ಪುರಿ ಮತ್ತು ಹೌರಾ ನಡುವೆ ʻವಂದೇ ಭಾರತ್ ಎಕ್ಸ್ಪ್ರೆಸ್ʼಗೆ ಹಸಿರು ನಿಶಾನೆ
ಒಡಿಶಾದಲ್ಲಿ ರೈಲು ಸಂಪರ್ಕ ಜಾಲದ 100% ವಿದ್ಯುದ್ದೀಕರಣ ರಾಷ್ಟ್ರಕ್ಕೆ ಸಮರ್ಪಣೆ
ಪುರಿ ಮತ್ತು ಕಟಕ್ ರೈಲ್ವೆ ನಿಲ್ದಾಣಗಳ ಪುನರಭಿವೃದ್ಧಿಗೆ ಶಂಕುಸ್ಥಾಪನೆ
"ವಂದೇ ಭಾರತ್ ರೈಲು ಚಲಿಸಿದಾಗಲೆಲ್ಲಾ ಭಾರತದ ವೇಗ ಮತ್ತು ಪ್ರಗತಿಯನ್ನು ನೋಡಬಹುದು"
"ಭಾರತೀಯ ರೈಲ್ವೆ ಎಲ್ಲರನ್ನೂ ಸಂಪರ್ಕಿಸುತ್ತದೆ ಮತ್ತು ಬೆಸೆಯುತ್ತದೆ"
"ಅತ್ಯಂತ ಪ್ರತಿಕೂಲ ಜಾಗತಿಕ ಪರಿಸ್ಥಿತಿಗಳ ಹೊರತಾಗಿಯೂ ಭಾರತವು ತನ್ನ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಂಡಿದೆ"
"ನವ ಭಾರತವು ಸ್ಥಳೀಯವಾಗಿ ತಂತ್ರಜ್ಞಾನವನ್ನು ಸೃಷ್ಟಿಸುತ್ತಿದೆ ಮತ್ತು ಅದನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುತ್ತಿದೆ"
"ರೈಲು ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸಿದ ದೇಶದ ರಾಜ್ಯಗಳಲ್ಲಿ ಒಡಿಶಾ ಕೂಡ ಒಂದು"
"ಮೂಲಸೌಕರ್ಯವು ಜನರ ಜೀವನವನ್ನು ಸುಲಭಗೊಳಿಸುವುದಲ್ಲದೆ ಸಮಾಜವನ್ನು ಸಶಕ್ತಗೊಳಿಸುತ್ತದೆ"
"ದೇಶವು 'ಜನಸೇವಾ ಹೀ ಪ್ರಭು ಸೇವಾ' ಎಂಬ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತಿದೆ - ಜನರ ಸೇವೆಯೇ ದೇವರ ಸೇವೆಯಾಗಿದೆ"
"ಭಾರತದ ತ್ವರಿತ ಅಭಿವೃದ್ಧಿಗೆ ರಾಜ್ಯಗಳ ಸಮತೋಲಿತ ಅಭಿವೃದ್ಧಿ ಅತ್ಯಗತ್ಯ"
"ಒಡಿಶಾ ನೈಸರ್ಗಿಕ ವಿಪತ್ತುಗಳನ್ನು ಯಶಸ್ವಿಯಾಗಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಡಿಶಾದಲ್ಲಿ 8000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ/ಲೋಕಾರ್ಪಣೆ  ನೆರವೇರಿಸಿದರು. ಪುರಿ ಮತ್ತು ಹೌರಾ ನಡುವಿನ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼಗೆ ಹಸಿರು ನಿಶಾನೆ, ಪುರಿ ಮತ್ತು ಕಟಕ್ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ, ಒಡಿಶಾದಲ್ಲಿ ರೈಲು ಜಾಲದ 100% ವಿದ್ಯುದ್ದೀಕರಣ ರಾಷ್ಟ್ರಕ್ಕೆ ಸಮರ್ಪಣೆ, ಸಂಬಲ್‌ಪುರ-ತಿತ್ಲಾಗಢ ರೈಲು ಮಾರ್ಗ ಡಬ್ಲಿಂಗ್‌; ಅಂಗುಲ್ -ಸುಕಿಂದಾ ನಡುವಿನ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ; ಮನೋಹರ್‌ಪುರ - ರೂರ್ಕೆಲಾ - ಜಾಸುರ್‌ಗುಡ - ಜಮ್ಗಾವನ್ನು ಸಂಪರ್ಕಿಸುವ ಮೂರನೇ ಮಾರ್ಗ ಹಾಗೂ ಬಿಚುಪಲಿ -ಝರ್ತರ್ಭಾ ನಡುವೆ ಹೊಸ ಬ್ರಾಡ್‌ಗೇಜ್ ಮಾರ್ಗ ಈ ಹಲವು ಯೋಜನೆಗಳಲ್ಲಿ ಸೇರಿವೆ.

 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆಧುನಿಕ ಮತ್ತು ಮಹತ್ವಾಕಾಂಕ್ಷೆಯ ಭಾರತದ ಸಂಕೇತವಾದ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲನ್ನು ಇಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಜನತೆಗೆ ಸಮರ್ಪಿಸಲಾಗುತ್ತಿದೆ ಎಂದರು. "ವಂದೇ ಭಾರತ್ ರೈಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಿದಾಗಲೆಲ್ಲಾ ಭಾರತದ ವೇಗ ಮತ್ತು ಪ್ರಗತಿಯನ್ನು ಕಾಣಬಹುದು" ಎಂದು ಹೇಳಿದ ಪ್ರಧಾನಿ, ಈ ವೇಗವನ್ನು ಈಗ ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಕಾಣಬಹುದು ಎಂದರು. ಇದು ಪ್ರಯಾಣಿಕರ ಪ್ರಯಾಣದ ಅನುಭವದ ಜೊತೆಗೆ ಅಭಿವೃದ್ಧಿಯ ಅರ್ಥವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಪ್ರಧಾನಿ ಹೇಳಿದರು. ಕೊಲ್ಕತ್ತಾದಿಂದ ಪುರಿವರೆಗೆ ದರ್ಶನಕ್ಕಾಗಿ ಪ್ರಯಾಣಿಸುವುದೇ ಆಗಿರಲಿ, ಅಥವಾ ಅಲ್ಲಿಂದ ಕೋಲ್ಕೊತ್ತಾಗೆ ಬರುವುದೇ ಆಗಿರಲಿ, ಪ್ರಯಾಣದ ಸಮಯ ಈಗ ಕೇವಲ ಆರೂವರೆ ಗಂಟೆಗಳಿಗೆ ಇಳಿಯಲಿದೆ. ಆ ಮೂಲಕ ಸಮಯ ಉಳಿತಾಯವಾಗಲಿದೆ. ಜೊತೆಗೆ ಇದು ವ್ಯಾಪಾರ ಅವಕಾಶಗಳಿಗೆ ಕಾರಣವಾಗುತ್ತದೆ ಹಾಗೂ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ದೂರ ಪ್ರಯಾಣ ಮಾಡಲು ಬಯಸುವ ಯಾವುದೇ ನಾಗರಿಕರಿಗೆ ರೈಲ್ವೆ ಮೊದಲ ಆಯ್ಕೆ ಮತ್ತು ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು.   ಪುರಿ ಮತ್ತು ಕಟಕ್ ರೈಲು ನಿಲ್ದಾಣಗಳ ಪುನರಭಿವೃದ್ಧಿ ಮತ್ತು ಆಧುನೀಕರಣ, ಈ ಪ್ರದೇಶದಲ್ಲಿ ಅವಳಿ ರೈಲು ಮಾರ್ಗಗಳು ಹಾಗೂ ಒಡಿಶಾದಲ್ಲಿ ರೈಲು ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣ ಸೇರಿದಂತೆ ಇಂದು ಶಂಕುಸ್ಥಾಪನೆ ನೆರವೇರಿಸಲಾದ ಇತರ ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉಲ್ಲೇಖಿಸಿದರು.

ʻಸ್ವಾತಂತ್ರ್ಯದ ಅಮೃತ ಕಾಲʼದ ಯುಗವನ್ನು ಉಲ್ಲೇಖಿಸಿದ ಪ್ರಧಾನಿ, ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ದೇಶವು ಸಂಪೂರ್ಣವಾಗಿ ಒಗ್ಗಟ್ಟಾಗಿದ್ದರೆ ದೇಶದ ಸಾಮೂಹಿಕ ಸಾಮರ್ಥ್ಯಗಳು ಉತ್ತುಂಗಕ್ಕೆ ತಲುಪಬಹುದು ಎಂದು ಹೇಳಿದರು. ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ಅಂತಹ ಒಂದು ನಂಬಿಕೆಯ ಪ್ರತಿಬಿಂಬವಾಗಿದೆ, ಅದು 'ಏಕ ಭಾರತ-ಶ್ರೇಷ್ಠ ಭಾರತ'ದ ಸ್ಫೂರ್ತಿಯನ್ನು ಎತ್ತಿ ಹಿಡಿಯುತ್ತಲೇ ದೇಶದ ಅಭಿವೃದ್ಧಿಯ ಎಂಜಿನ್ ಆಗುತ್ತಿದೆ ಎಂದು ಅವರು ಹೇಳಿದರು. "ಭಾರತೀಯ ರೈಲ್ವೆ ಎಲ್ಲರನ್ನೂ ಒಂದು ಎಳೆಯಲ್ಲಿ ಬೆಸೆಯುತ್ತದೆ ಮತ್ತು ಹೆಣೆಯುತ್ತದೆ. ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ಕೂಡ ಅದೇ ಕಲ್ಪನೆ ಮತ್ತು ಆಲೋಚನೆಯೊಂದಿಗೆ ಮುಂದುವರಿಯುತ್ತದೆ,ʼʼ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು. ಈ ರೈಲು ಪುರಿ ಮತ್ತು ಹೌರಾ ನಡುವಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು. ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಈಗಾಗಲೇ ಹದಿನೈದು ʻವಂದೇ ಭಾರತ್ʼ ರೈಲುಗಳು ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

 

ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಭಾರತವು ತನ್ನ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಂಡಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರಯಾಣದಲ್ಲಿ ಪ್ರತಿಯೊಂದು ರಾಜ್ಯದ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಶ್ರೀ ಮೋದಿ ಅವರು, ಪ್ರತಿಯೊಂದು ರಾಜ್ಯವನ್ನು ಜೊತೆಯಲ್ಲಿ ತೆಗೆದುಕೊಂಡು ದೇಶ ಮುನ್ನಡೆಯುತ್ತಿದೆ ಎಂದರು. ಹಿಂದಿನ ಕಾಲಕ್ಕಿಂತ ಭಿನ್ನವಾಗಿ, ʻನವ ಭಾರತʼವು ತಂತ್ರಜ್ಞಾನವನ್ನು ದೇಶೀಯವಾಗಿ ಸೃಷ್ಟಿಸುತ್ತಿದೆ ಮತ್ತು ಅದನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ಹೇಳಿದರು. ʻವಂದೇ ಭಾರತ್ʼ ರೈಲುಗಳ ಸ್ಥಳೀಯ ಮೂಲದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಭಾರತವು ʻ5ಜಿʼ ಮತ್ತು ಲಸಿಕೆಗಳಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ಉಲ್ಲೇಖಿಸಿದರು. ಈ ಆವಿಷ್ಕಾರಗಳು ಎಂದಿಗೂ ಒಂದು ರಾಜ್ಯ ಅಥವಾ ನಗರಕ್ಕೆ ಸೀಮಿತವಾಗಿಲ್ಲ. ಬದಲಿಗೆ ದೇಶಾದ್ಯಂತ ಸಮಾನ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅವರು ಒತ್ತಿಹೇಳಿದರು. ಅದೇ ರೀತಿ ʻವಂದೇ ಭಾರತ್ʼ ದೇಶದ ಮೂಲೆಮೂಲೆಗಳನ್ನು ಮುಟ್ಟುತ್ತಿದೆ ಎಂದರು.

ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼನ ಈ ನೀತಿಯು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೆ ಲಾಭ ತರುತ್ತಿದೆ ಎಂದು ಪ್ರಧಾನಿ ಹೇಳಿದರು. ಒಡಿಶಾದಲ್ಲಿ ರೈಲ್ವೆ ಯೋಜನೆಗಳ ಆಯವ್ಯಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು. 2014ಕ್ಕಿಂತ ಹಿಂದಿನ 10 ವರ್ಷಗಳಲ್ಲಿ, ರಾಜ್ಯದಲ್ಲಿ ವಾರ್ಷಿಕವಾಗಿ ಕೇವಲ 20 ಕಿ.ಮೀ ಉದ್ದದ ರೈಲ್ವೆ ಮಾರ್ಗಗಳನ್ನು ಹಾಕಲಾಗಿದೆ, ಆದರೆ 2022-23ರಲ್ಲಿ ಕೇವಲ ಒಂದು ವರ್ಷದಲ್ಲಿ 120 ಕಿ.ಮೀ ಉದ್ದದ ಮಾರ್ಗಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ದೀರ್ಘಕಾಲದಿಂದ ಬಾಕಿ ಉಳಿದಿರುವ ಖುರ್ದಾ ಬೋಲಂಗೀರ್ ಮಾರ್ಗ ಮತ್ತು ಹರಿದಾಸ್‌ಪುರ-ಪಾರಾದೀಪ್ ಮಾರ್ಗಗಳಂತಹ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

"ರೈಲು ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸಿದ ದೇಶದ ರಾಜ್ಯಗಳಲ್ಲಿ ಒಡಿಶಾ ಕೂಡ ಒಂದಾಗಿದೆ" ಎಂದು ಹೇಳಿದ ಪ್ರಧಾನಿ, ಪಶ್ಚಿಮ ಬಂಗಾಳದಲ್ಲಿ ಇದೇ ಗುರಿಯನ್ನು ಸಾಧಿಸಲು ತ್ವರಿತ ಗತಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಇದು ರೈಲುಗಳ ವೇಗದಲ್ಲಿ ಒಟ್ಟಾರೆ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಸರಕು ರೈಲುಗಳ ಸಮಯವನ್ನು ಉಳಿಸಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಖನಿಜ ಸಮೃದ್ಧ ರಾಜ್ಯವಾದ ಒಡಿಶಾ ರೈಲು ಮಾರ್ಗಗಳ ವಿದ್ಯುದ್ದೀಕರಣದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದೆ. ಇದರಿಂದ ಡೀಸೆಲ್ ಎಂಜಿನ್‌ಗಳಿಂದ ಹೊರಹೊಮ್ಮುವ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗುವುದಲ್ಲದೆ, ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅವರು ಗಮನ ಸೆಳೆದರು.

ಇದುವರೆಗೂ ಹೆಚ್ಚು ಪ್ರಸ್ತಾಪಿಸದ ಮತ್ತೊಂದು ಅಂಶ- ಮೂಲಸೌಕರ್ಯಗಳ ನಿರ್ಮಾಣದ ಬಗ್ಗೆಯೂ ಪ್ರಧಾನ ಮಂತ್ರಿಯವರು ಪ್ರಸ್ತಾಪಿಸಿದರು. ಮೂಲಸೌಕರ್ಯವು ಜನರ ಜೀವನವನ್ನು ಸುಲಭಗೊಳಿಸುವುದಲ್ಲದೆ ಸಮಾಜವನ್ನು ಸಶಕ್ತಗೊಳಿಸುತ್ತದೆ ಎಂದು ಅವರು ಹೇಳಿದರು. "ಮೂಲಸೌಕರ್ಯಗಳ ಕೊರತೆ ಇದ್ದಾಗ ಜನರ ಅಭಿವೃದ್ಧಿ ಹಿಂದುಳಿದಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದಾಗ, ಜನರ ಕ್ಷಿಪ್ರ ಅಭಿವೃದ್ಧಿಯು ಏಕಕಾಲದಲ್ಲಿ ನಡೆಯುತ್ತದೆ", ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಅಭಿವೃದ್ಧಿ ಉಪಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಒಡಿಶಾದಲ್ಲಿ ಸುಮಾರು 25 ಲಕ್ಷ ಮನೆಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 7.25 ಲಕ್ಷ ಮನೆಗಳು ಸೇರಿದಂತೆ 2.5 ಕೋಟಿಗೂ ಹೆಚ್ಚು ಮನೆಗಳಿಗೆ ಸರಕಾರ ಉಚಿತ ವಿದ್ಯುತ್ ಸಂಪರ್ಕ ಒದಗಿಸಿರುವ ʻಪ್ರಧಾನಮಂತ್ರಿ ಸೌಭಾಗ್ಯ ಯೋಜನೆʼಯ ಉದಾಹರಣೆಯನ್ನು ನೀಡಿದರು.

 

ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಇಂದು 75 ರಿಂದ 150ಕ್ಕೆ ಏರಿದೆ ಎಂದು ತಿಳಿಸಿದ ಪ್ರಧಾನಿ, ದೇಶದ ಜನಸಾಮಾನ್ಯರು ತಮ್ಮ ವಿಮಾನ ಪ್ರಯಾಣದ ಅನುಭವವನ್ನು ವಿವಿಧ ಛಾಯಾಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ಗಮನ ಸೆಳೆದರು.

ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತದ ಸಾಧನೆಗಳು ಇಂದು ಅಧ್ಯಯನದ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, ಇದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ರೈಲ್ವೆ ಮತ್ತು ಹೆದ್ದಾರಿ ಸಂಪರ್ಕದಿಂದ ಕೇವಲ ಪ್ರಯಾಣ ಸುಲಭವಾಗುವುದಷ್ಟೇ ಅಲ್ಲದೆ, ಅದನ್ನು ಮೀರಿದ ಪ್ರಯೋಜನಗಳು ದೊರೆಯಲಿವೆ. ರೈತರನ್ನು ಹೊಸ ಮಾರುಕಟ್ಟೆಗಳೊಂದಿಗೆ, ಪ್ರವಾಸಿಗರನ್ನು ಹೊಸ ತಾಣಗಳಿಗೆ ಮತ್ತು ವಿದ್ಯಾರ್ಥಿಗಳನ್ನು ತಮ್ಮ ಆದ್ಯತೆಯ ಕಾಲೇಜುಗಳೊಂದಿಗೆ ಈ ರಸ್ತೆ ಹಾಗೂ ರೈಲು ಯೋಜನೆಗಳು ಸಂಪರ್ಕ ಕಲ್ಪಿಸುತ್ತವೆ ಎಂದು ಅವರು ಹೇಳಿದರು.

ದೇಶವು 'ಜನಸೇವಾ ಹೀ ಪ್ರಭು ಸೇವಾ' ಎಂಬ ಸ್ಫೂರ್ತಿಯೊಂದಿಗೆ ಸಾಗುತ್ತಿದೆ - ಜನರ ಸೇವೆಯೇ ದೇವರ ಸೇವೆ ಎಂದು ಪ್ರಧಾನಿ ಹೇಳಿದರು. ಜಗನ್ನಾಥ ದೇವಾಲಯ  ಮತ್ತು ಪುರಿಯಂತಹ ಯಾತ್ರಾ ಸ್ಥಳಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ಶತಮಾನಗಳಿಂದ ಪ್ರಸಾದವನ್ನು ವಿತರಿಸಲಾಗುತ್ತಿದೆ ಮತ್ತು ಸಾವಿರಾರು ಬಡವರಿಗೆ ಆಹಾರವನ್ನು ನೀಡಲಾಗುತ್ತಿದೆ. 80 ಕೋಟಿ ಜನರಿಗೆ ಉಚಿತ ಪಡಿತರವನ್ನು ಒದಗಿಸುವ ʻಪಿಎಂ ಗರೀಬ್ ಕಲ್ಯಾಣ್ ಯೋಜನೆʼ ಮತ್ತು ʻಆಯುಷ್ಮಾನ್ ಕಾರ್ಡ್ʼ, ʻಉಜ್ವಲಾʼ, ʻಜಲ ಜೀವನ್ ಮಿಷನ್ʼ ಮತ್ತು ʻಪಿಎಂ ಆವಾಸ್ ಯೋಜನೆʼಯಂತಹ ಹಲವು ಉಪಕ್ರಮಗಳನ್ನು ಇದೇ ಆಶಯದೊಂದಿಗೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು. "ಇಂದು ಬಡವರು ವರ್ಷಗಟ್ಟಲೆ ಕಾಯಬೇಕಾಗಿದ್ದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಶೀಘ್ರ ಪಡೆಯುತ್ತಿದ್ದಾರೆ" ಎಂದು ಅವರು ತಿಳಿಸಿದರು.

