ರಾಜಸ್ಥಾನವು ತನ್ನ ನುರಿತ ಉದ್ಯೋಗಿ ಪಡೆ ಮತ್ತು ವಿಸ್ತರಿಸುತ್ತಿರುವ ಮಾರುಕಟ್ಟೆಯಿಂದ ಹೂಡಿಕೆಗೆ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ
ವಿಶ್ವದಾದ್ಯಂತದ ತಜ್ಞರು ಮತ್ತು ಹೂಡಿಕೆದಾರರು ಭಾರತದ ಬಗ್ಗೆ ಉತ್ಸುಕರಾಗಿದ್ದಾರೆ: ಪ್ರಧಾನಮಂತ್ರಿ
ಭಾರತದ ಯಶಸ್ಸು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ, ಡಿಜಿಟಲ್ ಡೇಟಾ ಮತ್ತು ವಿತರಣೆಯ ನೈಜ ಶಕ್ತಿಯನ್ನು ಅನಾವರಣಗೊಳಿಸುತ್ತದೆ: ಪ್ರಧಾನಮಂತ್ರಿ
ಈ ಶತಮಾನವು ತಂತ್ರಜ್ಞಾನ ಚಾಲಿತ ಮತ್ತು ದತ್ತಾಂಶ ಚಾಲಿತ: ಪ್ರಧಾನಮಂತ್ರಿ
ಡಿಜಿಟಲ್ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವು ಪ್ರತಿಯೊಂದು ವಲಯ ಮತ್ತು ಸಮುದಾಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಭಾರತ ತೋರಿಸಿದೆ: ಪ್ರಧಾನಮಂತ್ರಿ
ರಾಜಸ್ಥಾನವು ಪ್ರವರ್ಧಮಾನ ಮಾತ್ರವಲ್ಲ, ಅದು ವಿಶ್ವಾಸಾರ್ಹವೂ ಆಗಿದೆ, ರಾಜಸ್ಥಾನವು ಗ್ರಹಣಶೀಲವಾಗಿದೆ ಮತ್ತು ಸಮಯದೊಂದಿಗೆ ತನ್ನನ್ನು ಹೇಗೆ ಪರಿಷ್ಕರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿದೆ: ಪ್ರಧಾನಮಂತ್ರಿ
ಭಾರತದಲ್ಲಿ ಬಲವಾದ ಉತ್ಪಾದನಾ ನೆಲೆಯನ್ನು ಹೊಂದಿರುವುದು ನಿರ್ಣಾಯಕ: ಪ್ರಧಾನಮಂತ್ರಿ
ಭಾರತದ ಎಂಎಸ್ಎಂಇಗಳು ಭಾರತೀಯ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಗಳನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದ ಜೈಪುರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ 2024 ಮತ್ತು ರಾಜಸ್ಥಾನ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಯಶಸ್ಸಿನ ಪಯಣದಲ್ಲಿ ಇಂದು ಮತ್ತೊಂದು ವಿಶೇಷ ದಿನವಾಗಿದೆ ಎಂದರು. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024ಕ್ಕೆ ಆಗಮಿಸಿರುವ ಎಲ್ಲ ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಹೂಡಿಕೆದಾರರು, ಪ್ರತಿನಿಧಿಗಳನ್ನು ಅವರು ಅಭಿನಂದಿಸಿದರು. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನೂ ಅಭಿನಂದಿಸಿದರು.

ಭಾರತದಲ್ಲಿನ ವ್ಯಾಪಾರಪರ ವಾತಾವರಣದಿಂದ ವ್ಯಾಪಾರ ತಜ್ಞರು ಮತ್ತು ಹೂಡಿಕೆದಾರರು ಉತ್ತೇಜಿತರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಾಧಿಸು, ಪರಿವರ್ತಿಸು ಮತ್ತು ಸುಧಾರಣೆಯ ಮಂತ್ರದೊಂದಿಗೆ ಭಾರತ ಕಂಡ ಪ್ರಗತಿ ಪ್ರತಿಯೊಂದು ಕ್ಷೇತ್ರದಲ್ಲೂ ಗೋಚರಿಸುತ್ತಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ 7 ದಶಕಗಳ ನಂತರ ಭಾರತವು ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಗೆ ಏರಲು ಸಾಧ್ಯವಾಯಿತು, ಆದರೆ ಕಳೆದ ದಶಕದಲ್ಲಿ ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಮೂಡಿ ಬಂದಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಮತ್ತು ರಫ್ತು ಸುಮಾರು ದ್ವಿಗುಣಗೊಂಡಿದೆ" ಎಂದು ಶ್ರೀ ಮೋದಿ ಉದ್ಗರಿಸಿದರು. 2014 ರ ಹಿಂದಿನ ದಶಕಕ್ಕೆ ಹೋಲಿಸಿದರೆ ಕಳೆದ ದಶಕದಲ್ಲಿ ವಿದೇಶಿ ನೇರ ಹೂಡಿಕೆ ಕೂಡ ಎರಡು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಭಾರತದ ಮೂಲಸೌಕರ್ಯ ವೆಚ್ಚವು ಸುಮಾರು 2 ಟ್ರಿಲಿಯನ್ ರೂ.ಗಳಿಂದ 11 ಟ್ರಿಲಿಯನ್ ರೂ.ಗೆ ಏರಿದೆ ಎಂದೂ ಅವರು ಹೇಳಿದರು.

 

"ಭಾರತದ ಯಶಸ್ಸು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ, ಡಿಜಿಟಲ್ ದತ್ತಾಂಶ ಮತ್ತು ವಿತರಣೆಯ ನಿಜವಾದ ಶಕ್ತಿಯನ್ನು ತೋರಿಸುತ್ತದೆ" ಎಂದು ಪ್ರಧಾನಿ ಉದ್ಗರಿಸಿದರು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ಸು ಮತ್ತು ಸಬಲೀಕರಣವು ಒಂದು ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಮಾನವತೆಯ ಕಲ್ಯಾಣವು ಭಾರತದ ತತ್ವಶಾಸ್ತ್ರದ ಕೇಂದ್ರಬಿಂದುವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಮೂಲ ಲಕ್ಷಣವಾಗಿದೆ ಎಂದು ಅವರು ನುಡಿದರು. ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಮತ್ತು ಭಾರತದಲ್ಲಿ ಸ್ಥಿರ ಸರ್ಕಾರವನ್ನು ಖಚಿತಪಡಿಸಿದ್ದಕ್ಕಾಗಿ ಅವರು ಭಾರತದ ಜನರನ್ನು ಶ್ಲಾಘಿಸಿದರು. ಭಾರತದ ಈ ಪ್ರಾಚೀನ ಸಂಪ್ರದಾಯಗಳನ್ನು ಮುಂದಕ್ಕೆ ಕೊಂಡೊಯ್ಯಲು ಯುವ ಶಕ್ತಿಯಾಗಿರುವ ಜನಸಂಖ್ಯಾವೈವಿಧ್ಯವನ್ನು ಶ್ರೀ ಮೋದಿ ಶ್ಲಾಘಿಸಿದರು. ಮುಂಬರುವ ಹಲವು ವರ್ಷಗಳಲ್ಲಿ ಭಾರತವು ವಿಶ್ವದ ಅತ್ಯಂತ ಕಿರಿಯ ದೇಶಗಳಲ್ಲಿ ಒಂದಾಗಲಿದೆ ಮತ್ತು ಭಾರತವು ಅತಿದೊಡ್ಡ ಯುವಜನರ ಗುಂಪನ್ನು ಮತ್ತು ಅತಿದೊಡ್ಡ ನುರಿತ ಯುವ ಗುಂಪನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಈ ದಿಕ್ಕಿನಲ್ಲಿ ಸರ್ಕಾರ ಹಲವಾರು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಕಳೆದ ದಶಕದಲ್ಲಿ, ಭಾರತದ ಯುವ ಶಕ್ತಿಯು ನಮ್ಮ ಶಕ್ತಿಗೆ ಮತ್ತೊಂದು ಆಯಾಮವನ್ನು ಸೇರಿಸಿದೆ ಮತ್ತು ಈ ಹೊಸ ಆಯಾಮವು ಭಾರತದ ತಂತ್ರಜ್ಞಾನ ಶಕ್ತಿ ಮತ್ತು ದತ್ತಾಂಶ (ಡೇಟಾ) ಶಕ್ತಿಯಾಗಿದೆ ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು. ಇಂದಿನ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಮತ್ತು ದತ್ತಾಂಶದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, "ಈ ಶತಮಾನವು ತಂತ್ರಜ್ಞಾನ ಚಾಲಿತ ಮತ್ತು ದತ್ತಾಂಶ ಚಾಲಿತವಾಗಿದೆ" ಎಂದು ಹೇಳಿದರು. ಕಳೆದ ದಶಕದಲ್ಲಿ, ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 4 ಪಟ್ಟು ಹೆಚ್ಚಾಗಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಡಿಜಿಟಲ್ ವಹಿವಾಟುಗಳಲ್ಲಿ ಹೊಸ ದಾಖಲೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಭಾರತವು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ದತ್ತಾಂಶದ ನಿಜವಾದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಡಿಜಿಟಲ್ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವು ಪ್ರತಿಯೊಂದು ವಲಯ ಮತ್ತು ಸಮುದಾಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಭಾರತ ಪ್ರದರ್ಶಿಸಿದೆ" ಎಂದು ಶ್ರೀ ಮೋದಿ ಹೇಳಿದರು. ಯುಪಿಐ, ನೇರ ನಗದು ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಸಿಸ್ಟಮ್), ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ (ಜಿಇಎಂ), ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿವಿಸಿ) ನಂತಹ ಭಾರತದ ವಿವಿಧ ಡಿಜಿಟಲ್ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಡಿಜಿಟಲ್ ಪರಿಸರ ವ್ಯವಸ್ಥೆಯ ಶಕ್ತಿಯನ್ನು ಪ್ರದರ್ಶಿಸುವ ಇಂತಹ ಅನೇಕ ವೇದಿಕೆಗಳಿವೆ ಎಂದು ಹೇಳಿದರು. ಅವುಗಳ ಭಾರಿ ಪರಿಣಾಮ ರಾಜಸ್ಥಾನದಲ್ಲೂ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು. ರಾಜ್ಯದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯಾಗಿದೆ ಮತ್ತು ರಾಜಸ್ಥಾನವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಿದಾಗ, ದೇಶವೂ ಹೊಸ ಎತ್ತರವನ್ನು ತಲುಪುತ್ತದೆ ಎಂಬ ದೃಢ ನಂಬಿಕೆಯನ್ನು ಶ್ರೀ ಮೋದಿ ವ್ಯಕ್ತಪಡಿಸಿದರು.

ವಿಸ್ತೀರ್ಣದ ದೃಷ್ಟಿಯಿಂದ ರಾಜಸ್ಥಾನವು ಭಾರತದ ಅತಿದೊಡ್ಡ ರಾಜ್ಯವಾಗಿದೆ ಎಂದು ಹೇಳಿದ ಶ್ರೀ ಮೋದಿ, ರಾಜಸ್ಥಾನದ ಜನರನ್ನು ಅವರ ವಿಶಾಲ ಹೃದಯ, ಕಠಿಣ ಪರಿಶ್ರಮದ ಸ್ವಭಾವ, ಪ್ರಾಮಾಣಿಕತೆ, ಕಠಿಣ ಗುರಿಗಳನ್ನು ಸಾಧಿಸುವ ಇಚ್ಛಾಶಕ್ತಿ, ರಾಷ್ಟ್ರ ಮೊದಲು ಎಂಬ ನಂಬಿಕೆ, ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ಅವರ ಸ್ಫೂರ್ತಿಗಾಗಿ ಶ್ಲಾಘಿಸಿದರು. ಸ್ವಾತಂತ್ರ್ಯೋತ್ತರ ಸರ್ಕಾರಗಳ ಆದ್ಯತೆ ದೇಶದ ಅಭಿವೃದ್ಧಿ ಅಥವಾ ದೇಶದ ಪರಂಪರೆಯಾಗಿರಲಿಲ್ಲ ಮತ್ತು ರಾಜಸ್ಥಾನವು ಅದರ ಹೊರೆಯನ್ನು ಅನುಭವಿಸಿದೆ ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಅಭಿವೃದ್ಧಿ ಮತ್ತು ಪರಂಪರೆಯ ಮಂತ್ರದ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದು ರಾಜಸ್ಥಾನಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಭರವಸೆ ನೀಡಿದರು.

 

ರಾಜಸ್ಥಾನವು ಕೇವಲ ಉದಯೋನ್ಮುಖ ರಾಜ್ಯವಲ್ಲ, ಅದು ವಿಶ್ವಾಸಾರ್ಹ ರಾಜ್ಯವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಜಸ್ಥಾನವು ಗ್ರಹಣಶೀಲವಾಗಿದೆ ಮತ್ತು ಸಮಯದೊಂದಿಗೆ ತನ್ನನ್ನು ಹೇಗೆ ಪರಿಷ್ಕರಿಸಿಕೊಳ್ಳಬೇಕು ಎಂದು ಅದಕ್ಕೆ ತಿಳಿದಿದೆ ಎಂದರು. ಸವಾಲುಗಳನ್ನು ಎದುರಿಸುವುದಕ್ಕೆ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ರಾಜಸ್ಥಾನವು ಮತ್ತೊಂದು ಹೆಸರಾಗಿದೆ ಎಂದು ಅವರು ಹೇಳಿದರು. ರಾಜಸ್ಥಾನದ ಜನರಿಂದ ಆಯ್ಕೆಯಾದ ಸ್ಪಂದನಶೀಲ, ಜವಾಬ್ದಾರಿಯುತ ಮತ್ತು ಸುಧಾರಣಾವಾದಿ ಸರ್ಕಾರವು ರಾಜಸ್ಥಾನದ ಆರ್-ಫ್ಯಾಕ್ಟರ್ ಗೆ ಹೊಸ ಅಂಶವಾಗಿದೆ ಎಂದು ಶ್ರೀ ಮೋದಿ ಹೇಳಿದರು. ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಅವರ ಇಡೀ ತಂಡವು ಅಲ್ಪಾವಧಿಯಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಅವರು ಶ್ಲಾಘಿಸಿದರು. ರಾಜ್ಯ ಸರ್ಕಾರವು ಕೆಲವೇ ದಿನಗಳಲ್ಲಿ ತನ್ನ ಮೊದಲ ವರ್ಷವನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದ ಶ್ರೀ ಮೋದಿ, ಬಡವರು ಮತ್ತು ರೈತರ ಕಲ್ಯಾಣ, ಯುವಜನರಿಗೆ ಹೊಸ ಅವಕಾಶಗಳ ಸೃಷ್ಟಿ, ರಸ್ತೆ, ವಿದ್ಯುತ್, ನೀರು ಪೂರೈಕೆಯಂತಹ ಅಭಿವೃದ್ಧಿ ಕಾರ್ಯಗಳು ಸಹಿತ  ವಿವಿಧ ಕ್ಷೇತ್ರಗಳಲ್ಲಿ ರಾಜಸ್ಥಾನದ ತ್ವರಿತ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿಯ ದಕ್ಷತೆ ಮತ್ತು ಬದ್ಧತೆಯನ್ನು ಶ್ಲಾಘಿಸಿದರು. ಅಪರಾಧ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಸರ್ಕಾರದ ತ್ವರಿತಗತಿಯು ನಾಗರಿಕರು ಮತ್ತು ಹೂಡಿಕೆದಾರರಲ್ಲಿ ಹೊಸ ಉತ್ಸಾಹವನ್ನು ತಂದಿದೆ ಎಂದು ಅವರು ಹೇಳಿದರು.

ರಾಜಸ್ಥಾನದ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಬಹಳ ಮುಖ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಜಸ್ಥಾನವು ನೈಸರ್ಗಿಕ ಸಂಪನ್ಮೂಲಗಳ ಭಂಡಾರ, ಶ್ರೀಮಂತ ಪರಂಪರೆಯೊಂದಿಗೆ ಆಧುನಿಕ ಸಂಪರ್ಕದ ಜಾಲ, ಬಹಳ ದೊಡ್ಡ ಭೂಪ್ರದೇಶ ಮತ್ತು ಅತ್ಯಂತ ಸಮರ್ಥ ಯುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು. ರಸ್ತೆಗಳಿಂದ ರೈಲ್ವೆವರೆಗೆ, ಆತಿಥ್ಯದಿಂದ ಕರಕುಶಲ ವಸ್ತುಗಳವರೆಗೆ, ಹೊಲಗಳಿಂದ ಕೋಟೆಗಳವರೆಗೆ ರಾಜಸ್ಥಾನವು ಸಾಕಷ್ಟು ವಿಷಯಗಳನ್ನು ಹೊಂದಿದೆ ಎಂದು ಅವರು ಹೇಳಿದರು. ರಾಜಸ್ಥಾನದ ಈ ಸಾಮರ್ಥ್ಯವು ರಾಜ್ಯವನ್ನು ಹೂಡಿಕೆಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. ರಾಜಸ್ಥಾನವು ಗುಣಮಟ್ಟದ ಕಲಿಕೆ  ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ ಎಂದು ಹೇಳಿದ ಶ್ರೀ ಮೋದಿ, ಅದಕ್ಕಾಗಿಯೇ ಈಗ ಇಲ್ಲಿನ ಮರಳು ದಿಬ್ಬಗಳಲ್ಲಿಯೂ ಮರಗಳು ಹಣ್ಣುಗಳಿಂದ ತುಂಬಿವೆ ಮತ್ತು ಆಲಿವ್ ಹಾಗು ಜತ್ರೋಫಾ ಕೃಷಿ ಹೆಚ್ಚುತ್ತಿದೆ ಎಂದರು. ಜೈಪುರದ ನೀಲಿ ಕುಂಬಾರಿಕೆ, ಪ್ರತಾಪಗಢದ ತೇವಾ ಆಭರಣ ಮತ್ತು ಭಿಲ್ವಾರಾದ ಜವಳಿ ಆವಿಷ್ಕಾರಗಳು ವಿಭಿನ್ನ ವೈಭವವನ್ನು ಹೊಂದಿದ್ದರೆ, ಮಕ್ರಾನಾ ಅಮೃತಶಿಲೆ ಮತ್ತು ಕೋಟಾ ಡೋರಿಯಾ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ ಎಂದು ಅವರು ಒತ್ತಿ ಹೇಳಿದರು. ನಾಗೌರ್ ನ ಪಾನ್ ಮೇಥಿಯ ಪರಿಮಳವೂ ವಿಶಿಷ್ಟವಾಗಿದೆ ಮತ್ತು ಪ್ರತಿ ಜಿಲ್ಲೆಯ ಸಾಮರ್ಥ್ಯವನ್ನು ಗುರುತಿಸಲು ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

 

ಸತು, ಸೀಸ, ತಾಮ್ರ, ಅಮೃತಶಿಲೆ, ಸುಣ್ಣದ ಕಲ್ಲು, ಗ್ರಾನೈಟ್, ಪೊಟ್ಯಾಷ್ ನಂತಹ ಭಾರತದ ಖನಿಜ ನಿಕ್ಷೇಪಗಳ ಹೆಚ್ಚಿನ ಭಾಗ ರಾಜಸ್ಥಾನದಲ್ಲಿದೆ ಎಂದು ಹೇಳಿದ ಪ್ರಧಾನಿ, ಇವು ಸ್ವಾವಲಂಬಿ ಭಾರತದ ಬಲವಾದ ಅಡಿಪಾಯವಾಗಿವೆ ಮತ್ತು ರಾಜಸ್ಥಾನವು ಭಾರತದ ಇಂಧನ ಭದ್ರತೆಗೆ ಪ್ರಮುಖ ಕೊಡುಗೆ ನೀಡಿದೆ ಎಂದರು. ಈ ದಶಕದ ಅಂತ್ಯದ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೃಷ್ಟಿಸುವ ಗುರಿಯನ್ನು ಭಾರತ ನಿಗದಿಪಡಿಸಿದೆ ಎಂದು ನೆನಪಿಸಿದ ಶ್ರೀ ಮೋದಿ, ರಾಜಸ್ಥಾನವು ಈ ವಿಷಯದಲ್ಲೂ ದೊಡ್ಡ ಪಾತ್ರ ವಹಿಸುತ್ತಿದೆ, ಭಾರತದ ಅನೇಕ ಅತಿದೊಡ್ಡ ಸೌರ ಉದ್ಯಾನಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ರಾಜಸ್ಥಾನವು ಆರ್ಥಿಕತೆಯ ಎರಡು ದೊಡ್ಡ ಕೇಂದ್ರಗಳಾದ ದಿಲ್ಲಿ ಮತ್ತು ಮುಂಬೈಗಳನ್ನು ಜೋಡಿಸಿದೆ, ಮಹಾರಾಷ್ಟ್ರ ಮತ್ತು ಗುಜರಾತ್ ಬಂದರುಗಳನ್ನು ಉತ್ತರ ಭಾರತದೊಂದಿಗೆ ಸಂಪರ್ಕಿಸಿದೆ ಎಂದು ಹೇಳಿದ ಶ್ರೀ ಮೋದಿ, ದಿಲ್ಲಿ-ಮುಂಬೈ ಕೈಗಾರಿಕಾ ಕಾರಿಡಾರ್ ನ 250 ಕಿಲೋಮೀಟರ್ನಷ್ಟು ಭಾಗ ರಾಜಸ್ಥಾನದಲ್ಲಿದೆ ಎಂಬುದರತ್ತ ಬೆಟ್ಟು ಮಾಡಿದರು.  ಇದು ರಾಜಸ್ಥಾನದ ಅಲ್ವಾರ್, ಭರತ್ಪುರ, ದೌಸಾ, ಸವಾಯಿ ಮಾಧೋಪುರ, ಟೋಂಕ್, ಬುಂಡಿ ಮತ್ತು ಕೋಟಾ ಜಿಲ್ಲೆಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಂತಹ 300 ಕಿ.ಮೀ ಆಧುನಿಕ ರೈಲು ಜಾಲ ರಾಜಸ್ಥಾನದಲ್ಲಿದೆ ಎಂದು ಹೇಳಿದ ಶ್ರೀ ಮೋದಿ, ಈ ಕಾರಿಡಾರ್ ಜೈಪುರ, ಅಜ್ಮೀರ್, ಸಿಕಾರ್, ನಾಗೌರ್ ಮತ್ತು ಅಲ್ವಾರ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ ಎಂದರು. ರಾಜಸ್ಥಾನವು ಇಂತಹ ದೊಡ್ಡ ಸಂಪರ್ಕ ಯೋಜನೆಗಳ ಕೇಂದ್ರವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇದು ಹೂಡಿಕೆಗೆ ಅತ್ಯುತ್ತಮ ತಾಣವಾಗಿದ್ದು, ವಿಶೇಷವಾಗಿ ಲಾಜಿಸ್ಟಿಕ್ಸ್ ವಲಯಕ್ಕೆ ಅಪಾರ ಸಾಧ್ಯತೆಗಳಿವೆ ಎಂದರು. ಸರ್ಕಾರವು ಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ ಗಳು, ಸುಮಾರು ಎರಡು ಡಜನ್ ವಲಯ ನಿರ್ದಿಷ್ಟ ಕೈಗಾರಿಕಾ ಪಾರ್ಕ್ ಗಳು ಮತ್ತು ಎರಡು ವಾಯು ಸರಕು ಸಂಕೀರ್ಣಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದರು. ಇದು ಕೈಗಾರಿಕಾ ಸಂಪರ್ಕದಲ್ಲಿ ಮತ್ತಷ್ಟು ಸುಧಾರಣೆಯೊಂದಿಗೆ ರಾಜಸ್ಥಾನದಲ್ಲಿ ಕೈಗಾರಿಕೆಯನ್ನು ಸ್ಥಾಪಿಸುವುದನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಸಮೃದ್ಧ ಭವಿಷ್ಯದಲ್ಲಿ ಪ್ರವಾಸೋದ್ಯಮದ ಬೃಹತ್ ಸಾಮರ್ಥ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಭಾರತದಲ್ಲಿ ಪ್ರಕೃತಿ, ಸಂಸ್ಕೃತಿ, ಸಾಹಸ, ಸಮ್ಮೇಳನ, ವಿವಾಹಕ್ಕೆ ಅನುಕೂಲಕರವಾದ ತಾಣಗಳು ಇದ್ದು ವಿವಾಹ ಮತ್ತು ಪಾರಂಪರಿಕ ಪ್ರವಾಸೋದ್ಯಮಕ್ಕೆ ಅಪಾರ ಸಾಧ್ಯತೆಗಳಿವೆ ಎಂದು ಒತ್ತಿ ಹೇಳಿದರು. ರಾಜಸ್ಥಾನವು ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಕೇಂದ್ರವಾಗಿದೆ ಮತ್ತು ಇದು ಇತಿಹಾಸ, ಪರಂಪರೆ, ವಿಶಾಲ ಮರುಭೂಮಿಗಳು ಮತ್ತು ವೈವಿಧ್ಯಮಯ ಸಂಗೀತ ಮತ್ತು ಪಾಕಪದ್ಧತಿಯೊಂದಿಗೆ ಸುಂದರವಾದ ಸರೋವರಗಳನ್ನು ಹೊಂದಿದೆ, ಇದು ಪ್ರವಾಸ, ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದ ಅಗತ್ಯಗಳನ್ನು ಪೂರೈಸುತ್ತದೆ ಎಂದರು. ಜನರು ಮದುವೆಗಳಿಗೆ ಬರಲು ಮತ್ತು ಜೀವನದ ಕ್ಷಣಗಳನ್ನು ಸ್ಮರಣೀಯವಾಗಿಸಲು ಬಯಸುವ ವಿಶ್ವದ ಆಯ್ದ ಸ್ಥಳಗಳಲ್ಲಿ ರಾಜಸ್ಥಾನವೂ ಒಂದಾಗಿದೆ ಎಂದು ಅವರು ಹೇಳಿದರು. ರಾಜಸ್ಥಾನದಲ್ಲಿ ವನ್ಯಜೀವಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ ಎಂದು ಹೇಳಿದ ಶ್ರೀ ಮೋದಿ, ರಣಥಂಬೋರ್, ಸರಿಸ್ಕಾ, ಮುಕುಂದ್ರಾ ಬೆಟ್ಟಗಳು, ಕಿಯೋಲಾಡಿಯೋ ಮತ್ತು ಅಂತಹ ಅನೇಕ ಸ್ಥಳಗಳನ್ನು ಉಲ್ಲೇಖಿಸಿದರು. ರಾಜಸ್ಥಾನ ಸರ್ಕಾರವು ತನ್ನ ಪ್ರವಾಸಿ ತಾಣಗಳು ಮತ್ತು ಪಾರಂಪರಿಕ ಕೇಂದ್ರಗಳನ್ನು ಉತ್ತಮ ಸಂಪರ್ಕದೊಂದಿಗೆ ಜೋಡಿಸುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಭಾರತ ಸರ್ಕಾರವು ವಿವಿಧ ಥೀಮ್ ಸರ್ಕ್ಯೂಟ್ಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಸಹ ಪ್ರಾರಂಭಿಸಿದೆ ಮತ್ತು 2004 ಹಾಗು 2014 ರ ನಡುವೆ ಸುಮಾರು 5 ಕೋಟಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಿದ್ದಾರೆ, ಆದರೆ 2014 ಮತ್ತು 2024 ರ ನಡುವೆ 7 ಕೋಟಿಗೂ ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಪ್ರವಾಸೋದ್ಯಮ ಸ್ಥಗಿತಗೊಂಡಿದ್ದರೂ, ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತಕ್ಕೆ ಇ-ವೀಸಾ ಸೌಲಭ್ಯವನ್ನು ಅನೇಕ ದೇಶಗಳ ಪ್ರವಾಸಿಗರಿಗೆ ವಿಸ್ತರಿಸಿರುವುದು ವಿದೇಶಿ ಅತಿಥಿಗಳಿಗೆ ಸಾಕಷ್ಟು ಸಹಾಯ ಮಾಡಿದೆ ಎಂಬುದರತ್ತ ಅವರು ಗಮನ ಸೆಳೆದರು. ಇಂದು ಭಾರತದಲ್ಲಿ ದೇಶೀಯ ಪ್ರವಾಸೋದ್ಯಮವೂ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಉಡಾನ್ ಯೋಜನೆ, ವಂದೇ ಭಾರತ್ ರೈಲುಗಳು, ಪ್ರಸಾದ್ ಯೋಜನೆಯಂತಹ ಯೋಜನೆಗಳು ರಾಜಸ್ಥಾನಕ್ಕೆ ಲಾಭ ತಂದಿವೆ ಎಂದರು. ಭಾರತ ಸರ್ಕಾರದ ರೋಮಾಂಚಕ ಗ್ರಾಮದಂತಹ ಕಾರ್ಯಕ್ರಮಗಳಿಂದ ರಾಜಸ್ಥಾನಕ್ಕೂ ಲಾಭವಾಗಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಮದುವೆಯಾಗುವಂತೆ ಶ್ರೀ ಮೋದಿ ಅವರು ನಾಗರಿಕರನ್ನು ಒತ್ತಾಯಿಸಿದರು, ಇದು ರಾಜಸ್ಥಾನಕ್ಕೂ ಪ್ರಯೋಜನವನ್ನು ನೀಡುತ್ತದೆ. ರಾಜಸ್ಥಾನದಲ್ಲಿ ಪಾರಂಪರಿಕ ಪ್ರವಾಸೋದ್ಯಮ, ಚಲನಚಿತ್ರ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಗಡಿ ಪ್ರದೇಶ ಪ್ರವಾಸೋದ್ಯಮವನ್ನು ವಿಸ್ತರಿಸಲು ಅಪಾರ ಅವಕಾಶಗಳಿವೆ ಮತ್ತು ಆ ಸಾಮರ್ಥ್ಯವೂ ಇದೆ ಎಂದು ಅವರು ಹೇಳಿದರು. ಈ ಪ್ರದೇಶಗಳಲ್ಲಿನ ಹೂಡಿಕೆಯು ರಾಜಸ್ಥಾನದ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುತ್ತದೆ ಮತ್ತು ಅವರ ವ್ಯವಹಾರವನ್ನು ಬೆಳೆಸಲು ಸಹಾಯ ಮಾಡುತ್ತದೆ, ಆದುದರಿಂದ ಇದರಲ್ಲಿ ಹೂಡಿಕೆ ಮಾಡುವಂತೆಯೂ ಪ್ರಧಾನಿ ಹೂಡಿಕೆದಾರರನ್ನು ಒತ್ತಾಯಿಸಿದರು.

 

ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇಂದು ಜಗತ್ತಿಗೆ ಅತಿದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲೂ ಅಡೆತಡೆಯಿಲ್ಲದೆ ಮತ್ತು ತಡೆರಹಿತವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯ ಅಗತ್ಯವಿದೆ ಎಂದರು. ಇದಕ್ಕಾಗಿ, ಭಾರತದಲ್ಲಿ ದೊಡ್ಡ ಉತ್ಪಾದನಾ ನೆಲೆಯನ್ನು ಹೊಂದುವುದು ಕಡ್ಡಾಯವಾಗಿದೆ, ಇದು ಭಾರತಕ್ಕೆ ಮಾತ್ರವಲ್ಲ, ವಿಶ್ವ ಆರ್ಥಿಕತೆಗೂ ಅಗತ್ಯವಾಗಿದೆ ಎಂದು ಅವರು ಹೇಳಿದರು. ಈ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ಭಾರತವು ಉತ್ಪಾದನೆಯಲ್ಲಿ ಸ್ವಾವಲಂಬನೆಯ ಪ್ರತಿಜ್ಞೆಯನ್ನು ಕೈಗೊಂಡಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತವು ತನ್ನ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಕಡಿಮೆ ವೆಚ್ಚದ ಉತ್ಪಾದನೆಗೆ ಒತ್ತು ನೀಡುತ್ತಿದೆ ಮತ್ತು ಭಾರತದ ಪೆಟ್ರೋಲಿಯಂ ಉತ್ಪನ್ನಗಳು, ಔಷಧಿಗಳು ಮತ್ತು ಲಸಿಕೆಗಳು, ಎಲೆಕ್ಟ್ರಾನಿಕ್ಸ್ ಸರಕುಗಳು ಮತ್ತು ದಾಖಲೆಯ ಉತ್ಪಾದನೆಯು ಜಗತ್ತಿಗೆ ಸಾಕಷ್ಟು ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು. ಕಳೆದ ವರ್ಷ ರಾಜಸ್ಥಾನದಿಂದ ಎಂಜಿನಿಯರಿಂಗ್ ಸರಕುಗಳು, ರತ್ನಗಳು ಮತ್ತು ಆಭರಣಗಳು, ಜವಳಿ, ಕರಕುಶಲ ವಸ್ತುಗಳು, ಕೃಷಿ ಆಹಾರ ಉತ್ಪನ್ನಗಳು ಸೇರಿದಂತೆ ಸುಮಾರು 84 ಸಾವಿರ ಕೋಟಿ ರೂಪಾಯಿ ಮೌಲ್ಯದ ರಫ್ತು ಮಾಡಲಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಿಎಲ್ಐ ಯೋಜನೆಯ ಪಾತ್ರವು ನಿರಂತರವಾಗಿ ಹೆಚ್ಚುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇಂದು ಎಲೆಕ್ಟ್ರಾನಿಕ್ಸ್, ವಿಶೇಷ ಉಕ್ಕು (ಸ್ಪೆಷಾಲಿಟಿ ಸ್ಟೀಲ್), ಆಟೋಮೊಬೈಲ್ ಮತ್ತು ಆಟೋ ಬಿಡಿಭಾಗಗಳು, ಸೌರ ಪಿವಿಗಳು, ಹಾಗು ಔಷಧೀಯ ಕ್ಷೇತ್ರಗಳಲ್ಲಿ ಸಾಕಷ್ಟು ಉತ್ಸಾಹವಿದೆ ಎಂದೂ ಹೇಳಿದರು. ಪಿಎಲ್ಐ ಯೋಜನೆಯು ಸುಮಾರು 1.25 ಲಕ್ಷ ಕೋಟಿ ರೂ.ಗಳ ಹೂಡಿಕೆಗೆ ಕಾರಣವಾಗಿದೆ, ಸುಮಾರು 11 ಲಕ್ಷ ಕೋಟಿ ರೂ.ಗಳ ಉತ್ಪನ್ನಗಳನ್ನು ತಯಾರಿಸಲಾಗಿದೆ ಮತ್ತು ಅದರಿಂದ ರಫ್ತು 4 ಲಕ್ಷ ಕೋಟಿ ರೂ.ಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಲಕ್ಷಾಂತರ ಯುವಜನರು ಹೊಸದಾಗಿ ಉದ್ಯೋಗ ಗಳಿಸಿದ್ದಾರೆ ಎಂದು ಅವರು ಗಮನಿಸಿದರು. ರಾಜಸ್ಥಾನವೂ ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುವ ಆಟೋಮೋಟಿವ್ ಮತ್ತು ಆಟೋ ಕಾಂಪೊನೆಂಟ್ ಉದ್ಯಮಕ್ಕೆ ಉತ್ತಮ ನೆಲೆಯನ್ನು ಸಿದ್ಧಪಡಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯಗಳು ರಾಜಸ್ಥಾನದಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು. ರಾಜಸ್ಥಾನದ ಉತ್ಪಾದನಾ ಸಾಮರ್ಥ್ಯವನ್ನು ಖಂಡಿತವಾಗಿಯೂ ಅನ್ವೇಷಿಸುವಂತೆ ಶ್ರೀ ಮೋದಿ ಹೂಡಿಕೆದಾರರನ್ನು ಒತ್ತಾಯಿಸಿದರು.

ರೈಸಿಂಗ್ ರಾಜಸ್ಥಾನ್ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಎಂಎಸ್ಎಂಇಗಳ ವಿಷಯದಲ್ಲಿ ರಾಜಸ್ಥಾನವು ಭಾರತದ ಅಗ್ರ 5 ರಾಜ್ಯಗಳಲ್ಲಿ ಒಂದಾಗಿದೆ ಎಂದರು. ಪ್ರಸ್ತುತ ನಡೆಯುತ್ತಿರುವ ಶೃಂಗಸಭೆಯಲ್ಲಿ ಎಂಎಸ್ಎಂಇಗಳ ಬಗ್ಗೆ ಪ್ರತ್ಯೇಕ ಸಮಾವೇಶವೂ ನಡೆಯಲಿದೆ ಎಂದು ಅವರು ಹೇಳಿದರು. ರಾಜಸ್ಥಾನದಲ್ಲಿ 27 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿದ್ದು, 50 ಲಕ್ಷಕ್ಕೂ ಹೆಚ್ಚು ಜನರು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ ಮೋದಿ ಗಮನಿಸಿದರು. ಇದು ರಾಜಸ್ಥಾನದ ಹಣೆಬರಹವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಸರ್ಕಾರವು ಅಲ್ಪಾವಧಿಯಲ್ಲಿಯೇ ಹೊಸ ಎಂ.ಎಸ್.ಎಂ.ಇ.ಗಳ ನೀತಿಯನ್ನು ಪರಿಚಯಿಸಿದೆ ಎಂದು ಶ್ರೀ ಮೋದಿ ಅವರು ಸಂತಸ ವ್ಯಕ್ತಪಡಿಸಿದರು. ಭಾರತ ಸರ್ಕಾರವು ತನ್ನ ನೀತಿಗಳು ಮತ್ತು ನಿರ್ಧಾರಗಳ ಮೂಲಕ ಎಂಎಸ್ಎಂಇಗಳನ್ನು ನಿರಂತರವಾಗಿ ಬಲಪಡಿಸುತ್ತಿದೆ ಎಂದು ಅವರು ಹೇಳಿದರು. "ಭಾರತದ ಎಂಎಸ್ಎಂಇಗಳು ಭಾರತೀಯ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಗಳನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ" ಎಂದು ಪ್ರಧಾನಿ ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಫಾರ್ಮಾ ಸಂಬಂಧಿತ ಪೂರೈಕೆ ಸರಪಳಿ ಬಿಕ್ಕಟ್ಟನ್ನು ನೆನಪಿಸಿಕೊಂಡ ಶ್ರೀ ಮೋದಿ, ಭಾರತದ ಔಷಧ ವಲಯವು ತನ್ನ ಬಲವಾದ ನೆಲೆಯಿಂದಾಗಿ ಜಗತ್ತಿಗೆ ಸಹಾಯ ಮಾಡಿದೆ ಎಂದು ಒತ್ತಿ ಹೇಳಿದರು. ಅಂತೆಯೇ, ಭಾರತವನ್ನು ಇತರ ಉತ್ಪನ್ನಗಳ ಉತ್ಪಾದನೆಗೆ ಬಲವಾದ ನೆಲೆಯನ್ನಾಗಿ ಮಾಡಬೇಕೆಂದು ಅವರು ಒತ್ತಾಯಿಸಿದರಲ್ಲದೆ ನಮ್ಮ ಎಂಎಸ್ಎಂಇಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದೂ ಹೇಳಿದರು.

 

ಎಂಎಸ್ಎಂಇಗಳ ವ್ಯಾಖ್ಯಾನವನ್ನು ಬದಲಾಯಿಸುವ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದ ಶ್ರೀ ಮೋದಿ, ಇದರಿಂದ ಅವು ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತವೆ, ಕೇಂದ್ರ ಸರ್ಕಾರವು ಸುಮಾರು 5 ಕೋಟಿ ಎಂಎಸ್ಎಂಇಗಳನ್ನು ಔಪಚಾರಿಕ ಆರ್ಥಿಕತೆಗೆ ಸಂಪರ್ಕಿಸಿದೆ, ಇದು ಸಾಲದ ಲಭ್ಯತೆಯನ್ನು ಸುಲಭಗೊಳಿಸಿದೆ ಎಂದು ಹೇಳಿದರು.

ಸರ್ಕಾರವು ಕ್ರೆಡಿಟ್ ಲಿಂಕ್ಡ್ ಗ್ಯಾರಂಟಿ ಯೋಜನೆಯನ್ನು ಸಹ ಪ್ರಾರಂಭಿಸಿದೆ ಎಂದು ಹೇಳಿದ ಪ್ರಧಾನಿ, ಈ ಯೋಜನೆಯಡಿ ಸಣ್ಣ ಕೈಗಾರಿಕೆಗಳಿಗೆ ಸುಮಾರು 7 ಲಕ್ಷ ಕೋಟಿ ರೂ. ನೆರವು ನೀಡಲಾಗಿದೆ ಎಂದರು. ಕಳೆದ ದಶಕದಲ್ಲಿ, ಎಂಎಸ್ಎಂಇಗಳಿಗೆ ಸಾಲದ ಹರಿವು ದ್ವಿಗುಣಗೊಂಡಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಇದು 2014 ರಲ್ಲಿ ಸುಮಾರು 10 ಲಕ್ಷ ಕೋಟಿ ರೂ.ಗಳಷ್ಟಿದ್ದರೆ, ಇಂದು ಅದು 22 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದರು. ರಾಜಸ್ಥಾನವೂ ಇದರ ದೊಡ್ಡ ಫಲಾನುಭವಿಯಾಗಿದೆ ಮತ್ತು ಎಂಎಸ್ಎಂಇಗಳ ಈ ಬೆಳೆಯುತ್ತಿರುವ ಬಲವು ರಾಜಸ್ಥಾನದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.

"ನಾವು ಸ್ವಾವಲಂಬಿ ಭಾರತದ ಹೊಸ ಪ್ರಯಾಣವನ್ನು ಆರಂಭಿಸಿದ್ದೇವೆ" ಎಂದು ಪ್ರಧಾನಿ ನುಡಿದರು. ಆತ್ಮನಿರ್ಭರ ಭಾರತ ಅಭಿಯಾನದ ದೃಷ್ಟಿಕೋನವು ಜಾಗತಿಕ ಮಟ್ಟದ್ದಾಗಿದೆ ಮತ್ತು ಅದರ ಪರಿಣಾಮವೂ  ಜಾಗತಿಕ ಮಟ್ಟದ್ದಾಗಿದೆ ಎಂದು ಅವರು ಹೇಳಿದರು. ಅದು ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸರ್ಕಾರದ ವಿಧಾನದೊಂದಿಗೆ ಮುಂದುವರಿಯುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೈಗಾರಿಕಾ ಮತ್ತು ಉತ್ಪಾದನಾ ಬೆಳವಣಿಗೆಗೆ ಸರ್ಕಾರವು ಪ್ರತಿಯೊಂದು ವಲಯ ಮತ್ತು ಪ್ರತಿಯೊಂದು ಅಂಶವನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದರು. ಸಬ್ ಕಾ ಪ್ರಯಾಸ್ ನ ಈ ಸ್ಫೂರ್ತಿಯು ಅಭಿವೃದ್ಧಿ ಹೊಂದಿದ ರಾಜಸ್ಥಾನ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಶ್ರೀ ಮೋದಿ ಅವರು, ರೈಸಿಂಗ್ ರಾಜಸ್ಥಾನದ ನಿರ್ಣಯವನ್ನು ಕೈಗೆತ್ತಿಕೊಳ್ಳುವಂತೆ ಎಲ್ಲ ಹೂಡಿಕೆದಾರರನ್ನು ಒತ್ತಾಯಿಸಿದರು. ರಾಜಸ್ಥಾನ ಮತ್ತು ಭಾರತವನ್ನು ಅನ್ವೇಷಿಸುವಂತೆ ಅವರು ವಿಶ್ವದಾದ್ಯಂತದ ಪ್ರತಿನಿಧಿಗಳನ್ನು ಒತ್ತಾಯಿಸಿದರು, ಇದು ಅವರಿಗೆ ಮರೆಯಲಾಗದ ಅನುಭವವಾಗಲಿದೆ ಎಂದೂ ಅವರು ನುಡಿದರು.

 

ರಾಜಸ್ಥಾನದ ರಾಜ್ಯಪಾಲ ಶ್ರೀ ಹರಿಭಾವು ಕಿಸನ್ ರಾವ್ ಬಾಗ್ಡೆ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಸಚಿವರು, ಸಂಸದರು, ಶಾಸಕರು, ಉದ್ಯಮದ ಮುಖಂಡರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಈ ವರ್ಷದ ಡಿಸೆಂಬರ್ 9 ರಿಂದ 11 ರವರೆಗೆ ನಡೆಯುವ ಹೂಡಿಕೆ ಶೃಂಗಸಭೆಯ ಥೀಮ್ 'ಸಮೃದ್ಧ, ಜವಾಬ್ದಾರಿಯುತ, ಸಿದ್ಧ'. ಈ ಶೃಂಗಸಭೆಯಲ್ಲಿ ಜಲ ಭದ್ರತೆ, ಸುಸ್ಥಿರ ಗಣಿಗಾರಿಕೆ, ಸುಸ್ಥಿರ ಹಣಕಾಸು, ಅಂತರ್ಗತ ಪ್ರವಾಸೋದ್ಯಮ, ಕೃಷಿ-ವ್ಯವಹಾರ ಆವಿಷ್ಕಾರಗಳು ಮತ್ತು ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ಗಳು ಸೇರಿದಂತೆ 12 ವಲಯ ವಿಷಯಾಧಾರಿತ ಅಧಿವೇಶನಗಳು ನಡೆಯುತ್ತವೆ. ಶೃಂಗಸಭೆಯಲ್ಲಿ ಭಾಗವಹಿಸುವ ರಾಷ್ಟ್ರಗಳೊಂದಿಗೆ 'ವಾಸಯೋಗ್ಯ ನಗರಗಳಿಗೆ ನೀರಿನ ನಿರ್ವಹಣೆ', 'ಕೈಗಾರಿಕೆಗಳ ಬಹುಮುಖತೆ- ಉತ್ಪಾದನೆ ಮತ್ತು ಅದರಾಚೆಗೆ' ಹಾಗು 'ವ್ಯಾಪಾರ ಮತ್ತು ಪ್ರವಾಸೋದ್ಯಮ' ಮುಂತಾದ ವಿಷಯಗಳ ಬಗ್ಗೆ ಎಂಟು ದೇಶಗಳ ಅಧಿವೇಶನಗಳು ನಡೆಯಲಿವೆ.

ಪ್ರವಾಸಿ ರಾಜಸ್ಥಾನಿ ಸಮಾವೇಶ ಮತ್ತು ಎಂಎಸ್ಎಂಇ ಸಮಾವೇಶವೂ ಮೂರು ದಿನಗಳಲ್ಲಿ ನಡೆಯಲಿದೆ. ರಾಜಸ್ಥಾನ್ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋದಲ್ಲಿ ರಾಜಸ್ಥಾನ್ ಪೆವಿಲಿಯನ್, ಕಂಟ್ರಿ ಪೆವಿಲಿಯನ್ಸ್, ಸ್ಟಾರ್ಟ್ ಅಪ್ಸ್ ಪೆವಿಲಿಯನ್ ಮುಂತಾದ ವಿಷಯಾಧಾರಿತ ಪೆವಿಲಿಯನ್ ಗಳು ಇರಲಿವೆ. 16 ಪಾಲುದಾರ ರಾಷ್ಟ್ರಗಳು ಮತ್ತು 20 ಅಂತರರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ 32 ಕ್ಕೂ ಹೆಚ್ಚು ದೇಶಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿವೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
Deeply saddened by the devastation caused by Cyclone Chido in Mayotte, France: Prime Minister
December 17, 2024

Expressing grief over the devastation caused by Cyclone Chido in Mayotte, France, the Prime Minister Shri Narendra Modi today remarked that India stood in solidarity with France and is ready to extend all possible assistance. He expressed confidence that under President Emmanuel Macron’s leadership, France will overcome this tragedy with resilience and resolve.

In a post on X, he wrote:

“Deeply saddened by the devastation caused by Cyclone Chido in Mayotte. My thoughts and prayers are with the victims and their families. I am confident that under President @EmmanuelMacron’s leadership, France will overcome this tragedy with resilience and resolve. India stands in solidarity with France and is ready to extend all possible assistance.”