ಭಾರತದಲ್ಲಿ ಕೈಗೊಂಡಿರುವ 5 ಪ್ರಮುಖ ಪರಿವರ್ತೆನಗಳ ಉಲ್ಲೇಖ
“ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಎಂದರೆ ಮುಕ್ತ ವಾತಾವರಣ, ಇದೇ ವೇಳೆ ಕೆಲವು ಸ್ವಹಿತಾಸಕ್ತಿಗಳು ಈ ಮುಕ್ತತೆ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು”
“ಭಾರತದ ಡಿಜಿಟಲ್ ಕ್ರಾಂತಿ ನಮ್ಮ ಪ್ರಜಾಪ್ರಭುತ್ವ, ನಮ್ಮ ಜನಸಂಖ್ಯೆ ಮತ್ತು ನಮ್ಮ ಆರ್ಥಿಕತೆಯ ಪ್ರಮಾಣದಲ್ಲಿ ಬೇರೂರಿದೆ”
“ನಾವು ದತ್ತಾಂಶವನ್ನು ಜನರ ಸಬಲೀಕರಣಕ್ಕೆ ಮೂಲವನ್ನಾಗಿ ಬಳಸುತ್ತೇವೆ, ವೈಯಕ್ತಿಕ ಹಕ್ಕುಗಳ ಬಲವಾದ ಖಾತ್ರಿಯೊಂದಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅದನ್ನು ಮಾಡಲು ಅಸಮಾನ್ಯ ಅನುಭವ ಹೊಂದಿದೆ”
“ಭಾರತದ ಪ್ರಜಾಸತ್ತಾತ್ಮಕ ಪರಂಪರೆ ಹಳೆಯದು; ಅದರ ಆಧುನಿಕ ಸಂಸ್ಥೆಗಳು ಬಲಿಷ್ಠವಾಗಿವೆ ಮತ್ತು ನಾವು ಸದಾ ವಿಶ್ವವನ್ನೇ ಒಂದು ಕುಟುಂಬವೆಂದು ಭಾವಿಸಿದ್ದೇವೆ”
“ರಾಷ್ಟ್ರೀಯ ಹಕ್ಕುಗಳನ್ನು ಗುರುತಿಸುವ ಮತ್ತು ಅದೇ ಸಮಯದಲ್ಲಿ ವ್ಯಾಪಾರ, ಹೂಡಿಕೆ ಮತ್ತು ದೊಡ್ಡ ಸಾರ್ವಜನಿಕ ಒಳಿತನ್ನು ಉತ್ತೇಜಿಸುವ ಪ್ರಜಾಪ್ರಭುತ್ವಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಮಾರ್ಗಸೂಚಿ”
“ಕ್ರಿಪ್ಟೋ ಕರೆನ್ಸಿ ಕುರಿತು ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡುವುದು ಅತಿ ಮುಖ್ಯ ಮತ್ತು ಅದು ನಮ್ಮ ಯುವಜನತೆಯನ್ನು ಹಾಳುಮಾಡುವಂತಹ ದುಷ್ಟಶಕ್ತಿಗಳ ಕೈಸೇರದಂತೆ ನೋಡಿಕೊಳ್ಳುವುದನ್ನು ಖಾತ್ರಿಪಡಿಸಬೇಕಿದೆ”

ನನ್ನ ಆತ್ಮೀಯ ಸ್ನೇಹಿತರಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರೇ,

ಸ್ನೇಹಿತರೇ,

ನಮಸ್ಕಾರ!

ʻಸಿಡ್ನಿ ಸಂವಾದʼದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಲು ನೀವು ನನ್ನನ್ನು ಆಹ್ವಾನಿಸಿದ್ದು ಭಾರತದ ಜನರ ಪಾಲಿಗೆ ದೊಡ್ಡ ಗೌರವವಾಗಿದೆ. ಇದನ್ನು ʻಇಂಡೋ ಪೆಸಿಫಿಕ್ʼ ವಲಯದಲ್ಲಿ ಮತ್ತು ಉದಯೋನ್ಮುಖ ಡಿಜಿಟಲ್ ಜಗತ್ತಿನಲ್ಲಿ ಭಾರತ ವಹಿಸುತ್ತಿರುವ ಪ್ರಧಾನ ಪಾತ್ರಕ್ಕೆ ಸಿಕ್ಕ ಮನ್ನಣೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಎರಡೂ ದೇಶಗಳ ನಡುವಿನ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಗೆ ದೊರೆತ ಗೌರವವಾಗಿದೆ, ಇದು ಈ ಪ್ರದೇಶ ಮತ್ತು ವಿಶ್ವಕ್ಕೆ ಒಳಿತಿನ ಶಕ್ತಿಯಾಗಿದೆ. ಉದಯೋನ್ಮುಖ, ನಿರ್ಣಾಯಕ ಮತ್ತು ಸೈಬರ್ ತಂತ್ರಜ್ಞಾನಗಳ ಮೇಲೆ ಗಮನ ಹರಿಸಿದ್ದಕ್ಕಾಗಿ ಸಿಡ್ನಿ ಸಂವಾದವನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ನಾವು ಇಂದು ಒಂದು ಯುಗಕ್ಕೊಮ್ಮೆ ಸಂಭವಿಸುವ ಬದಲಾವಣೆಯ ಸಮಯದಲ್ಲಿದ್ದೇವೆ. ಡಿಜಿಟಲ್ ಯುಗವು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದೆ. ಇದು ರಾಜಕೀಯ, ಆರ್ಥಿಕತೆ ಮತ್ತು ಸಮಾಜವನ್ನು ಮರುವ್ಯಾಖ್ಯಾನಿಸಿದೆ. ಇದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ. ಇದು ಅಂತರರಾಷ್ಟ್ರೀಯ ಸ್ಪರ್ಧೆ, ಅಧಿಕಾರ ಮತ್ತು ನಾಯಕತ್ವವನ್ನು ಮರುರೂಪಿಸುತ್ತಿದೆ. ಇದು ಪ್ರಗತಿ ಮತ್ತು ಸಮೃದ್ಧಿಗಾಗಿ ಅವಕಾಶಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ. ಆದರೆ, ನಾವು ಸಮುದ್ರದಿಂದ ಹಿಡಿದು ಸೈಬರ್‌,  ಬಾಹ್ಯಾಕಾಶದವರೆಗೆ ನಾನಾ ಅಪಾಯಗಳು ಹಾಗೂ ಹೊಸ ರೀತಿಯ ಸಂಘರ್ಷಗಳನ್ನು ನಾವು ಎದುರಿಸುತ್ತೇವೆ. ತಂತ್ರಜ್ಞಾನವು ಈಗಾಗಲೇ ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ ಮತ್ತು ಭವಿಷ್ಯದ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ರೂಪಿಸುವ ಕೀಲಿಕೈಯಾಗಿದೆ. ತಂತ್ರಜ್ಞಾನ ಮತ್ತು ದತ್ತಾಂಶಗಳು ಹೊಸ ಶಸ್ತ್ರಾಸ್ತ್ರಗಳಾಗುತ್ತಿವೆ. ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯೆಂದರೆ ಅದು ಮುಕ್ತತೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಮುಕ್ತತೆಯನ್ನು ದುರುಪಯೋಗಪಡಿಸಿಕೊಳ್ಳಲು ನಾವು ಅವಕಾಶ ನೀಡಬಾರದು.

