ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳ ನಿಯೋಗದೊಂದಿಗೆ ಸಂವಾದ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜಿಲ್ಲೆಗಳಿಂದ ಬಂದ ಸುಮಾರು 250 ವಿದ್ಯಾರ್ಥಿಗಳು ವಿಶೇಷ ಸಂವಾದದಲ್ಲಿ ಭಾಗವಹಿಸಿದರು.
ಈ ವಿದ್ಯಾರ್ಥಿಗಳು ಭಾರತ ಸರ್ಕಾರದ 'ವತನ್ ಕೋ ಜಾನೋ - ಯೂತ್ ಎಕ್ಸ್‌ಚೇಂಜ್ ಪ್ರೋಗ್ರಾಂ 2023' ಅಡಿಯಲ್ಲಿ ಜೈಪುರ, ಅಜ್ಮೀರ್ ಮತ್ತು ನವದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಏಕ್ ಭಾರತ್ ಶ್ರೇಷ್ಠ ಭಾರತ್‌ನ ಉತ್ಸಾಹದಲ್ಲಿ, ಈ ಭೇಟಿಯು ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ಸಂವಾದದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳಿಗೆ ಪ್ರಯಾಣದ ಅನುಭವ ಮತ್ತು ಅವರು ಭೇಟಿ ನೀಡಿದ ಅಪ್ರತಿಮ ಸ್ಥಳಗಳ ಬಗ್ಗೆ ಮಾಹಿತಿ ಕೇಳಿದರು. ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿನ ಶ್ರೀಮಂತ ಕ್ರೀಡಾ ಸಂಸ್ಕೃತಿಯ ಬಗ್ಗೆ ಚರ್ಚಿಸಿದರು ಮತ್ತು ಕ್ರಿಕೆಟ್, ಫುಟ್‌ಬಾಲ್ ಮುಂತಾದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಬಗ್ಗೆ ಚರ್ಚಿಸಿದರು. ಹ್ಯಾಂಗ್ ಝೌನಲ್ಲಿ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಗೆದ್ದ ಜಮ್ಮು ಮತ್ತು ಕಾಶ್ಮೀರದ ಯುವ ಬಿಲ್ಲುಗಾರ್ತಿ ಶೀತಲ್ ದೇವಿಯವರ ಉದಾಹರಣೆಯನ್ನು ಪ್ರಧಾನಿ ನೀಡಿದರು. . ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ಯುವಕರ ಪ್ರತಿಭೆಯನ್ನು ಶ್ಲಾಘಿಸಿದರು ಮತ್ತು ಅವರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗೆ ಕೆಲಸ ಮಾಡಲು ಮತ್ತು ಕೊಡುಗೆ ನೀಡಲು ಮತ್ತು ವಿಕಸಿತ್ ಭಾರತ್ @2047 ರ ಕನಸನ್ನು ನನಸಾಗಿಸಲು ಸಹಾಯ ಮಾಡಲು ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ ನೀಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ನಿರ್ಮಾಣದ ಕುರಿತು ಮಾತನಾಡಿದ ಪ್ರಧಾನಿ, ಇದು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಚಂದ್ರಯಾನ-3 ಮತ್ತು ಆದಿತ್ಯ-L1 ಮಿಷನ್‌ನ ಯಶಸ್ಸಿನ ಕುರಿತು ಚರ್ಚಿಸಿದ ಪ್ರಧಾನಿ, ಈ ವೈಜ್ಞಾನಿಕ ಸಾಧನೆಗಳು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು.
ಈ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶವಿದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ಯೋಗದ ಪ್ರಯೋಜನಗಳ ಬಗ್ಗೆ ಮಾತನಾಡಿದರು ಮತ್ತು ಪ್ರತಿದಿನ ಅದನ್ನು ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಶ್ಮೀರದಲ್ಲಿ ಜಿ20 ಶೃಂಗಸಭೆಯ ಯಶಸ್ವಿ ಆಯೋಜನೆ ಬಗ್ಗೆಯೂ ಅವರು ಚರ್ಚಿಸಿದರು.