ಫಲಾನುಭವಿಗಳಿಗೆ ಸಿಕಲ್ ಸೆಲ್ ಜೆನೆಟಿಕ್ ಸ್ಥಿತಿಗತಿ ಕಾರ್ಡ್ ಗಳನ್ನು ವಿತರಿಸಿದರು
ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ ಎಬಿ-ಪಿ ಎಂ ಜೆ ಎ ವೈ ಕಾರ್ಡ್ ಗಳ ವಿತರಣೆಗೆ ಚಾಲನೆ ನೀಡಿದರು
ರಾಣಿ ದುರ್ಗಾವತಿಯವರ 500ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲಾಗುವುದು
"ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಅಭಿಯಾನವು ಅಮೃತ ಕಾಲದ ಪ್ರಮುಖ ಧ್ಯೇಯವಾಗಲಿದೆ"
"ನಮಗೆ, ಆದಿವಾಸಿ ಸಮುದಾಯವು ಕೇವಲ ಮತದಾರರ ಸಂಖ್ಯೆಯಲ್ಲ, ಹೆಚ್ಚಿನ ಸೂಕ್ಷ್ಮತೆ ಮತ್ತು ಭಾವನೆಯ ವಿಷಯವಾಗಿದೆ"
"ನಿಯತ್ ಮೇ ಖೋತ್ ಔರ್ ಗರೀಬ್ ಪರ್ ಚೋತ್ (ದುಷ್ಟ ಉದ್ದೇಶಗಳು ಮತ್ತು ಬಡವರನ್ನು ನೋಯಿಸುವ ಪ್ರವೃತ್ತಿ) ಯ ಜನರು ನೀಡುತ್ತಿರುವ ಸುಳ್ಳು ಗ್ಯಾರಂಟಿಗಳ ಬಗ್ಗೆ ಎಚ್ಚರದಿಂದಿರಿ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಶಾಹದೋಲ್ನಲ್ಲಿ ರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿವಾರಣೆ ಮಿಷನ್ ಗೆ ಚಾಲನೆ ನೀಡಿದರು ಮತ್ತು ಫಲಾನುಭವಿಗಳಿಗೆ ಸಿಕಲ್ ಸೆಲ್ ಜೆನೆಟಿಕ್ ಸ್ಥಿತಿ ಕಾರ್ಡ್ ಗಳನ್ನು ವಿತರಿಸಿದರು. ಪ್ರಧಾನಮಂತ್ರಿಯವರು ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿ ಎಂ ಜೆ ಎ ವೈ) ಕಾರ್ಡ್ ಗಳ ವಿತರಣೆಗೂ ಚಾಲನೆ ನೀಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ, 16 ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾವನ್ನು ಆಳಿದ ರಾಣಿ ದುರ್ಗಾವತಿ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ರಾಣಿ ದುರ್ಗಾವತಿಯವರಿಗೆ ಗೌರವ ಸಮರ್ಪಿಸಿದರು ಮತ್ತು ಅವರ ಪ್ರೇರಣೆಯಿಂದ ಇಂದು ರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನಾ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು. ಮಧ್ಯಪ್ರದೇಶದ ಜನರಿಗೆ 1 ಕೋಟಿ ಆಯುಷ್ಮಾನ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಗೊಂಡ್, ಭಿಲ್ ಮತ್ತು ಇತರ ಆದಿವಾಸಿ ಸಮಾಜಗಳ ಜನರು ಎರಡು ಪ್ರಮುಖ ಯೋಜನೆಗಳ ದೊಡ್ಡ ಫಲಾನುಭವಿಗಳಾಗಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಅವರು ಮಧ್ಯಪ್ರದೇಶದ ಜನರು ಮತ್ತು ಡಬಲ್ ಇಂಜಿನ್ ಸರ್ಕಾರವನ್ನು ಅಭಿನಂದಿಸಿದರು.

ಇಂದು, ಶಾಹದೋಲ್ ನೆಲದಿಂದ, ಬುಡಕಟ್ಟು ಸಮುದಾಯಗಳ ಜನರ ಜೀವನವನ್ನು ಸುರಕ್ಷಿತಗೊಳಿಸುವ, ಸಿಕಲ್ ಸೆಲ್ ರಕ್ತಹೀನತೆಯಿಂದ ಮುಕ್ತಿ ನೀಡುವ ಸಂಕಲ್ಪದ ಮತ್ತು ರೋಗದಿಂದ ಸಂತ್ರಸ್ತವಾಗಿರುವ 2.5 ಲಕ್ಷ ಮಕ್ಕಳು ಮತ್ತು ಕುಟುಂಬಗಳ ಜೀವಗಳನ್ನು ಉಳಿಸುವ ದೊಡ್ಡ ಪ್ರತಿಜ್ಞೆಯನ್ನು ರಾಷ್ಟ್ರವು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಬುಡಕಟ್ಟು ಸಮುದಾಯಗಳೊಂದಿಗಿನ ತಮ್ಮ ವೈಯಕ್ತಿಕ ಅನುಭವವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಸಿಕಲ್ ಸೆಲ್ ರಕ್ತಹೀನತೆಯ ನೋವಿನ ಲಕ್ಷಣಗಳು ಮತ್ತು ಆನುವಂಶಿಕ ಮೂಲವನ್ನು ಒತ್ತಿ ಹೇಳಿದರು. 

ಕಳೆದ 70 ವರ್ಷಗಳಿಂದ ಸಿಕಲ್ ಸೆಲ್ ರಕ್ತಹೀನತೆ ಸಮಸ್ಯೆಯ ಬಗ್ಗೆ ಯಾವುದೇ ಗಮನ ಹರಿಸಿರಲಿಲ್ಲ ಎಂದು ಪ್ರಧಾನಿ ವಿಷಾದಿಸಿದರು, ಆದರೆ ವಿಶ್ವದ 50 ಪ್ರತಿಶತಕ್ಕೂ ಹೆಚ್ಚು ಸಿಕಲ್ ಸೆಲ್ ರಕ್ತಹೀನತೆ ಪ್ರಕರಣಗಳು ಭಾರತದಲ್ಲಿಯೇ ಉದ್ಭವಿಸುತ್ತವೆ. ಆದಿವಾಸಿಗಳ ಬಗ್ಗೆ ಹಿಂದಿನ ಸರ್ಕಾರಗಳ  ತೋರಿದ ಅಸಡ್ಡೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಈಗಿನ ಸರ್ಕಾರ ಇದಕ್ಕೆ ಪರಿಹಾರ ಹುಡುಕಲು ಮುಂದಾಗಿದೆ ಎಂದು ಹೇಳಿದರು. ಈಗಿನ ಸರಕಾರಕ್ಕೆ ಆದಿವಾಸಿ ಸಮುದಾಯವು ಕೇವಲ ಮತದಾರರ ಸಂಖ್ಯೆಯಾಗಿರದೆ ಅದು ಅತ್ಯಂತ ಸೂಕ್ಷ್ಮತೆ ಮತ್ತು ಭಾವನೆಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ಮಧ್ಯಪ್ರದೇಶದ ಈಗಿನ ರಾಜ್ಯಪಾಲರಾದ ಶ್ರೀ ಮಂಗುಭಾಯ್ ಸಿ ಪಟೇಲ್ ಮತ್ತು ತಾವು ಗುಜರಾತಿನ ಮುಖ್ಯಮಂತ್ರಿಯಾಗುವ ಮೊದಲೇ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿದ್ದೆವು ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಗುಜರಾತ್ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ವಿವಿಧ ಅಭಿಯಾನಗಳನ್ನು ಆರಂಭಿಸಿದ್ದನ್ನು ಅವರು ಸ್ಮರಿಸಿದರು. ಭಾರತದ ಪ್ರಧಾನಿಯಾಗಿ ಜಪಾನ್ ಗೆ ಭೇಟಿ ನೀಡಿದಾಗ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯಿಂದ ಸಹಾಯ ಪಡೆದ ಬಗ್ಗೆ ಅವರು ಮತ್ತಷ್ಟು ಮಾಹಿತಿ ನೀಡಿದರು.

ಸಿಕಲ್ ಸೆಲ್ ರಕ್ತಹೀನತೆ ನಿವಾರಣೆಯ ಈ ಅಭಿಯಾನವು ಅಮೃತ ಕಾಲದ ಪ್ರಮುಖ ಧ್ಯೇಯವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2047 ರ ವೇಳೆಗೆ ಬುಡಕಟ್ಟು ಸಮುದಾಯಗಳು ಮತ್ತು ದೇಶವನ್ನು ಸಿಕಲ್ ಸೆಲ್ ರಕ್ತಹೀನತೆಯಿಂದ ಮುಕ್ತಗೊಳಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು. ಸರ್ಕಾರ, ಆರೋಗ್ಯ ಸಿಬ್ಬಂದಿ ಮತ್ತು ಬುಡಕಟ್ಟು ಜನಾಂಗದವರ ಸಮನ್ವಯ ವಿಧಾನದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ರೋಗಿಗಳಿಗೆ ರಕ್ತನಿಧಿಗಳನ್ನು ಸ್ಥಾಪಿಸಲಾಗುತ್ತಿದೆ, ಅಸ್ಥಿಮಜ್ಜೆಯ ಕಸಿ ವ್ಯವಸ್ಥೆಯನ್ನು ಹೆಚ್ಚಿಸಲಾಗುತ್ತಿದೆ ಮತ್ತು ಸಿಕಲ್ ಸೆಲ್ ರಕ್ತಹೀನತೆ ತಪಾಸಣೆಯನ್ನು ಪರಿಷ್ಕರಿಸಲಾಗುತ್ತಿದೆ. ಜನರು ತಪಾಸಣೆಗೆ ಮುಂದೆ ಬರಬೇಕು ಎಂದು ಅವರು ಹೇಳಿದರು. 

ರೋಗವು ಕುಟುಂಬವನ್ನು ಸಂಕಷ್ಟದ ಜಾಲಕ್ಕೆ ತಳ್ಳುವುದರಿಂದ ಇಡೀ ಕುಟುಂಬವು ಬಾಧಿತವಾಗುತ್ತದೆ ಎಂದು ಪ್ರಧಾನಿ ಹೇಳಿದರು. ತಮ್ಮ ಬಡತನದ ಹಿನ್ನೆಲೆಯನ್ನು ಉಲ್ಲೇಖಿಸಿದ ಪ್ರಧಾನಿ, ಸರ್ಕಾರಕ್ಕೆ ಇದರ ನೋವು ತಿಳಿದಿದೆ ಮತ್ತು ರೋಗಿಗಳಿಗೆ ಸಹಾಯ ಮಾಡುವಲ್ಲಿ ಸಂವೇದನಾಶೀಲವಾಗಿದೆ ಎಂದು ಹೇಳಿದರು. ಈ ಪ್ರಯತ್ನಗಳು ಕ್ಷಯ ರೋಗ ಪ್ರಕರಣಗಳನ್ನು ಕಡಿಮೆ ಮಾಡಿದೆ ಮತ್ತು 2025 ರ ವೇಳೆಗೆ ಕ್ಷಯ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ದೇಶವು ಕೆಲಸ ಮಾಡುತ್ತಿದೆ ಎಂದರು. ವಿವಿಧ ರೋಗಗಳ ಅಂಕಿಅಂಶಗಳನ್ನು ನೀಡಿದ ಪ್ರಧಾನಿ, 2013 ರಲ್ಲಿ 11,000 ಕಾಲಾ ಅಜರ್ ಪ್ರಕರಣಗಳು ಇದ್ದವು, ಈಗ ಅವುಗಳನ್ನು ಸಾವಿರಕ್ಕಿಂತ ಕಡಿಮೆ ಮಾಡಲಾಗಿದೆ ಎಂದು ಹೇಳಿದರು. 2013 ರಲ್ಲಿ 10 ಲಕ್ಷ ಮಲೇರಿಯಾ ಪ್ರಕರಣಗಳು ಇದ್ದವು ಈಗ 2022 ರಲ್ಲಿ 2 ಲಕ್ಷಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಕುಷ್ಠರೋಗ ಪ್ರಕರಣಗಳು 1.25 ಲಕ್ಷದಿಂದ 70-75 ಸಾವಿರಕ್ಕೆ ಇಳಿದಿವೆ ಎಂದು ಹೇಳಿದರು. 

"ಈಗಿನ ಸರ್ಕಾರವು ಕಾಯಿಲೆಗಳನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಕಾಯಿಲೆಯ ವೆಚ್ಚವನ್ನು ಕಡಿಮೆ ಮಾಡಲೂ ಸಹ ಶ್ರಮಿಸುತ್ತಿದೆ" ಎಂದು ಪ್ರಧಾನಮಂತ್ರಿ ಅವರು ಆಯುಷ್ಮಾನ್ ಭಾರತ್ ಯೋಜನೆಯನ್ನು ಉದಾಹರಿಸಿದರು. ಈ ಯೋಜನೆಯು ವೈದ್ಯಕೀಯ ವೆಚ್ಚಗಳಿಂದಾಗಿ ಜನರ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇಂದು 1 ಕೋಟಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಬೇಕಾದ ಬಡವರಿಗೆ 5 ಲಕ್ಷ ರೂಪಾಯಿ ಮೌಲ್ಯದ ಎಟಿಎಂ ಕಾರ್ಡ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. "ಭಾರತದ ಯಾವುದೇ ಭಾಗವಾಗಿರಲಿ, ನೀವು ಅವರಿಗೆ ಈ ಕಾರ್ಡ್ ತೋರಿಸಬಹುದು ಮತ್ತು 5 ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸೆ ಪಡೆಯಬಹುದು" ಎಂದು ಶ್ರೀ ಮೋದಿ ಹೇಳಿದರು.

ಇಡೀ ದೇಶದಲ್ಲಿ ಆಯುಷ್ಮಾನ್ ಯೋಜನೆಯಡಿ ಸುಮಾರು 5 ಕೋಟಿ ರೋಗಿಗಳು ಉಚಿತ ಚಿಕಿತ್ಸೆ ಪಡೆದುಕೊಂಡಿದ್ದು, ರೋಗಿಗಳ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಉಳಿತಾಯವಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ಆಯುಷ್ಮಾನ್ ಕಾರ್ಡ್ ಬಡವರ ದೊಡ್ಡ ಚಿಂತೆಯನ್ನು ಹೋಗಲಾಡಿಸುವ ಗ್ಯಾರಂಟಿಯಾಗಿದೆ. ಈ ಹಿಂದೆ ಯಾರೂ ಈ 5 ಲಕ್ಷ ರೂಪಾಯಿ ಗ್ಯಾರಂಟಿ ನೀಡಿರಲ್ಲ, ಈ ಸರ್ಕಾರ, ಈ ಮೋದಿ ಈ ಗ್ಯಾರಂಟಿ ಕೊಟ್ಟಿದ್ದಾರೆ”ಎಂದು ಪ್ರಧಾನಿ ಹೇಳಿದರು. 

ಸುಳ್ಳು ಗ್ಯಾರಂಟಿಗಳನ್ನು ನೀಡುತ್ತಿರುವವರ ಬಗ್ಗೆ ಎಚ್ಚರಿಕೆ ನೀಡಿದ ಪ್ರಧಾನಿ, ಅವರ ಕುಟಿಲತೆಗಳನ್ನು ಗುರುತಿಸುವಂತೆ ಜನರಿಗೆ ತಿಳಿಸಿದರು. ಉಚಿತ ವಿದ್ಯುತ್ ಗ್ಯಾರಂಟಿಯನ್ನು ಉಲ್ಲೇಖಿಸಿದ ಪ್ರಧಾನಿ, ಇದು ವಿದ್ಯುತ್ ವೆಚ್ಚ ಹೆಚ್ಚಾಗುವುದನ್ನು ಸೂಚಿಸುತ್ತದೆ ಎಂದು ಹೇಳಿದರು. ಅದೇ ರೀತಿ ಸರ್ಕಾರವು ಉಚಿತ ಪ್ರಯಾಣಗಳನ್ನು ನೀಡುತ್ತಿದೆ ಎಂದರೆ ರಾಜ್ಯದ ಸಾರಿಗೆ ವ್ಯವಸ್ಥೆಯು ನಾಶವಾಗಲಿದೆ ಎಂದರ್ಥ, ಹೆಚ್ಚಿನ ಪಿಂಚಣಿ ಭರವಸೆಗಳನ್ನು ನೀಡಿದಾಗ, ನೌಕರರ ಸಂಬಳ ವಿಳಂಬವಾಗುತ್ತದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಅಗ್ಗದ ಪೆಟ್ರೋಲ್ ಬೆಲೆಗಳ ಬಗ್ಗೆ ಪ್ರಸ್ತಾಪಿಸಿದ ಅವರು ಇದು ಜನರಿಗೆ ಹೆಚ್ಚಿನ ತೆರಿಗೆಯನ್ನು ಹೊರಿಸುತ್ತದೆ ಎಂದು ಹೇಳಿದರು. ಉದ್ಯೋಗದ ಭರವಸೆಗಳ ಮೇಲೆ, ಹೊಸದಾಗಿ ಜಾರಿಗೆ ತರುವ ನೀತಿಗಳು ರಾಜ್ಯದಲ್ಲಿನ ಕೈಗಾರಿಕೆಗಳನ್ನು ನಾಶಪಡಿಸುವುದು ಖಚಿತ ಎಂದು ಪ್ರಧಾನಿ ಹೇಳಿದರು. ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, “ಕೆಲವು ರಾಜಕೀಯ ಪಕ್ಷಗಳ ಅರ್ಥ ‘ನಿಯತ್ ಮೇ ಖೋತ್ ಔರ್ ಗರೀಬ್ ಪರ್ ಚೋತ್’(ದುಷ್ಟ ಉದ್ದೇಶಗಳು ಮತ್ತು ಬಡವರಿಗೆ ನೋವುಂಟು ಮಾಡುವ ಪ್ರವೃತ್ತಿ) ಎಂದಾಗಿದೆ. ಕಳೆದ 70 ವರ್ಷಗಳಲ್ಲಿ, ಹಿಂದಿನ ಸರ್ಕಾರಗಳಿಗೆ ಬಡವರಿಗೆ ಆಹಾರವನ್ನು ನೀಡಲು ಸಾಧ್ಯವಾಗಲಿಲ್ಲ, ಆದರೆ ಪ್ರಸ್ತುತ ಸರ್ಕಾರವು ಗರೀಬ್ ಕಲ್ಯಾಣ ಯೋಜನೆ ಮೂಲಕ 80 ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳ ಖಾತರಿಯನ್ನು ನೀಡುತ್ತಿದೆ. ಆಯುಷ್ಮಾನ್ ಯೋಜನೆ ಮೂಲಕ 50 ಕೋಟಿ ಫಲಾನುಭವಿಗಳಿಗೆ ಆರೋಗ್ಯ ಭದ್ರತೆ, ಉಜ್ವಲ ಯೋಜನೆಯ 10 ಕೋಟಿ ಮಹಿಳಾ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ, ಮುದ್ರಾ ಯೋಜನೆಯ ಮೂಲಕ 8.5 ಕೋಟಿ ಫಲಾನುಭವಿಗಳಿಗೆ ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹಿಂದಿನ ಸರ್ಕಾರಗಳ ಬುಡಕಟ್ಟು ಜನರ ವಿರೋಧಿ ನೀತಿಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬುಡಕಟ್ಟು ವಿದ್ಯಾರ್ಥಿಗಳ ಮುಂದಿರುವ ಭಾಷೆಯ ಸವಾಲನ್ನು ಪರಿಹರಿಸಿದೆ ಎಂದು ಪ್ರಧಾನಿ ಹೇಳಿದರು. ಸುಳ್ಳು ಭರವಸೆ ನೀಡುವ ಜನರು ಎನ್ ಇ ಪಿ ಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ಬುಡಕಟ್ಟು ಮಕ್ಕಳಿಗೆ ವಸತಿ ಶಿಕ್ಷಣವನ್ನು ಒದಗಿಸುತ್ತಿರುವ 400 ಕ್ಕೂ ಹೆಚ್ಚು ಹೊಸ ಏಕಲವ್ಯ ಶಾಲೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಇಂತಹ 24,000 ವಿದ್ಯಾರ್ಥಿಗಳು ಮಧ್ಯಪ್ರದೇಶ ಒಂದರಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. 

ಹಿಂದಿನವರ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ, ಪ್ರಸ್ತುತ ಸರ್ಕಾರವು ಬುಡಕಟ್ಟು ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವ ಮೂಲಕ ಮತ್ತು ಸಚಿವಾಲಯದ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಬುಡಕಟ್ಟು ಸಮುದಾಯಗಳಿಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಅರಣ್ಯ ಹಕ್ಕು ಕಾಯ್ದೆಯಡಿ 20 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಹಿಂದಿನವರ ಲೂಟಿಗಿಂತ ಭಿನ್ನವಾಗಿ, ಬುಡಕಟ್ಟು ಸಮುದಾಯಗಳಿಗೆ ಅವರ ಹಕ್ಕುಗಳನ್ನು ನೀಡಲಾಗಿದೆ ಮತ್ತು ಅವರ ಸಂಪ್ರದಾಯಗಳನ್ನು ಆದಿ ಮಹೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಗೌರವಿಸಲಾಗಿದೆ ಎಂದು ಶ್ರೀ ಮೋದಿ ತಿಳಿಸಿದರು.

ಆದಿವಾಸಿಗಳ ಪರಂಪರೆಯನ್ನು ಗೌರವಿಸುವುದರ ಬಗ್ಗೆ ಮಾತು ಮುಂದುವರಿಸಿದ ಪ್ರಧಾನಿಯವರು ಕಳೆದ 9 ವರ್ಷಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ 15 ನವೆಂಬರ್ ಅನ್ನು ಜನಜಾತೀಯಯ ಗೌರವ ದಿವಸ್ ಎಂದು ಘೋಷಿಸಿರುವುದು ಮತ್ತು ವಿವಿಧ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾಗಿರುವ ವಸ್ತುಸಂಗ್ರಹಾಲಯಗಳಂತಹ ಕ್ರಮಗಳನ್ನು ಅವರು ಪಟ್ಟಿ ಮಾಡಿದರು. ಭಾರತದ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯ ಆಯ್ಕೆಯ ಬಗ್ಗೆ ಅನೇಕ ರಾಜಕೀಯ ಪಕ್ಷಗಳ ಧೋರಣೆಯ ಬಗ್ಗೆ ಅವರು ಗಮನ ಸೆಳೆದರು. ಬುಡಕಟ್ಟು ಪ್ರದೇಶಗಳಲ್ಲಿಯೂ ಸಹ ಸಂಸ್ಥೆಗಳಿಗೆ ಒಂದೇ ಕುಟುಂಬದವರ ಹೆಸರನ್ನು ಇಡುತ್ತಿದ್ದ  ಹಿಂದಿನ ಅಭ್ಯಾಸವನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು ಮತ್ತು ಶಿವರಾಜ್ ಸಿಂಗ್ ಸರ್ಕಾರವು ಚಿಂದ್ವಾರ ವಿಶ್ವವಿದ್ಯಾಲಯಕ್ಕೆ ಮಹಾನ್ ಗೊಂಡ ಕ್ರಾಂತಿಕಾರಿ ರಾಜ ಶಂಕರ್ ಶಾ ಅವರ ಹೆಸರನ್ನು ಇಟ್ಟಿದೆ ಮತ್ತು ಪಾತಾಳಪಾನಿ ನಿಲ್ದಾಣಕ್ಕೆ ತಾಂತ್ಯ ಮಾಮಾ ಅವರ ಹೆಸರನ್ನು ಇಡಲಾಗಿದೆ ಎಂದು ಉದಾಹರಿಸಿದರು. ಶ್ರೀ ದಲ್ವೀರ್ ಸಿಂಗ್ ಅವರಂತಹ ಗೊಂಡ ನಾಯಕರ ಬಗೆಗಿನ ನಿರ್ಲಕ್ಷ್ಯ ಮತ್ತು ಅಗೌರವವನ್ನು ಪ್ರಸ್ತುತ ಸರ್ಕಾರ ಸರಿಪಡಿಸಿದೆ ಎಂದು ಅವರು ಹೇಳಿದರು.

ರಾಣಿ ದುರ್ಗಾವತಿಯವರ 500 ನೇ ಜನ್ಮ ದಿನಾಚರಣೆಯನ್ನು ಭಾರತ ಸರ್ಕಾರವು ರಾಷ್ಟ್ರ ಮಟ್ಟದಲ್ಲಿ ಆಚರಿಸಲಿದೆ ಎಂದು ಪ್ರಧಾನಿ ಘೋಷಿಸಿದರು. ಆಕೆಯ ಜೀವನ ಕುರಿತು ಚಲನಚಿತ್ರವನ್ನು ನಿರ್ಮಿಸಲಾಗುವುದು ಮತ್ತು ಅವರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು. 

ಈ ಪ್ರಯತ್ನಗಳನ್ನು ಇನ್ನಷ್ಟು ಮುಂದುವರಿಸಲು ಜನರ ಸಹಕಾರ ಮತ್ತು ಆಶೀರ್ವಾದವನ್ನು ಪ್ರಧಾನಿ ಕೋರಿದರು. ರಾಣಿ ದುರ್ಗಾವತಿಯವರ ಆಶೀರ್ವಾದ ಮತ್ತು ಸ್ಫೂರ್ತಿಯಿಂದ ಮಧ್ಯಪ್ರದೇಶವು ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಲು ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಒಟ್ಟಾಗಿ ನನಸಾಗಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿಯವರು ತಮ್ಮ ಭಾಷಣ ಮುಕ್ತಾಯ ಮಾಡಿದರು.

ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯ್ ಸಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ, ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಡಾ ಮನ್ಸುಖ್ ಮಾಂಡವಿಯಾ, ಕೇಂದ್ರದ ರಾಜ್ಯ ಸಚಿವರು, ಸಂಸದರು, ಮಧ್ಯಪ್ರದೇಶ ಸರ್ಕಾರದ ಸಚಿವರು ಮತ್ತು ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವಿಶೇಷವಾಗಿ ಬುಡಕಟ್ಟು ಜನಸಂಖ್ಯೆಯಲ್ಲಿ ಸಿಕೆಲ್ ಸೆಲ್ ಕಾಯಿಲೆಯಿಂದ ಉಂಟಾಗುವ ಆರೋಗ್ಯ ಸವಾಲುಗಳನ್ನು ಎದುರಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. 2047 ರ ವೇಳೆಗೆ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಸಿಕೆಲ್ ಸೆಲ್ ರೋಗವನ್ನು ತೊಡೆದುಹಾಕಲು ಸರ್ಕಾರದ ನಿರಂತರ ಪ್ರಯತ್ನಗಳಲ್ಲಿ ಈ ಅಭಿಯಾನವು ನಿರ್ಣಾಯಕ ಮೈಲಿಗಲ್ಲಾಗುತ್ತದೆ. ರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನೆ ಮಿಷನ್ ಅನ್ನು 2023 ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಯಿತು. ಇದನ್ನು ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡ ರಾಜ್ಯಗಳನ್ನು ಕೇಂದ್ರೀಕರಿಸಿ ದೇಶದ 17 ರಾಜ್ಯಗಳ 278 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು.  

ಪ್ರಧಾನಮಂತ್ರಿಯವರು ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂ ಜೆ ಎ ವೈ) ಕಾರ್ಡ್ಗಳ ವಿತರಣೆಗೆ ಚಾಲನೆ ನೀಡಿದರು. ಆಯುಷ್ಮಾನ್ ಕಾರ್ಡ್ ವಿತರಣೆ ಸಮಾರಂಭವನ್ನು ರಾಜ್ಯಾದ್ಯಂತ ನಗರ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಅಭಿವೃದ್ಧಿ ಬ್ಲಾಕ್ಗಳಲ್ಲಿ ಆಯೋಜಿಸಲಾಗಿದೆ. ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನವು ಕಲ್ಯಾಣ ಯೋಜನೆಗಳ 100 ಪ್ರತಿಶತದಷ್ಟು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಬ್ಬ ಫಲಾನುಭವಿಯನ್ನು ತಲುಪುವ ಪ್ರಧಾನ ಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ.

ಕಾರ್ಯಕ್ರಮದ ಸಂದರ್ಭದಲ್ಲಿ, 16 ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾವನ್ನು ಆಳಿದ ರಾಣಿ ರಾಣಿ ದುರ್ಗಾವತಿ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು. ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ, ನಿರ್ಭೀತ ಮತ್ತು ಧೈರ್ಯಶಾಲಿ ಯೋಧೆ ಎಂದು ಅವರನ್ನು ಸ್ಮರಿಸಲಾಗುತ್ತದೆ. 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”