"ಸೂರತ್ ನಗರದ ಭವ್ಯತೆಗೆ ಹೊಸ ವಜ್ರ ಸೇರ್ಪಡೆಗೊಂಡಿದೆ"
"ಸೂರತ್‌ ವಜ್ರದ ಮಾರುಕಟ್ಟೆಯು(ಸೂರತ್ ಡೈಮಂಡ್ ಬೋರ್ಸ್) ಭಾರತೀಯ ವಿನ್ಯಾಸಗಳು, ವಿನ್ಯಾಸಕರು, ವಸ್ತುಗಳು ಮತ್ತು ಪರಿಕಲ್ಪನೆಗಳ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ನವ ಭಾರತದ ಸಾಮರ್ಥ್ಯ ಮತ್ತು ಸಂಕಲ್ಪಗಳ ಸಂಕೇತವಾಗಿದೆ"
"ಇಂದು, ಸೂರತ್ ಲಕ್ಷಾಂತರ ಯುವಕರ ಕನಸಿನ ನಗರವಾಗಿದೆ"
"ಸೂರತ್ ಜನರಿಗೆ ಮೋದಿಯವರ ಗ್ಯಾರಂಟಿಯ ಬಗ್ಗೆ ಬಹಳ ಹಿಂದಿನಿಂದಲೂ ತಿಳಿದಿದೆ"
"ಸೂರತ್ ನಿರ್ಧರಿಸಿದರೆ, ರತ್ನ-ಆಭರಣ ರಫ್ತಿನಲ್ಲಿ ನಮ್ಮ ಪಾಲು ಎರಡಂಕಿಯನ್ನು ಮುಟ್ಟಬಹುದು"
" ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರಗಳೊಂದಿಗೆ ಸೂರತ್ ನಿರಂತರವಾಗಿ ಸಂಪರ್ಕ ಹೊಂದಿದೆ. ವಿಶ್ವದ ಕೆಲವೇ ನಗರಗಳು ಇಂತಹ ಅಂತರರಾಷ್ಟ್ರೀಯ ಸಂಪರ್ಕವನ್ನು ಹೊಂದಿವೆ"
"ಸೂರತ್ ಮುಂದುವರಿದರೆ, ಗುಜರಾತ್ ಮುಂದೆ ಸಾಗುತ್ತದೆ. ಗುಜರಾತ್ ಮುನ್ನಡೆದರೆ ದೇಶ ಮುಂದೆ ಸಾಗುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಸೂರತ್‌ನಲ್ಲಿ ʻಸೂರತ್ ವಜ್ರ ಮಾರುಕಟ್ಟೆʼಯನ್ನು (ಸೂರತ್‌ ಡೈಮಂಡ್‌ ಬೋರ್ಸ್‌) ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಮಂತ್ರಿಯವರು ʻಪಂಚತತ್ವʼ ಉದ್ಯಾನಕ್ಕೂ ಭೇಟಿ ನೀಡಿ, ʻಸೂರತ್ ಡೈಮಂಡ್ ಬೋರ್ಸ್ʼ ಮತ್ತು ʻಸ್ಪೈನ್-4ʼರ ಹಸಿರು ಕಟ್ಟಡವನ್ನು ವೀಕ್ಷಿಸಿದರು. ಸಂದರ್ಶಕರ ಕಿರುಪುಸ್ತಕಕ್ಕೂ ಅವರು ಸಹಿ ಹಾಕಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಸೂರತ್ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ್ದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸೂರತ್ ನಗರದ ಭವ್ಯತೆಗೆ ಹೊಸ ವಜ್ರ ಸೇರ್ಪಡೆಗೊಂಡಿದೆ ಎಂದರು. "ಇದು ಸಾಮಾನ್ಯ ವಜ್ರವಲ್ಲ, ವಿಶ್ವದ ಅತ್ಯುತ್ತಮ ವಜ್ರ," ಎಂದು ಶ್ರೀ ಮೋದಿ ಬಣ್ಣಿಸಿದರು. ʻಸೂರತ್ ವಜ್ರದ ಮಾರುಕಟ್ಟೆʼಯ ಪ್ರಕಾಶವು ವಿಶ್ವದ ಅತಿದೊಡ್ಡ ಕಟ್ಟಡಗಳನ್ನು ಮರೆಮಾಡುತ್ತಿದೆ ಎಂದು ಅವರು ವರ್ಣಿಸಿದರು. ಶ್ರೀ ವಲ್ಲಭಭಾಯಿ ಲಖಾನಿ ಮತ್ತು ಶ್ರೀ ಲಾಲ್ ಜಿಭಾಯ್ ಪಟೇಲ್ ಅವರ ವಿನಮ್ರತೆ ಹಾಗೂ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮನೋಭಾವವು ಇಂತಹ ಬೃಹತ್ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದ ಮೋದಿಯವರು, ಈ ಸಂದರ್ಭದಲ್ಲಿ ʻಸೂರತ್ ಡೈಮಂಡ್ ಬೋರ್ಸ್‌ʼನ ಇಡೀ ತಂಡವನ್ನು ಅಭಿನಂದಿಸಿದರು. "ವಿಶ್ವದ ವಜ್ರ ಮಾರುಕಟ್ಟೆಗಳ ಬಗ್ಗೆ ಚರ್ಚೆಯ ಸಮಯದಲ್ಲಿ ʻಸೂರತ್ ಡೈಮಂಡ್‌ ಬೋರ್ಸ್‌ʼ ಈಗ ಭಾರತದ ಹೆಮ್ಮೆಯೊಂದಿಗೆ ಮುನ್ನೆಲೆಗೆ ಬರಲಿದೆ," ಎಂದು ಅವರು ಒತ್ತಿ ಹೇಳಿದರು. "ಸೂರತ್ ವಜ್ರದ ಮಾರುಕಟ್ಟೆಯು ಭಾರತೀಯ ವಿನ್ಯಾಸಗಳು, ವಿನ್ಯಾಸಕರು, ವಸ್ತುಗಳು ಹಾಗೂ ಪರಿಕಲ್ಪನೆಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ನವ ಭಾರತದ ಸಾಮರ್ಥ್ಯ ಮತ್ತು ಸಂಕಲ್ಪಗಳ ಸಂಕೇತವಾಗಿದೆ ಎಂದರು. ಸೂರತ್ ವಜ್ರದ ಮಾರುಕಟ್ಟೆ ಉದ್ಘಾಟನೆಗಾಗಿ ಶ್ರೀ ಮೋದಿ ಅವರು ಇಡೀ ವಜ್ರ ಉದ್ಯಮವನ್ನು, ಸೂರತ್, ಗುಜರಾತ್ ಮತ್ತು ಭಾರತದ ಜನರನ್ನು ಅಭಿನಂದಿಸಿದರು. ಇಂದು ಸೂರತ್ ವಜ್ರದ ಮಾರುಕಟ್ಟೆಯಲ್ಲಿ ನಲ್ಲಿ ತಾವು ಕೈಗೊಂಡ ನಡಿಗೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ವಾಸ್ತುಶಿಲ್ಪದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು. ವಿಶ್ವದಾದ್ಯಂತದ ಪರಿಸರ ಪ್ರತಿಪಾದಕರಿಗೆ ಮಾದರಿಯಾಗಬಲ್ಲ ಹಸಿರು ಕಟ್ಟಡ ಇದಾಗಿದೆ.  ಸಮಗ್ರ ವಾಸ್ತುಶಿಲ್ಪ ಮತ್ತು ನಿರ್ಮಾಣ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕೆಯ ಸಾಧನವಾಗಿ ಈ ಕಟ್ಟಡವನ್ನು ಬಳಸಬಹುದಾಗಿದೆ. ಇಲ್ಲಿ ನಿರ್ಮಿಸಲಾಗಿರುವ ʼಪಂಚತತ್ವ ಉದ್ಯಾನʼವನ್ನು ಉಲ್ಲೇಖಿಸಿದ ಪ್ರಧಾನಿ, ಇದನ್ನು ಭೂದೃಶ್ಯದ ಪಾಠಕ್ಕೆ ಉದಾಹರಣೆಯಾಗಿ ಬಳಸಬಹುದಾದ ಎಂದರು.

 

ಸೂರತ್‌ಗೆ ನೀಡಲಾದ ಇತರ ಎರಡು ಉಡುಗೊರೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸೂರತ್‌ನಲ್ಲಿ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಉದ್ಘಾಟನೆ ಮತ್ತು ಸೂರತ್ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಿರುವುದನ್ನು ಉಲ್ಲೇಖಿಸಿದರು. ದೀರ್ಘಕಾಲದಿಂದ ಬಾಕಿ ಇರುವ ಈ ಬೇಡಿಕೆಯ ಈಡೇರಿಕೆಗಾಗಿ ಸಭಿಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಸೂರತ್-ದುಬೈ ವಿಮಾನ ಹಾರಾಟ ಸೇವೆಯ ಪ್ರಾರಂಭ ಮತ್ತು ಶೀಘ್ರದಲ್ಲೇ ಹಾಂಗ್‌ಕಾಂಗ್‌ಗೆ ಪ್ರಾರಂಭವಾಗಲಿರುವ ವಿಮಾನದ ಬಗ್ಗೆ ಅವರು ಮಾಹಿತಿ ನೀಡಿದರು. "ಸೂರತ್‌ನೊಂದಿಗೆ, ಗುಜರಾತ್ ಈಗ ಮೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ," ಎಂದು ಅವರು ಮಾಹಿತಿ ನೀಡಿದರು.

ಸೂರತ್ ನಗರದೊಂದಿಗಿನ ತಮ್ಮ ವೈಯಕ್ತಿಕ ಒಡನಾಟ ಮತ್ತು ಕಲಿಕೆಯ ಅನುಭವಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ʻಸಬ್ ಕಾ ಸಾಥ್, ಸಬ್ ಕಾ ಪ್ರಯಾಸ್ʼನ ಆಶಯವನ್ನು ಉಲ್ಲೇಖಿಸಿದರು. "ಸೂರತ್‌ನ ಮಣ್ಣು ದೇಶದ ಉಳಿದ ಭಾಗಗಳಿಗಿಂತ ಭಿನ್ನವಾಗಿದೆ," ಎಂದು ಹೇಳಿದ ಶ್ರೀ ಮೋದಿ, ಈ ಪ್ರದೇಶದಲ್ಲಿ ಉತ್ಪಾದಿಸುವ ಹತ್ತಿಗೆ ಸಾಟಿಯಿಲ್ಲ ಎಂದರು. ಸೂರತ್‌ನ ಏರಿಳಿತಗಳ ಪಯಣವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಬ್ರಿಟಿಷರು ಮೊದಲು ಭಾರತಕ್ಕೆ ಬಂದಾಗ ಸೂರತ್‌ನ ಭವ್ಯತೆ ಅವರನ್ನು ಆಕರ್ಷಿಸಿತು ಎಂದರು. ಸೂರತ್ ವಿಶ್ವದ ಅತಿದೊಡ್ಡ ಹಡಗುಗಳ ಉತ್ಪಾದನಾ ಕೇಂದ್ರವಾಗಿತ್ತು ಮತ್ತು ಸೂರತ್ ಬಂದರು 84 ದೇಶಗಳ ಹಡಗುಗಳ ಧ್ವಜಗಳನ್ನು ಹಾರಿಸುತ್ತಿದ್ದ ಸಮಯವನ್ನು ಅವರು ನೆನಪಿಸಿಕೊಂಡರು. "ಈಗ, ಆ ಸಂಖ್ಯೆ 125 ಕ್ಕೆ ಏರುತ್ತದೆ," ಎಂದು ಅವರು ಮಾಹಿತಿ ನೀಡಿದರು. ನಗರ ಎದುರಿಸಿದ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಗಂಭೀರ ಕಾಯಿಲೆಗಳು ಮತ್ತು ಪ್ರವಾಹಗಳನ್ನು ಉಲ್ಲೇಖಿಸಿದರು. ಜೊತೆಗೆ ನಗರದ ಉತ್ಸಾಹವನ್ನು ಹೇಗೆ ಪ್ರಶ್ನಿಸಲಾಗಿತ್ತು ಎಂಬುದನ್ನು ಸ್ಮರಿಸಿದರು. ಇಂದಿನ ಸಂದರ್ಭದ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು ಭಾರಿ ವಿಶ್ವಾಸ ವ್ಯಕ್ತಪಡಿಸಿದರು. ಸೂರತ್ ವಿಶ್ವದ ಅಗ್ರ 10 ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಎಂದರು. ಸೂರತ್‌ನ ಅತ್ಯುತ್ತಮ ಬೀದಿ ಬದಿ ಖಾದ್ಯ, ಸ್ವಚ್ಛತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಅವರು ಎತ್ತಿ ತೋರಿಸಿದರು. ಈ ಹಿಂದೆ ʻಸನ್ ಸಿಟಿʼ ಎಂದು ಕರೆಯಲ್ಪಡುತ್ತಿದ್ದ ಸೂರತ್, ತನ್ನ ಜನರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ʻವಜ್ರದ ನಗರʼ, ʻರೇಷ್ಮೆ ನಗರʼ ಮತ್ತು ʻಸೇತುವೆಗಳ ನಗರʼವಾಗಿ ಪಾಂತರಗೊಂಡಿದೆ ಎಂದು ಅವರು ಒತ್ತಿ ಹೇಳಿದರು. "ಇಂದು, ಸೂರತ್ ಲಕ್ಷಾಂತರ ಯುವಕರ ಕನಸಿನ ನಗರವಾಗಿದೆ," ಎಂದು ಅವರು ಉದ್ಗರಿಸಿದರು. ಐಟಿ ಕ್ಷೇತ್ರದಲ್ಲಿ ಸೂರತ್ ದಾಪುಗಾಲು ಹಾಕುತ್ತಿರುವುದನ್ನು ಉಲ್ಲೇಖಿಸಿದ ಅವರು, ಸೂರತ್‌ನಂತಹ ಆಧುನಿಕ ನಗರವು ʻಡೈಮಂಡ್ ಬೋರ್ಸ್ʼ ರೂಪದಲ್ಲಿ ಇಂತಹ ಭವ್ಯವಾದ ಕಟ್ಟಡವನ್ನು ಪಡೆಯುವುದು ಐತಿಹಾಸಿಕ ಕ್ಷಣ ಎಂದು ಹೇಳಿದರು.

 

"ಸೂರತ್‌ನ ಜನರಿಗೆ ಮೋದಿಯವರ ಗ್ಯಾರಂಟಿಯ ಬಗ್ಗೆ ಬಹಳ ಹಿಂದಿನಿಂದಲೂ ತಿಳಿದಿದೆ," ಎಂದು ಪ್ರಧಾನಿ ಹೇಳಿದರು. ಸೂರತ್ ಜನರಿಗೆ ಮೋದಿ ನೀಡಿದ ಭರವಸೆಗೆ ವಜ್ರದ ಮಾರುಕಟ್ಟೆ ಒಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ವಜ್ರ ವ್ಯಾಪಾರಕ್ಕೆ ಸಂಬಂಧಿಸಿದ ಜನರೊಂದಿಗಿನ ಸಂವಾದ ಮತ್ತು ದೆಹಲಿಯಲ್ಲಿ ನಡೆದ 2014ರ ʻವಿಶ್ವ ವಜ್ರ ಸಮ್ಮೇಳನʼದಲ್ಲಿ ವಜ್ರ ಉದ್ಯಮಕ್ಕಾಗಿ ವಿಶೇಷ ಅಧಿಸೂಚಿತ ವಲಯಗಳನ್ನು ಘೋಷಿಸಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ಪ್ರಯಾಣವು ʻಸೂರತ್ ಡೈಮಂಡ್ ಬೋರ್ಸ್ʼ ರೂಪದಲ್ಲಿ ದೊಡ್ಡ ವಜ್ರ ಮಾರುಕಟ್ಟೆ ನಿರ್ಮಾಣಕ್ಕೆ ಕಾರಣವಾಗಿದೆ, ಇದು ವಜ್ರ ವ್ಯಾಪಾರದ ಅನೇಕ ಅಂಶಗಳನ್ನು ಒಂದೇ ಸೂರಿನಡಿ ಸಾಧ್ಯವಾಗಿಸಿದೆ ಎಂದರು. "ಕುಶಲಕರ್ಮಿಗಳು, ಕೆಲಸಗಾರರು ಮತ್ತು ಉದ್ಯಮಿಗಳಿಗೆ, ಎಲ್ಲರಿಗೂ, ʻಸೂರತ್ ಡೈಮಂಡ್ ಬೋರ್ಸ್ʼ ಒಂದೇ ಸೂರಿನಡಿಯ ಅಂಗಡಿಯಾಗಿ ಮಾರ್ಪಟ್ಟಿದೆ," ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಬ್ಯಾಂಕಿಂಗ್, ʻಸೇಫ್ ವಾಲ್ಟ್‌ಗಳು ಮತ್ತು ಜ್ಯುವೆಲ್ಲರಿ ಮಾಲ್‌ನಂತಹ ಸೌಲಭ್ಯಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ 1.5 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.

ಸೂರತ್‌ನ ಸಾಮರ್ಥ್ಯದ ಬಗ್ಗೆ ಮತ್ತಷ್ಟು ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವ ಆರ್ಥಿಕತೆಯಲ್ಲಿ ಭಾರತ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ದಾಪುಗಾಲು ಹಾಕಿರುವುದನ್ನು ಉಲ್ಲೇಖಿಸಿದರು. "ಈಗ ಮೋದಿ ಅವರು ತಮ್ಮ ಮೂರನೇ ಇನ್ನಿಂಗ್ಸ್‌ನಲ್ಲಿ, ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಗ್ಯಾರಂಟಿ ನೀಡಿದ್ದಾರೆ," ಎಂದು ಅವರು ಹೇಳಿದರು. ಸರ್ಕಾರವು ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ಹೊಂದಿದೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

 

ರಫ್ತನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ದೇಶದ ವಜ್ರ ಉದ್ಯಮವು ದೊಡ್ಡ ಪಾತ್ರ ವಹಿಸಲಿದೆ ಎಂದರು. ದೇಶದ ರಫ್ತು ಹೆಚ್ಚಿಸುವಲ್ಲಿ ಸೂರತ್‌ನ ಪಾತ್ರವನ್ನು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸುವಂತೆ ಅವರು ಉದ್ಯಮದ ದಿಗ್ಗಜರಿಗೆ ಕರೆ ನೀಡಿದರು. ವಜ್ರ ಆಭರಣ, ಕತ್ತರಿಸಿದ ವಜ್ರಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳಲ್ಲಿ ರಫ್ತಿನಲ್ಲಿ ಭಾರತದ ಸ್ಥಾನದ ಬಗ್ಗೆ ಹೇಳಿದ ಅವರು, ಒಟ್ಟಾರೆ ಜಾಗತಿಕ ರತ್ನಗಳು-ಆಭರಣ ರಫ್ತುಗಳಲ್ಲಿ ಭಾರತದ ಪಾಲು ಕೇವಲ 3.5 ಪ್ರತಿಶತದಷ್ಟಿದೆ ಎಂದು ಗಮನಸೆಳೆದರು. "ಸೂರತ್ ನಿರ್ಧರಿಸಿದರೆ, ರತ್ನ-ಆಭರಣ ರಫ್ತಿನಲ್ಲಿ ನಮ್ಮ ಪಾಲು ಎರಡಂಕಿಯನ್ನು ಮುಟ್ಟಬಹುದು," ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು. ಈ ವಲಯಕ್ಕೆ ಸರ್ಕಾರದ ಬೆಂಬಲವನ್ನು ಪುನರುಚ್ಚರಿಸಿದರು. ರಫ್ತು ಉತ್ತೇಜನ, ಪೇಟೆಂಟ್ ಪಡೆದ ವಿನ್ಯಾಸವನ್ನು ಉತ್ತೇಜಿಸುವುದು, ರಫ್ತು ಉತ್ಪನ್ನಗಳ ವೈವಿಧ್ಯೀಕರಣ, ಉತ್ತಮ ತಂತ್ರಜ್ಞಾನಕ್ಕಾಗಿ ಸಹಯೋಗ, ಪ್ರಯೋಗಾಲಯದಲ್ಲಿ ಬೆಳೆದ ಅಥವಾ ಹಸಿರು ವಜ್ರಗಳ ಉತ್ತೇಜನ ಹಾಗೂ ಸರ್ಕಾರದ ಆಯ-ವ್ಯಯ್ದಲ್ಲಿ ಹಸಿರು ವಜ್ರಗಳಿಗೆ ವಿಶೇಷ ನೀತಿಗಳಂತಹ ಕ್ರಮಗಳನ್ನು ಅವರು ಉಲ್ಲೇಖಿಸಿದರು. ಭಾರತದ ಬಗ್ಗೆ ಸಕಾರಾತ್ಮಕ ಜಾಗತಿಕ ದೃಷ್ಟಿಕೋನ ಮತ್ತು ಬೆಳೆಯುತ್ತಿರುವ 'ಮೇಕ್ ಇನ್ ಇಂಡಿಯಾ' ಬ್ರಾಂಡ್‌ನ ಸ್ಥಾನಮಾನದಿಂದ ಈ ವಲಯವು ಪ್ರಯೋಜನ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜನರ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ವಿಶೇಷ ಒತ್ತು ನೀಡುವ ಮೂಲಕ ಸರ್ಕಾರವು ಸೂರತ್‌ ಶಕ್ತಿಯನ್ನು ಹೆಚ್ಚಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಸೂರತ್‌ನ ಸಂಪರ್ಕದ ಬಗ್ಗೆ ಒತ್ತಿ ಹೇಳಿದ ಶ್ರೀ ಮೋದಿ ಅವರು, ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ಸೇವೆ ಮತ್ತು ಹಜೀರಾ ಬಂದರು, ಆಳವಾದ ನೀರಿನ ʻಎಲ್‌ಎನ್‌ಜಿʼ ಟರ್ಮಿನಲ್ ಹಾಗೂ ʻಮಲ್ಟಿ ಕಾರ್ಗೋʼ ಬಂದರು ಸೇರಿದಂತೆ ಸೂರತ್‌ನ ಹಲವು ಸೌಲಭ್ಯಗಳನ್ನು ಉಲ್ಲೇಖಿಸಿದರು. "ಸೂರತ್ ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರಗಳೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದೆ. ವಿಶ್ವದ ಕೆಲವೇ ನಗರಗಳು ಇಂತಹ ಅಂತರರಾಷ್ಟ್ರೀಯ ಸಂಪರ್ಕವನ್ನು ಹೊಂದಿವೆ," ಎಂದು ಅವರು ಬಣ್ಣಿಸಿದರು. ಬುಲೆಟ್ ರೈಲು ಯೋಜನೆಯೊಂದಿಗೆ ಸೂರತ್‌ನ ಸಂಪರ್ಕ ಹಾಗೂ ಉತ್ತರ ಮತ್ತು ಪೂರ್ವ ಭಾರತದೊಂದಿಗೆ ಸೂರತ್‌ನ ರೈಲು ಸಂಪರ್ಕವನ್ನು ಬಲಪಡಿಸುವ ʻವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ʼನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಅವರು ಉಲ್ಲೇಖಿಸಿದರು. ʻದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇʼ ಹೆದ್ದಾರಿಯು ಸೂರತ್‌ನ ವ್ಯವಹಾರಕ್ಕೆ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದರು. ನಗರದ ಆಧುನಿಕ ಸಂಪರ್ಕದ ಗರಿಷ್ಠ ಲಾಭವನ್ನು ಪಡೆದುಕೊಳ್ಳುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದ ಪ್ರಧಾನಿ, "ಸೂರತ್ ಮುಂದುವರಿದರೆ, ಗುಜರಾತ್ ಮುಂದೆ ಸಾಗುತ್ತದೆ. ಗುಜರಾತ್ ಮುನ್ನಡೆದರೆ ದೇಶ ಮುಂದೆ ಸಾಗುತ್ತದೆ,ʼʼ ಎಂದರು. ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಮುಂದಿನ ತಿಂಗಳು ನಡೆಯಲಿರುವ ʻರೋಮಾಂಚಕ ಗುಜರಾತ್ ಶೃಂಗಸಭೆʼಗೆ ಶುಭ ಕೋರಿದರು

 

ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಮತ್ತು ಶ್ರೀ ಪುರುಷೋತ್ತಮ್ ರೂಪಾಲಾ, ಕೇಂದ್ರದ ಸಹಾಯಕ ಸಚಿವರಾದ ಶ್ರೀಮತಿ ದರ್ಶನ ಜರ್ದೋಶ್, ʻಸೂರತ್ ಡೈಮಂಡ್ ಬೋರ್ಸ್ʼ ಅಧ್ಯಕ್ಷ ಶ್ರೀ ಸಿ.ಆರ್.ಪಾಟೀಲ್, ಧರ್ಮಾನಂದನ್ ಡೈಮಂಡ್ ಲಿಮಿಟೆಡ್‌ನ ಶ್ರೀ ವಲ್ಲಭಭಾಯಿ ಲಖಾನಿ ಮತ್ತು ಶ್ರೀ ಲಾಲ್ಜಿಭಾಯ್ ಪಟೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ʻಸೂರತ್ ಡೈಮಂಡ್ ಬೋರ್ಸ್ʼ ಅಂತರರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯವಹಾರಕ್ಕೆ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಲಿದೆ. ಇದು ಕಚ್ಚಾ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ಆಭರಣಗಳ ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಲಿದೆ. ಆಮದು ಮತ್ತು ರಫ್ತುಗಾಗಿ ಅತ್ಯಾಧುನಿಕ 'ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್' ಅನ್ನು ಇದು ಒಳಗೊಂಡಿದೆ. ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ʻಆಭರಣ ಮಾಲ್ʼ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್‌ ಸೌಲಭ್ಯಗಳನ್ನೂ ಇದು ಹೊಂದಿದೆ.

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi