ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಸೂರತ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಜಲ ಸಂಚಯ್ ಜನ ಭಾಗೀದಾರಿ' ಉಪಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಅಡಿಯಲ್ಲಿ, ಮಳೆ ನೀರು ಕೊಯ್ಲು ಹೆಚ್ಚಿಸಲು ಮತ್ತು ದೀರ್ಘಾವಧಿಯ ನೀರಿನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಸುಮಾರು 24,800 ಮಳೆ ನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗುತ್ತಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಜಲಶಕ್ತಿ ಸಚಿವಾಲಯವು ಗುಜರಾತ್ ನೆಲದಿಂದ ಮಹತ್ವದ ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು. ಮುಂಗಾರು ಋತುವಿನಿಂದ ಉಂಟಾದ ಹಾನಿಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ದೇಶದ ಬಹುತೇಕ ಎಲ್ಲಾ ಪ್ರದೇಶಗಳು ಅದರಿಂದಾಗಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು ಎಂದು ಹೇಳಿದರು. ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ತಾಲ್ಲೂಕಿನಲ್ಲಿಯೂ ಇಂತಹ ಧಾರಾಕಾರ ಮಳೆಯನ್ನು ನೋಡಿರಲಿಲ್ಲ ಅಥವಾ ಕೇಳಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಗುಜರಾತ್ ಈ ಬಾರಿ ತೀವ್ರ ಬಿಕ್ಕಟ್ಟನ್ನು ಎದುರಿಸಿತು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಇಲಾಖೆಗಳು ಸಂಪೂರ್ಣವಾಗಿ ಸಜ್ಜಾಗಿರಲಿಲ್ಲ, ಆದರೆ, ಗುಜರಾತ್ ಮತ್ತು ದೇಶದ ಜನರು ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಪರಸ್ಪರ ಸಹಾಯ ಮಾಡಿದರು. ದೇಶದ ಹಲವು ಭಾಗಗಳು ಇನ್ನೂ ಮಳೆಗಾಲದ ಪರಿಣಾಮಗಳಿಂದ ತತ್ತರಿಸುತ್ತಿವೆ ಎಂದು ಅವರು ಹೇಳಿದರು.
ಜಲ ಸಂರಕ್ಷಣೆ ಕೇವಲ ಒಂದು ನೀತಿಯಲ್ಲ, ಅದೊಂದು ಪ್ರಯತ್ನ ಮತ್ತು ಪುಣ್ಯವೂ ಹೌದು ಎಂದು ಪ್ರಧಾನಿ ಹೇಳಿದರು. ಇದರಲ್ಲಿ ಔದಾರ್ಯತೆ ಜೊತೆಗೆ ಜವಾಬ್ದಾರಿಯೂ ಇದೆ. ನಮ್ಮ ಮುಂದಿನ ಪೀಳಿಗೆಗಳು ನಮ್ಮನ್ನು ಮೌಲ್ಯಮಾಪಮನ ಮಾಡುವ ಮೊದಲ ಮಾನದಂಡವೆಂದರೆ ನೀರು ಎಂದು ಶ್ರೀ ಮೋದಿ ಹೇಳಿದರು. ಇದಕ್ಕೆ ಕಾರಣ ನೀರು ಕೇವಲ ಸಂಪನ್ಮೂಲವಾಗದೆ ಜೀವನ ಮತ್ತು ಮನುಕುಲದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು. ಹೀಗಾಗಿ, ಸುಸ್ಥಿರ ಭವಿಷ್ಯದ ಕಡೆಗೆ 9 ನಿರ್ಣಯಗಳಲ್ಲಿ ಜಲ ಸಂರಕ್ಷಣೆಯು ಅಗ್ರಗಣ್ಯವಾಗಿದೆ ಎಂದು ಅವರು ಹೇಳಿದರು. ಜಲ ಸಂರಕ್ಷಣೆಯ ಅರ್ಥಪೂರ್ಣ ಪ್ರಯತ್ನಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಆರಂಭವಾಗಿರುವುದಕ್ಕೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಅವರು ಜಲಶಕ್ತಿ ಸಚಿವಾಲಯ, ಗುಜರಾತ್ ಸರ್ಕಾರ ಮತ್ತು ಉಪಕ್ರಮದ ಎಲ್ಲಾ ಭಾಗೀದಾರರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಪರಿಸರ ಮತ್ತು ಜಲ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವಿಶ್ವದ ಸಿಹಿನೀರಿನ ಶೇಕಡಾ 4 ರಷ್ಟು ಮಾತ್ರ ಭಾರತದಲ್ಲಿದೆ ಎಂದು ಹೇಳಿದರು. "ದೇಶವು ಅನೇಕ ಭವ್ಯವಾದ ನದಿಗಳನ್ನು ಹೊಂದಿದ್ದರೂ ಸಹ, ದೊಡ್ಡ ಭೌಗೋಳಿಕ ಪ್ರದೇಶಗಳು ನೀರಿನಿಂದ ವಂಚಿತವಾಗಿವೆ ಮತ್ತು ಅಂತರ್ಜಲ ಮಟ್ಟವು ವೇಗವಾಗಿ ಕುಸಿಯುತ್ತಿದೆ" ಎಂದು ಅವರು ಹೇಳಿದರು. ನೀರಿನ ಕೊರತೆಯ ಜೊತೆಗೆ ಹವಾಮಾನ ಬದಲಾವಣೆಯು ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಅವರು ಒತ್ತಿ ಹೇಳಿದರು.
ಸವಾಲಿನ ಸಂದರ್ಭಗಳ ಹೊರತಾಗಿಯೂ, ತನಗೆ ಮತ್ತು ಜಗತ್ತಿಗೆ ಪರಿಹಾರವನ್ನು ಕಂಡುಕೊಳ್ಳುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದ ಪ್ರಾಚೀನ ಗ್ರಂಥಗಳ ತಿಳುವಳಿಕೆಗೆ ಮನ್ನಣೆ ನೀಡಿದ ಅವರು, ನೀರು ಮತ್ತು ಪರಿಸರ ಸಂರಕ್ಷಣೆಯನ್ನು ಪುಸ್ತಕದ ಅಥವಾ ಯಾವುದೇ ಪರಿಸ್ಥಿತಿಯಿಂದ ಎದುರಾಗುವ ಜ್ಞಾನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು. ನೀರು ಮತ್ತು ಪರಿಸರ ಸಂರಕ್ಷಣೆ ಭಾರತದ ಸಾಂಪ್ರದಾಯಿಕ ಪ್ರಜ್ಞೆಯ ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನೀರನ್ನು ದೇವರ ರೂಪವೆಂದೂ, ನದಿಗಳನ್ನು ದೇವತೆಗಳೆಂದೂ, ಸರೋವರಗಳನ್ನು ದೇವರ ವಾಸಸ್ಥಾನವೆಂದೂ ಭಾವಿಸುವ ಸಂಸ್ಕೃತಿಗೆ ಭಾರತದ ಜನ ಸೇರಿದ್ದಾರೆ ಎಂದರು. ಗಂಗಾ, ನರ್ಮದಾ, ಗೋದಾವರಿ ಮತ್ತು ಕಾವೇರಿಯನ್ನು ತಾಯಿಯೆಂದು ಪೂಜಿಸಲಾಗುತ್ತದೆ ಎಂದು ಅವರು ಹೇಳಿದರು. ಪುರಾತನ ಗ್ರಂಥಗಳನ್ನು ಉಲ್ಲೇಖಿಸಿದ ಪ್ರಧಾನಿ, ನೀರನ್ನು ಉಳಿಸುವುದು ಮತ್ತು ದಾನ ಮಾಡುವುದು ಅತ್ಯುನ್ನತ ಸೇವೆಯಾಗಿದೆ, ಏಕೆಂದರೆ ಎಲ್ಲಾ ಜೀವ ರೂಪಗಳು ನೀರಿನಿಂದ ಹುಟ್ಟಿಕೊಂಡಿವೆ ಮತ್ತು ಅದರ ಮೇಲೆ ಅವಲಂಬಿತವಾಗಿವೆ ಎಂದು ವಿವರಿಸಿದರು. ಭಾರತದ ಪೂರ್ವಜರು ನೀರು ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿದಿದ್ದರು ಎಂದು ಅವರು ಒತ್ತಿ ಹೇಳಿದರು. ರಹೀಮ್ ದಾಸ್ ಅವರ ದ್ವಿಪದಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ದೇಶದ ದೂರದೃಷ್ಟಿಯನ್ನು ಎತ್ತಿ ತೋರಿಸಿದರು ಮತ್ತು ನೀರು ಮತ್ತು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಮುಂದಾಳತ್ವ ವಹಿಸಬೇಕಾದ ಅಗತ್ಯವನ್ನು ವ್ಯಕ್ತಪಡಿಸಿದರು.
'ಜಲ ಸಂಚಯ ಜನ ಭಾಗಗೀದಾರಿ' ಉಪಕ್ರಮವು ಗುಜರಾತ್ ನಿಂದ ಪ್ರಾರಂಭವಾಗುತ್ತಿದೆ ಮತ್ತು ನಾಗರಿಕರಿಗೆ ನೀರಿನ ಪ್ರವೇಶ ಮತ್ತು ಲಭ್ಯತೆಯನ್ನು ಖಾತ್ರಿಪಡಿಸುವ ಅನೇಕ ಯಶಸ್ವಿ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಎರಡೂವರೆ ದಶಕಗಳ ಹಿಂದೆ ಸೌರಾಷ್ಟ್ರದಲ್ಲಿ ಹಿಂದಿನ ಸರ್ಕಾರಗಳು ಜಲ ಸಂರಕ್ಷಣೆಯ ದೂರದೃಷ್ಟಿಯ ಕೊರತೆಯನ್ನು ಹೊಂದಿದ್ದ ಪರಿಸ್ಥಿತಿಯನ್ನು ಶ್ರೀ ಮೋದಿಯವರು ನೆನಪಿಸಿಕೊಂಡರು. ಈ ಗಂಭೀರ ಬಿಕ್ಕಟ್ಟನ್ನು ನಿವಾರಿಸಲು ಮತ್ತು ದಶಕಗಳಿಂದ ಬಾಕಿ ಉಳಿದಿದ್ದ ಸರ್ದಾರ್ ಸರೋವರ ಅಣೆಕಟ್ಟನ್ನು ಪೂರ್ಣಗೊಳಿಸಲು ಮತ್ತು ಕಾರ್ಯಾರಂಭ ಮಾಡಲು ತಾವು ಸಂಕಲ್ಪ ಮಾಡಿದ್ದಾಗಿ ಅವರು ಹೇಳಿದರು. ಹೆಚ್ಚುವರಿ ಪ್ರದೇಶಗಳಿಂದ ನೀರನ್ನು ತೆಗೆದುಕೊಂಡು ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ಹರಿಸುವ ಮೂಲಕ ಸೌನಿ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಗುಜರಾತಿನಲ್ಲಿ ಮಾಡಿದ ಪ್ರಯತ್ನಗಳ ಫಲ ಇಂದು ಜಗತ್ತಿಗೆ ಗೋಚರಿಸುತ್ತಿದೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು.
"ಜಲ ಸಂರಕ್ಷಣೆಯು ಕೇವಲ ನೀತಿಗಳ ವಿಷಯ ಮಾತ್ರವಲ್ಲ, ಸಾಮಾಜಿಕ ಬದ್ಧತೆಯೂ ಆಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಜಾಗೃತ ನಾಗರಿಕ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಜನಾಂದೋಲನದ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಈ ಹಿಂದೆ ಸಾವಿರಾರು ಕೋಟಿ ವೆಚ್ಚದ ಜಲಸಂಬಂಧಿ ಯೋಜನೆಗಳನ್ನು ಆರಂಭಿಸಲಾಗಿದ್ದರೂ ಅದರ ಫಲಿತಾಂಶವು ಕಳೆದ 10 ವರ್ಷಗಳಲ್ಲಿ ಮಾತ್ರ ಗೋಚರಿಸುತ್ತಿದೆ ಎಂದು ತಿಳಿಸಿದರು. "ನಮ್ಮ ಸರ್ಕಾರವು ಸಂಪೂರ್ಣ ಸಮಾಜ ಮತ್ತು ಸಂಪೂರ್ಣ ಸರ್ಕಾರದ ವಿಧಾನದೊಂದಿಗೆ ಕೆಲಸ ಮಾಡಿದೆ" ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಮಾಡಿದ ಕೆಲಸಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಮೊದಲ ಬಾರಿಗೆ ನೀರಿನ ಸಮಸ್ಯೆಗಳ ಮೇಲಿನ ಅಡೆತಡೆಗಳನ್ನು ಒಡೆಯಲಾಯಿತು ಮತ್ತು ಸರ್ಕಾರದ ಸಂಪೂರ್ಣ ವಿಧಾನದ ಬದ್ಧತೆಯನ್ನು ಪೂರೈಸಲು ಜಲ ಶಕ್ತಿ ಸಚಿವಾಲಯವನ್ನು ರಚಿಸಲಾಯಿತು ಎಂದು ಹೇಳಿದರು. ಜಲ ಜೀವನ್ ಮಿಷನ್ ಮೂಲಕ ಪ್ರತಿ ಮನೆಗೆ ನಲ್ಲಿ ನೀರು ಪೂರೈಸುವ ಸಂಕಲ್ಪ ಕುರಿತು ಮಾತನಾಡಿದ ಅವರು, ಈ ಹಿಂದೆ ಕೇವಲ 3 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವಿತ್ತು, ಆದರೆ ಇಂದು ಈ ಸಂಖ್ಯೆ 15 ಕೋಟಿಗೂ ಹೆಚ್ಚು. ದೇಶದ 75 ಪ್ರತಿಶತಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ನಲ್ಲಿ ನೀರನ್ನು ಒದಗಿಸಿದ ಜಲ-ಜೀವನ್ ಮಿಷನ್ ಗೆ ಅವರು ಧನ್ಯವಾದ ಹೇಳಿದರು. ಜಲ-ಜೀವನ್ ಮಿಷನ್ ಗೆ ಸ್ಥಳೀಯ ಜಲಸಮಿತಿಗಳು ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಅವರು, ಗುಜರಾತಿನ ಜಲಸಮಿತಿಗಳಲ್ಲಿ ಮಹಿಳೆಯರು ಅದ್ಭುತ ಕೆಲಸ ಮಾಡಿದಂತೆ ದೇಶಾದ್ಯಂತ ಜಲಸಮಿತಿಗಳಲ್ಲಿ ಮಹಿಳೆಯರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. "ಇದರಲ್ಲಿ ಕನಿಷ್ಠ 50 ಪ್ರತಿಶತದಷ್ಟು ಭಾಗವಹಿಸುವಿಕೆಯು ಹಳ್ಳಿಯ ಮಹಿಳೆಯರದ್ದಾಗಿದೆ" ಎಂದು ಅವರು ಹೇಳಿದರು.
ಜಲಶಕ್ತಿ ಅಭಿಯಾನವು ಇಂದು ಹೇಗೆ ರಾಷ್ಟ್ರೀಯ ಧ್ಯೇಯವಾಗಿದೆ ಎಂಬುದನ್ನು ಎತ್ತಿತೋರಿಸಿದ ಪ್ರಧಾನಮಂತ್ರಿಯವರು, ಸಾಂಪ್ರದಾಯಿಕ ಜಲಮೂಲಗಳ ನವೀಕರಣವಾಗಲಿ ಅಥವಾ ಹೊಸ ರಚನೆಗಳ ನಿರ್ಮಾಣವಾಗಲಿ, ಭಾಗೀದಾರರಿಂದ ಹಿಡಿದು ನಾಗರಿಕ ಸಮಾಜ ಮತ್ತು ಪಂಚಾಯತ್ ಗಳವರೆಗೆ ಸಮಾಜದ ಎಲ್ಲಾ ವರ್ಗದ ವ್ಯಕ್ತಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಸಾರ್ವಜನಿಕ ಸಹಭಾಗಿತ್ವದ ಶಕ್ತಿಯನ್ನು ವಿವರಿಸಿದ ಶ್ರೀ ಮೋದಿ, ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಅಮೃತ ಸರೋವರದ ಕೆಲಸ ಪ್ರಾರಂಭವಾಯಿತು ಮತ್ತು ಇಂದು ದೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳು ನಿರ್ಮಾಣವಾಗಿವೆ ಎಂದು ಒತ್ತಿ ಹೇಳಿದರು. ಅದೇ ರೀತಿ, ಅಟಲ್ ಭೂಜಲ ಯೋಜನೆಯು ಅಂತರ್ಜಲ ಮರುಪೂರಣಕ್ಕಾಗಿ ನೀರಿನ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಗ್ರಾಮಸ್ಥರ ಜವಾಬ್ದಾರಿಯನ್ನು ಸಹ ಒಳಗೊಂಡಿದೆ. ಇದಲ್ಲದೆ, 2021 ರಲ್ಲಿ ಪ್ರಾರಂಭವಾದ 'ಕ್ಯಾಚ್ ದಿ ರೈನ್' ಅಭಿಯಾನವು ಇಂದು ಹೆಚ್ಚಿನ ಸಂಖ್ಯೆಯ ಭಾಗೀದಾರರನ್ನು ಒಳಗೊಂಡಿದೆ ಎಂದು ಹೇಳಿದರು. ‘ನಮಾಮಿ ಗಂಗೆ’ಉಪಕ್ರಮ ಕುರಿತು ಮಾತನಾಡಿದ ಶ್ರೀ ಮೋದಿ, ಇದು ನಾಗರಿಕರಿಗೆ ಭಾವನಾತ್ಮಕ ಸಂಕಲ್ಪವಾಗಿದೆ ಮತ್ತು ಜನರು ನದಿಗಳ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಹಳೆಯ ಸಂಪ್ರದಾಯಗಳು ಮತ್ತು ಅಪ್ರಸ್ತುತ ಪದ್ಧತಿಗಳನ್ನು ತ್ಯಜಿಸುತ್ತಿದ್ದಾರೆ ಎಂದು ಒತ್ತಿ ಹೇಳಿದರು.
