ಸಕ್ರಿಯ ನಾಯಕತ್ವಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳಿದ ಉದ್ಯಮ ಪ್ರತಿನಿಧಿಗಳು: COVID-19 ರ ಸವಾಲನ್ನು ಎದುರಿಸಲು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡ ಉದ್ಯಮಿಗಳು
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ASSOCHAM, FICCI, CII ಗಳ ಉದ್ಯಮ ಪ್ರತಿನಿಧಿಗಳು ಮತ್ತು ದೇಶದ ಹದಿನೆಂಟು ನಗರಗಳ ಹಲವಾರು ಸ್ಥಳೀಯ ಚೇಂಬರ್‌ಗಳ ಪ್ರತಿನಿಧಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ದೇಶದ ಬೆಳವಣಿಗೆಗೆ ವೇಗ ನೀಡಲು ಸರ್ಕಾರ ಕೆಲಸ ಮಾಡುತ್ತಿರುವಾಗ, COVID-19 ರ ರೂಪದಲ್ಲಿ ಅನಿರೀಕ್ಷಿತ ಅಡಚಣೆಯು ಆರ್ಥಿಕತೆಯ ಮುಂದೆ ಬಂದಿದೆ ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕ ರೋಗವು ಒಡ್ಡಿರುವ ಸವಾಲು ವಿಶ್ವ ಯುದ್ಧಗಳ ಸವಾಲುಗಳಿಗಿಂತ ಗಂಭೀರವಾಗಿದೆ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ನಾವು ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
ಸಂಪೂರ್ಣ ನಂಬಿಕೆಯೇ ಆರ್ಥಿಕತೆಯ ಬಂಡವಾಳ ಎಂದು ಪ್ರಧಾನಿ ಹೇಳಿದರು. ನಂಬಿಕೆಯು ವಿಶಿಷ್ಟವಾದ ಅಳತೆಗೋಲು ಹೊಂದಿದೆ . ಇದು ಕಷ್ಟ ಮತ್ತು ಸವಾಲಿನ ಕಾಲದಲ್ಲಿ ಉಳಿಯುತ್ತದೆ ಅಥವಾ ಕಳೆದುಹೋಗುತ್ತದೆ. ನಂಬಿಕೆಯ ನಿಯತಾಂಕಗಳು ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಹಂತದಲ್ಲಿವೆ. COVID-19 ರ ಕಾರಣದಿಂದಾಗಿ ಪ್ರವಾಸೋದ್ಯಮ, ನಿರ್ಮಾಣ, ಆತಿಥ್ಯ ಮತ್ತು ದೈನಂದಿನ ಜೀವನದ ಅನೌಪಚಾರಿಕ ವಲಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಹೊಡೆತ ಬಿದ್ದಿದೆ. ಮುಂದಿನ ಕೆಲವು ಸಮಯದವರೆಗೆ ಆರ್ಥಿಕತೆಯ ಮೇಲೆ ಪರಿಣಾಮ ಇರಲಿದೆ ಎಂದು ಅವರು ಹೇಳಿದರು.
ಮುಂಚೂಣಿಯಲ್ಲಿ ನಿಂತು ಬೆದರಿಕೆಯನ್ನು ಎದುರಿಸಲು ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಉದ್ಯಮ ಪ್ರತಿನಿಧಿಗಳು ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದರು. ವೆಂಟಿಲೇಟರ್‌ಗಳು ಸೇರಿದಂತೆ ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸಲಕರಣೆಗಳ ಪೂರೈಕೆ ಮಾರ್ಗಗಳನ್ನು ನಿರ್ವಹಿಸಲು ಅವರು ಕೈಗೊಳ್ಳುತ್ತಿರುವ ಕ್ರಮಗಳು, ಪ್ರತ್ಯೇಕ ವಾರ್ಡ್‌ಗಳ ರಚನೆಗೆ ನೆರವು, COVID-19 ಅನ್ನು ಎದುರಿಸಲು ಸಿಎಸ್‌ಆರ್ ನಿಧಿಯನ್ನು ಬಳಸುವುದು ಮತ್ತು ವಲಸೆ ಕಾರ್ಮಿಕರಿಗೆ ನೆರವು ನೀಡುವ ಬಗ್ಗೆ ಅವರು ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದರು.
ಬ್ಯಾಂಕಿಂಗ್, ಹಣಕಾಸು, ಆತಿಥ್ಯ, ಪ್ರವಾಸೋದ್ಯಮ, ಮೂಲಸೌಕರ್ಯ ಮುಂತಾದ ಕ್ಷೇತ್ರಗಳು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ಅವರು ಚರ್ಚಿಸಿದರು. ಈ ಸವಾಲುಗಳನ್ನು ಎದುರಿಸಲು ಆರ್ಥಿಕ ಮತ್ತು ಹಣಕಾಸಿನ ನೆರವಿನ ಸಹಾಯವನ್ನು ಕೋರಿದರು. ಆರ್ಥಿಕ ನಷ್ಟಗಳ ಹೊರತಾಗಿಯೂ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಮಾಡಬೇಕಾದ ಮಹತ್ವವನ್ನು ಉದ್ಯಮ ಪ್ರತಿನಿಧಿಗಳು ಶ್ಲಾಘಿಸಿದರು.
ಅಸಂಘಟಿತ ವಲಯದ ಅಗತ್ಯತೆಗಳ ಕುರಿತು ಒಂದೇ ಧ್ವನಿಯಲ್ಲಿ ಮಾತನಾಡಿದ ಉದ್ಯಮ ಪ್ರತಿನಿಧಿಗಳಿಗೆ ಪ್ರಧಾನಿ ಧನ್ಯವಾದ ಹೇಳಿದರು. ಇದು ಆರ್ಥಿಕ ಏಕೀಕರಣದ ಹೊಸ ಉದಯವನ್ನು ಸೂಚಿಸುತ್ತದೆ ಎಂದು ಹೇಳಿದರು. ತಂತ್ರಜ್ಞಾನವನ್ನು ಬಳಸುವುದರ ಮೂಲಕ ಕಾರ್ಯಸಾಧ್ಯವಾದಲ್ಲೆಲ್ಲಾ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಅವರು ತಿಳಿಸಿದರು. ತಮ್ಮ ವ್ಯವಹಾರಗಳ ಮೇಲಿನ ನಕಾರಾತ್ಮಕ ಪ್ರಭಾವದ ನಡುವೆಯೂ ಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಮತ್ತು ಉದ್ಯೋಗಗಳನ್ನು ಕಡಿತಗೊಳಿಸದಂತೆಯೂ ಪ್ರಧಾನಿಯವರು ಸೂಚಿಸಿದರು.
ಈ ಸಮಯದಲ್ಲಿ ಅಗತ್ಯ ವಸ್ತುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಬಾರದು ಮತ್ತು ಕಾಳ ಮಾರುಕಟ್ಟೆ ಮತ್ತು ಸಂಗ್ರಹಣೆಯನ್ನು ತಡೆಯಬೇಕು ಎಂದು ಅವರು ಹೇಳಿದರು. ಕಾರ್ಖಾನೆಗಳು, ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ COVID-19 ಹರಡುವುದನ್ನು ತಡೆಗಟ್ಟಲು ಪ್ರಧಾನಿಯವರು ಸ್ವಚ್ಛತೆಯ ಪ್ರಾಮುಖ್ಯತೆ ಮತ್ತು ವೈದ್ಯಕೀಯ ಸಲಹೆಯನ್ನು ಅನುಸರಿಸುವುದರ ಬಗ್ಗೆ ತಿಳಿಸಿದರು. ವೈರಸ್ ಹರಡುವುದನ್ನು ತಡೆಗಟ್ಟುವ ನಮ್ಮ ಹೋರಾಟದಲ್ಲಿ ಸಾಮಾಜಿಕ ಅಂತರವು ದೊಡ್ಡ ಅಸ್ತ್ರವಾಗಿದೆ ಎಂದು ಅವರು ಹೇಳಿದರು. ಈ ನಿರ್ಣಾಯಕ ಹಂತದಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಾನವೀಯ ಕಾರಣಗಳಿಗಾಗಿ ತಮ್ಮ ಸಿಎಸ್ಆರ್ ಹಣವನ್ನು ಬಳಸಬೇಕೆಂದು ಅವರು ವಿನಂತಿ ಮಾಡಿದರು.
ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಮತ್ತು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ ಕಾರ್ಯದರ್ಶಿ ಸಹ ಸಂವಾದದಲ್ಲಿ ಭಾಗವಹಿಸಿದರು.