ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಗೂಗಲ್ ಮತ್ತು ಆಲ್ಫಾಬೆಟ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರೊಂದಿಗೆ ವಿಡಿಯೊ ಮೂಲಕ (ವಾಸ್ತವಿಕವಾಗಿ ) ಸಂವಾದ ನಡೆಸಿದರು.
ಸಂವಾದದ ಸಮಯದಲ್ಲಿ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವಲ್ಲಿ ಭಾಗವಹಿಸುವ ಗೂಗಲ್ ಸಂಸ್ಥೆಯ ಯೋಜನೆಯನ್ನು ಪ್ರಧಾನಮಂತ್ರಿ ಮತ್ತು ಶ್ರೀ ಸುಂದರ್ ಪಿಚೈ ಅವರು ಚರ್ಚಿಸಿದರು. ಭಾರತದಲ್ಲಿ ಕ್ರೊಮ್ ಬುಕ್ ಗಳನ್ನು ತಯಾರಿಸಲು ಹೆಚ್.ಪಿ.ಯೊಂದಿಗೆ ಗೂಗಲ್ ನ ಪಾಲುದಾರಿಕೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಗೂಗಲ್ ನ 100 ಭಾಷೆಗಳ ಉಪಕ್ರಮವನ್ನು ಪ್ರಧಾನಮಂತ್ರಿಯವರು ಗಮನಿಸಿದರು. ಭಾರತೀಯ ಭಾಷೆಗಳಲ್ಲಿ ಎ.ಐ. ಪರಿಕರಗಳನ್ನು ಲಭ್ಯವಾಗುವಂತೆ ಮಾಡುವ ಈ ಪ್ರಯತ್ನಗಳನ್ನು ಹಾಗೂ ಉತ್ತಮ ಆಡಳಿತಕ್ಕಾಗಿ ಎ.ಐ. ಪರಿಕರಗಳಲ್ಲಿ ಕೆಲಸ ಮಾಡಲು ಯೋಜನೆ ಪ್ರಾರಂಭಿಸಿದ್ದಕ್ಕಾಗಿ ಗೂಗಲ್ ಸಂಸ್ಥೆಯನ್ನು ಅವರು ಪ್ರೋತ್ಸಾಹಿಸಿದರು.
ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ(ಜಿ.ಐ.ಎಫ್.ಟಿ)ಯಲ್ಲಿ ತನ್ನ ಜಾಗತಿಕ ಫಿನ್ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವ ಗೂಗಲ್ ನ ನೂತನ ಯೋಜನೆಯನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು.
ಜಿಪೇ ಮತ್ತು ಯು.ಪಿ.ಐ.ಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಸುಧಾರಿಸುವ ಗೂಗಲ್ ನ ಯೋಜನೆಗಳ ಕುರಿತು ಶ್ರೀ ಪಿಚೈ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ತಿಳಿಸಿದರು. ಭಾರತದ ಅಭಿವೃದ್ಧಿ ಪಥಕ್ಕೆ ಕೊಡುಗೆ ನೀಡಲು ಗೂಗಲ್ ನ ಬದ್ಧತೆಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿ ಹೇಳಿದರು.
2023 ರ ಡಿಸೆಂಬರ್ ನಲ್ಲಿ ನವದೆಹಲಿಯಲ್ಲಿ ಭಾರತವು ಆಯೋಜಿಸುವ ಮುಂಬರುವ ಎ.ಐ. ಶೃಂಗಸಭೆಯಲ್ಲಿ ಜಾಗತಿಕ ಪಾಲುದಾರಿಕೆ ಮೂಲಕ ಕೊಡುಗೆ ನೀಡುವಂತೆ ಪ್ರಧಾನಮಂತ್ರಿ ಅವರು ಗೂಗಲ್ ಸಂಸ್ಥೆಗೆ ಆಹ್ವಾನ ನೀಡಿದರು.