"ಶೃಂಗಸಭೆಯು ಪ್ರಪಂಚದಾದ್ಯಂತದ ವಿವಿಧ ಸಂಸದೀಯ ಅಭ್ಯಾಸಗಳ ವಿಶಿಷ್ಟ ಸಂಗಮವಾಗಿದೆ"
"ಪ್ರಜಾಪ್ರಭುತ್ವದ ತಾಯಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೂ ಆಗಿರುವ ನೆಲದಲ್ಲಿ ಪಿ20 ಶೃಂಗಸಭೆ ನಡೆಯುತ್ತಿದೆ"
"ಭಾರತವು ವಿಶ್ವದ ಅತಿದೊಡ್ಡ ಚುನಾವಣೆಗಳನ್ನು ನಡೆಸುತ್ತಿರುವುದು ಮಾತ್ರವಲ್ಲ, ಅದರಲ್ಲಿ ಜನರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ."
"ಭಾರತವು ಚುನಾವಣಾ ಪ್ರಕ್ರಿಯೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿದೆ"
"ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ"
"ವಿಭಜಿತ ಜಗತ್ತು ಮನುಕುಲವು ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ"
"ಇದು ಶಾಂತಿ ಮತ್ತು ಭ್ರಾತೃತ್ವದ ಸಮಯ, ಒಟ್ಟಿಗೆ ಸಾಗುವ ಸಮಯ. ಇದು ಎಲ್ಲರ ಪ್ರಗತಿ ಮತ್ತು ಯೋಗಕ್ಷೇಮದ ಸಮಯ. ನಾವು ಜಾಗತಿಕ ವಿಶ್ವಾಸದ ಬಿಕ್ಕಟ್ಟನ್ನು ನಿವಾರಿಸಬೇಕು ಮತ್ತು ಮಾನವ ಕೇಂದ್ರಿತ ಚಿಂತನೆಯೊಂದಿಗೆ ಮುನ್ನಡೆಯಬೇಕು”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಯಶೋಭೂಮಿಯಲ್ಲಿ 9ನೇ ಜಿ-20 ಸಂಸದೀಯ ಅಧ್ಯಕ್ಷರ ಶೃಂಗಸಭೆಯನ್ನು (ಪಿ20) ಉದ್ಘಾಟಿಸಿದರು. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತು' ಎಂಬ ವಿಷಯದೊಂದಿಗೆ ಭಾರತದ ಜಿ20 ಅಧ್ಯಕ್ಷತೆಯ ವಿಶಾಲ ಚೌಕಟ್ಟಿನ ಅಡಿಯಲ್ಲಿ ಶೃಂಗಸಭೆಯನ್ನು ಭಾರತದ ಸಂಸತ್ತು ಆಯೋಜಿಸಿದೆ.

 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ 140 ಕೋಟಿ ನಾಗರಿಕರ ಪರವಾಗಿ ಜಿ20 ಸಂಸದೀಯ ಅಧ್ಯಕ್ಷರ ಶೃಂಗಸಭೆಗೆ ಗಣ್ಯರನ್ನು ಸ್ವಾಗತಿಸಿದರು. "ಶೃಂಗಸಭೆಯು ಪ್ರಪಂಚದಾದ್ಯಂತದ ಎಲ್ಲಾ ಸಂಸದೀಯ ಅಭ್ಯಾಸಗಳ 'ಮಹಾ ಕುಂಭ'ವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಉಪಸ್ಥಿತರಿರುವ ಎಲ್ಲಾ ಪ್ರತಿನಿಧಿಗಳು ವಿವಿಧ ದೇಶಗಳ ಸಂಸದೀಯ ಚೌಕಟ್ಟಿನ ಅನುಭವವನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು ಇಂದಿನ ಕಾರ್ಯಕ್ರಮದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಭಾರತದಲ್ಲಿ ಹಬ್ಬದ ಋತುವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜಿ20 ಹಬ್ಬದ ಸಂಭ್ರಮವನ್ನು ವರ್ಷವಿಡೀ ಮುಂದುವರೆಸಿಕೊಂಡು ಹೋಗುತ್ತದೆ, ಏಕೆಂದರೆ ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಜಿ20-ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಿದ ಅನೇಕ ನಗರಗಳಲ್ಲಿ ಜಿ20 ಉತ್ಸವಗಳು ವ್ಯಾಪಿಸಿವೆ ಎಂದು ಹೇಳಿದರು. ಚಂದ್ರನ ಮೇಲೆ ಚಂದ್ರಯಾನದ ಇಳಿಯುವಿಕೆ, ಯಶಸ್ವಿ ಜಿ20 ಶೃಂಗಸಭೆ ಮತ್ತು ಪಿ20 ಶೃಂಗಸಭೆಯಂತಹ ಘಟನೆಗಳಿಂದ ಈ ಉತ್ಸವಗಳನ್ನು ಹೆಚ್ಚಿಸಲಾಯಿತು. ಯಾವುದೇ ರಾಷ್ಟ್ರದ ದೊಡ್ಡ ಶಕ್ತಿ ಅದರ ಜನರು ಮತ್ತು ಅವರ ಇಚ್ಛಾಶಕ್ತಿಯಾಗಿದೆ ಮತ್ತು ಈ ಶೃಂಗಸಭೆಯು ಅದನ್ನು ಸಂಭ್ರಮಿಸಲು ಒಂದು ಮಾಧ್ಯಮವಾಗಿದೆ ಎಂದು ಅವರು ಹೇಳಿದರು.

 

ಪ್ರಜಾಪ್ರಭುತ್ವದ ತಾಯಿ ಮಾತ್ರವಲ್ಲದೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನೆಲದಲ್ಲಿ ಪಿ20 ಶೃಂಗಸಭೆ ನಡೆಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇತಿಹಾಸದಿಂದ ಚರ್ಚೆಗಳ ನಿಖರವಾದ ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಪ್ರಪಂಚದಾದ್ಯಂತದ ವಿವಿಧ ಸಂಸತ್ತಿನ ಪ್ರತಿನಿಧಿಗಳಾಗಿ ಇಲ್ಲಿನ ಚರ್ಚೆಗಳು ಮತ್ತು ಪರ್ಯಾಲೋಚನೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಐದು ಸಾವಿರ ವರ್ಷಗಳಷ್ಟು ಹಳೆಯದಾದ ಭಾರತದ ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಸಭೆಗಳು ಮತ್ತು ಸಮಿತಿಗಳ ಉಲ್ಲೇಖವಿದೆ. ಅಲ್ಲಿ ಸಮಾಜದ ಒಳಿತಿಗಾಗಿ ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು  ಎಂದು ಅವರು ಹೇಳಿದರು. ಭಾರತದ ಅತ್ಯಂತ ಪುರಾತನ ಗ್ರಂಥವಾದ ಋಗ್ವೇದದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, 'ನಾವು ಒಟ್ಟಿಗೆ ನಡೆಯಬೇಕು, ಒಟ್ಟಿಗೆ ಮಾತನಾಡಬೇಕು ಮತ್ತು ನಮ್ಮ ಮನಸ್ಸುಗಳು ಒಂದಾಗಬೇಕು' ಎಂಬ ಸಂಸ್ಕೃತ ಶ್ಲೋಕವೊಂದನ್ನು ಪಠಿಸಿದರು. ಗ್ರಾಮ ಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಿಹರಿಸಲಾಗುತ್ತಿತ್ತು, ಇದು ಗ್ರೀಕ್ ರಾಯಭಾರಿ ಮೆಗಾಸ್ತನೀಸ್‌ ಅವರಿಗೆ ದೊಡ್ಡ ವಿಸ್ಮಯಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು. ಪ್ರಧಾನಿಯವರು ತಮಿಳುನಾಡಿನ 9ನೇ ಶತಮಾನದ ಶಾಸನದ ಬಗ್ಗೆ ಉಲ್ಲೇಖಿಸಿದರು. ಇದು ಗ್ರಾಮ ಪ್ರತಿನಿಧಿಗಳಿಗೆ ನಿಯಮಗಳು ಮತ್ತು ಸಂಹಿತೆಗಳನ್ನು ವಿವರಿಸುತ್ತದೆ. 1200 ವರ್ಷಗಳ ಹಳೆಯ ಶಾಸನವು ಸದಸ್ಯರನ್ನು ಅನರ್ಹಗೊಳಿಸುವ ನಿಯಮಗಳನ್ನು ಸಹ ಹೇಳುತ್ತದೆ ಎಂದು ಅವರು ಹೇಳಿದರು. ಭಾರತದಲ್ಲಿ 12ನೇ ಶತಮಾನದಿಂದಲೂ ನಡೆದುಕೊಂಡು ಬಂದಿರುವ ಅನುಭವ ಮಂಟಪ ಪರಂಪರೆಯ ಬಗ್ಗೆ ಮಾತನಾಡುತ್ತಾ, ಮ್ಯಾಗ್ನಾ ಕಾರ್ಟಾ ಅಸ್ತಿತ್ವಕ್ಕೆ ಬರುವ ಅನೇಕ ವರ್ಷಗಳ ಮೊದಲು, ಪ್ರತಿಯೊಂದು ಜಾತಿ, ಪಂಥ ಮತ್ತು ಧರ್ಮದ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಕ್ತ ಚರ್ಚೆಗಳನ್ನು ಪ್ರೋತ್ಸಾಹಿಸಲಾಯಿತು ಎಂದು ಪ್ರಧಾನಿ ತಿಳಿಸಿದರು.. ಜಗದ್ದಗುರು ಬಸವೇಶ್ವರರು ಪ್ರಾರಂಭಿಸಿದ ಅನುಭವ ಮಂಟಪವು ಇಂದಿಗೂ ಭಾರತ ಹೆಮ್ಮೆಪಡುವಂತೆ ಮಾಡುತ್ತಿದೆ ಎಂದರು. 5000 ವರ್ಷಗಳಷ್ಟು ಹಳೆಯದಾದ ಧರ್ಮಗ್ರಂಥಗಳಿಂದ ಇಂದಿನವರೆಗಿನ ಭಾರತದ ಪ್ರಯಾಣವು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಸಂಸದೀಯ ಸಂಪ್ರದಾಯಗಳ ಪರಂಪರೆಯಾಗಿದೆ ಎಂದು ಪ್ರಧಾನಿ ಒತ್ತಿಹೇಳಿದರು.

 

ಕಾಲಕ್ಕೆ ತಕ್ಕಂತೆ ಭಾರತದ ಸಂಸದೀಯ ಪರಂಪರೆಯ ನಿರಂತರ ವಿಕಸನ ಮತ್ತು ಬಲವರ್ಧನೆಯ ಕುರಿತು ಪ್ರಧಾನಮಂತ್ರಿಯವರು ಮಾತನಾಡಿದರು. ಸ್ವಾತಂತ್ರ್ಯ ನಂತರ ಭಾರತದಲ್ಲಿ 17 ಸಾರ್ವತ್ರಿಕ ಚುನಾವಣೆಗಳು ಮತ್ತು 300 ಕ್ಕೂ ಹೆಚ್ಚು ರಾಜ್ಯ ವಿಧಾನಸಭಾ ಚುನಾವಣೆಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರು. ಈ ಅತಿ ದೊಡ್ಡ ಚುನಾವಣಾ ಕಸರತ್ತಿನಲ್ಲಿ ಜನರ ಭಾಗವಹಿಸುವಿಕೆ ಸತತವಾಗಿ ಹೆಚ್ಚುತ್ತಿದೆ. 600 ಮಿಲಿಯನ್ ಮತದಾರರು ಭಾಗವಹಿಸಿದ್ದರಿಂದ 2019 ರ ಸಾರ್ವತ್ರಿಕ ಚುನಾವಣೆಯು ಮಾನವ ಇತಿಹಾಸದ ಅತಿದೊಡ್ಡ ಚುನಾವಣಾ ಕೆಲಸವಾಗಿದೆ ಎಂದು ಅವರು ಹೇಳಿದರು. ಆ ಸಮಯದಲ್ಲಿ, 910 ಮಿಲಿಯನ್ ನೋಂದಾಯಿತ ಮತದಾರರಿದ್ದರು, ಇದು ಇಡೀ ಯುರೋಪಿನ ಜನಸಂಖ್ಯೆಗಿಂತ ಹೆಚ್ಚು. ಅಂತಹ ದೊಡ್ಡ ಸಂಖ್ಯೆಯ ಮತದಾರರಲ್ಲಿ ಶೇಕಡಾ 70 ರಷ್ಟು ಮತದಾನವು ಸಂಸದೀಯ ಅಭ್ಯಾಸಗಳ ಬಗ್ಗೆ ಭಾರತೀಯರ ಆಳವಾದ ನಂಬಿಕೆಯನ್ನು ತೋರಿಸುತ್ತದೆ. 2019 ರ ಚುನಾವಣೆಯು ಮಹಿಳೆಯರ ದಾಖಲೆಯ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯ ವಿಸ್ತರಿತ ಕ್ಯಾನ್ವಾಸ್ ಅನ್ನು ಉಲ್ಲೇಖಿಸಿದ ಪ್ರಧಾನಿ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 600 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಭಾಗವಹಿಸಿದ್ದವು ಮತ್ತು 10 ಮಿಲಿಯನ್ ಸರ್ಕಾರಿ ನೌಕರರು ಚುನಾವಣೆಯ ನಿರ್ವಹಣೆಯಲ್ಲಿ ಕೆಲಸ ಮಾಡಿದರು ಮತ್ತು ಮತದಾನಕ್ಕಾಗಿ 1 ಮಿಲಿಯನ್ ಮತಗಟ್ಟೆಗಳನ್ನು ನಿರ್ಮಿಸಲಾಯಿತು ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಯ ಆಧುನೀಕರಣದ ಬಗ್ಗೆಯೂ ಪ್ರಧಾನಿ ಗಮನಸೆಳೆದರು. ಕಳೆದ 25 ವರ್ಷಗಳಿಂದ ಇವಿಎಂಗಳ ಬಳಕೆಯು ಚುನಾವಣಾ ಪ್ರಕ್ರಿಯೆಗೆ ಪಾರದರ್ಶಕತೆ ಮತ್ತು ದಕ್ಷತೆಯನ್ನು ತಂದಿದೆ. ಏಕೆಂದರೆ ಚುನಾವಣಾ ಫಲಿತಾಂಶಗಳು ಎಣಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಬರುತ್ತವೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ 1 ಶತಕೋಟಿ ಜನರು ಭಾಗವಹಿಸಲಿದ್ದಾರೆ ಎಂದ ಪ್ರಧಾನಿಯವರು ಈ ಚುನಾವಣೆಗೆ ಸಾಕ್ಷಿಯಾಗುವಂತೆ ಪ್ರತಿನಿಧಿಗಳನ್ನು ಆಹ್ವಾನಿಸಿದರು.

 

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಇತ್ತೀಚಿನ ನಿರ್ಧಾರದ ಬಗ್ಗೆ ಪ್ರಧಾನಿ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸ್ಥಳೀಯ ಸಂಸ್ಥೆಗಳಲ್ಲಿ 3 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳಲ್ಲಿ ಸುಮಾರು 50 ಪ್ರತಿಶತದಷ್ಟು ಮಹಿಳೆಯರಿದ್ದಾರೆ ಎಂದು ಅವರು ತಿಳಿಸಿದರು. ಭಾರತ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ. ನಮ್ಮ ಸಂಸತ್ತಿನ ಇತ್ತೀಚಿನ ನಿರ್ಧಾರವು ನಮ್ಮ ಸಂಸದೀಯ ಸಂಪ್ರದಾಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು ಭಾರತದ ಸಂಸದೀಯ ಸಂಪ್ರದಾಯಗಳ ಬಗ್ಗೆ ನಾಗರಿಕರಿಗಿರುವ ಅಚಲವಾದ ನಂಬಿಕೆಯನ್ನು ಎತ್ತಿ ತೋರಿಸಿದರು ಮತ್ತು ದೇಶದ ವೈವಿಧ್ಯತೆ ಮತ್ತು ಚೈತನ್ಯಕ್ಕೆ ಅದರ ಶ್ರೇಯ ಸಲ್ಲಬೇಕು ಎಂದರು. ನಾವು ಇಲ್ಲಿ ಎಲ್ಲಾ ಧರ್ಮದ ಜನರನ್ನು ಹೊಂದಿದ್ದೇವೆ. ನೂರಾರು ರೀತಿಯ ಆಹಾರ, ಜೀವನ ವಿಧಾನಗಳು, ಭಾಷೆಗಳು, ಉಪಭಾಷೆಗಳಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಜನರಿಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸಲು 28 ಭಾಷೆಗಳಲ್ಲಿ ಭಾರತದಲ್ಲಿ 900 ಕ್ಕೂ ಹೆಚ್ಚು ಟಿವಿ ಚಾನೆಲ್‌ ಗಳಿವೆ. ಸುಮಾರು 200 ಭಾಷೆಗಳಲ್ಲಿ 33 ಸಾವಿರಕ್ಕೂ ಹೆಚ್ಚು ವಿವಿಧ ಪತ್ರಿಕೆಗಳನ್ನು ಪ್ರಕಟಿಸಲಾಗುತ್ತಿಗದೆ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಮಾರು 3 ಬಿಲಿಯನ್ ಬಳಕೆದಾರರಿದ್ದಾರೆ ಎಂದು ಅವರು ಹೇಳಿದರು. ಭಾರತದಲ್ಲಿ ಮಾಹಿತಿಯ ದೊಡ್ಡ ಹರಿವು ಮತ್ತು ವಾಕ್ ಸ್ವಾತಂತ್ರ್ಯದ ಮಟ್ಟವನ್ನು ಶ್ರೀ ಮೋದಿಯವರು ಒತ್ತಿ ಹೇಳಿದರು. 21 ನೇ ಶತಮಾನದ ಈ ಜಗತ್ತಿನಲ್ಲಿ, ಭಾರತದ ಈ ಮನೋಭಾವ, ವಿವಿಧತೆಯಲ್ಲಿ ಏಕತೆ, ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಮನೋಭಾವವು ಪ್ರತಿಯೊಂದು ಸವಾಲನ್ನು ಎದುರಿಸಲು ಮತ್ತು ಪ್ರತಿಯೊಂದು ಕಷ್ಟವನ್ನು ಒಟ್ಟಾಗಿ ಪರಿಹರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

 

ಪ್ರಪಂಚದ ಅಂತರ್‌ ಸಂಪರ್ಕಿತ ಸ್ವರೂಪವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಂಘರ್ಷ ಮತ್ತು ಘರ್ಷಣೆಯಿಂದ ತುಂಬಿದ ಜಗತ್ತು ಯಾರಿಗೂ ಒಳಿತಲ್ಲ ಎಂದು ಹೇಳಿದರು. ವಿಭಜಿತ ಜಗತ್ತು ಮನುಕುಲ ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ. ಇದು ಶಾಂತಿ ಮತ್ತು ಭ್ರಾತೃತ್ವದ ಸಮಯ, ಒಟ್ಟಿಗೆ ಸಾಗುವ ಸಮಯ. ಇದು ಎಲ್ಲರ ಬೆಳವಣಿಗೆ ಮತ್ತು ಯೋಗಕ್ಷೇಮದ ಸಮಯ. ನಾವು ಜಾಗತಿಕ ವಿಶ್ವಾಸದ ಬಿಕ್ಕಟ್ಟನ್ನು ನಿವಾರಿಸಬೇಕು ಮತ್ತು ಮಾನವ ಕೇಂದ್ರಿತ ಚಿಂತನೆಯೊಂದಿಗೆ ಮುನ್ನಡೆಯಬೇಕು. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಮನೋಭಾವದಿಂದ ನಾವು ಜಗತ್ತನ್ನು ನೋಡಬೇಕು ಎಂದು ಅವರು ಹೇಳಿದರು. ಜಾಗತಿಕ ನಿರ್ಧಾರ ಕೈಗೊಳ್ಳುವಲ್ಲಿ ವ್ಯಾಪಕ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಆಫ್ರಿಕನ್ ಒಕ್ಕೂಟವನ್ನು ಜಿ -20 ಕ್ಕೆ ಸೇರಿಸುವ ಪ್ರಸ್ತಾಪಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ನೀಡಿದರು ಎಂದು ಹೇಳಿದರು. ಪಿ20 ಫೋರಂನಲ್ಲಿ ಆಫ್ರಿಕಾದಾದ್ಯಂತದ ದೇಶಗಳು ಭಾಗವಹಿಸಿರುವುದಕ್ಕೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.

ಲೋಕಸಭಾಧ್ಯಕ್ಷರು ಪ್ರತಿನಿಧಿಗಳಿಗೆ ಹೊಸ ಸಂಸತ್ ಭವನದ ಭೇಟಿಯನ್ನು ಆಯೋಜಿಸಿರುವ ಕುರಿತು ಮಾತನಾಡಿದ ಪ್ರಧಾನಿ, ಭಾರತವು ದಶಕಗಳಿಂದ ಸಾವಿರಾರು ಅಮಾಯಕರನ್ನು ಕೊಂದ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಪ್ರಸ್ತಾಪಿಸಲು ಅವಕಾಶವನ್ನು ಬಳಸಿಕೊಂಡರು. ಸುಮಾರು 20 ವರ್ಷಗಳ ಹಿಂದೆ ಭಾರತದ ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿಯನ್ನು ಶ್ರೀ ಮೋದಿ ನೆನಪಿಸಿಕೊಂಡರು ಮತ್ತು ಸಂಸದರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಅವರನ್ನು ಮುಗಿಸಲು ಭಯೋತ್ಪಾದಕರು ಸಿದ್ಧರಾಗಿದ್ದರು. ಇಂತಹ ಅನೇಕ ಭಯೋತ್ಪಾದಕ ಘಟನೆಗಳನ್ನು ನಿಭಾಯಿಸಿದ ನಂತರ ಭಾರತವು ಇಂದು ಇಲ್ಲಿಗೆ ತಲುಪಿದೆ ಎಂದು ಅವರು ಒತ್ತಿಹೇಳಿದರು, ಏಕೆಂದರೆ ಭಯೋತ್ಪಾದನೆಯ ದೊಡ್ಡ ಸವಾಲನ್ನು ಜಗತ್ತು ಅರಿತುಕೊಳ್ಳುತ್ತಿದೆ. ಭಯೋತ್ಪಾದನೆ ಎಲ್ಲಿ ಸಂಭವಿಸಲಿ, ಯಾವುದೇ ಕಾರಣಕ್ಕಾಗಿ ನಡೆಯಲಿ, ಯಾವುದೇ ರೂಪದಲ್ಲಿರಲಿ ಅದು ಮಾನವೀಯತೆಗೆ ವಿರುದ್ಧವಾದುದು. ಅಂತಹ ಪರಿಸ್ಥಿತಿಯನ್ನು ಎದುರಿಸುವಾಗ ರಾಜಿ ಮಾಡಿಕೊಳ್ಳದಿರುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಭಯೋತ್ಪಾದನೆಯ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಯಾವುದೇ ಒಮ್ಮತವನ್ನು ಸಾಧಿಸದ ಜಾಗತಿಕ ಅಂಶದ ಬಗ್ಗೆಯೂ ಪ್ರಧಾನಿ ಗಮನ ಸೆಳೆದರು. ಭಯೋತ್ಪಾದನೆಯನ್ನು ಎದುರಿಸುವ ಅಂತಾರಾಷ್ಟ್ರೀಯ ಸಮಾವೇಶವು ಇಂದಿಗೂ ವಿಶ್ವಸಂಸ್ಥೆಯಲ್ಲಿ ಒಮ್ಮತಕ್ಕಾಗಿ ಹೇಗೆ ಕಾಯುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಮಾನವೀಯತೆಯ ಶತ್ರುಗಳು ಪ್ರಪಂಚದ ಈ ಮನೋಭಾವದ ಲಾಭವನ್ನು ಪಡೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು, ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳನ್ನು ರೂಪಿಸುವಂತೆ ವಿಶ್ವದಾದ್ಯಂತದ ಸಂಸತ್ತುಗಳು ಮತ್ತು ಪ್ರತಿನಿಧಿಗಳನ್ನು ಅವರು ಒತ್ತಾಯಿಸಿದರು.

ಪ್ರಪಂಚದ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಸಹಭಾಗಿತ್ವಕ್ಕಿಂತ ಉತ್ತಮವಾದ ಮಾಧ್ಯಮ ಇನ್ನೊಂದಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಸರ್ಕಾರಗಳು ಬಹುಮತದಿಂದ ರಚನೆಯಾಗುತ್ತವೆ, ಆದರೆ ದೇಶವು ಒಮ್ಮತದಿಂದ ನಡೆಯುತ್ತದೆ ಎಂದು ನಾನು ಯಾವಾಗಲೂ ನಂಬುತ್ತೇನೆ. ನಮ್ಮ ಸಂಸತ್ತುಗಳು ಮತ್ತು ಈ ಪಿ20 ಫೋರಮ್ ಕೂಡ ಈ ಭಾವನೆಯನ್ನು ಬಲಪಡಿಸಬಹುದು ಎಂದು ಪ್ರಧಾನಿ ಹೇಳಿದರು ಮತ್ತು ಚರ್ಚೆ ಮತ್ತು ಪರ್ಯಾಲೋಚನೆಗಳ ಮೂಲಕ ಈ ಜಗತ್ತನ್ನು ಸುಧಾರಿಸುವ ಪ್ರಯತ್ನಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಮತ್ತು ಅಂತರ ಸಂಸತ್ತಿನ ಒಕ್ಕೂಟದ ಅಧ್ಯಕ್ಷರಾದ ಶ್ರೀ ಡುವಾರ್ಟೆ ಪಚೆಕೊ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಭಾರತದ ಜಿ20 ಅಧ್ಯಕ್ಷತೆಯ ಧ್ಯೇಯಕ್ಕೆ ಅನುಗುಣವಾಗಿ, 9 ನೇ ಪಿ20 ಶೃಂಗಸಭೆಯ ವಿಷಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತುಗಳು' ಎಂಬುದಾಗಿದೆ. ಜಿ20 ಸದಸ್ಯರು ಮತ್ತು ಆಹ್ವಾನಿತ ದೇಶಗಳ ಸಂಸತ್ತಿನ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 9-10 ಸೆಪ್ಟೆಂಬರ್ 2023 ರಂದು ನವದೆಹಲಿ ಜಿ20 ನಾಯಕರ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟವು ಜಿ20 ಸದಸ್ಯನಾದ ನಂತರ ಪ್ಯಾನ್-ಆಫ್ರಿಕನ್ ಸಂಸತ್ತು ಮೊದಲ ಬಾರಿಗೆ ಪಿ20 ಶೃಂಗಸಭೆಯಲ್ಲಿ ಭಾಗವಹಿಸಿತು.

ಈ ಪಿ20 ಶೃಂಗಸಭೆಯಲ್ಲಿ ವಿಷಯಾಧಾರಿತ ಅಧಿವೇಶನಗಳು ಈ ಕೆಳಗಿನ ನಾಲ್ಕು ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ - ಸಾರ್ವಜನಿಕ ಡಿಜಿಟಲ್ ವೇದಿಕೆಗಳ ಮೂಲಕ ಜನರ ಜೀವನದಲ್ಲಿ ಪರಿವರ್ತನೆ; ಮಹಿಳಾ ನೇತೃತ್ವದ ಅಭಿವೃದ್ಧಿ; ಎಸ್‌ ಡಿ ಜಿ ಗಳನ್ನು ವೇಗಗೊಳಿಸುವುದು; ಮತ್ತು ಸುಸ್ಥಿರ ಇಂಧನ ಪರಿವರ್ತನೆ.

ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಹಸಿರು ಮತ್ತು ಸುಸ್ಥಿರ ಭವಿಷ್ಯದ ಉಪಕ್ರಮಗಳ ಬಗ್ಗೆ ಚರ್ಚಿಸಲು 2023 ರ ಅಕ್ಟೋಬರ್ 12 ರಂದು ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಕುರಿತು ಶೃಂಗಸಭೆ ಪೂರ್ವ ಸಂಸದೀಯ ವೇದಿಕೆಯ ಸಭೆಯನ್ನು ನಡೆಸಲಾಯಿತು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage