ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯ ತಮ್ಮ ಲೋಕ ಕಲ್ಯಾಣ ಮಾರ್ಗ್ ನಿವಾಸದಲ್ಲಿ ದೇಶೀಯ ಲಸಿಕೆ ತಯಾರಕರೊಂದಿಗೆ ಸಂವಾದ ನಡೆಸಿದರು.
ದೇಶವು 100 ಕೋಟಿ ಲಸಿಕೆಗಳ ಮೈಲಿಗಲ್ಲನ್ನು ದಾಟಲು ಕಾರಣವಾದ ಲಸಿಕೆ ತಯಾರಕರ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಭಾರತದ ಯಶೋಗಾಥೆಯಲ್ಲಿ ಲಸಿಕೆ ತಯಾರಕರ ಪಾತ್ರ ದೊಡ್ಡ ಮಟ್ಟದಲ್ಲಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಸರಕಾರಕ್ಕೆ ತುಂಬಿದ ವಿಶ್ವಾಸವನ್ನು ಪ್ರಧಾನಿ ಶ್ಲಾಘಿಸಿದರು.
ಕಳೆದ ಒಂದೂವರೆ ವರ್ಷಗಳಲ್ಲಿ ಕಲಿತ ಅತ್ಯುತ್ತಮ ಕಾರ್ಯವಿಧಾನಗಳನ್ನು ದೇಶವು ಸಾಂಸ್ಥಿಕಗೊಳಿಸುವ ಅಗತ್ಯವಿದೆ ಎಂದು ಹೇಳಿದ ಪ್ರಧಾನಿ, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ನಮ್ಮ ಕಾರ್ಯವಿಧಾನಗಳನ್ನು ಮಾರ್ಪಡಿಸಲು ಇದೊಂದು ಸದವಕಾಶ ಎಂದರು. ಲಸಿಕೆಯ ಯಶಸ್ಸಿನ ಹಿನ್ನೆಲೆಯಲ್ಲಿ ಇಡೀ ವಿಶ್ವವು ಭಾರತದತ್ತ ನೋಡುತ್ತಿದೆ. ಲಸಿಕೆ ತಯಾರಕರು ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಲು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಲಸಿಕೆಗಳ ಅಭಿವೃದ್ಧಿಗೆ ನಿರಂತರ ಮಾರ್ಗದರ್ಶನ ಮತ್ತು ಬೆಂಬಲ ನೀಡುವಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿ ಮತ್ತು ಕ್ರಿಯಾತ್ಮಕ ನಾಯಕತ್ವವನ್ನು ದೇಶೀಯ ಲಸಿಕೆ ತಯಾರಕರು ಶ್ಲಾಘಿಸಿದರು. ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಹಿಂದೆಂದೂ ಕಂಡಿರದ ಸಹಯೋಗದ ಬಗ್ಗೆ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ನಿಯಂತ್ರಣ ಸುಧಾರಣೆಗಳು, ಸರಳೀಕೃತ ಕಾರ್ಯವಿಧಾನಗಳು, ಸಮಯೋಚಿತ ಅನುಮೋದನೆಗಳು ಮತ್ತು ಈ ಪ್ರಯತ್ನದುದ್ದಕ್ಕೂ ಸರ್ಕಾರದ ತೋರಿದ ಉತ್ಸಾಹ ಮತ್ತು ಬೆಂಬಲದ ಸ್ವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶವು ಹಳೆಯ ನಿಯಮಗಳನ್ನು ಅನುಸರಿಸುತ್ತಿದ್ದರೆ, ಸಾಕಷ್ಟು ವಿಳಂಬವಾಗುತ್ತಿತ್ತು ಮತ್ತು ಇಲ್ಲಿಯವರೆಗೆ ನಾವು ಸಾಧಿಸಿದ ಲಸಿಕೆ ಕಾರ್ಯಕ್ರಮದ ಮಟ್ಟವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಗಮನ ಸೆಳೆದರು.
ಶ್ರೀ ಅದಾರ್ ಪೂನಾವಾಲಾ ಅವರು ಸರ್ಕಾರ ಹೊರತಂದ ನಿಯಂತ್ರಣ ಸುಧಾರಣೆಗಳನ್ನು ಶ್ಲಾಘಿಸಿದರು. ಶ್ರೀ ಸೈರಸ್ ಪೂನಾವಾಲಾ ಅವರು ಸಾಂಕ್ರಾಮಿಕ ರೋಗದುದ್ದಕ್ಕೂ ಪ್ರಧಾನಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದರು. ʻಕೊವಾಕ್ಸಿನ್ʼ ಅನ್ನು ತೆಗೆದುಕೊಂಡಿದ್ದಕ್ಕಾಗಿ ಮತ್ತು ಅದರ ಅಭಿವೃದ್ಧಿಯ ಸಮಯದಲ್ಲಿ ನಿರಂತರ ಬೆಂಬಲ ಮತ್ತು ಪ್ರೇರಣೆಗಾಗಿ ಡಾ. ಕೃಷ್ಣ ಎಲಾ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ʻಡಿಎನ್‌ಎʼ ಆಧರಿತ ಲಸಿಕೆಯ ಬಗ್ಗೆ ಮಾತನಾಡಿದ ಪ್ರಧಾನಿಯವರಿಗೆ ಶ್ರೀ ಪಂಕಜ್ ಪಟೇಲ್ ಧನ್ಯವಾದ ಅರ್ಪಿಸಿದರು. ಶ್ರೀಮತಿ ಮಾಹಿಮಾ ದಟ್ಲಾ ಅವರು ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದರು, ಇದು ದೇಶಕ್ಕೆ ಲಸಿಕೆ ಮೈಲಿಗಲ್ಲನ್ನು ಸಾಧಿಸಲು ಸಹಾಯ ಮಾಡಿತು ಎಂದರು. ಲಸಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸತನದ ಶೋಧ ಮತ್ತು ಹಿಮ್ಮುಖ ಏಕೀಕರಣದ ಪ್ರಾಮುಖ್ಯದ ಬಗ್ಗೆ ಡಾ. ಸಂಜಯ್ ಸಿಂಗ್ ಅವರು ಮಾತನಾಡಿದರು. ಈ ಪ್ರಯತ್ನದುದ್ದಕ್ಕೂ ಸರ್ಕಾರ ಮತ್ತು ಉದ್ಯಮದ ನಡುವಿನ ಸಹಯೋಗವನ್ನು ಶ್ರೀ ಸತೀಶ್ ರೆಡ್ಡಿ ಶ್ಲಾಘಿಸಿದರು. ಸಾಂಕ್ರಾಮಿಕ ರೋಗದುದ್ದಕ್ಕೂ ಸರ್ಕಾರ ನಿರಂತರವಾಗಿ ಸಂವಹನ ನಡೆಸುತ್ತಿರುವ ಬಗ್ಗೆ ಡಾ. ರಾಜೇಶ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಾದದಲ್ಲಿ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಶ್ರೀ ಸೈರಸ್ ಪೂನಾವಾಲಾ ಮತ್ತು ಶ್ರೀ ಅದಾರ್ ಪೂನಾವಾಲಾ ಭಾಗವಹಿಸಿದ್ದರು; ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ ಡಾ. ಕೃಷ್ಣ ಎಲಾ ಮತ್ತು ಶ್ರೀಮತಿ ಸುಚಿತ್ರಾ ಎಲಾ; ಝೈಡಸ್ ಕ್ಯಾಡಿಲಾದ ಶ್ರೀ ಪಂಕಜ್ ಪಟೇಲ್ ಮತ್ತು ಡಾ. ಶೆರ್ವಿಲ್ ಪಟೇಲ್; ಬಯಾಲಾಜಿಕಲ್ ಇ. ಲಿಮಿಟೆಡ್ಮನ ಶ್ರೀಮತಿ ಮಾಹಿಮಾ ದಟ್ಲಾ ಮತ್ತು ಶ್ರೀ ನರೇಂದರ್ ಮಂಟೇಲಾ; ಜೆನ್ನೋವಾ ಬಯೋಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‌ನ ಡಾ. ಸಂಜಯ್ ಸಿಂಗ್ ಮತ್ತು ಶ್ರೀ ಸತೀಶ್ ರಮಣಲಾಲ್ ಮೆಹ್ತಾ; ಡಾ. ರೆಡ್ಡಿಸ್ ಲ್ಯಾಬ್‌ನ ಶ್ರೀ ಸತೀಶ್ ರೆಡ್ಡಿ ಮತ್ತು ಶ್ರೀ ದೀಪಕ್ ಸಪ್ರಾ; ಪನೇಸಿಯಾ ಬಯೋಟೆಕ್ ಲಿಮಿಟೆಡ್‌ನ ಡಾ. ರಾಜೇಶ್ ಜೈನ್ ಮತ್ತು ಶ್ರೀ ಹರ್ಷಿತ್ ಜೈನ್; ಕೇಂದ್ರ ಆರೋಗ್ಯ ಸಚಿವರು, ಆರೋಗ್ಯ ಖಾತೆ ಸಹಾಯಕ ಸಚಿವರು, ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆಯ ಸಹಾಯಕ ಸಚಿವರು ಸಂವಾದದಲ್ಲಿ ಉಪಸ್ಥಿತರಿದ್ದರು.
India’s #VaccineCentury has drawn widespread acclaim. Our vaccination drive wouldn’t be successful without the efforts of our dynamic vaccine manufacturers, who I had the opportunity to meet today. We had an excellent interaction. https://t.co/IqFqwMP1ww pic.twitter.com/WX1XE8AKlG
— Narendra Modi (@narendramodi) October 23, 2021