ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಪ್ರಶಸ್ತಿ ಪುರಸ್ಕೃತರು ತಮ್ಮ ಬೋಧನಾ ಅನುಭವವನ್ನು ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಂಡರು. ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕವಾಗಿಸಲು ತಾವು ಬಳಸುವ ಆಸಕ್ತಿದಾಯಕ ತಂತ್ರಗಳ ಬಗ್ಗೆಯೂ ಅವರು ಮಾತನಾಡಿದರು. ಅವರು ತಮ್ಮ ನಿಯಮಿತ ಬೋಧನಾ ಕೆಲಸದ ಜೊತೆಗೆ ತಾವು ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಉದಾಹರಣೆಗಳನ್ನು ಹಂಚಿಕೊಂಡರು. ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಬೋಧನಾ ಕಲೆಗೆ ಅವರ ಸಮರ್ಪಣೆ ಮತ್ತು ಹಲವು ವರ್ಷಗಳಿಂದ ಅವರು ಪ್ರದರ್ಶಿಸಿದ ಗಮನಾರ್ಹ ಉತ್ಸಾಹವನ್ನು ಶ್ಲಾಘಿಸಿದರು, ಇದನ್ನು ಪ್ರಶಸ್ತಿಗಳ ಮೂಲಕ ಗುರುತಿಸಲಾಗಿದೆ ಎಂದರು.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮದ ಬಗ್ಗೆ ಚರ್ಚಿಸಿದರು ಮತ್ತು ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಮಹತ್ವದ ಬಗ್ಗೆ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ಥಳೀಯ ಜಾನಪದವನ್ನು ವಿವಿಧ ಭಾಷೆಗಳಲ್ಲಿ ಕಲಿಸಬಹುದು, ಇದರಿಂದ ವಿದ್ಯಾರ್ಥಿಗಳು ಬಹು ಭಾಷೆಗಳನ್ನು ಕಲಿಯಬಹುದು ಮತ್ತು ಭಾರತದ ರೋಮಾಂಚಕ ಸಂಸ್ಕೃತಿಗೆ ತೆರೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಭಾರತದ ವೈವಿಧ್ಯತೆಯನ್ನು ಅನ್ವೇಷಿಸಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಗಳಿಗೆ ಕರೆದೊಯ್ಯಬಹುದು, ಇದು ಅವರ ಕಲಿಕೆಗೆ ಸಹಾಯ ಮಾಡುತ್ತದೆ ಮತ್ತು ದೇಶದ ಬಗ್ಗೆ ಸಮಗ್ರ ರೀತಿಯಲ್ಲಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.
ಪ್ರಶಸ್ತಿ ವಿಜೇತ ಶಿಕ್ಷಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಬೇಕು ಮತ್ತು ತಮ್ಮ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಬೇಕು, ಇದರಿಂದ ಪ್ರತಿಯೊಬ್ಬರೂ ಅಂತಹ ಅಭ್ಯಾಸಗಳಿಂದ ಕಲಿಯಬಹುದು, ಹೊಂದಿಕೊಳ್ಳಬಹುದು ಮತ್ತು ಪ್ರಯೋಜನ ಪಡೆಯಬಹುದು ಎಂದು ಪ್ರಧಾನಿ ಸಲಹೆ ನೀಡಿದರು.
ಶಿಕ್ಷಕರು ರಾಷ್ಟ್ರಕ್ಕೆ ಬಹಳ ಮುಖ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಮತ್ತು ಇಂದಿನ ಯುವಕರನ್ನು ವಿಕ್ಷಿತ ಭಾರತಕ್ಕಾಗಿ ಸಿದ್ಧಪಡಿಸುವ ಜವಾಬ್ದಾರಿ ಅವರ ಕೈಯಲ್ಲಿದೆ ಎಂದು ಪ್ರಧಾನಿ ಹೇಳಿದರು.
ಹಿನ್ನೆಲೆ
ತಮ್ಮ ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಸುಧಾರಿಸಿದ್ದಲ್ಲದೆ ತಮ್ಮ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ದೇಶದ ಕೆಲವು ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಯನ್ನು ಆಚರಿಸುವುದು ಮತ್ತು ಗೌರವಿಸುವುದು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳ ಉದ್ದೇಶವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯ್ಕೆಯಾದ 50 ಶಿಕ್ಷಕರು, ಉನ್ನತ ಶಿಕ್ಷಣ ಇಲಾಖೆಯಿಂದ 16 ಶಿಕ್ಷಕರು ಮತ್ತು ಕೌಶಲ್ಯ ಅಭಿವೃದ್ಧಿ ಹಾಗು ಉದ್ಯಮಶೀಲತೆ ಸಚಿವಾಲಯದಿಂದ ಆಯ್ಕೆಯಾದ 16 ಶಿಕ್ಷಕರು ಸೇರಿದಂತೆ ದೇಶಾದ್ಯಂತ 82 ಶಿಕ್ಷಕರನ್ನು ಈ ವರ್ಷದ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.