ಸ್ನೇಹಿತರೇ,

ನಮ್ಮ ಪರಸ್ಪರ ಸಮೃದ್ಧಿ ಮತ್ತು ಭದ್ರತೆಗಾಗಿ, ಪ್ರಜಾಪ್ರಭುತ್ವ ಮತ್ತು ಡಿಜಿಟಲ್ ಕ್ಷೇತ್ರದ ನಾಯಕನಾಗಿ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತವು ಸಿದ್ಧವಾಗಿದೆ. ನಮ್ಮ ಪ್ರಜಾಪ್ರಭುತ್ವ, ನಮ್ಮ ಜನಸಂಖ್ಯೆ ಮತ್ತು ನಮ್ಮ ಆರ್ಥಿಕತೆಯ ವಿಸ್ತಾರವು ಭಾರತದ ಡಿಜಿಟಲ್ ಕ್ರಾಂತಿಗೆ ಅಡಿಪಾಯವಾಗಿದೆ. ಇದು ನಮ್ಮ ಯುವಕರ ಉದ್ಯಮಶೀಲತೆ ಮತ್ತು ಆವಿಷ್ಕಾರಗಳಿಂದ ಮೇಳೈಸಿದೆ.   ನಾವು ನಮ್ಮ ಹಿಂದಿನ ಸವಾಲುಗಳನ್ನು ಭವಿಷ್ಯದತ್ತ ಜಿಗಿಯಲು ಒಂದು ಅವಕಾಶವಾಗಿ ಪರಿವರ್ತಿಸುತ್ತಿದ್ದೇವೆ. ಭಾರತದಲ್ಲಿ ಐದು ಪ್ರಮುಖ ಸ್ಥಿತ್ಯಂತರಗಳು ನಡೆಯುತ್ತಿವೆ. ಒಂದು, ನಾವು ವಿಶ್ವದ ಅತ್ಯಂತ ವ್ಯಾಪಕವಾದ ಸಾರ್ವಜನಿಕ ಮಾಹಿತಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ.  1.3 ಶತಕೋಟಿಗೂ ಹೆಚ್ಚು ಭಾರತೀಯರು ವಿಶಿಷ್ಟ ಡಿಜಿಟಲ್ ಗುರುತನ್ನು ಹೊಂದಿದ್ದಾರೆ. ನಾವು ಆರು ಲಕ್ಷ ಗ್ರಾಮಗಳನ್ನು ಬ್ರಾಡ್‌ಬ್ಯಾಂಡ್ ಅಂತರ್ಜಾಲದೊಂದಿಗೆ ಸಂಪರ್ಕಿಸಲು ಹೊರಟಿದ್ದೇವೆ. ನಾವು ವಿಶ್ವದ ಅತ್ಯಂತ ದಕ್ಷ ಪಾವತಿ ಮೂಲಸೌಕರ್ಯವಾದ ʻಯುಪಿಐʼ ಅನ್ನು ನಿರ್ಮಿಸಿದ್ದೇವೆ. 800 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಇಂಟರ್ನೆಟ್ ಬಳಸುತ್ತಿದ್ದಾರೆ; 750 ದಶಲಕ್ಷ ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಭಾರತವು ಅತಿ ಹೆಚ್ಚು ತಲಾ ಡೇಟಾ ಬಳಕೆಯ ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಮತ್ತು ವಿಶ್ವದಲ್ಲೇ ಅಗ್ಗದ ಡೇಟಾ ದರವನ್ನು ಹೊಂದಿದ್ದೇವೆ.  ಎರಡನೆಯದಾಗಿ, ನಾವು ಆಡಳಿತ, ಒಳಗೊಳ್ಳುವಿಕೆ, ಸಬಲೀಕರಣ, ಸಂಪರ್ಕ, ಪ್ರಯೋಜನಗಳ ವಿತರಣೆ ಮತ್ತು ಜನಕಲ್ಯಾಣಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ಮೂಲಕ ಜನರ ಜೀವನವನ್ನು ಪರಿವರ್ತಿಸುತ್ತಿದ್ದೇವೆ. ಭಾರತದ ಹಣಕಾಸು ಒಳಗೊಳ್ಳುವಿಕೆ, ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ರಾಂತಿಯ ಬಗ್ಗೆ ಎಲ್ಲರೂ ಕೇಳಿದ್ದಾರೆ. ಇತ್ತೀಚೆಗೆ, ʻಆರೋಗ್ಯ ಸೇತುʼ ಮತ್ತು ʻಕೋವಿನ್‌ʼ ವೇದಿಕೆಗಳನ್ನು ಬಳಸಿಕೊಂಡು ದೇಶಾದ್ಯಂತ 1.1 ಶತಕೋಟಿ ಡೋಸ್ ಲಸಿಕೆಗಳನ್ನು ತಲುಪಿಸಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ. ನಮ್ಮ ಶತಕೋಟಿಗೂ ಹೆಚ್ಚು ಜನರಿಗೆ ಕೈಗೆಟುಕುವ ದರದ ಮತ್ತು ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ನಾವು ʻರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆʼಯನ್ನು ನಿರ್ಮಿಸುತ್ತಿದ್ದೇವೆ. ನಮ್ಮ ʻಒಂದು ರಾಷ್ಟ್ರ, ಒಂದು ಕಾರ್ಡ್ʼ ಯೋಜನೆಯು ಕೋಟ್ಯಂತರ ಕಾರ್ಮಿಕರಿಗೆ ಅವರು ದೇಶದ ಯಾವುದೇ ಭಾಗದಲ್ಲಿದ್ದರೂ ಪ್ರಯೋಜನಗಳನ್ನು ತಲುಪಿಸುತ್ತದೆ. ಮೂರನೆಯದಾಗಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಪ್ರತಿ ಕೆಲವು ವಾರಗಳಿಗೊಂದು ಹೊಸ ಉದ್ಯಮವು ತಲೆ ಎತ್ತುತ್ತಿದೆ. ಈ ಸಂಸ್ಥೆಗಳು ಆರೋಗ್ಯ ಮತ್ತು ಶಿಕ್ಷಣದಿಂದ ಹಿಡಿದು ರಾಷ್ಟ್ರೀಯ ಭದ್ರತೆಯವರೆಗೆ ಎಲ್ಲ ರೀತಿಯ ಪರಿಹಾರಗಳನ್ನು ಒದಗಿಸುತ್ತಿವೆ.

ನಾಲ್ಕನೆಯದಾಗಿ, ಭಾರತದ ಉದ್ಯಮ ಮತ್ತು ಸೇವಾ ವಲಯಗಳು, ಕೊನೆಗೆ ಕೃಷಿ ಸಹ ಬೃಹತ್ ಡಿಜಿಟಲ್ ಪರಿವರ್ತನೆಗೆ ಒಳಗಾಗುತ್ತಿವೆ. ಶುದ್ಧ ಇಂಧನ ಪರಿವರ್ತನೆ, ಸಂಪನ್ಮೂಲಗಳ ಪರಿವರ್ತನೆ ಮತ್ತು ಜೀವವೈವಿಧ್ಯದ ರಕ್ಷಣೆಗಾಗಿ ನಾವು ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಐದನೆಯದಾಗಿ, ಭಾರತವನ್ನು ಭವಿಷ್ಯಕ್ಕಾಗಿ ಸನ್ನದ್ಧಗೊಳಿಸಲು ದೊಡ್ಡ ಪ್ರಯತ್ನ ನಡೆದಿದೆ. ನಾವು 5ಜಿ ಮತ್ತು 6ಜಿಯಂತಹ ದೂರಸಂಪರ್ಕ ತಂತ್ರಜ್ಞಾನದಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದ್ದೇವೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ʻಮಷಿನ್‌ ಲರ್ನಿಂಗ್‌ʼನಲ್ಲಿ, ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಮಾನವ ಕೇಂದ್ರಿತ ಬಳಕೆ ಮತ್ತು ನೈತಿಕ ಬಳಕೆಗೆ ಸಂಬಂಧಿಸಿದಂತೆ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದೆನಿಸಿದೆ. ನಾವು ʻಕ್ಲೌಡ್ ಪ್ಲಾಟ್‌ಫಾರ್ಮ್‌ʼಗಳು ಮತ್ತು ʻಕ್ಲೌಡ್ ಕಂಪ್ಯೂಟಿಂಗ್ʼನಲ್ಲಿ ಬಲವಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.

ಇದು ಡಿಜಿಟಲ್ ಸಾರ್ವಭೌಮತ್ವ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಪ್ರಮುಖವಾಗಿದೆ. ನಾವು ʻಕ್ವಾಂಟಮ್ ಕಂಪ್ಯೂಟಿಂಗ್ʼನಲ್ಲಿ ವಿಶ್ವದರ್ಜೆಯ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದ್ದೇವೆ. ಭಾರತದ ಬಾಹ್ಯಾಕಾಶ ಯೋಜನೆಯು ನಮ್ಮ ಆರ್ಥಿಕತೆ ಮತ್ತು ಭದ್ರತೆಯ ಪ್ರಮುಖ ಭಾಗವಾಗಿದೆ. ಇದು ಈಗ ಖಾಸಗಿ ವಲಯದ ಆವಿಷ್ಕಾರ ಮತ್ತು ಹೂಡಿಕೆಗೆ ಮುಕ್ತವಾಗಿದೆ. ಭಾರತವು ಈಗಾಗಲೇ ವಿಶ್ವದಾದ್ಯಂತ ಕಾರ್ಪೊರೇಟ್‌ಗಳಿಗೆ ಸೈಬರ್ ಭದ್ರತಾ ಪರಿಹಾರಗಳು ಮತ್ತು ಸೇವೆಗಳನ್ನು ಒದಗಿಸುವ ಪ್ರಮುಖ ಕೇಂದ್ರವೆನಿಸಿದೆ. ಭಾರತವನ್ನು ಸೈಬರ್ ಭದ್ರತೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ನಮ್ಮ ಉದ್ಯಮದ ಜೊತೆ ಕೆಲಸ ಮಾಡಲು ಕಾರ್ಯಪಡೆಯೊಂದನ್ನು ರಚಿಸಿದ್ದೇವೆ. ನಮ್ಮ ಕೌಶಲ್ಯಗಳು ಮತ್ತು ಜಾಗತಿಕ ವಿಶ್ವಾಸದ ಪ್ರಯೋಜನವನ್ನು ನಾವು ಹೊಂದಿದ್ದೇವೆ. ಅಲ್ಲದೆ, ಈಗ ನಾವು ʻಹಾರ್ಡ್‌ವೇರ್ʼ ಮೇಲೂ ಗಮನ ಹರಿಸುತ್ತಿದ್ದೇವೆ. ʻಸೆಮಿ-ಕಂಡಕ್ಟರ್‌ʼ ಉತ್ಪಾದನೆಯ ಪ್ರಮುಖ ಕೇಂದ್ರವಾಗಲು ನಾವು ಪ್ರೋತ್ಸಾಹಕಗಳ ಪ್ಯಾಕೇಜ್‌ ಸಿದ್ಧಪಡಿಸುತ್ತಿದ್ದೇವೆ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂನಲ್ಲಿ ನಮ್ಮ ಉತ್ಪಾದನೆ ಆಧರಿತ ಸಂಬಂಧಿತ ಪ್ರೋತ್ಸಾಹಧನ ಯೋಜನೆಗಳು ಈಗಾಗಲೇ ಸ್ಥಳೀಯ ಮತ್ತು ಜಾಗತಿಕ ಸಂಸ್ಥೆಗಳನ್ನು ಭಾರತದಲ್ಲಿ ತಮ್ಮ ನೆಲೆ ಸ್ಥಾಪಿಸಲು ಆಕರ್ಷಿಸುತ್ತಿವೆ.

ಸ್ನೇಹಿತರೇ,

ಇಂದು ತಂತ್ರಜ್ಞಾನ ಕ್ಷೇತ್ರದ ಶ್ರೇಷ್ಠ ಉತ್ಪನ್ನವೆಂದರೆ ಡೇಟಾ. ಭಾರತದಲ್ಲಿ, ನಾವು ಡೇಟಾ ಸಂರಕ್ಷಣೆ, ಗೌಪ್ಯತೆ ಮತ್ತು ಭದ್ರತೆಯ ದೃಢವಾದ ಚೌಕಟ್ಟನ್ನು ರಚಿಸಿದ್ದೇವೆ. ಮತ್ತು, ಇದೇ ವೇಳೆ, ನಾವು ಡೇಟಾವನ್ನು ಜನರ ಸಬಲೀಕರಣದ ಮೂಲವಾಗಿ ಬಳಸುತ್ತೇವೆ. ವೈಯಕ್ತಿಕ ಹಕ್ಕುಗಳ ಬಲವಾದ ಖಾತರಿಯೊಂದಿಗೆ, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಈ ಕೆಲಸದಲ್ಲಿ ತೊಡಗಲು ಭಾರತಕ್ಕೆ ಸಾಟಿಯಿಲ್ಲದ ಅನುಭವವಿದೆ.

ಸ್ನೇಹಿತರೇ,

ಯಾವುದೇ ರಾಷ್ಟ್ರವು ತಂತ್ರಜ್ಞಾನವನ್ನು ಹೇಗೆ ಬಳಸುತ್ತದೆ ಎಂಬುದು ಅದರ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ಆಧರಿಸಿರುತ್ತದೆ. ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಹಳೆಯವು; ಆದರೆ ಅದರ ಆಧುನಿಕ ಸಂಸ್ಥೆಗಳು ಬಲಿಷ್ಠವಾಗಿವೆ. ನಾವು ಸದಾ ಜಗತ್ತನ್ನು ಒಂದೇ ಕುಟುಂಬವಾಗಿ ನಂಬಿದ್ದೇವೆ. ಭಾರತದ ಐಟಿ ಪ್ರತಿಭೆಗಳು ಜಾಗತಿಕ ಡಿಜಿಟಲ್ ಆರ್ಥಿಕತೆಯ ರಚನೆಗೆ  ಸಹಾಯ ಮಾಡಿವೆ. ಇದು ʻವೈ2ಕೆʼ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡಿತು. ಇದು ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ತಂತ್ರಜ್ಞಾನಗಳು ಮತ್ತು ಸೇವೆಗಳ ವಿಕಾಸಕ್ಕೆ ಕಾರಣವಾಗಿದೆ. ಇಂದು, ನಾವು ನಮ್ಮ ʻಕೋವಿನ್ʼ ವೇದಿಕೆಯನ್ನು ಇಡೀ ಜಗತ್ತಿಗೆ ಉಚಿತವಾಗಿ ನೀಡಿದ್ದೇವೆ ಮತ್ತು ಅದನ್ನು ʻಮುಕ್ತ ಮೂಲ ತಂತ್ರಾಂಶʼವನ್ನಾಗಿ ಮಾಡಿದ್ದೇವೆ. ಸಾರ್ವಜನಿಕ ಒಳಿತು, ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ತಂತ್ರಜ್ಞಾನ ಮತ್ತು ನೀತಿಗಳ ಬಳಕೆಯಲ್ಲಿ ಭಾರತ ಹೊಂದಿರುವ ವ್ಯಾಪಕ ಅನುಭವವು ಅಭಿವೃದ್ಧಿಶೀಲ ಜಗತ್ತಿಗೆ ಬಹಳ ಸಹಾಯ ಮಾಡುತ್ತದೆ. ರಾಷ್ಟ್ರಗಳು ಮತ್ತು ಅಲ್ಲಿನ ಜನರ ಸಬಲೀಕರಣಕ್ಕಾಗಿ ಹಾಗೂ ಈ ಶತಮಾನದ ಅವಕಾಶಗಳಿಗಾಗಿ ಆ ಜನರನ್ನು ಸಜ್ಜುಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡಬಹುದು. ನಮ್ಮ ಪ್ರಜಾಸತ್ತಾತ್ಮಕ ಆದರ್ಶಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವಂತೆ ಈ ಪ್ರಪಂಚದ ಭವಿಷ್ಯವನ್ನು ರೂಪಿಸಲು ಇದು ಮುಖ್ಯವಾಗಿದೆ. ಈ ಕೆಲಸವು ನಮ್ಮ ಸ್ವಂತ ರಾಷ್ಟ್ರೀಯ ಭದ್ರತೆ ಮತ್ತು ಸಮೃದ್ಧಿಯಷ್ಟೇ ಮುಖ್ಯವಾಗಿದೆ.

ಸ್ನೇಹಿತರೇ,

ಆದ್ದರಿಂದ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ: ಭವಿಷ್ಯದ ತಂತ್ರಜ್ಞಾನಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಒಟ್ಟಾಗಿ ಹೂಡಿಕೆ ಮಾಡಲು; ವಿಶ್ವಾಸಾರ್ಹ ಉತ್ಪಾದನಾ ನೆಲೆ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲು; ಸೈಬರ್ ಭದ್ರತೆಯ ಬಗ್ಗೆ ಗುಪ್ತಚರ ಮತ್ತು ಕಾರ್ಯಾಚರಣೆ ಸಹಕಾರವನ್ನು ಮತ್ತಷ್ಟು ಆಳವಾಗಿಸಲು, ನಿರ್ಣಾಯಕ ಮಾಹಿತಿ ಮೂಲಸೌಕರ್ಯವನ್ನು ರಕ್ಷಿಸಲು; ಸಾರ್ವಜನಿಕ ಅಭಿಪ್ರಾಯಗಳ ಪ್ರಭಾವೀಕರಣ ತಡೆಗಟ್ಟಲು; ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ತಾಂತ್ರಿಕ ಮತ್ತು ಆಡಳಿತ ಮಾನದಂಡಗಳನ್ನು ಅಭಿವೃದ್ಧಿಪಡಿಸಲು; ಮತ್ತು, ಡೇಟಾ ಆಡಳಿತಕ್ಕಾಗಿ ಮತ್ತು ಗಡಿಯಾಚೆಗೆ ಹರಿಯುವ ಡೇಟಾವನ್ನು ಸಂರಕ್ಷಿಸುವ ಮಾನದಂಡಗಳು ಹಾಗೂ ನೀತಿಗಳ ರಚನೆಯಲ್ಲಿ ಎಲ್ಲಾ ಪ್ರಜಾಪ್ರಭುತ್ವಗಳು ಕೈಜೋಡಿಸಬೇಕಿದೆ. ಇದು ರಾಷ್ಟ್ರೀಯ ಹಕ್ಕುಗಳನ್ನು ಗುರುತಿಸಬೇಕು ಮತ್ತು ಅದೇ ಸಮಯದಲ್ಲಿ ವ್ಯಾಪಾರ, ಹೂಡಿಕೆ ಮತ್ತು ದೊಡ್ಡ ಮಟ್ಟದ ಸಾರ್ವಜನಿಕ ಒಳಿತನ್ನು ಉತ್ತೇಜಿಸಬೇಕು. ಉದಾಹರಣೆಗೆ ʻಕ್ರಿಪ್ಟೋ-ಕರೆನ್ಸಿʼ ಅಥವಾ ʻಬಿಟ್‌ಕಾಯಿನ್ʼ ತೆಗೆದುಕೊಳ್ಳಿ. ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಿ, ಇವು ಅಪಾಯಕಾರಿ ವ್ಯಕ್ತಿಗಳ ಕೈಗಳಿಗೆ ಸಿಗದಂತೆ ನೋಡಿಕೊಳ್ಳುವುದು ಮುಖ್ಯ, ಏಕೆಂದರೆ ಇವು ನಮ್ಮ ಯುವಕರನ್ನು ಹಾಳುಮಾಡಬಲ್ಲವು.

ಸ್ನೇಹಿತರೇ,

ನಾವು ಆಯ್ಕೆಯ ಐತಿಹಾಸಿಕ ಕ್ಷಣದಲ್ಲಿದ್ದೇವೆ. ನಮ್ಮ ಯುಗದ ತಂತ್ರಜ್ಞಾನದ ಎಲ್ಲಾ ಅದ್ಭುತ ಶಕ್ತಿಗಳೂ -  ಸಹಕಾರ ಅಥವಾ ಸಂಘರ್ಷ; ಬಲಾತ್ಕಾರ ಅಥವಾ ಆಯ್ಕೆ;  ಪ್ರಾಬಲ್ಯ ಅಥವಾ ಅಭಿವೃದ್ಧಿ; ದಬ್ಬಾಳಿಕೆ ಅಥವಾ ಅವಕಾಶದ ಸಾಧನಗಳಾಗಿರುತ್ತವೆ. ಭಾರತ, ಆಸ್ಟ್ರೇಲಿಯಾ ಮತ್ತು ಇಂಡೋ ಪೆಸಿಫಿಕ್ ವಲಯದಲ್ಲಿ ಮತ್ತು ಅದರಾಚೆಗಿನ ನಮ್ಮ ಪಾಲುದಾರರು ನಮ್ಮ ಸಮಯದ ಕರೆಯನ್ನು ಆಲಿಸುತ್ತಾರೆ.  ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ. ಈ ಯುಗಕ್ಕಾಗಿ ನಮ್ಮ ಪಾಲುದಾರಿಕೆಯನ್ನು ರೂಪಿಸಲು ಮತ್ತು ವಿಶ್ವದ ಭವಿಷ್ಯಕ್ಕಾಗಿ ನಮ್ಮ ಜವಾಬ್ದಾರಿಯನ್ನು ಪೂರೈಸುವ ನಿಟ್ಟಿನಲ್ಲಿ ನಮಗೆ ಸಹಾಯ ಮಾಡಲು ಸಿಡ್ನಿ ಸಂವಾದವು ಅದ್ಭುತ ವೇದಿಕೆಯಾಗಲಿದೆ ಎಂಬ ವಿಶ್ವಾಸ ನನಗಿದೆ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi