ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ದೇಶದ ವಿವಿಧ ಭಾಗಗಳಿಂದ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಸಾವಿರಾರು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಎರಡು ತಿಂಗಳು ಪೂರೈಸಿರುವುದನ್ನು ಉಲ್ಲೇಖಿಸಿದರು. ಇದೇ ವೇಳೆ, "ಯಾತ್ರೆಯ ʻವಿಕಾಸದ ರಥʼವು ʻವಿಶ್ವಾಸದ ರಥʼವಾಗಿ ಮಾರ್ಪಟ್ಟಿದೆ ಮತ್ತು ಯಾರನ್ನೂ ಹಿಂದೆ ಉಳಿಯಲು ಬಿಡುವುದಿಲ್ಲ ಎಂಬ ವಿಶ್ವಾಸ ಮೂಡಿದೆ," ಎಂದು ಬಣ್ಣಿಸಿದರು. ಫಲಾನುಭವಿಗಳಲ್ಲಿನ ಭಾರಿ ಉತ್ಸಾಹ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ಜನವರಿ 26ರ ನಂತರ ಮತ್ತು ಫೆಬ್ರವರಿವರೆಗೆ ವಿಸ್ತರಿಸಲು ಪ್ರಧಾನಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾದ ಯಾತ್ರೆಯು ಬೃಹತ್ ಜನಾಂದೋಲನವಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ 15 ಕೋಟಿ ಜನರು ಈ ಯಾತ್ರೆಗೆ ಸೇರಿದ್ದಾರೆ. ಇದರ ವ್ಯಾಪ್ತಿಯು ಸುಮಾರು 80 ಪ್ರತಿಶತದಷ್ಟು ಪಂಚಾಯಿತಿಗಳಿಗೆ ವಿಸ್ತರಿಸಿದೆ. "ಒಂದಲ್ಲ ಒಂದು ಕಾರಣದಿಂದ ಇಲ್ಲಿಯವರೆಗೆ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದ ಜನರನ್ನು ತಲುಪುವುದು ವಿಕಾಸ ಭಾರತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಎಲ್ಲರಿಂದಲೂ ನಿರ್ಲಕ್ಷಿಸಲ್ಪಟ್ಟಂತಹ ಜನರನ್ನು ಮೋದಿ ಪೂಜಿಸುತ್ತಾರೆ ಮತ್ತು ಗೌರವಿಸುತ್ತಾರೆ," ಎಂದು ಪ್ರಧಾನಿ ಮೋದಿ ಹೇಳಿದರು.
ಕೊನೆಯ ಮೈಲಿಯ ಜನರನ್ನು ತಲುಪಲು ʻವಿಕಾಸ ಭಾರತ ಸಂಕಲ್ಪ ಯಾತ್ರೆʼ ಉತ್ತಮ ಮಾಧ್ಯಮ ಎಂದು ಬಣ್ಣಿಸಿದ ಪ್ರಧಾನಿ, ಯಾತ್ರೆಯ ಸಮಯದಲ್ಲಿ 4 ಕೋಟಿಗೂ ಹೆಚ್ಚು ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿದೆ ಮತ್ತು 2.5 ಕೋಟಿ ಕ್ಷಯರೋಗ ತಪಾಸಣೆ ಮಾಡಲಾಗದೆ. ಜೊತೆಗೆ, 50 ಲಕ್ಷ ಕುಡಗೋಲು ಕೋಶ ರಕ್ತಹೀನತೆ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಯಾತ್ರೆಯ ಅವಧಿಯಲ್ಲಿ 50 ಲಕ್ಷ ʻಆಯುಷ್ಮಾನ್ ಕಾರ್ಡ್ʼಗಳು, 25 ಲಕ್ಷ ಹೊಸ ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳು, 25 ಲಕ್ಷ ಉಚಿತ ಅನಿಲ ಸಂಪರ್ಕಗಳನ್ನು ವಿತರಿಸಲಾಗಿದೆ, 10 ಲಕ್ಷ ಹೊಸ ಸ್ವನಿಧಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಹಾಗೂ 33 ಲಕ್ಷ ಹೊಸ ʻಪಿಎಂ ಕಿಸಾನ್ ಫಲಾನುಭವಿಗಳು ಸೇರ್ಪಡೆಗೊಂಡಿದ್ದಾರೆ. ಇವು ಬೇರೆಯವರಿಗೆ ಕೇವಲ ಅಂಕಿಅಂಶಗಳಾಗಿ ಕಾಣಬಹುದು, ಆದರೆ ಇಲ್ಲಿಯವರೆಗೆ ಪ್ರಯೋಜನಗಳಿಂದ ವಂಚಿತರಾದ ನೈಜ ಫಲಾನುಭವಿಗಳ ಪಾಲಿಗೆ ಪ್ರತಿ ಸಂಖ್ಯೆಯೂ ಒಂದು ಜೀವನವಾಗಿದೆ ಎಂದು ಪ್ರಧಾನಿ ಹೇಳಿದರು.
ಬಹು ಆಯಾಮದ ಬಡತನ ಕುರಿತಾದ ಇತ್ತೀಚೆಗಿನ ವರದಿಯನ್ನು ಪ್ರಧಾನಿ ಉಲ್ಲೇಖಿಸಿದರು. ಕಳೆದ 9 ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದಾಗಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಹೇಳಿದರು. "ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ಪಾರದರ್ಶಕ ವ್ಯವಸ್ಥೆಯನ್ನು ಸ್ಥಾಪಿಸಿದೆ, ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಿದೆ. ಆ ಮೂಲಕ ಅಸಾಧ್ಯವಾದುದನ್ನು ಸಹ ಸಾಧ್ಯವಾಗಿಸಿದೆ," ಎಂದು ಅವರು ತಿಳಿಸಿದರು. ʻಪಿಎಂ ಆವಾಸ್ʼ ಯೋಜನೆಯ ಉದಾಹರಣೆಯನ್ನು ನೀಡುವ ಮೂಲಕ ಅವರು ಇದನ್ನು ವಿವರಿಸಿದರು. ಈ ಯೋಜನೆಯಲ್ಲಿ 4 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಶಾಶ್ವತ ಮನೆಯನ್ನು ಒದಗಿಸಲಾಗಿದ್ದು, ಶೇಕಡಾ 70 ರಷ್ಟು ಘಟಕಗಳು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ. ಈ ನಡೆಯು ಬಡತನವನ್ನು ನಿಭಾಯಿಸಿದ್ದಲ್ಲದೆ, ಮಹಿಳೆಯರನ್ನು ಸಬಲೀಕರಣಕ್ಕೆ ಕಾರಣವಾಯಿತು. ಮನೆಗಳ ಗಾತ್ರವನ್ನು ಹೆಚ್ಚಿಸಲಾಗಿದ್ದು, ನಿರ್ಮಾಣದಲ್ಲಿ ಜನರ ಆಯ್ಕೆಯನ್ನು ಗೌರವಿಸಲಾಗಿದೆ. ನಿರ್ಮಾಣ ವೇಗವನ್ನು 300 ದಿನಗಳಿಂದ 100ಕ್ಕೆ ಇಳಿಸಲಾಗಿದೆ. “ಅಂದರೆ, ನಾವು ಮೊದಲಿಗಿಂತ ಮೂರು ಪಟ್ಟು ವೇಗವಾಗಿ ಶಾಶ್ವತ ಮನೆಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಅವುಗಳನ್ನು ಬಡವರಿಗೆ ಹಸ್ತಾಂತರಿಸುತ್ತಿದ್ದೇವೆ. ಇಂತಹ ಪ್ರಯತ್ನಗಳು ದೇಶದಲ್ಲಿ ಬಡತನವನ್ನು ಕಡಿಮೆ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿವೆ," ಎಂದು ಅವರು ಹೇಳಿದರು.
ತೃತೀಯ ಲಿಂಗಿಗಳಿಗಾಗಿ ಸರ್ಕಾರದ ಕೈಗೊಂಡ ನೀತಿಗಳನ್ನು ಉದಾಹರಿಸುವ ಮೂಲಕ ಅವಕಾಶ ವಂಚಿತರಿಗೆ ಆದ್ಯತೆ ನೀಡುವ ಸರ್ಕಾರದ ಕಾರ್ಯವಿಧಾನವನ್ನು ಪ್ರಧಾನಿ ವಿವರಿಸಿದರು. "ನಮ್ಮ ಸರ್ಕಾರವು ಮೊದಲ ಬಾರಿಗೆ ತೃತೀಯ ಲಿಂಗಿ ಸಮುದಾಯದ ತೊಂದರೆಗಳ ಬಗ್ಗೆ ಕಾಳಜಿ ವಹಿಸಿದೆ ಮತ್ತು ಅವರ ಜೀವನವನ್ನು ಸುಲಭಗೊಳಿಸಲು ಆದ್ಯತೆ ನೀಡಿದೆ. 2019ರಲ್ಲಿ, ನಮ್ಮ ಸರ್ಕಾರವು ತೃತೀಯ ಲಿಂಗಿಗಳ ಹಕ್ಕುಗಳನ್ನು ರಕ್ಷಿಸುವ ಕಾನೂನನ್ನು ಜಾರಿಗೆ ತಂದಿತು. ಇದು ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆಯಲು ಸಹಾಯ ಮಾಡುವುದರ ಜೊತೆಗೆ, ಅವರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಿತು. ಸರ್ಕಾರವು ಸಾವಿರಾರು ಜನರಿಗೆ ತೃತೀಯ ಲಿಂಗಿಗಳ ಗುರುತಿನ ಪ್ರಮಾಣಪತ್ರಗಳನ್ನು ಸಹ ನೀಡಿದೆ," ಎಂದು ಅವರು ಹೇಳಿದರು.
"ಭಾರತವು ವೇಗವಾಗಿ ಬದಲಾಗುತ್ತಿದೆ. ಇಂದು, ಜನರ ವಿಶ್ವಾಸ, ಸರ್ಕಾರದ ಮೇಲಿನ ಅವರ ನಂಬಿಕೆ ಹಾಗೂ ನವ ಭಾರತವನ್ನು ನಿರ್ಮಿಸುವ ಅವರ ದೃಢನಿಶ್ಚಯ ಎಲ್ಲೆಡೆ ಗೋಚರಿಸುತ್ತಿದೆ,ʼʼ ಎಂದರು. ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳೊಂದಿಗಿನ ತಮ್ಮ ಇತ್ತೀಚಿನ ಸಂವಾದವನ್ನು ಉಲ್ಲೇಖಿಸಿದ ಪಿಎಂ ಮೋದಿ, ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿನ ಬುಡಕಟ್ಟು ಮಹಿಳೆಯರ ಉಪಕ್ರಮವನ್ನು ಸ್ಮರಿಸಿದರು ಮತ್ತು ತಮ್ಮ ಜನರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಶಿಕ್ಷಣ ನೀಡುವ ಅವರ ದೃಢನಿಶ್ಚಯವನ್ನು ಶ್ಲಾಘಿಸಿದರು. ಸ್ವಸಹಾಯ ಗುಂಪುಗಳ ಆಂದೋಲನವನ್ನು ಸಶಕ್ತಗೊಳಿಸುವ ಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಗುಂಪುಗಳನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸುವ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದರು. ಅಡಮಾನ ರಹಿತ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ, ಇದರ ಪರಿಣಾಮವಾಗಿ 10 ಕೋಟಿ ಹೊಸ ಮಹಿಳೆಯರು ಸ್ವಸಹಾಯ ಸಂಘಗಳೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಅವರು ಹೊಸ ವ್ಯವಹಾರಗಳಿಗೆ 8 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಸಹಾಯವನ್ನು ಪಡೆದಿದ್ದಾರೆ. 3 ಕೋಟಿ ಮಹಿಳೆಯರು ಮಹಿಳಾ ರೈತರಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. 2 ಕೋಟಿ ʻಲಕ್ಷಾಧಿಪತಿ ದೀದಿʼಯರ ಸೃಷ್ಟಿ ಗುರಿ ಮತ್ತು ʻನಮೋ ಡ್ರೋನ್ ದೀದಿʼ ಯೋಜನೆಯ ಆರಂಭವನ್ನು ಅವರು ಉಲ್ಲೇಖಿಸಿದರು. ಸಾವಿರಕ್ಕೂ ಹೆಚ್ಚು ʻನಮೋ ಡ್ರೋನ್ ದೀದಿʼಯರು ತರಬೇತಿಯನ್ನು ಪೂರ್ಣಗೊಳಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಆರ್ಥಿಕತೆಯನ್ನು ಆಧುನೀಕರಿಸುವ ಮತ್ತು ರೈತರನ್ನು ಸಬಲೀಕರಣಗೊಳಿಸುವ ಸರ್ಕಾರದ ಆದ್ಯತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸಣ್ಣ ರೈತರನ್ನು ಬಲಪಡಿಸುವ ಕ್ರಮಗಳನ್ನು ಪಟ್ಟಿ ಮಾಡಿದರು. 10,000 ಕೃಷಿ ಉತ್ಪನ್ನ ಸಂಘಟನೆʼಗಳಲ್ಲಿ (ಎಫ್‌ಪಿಒ) 8 ಸಾವಿರ ಈಗಾಗಲೇ ಸ್ಥಾಪನೆಗೊಂಡಿವೆ. ಕಾಲು ಬಾಯಿ ರೋಗಕ್ಕೆ 50 ಕೋಟಿ ಲಸಿಕೆಗಳನ್ನು ಹಾಕಲಾಗಿದೆ, ಇದರ ಪರಿಣಾಮವಾಗಿ ಹಾಲಿನ ಉತ್ಪಾದನೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ ಎಂದು ಅವರು ಉಲ್ಲೇಖಿಸಿದರು.
ಭಾರತದ ಯುವ ಜನಸಂಖ್ಯಾಶಕ್ತಿಯನ್ನು ಉಲ್ಲೇಖಿಸಿದ ಪಿಎಂ ಮೋದಿ, ವಿಕಾಸ ಸಂಕಲ್ಪ ಯಾತ್ರೆಯ ವೇಳೆ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಕ್ರೀಡಾಪಟುಗಳನ್ನು ಗೌರವಿಸಲಾಗಿದೆ ಎಂದು ಹೇಳಿದರು. ಯುವಕರು ಸ್ವಯಂಸೇವಕರಾಗಿ ʻಮೈ ಭಾರತ್ ಪೋರ್ಟಲ್ʼನಲ್ಲಿ ನೋಂದಾಯಿಸಿಕೊಳ್ಳುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. 2047ರ ವೇಳೆಗೆ ʻವಿಕಸಿತ ಭಾರತʼಕ್ಕಾಗಿ ರಾಷ್ಟ್ರೀಯ ಸಂಕಲ್ಪವನ್ನು ಪುನರುಚ್ಚರಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಹಿನ್ನೆಲೆ
2023ರ ನವೆಂಬರ್ 15ರಂದು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಗೆ ಚಾಲನೆ ದೊರೆತಿದ್ದು, ಅಂದಿನಿಂದ ಪ್ರಧಾನಮಂತ್ರಿಯವರು ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಐದು ಬಾರಿ (ನವೆಂಬರ್ 30, ಡಿಸೆಂಬರ್ 9, ಡಿಸೆಂಬರ್ 16, ಡಿಸೆಂಬರ್ 27 ಮತ್ತು ಜನವರಿ 8, 2024) ಸಂವಾದ ನಡೆದಿದೆ. ಅಲ್ಲದೆ, ಪ್ರಧಾನಮಂತ್ರಿಯವರು ಕಳೆದ ತಿಂಗಳು ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸತತ ಎರಡು ದಿನಗಳ ಕಾಲ (ಡಿಸೆಂಬರ್ 17-18) ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು.
ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತಿದ್ದು, ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆ ಯೋಜನೆಗಳ ಪರಿಪೂರ್ಣ ಅನುಷ್ಠಾನ ಸಾಧಿಸುವುದು ಇದರ ಗುರಿಯಾಗಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದವರ ಸಂಖ್ಯೆ 15 ಕೋಟಿ ದಾಟಿದೆ. ʻವಿಕಸಿತ ಭಾರತʼದ ಸಮಾನ ಆಶಯದ ಕಡೆಗೆ ರಾಷ್ಟ್ರದಾದ್ಯಂತ ಜನರನ್ನು ಒಗ್ಗೂಡಿಸುವಲ್ಲಿ ಹಾಗೂ ಆಳವಾದ ಪರಿಣಾಮವನ್ನು ಬೀರುವಲ್ಲಿ ಯಾತ್ರೆಯ ಯಶಸ್ಸಿಗೆ ಇದು ಸಾಕ್ಷಿಯಾಗಿದೆ.
विकसित भारत संकल्प यात्रा में चलने वाला विकास रथ, विश्वास रथ में बदल चुका है। pic.twitter.com/Lu8xA42HqQ
— PMO India (@PMOIndia) January 18, 2024
विकसित भारत संकल्प यात्रा जैसा अभियान Last Mile Delivery का सबसे बेहतरीन माध्यम है। pic.twitter.com/hqMMVGiW2r
— PMO India (@PMOIndia) January 18, 2024
विकसित भारत संकल्प यात्रा, एक जनआंदोलन में बदल गई है। pic.twitter.com/8rCVLlAajr
— PMO India (@PMOIndia) January 18, 2024
हमारी सरकार ने साल 2019 में ट्रांसजेंडर्स के अधिकारों को संरक्षण देने वाला कानून बनाया: PM @narendramodi pic.twitter.com/zqvY7SR3oz
— PMO India (@PMOIndia) January 18, 2024
भारत बदल रहा है और बहुत तेजी से बदल रहा है। pic.twitter.com/gwqPYqrDrE
— PMO India (@PMOIndia) January 18, 2024