ಭಾರತ ಎಂದಿಗೂ ತನ್ನ ಸ್ವಾತಂತ್ರ್ಯ ಯೋಧರನ್ನು ಮರೆಯುವುದಿಲ್ಲ: ಪ್ರಧಾನಮಂತ್ರಿ
ಕಳೆದ ಆರು ವರ್ಷಗಳಲ್ಲಿ ಎಲೆಮರೆಯ ಕಾಯಿಯಂತಹ ನಾಯಕರ ಇತಿಹಾಸದ ರಕ್ಷಣೆಗೆ ನಿರಂತರ ಪ್ರಯತ್ನ: ಪ್ರಧಾನಮಂತ್ರಿ
ನಮ್ಮ ಸಂವಿಧಾನ ಮತ್ತು ನಮ್ಮ ಲೋಕತಂತ್ರದ ಸಂಪ್ರದಾಯದ ಬಗ್ಗೆ ನಮಗೆ ಹೆಮ್ಮೆ ಇದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಪಾದಯಾತ್ರೆಗೆ ಹಸಿರು ನಿಶಾನೆ ತೋರಿ, (ಭಾರತ@75), ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಅವರು ಭಾರತ@75 ಆಚರಣೆ ಕುರಿತ ವಿವಿಧ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳನ್ನೂ ಉದ್ಘಾಟಿಸಿದರು. ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ ಸಿಂಗ್ ಪಟೇಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವವು ಹಲವು ಕಾರ್ಯಕ್ರಮಗಳ ಸರಣಿಯಾಗಿದ್ದು, ಭಾರತ ಸರ್ಕಾರ, ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ಇದನ್ನು ಆಯೋಜಿಸಿದೆ. ಜನರ ಪಾಲ್ಗೊಳ್ಳುವಿಕೆಯ ಸ್ಫೂರ್ತಿಯೊಂದಿಗೆ ಮಹೋತ್ಸವವನ್ನು ಜನ –ಉತ್ಸವವಾಗಿ ಆಚರಿಸಲಾಗುತ್ತಿದೆ.

ಸಾಬರಮತಿ ಆಶ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ 75ನ್ನು 75 ವಾರಗಳ ಮೊದಲು 2020ರ ಆಗಸ್ಟ್ 15ರಿಂದ ಆರಂಭಿಸಲಾಗಿದ್ದು, ಅದು 2023ರ ಆಗಸ್ಟ್ 15ರವರೆಗೆ ನಡೆಯಲಿದೆ ಎಂದರು. ಅವರು ಮಹಾತ್ಮಾ ಗಾಂಧೀ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಮಾಡಿದ ಮಹಾನ್ ನಾಯಕರುಗಳನ್ನು ಸ್ಮರಿಸಿ, ಗೌರವ ನಮನ ಸಲ್ಲಿಸಿದರು.

ಪ್ರಧಾನಮಂತ್ರಿಯವರು ಐದು ಸ್ತಂಭಗಳ ಬಗ್ಗೆ ಅಂದರೆ ಸ್ವಾತಂತ್ರ್ಯ ಸಂಗ್ರಾಮದ, 75ರಲ್ಲಿನ ಕಲ್ಪನೆಗಳು, 75ರಲ್ಲಿನ ಸಾಧನೆಗಳು, 75ರ ಕ್ರಮಗಳು ಮತ್ತು 75ರ ನಿರ್ಣಯಗಳು, ಕನಸುಗಳು ಮತ್ತು ಕರ್ತವ್ಯಗಳನ್ನು ಕಾಪಿಟ್ಟುಕೊಂಡು ಆ ಸ್ಫೂರ್ತಿಯೊಂದಿಗೆ ಮುಂದೆ ಸಾಗಲು ಮಾರ್ಗದರ್ಶಿ ಶಕ್ತಿಯಾಗಿದೆ ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂದರೆ ಸ್ವಾತಂತ್ರ್ಯದ ಅಮೃತ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅಂದರೆ ಅದು ಸ್ವಾತಂತ್ರ್ಯ ಯೋಧರ ಸ್ಫೂರ್ತಿಯ ಅಮೃತ; ಹೊಸ ಕಲ್ಪನೆಗಳ ಅಮೃತ ಮತ್ತು ಆತ್ಮನಿರ್ಭರತೆಯ ಸಂಕಲ್ಪದ ಅಮೃತ ಎಂದು ಬಣ್ಣಿಸಿದರು.

ಉಪ್ಪಿನ ಸಾಂಕೇತಿಕತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಉಪ್ಪನ್ನು ಎಂದಿಗೂ ವೆಚ್ಚದ ಆಧಾರದಲ್ಲಿ ಅಳೆಯುವುದಿಲ್ಲ. ಭಾರತೀಯರಿಗೆ ಉಪ್ಪು ಪ್ರಾಮಾಣಿಕತೆ, ನಂಬಿಕೆ, ನಿಷ್ಠೆ, ಶ್ರಮ, ಸಮಾನತೆ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ ಎಂದರು. ಬ್ರಿಟಿಷರು ಭಾರತದ ಮೌಲ್ಯದೊಂದಿಗೆ, ಸ್ವಾವಲಂಬನೆಗೂ ಘಾಸಿ ಮಾಡಿದರು. ಭಾರತೀಯರು ಇಂಗ್ಲೆಂಡ್ ನಿಂದ ಬರುತ್ತಿದ್ದ ಉಪ್ಪನ್ನ ಅವಲಂಬಿಸಬೇಕಿತ್ತು. ಗಾಂಧೀಜಿ ಅವರು ದೇಶದ ಈ ದೀರ್ಘ ನೋವನ್ನು ಮನಗಂಡರು, ಜನರ ನಾಡಿ ಮಿಡಿತ ಅರಿತರು ಮತ್ತು ಇದನ್ನು ಒಂದು ಚಳವಳಿಯಾಗಿ ಪರಿವರ್ತಿಸಿದರು ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಕ್ಷಣಗಳು ಅಂದರೆ, 1857ರ ಪ್ರಥಮ ಸ್ವಾತಂತ್ರ್ಯ ಹೋರಾಟ, ಮಹಾತ್ಮಾಗಾಂಧೀ ವಿದೇಶದಿಂದ ಮರಳಿದ್ದು, ದೇಶಕ್ಕೆ ಸತ್ಯಾಗ್ರಹದ ಶಕ್ತಿ ನೀಡಿದ್ದು, ಲೋಕಮಾನ್ಯ ತಿಲಕರಿಂದ ಸಂಪೂರ್ಣ ಸ್ವರಾಜ್ಯದ ಘೋಷಣೆ, ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ಫೌಜ್ ನಿಂದ ದೆಹಲಿ ಚಲೋ ಘೋಷಣೆ, ಯಾತ್ರೆಯನ್ನು ಸ್ಮರಿಸಿದರು. ಸ್ವಾತಂತ್ರ್ಯ ಚಳವಳಿಯ ಈ ಕಿಡಿಯನ್ನು, ಪ್ರತಿಯೊಂದು ದಿಕ್ಕಿನಲ್ಲಿಯೂ, ಪ್ರತಿಯೊಂದು ಪ್ರದೇಶದಲ್ಲೂ ನಿರಂತರವಾಗಿ ಜಾಗೃತಗೊಳಿಸುವ ಕೆಲಸವನ್ನು ನಮ್ಮ ಆಚಾರ್ಯರು, ಸಂತರು ಮತ್ತು ಶಿಕ್ಷಕರು ದೇಶದ ಮೂಲೆ ಮೂಲೆಯಲ್ಲಿ ಮಾಡಿದ್ದಾರೆ ಎಂದು ಅವರು ಹೇಳಿದರು. ಭಕ್ತಿ ಆಂದೋಲನವು ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಚಳವಳಿಗೆ ವೇದಿಕೆ ಸಿದ್ಧಪಡಿಸಿತ್ತು ಎಂದು ಅವರು ಹೇಳಿದರು. ಚೈತನ್ಯ ಮಹಾಪ್ರಭು, ರಾಮಕೃಷ್ಣ ಪರಮಹಂಸರು, ಶ್ರೀಮಂತ ಶಂಕರ ದೇವ್ ರಂತಹ ಸಂತರು, ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ತಳಪಾಯವನ್ನು ಗಟ್ಟಿಗೊಳಿಸಿದರು. ಅಂತೆಯೇ, ಎಲ್ಲಾ ಮೂಲೆಗಳಿಂದ ಬಂದ ಸಂತರು ರಾಷ್ಟ್ರೀಯ ಪ್ರಜ್ಞೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಹಕರಿಸಿದರು. ದೇಶಾದ್ಯಂತ ಅನೇಕ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಯುವಕರು ಅಪಾರ ತ್ಯಾಗ ಮಾಡಿದ್ದಾರೆ. ಬ್ರಿಟಿಷರು ತಲೆಗೆ ಗುಂಡು ಹಾರಿಸುವಾಗಲೂ ದೇಶದ ಧ್ವಜವನ್ನು ನೆಲಕ್ಕೆ ಬೀಳಲು ಬಿಡದ ತಮಿಳುನಾಡಿನ 32 ವರ್ಷದ ಕೋಡಿ ಕಥಾ ಕುಮಾರನ್ ಅವರಂತಹ ವೀರರ ತ್ಯಾಗವನ್ನು ಅವರು ಉಲ್ಲೇಖಿಸಿದರು. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಮೊದಲ ಮಹಾರಾಣಿ ತಮಿಳುನಾಡಿನ ವೇಲು ನಾಚಿಯಾರ್ ಎಂದು ತಿಳಿಸಿದರು.

ನಮ್ಮ ದೇಶದ ಬುಡಕಟ್ಟು ಸಮುದಾಯ, ತನ್ನ ಧೈರ್ಯ ಮತ್ತು ಸಾಹಸದಿಂದ ನಿರಂತರವಾಗಿ ವಿದೇಶೀ ಆಡಳಿತ ಮಂಡಿಯೂರುವಂತೆ ಮಾಡಿತು ಎಂದು ಪ್ರಧಾನಮಂತ್ರಿ ತಿಳಿಸಿದರು. ಜಾರ್ಖಂಡ್ ನಲ್ಲಿ, ಬಿರ್ಸಾ ಮುಂಡಾ ಬ್ರಿಟಿಷರಿಗೆ ಸವಾಲು ಹಾಕಿದರು ಮತ್ತು ಮುರ್ಮು ಸಹೋದರರು ಸಂತಾಲ್ ಚಳವಳಿಯನ್ನು ಮುನ್ನಡೆಸಿದರು. ಒಡಿಶಾದಲ್ಲಿ, ಚಕ್ರ ಬಿಸೊಯಿ ಬ್ರಿಟಿಷರ ವಿರುದ್ಧ ಹೋರಾಡಿದರು ಮತ್ತು ಲಕ್ಷ್ಮಣ್ ನಾಯಕ್, ಗಾಂಧಿ ವಿಧಾನಗಳ ಮೂಲಕ ಜಾಗೃತಿ ಮೂಡಿಸಿದರು ಎಂದರು. ರಾಂಪಾ ಚಳವಳಿಯನ್ನು ಮುನ್ನಡೆಸಿದ ಆಂಧ್ರಪ್ರದೇಶದ ಮಾನ್ಯಂ ವೀರುಡು ಅಲ್ಲೂರಿ ಸೀತಾರಾಮ್ ರಾಜು ಮತ್ತು ಮಿಜೋರಾಂ ಗಿರಿಗಳಿಗೆ ಬ್ರಿಟಿಷರನ್ನು ಕರೆದೊಯ್ದ ಪಸಲ್ತಾ ಖುಂಗ್ಚೇರಾ ಅವರಂತಹ ಬ್ರಿಟಿಷರ ವಿರುದ್ಧ ಹೋರಾಡಿದ ಇತರ ಬುಡಕಟ್ಟು ವೀರರನ್ನು ಅವರು ಪಟ್ಟಿ ಮಾಡಿದರು. ಅಸ್ಸಾಂ ಮತ್ತು ಈಶಾನ್ಯದ ಇತರ ಸ್ವಾತಂತ್ರ್ಯ ಹೋರಾಟಗಾರರಾದ ಗೋಮ್ದರ್ ಕೊನ್ವಾರ್, ಲಚಿತ್ ಬೊರ್ಫುಕನ್ ಮತ್ತು ಸೆರಾತ್ ಸಿಂಗ್ ಅವರು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಗುಜರಾತ್‌ ನ ಜಂಬುಘೋಡದಲ್ಲಿನ ನಾಯಕ್ ಬುಡಕಟ್ಟು ಜನಾಂಗದವರ ತ್ಯಾಗವನ್ನು ಮತ್ತು ಮಂಗಧ್ ನ ನೂರಾರು ಬುಡಕಟ್ಟು ಜನರ ನರಮೇಧದ ಬಲಿದಾನವನ್ನು ಸದಾ ಸ್ಮರಿಸುತ್ತದೆ ಎಂದರು.

ಕಳೆದ ಆರು ವರ್ಷಗಳಿಂದ ದೇಶ ಈ ಇತಿಹಾಸವನ್ನು ಉಳಿಸಲು ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ವಲಯದಲ್ಲೂ ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ದಂಡಿ ಯಾತ್ರೆಗೆ ಸಂಬಂಧಿಸಿದ ತಾಣದ ಪುನಶ್ಚೇತನ 2 ವರ್ಷಗಳ ಹಿಂದೆ ಪೂರ್ಣಗೊಂಡಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ದೇಶದ ಪ್ರಥಮ ಸ್ವತಂತ್ರ ಸರ್ಕಾರ ರಚಿಸಿದ ಬಳಿಕ ಅಂಡಮಾನ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸ್ಥಳವನ್ನು ಸಹ ಪುನರುಜ್ಜೀವಗೊಳಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸ್ವಾತಂತ್ರ್ಯಾನಂತರ ಮರು ನಾಮಕರಣ ಮಾಡಲಾಗಿದೆ. ಬಾಬಾ ಸಾಹೇಬ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಪಂಚತೀರ್ಥ ಎಂದು ಅಭಿವೃದ್ಧಿ ಪಡಿಸಲಾಗಿದೆ, ಜಲಿಯನ್ ವಾಲಾಬಾಗ್ ಸ್ಮಾರಕ ಮತ್ತು ಪೈಕಾ ಚಳವಳಿಯ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ನಾವು ಭಾರತ ಮತ್ತು ವಿದೇಶಗಳಲ್ಲಿ ನಮ್ಮ ಕಠಿಣ ಪರಿಶ್ರಮದಿಂದ ನಮ್ಮನ್ನು ಸಾಬೀತುಪಡಿಸಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಪ್ರಜಾಪ್ರಭುತ್ವದ ತವರಾದ ಭಾರತ ಇನ್ನೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೂಲಕ ಮುಂದುವರಿಯುತ್ತಿದೆ ಎಂದರು. ಭಾರತದ ಸಾಧನೆಗಳು ಇಡೀ ಮಾನವೀಯತೆಗೆ ಭರವಸೆ ನೀಡುತ್ತಿವೆ ಎಂದು ಅವರು ಹೇಳಿದರು. ಭಾರತದ ಅಭಿವೃದ್ಧಿ ಪಯಣ ಆತ್ಮನಿರ್ಭರತೆಯಿಂದ ಕೂಡಿದ್ದು, ಇಡೀ ಪ್ರಪಂಚದ ಅಭಿವೃದ್ಧಿ ಪಯಣಕ್ಕೆ ಆವೇಗ ನೀಡಲಿದೆ ಎಂದು ಅವರು ಹೇಳಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ದಾಖಲಿಸುವ ದೇಶದ ಪ್ರಯತ್ನಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಯುವಕರು ಮತ್ತು ವಿದ್ವಾಂಸರು ತೆಗೆದುಕೊಳ್ಳಬೇಕೆಂದು ಪ್ರಧಾನಮಂತ್ರಿ ಆಗ್ರಹಿಸಿದರು. ಸ್ವಾತಂತ್ರ್ಯ ಚಳವಳಿಯ ಸಾಧನೆಗಳನ್ನು ಜಗತ್ತಿಗೆ ಪ್ರದರ್ಶಿಸಬೇಕೆಂದು ಅವರು ಆಗ್ರಹಿಸಿದರು. ಕಲೆ, ಸಾಹಿತ್ಯ, ರಂಗಭೂಮಿ, ಚಲನಚಿತ್ರೋದ್ಯಮ ಮತ್ತು ಡಿಜಿಟಲ್ ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು, ನಮ್ಮ ಹಿಂದಿನ ಕಾಲದ ವಿಶಿಷ್ಟ ಗಾಥೆಗಳನ್ನು ಅನ್ವೇಷಿಸಿ ಅವುಗಳನ್ನು ಜೀವಂತಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage