚಾಲನೆ ನೀಡಿದರು.

 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶವು ಭಕ್ತಿಯ ಭಾವಪರವಶತೆಯಿಂದ ತುಂಬಿದೆ ಎಂದರು. "ಟೆಂಟ್‌ನಲ್ಲಿ ಭಗವಾನ್ ರಾಮನ ದರ್ಶನ ಮಾಡಬೇಕಾದ ದಶಕಗಳಷ್ಟು ಹಳೆಯ ನೋವು ಈಗ ದೂರವಾಗಲಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ಸಾಧು-ಸಂತರ ಮಾರ್ಗದರ್ಶನದಲ್ಲಿ 11 ದಿನಗಳ ಅನುಸ್ಥಾನದ ನಿಯಮ-ನಿಬಂಧನೆಗಳನ್ನು ಅತ್ಯಂತ ಸಮರ್ಪಣಾಭಾವ ಹಾಗೂ ಬದ್ಧತೆಯಿಂದ ಅನುಸರಿಸುತ್ತಿದ್ದೇನೆ ಎಂದ ಪ್ರಧಾನಿ, ಎಲ್ಲಾ ನಾಗರಿಕರ ಆಶೀರ್ವಾದದೊಂದಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ತಮ್ಮ 11 ದಿನಗಳ ವಿಶೇಷ ಆಚರಣೆಯನ್ನು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿಯಲ್ಲಿ ಪ್ರಾರಂಭಿಸಿದ ವಿಷಯವನ್ನು ಪ್ರಧಾನಿ ಉಲ್ಲೇಖಿಸಿದರು. ಭಕ್ತಿಯ ಸಂಭ್ರಮದ ಈ ಕ್ಷಣದಲ್ಲಿ ಮಹಾರಾಷ್ಟ್ರದ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ 'ಗೃಹ ಪ್ರವೇಶ'ವನ್ನು ಮಾಡುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. "ಈ 1 ಲಕ್ಷ ಕುಟುಂಬಗಳು ಜನವರಿ 22ರ ಸಂಜೆ ತಮ್ಮ ಶಾಶ್ವತ ಮನೆಗಳಲ್ಲಿ ʻರಾಮ ಜ್ಯೋತಿʼಯನ್ನು ಬೆಳಗಿಸುತ್ತಿರುವುದು ಬಹಳ ಸಂತೋಷದ ವಿಷಯ," ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರ ಕೋರಿಕೆಯ ಮೇರೆಗೆ, ಜನರು ತಮ್ಮ ಮೊಬೈಲ್ ಫ್ಲ್ಯಾಶ್‌ಲೈಟ್‌ಗಳನ್ನು ಬೆಳಗಿಸುವ ಮೂಲಕ ʻರಾಮ ಜ್ಯೋತಿʼಯ ಪ್ರತಿಜ್ಞೆಯನ್ನು ಪ್ರದರ್ಶಿಸಿದರು.

ಇಂದು ಚಾಲನೆ ನೀಡಲಾದ ಯೋಜನೆಗಳಿಗಾಗಿ ಈ ಪ್ರದೇಶದ ಮತ್ತು ಇಡೀ ಮಹಾರಾಷ್ಟ್ರದ ಜನರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಮಹಾರಾಷ್ಟ್ರದ ಜನರ ಕಠಿಣ ಪರಿಶ್ರಮ ಹಾಗೂ ಪ್ರಗತಿಪರ ರಾಜ್ಯ ಸರ್ಕಾರದ ಪ್ರಯತ್ನಗಳು ಮಹಾರಾಷ್ಟ್ರದ ಈ ವೈಭವಕ್ಕೆ ಕಾರಣ ಎಂದು ಅವರು ಹೇಳಿದರು.

 

"ನಮ್ಮ ಮಾತುಗಳು ಮತ್ತು ಭರವಸೆಗಳಿಗೆ ನಿಷ್ಠರಾಗಿರುವಂತೆ ರಾಮ ನಮಗೆ ಕಲಿಸಿದ್ದಾನೆ," ಎಂದ ಪ್ರಧಾನಿ, ಸೋಲಾಪುರದ ಸಾವಿರಾರು ಬಡವರಿಗಾಗಿ ಕೈಗೊಂಡ ಸಂಕಲ್ಪ ಇಂದು ನನಸಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ʻಪ್ರಧಾನಮಂತ್ರಿ ಆವಾಸ್ ಯೋಜನೆʼ ಅಡಿಯಲ್ಲಿ ಅತಿ ಹೆಚ್ಚು ವಸತಿಗಳನ್ನು ಇಂದು ಉದ್ಘಾಟಿಸಲಾಗಿದೆ ಎಂದು ಭಾವುಕರಾಗಿ ಹೇಳಿದ ಪ್ರಧಾನಿಯವರು, ಅಂತಹ ಮನೆಗಳಲ್ಲಿ ವಾಸಿಸಬೇಕೆಂದು ಬಯಸುತ್ತಿದ್ದ ತಮ್ಮ ಬಾಲ್ಯದ ದಿನಗಳನ್ನು ನೆನೆದರು. "ಸಾವಿರಾರು ಕುಟುಂಬಗಳ ಕನಸುಗಳು ನನಸಾಗಿದಾಗ, ಮತ್ತು ಅವರ ಆಶೀರ್ವಾದವು ನನ್ನ ಪಾಲಿನ ದೊಡ್ಡ ಸಂಪತ್ತಾದಾಗ, ಅದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ," ಎಂದು ಗದ್ಗದಿತರಾಗಿ ಹೇಳುತ್ತಾ ಪ್ರಧಾನಿ ಕಣ್ಣೀರು ಹಾಕಿದರು. ಈ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ, ಮುಂದೆ ಮೋದಿ ಅವರೇ ಈ ಮನೆಗಳ ಕೀಲಿಗಳನ್ನು ಹಸ್ತಾಂತರಿಸಲು ಬರುತ್ತಾರೆ ಎಂದು ಜನರಿಗೆ ಭರವಸೆ ನೀಡಿದ್ದನ್ನು ಅವರು ನೆನಪಿಸಿಕೊಂಡರು. "ಇಂದು ಮೋದಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ" ಎಂದು ಮಾತು ಮುಂದುವರಿಸಿದರು.  "ಮೋದಿಯವರ ಗ್ಯಾರಂಟಿ ಎಂದರೆ, ಗ್ಯಾರಂಟಿಯ ಈಡೇರಿಕೆಯೇ ಸರಿ," ಎಂದು ಅವರು ಹೇಳಿದರು. ಇಂದು ತಮ್ಮ ಮನೆಗಳನ್ನು ಪಡೆದ ಫಲಾನುಭವಿಗಳು ಮತ್ತು ಅವರ ಹಿಂದಿನ ತಲೆಮಾರುಗಳು ವಸತಿಹೀನತೆಯಿಂದಾಗಿ ನೋವು ಮತ್ತು ಸಂಕಟವನ್ನು ಅನುಭವಿಸಬೇಕಾಯಿತು ಎಂದು ಒತ್ತಿ ಹೇಳಿದ ಪ್ರಧಾನಿ, ಈ ದುಃಖದ ಸರಪಳಿ ಈಗ ತುಂಡರಿಸಿದೆ ಎಂದರು. ಭವಿಷ್ಯದ ಪೀಳಿಗೆಯು ಅದೇ ಅಗ್ನಿಪರೀಕ್ಷೆಯನ್ನು ಎದುರಿಸುವ ಅಗತ್ಯ ಬರುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಜನವರಿ 22 ರಂದು ಬೆಳಗಲಿರುವ ʻರಾಮ ಜ್ಯೋತಿʼಯು ಬಡತನದ ಕತ್ತಲೆಯನ್ನು ಹೋಗಲಾಡಿಸಲು ಸ್ಫೂರ್ತಿಯಾಗಲಿದೆ," ಎಂದು ಪ್ರಧಾನಿ ಹೇಳಿದರು. ಎಲ್ಲರಿಗೂ ಸಂತೋಷಯುಕ್ತ ಜೀವನಕ್ಕಾಗಿ ಅವರು ಹಾರೈಸಿದರು.

 

ಇಂದು ಹೊಸ ಮನೆಗಳನ್ನು ಪಡೆಯುತ್ತಿರುವ ಕುಟುಂಬಗಳ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಧಾನಿ ಪ್ರಾರ್ಥಿಸಿದರು. "ಶ್ರೀ ರಾಮನ ಆದರ್ಶಗಳನ್ನು ಅನುಸರಿಸುವ ಮೂಲಕ, ದೇಶದಲ್ಲಿ ಉತ್ತಮ ಆಡಳಿತ ಹಾಗೂ ಪ್ರಾಮಾಣಿಕತೆಯ ಆಳ್ವಿಕೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಮೊದಲ ದಿನದಿಂದ ಪ್ರಯತ್ನಿಸುತ್ತಿದೆ. ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ,ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ʼ ಮಂತ್ರಕ್ಕೆ ರಾಮರಾಜ್ಯವೇ ಸ್ಫೂರ್ತಿ ," ಎಂದು ಪ್ರಧಾನಿ ಮೋದಿ ಹೇಳಿದರು. ʻರಾಮಾಚರಿತ ಮಾನಸʼ ಉಲ್ಲೇಖಿಸಿದ ಶ್ರೀ ಮೋದಿ ಅವರು, ಬಡವರ ಕಲ್ಯಾಣದ ಬಗ್ಗೆ ಸರ್ಕಾರ ಗಮನ ಹರಿಸಿದೆ ಎಂದು ಪುನರುಚ್ಚರಿಸಿದರು.

ಶಾಶ್ವತ ಮನೆಗಳು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಬಡವರು ಘನತೆಯಿಂದ ವಂಚಿತರಾಗಿದ್ದ ಸಮಯವನ್ನು ಸ್ಮರಿಸಿದ ಮೋದಿ,  ಈ ಸ್ಥಿತಿಯೇ ಪ್ರಸ್ತುತ ಸರ್ಕಾರವು ಮನೆಗಳು ಮತ್ತು ಶೌಚಾಲಯ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಕಾರಣವಾಯಿತು ಎಂದರು. 10 ಕೋಟಿ 'ಗೌರವದ ಮನೆಗಳು' ಮತ್ತು 4 ಕೋಟಿ ಶಾಶ್ವತ ಮನೆಗಳನ್ನು ಸಮರೋಪಾದಿಯಲ್ಲಿ ಒದಗಿಸಲಾಯಿತು ಎಂದು ಮಾಹಿತಿ ನೀಡಿದರು.

ಜನರನ್ನು ದಾರಿ ತಪ್ಪಿಸುವ ಬದಲು, 'ಕಾರ್ಮಿಕರ ಘನತೆ', 'ಸ್ವಾವಲಂಬಿ ಕಾರ್ಮಿಕ' ಮತ್ತು 'ಬಡವರ ಕಲ್ಯಾಣ'ದ ಹಾದಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. "ನೀವು ದೊಡ್ಡ ಕನಸು ಕಾಣುತ್ತೀರಿ. ನಿಮ್ಮ ಕನಸುಗಳೇ ನನ್ನ ಸಂಕಲ್ಪ", ಎಂದು ಪ್ರಧಾನಿ ಭರವಸೆ ನೀಡಿದರು. ವಲಸೆ ಕಾರ್ಮಿಕರಿಗೆ ಕೈಗೆಟುಕುವ ನಗರ ಮನೆಗಳು ಮತ್ತು ʻನ್ಯಾಯಯುತ ಬಾಡಿಗೆ ಸಂಘʼಗಳನ್ನು ಅವರು ಉಲ್ಲೇಖಿಸಿದರು. "ಕೆಲಸದ ಸ್ಥಳಕ್ಕೆ ಹತ್ತಿರದಲ್ಲಿ ವಸತಿಗಳನ್ನು ಒದಗಿಸುವ ಪ್ರಯತ್ನಗಳನ್ನೂ ನಾವು ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

 

'ಶ್ರಮಿಕರ' ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೋಲಾಪುರ ನಗರವನ್ನು ಅಹ್ಮದಾಬಾದ್‌ನೊಂದಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ತಾವು ʻಪೂರ್ವಾಶ್ರಮʼದಲ್ಲಿದ್ದಾಗ ಸೋಲಾಪುರ ನಗರದೊಂದಿಗಿನ ತಮ್ಮ ನಂಟಿನ ಬಗ್ಗೆ ಒತ್ತಿ ಹೇಳಿದರು. ಈ ನಗರದ ಜೀವನ ಪರಿಸ್ಥಿತಿಗಳು ಕಳಪೆಯಾಗಿದ್ದರೂ, ಪದ್ಮಸಾಲಿ ಕುಟುಂಬಗಳು ತಮಗೆ ಆಹಾರವನ್ನು ಒದಗಿಸಿದವು ಎಂದು ಹೇಳಿದರು. ಪ್ರಧಾನಮಂತ್ರಿಯವರು ತಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಕೀಲ ಲಕ್ಷ್ಮಣರಾವ್ ಇನಾಂದಾರ್ ಅವರ ನೇಯ್ದ ಕಲಾಕೃತಿಯನ್ನು ತಮಗೆ ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿದರು. ಅದು ಇಂದಿಗೂ ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂದರು.

ನಿರ್ದಿಷ್ಟ ಉದ್ದೇಶ ಇಲ್ಲದಿರುವುದು ಮತ್ತು ಮಧ್ಯವರ್ತಿಗಳ ಕೊಳ್ಳೆ ಹೊಡೆಯುವಿಕೆಯಿಂದಾಗಿ ಹಿಂದಿನ ಬಡತನ ನಿರ್ಮೂಲನಾ ಕಾರ್ಯಕ್ರಮಗಳಲ್ಲಿ ಫಲಿತಾಂಶ ಕೊರತೆಯ ಬಗ್ಗೆ ಪ್ರಧಾನಿ ಗಮನಸೆಳೆದರು. ಸ್ಪಷ್ಟ ಉದ್ದೇಶ, ಬಡವರ ಸಬಲೀಕರಣಕ್ಕೆ ಅನುಕೂಲಕರವಾದ ನೀತಿಗಳು ಹಾಗೂ ರಾಷ್ಟ್ರದ ಬಗೆಗಿನ ಬದ್ಧತೆಯಿಂದಾಗಿ, “ಸರ್ಕಾರದ ಯೋಜನೆಗಳ ಲಾಭವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಖಾತರಿಯನ್ನು ಮೋದಿ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ, 30 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಮಹಿಳೆಯರು, ರೈತರು, ಯುವಕರು ಮತ್ತು ಬಡವರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ" ಎಂದು ಅವರು ಹೇಳಿದರು. ʻಜನಧನ್-ಆಧಾರ್-ಮೊಬೈಲ್ʼ(ಜೆಎಎಂ) ಎಂಬ ತ್ರಿವಳಿ ಶಕ್ತಿಯನ್ನು ಬಳಸಿಕೊಂಡು 10 ಕೋಟಿ ನಕಲಿ ಫಲಾನುಭವಿಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅನೇಕ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಬಡವರ ಕಲ್ಯಾಣಕ್ಕೆ ಆದ್ಯತೆ ನೀಡುವ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಿ, ಕಳೆದ 9 ವರ್ಷಗಳಲ್ಲಿ ದೇಶದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಮಾಹಿತಿ ನೀಡಿದರು. ಇದು 10 ವರ್ಷಗಳ ತಪಸ್ಸು ಮತ್ತು ಬಡವರ ಬಗೆಗಿನ ನಿಜವಾದ ಸಮರ್ಪಣೆಯ ಫಲವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಬಡತನದಿಂದ ಹೊರಬರಲು ಇತರರನ್ನು ಸಶಕ್ತಗೊಳಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.

 

ಬಡವರಿಗೆ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಿದರೆ ಅವರು ಬಡತನದಿಂದ ಹೊರಬರಬಹುದು ಎಂಬ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಹೀಗಾಗಿಯೇ, ಪ್ರಸ್ತುತ ಸರ್ಕಾರವು ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಿತು ಜೊತೆಗೆ, ಬಡವರ ಕಲ್ಯಾಣಕ್ಕಾಗಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿತು. ದಿನಕ್ಕೆ ಎರಡು ಹೊತ್ತಿನ ಊಟವೇ ಬಡವರಿಗೆ ದೊಡ್ಡ ಸಮಸ್ಯೆಯಾಗಿದ್ದ ದಿನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಯಾವುದೇ ಬಡ ವ್ಯಕ್ತಿ ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ಉಚಿತ ಪಡಿತರ ಯೋಜನೆಯನ್ನು ಉಲ್ಲೇಖಿಸಿದರು. ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಪ್ರಾರಂಭಿಸಲಾದ ಯೋಜನೆಯನ್ನು ಈಗ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಬಡತನದಿಂದ ಹೊರಬಂದ ಆ 25 ಕೋಟಿ ಜನರನ್ನು ಬೆಂಬಲಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಇದರಿಂದ ಅವರು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಬಡತನ ರೇಖೆಗಿಂತ ಕೆಳಗಿಳಿಯುವುದಿಲ್ಲ ಎಂದರು. "ಈ 25 ಕೋಟಿ ಜನರು ನನ್ನ ಸಂಕಲ್ಪವನ್ನು ಪೂರೈಸಲು ಸಮರ್ಪಣಾ ಭಾವದೊಂದಿಗೆ ಮುಂದುವರಿಯುತ್ತಿದ್ದಾರೆ ಮತ್ತು ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ," ಎಂದು ಪ್ರಧಾನಿ ಹೇಳಿದರು.

 

ʻಒನ್ ದೇಶ-ಒಂದು ಪಡಿತರ ಕಾರ್ಡ್‌ʼ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುತ್ತಿರುವವರಿಗೆ ನಿರಂತರವಾಗಿ ಪಡಿತರ ಪೂರೈಕೆಯನ್ನು ಖಾತರಿಪಡಿಸುತ್ತದೆ ಎಂದರು. ಜನರನ್ನು ಬಡತನಕ್ಕೆ ದೂಡುವುದರ ಜೊತೆಗೆ ಅವರನ್ನು ಬಡತನದ ವಿಷಮಚಕ್ರದಿಂದ ಹೊರಬರಲು ಕಷ್ಟವಾಗಿಸುವ ಪ್ರಮುಖ ಕಾರಣಗಳಲ್ಲಿ ವೈದ್ಯಕೀಯ ವೆಚ್ಚವೂ ಒಂದಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದನ್ನು ಪರಿಹರಿಸಲು, ಸರ್ಕಾರವು ʻಆಯುಷ್ಮಾನ್ ಕಾರ್ಡ್ʼ ಅನ್ನು ಹೊರತಂದಿದೆ. ಇದು 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ, ಜೊತೆಗೆ ವೈದ್ಯಕೀಯ ವೆಚ್ಚಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸುತ್ತದೆ. ಅಂತೆಯೇ, ʻಜನೌಷಧ ಕೇಂದ್ರʼದಲ್ಲಿ ಶೇಕಡಾ 80 ರಷ್ಟು ರಿಯಾಯಿತಿಯಲ್ಲಿ ಔಷಧಗಳು ಲಭ್ಯವಿದ್ದು, ಬಡ ರೋಗಿಗಳಿಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದೆ. ʻಜಲ ಜೀವನ್ ಮಿಷನ್ʼ ಯೋಜನೆಯು ಜನರನ್ನು ನೀರಿನಿಂದ ಹರಡುವ ರೋಗಗಳಿಂದ ರಕ್ಷಿಸುತ್ತಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. "ಬಡವರಿಗೆ ಶಾಶ್ವತ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ನೀರು ಮುಂತಾದ ಎಲ್ಲಾ ಸೌಲಭ್ಯಗಳು ಅವರಿಗೆ ಒದಗಿಸುವ ಸಾಮಾಜಿಕ ನ್ಯಾಯದ ಖಾತರಿಯಾಗಿದೆ," ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

“ಬಡವರಿಗೆ ಆರ್ಥಿಕ ಭದ್ರತೆ ಒದಗಿಸಬೇಕು. ಇದು ಕೂಡ ಮೋದಿ ಅವರ ಗ್ಯಾರಂಟಿ," ಎಂದು ಹೇಳಿದ ಪ್ರಧಾನಿ, 2 ಲಕ್ಷ ರೂ.ಗಳ ಅಪಘಾತ ವಿಮೆ ಹಾಗೂ ಜೀವ ವಿಮೆ ಯೋಜನೆಗಳ ಮೂಲಕ ಬಡವರಿಗೆ ಜೀವ ವಿಮಾ ಸೌಲಭ್ಯವನ್ನು ವಿಸ್ತರಿಸಿದ ಬಗ್ಗೆ ಉಲ್ಲೇಖಿಸಿದರು. ಬಡ ಕುಟುಂಬಗಳಿಗೆ ಅವರ ಅಗತ್ಯದ ಸಮಯದಲ್ಲಿ ವಿಮೆ ರೂಪದಲ್ಲಿ ಸುಮಾರು 16,000 ಕೋಟಿ ರೂ. ನೀಡಿದ ಬಗ್ಗೆ ಅವರು ಮಾಹಿತಿ ನೀಡಿದರು.

ಮೋದಿಯವರ ʻಗ್ಯಾರಂಟಿʼಯು ವರದಾನವಾಗುತ್ತಿದೆ, ಅದರಲ್ಲೂ ವಿಶೇಷವಾಗಿ ಬ್ಯಾಂಕ್ ಖಾತರಿ ಒದಗಿಸಲಾಗದವರಿಗೆ ಅತ್ಯಂತ ಉಪಯುಕ್ತವಾಗುತ್ತಿದೆ ಎಂದು ಹೇಳಿದರು. ಬ್ಯಾಂಕ್ ಖಾತೆಗಳನ್ನೇ ಹೊಂದಿರದವರ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಅಂಥವರು ಬ್ಯಾಂಕ್ ಸಾಲ ಪಡೆಯುವುದು ಅಸಾಧ್ಯವೇ ಸರಿ ಎಂದರು. ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ 50 ಕೋಟಿ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸಿದ ʻಜನಧನ್ʼ ಯೋಜನೆಯನ್ನು ಪ್ರಧಾನಿ ಪ್ರಸ್ತಾಪಿಸಿದರು ಮತ್ತು ʻಪಿಎಂ ಸ್ವನಿಧಿʼ ಅಡಿಯಲ್ಲಿ 10,000 ಫಲಾನುಭವಿಗಳು ಬ್ಯಾಂಕ್ ನೆರವು ಪಡೆದ ಇಂದಿನ ಸಂದರ್ಭವನ್ನು ಉಲ್ಲೇಖಿಸಿದರು. ಹೆಚ್ಚಿನ ಬಡ್ಡಿಯ ಸಾಲ ಪಡೆಯಲು ಮಾರುಕಟ್ಟೆಯತ್ತ ನೋಡಬೇಕಾಗಿದ್ದ ಬೀದಿ ಬದಿ ವ್ಯಾಪಾರಿಗಳು ಮತ್ತು ಇತರೆ ವ್ಯಾಪಾರಿಗಳಿಗೆ ಈಗ ಯಾವುದೇ ಅಡಮಾನ ಇಲ್ಲದೆ ಬ್ಯಾಂಕ್ ಸಾಲಗಳನ್ನು ನೀಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. "ಇಲ್ಲಿಯವರೆಗೆ, ಸಾವಿರಾರು ಕೋಟಿ ರೂ.ಗಳ ಸಾಲವನ್ನು ಅವರಿಗೆ ವಿತರಿಸಲಾಗಿದೆ," ಎಂದು ಅವರು ಹೇಳಿದರು.

ಸೋಲಾಪುರ ಕೈಗಾರಿಕಾ ನಗರವಾಗಿದೆ, ಕಾರ್ಮಿಕರ ನಗರವಾಗಿದೆ, ಜವಳಿಗಳಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಶಾಲಾ ಸಮವಸ್ತ್ರವನ್ನು ತಯಾರಿಸಲು ನಗರವು ಅತಿದೊಡ್ಡ ಸಣ್ಣ ಕೈಗಾರಿಕೆಗಳ ಕ್ಲಸ್ಟರ್ ಹೊಂದಿದೆ ಎಂದು ಮಾಹಿತಿ ನೀಡಿದರು. ಸಮವಸ್ತ್ರ ಹೊಲಿಗೆಯಲ್ಲಿ ತೊಡಗಿರುವ ಅಂತಹ ವಿಶ್ವಕರ್ಮರನ್ನು ಗಮನದಲ್ಲಿಟ್ಟುಕೊಂಡು, ಸಾಲ, ತರಬೇತಿ ಮತ್ತು ಆಧುನಿಕ ಉಪಕರಣಗಳನ್ನು ಒದಗಿಸಲು ಸರ್ಕಾರವು ʻಪಿಎಂ ವಿಶ್ವಕರ್ಮʼ ಯೋಜನೆಯನ್ನು ಹೊರತಂದಿದೆ. 'ಮೋದಿ ಅವರ ಗ್ಯಾರಂಟಿಯ ಗಾಡಿ' ದೇಶಾದ್ಯಂತ ಸುತ್ತುತ್ತಿದ್ದು, ಅರ್ಹ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ʻಆತ್ಮನಿರ್ಭರ ಭಾರತʼ ನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಅಭಿಯಾನದಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಪಾತ್ರವನ್ನು ಒತ್ತಿ ಹೇಳಿದರು. ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವ ಕ್ರಮಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ಸಾಂಕ್ರಾಮಿಕ ಸಮಯದಲ್ಲಿ ನೀಡಲಾದ ʻಪ್ಯಾಕೇಜ್ʼ ಮತ್ತು ʻಒಂದು ಜಿಲ್ಲೆ-ಒಂದು ಉತ್ಪನ್ನʼ ಯೋಜನೆಯ  ಆರಂಭವನ್ನು ಉಲ್ಲೇಖಿಸಿದರು. ʻವೋಕಲ್ ಫಾರ್ ಲೋಕಲ್ʼ ಮತ್ತು ʻಮೇಡ್ ಇನ್ ಇಂಡಿಯಾʼದಂತಹ ಅಭಿಯಾನಗಳಿಂದಾಗಿ, ಸುಧಾರಿತ ಸ್ಥಾನಮಾನದಿಂದಾಗಿ ಭಾರತೀಯ ಉತ್ಪನ್ನಗಳು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಪ್ರಸ್ತುತ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಪ್ರಧಾನಿ ಒತ್ತಿ ಹೇಳಿದರು. "ನಾನು ನಾಗರಿಕರಿಗೆ ಈ ಗ್ಯಾರಂಟಿ ನೀಡುತ್ತಿದ್ದೇನೆ, ಇದು ಸಹ ಈಡೇರುತ್ತದೆ," ಎಂದು ಅವರು ಒತ್ತಿ ಹೇಳಿದರು. ದೇಶದ ಆರ್ಥಿಕ ವಿಸ್ತರಣೆಯಲ್ಲಿ ಸೋಲಾಪುರದಂತಹ ಅನೇಕ ನಗರಗಳ ಪಾತ್ರವನ್ನು ಅವರು ಎತ್ತಿ ತೋರಿದರು ಮತ್ತು ಈ ನಗರಗಳಲ್ಲಿ ನೀರು ಮತ್ತು ಒಳಚರಂಡಿಯಂತಹ ಸೌಲಭ್ಯಗಳನ್ನು ನಿರಂತರವಾಗಿ ಸುಧಾರಿಸಿದ್ದಕ್ಕಾಗಿ ಡಬಲ್ ಎಂಜಿನ್ ಸರ್ಕಾರವನ್ನು ಶ್ಲಾಘಿಸಿದರು. ಉತ್ತಮ ರಸ್ತೆಗಳು, ರೈಲ್ವೆ ಮತ್ತು ವಾಯುಮಾರ್ಗಗಳೊಂದಿಗೆ ನಗರಗಳನ್ನು ಸಂಪರ್ಕಿಸುವ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. "ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗವೇ ಇರಲಿ, ಅಥವಾ ಸಂತ ತುಕಾರಾಮ್ ಪಾಲ್ಖಿ ಮಾರ್ಗವೇ ಆಗಿರಲಿ, ಇವುಗಳ ಕೆಲಸವೂ ವೇಗವಾಗಿ ನಡೆಯುತ್ತಿದೆ. ರತ್ನಗಿರಿ, ಕೊಲ್ಹಾಪುರ ಮತ್ತು ಸೋಲಾಪುರ ನಡುವಿನ ಚತುಷ್ಪಥ ಹೆದ್ದಾರಿಯ ಕಾಮಗಾರಿಯೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ," ಎಂದು ಅವರು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಸರ್ಕಾರಕ್ಕೆ ಜನರ ಆಶೀರ್ವಾದ ಮುಂದುವರಿಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇಂದು ಶಾಶ್ವತ ಮನೆಗಳನ್ನು ಪಡೆದ ಫಲಾನುಭವಿಗಳನ್ನು ಪ್ರಧಾನಿ ಅಭಿನಂದಿಸಿದರು.

 

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ಹಾಗೂ ರಾಯನಗರ ಒಕ್ಕೂಟದ ಸಂಸ್ಥಾಪಕ ಶ್ರೀ ನರಸಯ್ಯ ಆದಂ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Income inequality declining with support from Govt initiatives: Report

Media Coverage

Income inequality declining with support from Govt initiatives: Report
NM on the go

Nm on the go

Always be the first to hear from the PM. Get the App Now!
...
Chairman and CEO of Microsoft, Satya Nadella meets Prime Minister, Shri Narendra Modi
January 06, 2025

Chairman and CEO of Microsoft, Satya Nadella met with Prime Minister, Shri Narendra Modi in New Delhi.

Shri Modi expressed his happiness to know about Microsoft's ambitious expansion and investment plans in India. Both have discussed various aspects of tech, innovation and AI in the meeting.

Responding to the X post of Satya Nadella about the meeting, Shri Modi said;

“It was indeed a delight to meet you, @satyanadella! Glad to know about Microsoft's ambitious expansion and investment plans in India. It was also wonderful discussing various aspects of tech, innovation and AI in our meeting.”