‘ಏಕ್ ಪೇಡ್ ಮಾ ಕೆ ನಾಮ್’(ತಾಯಿಯ ಹೆಸರಿನಲ್ಲಿ ಒಂದು ಗಿಡ) ಅಭಿಯಾನದಡಿಯಲ್ಲಿ ಒಂದು ಸಸಿಯನ್ನು ನೆಡುವಂತೆ ನಾಗರಿಕರಿಗೆ ಮಾಡಿದ ಮನವಿಯನ್ನು ಉಲ್ಲೇಖಿಸಿದ ಪ್ರಧಾನಿ, ಅರಣ್ಯೀಕರಣದಿಂದ ಅಂತರ್ಜಲ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ ಎಂದು ಹೇಳಿದರು. ಕಳೆದ ಕೆಲವು ವಾರಗಳಲ್ಲಿ ‘ಏಕ್ ಪೇಡ್ ಮಾ ಕೆ ನಾಮ್’ಅಡಿಯಲ್ಲಿ ಕೋಟಿಗಟ್ಟಲೆ ಗಿಡಗಳನ್ನು ನೆಡಲಾಗಿದೆ ಎಂದು ಅವರು ತಿಳಿಸಿದರು. ಇಂತಹ ಅಭಿಯಾನಗಳು ಮತ್ತು ಸಂಕಲ್ಪಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಶ್ರೀ ಮೋದಿಯವರು ಒತ್ತಿ ಹೇಳಿದರು ಮತ್ತು 140 ಕೋಟಿ ನಾಗರಿಕರ ಭಾಗವಹಿಸುವಿಕೆಯೊಂದಿಗೆ ಜಲ ಸಂರಕ್ಷಣೆಯ ಪ್ರಯತ್ನಗಳು ಜನಾಂದೋಲನವಾಗಿ ಬದಲಾಗುತ್ತಿವೆ ಎಂದು ಹೇಳಿದರು.
ನೀರಿನ ಸಂರಕ್ಷಣೆಗೆ ತಕ್ಷಣದ ಕ್ರಮ ಕೈಗೊಳ್ಳಲು ಮತ್ತು ನೀರು ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೇಶದ ಭವಿಷ್ಯವನ್ನು ಭದ್ರಪಡಿಸಲು 'ಕಡಿಮೆ ಬಳಕೆ, ಮರುಬಳಕೆ, ಮರುಪೂರಣ ಮತ್ತು ಮರುಬಳಕೆ' ಎಂಬ ಮಂತ್ರವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ನೀರಿನ ದುರುಪಯೋಗವನ್ನು ನಿಲ್ಲಿಸಿ, ಬಳಕೆಯನ್ನು ಕಡಿಮೆ ಮಾಡಿ, ನೀರಿನ ಮರು ಬಳಕೆ ಮಾಡಿ, ಜಲಮೂಲಗಳನ್ನು ಮರುಪೂರಣ ಮಾಡಿ ಮತ್ತು ಕಲುಷಿತ ನೀರನ್ನು ಮರುಬಳಕೆ ಮಾಡಿದರೆ ಮಾತ್ರ ನೀರಿನ ಉಳಿತಾಯ ಸಾಧ್ಯ ಎಂದು ಅವರು ಹೇಳಿದರು. ಈ ಮಿಷನ್ ನಲ್ಲಿ ನವೀನ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಭಾರತದ ಸುಮಾರು 80 ಪ್ರತಿಶತದಷ್ಟು ನೀರಿನ ಅವಶ್ಯಕತೆಗಳನ್ನು ಕೃಷಿಗೆ ಪೂರೈಸಲಾಗುತ್ತದೆ ಎಂದು ಅವರು ಗಮನಸೆಳೆದರು, ಸುಸ್ಥಿರತೆಗೆ ಕಡಿಮೆ ನೀರಿನ ಕೃಷಿಯು ನಿರ್ಣಾಯಕವಾಗಿದೆ. ಸುಸ್ಥಿರ ಕೃಷಿಗಾಗಿ ಹನಿ ನೀರಾವರಿಯಂತಹ ತಂತ್ರಜ್ಞಾನಗಳನ್ನು ಸರ್ಕಾರ ನಿರಂತರವಾಗಿ ಉತ್ತೇಜಿಸುತ್ತಿದೆ ಎಂದು ಹೇಳಿದರು. ‘ಪರ್ ಡ್ರಾಪ್ ಮೋರ್ ಕ್ರಾಪ್’ಅಭಿಯಾನದ ಕುರಿತು ಮಾತನಾಡಿದ ಅವರು, ಇದು ನೀರಿನ ಸಂರಕ್ಷಣೆಗೆ ಸಹಾಯ ಮಾಡುತ್ತಿದೆ ಮತ್ತು ನೀರಿನ ಕೊರತೆಯ ಪ್ರದೇಶಗಳಲ್ಲಿ ರೈತರ ಆದಾಯವನ್ನು ಹೆಚ್ಚಿಸುತ್ತಿದೆ. ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಸಿರಿಧಾನ್ಯಗಳಂತಹ ಕಡಿಮೆ ನೀರಿನ ಅಗತ್ಯವಿರುವ ಬೆಳೆಗಳನ್ನು ಬೆಳೆಯಲು ಸರ್ಕಾರ ನೀಡುತ್ತಿರುವ ಬೆಂಬಲವನ್ನು ಶ್ರೀ ಮೋದಿ ಎತ್ತಿ ತೋರಿಸಿದರು. ರಾಜ್ಯ ಮಟ್ಟದ ಪ್ರಯತ್ನಗಳ ಕುರಿತು ಮಾತು ಮುಂದುವರಿಸಿದ ಶ್ರೀ ಮೋದಿಯವರು, ಜಲ ಸಂರಕ್ಷಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ವೇಗಗೊಳಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಿದರು. ಕೆಲವು ರಾಜ್ಯಗಳು ಕಡಿಮೆ ನೀರು ಸೇವಿಸುವ ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹವನ್ನು ನೀಡುತ್ತಿವೆ ಎಂದು ಒಪ್ಪಿಕೊಂಡ ಪ್ರಧಾನಿ, ಈ ಪ್ರಯತ್ನಗಳನ್ನು ಮುಂದುವರಿಸಲು ಎಲ್ಲಾ ರಾಜ್ಯಗಳು ಒಗ್ಗೂಡಿ ಮಿಷನ್ ಮೋಡ್ ನಲ್ಲಿ ಕೆಲಸ ಮಾಡುವಂತೆ ಕರೆ ನೀಡಿದರು. "ಹೊಸ ತಂತ್ರಜ್ಞಾನಗಳ ಜೊತೆಗೆ ಜಮೀನುಗಳ ಬಳಿ ಕೊಳಗಳನ್ನು ನಿರ್ಮಿಸುವುದು ಮತ್ತು ಬಾವಿಗಳನ್ನು ಮರುಪೂರಣ ಮಾಡುವಂತಹ ಸಾಂಪ್ರದಾಯಿಕ ಜ್ಞಾನವನ್ನು ನಾವು ಉತ್ತೇಜಿಸಬೇಕು" ಎಂದು ಅವರು ಹೇಳಿದರು.
"ಒಂದು ಬೃಹತ್ ನೀರಿನ ಆರ್ಥಿಕತೆಯು ಶುದ್ಧ ನೀರಿನ ಲಭ್ಯತೆ ಮತ್ತು ನೀರಿನ ಸಂರಕ್ಷಣೆಯ ಯಶಸ್ಸಿಗೆ ಸಂಬಂಧಿಸಿದೆ" ಎಂದು ಮೋದಿ ಒತ್ತಿ ಹೇಳಿದರು. ಜಲ ಜೀವನ್ ಮಿಷನ್ ಇಂಜಿನಿಯರ್ ಗಳು, ಪ್ಲಂಬರ್ ಗಳು, ಎಲೆಕ್ಟ್ರಿಷಿಯನ್ ಮತ್ತು ಮ್ಯಾನೇಜರ್ ಗಳಂತಹ ಲಕ್ಷಾಂತರ ಜನರಿಗೆ ಉದ್ಯೋಗದ ಜೊತೆಗೆ ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಪ್ರತಿ ಮನೆಗೆ ಕೊಳವೆ ನೀರನ್ನು ಒದಗಿಸುವುದರಿಂದ ದೇಶದ ನಾಗರಿಕರ ಸುಮಾರು 5.5 ಕೋಟಿ ಮಾನವ ಗಂಟೆಗಳು ಉಳಿತಾಯವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಈ ಉಪಕ್ರಮವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಮಯ ಮತ್ತು ಶ್ರಮವನ್ನು ಉಳಿಸಲು ಸಹಾಯ ಮಾಡುತ್ತದೆ, ಇದು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಆರೋಗ್ಯವು ನೀರಿನ ಆರ್ಥಿಕತೆಯ ಪ್ರಮುಖ ಅಂಶವಾಗಿದೆ ಎಂದು ಶ್ರೀ ಮೋದಿ ಹೇಳಿದರು. ವರದಿಗಳ ಪ್ರಕಾರ, ಜಲ ಜೀವನ್ ಮಿಷನ್ ನಿಂದ 1.25 ಲಕ್ಷಕ್ಕೂ ಹೆಚ್ಚು ಮಕ್ಕಳ ಅಕಾಲಿಕ ಮರಣವನ್ನು ತಡೆಯಬಹುದು, ಪ್ರತಿ ವರ್ಷ 4 ಲಕ್ಷಕ್ಕೂ ಹೆಚ್ಚು ಜನರನ್ನು ಅತಿಸಾರದಂತಹ ಕಾಯಿಲೆಗಳಿಂದ ರಕ್ಷಿಸಬಹುದು, ಇದರಿಂದಾಗಿ ಜೇಬಿನ ಖರ್ಚು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ನೀರಿನ ಸಂರಕ್ಷಣೆಗಾಗಿ ಭಾರತದ ಅಭಿಯಾನದಲ್ಲಿ ಕೈಗಾರಿಕೆಗಳು ವಹಿಸಿದ ಮಹತ್ವದ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಅವರ ಕೊಡುಗೆಗಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ನೆಟ್ ಝೀರೋ ಲಿಕ್ವಿಡ್ ಡಿಸ್ಚಾರ್ಜ್ ಸ್ಟ್ಯಾಂಡರ್ಡ್ಸ್ ಮತ್ತು ನೀರು ಮರುಬಳಕೆ ಗುರಿಗಳನ್ನು ಪೂರೈಸಿದ ಕೈಗಾರಿಕೆಗಳಿಗೆ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ನೀರಿನ ಸುಸ್ಥಿರತೆಯನ್ನು ಪರಿಹರಿಸುವಲ್ಲಿ ವಿವಿಧ ವಲಯಗಳ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಅನೇಕ ಕೈಗಾರಿಕೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ನೀರಿನ ಸಂರಕ್ಷಣೆ ಯೋಜನೆಗಳನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು. ಜಲ ಸಂರಕ್ಷಣೆಗಾಗಿ ಗುಜರಾತಿನಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿಯ ವಿನೂತನ ಬಳಕೆಯನ್ನು ಶ್ರೀ ಮೋದಿ ಶ್ಲಾಘಿಸಿದರು, ಇದು ದಾಖಲೆಯ ಪ್ರಯತ್ನ ಎಂದು ಅವರು ಹೇಳಿದರು. “ಗುಜರಾತ್ ನೀರಿನ ಸಂರಕ್ಷಣೆಗಾಗಿ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸುವ ಮೂಲಕ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಸೂರತ್, ವಲ್ಸಾಡ್, ದಾಂಗ್, ತಾಪಿ ಮತ್ತು ನವಸಾರಿಯಂತಹ ಸ್ಥಳಗಳಲ್ಲಿ ಸರಿಸುಮಾರು 10,000 ಕೊಳವೆಬಾವಿ ಮರುಪೂರಣ ರಚನೆಗಳನ್ನು ಪೂರ್ಣಗೊಳಿಸಲಾಗಿದೆ” ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಉಪಕ್ರಮಗಳು ನೀರಿನ ಕೊರತೆಯನ್ನು ಪರಿಹರಿಸಲು ಮತ್ತು ನಿರ್ಣಾಯಕ ಪ್ರದೇಶಗಳಲ್ಲಿ ಅಂತರ್ಜಲ ಸಂಪನ್ಮೂಲಗಳನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು. ಸರ್ಕಾರ ಮತ್ತು ಖಾಸಗಿ ವಲಯದ ಸಹಯೋಗದ ಪ್ರಯತ್ನಗಳಿಗೆ ಹೆಚ್ಚಿನ ಒತ್ತು ನೀಡಿದ ಶ್ರೀ ಮೋದಿ ಅವರು, “ಜಲ ಸಂಚಯ್-ಜನ ಭಾಗೀದಾರಿ ಅಭಿಯಾನದ ಮೂಲಕ, ಜಲ ಶಕ್ತಿ ಸಚಿವಾಲಯ ಮತ್ತು ಗುಜರಾತ್ ಸರ್ಕಾರವು ಈಗ ಅಂತಹ 24,000 ರಚನೆಗಳನ್ನು ನಿರ್ಮಿಸಲು ಹೊಸ ಮಿಷನ್ ಅನ್ನು ಪ್ರಾರಂಭಿಸಿದೆ." ಎಂದು ಘೋಷಿಸಿದರು. ಈ ಅಭಿಯಾನವು ಭವಿಷ್ಯದಲ್ಲಿ ಇದೇ ರೀತಿಯ ಉಪಕ್ರಮಗಳನ್ನು ಕೈಗೊಳ್ಳಲು ಇತರ ರಾಜ್ಯಗಳಿಗೆ ಸ್ಫೂರ್ತಿ ನೀಡುವ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದರು.
ಜಲ ಸಂರಕ್ಷಣೆಯಲ್ಲಿ ಭಾರತವು ಜಾಗತಿಕ ಸ್ಫೂರ್ತಿಯಾಗಲಿದೆ ಎಂಬ ನಂಬಿಕೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. "ಒಟ್ಟಾಗಿ, ನಾವು ಭಾರತವನ್ನು ಇಡೀ ಮನುಕುಲದ ನೀರಿನ ಸಂರಕ್ಷಣೆಯ ದಾರಿದೀಪವಾಗಿ ಮಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು, ಮಿಷನ್‌ನ ನಿರಂತರ ಯಶಸ್ಸಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ ಆರ್ ಪಾಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನ ಮಂತ್ರಿಯವರ ಜಲ ಸುರಕ್ಷತೆಯ ದೃಷ್ಟಿಕೋನವನ್ನು ಮತ್ತಷ್ಟು ಹೆಚ್ಚಿಸಲು, 'ಜಲ ಸಂಚಯ್ ಜನ ಭಾಗೀದಾರಿ' ಉಪಕ್ರಮವು ಸಮುದಾಯ ಸಹಭಾಗಿತ್ವ ಮತ್ತು ಮಾಲೀಕತ್ವಕ್ಕೆ ಬಲವಾದ ಒತ್ತು ನೀಡುವ ಮೂಲಕ ನೀರನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ. ಇದು ಸಂಪೂರ್ಣ-ಸಮಾಜ ಮತ್ತು ಸಂಪೂರ್ಣ-ಸರ್ಕಾರದ ವಿಧಾನದಿಂದ ಪ್ರೇರಿತವಾಗಿದೆ. ಗುಜರಾತ್ ಸರ್ಕಾರದ ನೇತೃತ್ವದ ನೀರಿನ ಕೊಯ್ಲು ಉಪಕ್ರಮದ ಯಶಸ್ಸಿನ ಆಧಾರದ ಮೇಲೆ, ಜಲ ಶಕ್ತಿ ಸಚಿವಾಲಯವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಗುಜರಾತಿನಲ್ಲಿ 'ಜಲ ಸಂಚಯ್ ಜನ ಭಾಗೀದಾರಿ' ಉಪಕ್ರಮವನ್ನು ಪ್ರಾರಂಭಿಸುತ್ತಿದೆ. ಗುಜರಾತ್ ಸರ್ಕಾರವು ಜಲ-ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಾಗರಿಕರು, ಸ್ಥಳೀಯ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಇತರ ಭಾಗೀದಾರರನ್ನು ಸಜ್ಜುಗೊಳಿಸಲು ಪ್ರಯತ್ನಿಸಿದೆ. ಈ ಕಾರ್ಯಕ್ರಮದಡಿಯಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಸುಮಾರು 24,800 ಮಳೆ ನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮರುಪೂರಣ ರಚನೆಗಳು ಮಳೆನೀರು ಕೊಯ್ಲು ಹೆಚ್ಚಿಸಲು ಮತ್ತು ದೀರ್ಘಾವಧಿಯ ನೀರಿನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗುತ್ತವೆ.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
जल-संचय, ये केवल एक पॉलिसी नहीं है।
— PMO India (@PMOIndia) September 6, 2024
ये एक प्रयास भी है, और पुण्य भी है: PM @narendramodi pic.twitter.com/fhIVxklUSE
जल संरक्षण, प्रकृति संरक्षण… ये भारत की सांस्कृतिक चेतना का हिस्सा है। pic.twitter.com/Y45EHSFzU0
— PMO India (@PMOIndia) September 6, 2024
जल-संरक्षण केवल नीतियों का नहीं, बल्कि सामाजिक निष्ठा का भी विषय है: PM @narendramodi pic.twitter.com/ebCKjDemdi
— PMO India (@PMOIndia) September 6, 2024