"ಭಾರತದ ಕ್ಷಿಪ್ರ ಅಭಿವೃದ್ಧಿಗೆ ರಾಜ್ಯಗಳ ಸಮತೋಲಿತ ಅಭಿವೃದ್ಧಿಯೂ ಅಷ್ಟೇ ಅವಶ್ಯಕ" ಎಂದು ಹೇಳಿದ ಪ್ರಧಾನಮಂತ್ರಿಯವರು, ಸಂಪನ್ಮೂಲಗಳ ಕೊರತೆಯಿಂದಾಗಿ ಯಾವುದೇ ರಾಜ್ಯವು ಅಭಿವೃದ್ಧಿಯ ಓಟದಲ್ಲಿ ಹಿಂದೆ ಬೀಳದಂತೆ ನೋಡಿಕೊಳ್ಳಲು ನಡೆಸಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಒತ್ತಿ ಹೇಳಿದರು. ಅದಕ್ಕಾಗಿಯೇ, 15ನೇ ಹಣಕಾಸು ಆಯೋಗವು ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಿಗೆ ಹೆಚ್ಚಿನ ಬಜೆಟ್ ಅನ್ನು ಶಿಫಾರಸು ಮಾಡಿದೆ ಎಂದು ಪ್ರಧಾನಿ ಹೇಳಿದರು. ಒಡಿಶಾ ರಾಜ್ಯವು ಅಪಾರ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದೆ. ಆದರೆ, ದೋಷಪೂರಿತ ನೀತಿಗಳಿಂದಾಗಿ ತನ್ನದೇ ಆದ ಸಂಪನ್ಮೂಲಗಳಿಂದ ವಂಚಿತವಾಗಿದೆ ಎಂದು ಪ್ರಧಾನಿ ಹೇಳಿದರು. ಖನಿಜ ಸಂಪತ್ತನ್ನು ಗಮನದಲ್ಲಿಟ್ಟುಕೊಂಡು ಸರಕಾರ ಗಣಿಗಾರಿಕೆ ನೀತಿಯನ್ನು ಸುಧಾರಿಸಿದೆ, ಇದು ಖನಿಜ ಸಂಪತ್ತನ್ನು ಹೊಂದಿರುವ ಎಲ್ಲ ರಾಜ್ಯಗಳ ಆದಾಯದಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಒತ್ತಿ ಹೇಳಿದರು.
ʻಜಿಎಸ್‌ಟಿʼ ಜಾರಿಯಾದ ನಂತರ ತೆರಿಗೆಯಿಂದ ಬರುವ ಆದಾಯವೂ ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದರು. ಸಂಪನ್ಮೂಲಗಳನ್ನು ರಾಜ್ಯದ ಅಭಿವೃದ್ಧಿಗೆ ಮತ್ತು ಹಳ್ಳಿಗಳಲ್ಲಿನ ಬಡವರ ಸೇವೆಗಾಗಿ ಬಳಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಒಡಿಶಾ ನೈಸರ್ಗಿಕ ವಿಪತ್ತುಗಳನ್ನು ಯಶಸ್ವಿಯಾಗಿ ಎದುರಿಸುವಂತೆ ಖಾತರಿಪಡಿಸಿಕೊಳ್ಳುವತ್ತ ಕೇಂದ್ರ ಸರಕಾರ ಸಂಪೂರ್ಣ ಗಮನ ಹರಿಸುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ವಿಪತ್ತು ನಿರ್ವಹಣೆ ಮತ್ತು ʻಎನ್‌ಡಿಆರ್‌ಎಫ್ʼಗಾಗಿ ಸರಕಾರ ರಾಜ್ಯಕ್ಕೆ 8 ಸಾವಿರ ಕೋಟಿ ರೂ.ಗಳಿಗಿಂತ ಅಧಿಕ ಹಣವನ್ನು ಒದಗಿಸಿದೆ ಎಂದು ಮಾಹಿತಿ ನೀಡಿದರು.

ಒಡಿಶಾ, ಪಶ್ಚಿಮ ಬಂಗಾಳ ಮತ್ತು ಇಡೀ ದೇಶದ ಅಭಿವೃದ್ಧಿಯ ವೇಗಕ್ಕೆ ಉತ್ತೇಜನ ಸಿಗುತ್ತದೆ. ಒಂದು ರಾಷ್ಟ್ರವಾಗಿ ನಾವು ʻನವ ಭಾರತʼ ಮತ್ತು ʻಅಭಿವೃದ್ಧಿ ಹೊಂದಿದ ಭಾರತʼದ ಗುರಿಯನ್ನು ಸಾಧಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಿಯವರು ತಮ್ಮ ಭಾಷಣವನ್ನು ಮುಗಿಸಿದರು.

ಒಡಿಶಾ ರಾಜ್ಯಪಾಲರಾದ ಶ್ರೀ ಗಣೇಶಿ ಲಾಲ್, ಒಡಿಶಾ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್; ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪುರಿ ಮತ್ತು ಹೌರಾ ನಡುವಿನ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಿದರು. ಈ ರೈಲು ಒಡಿಶಾದ ಖೋರ್ಧಾ, ಕಟಕ್, ಜಾಜ್‌ಪುರ್‌, ಭದ್ರಾಕ್ ಮತ್ತು ಬಾಲಸೋರ್ ಜಿಲ್ಲೆಗಳು ಹಾಗೂ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಈ ರೈಲು ಪ್ರಯಾಣಿಕರಿಗೆ ಹೆಚ್ಚು ವೇಗ, ಹೆಚ್ಚು ಆರಾಮ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಪುರಿ ಮತ್ತು ಕಟಕ್ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪುನರಾಭಿವೃದ್ಧಿಗೊಂಡ ಈ ನಿಲ್ದಾಣಗಳು ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವವನ್ನು ಒದಗಿಸುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತವೆ.

ಒಡಿಶಾದ ರೈಲು ಜಾಲದ ಶೇ.100ರಷ್ಟು ವಿದ್ಯುದ್ದೀಕರಣವನ್ನು ಪ್ರಧಾನಮಂತ್ರಿ ಅವರು ದೇಶಕ್ಕೆ ಸಮರ್ಪಿಸಿದರು. ಇದು ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಮದು ಮಾಡಿಕೊಳ್ಳಲಾಗುತ್ತಿರುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಪ್ರಧಾನಮಂತ್ರಿಯವರು ಸಂಬಲ್‌ಪುರ-ತಿತ್ಲಾಗಢ ರೈಲು ಮಾರ್ಗದ ಡಬ್ಲಿಂಗ್ ಕಾಮಗಾರಿ; ಅಂಗುಲ್-ಸುಕಿಂಡಾ ನಡುವೆ ಹೊಸ ಬ್ರಾಡ್ಗೇಜ್ ರೈಲು ಮಾರ್ಗ; ಮನೋಹರ್‌ಪುರ-ರೂರ್ಕೆಲಾ-ಜಾಸುರ್‌ಗುಡ-ಜಮ್ಗಾವನ್ನು ಸಂಪರ್ಕಿಸುವ ಮೂರನೇ ಮಾರ್ಗ ಮತ್ತು ಬಿಚುಪಲಿ-ಝರ್ತರ್ಭಾ ನಡುವೆ ಹೊಸ ಬ್ರಾಡ್‌ಗೇಜ್ ಮಾರ್ಗಗಳನ್ನೂ ದೇಶಕ್ಕೆ ಸಮರ್ಪಿಸಿದರು. ಇವು ಒಡಿಶಾದ ಉಕ್ಕು, ವಿದ್ಯುತ್ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ತ್ವರಿತ ಕೈಗಾರಿಕಾ ಅಭಿವೃದ್ಧಿಯ ಪರಿಣಾಮವಾಗಿ ಹೆಚ್ಚಿದ ಸಂಚಾರ ಬೇಡಿಕೆಗಳನ್ನು ಪೂರೈಸುತ್ತವೆ. ಜೊತೆಗೆ ಈ ರೈಲು ವಿಭಾಗಗಳಲ್ಲಿ ಪ್ರಯಾಣಿಕರ ದಟ್ಟಣೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುತ್ತವೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi