ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ, ರಾಷ್ಟ್ರಕ್ಕೆ ಸಮರ್ಪಣೆ ದಿಯು ಮತ್ತು ಸಿಲ್ವಾಸ್ಸಾದ ಪಿಎಂಎವೈ ನಗರ ಫಲಾನುಭವಿಗಳಿಗೆ ಕೀಲಿಗಳ ಹಸ್ತಾಂತರ
"ಈ ಯೋಜನೆಗಳು ಜೀವನ, ಪ್ರವಾಸೋದ್ಯಮ, ಸಾರಿಗೆ ಮತ್ತು ವ್ಯಾಪಾರದ ಸುಲಭತೆಯನ್ನು ಸುಧಾರಿಸುತ್ತವೆ. ಇದು ನಿಗದಿತ ಸಮಯಕ್ಕೆ ತಲುಪಿಸುವ ಹೊಸ ಕೆಲಸದ ಸಂಸ್ಕೃತಿಗೆ ಉದಾಹರಣೆಯಾಗಿದೆ"
"ಪ್ರತಿಯೊಂದು ಪ್ರದೇಶದ ಸಮತೋಲಿತ ಅಭಿವೃದ್ಧಿಯು ದೊಡ್ಡ ಆದ್ಯತೆಯಾಗಿದೆ"
"ಈ ಪ್ರದೇಶದ ಜನರ ಸೇವಾ ಮನೋಭಾವವನ್ನು ಗುರುತಿಸಲಾಗಿದೆ"
"ನಮ್ಮ ಸರ್ಕಾರವು ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನಾನು ಪ್ರತಿಯೊಬ್ಬ ವಿದ್ಯಾರ್ಥಿಗೆ ಭರವಸೆ ನೀಡುತ್ತೇನೆ"
"ಭಾರತದ ಜನರ ಪ್ರಯತ್ನಗಳು ಮತ್ತು ಭಾರತದ ವಿಶೇಷತೆಗಳನ್ನು ಎತ್ತಿ ಹಿಡಿಯಲು ಮನ್ ಕಿ ಬಾತ್ ಉತ್ತಮ ವೇದಿಕೆಯಾಗಿದೆ"
"ನಾನು ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯನ್ನು ಕರಾವಳಿ ಪ್ರವಾಸೋದ್ಯಮದ ಉಜ್ವಲ ತಾಣವಾಗಿ ನೋಡುತ್ತಿದ್ದೇನೆ"
"ದೇಶವು 'ತುಷ್ಟೀಕರಣ' ಅಥವಾ ಓಲೈಸುವಿಕೆಗೆ ಒತ್ತು ನೀಡುತ್ತಿಲ್ಲ ಬದಲಿಗೆ 'ಸಂತುಷ್ಟಿಕರಣ' ಅಥವಾ ತೃಪ್ತಿಗೆ ಒತ್ತು ನೀಡುತ್ತಿದೆ"
"ಕಳೆದ 9 ವರ್ಷಗಳಲ್ಲಿ ಹಿಂದುಳಿದವರ ಅಗತ್ಯಗಳಿಗೆ ಆದ್ಯತೆ ನೀಡುವುದು ಉತ್ತಮ ಆಡಳಿತದ ವೈಶಿಷ್ಟ್ಯವಾಗಿದೆ"
"ವಿಕಸಿತ ಭಾರತ ಮತ್ತು ಸಮೃದ್ಧಿಯ ಸಂಕಲ್ಪವನ್ನು 'ಸಬ್ಕಾ ಪ್ರಯಾಸ್' ಮೂಲಕ ಸಾಧಿಸಲಾಗುತ್ತದೆ"
ಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಲ್ವಾಸ್ಸಾ, ದಾದ್ರಾ ಮತ್ತು ನಗರ ಹವೇಲಿಯಲ್ಲಿ 4850 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಇವುಗಳಲ್ಲಿ ಸಿಲ್ವಾಸ್ಸಾದಲ್ಲಿ ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಲೋಕಾರ್ಪಣೆ ಮತ್ತು ಸರ್ಕಾರಿ ಶಾಲೆಗಳು, ದಮನ್‌ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ವಿವಿಧ ರಸ್ತೆಗಳ ಸುಂದರೀಕರಣ, ಬಲಪಡಿಸುವಿಕೆ ಮತ್ತು ಅಗಲೀಕರಣ, ಮೀನು ಮಾರುಕಟ್ಟೆ, ಶಾಪಿಂಗ್‌ ಕಾಂಪ್ಲೆಕ್ಸ್‌ ಮತ್ತು ಈ ಪ್ರದೇಶದಲ್ಲಿ ನೀರಿನ ಸರಬರಾಜು ಯೋಜನೆಯ ವರ್ಧನಯಂತಹ 96 ಯೋಜನೆಗಳ ಸಮರ್ಪಣೆ ಮತ್ತು ಶಂಕುಸ್ಥಾಪನೆಗಳು ಸೇರಿವೆ. ಪ್ರಧಾನಮಂತ್ರಿಯವರು ದಿಯು ಮತ್ತು ಸಿಲ್ವಾಸ್ಸಾದ ಪಿಎಂಎವೈ ನಗರ ಫಲಾನುಭವಿಗಳಿಗೆ ಮನೆಯ ಕೀಲಿಗಳನ್ನು ಹಸ್ತಾಂತರಿಸಿದರು.

ಇದಕ್ಕೂ ಮೊದಲು, ಪ್ರಧಾನಮಂತ್ರಿ ಅವರು ಸಿಲ್ವಾಸ್ಸಾದಲ್ಲಿರುವ ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದರು, ಅವರೊಂದಿಗೆ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪಗಳ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್ ಇದ್ದರು. ಪ್ರಧಾನಿಯವರು ಸಂಸ್ಥೆಯನ್ನು ಉದ್ಘಾಟಿಸಿ, ಧನ್ವಂತರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಪ್ರಧಾನಮಂತ್ರಿಯವರು ಕಾಲೇಜು ಕ್ಯಾಂಪಸ್‌ನ ಮಾದರಿಯನ್ನು ಪರಿಶೀಲಿಸಿದರು ಮತ್ತು ಅಕಾಡೆಮಿಕ್ ಬ್ಲಾಕ್‌ನಲ್ಲಿರುವ ಅಂಗರಚನಾ ವಸ್ತುಸಂಗ್ರಹಾಲಯ ಮತ್ತು ಛೇದನ (ಡಿಸೆಕ್ಷನ್) ಕೊಠಡಿಯನ್ನು ವೀಕ್ಷಿಸಿದರು. ಪ್ರಧಾನಮಂತ್ರಿಯವರು ಕೇಂದ್ರ ಗ್ರಂಥಾಲಯವನ್ನು ವೀಕ್ಷಿಸಿ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ಅವರು ಆಂಫಿಥಿಯೇಟರ್‌ನಲ್ಲಿ ಕಟ್ಟಡ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯ ಅಭಿವೃದ್ಧಿ ಪಯಣದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ದೇಶದ ಮೂಲೆ ಮೂಲೆಯ ಜನರಿಗೆ ನೆಲೆಯಾಗಿರುವ ಸಿಲ್ವಾಸ್ಸಾದಲ್ಲಿ ಬೆಳೆಯುತ್ತಿರುವ ಕಾಸ್ಮೋಪಾಲಿಟನಿಸಂ ಬಗ್ಗೆ ಗಮನ ಸೆಳೆದರು. ಸಂಪ್ರದಾಯ ಮತ್ತು ಆಧುನಿಕತೆ ಎರಡರ ಮೇಲಿನ ಜನರ ಪ್ರೀತಿಯನ್ನು ಗಮನಿಸಿದ ಅವರು ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಸರ್ಕಾರವು ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕೆ 5500 ಕೋಟಿ ರೂ. ಅನುದಾನದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದರು. ಎಲ್‌ಇಡಿ ದೀಪಗಳ ರಸ್ತೆಗಳು, ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮತ್ತು 100 ಪ್ರತಿಶತ ತ್ಯಾಜ್ಯ ಸಂಸ್ಕರಣೆ ಕುರಿತು ಅವರು ಮಾತನಾಡಿದರು. ರಾಜ್ಯದ ಹೊಸ ಕೈಗಾರಿಕಾ ನೀತಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯಮ ಮತ್ತು ಉದ್ಯೋಗವನ್ನು ಹೆಚ್ಚಿಸುವ ಸಾಧನವಾಗಿದೆ ಎಂದು ಅವರು ಶ್ಲಾಘಿಸಿದರು. ಇಂದು ನನಗೆ 5000 ಕೋಟಿಯ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದರು. ಈ ಯೋಜನೆಗಳು ಆರೋಗ್ಯ, ವಸತಿ, ಪ್ರವಾಸೋದ್ಯಮ, ಶಿಕ್ಷಣ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿವೆ. ಈ ಯೋಜನೆಗಳು ಜೀವನ, ಪ್ರವಾಸೋದ್ಯಮ, ಸಾರಿಗೆ ಮತ್ತು ವ್ಯಾಪಾರದಲ್ಲಿ ಸುಲಭತೆಯನ್ನು ಸುಧಾರಿಸುತ್ತವೆ ಎಂದು ಅವರು ಹೇಳಿದರು.

ಇಂದಿನ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಹಲವಾರು ಯೋಜನೆಗಳ ಶಂಕುಸ್ಥಾಪನೆಯನ್ನು ತಾವೇ ನೆರವೇರಿಸಿದ್ದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬಹುಕಾಲದವರೆಗೆ ದೇಶದ ಅಭಿವೃದ್ಧಿಗಾಗಿನ ಸರ್ಕಾರದ ಯೋಜನೆಗಳು ಒಂದೋ ಸ್ಥಗಿತಗೊಂಡಿದ್ದವು, ಕೈಬಿಡಲಾಗಿತ್ತು ಅಥವಾ ದಾರಿ ತಪ್ಪುತ್ತಿದ್ದವು, ಕೆಲವೊಮ್ಮೆ ಅಡಿಪಾಯಕ್ಕೆ ಹಾಕಿದ ಶಿಲೆಯೇ ಕಸವಾಗಿ ಪರಿಣಮಿಸುತ್ತಿತ್ತು ಮತ್ತು ಯೋಜನೆಗಳು ಅಪೂರ್ಣವಾಗುತ್ತಿದ್ದವು ಎಂದು ಅವರು ವಿಷಾದಿಸಿದರು. ಆದರೆ ಕಳೆದ 9 ವರ್ಷಗಳಲ್ಲಿ, ಹೊಸ ಕಾರ್ಯಶೈಲಿಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಕೆಲಸದ ಸಂಸ್ಕೃತಿಯನ್ನು ಪರಿಚಯಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರವು ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಶ್ರಮಿಸುತ್ತಿದೆ ಮತ್ತು ಪೂರ್ಣಗೊಂಡ ತಕ್ಷಣ ಇತರ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದೆ ಎಂದು ಅವರು ಹೇಳಿದರು. ಇಂದಿನ ಯೋಜನೆಗಳು ಈ ಕೆಲಸದ ಸಂಸ್ಕೃತಿಗೆ ಉದಾಹರಣೆಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರತಿಯೊಬ್ಬರನ್ನೂ ಅಭಿನಂದಿಸಿದರು. 

ಕೇಂದ್ರ ಸರ್ಕಾರವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ಪ್ರತಿ ಪ್ರದೇಶದ ಸಮತೋಲಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಮತಬ್ಯಾಂಕ್ ರಾಜಕಾರಣದ ದೃಷ್ಠಿಯಿಂದ ಅಭಿವೃದ್ಧಿಯನ್ನು ನೋಡುವ ದೀರ್ಘಕಾಲದ ಪ್ರವೃತ್ತಿಯನ್ನು ಅವರು ಟೀಕಿಸಿದರು. ಇದು ಬುಡಕಟ್ಟು ಮತ್ತು ಗಡಿ ಪ್ರದೇಶಗಳ ಕಷ್ಟಗಳಿಗೆ ಕಾರಣವಾಯಿತು. ಮೀನುಗಾರರ ಭವಿಷ್ಯವನ್ನು ಅವರ ಅದೃಷ್ಟಕ್ಕೆ ಬಿಡಲಾಯಿತು ಮತ್ತು ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ಇದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ಪ್ರದೇಶಗಳಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ಇರಲಿಲ್ಲ ಮತ್ತು ಯುವಕರು ವೈದ್ಯರಾಗಲು ದೇಶದ ಇತರ ಪ್ರದೇಶಗಳಿಗೆ ಹೋಗಬೇಕಾಗಿದ್ದ ಸ್ಥಿತಿಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ಇಂತಹ ಅವಕಾಶಗಳನ್ನು ಪಡೆದ ಆದಿವಾಸಿ ಸಮುದಾಯದ ಯುವಕರ ಸಂಖ್ಯೆ ಶೂನ್ಯವಾಗಿದೆ ಎಂದು ಅವರು ಗಮನಸೆಳೆದರು, ಆದರೆ ದಶಕಗಳ ಕಾಲ ರಾಷ್ಟ್ರವನ್ನು ಆಳಿದವರು ಈ ಪ್ರದೇಶದ ಜನರ ಬೇಕು-ಬೇಡಗಳಿಗೆ ಮತ್ತು ಆಕಾಂಕ್ಷೆಗಳಿಗೆ ಗಮನ ಕೊಡಲಿಲ್ಲ. 2014 ರ ನಂತರ ಅಧಿಕಾರಕ್ಕೆ ಬಂದ ಪ್ರಸ್ತುತ ಸರ್ಕಾರದ ಸೇವಾ-ಆಧಾರಿತ ವಿಧಾನ ಮತ್ತು ಸಮರ್ಪಣಾ ಮನೋಭಾವದಿಂದಾಗಿ ದಮನ್, ದಿಯು, ದಾದ್ರಾ ಮತ್ತು ನಗರ ಹವೇಲಿ ತನ್ನ ಮೊದಲ ರಾಷ್ಟ್ರೀಯ ಶೈಕ್ಷಣಿಕ ವೈದ್ಯಕೀಯ ಸಂಸ್ಥೆ ಅಥವಾ ನಮೋ ವೈದ್ಯಕೀಯ ಕಾಲೇಜನ್ನು ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈಗ ಪ್ರತಿ ವರ್ಷ, ಈ ಪ್ರದೇಶದಿಂದ ಸುಮಾರು 150 ಯುವಜನರು ವೈದ್ಯಕೀಯ ಅಧ್ಯಯನ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ, ಮುಂದಿನ ದಿನಗಳಲ್ಲಿ ಸುಮಾರು 1000 ವೈದ್ಯರನ್ನು ಈ ಪ್ರದೇಶದಿಂದ ಸೃಷ್ಟಿಸಲಾಗುವುದು ಎಂದು ಪ್ರಧಾನಿ ತಿಳಿಸಿದರು. ಮೊದಲ ವರ್ಷದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ತನ್ನ ಕುಟುಂಬದಲ್ಲಿ ಮಾತ್ರವಲ್ಲದೆ ಇಡೀ ಹಳ್ಳಿಯಲ್ಲೇ ಈ ವ್ಯಾಸಂಗದಲ್ಲಿ ಮೊದಲಿಗಳು ಎಂದು ಹೇಳಿಕೊಂಡಿರುವ ವರದಿಯನ್ನೂ ಪ್ರಧಾನಿ ಪ್ರಸ್ತಾಪಿಸಿದರು.

ಈ ಪ್ರದೇಶದ ಜನರ ಸೇವಾ ಮನೋಭಾವವನ್ನು ಗುರುತಿಸಲಾಗಿದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಸ್ಥಳೀಯ ವೈದ್ಯಕೀಯ ವಿದ್ಯಾರ್ಥಿಗಳು ಒದಗಿಸಿದ ಸಕ್ರಿಯ ಸಹಾಯವನ್ನು ಸ್ಮರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಮನ್ ಕಿ ಬಾತ್‌ನಲ್ಲಿ ಸ್ಥಳೀಯ ವಿದ್ಯಾರ್ಥಿಯೊಬ್ಬರ ಗ್ರಾಮ ದತ್ತು ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿರುವುದಾಗಿ ಪ್ರಧಾನಿ ಹೇಳಿದರು. ವೈದ್ಯಕೀಯ ಕಾಲೇಜು ಸ್ಥಳೀಯ ವೈದ್ಯಕೀಯ ಸೌಲಭ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. 300 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ ಮತ್ತು ಹೊಸ ಆಯುರ್ವೇದ ಆಸ್ಪತ್ರೆಗೆ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು. 

ತಾವು ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿನ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಆರಂಭಿಸಿದ್ದನ್ನು ಪ್ರಧಾನಿ ಸ್ಮರಿಸಿದರು. ಮಾತೃಭಾಷೆಯಲ್ಲಿ ಶಿಕ್ಷಣ ಇಲ್ಲದಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಈಗ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಆಯ್ಕೆಯು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ, ಇದು ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಇಂದು ಉದ್ಘಾಟನೆಯಾಗಿರುವ ಇಂಜಿನಿಯರಿಂಗ್ ಕಾಲೇಜು ಪ್ರತಿ ವರ್ಷ 300 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಲಿಯಲು ಅವಕಾಶವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ದಾದ್ರಾ ಮತ್ತು ನಗರ ಹವೇಲಿಯಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್‌ಗಳನ್ನು ತೆರೆಯುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಅವರು ದಮನ್‌ನಲ್ಲಿರುವ ಎನ್‌ಐಎಫ್‌ಟಿ ಉಪಗ್ರಹ ಕ್ಯಾಂಪಸ್, ಸಿಲ್ವಾಸ್ಸಾದಲ್ಲಿನ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕ್ಯಾಂಪಸ್, ದಿಯುನಲ್ಲಿರುವ ಐಐಐಟಿ ವಡೋದರಾ ಕ್ಯಾಂಪಸ್ ಅನ್ನು ಉಲ್ಲೇಖಿಸಿದರು. ನಮ್ಮ ಸರ್ಕಾರವು ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನಾನು ಪ್ರತಿಯೊಬ್ಬ ವಿದ್ಯಾರ್ಥಿಗೆ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಹೇಳಿದರು.

ಮಕ್ಕಳ ಶಿಕ್ಷಣ, ಯುವಜನರಿಗೆ ಆದಾಯದ ಮೂಲ, ಹಿರಿಯರಿಗೆ ಆರೋಗ್ಯ, ರೈತರಿಗೆ ನೀರಾವರಿ ಸೌಲಭ್ಯಗಳು ಮತ್ತು ಸಾಮಾನ್ಯ ನಾಗರಿಕರಿಗೆ ಪರಿಹಾರದ ಐದು ಮಾನದಂಡಗಳ ಅಭಿವೃದ್ಧಿ ಅಥವಾ 'ಪಂಚಧಾರ'ದ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡುತ್ತಾ ಸಿಲ್ವಾಸ್ಸಾಗೆ ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಂಡರು. ಮೇಲೆ ತಿಳಿಸಿದ ನಿಯತಾಂಕಗಳಿಗೆ ಮತ್ತೊಂದು ನಿಯತಾಂಕವನ್ನು ಸೇರಿಸಲು ಬಯಸುವುದಾಗಿ ಹೇಳಿದ ಪೃಧಾನಿಯವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ಉಲ್ಲೇಖಿಸಿದರು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ 3 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಸರ್ಕಾರ ಪಕ್ಕಾ ಮನೆಗಳನ್ನು ಒದಗಿಸಿದೆ, ಅವುಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸರ್ಕಾರವೇ ನಿರ್ಮಿಸಿ ಹಸ್ತಾಂತರಿಸಿದೆ ಎಂದು ಪ್ರಧಾನಿ ತಿಳಿಸಿದರು.  ಇಂದು 1200 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಸ್ವಂತ ಮನೆಗಳನ್ನು ಪಡೆದಿವೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮನೆಗಳಲ್ಲಿ ಸಮಾನ ಪಾಲು ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಸರ್ಕಾರವು ದಮನ್, ದಿಯು, ದಾದ್ರಾ ಮತ್ತು ನಗರ ಹವೇಲಿಯ ಸಾವಿರಾರು ಮಹಿಳೆಯರನ್ನು ಮನೆ ಮಾಲೀಕರನ್ನಾಗಿ ಮಾಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಪ್ರತಿ ಮನೆಯ ವೆಚ್ಚವು ಹಲವಾರು ಲಕ್ಷ ರೂಪಾಯಿಗಳಾಗಿದೆ ಎಂದು ಒತ್ತಿಹೇಳಿದ ಪ್ರಧಾನಿ ಈ ಮಹಿಳೆಯರನ್ನು 'ಲಖಪತಿ ದೀದಿ' ಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು. 

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಉಲ್ಲೇಖಿಸಿದ ಪ್ರಧಾನಿ, ನಾಗಲಿ ಮತ್ತು ನಾಚ್ನಿಯಂತಹ ಸ್ಥಳೀಯ ಸಿರಿಧಾನ್ಯವನ್ನು ಪ್ರಸ್ತಾಪಿಸಿದರು ಮತ್ತು ಸರ್ಕಾರವು ಸ್ಥಳೀಯ ಶ್ರೀ ಅನ್ನವನ್ನು ವಿವಿಧ ರೂಪಗಳಲ್ಲಿ ಉತ್ತೇಜಿಸುತ್ತಿದೆ ಎಂದು ಹೇಳಿದರು. ಮುಂದಿನ ಭಾನುವಾರದ ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಭಾರತದ ಜನರ ಪ್ರಯತ್ನಗಳು ಮತ್ತು ಭಾರತದ ವಿಶೇಷತೆಗಳನ್ನು ಎತ್ತಿ ಹಿಡಿಯಲು ಮನ್ ಕಿ ಬಾತ್ ಉತ್ತಮ ವೇದಿಕೆಯಾಗಿದೆ. ನಿಮ್ಮಂತೆ ನಾನೂ ಕೂಡ 100ನೇ ಸಂಚಿಕೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

"ನಾನು ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯನ್ನು ಕರಾವಳಿ ಪ್ರವಾಸೋದ್ಯಮದ ಉಜ್ವಲ ತಾಣವಾಗಿ ನೋಡುತ್ತಿದ್ದೇನೆ" ಎಂದು ಪ್ರಧಾನ ಮಂತ್ರಿಯವರು ಹೇಳಿದರು. ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯು ಪ್ರಮುಖ ಪ್ರವಾಸಿ ತಾಣಗಳಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಅವರು ಒತ್ತಿ ಹೇಳಿದರು. ಭಾರತವನ್ನು ವಿಶ್ವದ ಅಗ್ರಗಣ್ಯ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿರುವ ಸಮಯದಲ್ಲಿ ಇದು ಹೆಚ್ಚು ಮುಖ್ಯವಾಗಿದೆ ಎಂದು ಅವರು ಹೇಳಿದರು. ನಾನಿ ದಮನ್ ಮರೈನ್‌ ಓವರ್‌ವ್ಯೂ (ನಮೋ) ಪಥ ಎಂಬ ಹೆಸರಿನಲ್ಲಿ ಎರಡು ಸಮುದ್ರ ತೀರಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತವೆ ಎಂದು ಅವರು ಹೇಳಿದರು. ಕಡಲ ತೀರದ ಪ್ರದೇಶದಲ್ಲಿ ಹೊಸ ಟೆಂಟ್ ಸಿಟಿ ತಲೆ ಎತ್ತುತ್ತಿದೆ ಎಂದರು. ಇದಲ್ಲದೆ, ಖಾನ್ವೆಲ್ ರಿವರ್‌ಫ್ರಂಟ್, ದುಧಾನಿ ಜೆಟ್ಟಿ, ಇಕೋ-ರೆಸಾರ್ಟ್ ಮತ್ತು ಕರಾವಳಿ ವಿಹಾರಪಥವು ಪೂರ್ಣಗೊಂಡ ನಂತರ ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.

ದೇಶವು ‘ತುಷ್ಟೀಕರಣ’ಅಥವಾ ಓಲೈಕೆಗೆ ಒತ್ತು ನೀಡುತ್ತಿಲ್ಲ ಬದಲಾಗಿ ‘ಸಂತುಷ್ಟಿಕರಣ’ ಅಥವಾ ತೃಪ್ತಿಗೆ ಒತ್ತು ನೀಡುತ್ತಿದೆ ಎಂದು ಒತ್ತಿ ಹೇಳಿದರು. ಕಳೆದ 9 ವರ್ಷಗಳಲ್ಲಿ ಹಿಂದುಳಿದವರ ಅಗತ್ಯಗಳಿಗೆ ಆದ್ಯತೆ ನೀಡುವುದು ಉತ್ತಮ ಆಡಳಿತದ ವಿಶಿಷ್ಟ ಲಕ್ಷಣವಾಗಿದೆ, ಸಮಾಜದ ಪ್ರತಿ ವಂಚಿತ ವರ್ಗ ಮತ್ತು ಪ್ರತಿ ವಂಚಿತರಿಗೆ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರವು ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರವು ನಾಗರಿಕರ ಮನೆ ಬಾಗಿಲಿಗೆ ಬಂದಾಗ ಭ್ರಷ್ಟಾಚಾರ ಮತ್ತು ತಾರತಮ್ಯ ನಿವಾರಣೆಯಾಗುತ್ತದೆ ಮತ್ತು ಯೋಜನೆಗಳ ಸಂಪೂರ್ಣತೆಯನ್ನು ಸಾಧಿಸಲಾಗುತ್ತದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳೊಂದಿಗೆ ದಮನ್, ದಿಯು, ದಾದ್ರಾ ಮತ್ತು ನಗರ ಹವೇಲಿಯು ಸಂಪೂರ್ಣತೆಗೆ ಅತ್ಯಂತ ಸಮೀಪದಲ್ಲಿದೆ ಎಂದು ಶ್ರೀ ಮೋದಿ ಹರ್ಷ ವ್ಯಕ್ತಪಡಿಸಿದರು. ವಿಕಸಿತ ಭಾರತ ಮತ್ತು ಸಮೃದ್ಧಿಯ ಸಂಕಲ್ಪವನ್ನು 'ಸಬ್ಕಾ ಪ್ರಯಾಸ್' ಮೂಲಕ ಸಾಧಿಸಲಾಗುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯ ಮಾಡಿದರು. 

ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪದ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್, ದಾದ್ರಾ ಮತ್ತು ನಗರ ಹವೇಲಿ ಮತ್ತು ಸಂಸದೆ ಶ್ರೀಮತಿ ಕಲಾಬೆನ್ ಮೋಹನ್ ಭಾಯಿ ದೇಲ್ಕರ್ ಮತ್ತು ಕೌಶಂಬಿ ಸಂಸದ ವಿನೋದ್ ಸೋಂಕರ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಸಿಲ್ವಾಸ್ಸಾದಲ್ಲಿ ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ಲೋಕಾರ್ಪಣೆ ಮಾಡಿದರು, ಇದರ ಅಡಿಪಾಯವನ್ನು ಪ್ರಧಾನ ಮಂತ್ರಿಯವರು ಜನವರಿ 2019 ರಲ್ಲಿ ಹಾಕಿದ್ದರು. ಇದು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಸುಧಾರಿಸುತ್ತದೆ. ಅತ್ಯಾಧುನಿಕ ವೈದ್ಯಕೀಯ ಕಾಲೇಜು ಇತ್ತೀಚಿನ ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿದೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಿಗೆ ಪ್ರವೇಶವನ್ನು ಹೊಂದಿರುವ 24x7 ಕೇಂದ್ರ ಗ್ರಂಥಾಲಯ, ವಿಶೇಷ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಪ್ರಯೋಗಾಲಯಗಳು, ಸ್ಮಾರ್ಟ್ ಉಪನ್ಯಾಸ ಸಭಾಂಗಣಗಳು, ಸಂಶೋಧನಾ ಪ್ರಯೋಗಾಲಯಗಳು, ಅಂಗರಚನಾ ವಸ್ತುಸಂಗ್ರಹಾಲಯ, ಕ್ಲಬ್‌ಹೌಸ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗಾಗಿ ಕ್ರೀಡಾ ಸೌಲಭ್ಯಗಳು ಮತ್ತು ನಿವಾಸಗಳು ಇಲ್ಲಿವೆ. 

ಪ್ರಧಾನಮಂತ್ರಿಯವರು 4850 ಕೋಟಿ ರೂ.ಗೂ ಹೆಚ್ಚು ಮೊತ್ತದ 96 ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಸಿಲ್ವಾಸ್ಸಾದ ಸೈಲಿ ಮೈದಾನದಲ್ಲಿ ನೆರವೇರಿಸಿದರು. ದಾದ್ರಾ ಮತ್ತು ನಗರ ಹವೇಲಿ ಜಿಲ್ಲೆಯ ಮೋರ್ಖಾಲ್, ಖೇರ್ಡಿ, ಸಿಂಡೋನಿ ಮತ್ತು ಮಸತ್‌ನಲ್ಲಿರುವ ಸರ್ಕಾರಿ ಶಾಲೆಗಳು; ಅಂಬಾವಾಡಿ, ಪರಿಯಾರಿ, ದಮನವಾಡ, ಖಾರಿವಾಡದ ಸರ್ಕಾರಿ ಶಾಲೆಗಳು ಮತ್ತು ದಮನ್‌ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು; ದಾದ್ರಾ ಮತ್ತು ನಗರ್ ಹವೇಲಿ ಜಿಲ್ಲೆಯ ವಿವಿಧ ರಸ್ತೆಗಳ ಸುಂದರೀಕರಣ, ಬಲಪಡಿಸುವಿಕೆ ಮತ್ತು ಅಗಲೀಕರಣ; ಮೋತಿ ದಮನ್ ಮತ್ತು ನಾನಿ ದಮನ್‌ನಲ್ಲಿ ಮೀನು ಮಾರುಕಟ್ಟೆ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ನಾನಿ ದಮನ್‌ನಲ್ಲಿ ನೀರು ಸರಬರಾಜು ಯೋಜನೆಯ ವರ್ಧನೆಗಳು ಇವುಗಳಲ್ಲಿ ಸೇರಿವೆ. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
25% of India under forest & tree cover: Government report

Media Coverage

25% of India under forest & tree cover: Government report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi