“ನಾವು ಅಮೃತ ಕಾಲವನ್ನು ‘ಕರ್ತವ್ಯ ಕಾಲ’ ಎಂದು ಹೆಸರಿಸಿದ್ದೇವೆ. ಸಂಕಲ್ಪಗಳು ನಮ್ಮ ಆಧ್ಯಾತ್ಮಿಕ ಮೌಲ್ಯಗಳ ಮಾರ್ಗದರ್ಶನ ಮತ್ತು ಭವಿಷ್ಯದ ನಿರ್ಣಯಗಳನ್ನು ಒಳಗೊಂಡಿವೆ.
"ಆಧ್ಯಾತ್ಮಿಕ ಮಹತ್ವದ ಸ್ಥಳಗಳ ಪುನರುಜ್ಜೀವನ ಸಂದರ್ಭದಲ್ಲಿ ಭಾರತವು ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲೂ ಮುಂದಿದೆ"
"ದೇಶದಲ್ಲಿ ಕಂಡುಬರುವ ಪರಿವರ್ತನೆಯು ಪ್ರತಿ ಸಾಮಾಜಿಕ ವರ್ಗದ ಕೊಡುಗೆಗಳ ಫಲವಾಗಿದೆ"
ಎಲ್ಲಾ ಸಾಧು ಸಂತರು, ಋಷಿ ಮುನಿಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಚೈತನ್ಯ, ಸ್ಫೂರ್ತಿಯನ್ನು ಪೋಷಿಸಿದ್ದಾರೆ”
"ಭಾರತದಂತಹ ದೇಶದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಯಾವಾಗಲೂ ಸಾಮಾಜಿಕ ಕಲ್ಯಾಣದ ಕೇಂದ್ರಗಳಾಗಿವೆ"
"ಸತ್ಯಸಾಯಿ ಜಿಲ್ಲೆಯನ್ನು ಸಂಪೂರ್ಣ ಡಿಜಿಟಲ್ ಮಾಡಲು ನಾವು ಸಂಕಲ್ಪ ತೊಡಬೇಕು"
"ಪರಿಸರ ಮತ್ತು ಸುಸ್ಥಿರ ಜೀವನಶೈಲಿಯಂತಹ ಕ್ಷೇತ್ರಗಳಲ್ಲಿ ಭಾರತದ ಉದಯೋನ್ಮುಖ ನಾಯಕತ್ವಕ್ಕಾಗಿ ಸತ್ಯಸಾಯಿ ಟ್ರಸ್ಟ್‌ನಂತಹ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಅಂತಹ ಎಲ್ಲಾ ಪ್ರಯತ್ನಗಳಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ಸಾಯಿ ಹಿರಾ ಜಾಗತಿಕ ಸಮ್ಮೇಳನ ಸಭಾಂಗಣ (ಗ್ಲೋಬಲ್ ಕನ್ವೆನ್ಷನ್ ಸೆಂಟರ್)  ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವು ವಿಶ್ವದಾದ್ಯಂತದಿಂದ ಆಗಮಿಸಿರುವ ಪ್ರಮುಖ ಗಣ್ಯರು ಮತ್ತು ಭಕ್ತರ ಉಪಸ್ಥಿತಿಗೆ ಸಾಕ್ಷಿಯಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಹಲವು ಕಾರ್ಯಗಳ ಒತ್ತಡದಿಂದಾಗಿ ಕಾರ್ಯಕ್ರಮಕ್ಕೆ ಭೌತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಇಲ್ಲಿ ನೆರೆದಿರುವ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ. "ಶ್ರೀ ಸತ್ಯಸಾಯಿ ಅವರ ಆಶೀರ್ವಾದ ಮತ್ತು ಸ್ಫೂರ್ತಿ ಇಂದು ನಮ್ಮೊಂದಿಗಿದೆ". ದೇಶವು ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಹೆಸರಿನ ಹೊಸ ಪ್ರಧಾನ ಸಮ್ಮೇಳನ ಸಭಾಂಗಣವನ್ನು ಪಡೆಯುತ್ತಿರುವುದು ಸಂತಸದ ವಿಷಯ. ಈ ಹೊಸ ಕೇಂದ್ರವು ಆಧ್ಯಾತ್ಮಿಕತೆ ಮತ್ತು ಆಧುನಿಕತೆ ವೈಭವದ ಅನುಭವ ಸೃಷ್ಟಿಸುತ್ತದೆ. ಕೇಂದ್ರವು ಸಾಂಸ್ಕೃತಿಕ ವೈವಿಧ್ಯತೆ ಮತ್ತು ವೈಚಾರಿಕ ಹಿರಿಮೆ ಗರಿಮೆ ಹೊಂದಿದ್ದು, ವಿದ್ವಾಂಸರು, ಸಾಧು ಸಂತರು ಮತ್ತು ತಜ್ಞರು ಒಟ್ಟುಗೂಡುವ ಆಧ್ಯಾತ್ಮಿಕತೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಚರ್ಚೆಗೆ ಇದು ಕೇಂದ್ರಬಿಂದುವಾಗಲಿದೆ ಎಂದು ಹೇಳಿದರು. 

ಯಾವುದೇ ವಿಚಾರವು ಕ್ರಿಯೆಯ ರೂಪದಲ್ಲಿ ಮುಂದೆ ಸಾಗಿದಾಗ ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಇಂದು ಸಾಯಿ ಹೀರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ, ಶ್ರೀ ಸತ್ಯಸಾಯಿ ಗ್ಲೋಬಲ್ ಕೌನ್ಸಿಲ್‌ ನಾಯಕರ ಸಮಾವೇಶ ಜರುಗುತ್ತಿದೆ. ಈ ಕಾರ್ಯಕ್ರಮದ ವಸ್ತು ವಿಷಯ ಅಥವಾ ನಿರೂಪಣಾ ವಿಷಯವಾದ - ‘ಅಭ್ಯಾಸ ಮತ್ತು ಸ್ಫೂರ್ತಿ’ ಶ್ಲಾಘನೀಯವಾಗಿದೆ. ಅದಿ ಪರಿಣಾಮಕಾರಿ ಮತ್ತು ಪ್ರಸ್ತುತ ಎಂದು ಪ್ರಧಾನಿ ಬಣ್ಣಿಸಿದರು. ಸಮಾಜವು ಅದನ್ನು ಅನುಸರಿಸುವುದರಿಂದ ಸಮಾಜದ ಮುಖಂಡರು ಉತ್ತಮ ನಡವಳಿಕೆಯ ಮಹತ್ವ ಹೊಂದುತ್ತಾರೆ. ಶ್ರೀ ಸತ್ಯಸಾಯಿ ಅವರ ಜೀವನವೇ ಇದಕ್ಕೆ ನೇರ ಉದಾಹರಣೆ ಎಂದರು. “ಇಂದು ಭಾರತವೂ ತನ್ನ ಕರ್ತವ್ಯಗಳಿಗೆ ಆದ್ಯತೆ ನೀಡುತ್ತಾ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯ ಗಳಿಸಿದ ಶತಮಾನದತ್ತ ಸಾಗುತ್ತಿರುವ ನಾವು, ಅಮೃತ ಕಾಲವನ್ನು ‘ಕರ್ತವ್ಯ ಕಾಲ’ ಎಂದು ಹೆಸರಿಸಿದ್ದೇವೆ. ಈ ಸಂಕಲ್ಪಗಳು ನಮ್ಮ ಆಧ್ಯಾತ್ಮಿಕ ಮೌಲ್ಯಗಳ ಮಾರ್ಗದರ್ಶನ ಮತ್ತು ಭವಿಷ್ಯದ ನಿರ್ಣಯಗಳನ್ನು ಒಳಗೊಂಡಿವೆ. ಇದು ವಿಕಾಸ್ (ಅಭಿವೃದ್ಧಿ) ಮತ್ತು ವಿರಾಸತ್ (ಪರಂಪರೆ) ಎರಡನ್ನೂ ಹೊಂದಿದೆ ಎಂದು ಪ್ರಧಾನಿ ತಿಳಿಸಿದರು.

 

ಆಧ್ಯಾತ್ಮಿಕ ಮಹತ್ವದ ಸ್ಥಳಗಳ ಪುನರುಜ್ಜೀವನ ಸಂದರ್ಭದಲ್ಲಿ ಭಾರತವು, ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲೂ ಮುಂಚೂಣಿಯಲ್ಲಿದೆ. ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಬೆಂಬಲಿಸುವ ವಿಶ್ವದ ಅಗ್ರಗಣ್ಯ 5 ಆರ್ಥಿಕತೆಗಳಲ್ಲಿ ಒಂದಾಗಿದೆ. ಡಿಜಿಟಲ್ ಮತ್ತು 5ಜಿಯಂತಹ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಸ್ಪರ್ಧಿಸುತ್ತಿದೆ. ವಿಶ್ವದೆಲ್ಲೆಡೆ ನಡೆಯುತ್ತಿರುವ ನೈಜ-ಸಮಯ(ರಿಯಲ್ ಟೈಮ್)ದ ಆನ್‌ಲೈನ್ ವಹಿವಾಟುಗಳಲ್ಲಿ ಶೇಕಡ 40ರಷ್ಟು ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ಇಡೀ ಪುಟ್ಟಪರ್ತಿ ಜಿಲ್ಲೆಯನ್ನು ಡಿಜಿಟಲ್ ಆರ್ಥಿಕತೆಯತ್ತ ಪರಿವರ್ತಿಸಬೇಕು ಎಂದು ನೆರೆದಿದ್ದ ಭಕ್ತರನ್ನು ಒತ್ತಾಯಿಸಿದರು. ಈ ಸಂಕಲ್ಪ ಸಾಧಿಸಲು ಎಲ್ಲರೂ ಒಗ್ಗಟ್ಟಾಗಿ ಬಂದರೆ ಮುಂದಿನ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮದಿನದ ವೇಳೆಗೆ ಇಡೀ ಜಿಲ್ಲೆಯನ್ನು ಡಿಜಿಟಲ್ ಮಾಡಬಹುದು ಎಂದು ಸಲಹೆ ನೀಡಿದರು. 

"ದೇಶದಲ್ಲಿ ಕಂಡುಬರುವ ಪರಿವರ್ತನೆಯು ಪ್ರತಿ ಸಾಮಾಜಿಕ ವರ್ಗದ ಕೊಡುಗೆಗಳ ಫಲವಾಗಿದೆ".ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ವಿಶ್ವದೊಂದಿಗೆ ಸಂಪರ್ಕ ಸಾಧಿಸಲು ಗ್ಲೋಬಲ್ ಕೌನ್ಸಿಲ್‌ನಂತಹ ಸಂಸ್ಥೆಗಳು ಪರಿಣಾಮಕಾರಿ ಮಾಧ್ಯಮವಾಗಿದೆ. ಪುರಾತನ ಗ್ರಂಥಗಳನ್ನು ಉಲ್ಲೇಖಿಸಿದ ಪ್ರಧಾನಿ, ಸಾಧು ಸಂತರು, ಋಷಿ ಮುನಿಗಳನ್ನು ಹರಿಯುವ ನೀರಿನಂತೆ ಪರಿಗಣಿಸಲಾಗುತ್ತದೆ. ಏಕೆಂದರೆ ಅವರು ತಮ್ಮ ಆಲೋಚನೆಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ ಮತ್ತು ಅವರ ನಡವಳಿಕೆ  ಆಯಾಸಗೊಳ್ಳುವುದಿಲ್ಲ. "ಸಂತರ ಜೀವನವನ್ನು ಅವರ ಸಂದೇಶಗಳ ನಿರಂತರ ಹರಿವು ಮತ್ತು ಸಾಮಾಜಿಕ ಪರಿವರ್ತನೆಯ ಪ್ರಯತ್ನಗಳಿಂದ ವ್ಯಾಖ್ಯಾನಿಸಲಾಗಿದೆ". ಸಂತನ ಜನ್ಮಸ್ಥಳವು ಅವರ ಅನುಯಾಯಿಗಳನ್ನು ನಿರ್ಧರಿಸುವುದಿಲ್ಲ. ಆದರೆ ಭಕ್ತಾದಿಗಳಿಗೆ, ಯಾವುದೇ ನಿಜವಾದ ಸಂತರು ತಮ್ಮದೇ ಆದವರಾಗುತ್ತಾರೆ. ಅವರ ನಂಬಿಕೆಗಳು ಮತ್ತು ಸಂಸ್ಕೃತಿಗಳ ಪ್ರತಿನಿಧಿಯಾಗುತ್ತಾರೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಚೈತನ್ಯವನ್ನು ಎಲ್ಲ ಸಾಧು ಸಂತರು ಬೆಳೆಸಿದ್ದಾರೆ. ಶ್ರೀ ಸತ್ಯಸಾಯಿ ಬಾಬಾ ಅವರು ಪುಟ್ಟಪರ್ತಿಯಲ್ಲಿ ಜನಿಸಿದರೂ ಸಹ, ಅವರ ಅನುಯಾಯಿಗಳನ್ನು ವಿಶ್ವಾದ್ಯಂತ ಕಾಣಬಹುದು. ಅವರ ಸಂಸ್ಥೆಗಳು ಮತ್ತು ಆಶ್ರಮಗಳನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲೂ ಕಾಣಬಹುದು. ಎಲ್ಲ ಧರ್ಮೀಯರು ಪ್ರಶಾಂತಿ ನಿಲಯದೊಂದಿಗೆ ಭಾಷೆ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ಸಂಪರ್ಕ ಹೊಂದಿದ್ದು, ಇದೇ ಆಶಯವೇ ಭಾರತವನ್ನು ಒಂದೇ ನೂಲಿನಲ್ಲಿ ಬೆಸೆದು ಅಮರವಾಗಿಸಿದೆ ಎಂದರು.

 

ಸತ್ಯಸಾಯಿ ಅವರ ಸೇವೆಯ ಶಕ್ತಿಯನ್ನು ಉಲ್ಲೇಖಿಸಿದ ಪ್ರಧಾನಿ, ಅವರೊಂದಿಗೆ ಸಂವಾದ ನಡೆಸುವ ಮತ್ತು ಸತ್ಯಸಾಯಿ ಅವರ ಆಶೀರ್ವಾದದ ಆಶ್ರಯದಲ್ಲಿ ವಾಸಿಸುವ ಅವಕಾಶ ಸಿಕ್ಕಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿದರು. ಶ್ರೀ ಸತ್ಯಸಾಯಿ ಅವರು ಆಳವಾದ ಸಂದೇಶಗಳನ್ನು ತಿಳಿಸಲು ಬಳಸುತ್ತಿದ್ದ ಪದಗಳ ಗುಚ್ಛ ಸರಾಗತೆಯನ್ನು ಪ್ರಧಾನಿ  ನೆನಪಿಸಿಕೊಂಡರು. ‘ಎಲ್ಲರನ್ನು ಪ್ರೀತಿಸಿ ಎಲ್ಲರಿಗೂ ಸೇವೆ ಮಾಡಿ’ ಎಂಬಂತಹ ಕಾಲಾತೀತ ಬೋಧನೆಗಳನ್ನು ಅವರು ಮಾಡಿದರು; ‘ಹೆಲ್ಪ್ ಎವರ್ ಹರ್ಟ್ ನೆವರ್’; ‘ಕಡಿಮೆ ಮಾತು ಹೆಚ್ಚು ಕೆಲಸ’; 'ಪ್ರತಿಯೊಂದು ಅನುಭವವೂ ಒಂದು ಪಾಠ-ಪ್ರತಿಯೊಂದು ನಷ್ಟವೂ ಒಂದು ಲಾಭ'. ಈ ರೀತಿಯ ಸತ್ಯಸಾಯಿ ಅವರ ಬೋಧನೆಗಳು ಸೂಕ್ಷ್ಮತೆಯ ಜತೆಗೆ ಜೀವನದ ಆಳವಾದ ತತ್ತ್ವಶಾಸ್ತ್ರವನ್ನು ಹೊಂದಿವೆ. ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ ಸಂದರ್ಭದಲ್ಲಿ ಅವರ ಮಾರ್ಗದರ್ಶನ ಮತ್ತು ಸಹಾಯವನ್ನು ಮರೆಯಲಾಗದು. ಶ್ರೀ ಸತ್ಯಸಾಯಿ ಅವರ ಆಳವಾದ ಸಹಾನುಭೂತಿಯ ಆಶೀರ್ವಾದವನ್ನು ಸ್ಮರಿಸಿದರು. ಅವರ ಪಾಲಿಗೆ ಮಾನವತೆಯ ಸೇವೆಯು ದೇವರ ಸೇವೆಯಾಗಿತ್ತು ಎಂದು ಹೇಳಿದರು.

ಭಾರತದಂತಹ ದೇಶದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಯಾವಾಗಲೂ ಸಾಮಾಜಿಕ ಕಲ್ಯಾಣದ ಕೇಂದ್ರದಲ್ಲಿವೆ. ಇಂದು ನಾವು ಅಮೃತ ಕಾಲದ ದೃಢ ನಿರ್ಣಯಗಳೊಂದಿಗೆ ಅಭಿವೃದ್ಧಿ ಮತ್ತು ಪರಂಪರೆಗೆ ವೇಗ ನೀಡುತ್ತಿರುವಾಗ, ಸತ್ಯಸಾಯಿ ಟ್ರಸ್ಟ್‌ನಂತಹ ಸಂಸ್ಥೆಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಧಾನಿ ಹೇಳಿದರು.

ಸತ್ಯಸಾಯಿ ಟ್ರಸ್ಟ್‌ನ ಆಧ್ಯಾತ್ಮಿಕ ವಿಭಾಗವು ಬಾಲ ವಿಕಾಸದಂತಹ ಕಾರ್ಯಕ್ರಮಗಳ ಮೂಲಕ ಹೊಸ ಪೀಳಿಗೆಯಲ್ಲಿ ಸಾಂಸ್ಕೃತಿಕ ಭಾರತವನ್ನು ನಿರ್ಮಿಸುತ್ತಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. ರಾಷ್ಟ್ರ ನಿರ್ಮಾಣ ಮತ್ತು ಸಮಾಜದ ಸಬಲೀಕರಣದಲ್ಲಿ ಸತ್ಯಸಾಯಿ ಟ್ರಸ್ಟ್‌ನ ಪ್ರಯತ್ನಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ,  ಪ್ರಶಾಂತಿ ನಿಲಯಂನಲ್ಲಿರುವ ಹೈಟೆಕ್ ಆಸ್ಪತ್ರೆ, ಶಾಲೆಗಳು ಮತ್ತು ಕಾಲೇಜುಗಳಲ್ಲಿ  ಹಲವಾರು ವರ್ಷಗಳಿಂದ ಉಚಿತ ಶಿಕ್ಷಣ ನೀಡುತ್ತಿರುವುದನ್ನು ಪ್ರಸ್ತಾಪಿಸಿದರು. ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಸತ್ಯಸಾಯಿ ಅವರಿಗೆ ಸಂಬಂಧಿಸಿದ ಸಂಸ್ಥೆಗಳನ್ನೂ ಶ್ಲಾಘಿಸಿದರು.  ‘ಜಲ್ ಜೀವನ್ ಮಿಷನ್’ ಅಡಿ ದೇಶವು ಪ್ರತಿ ಹಳ್ಳಿಗೆ ಶುದ್ಧ ನೀರು ಸರಬರಾಜು ಮಾಡುವ ಮೂಲಕ ದೂರದ ಹಳ್ಳಿಗಳಿಗೆ ಉಚಿತ ನೀರು ಒದಗಿಸುವ ಮಾನವೀಯ ಕಾರ್ಯದಲ್ಲಿ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪಾಲುದಾರರಾಗಿದ್ದಾರೆ ಎಂದು ಅವರು ತಿಳಿಸಿದರು.

 

ಮಿಷನ್ ಲೈಫ್ ಮತ್ತು ಜಿ-20 ಶೃಂಗಸಭೆಯ ಅಧ್ಯಕ್ಷೀಯ ಸ್ಥಾನ ಪಡೆದಿರುವ ಸಂದರ್ಭದಲ್ಲಿ ಭಾರತವು,ಹವಾಮಾನ ಉಪಕ್ರಮಗಳಲ್ಲಿ ಜಾಗತಿಕ ಮನ್ನಣೆ ಗಳಿಸಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದರು. ಭಾರತದಲ್ಲಿ ಹೆಚ್ಚುತ್ತಿರುವ ಜಾಗತಿಕ ಆಸಕ್ತಿಯನ್ನು ಪ್ರಸ್ತಾಪಿಸಿದ ಪ್ರಧಾನಿ, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯ ರಾಷ್ಟ್ರೀಯರು ಯೋಗ ಪ್ರದರ್ಶನಕ್ಕಾಗಿ ಒಟ್ಟುಗೂಡಿದರು, ಇದು ವಿಶ್ವ ದಾಖಲೆಗೆ ಕಾರಣವಾಯಿತು. ಅಲ್ಲಿ ಯೋಗದ ಜತೆಗೆ ಜನರು ಭಾರತದಿಂದ ಆಯುರ್ವೇದ ಮತ್ತು ಸುಸ್ಥಿರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಕಳವಾದ ಕಲಾಕೃತಿಗಳನ್ನು ಹಿಂದಿರುಗಿಸುವ ಬಗ್ಗೆಯೂ ಕ್ರಮ ವಹಿಸಲಾಗಿದೆ. “ಭಾರತದ ಈ ಪ್ರಯತ್ನಗಳು ಮತ್ತು ನಾಯಕತ್ವದ ಹಿಂದೆ, ನಮ್ಮ ಸಾಂಸ್ಕೃತಿಕ ಚಿಂತನೆಯು ನಮ್ಮ ದೊಡ್ಡ ಶಕ್ತಿಯಾಗಿದೆ. ಆದ್ದರಿಂದ, ಸತ್ಯಸಾಯಿ ಟ್ರಸ್ಟ್‌ನಂತಹ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಅಂತಹ ಎಲ್ಲಾ ಪ್ರಯತ್ನಗಳಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ” ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಮುಂದಿನ 2 ವರ್ಷಗಳಲ್ಲಿ 1 ಕೋಟಿ ಮರಗಳನ್ನು ನೆಡುವ ಸಂಕಲ್ಪ ತೊಡುವ ‘ಪ್ರೇಮ್ ತರು’ ಉಪಕ್ರಮವನ್ನು ಪ್ರಧಾನಿ ಪ್ರಸ್ತಾಪಿಸಿದರು. ಮರ ನೆಡುವ ಅಥವಾ ಪ್ಲಾಸ್ಟಿಕ್ ಮುಕ್ತ ಭಾರತ ಸಂಕಲ್ಪವಾಗಲಿ, ಇಂತಹ ಉಪಕ್ರಮಗಳನ್ನು ಬೆಂಬಲಿಸಲು ಎಲ್ಲರೂ ಮುಂದೆ ಬರಬೇಕೆಂದು ಶ್ರೀ ಮೋದಿ ಒತ್ತಾಯಿಸಿದರು. ಸೌರಶಕ್ತಿ ಮತ್ತು ಸ್ವಚ್ಛ ಇಂಧನ ಆಯ್ಕೆಗಳಿಂದ ಜನರನ್ನು ಪ್ರೇರೇಪಿಸುವಂತೆ ಅವರು ಒತ್ತಾಯಿಸಿದರು.

ಆಂಧ್ರದ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಶ್ರೀ ಅನ್ನ ಸಿರಿಧಾನ್ಯ -ಜವೆಯಿಂದ ತಯಾರಿಸಿದ ಆಹಾರ ಒದಗಿಸುವ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್‌ನ ಉಪಕ್ರಮವನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು. ಶ್ರೀ ಅನ್ನದ ಆರೋಗ್ಯ ಪ್ರಯೋಜನಗಳನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಇತರ ರಾಜ್ಯಗಳು ಇಂತಹ ಉಪಕ್ರಮಗಳೊಂದಿಗೆ ಸಂಪರ್ಕ ಹೊಂದಿದರೆ ದೇಶವು ಹೆಚ್ಚಿನ ಪ್ರಯೋಜನ ಪಡೆಯುತ್ತದೆ. “ಶ್ರೀ ಅನ್ನದಲ್ಲಿ ಆರೋಗ್ಯವಿದೆ, ಸಾಧ್ಯತೆಗಳೂ ಇವೆ. ನಮ್ಮ ಎಲ್ಲಾ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಭಾರತದ ಗುರುತನ್ನು ಬಲಪಡಿಸುತ್ತವೆ” ಎಂದು ಅವರು ಹೇಳಿದರು.

“ಸತ್ಯ ಸಾಯಿ ಅವರ ಆಶೀರ್ವಾದ ನಮ್ಮೆಲ್ಲರ ಮೇಲಿದೆ. ಈ ಶಕ್ತಿಯಿಂದ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ. ಇಡೀ ಜಗತ್ತಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ಪೂರೈಸುತ್ತೇವೆ” ಎಂದು ಪ್ರಧಾನ ಮಂತ್ರಿ ಭಾಷಣ ಮುಕ್ತಾಯಗೊಳಿಸಿದರು.

ಹಿನ್ನೆಲೆ

ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಎಂಬ ಹೊಸ ಸೌಲಭ್ಯ ನಿರ್ಮಿಸಲಾಗಿದೆ. ಪ್ರಶಾಂತಿ ನಿಲಯವು ಶ್ರೀ ಸತ್ಯಸಾಯಿ ಬಾಬಾ ಅವರ ಮುಖ್ಯ ಆಶ್ರಮವಾಗಿದೆ. ದಾನಿ ಶ್ರೀ ರುಕೊ ಹಿರಾ ಅವರು ನೀಡಿದ ಕನ್ವೆನ್ಷನ್ ಸೆಂಟರ್ ಸಾಂಸ್ಕೃತಿಕ ವಿನಿಮಯ, ಆಧ್ಯಾತ್ಮಿಕತೆ ಮತ್ತು ಜಾಗತಿಕ ಸಾಮರಸ್ಯ ಉತ್ತೇಜಿಸುವ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಶ್ರೀ ಸತ್ಯಸಾಯಿ ಬಾಬಾ ಅವರ ಬೋಧನೆಗಳನ್ನು ಒಟ್ಟುಗೂಡಿಸಲು, ಸಂಪರ್ಕಿಸಲು ಮತ್ತು ಅನ್ವೇಷಿಸಲು ವೈವಿಧ್ಯಮಯ ಹಿನ್ನೆಲೆಯ ಜನರಿಗೆ ಇದು ಪೋಷಣೆಯ ವಾತಾವರಣ ಒದಗಿಸುತ್ತದೆ. ಇದರ ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಮೂಲಸೌಕರ್ಯವು ಸಮ್ಮೇಳನಗಳು, ವಿಚಾರಸಂಕಿರಣಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುಗಮಗೊಳಿಸುತ್ತದೆ. ಎಲ್ಲಾ ವರ್ಗಗಳ ಜನರ ನಡುವೆ ಸಂವಾದ ಮತ್ತು ತಿಳುವಳಿಕೆ ಉತ್ತೇಜಿಸುತ್ತದೆ. ವಿಸ್ತಾರವಾದ ಸಂಕೀರ್ಣವು ಧ್ಯಾನ ಮಂದಿರಗಳು, ಪ್ರಶಾಂತ ಉದ್ಯಾನವನಗಳು ಮತ್ತು ವಸತಿ ಸೌಕರ್ಯಗಳನ್ನು ಹೊಂದಿದೆ. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones