"ಪೋರ್ಟ್ ಬ್ಲೇರ್‌ನ ಹೊಸ ಟರ್ಮಿನಲ್ ಕಟ್ಟಡವು ಸುಗಮ ಪ್ರಯಾಣ, ಸುಗಮ ವ್ಯಾಪಾರ ಹಾಗೂ ಸಂಪರ್ಕ ಹೆಚ್ಚಳಕ್ಕೆ ಅನುವು ಮಾಡಿಕೊಡುತ್ತದೆ"
"ಅಭಿವೃದ್ಧಿಯ ವ್ಯಾಪ್ತಿಯು ಭಾರತದಲ್ಲಿ ದೀರ್ಘಕಾಲದವರೆಗೆ ದೊಡ್ಡ ನಗರಗಳಿಗೆ ಸೀಮಿತವಾಗಿದೆ"
"ಎಲ್ಲರನ್ನೂ ಒಳಗೊಗೊಂಡ ಹೊಸ ಅಭಿವೃದ್ಧಿ ಮಾದರಿಗೆ ಭಾರತ ಸಾಕ್ಷಿಯಾಗಿದೆ, ಅದೇ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಾದರಿ”
"ಅಭಿವೃದ್ಧಿ ಮತ್ತು ಪರಂಪರೆಯ ಜೊತೆಜೊತೆಯಾಗಿ ಸಾಗುತ್ತಿರುವ ಅಭಿವೃದ್ಧಿ ಮಹಾ ಮಂತ್ರಕ್ಕೆ ಅಂಡಮಾನ್‌ ಜೀವಂತ ಉದಾಹರಣೆಯಾಗಿದೆ"
"ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಭಿವೃದ್ಧಿಯು ದೇಶದ ಯುವಕರಿಗೆ ಸ್ಫೂರ್ತಿಯ ಮೂಲವಾಗಿದೆ"
"ಅಭಿವೃದ್ಧಿಯು ಎಲ್ಲಾ ರೀತಿಯ ಪರಿಹಾರಗಳನ್ನು ಹೊತ್ತು ತರುತ್ತದೆ"
"ದ್ವೀಪಗಳು ಮತ್ತು ಸಣ್ಣ ಕರಾವಳಿ ದೇಶಗಳು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದ ಅನೇಕ ಉದಾಹರಣೆಗಳು ಇಂದು ಜಗತ್ತಿನಲ್ಲಿ ನಮ್ಮ ಮುಂದಿವೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪೋರ್ಟ್ ಬ್ಲೇರ್‌ನ ʻವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼದ ನೂತನ ಸಮಗ್ರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಸುಮಾರು 710 ಕೋಟಿ ರೂ.ಗಳ ನಿರ್ಮಾಣ ವೆಚ್ಚದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮ ಪೋರ್ಟ್ ಬ್ಲೇರ್‌ನಲ್ಲಿ ನಡೆಯುತ್ತಿದ್ದರೂ, ʻವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಬೇಡಿಕೆ ಈಡೇರುತ್ತಿರುವುದರಿಂದ ಇಡೀ ದೇಶವು ಕೇಂದ್ರಾಡಳಿತ ಪ್ರದೇಶದತ್ತ ಕುತೂಹಲದಿಂದ ನೋಡುತ್ತಿದೆ ಎಂದರು. ಸಂತೋಷದ ವಾತಾವರಣ ಮತ್ತು ಜನರ ಮೊಗದಲ್ಲಿ ಸಂತಸದ ಭಾವವನ್ನು ನೋಡಲು ಈ ಸಂದರ್ಭದಲ್ಲಿ ಅಂಡಮಾನ್‌ನಲ್ಲಿ ಉಪಸ್ಥಿತರಿರುವ ಬಯಕೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. "ಅಂಡಮಾನ್‌ಗೆ ಭೇಟಿ ನೀಡಲು ಬಯಸುವವರು ದೊಡ್ಡ ಸಾಮರ್ಥ್ಯದ ವಿಮಾನ ನಿಲ್ದಾಣವನ್ನು ಸಹ ಒತ್ತಾಯಿಸಿದರು," ಎಂದು ಅವರು ಹೇಳಿದರು.

ಪೋರ್ಟ್ ಬ್ಲೇರ್ ನಲ್ಲಿ ವಿಮಾನ ನಿಲ್ದಾಣ ಸೌಲಭ್ಯಗಳ ವಿಸ್ತರಣೆಯ ಹೆಚ್ಚುತ್ತಿರುವ ಬಯಕೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಟರ್ಮಿನಲ್ 4000 ಪ್ರವಾಸಿಗರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿತ್ತು. ಈಗ ನಿರ್ಮಿಸಲಾದ ಹೊಸ ಟರ್ಮಿನಲ್ ಈ ಸಾಮರ್ಥ್ಯವನ್ನು 11,000ಕ್ಕೆ ಕೊಂಡೊಯ್ದಿದೆ. ಈಗ ವಿಮಾನ ನಿಲ್ದಾಣದಲ್ಲಿ ಯಾವುದೇ ಸಮಯದಲ್ಲಿ 10 ವಿಮಾನಗಳನ್ನು ನಿಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಹೆಚ್ಚಿನ ವಿಮಾನಗಳು ಮತ್ತು ಪ್ರವಾಸಿಗರು ಈ ಪ್ರದೇಶಕ್ಕೆ ಹೆಚ್ಚಿನ ಉದ್ಯೋಗಗಳನ್ನು ತರುತ್ತವೆ ಎಂದು ಅವರು ಹೇಳಿದರು. ಪೋರ್ಟ್ ಬ್ಲೇರ್‌ನ ಹೊಸ ಟರ್ಮಿನಲ್ ಕಟ್ಟಡವು ಸುಗಮ ಪ್ರಯಾಣ, ಸುಗಮ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಳಕ್ಕೆ ಅನುವು ಮಾಡಿಕೊಡಲಿದೆ ಎಂದು ಪ್ರಧಾನಿ ಹೇಳಿದರು.

 

"ಭಾರತದಲ್ಲಿ ಅಭಿವೃದ್ಧಿಯ ವ್ಯಾಪ್ತಿಯು ದೀರ್ಘಕಾಲದಿಂದ ದೊಡ್ಡ ನಗರಗಳಿಗೆ ಸೀಮಿತವಾಗಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ದೇಶದ ಆದಿವಾಸಿ ಮತ್ತು ದ್ವೀಪ ಪ್ರದೇಶಗಳು ದೀರ್ಘಕಾಲದವರೆಗೆ ಅಭಿವೃದ್ಧಿಯಿಂದ ವಂಚಿತವಾಗಿವೆ ಎಂದು ಎಂದರು. ಕಳೆದ 9 ವರ್ಷಗಳಲ್ಲಿ, ಪ್ರಸ್ತುತ ಸರ್ಕಾರವು ಹಿಂದಿನ ಸರ್ಕಾರಗಳ ತಪ್ಪುಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ಸರಿಪಡಿಸಿರುವುದು ಮಾತ್ರವಲ್ಲದೆ, ಹೊಸ ವ್ಯವಸ್ಥೆಯನ್ನು ತಂದಿದೆ ಎಂದು ಅವರು ಹೇಳಿದರು. "ಸರ್ವರನ್ನೂ ಒಳಗೊಂಡ ಹೊಸ ಅಭಿವೃದ್ಧಿಯ ಮಾದರಿಗೆ ಭಾರತ ಸಾಕ್ಷಿಯಾಗುತ್ತಿದೆ, ಅದೇ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಾದರಿಯಾಗಿದೆ," ಎಂದು ಹೇಳಿದರು. ಅಭಿವೃದ್ಧಿಯ ಈ ಮಾದರಿ ಬಹಳ ಸಮಗ್ರವಾಗಿದ್ದು, ಪ್ರತಿಯೊಂದು ಪ್ರದೇಶ ಮತ್ತು ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿ ಮತ್ತು ಶಿಕ್ಷಣ, ಆರೋಗ್ಯ ಮತ್ತು ಸಂಪರ್ಕದಂತಹ ಜೀವನದ ಪ್ರತಿಯೊಂದು ಅಂಶವನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.

ಕಳೆದ 9 ವರ್ಷಗಳಲ್ಲಿ ಅಂಡಮಾನ್‌ನಲ್ಲಿ ಅಭಿವೃದ್ಧಿಯ ಹೊಸ ಯಶೋಗಾಥೆ ಬರೆಯಲಾಗಿದೆ ಎಂದು ಪ್ರಧಾನಿ ಶ್ಲಾಘಿಸಿದರು. ಹಿಂದಿನ ಸರ್ಕಾರದ 9 ವರ್ಷಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ಗೆ 23,000 ಕೋಟಿ ರೂ.ಗಳ ಬಜೆಟ್ ಬಿಡಗುಡೆ ಮಾಡಲಾಗಿತ್ತು. ಆದರೆ, ಪ್ರಸ್ತುತ ಸರ್ಕಾರದ ಕೊನೆಯ ಒಂಬತ್ತು ವರ್ಷಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ಗೆ ಸುಮಾರು 48,000 ಕೋಟಿ ರೂ. ನೀಡಲಾಗಿದೆ. ಅಂತೆಯೇ, ಹಿಂದಿನ ಸರ್ಕಾರದ 9 ವರ್ಷಗಳಲ್ಲಿ 28,000 ಮನೆಗಳಿಗೆ ಕೊಳವೆ ಮೂಲಕ ನೀರು ಸಂಪರ್ಕ ಕಲ್ಪಿಸಲಾಗಿದ್ದರೆ, ಕಳೆದ 9 ವರ್ಷಗಳಲ್ಲಿ ಈ ಸಂಖ್ಯೆ 50,000 ಆಗಿದೆ. ಇಂದು, ಅಂಡಮಾನ್ ಮತ್ತು ನಿಕೋಬಾರ್‌ನ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಮತ್ತು ʻಒಂದು ದೇಶ, ಒಂದು ಪಡಿತರ ಕಾರ್ಡ್‌ʼ ಸೌಲಭ್ಯವನ್ನು ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಪೋರ್ಟ್ ಬ್ಲೇರ್‌ನಲ್ಲಿನ ವೈದ್ಯಕೀಯ ಕಾಲೇಜು ತಲೆ ಎತ್ತಲು ಪ್ರಸ್ತುತ ಸರ್ಕಾರವು ಕಾರಣವಾಗಿದೆ. ಇದಕ್ಕೂ ಮುನ್ನ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಇರಲಿಲ್ಲ. ಈ ಮೊದಲು, ಇಂಟರ್ನೆಟ್ ಕೇವಲ ಉಪಗ್ರಹಗಳ ಮೇಲೆ ಅವಲಂಬಿತವಾಗಿತ್ತು, ಈಗ, ಪ್ರಸ್ತುತ ಸರ್ಕಾರವು ಸಮುದ್ರದೊಳಗೆ ನೂರಾರು ಕಿಲೋಮೀಟರ್ ಆಪ್ಟಿಕಲ್ ಫೈಬರ್ ಅನ್ನು ಅಳವಡಿಸುವ ಉಪಕ್ರಮವನ್ನು ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದರು. ʼ

ಸೌಲಭ್ಯಗಳ ಈ ವಿಸ್ತರಣೆಯು ಇಲ್ಲಿನ ಪ್ರವಾಸೋದ್ಯಮಕ್ಕೆ ಹೊಸ ವೇಗವನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ಮೊಬೈಲ್ ಸಂಪರ್ಕ, ಆರೋಗ್ಯ ಮೂಲಸೌಕರ್ಯ, ವಿಮಾನ ನಿಲ್ದಾಣ ಸೌಲಭ್ಯಗಳು ಮತ್ತು ರಸ್ತೆಗಳು ಪ್ರವಾಸಿಗರ ಆಗಮನವನ್ನು ಉತ್ತೇಜಿಸುತ್ತವೆ. ಅದಕ್ಕಾಗಿಯೇ, 2014ಕ್ಕೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಶ್ರೀ ಮೋದಿ ವಿವರಿಸಿದರು. ಸಾಹಸ ಪ್ರವಾಸೋದ್ಯಮವೂ ಅಭಿವೃದ್ಧಿ ಹೊಂದುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಗಳು ಅನೇಕ ಪಟ್ಟು ಹೆಚ್ಚಾಗುತ್ತವೆ ಎಂದರು.

 

"ಅಭಿವೃದ್ಧಿ ಮತ್ತು ಪರಂಪರೆ ಜೊತೆ ಜೊತೆಯಾಗಿ ಸಾಗುತ್ತಿರುವ ಅಭಿವೃದ್ಧಿಯ ಮಹಾ ಮಂತ್ರಕ್ಕೆ ಅಂಡಮಾನ್ ಜೀವಂತ ಉದಾಹರಣೆಯಾಗುತ್ತಿದೆ," ಎಂದು ಪ್ರಧಾನಿ ಬಣ್ಣಿಸಿದರು. ಕೆಂಪುಕೋಟೆಯಲ್ಲಿ ತಿರಂಗಾವನ್ನು ಹಾರಿಸುವ ಮೊದಲು ಅಂಡಮಾನ್‌ನಲ್ಲಿ ಹಾರಿಸಲಾಗಿದ್ದರೂ, ಈ ದ್ವೀಪದಲ್ಲಿ ಗುಲಾಮಗಿರಿಯ ಚಿಹ್ನೆಗಳನ್ನು ಮಾತ್ರ ಕಾಣಬಹುದಾಗಿತ್ತು ಎಂದು ಪ್ರಧಾನಿ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಒಮ್ಮೆ ತಿರಂಗಾವನ್ನು ಹಾರಿಸಿದ ಸ್ಥಳದಲ್ಲಿಯೇ ರಾಷ್ಟ್ರಧ್ವಜವನ್ನು ಹಾರಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು. ರಾಸ್ ದ್ವೀಪವನ್ನು ನೇತಾಜಿ ಸುಭಾಸ್ ದ್ವೀಪ, ಹ್ಯಾವ್ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪ ಮತ್ತು ನೀಲ್ ದ್ವೀಪವನ್ನು ಶಹೀದ್ ದ್ವೀಪ ಎಂದು ಮರುನಾಮಕರಣ ಮಾಡಿರುವುದು ಪ್ರಸ್ತುತ ಸರ್ಕಾರವೇ ಎಂದು ಪ್ರಧಾನಿ ಒತ್ತಿ ಹೇಳಿದರು.
21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಮರುನಾಮಕರಣ ಮಾಡಿದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಭಿವೃದ್ಧಿಯು ದೇಶದ ಯುವಕರಿಗೆ ಸ್ಫೂರ್ತಿಯ ಮೂಲವಾಗಿದೆ," ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ಕೊನೆಯ 75 ವರ್ಷಗಳಲ್ಲಿ ಭಾರತವು ಹೊಸ ಎತ್ತರಕ್ಕೆ ಏರುತ್ತಿದೆ. ಏಕೆಂದರೆ ಭಾರತೀಯರ ಸಾಮರ್ಥ್ಯದ ಬಗ್ಗೆ ಈಗ ಯಾರಿಗೂ ಯಾವುದೇ ಸಂದೇಹವಿಲ್ಲ ಎಂದು ಪ್ರಧಾನಿ ಹೇಳಿದರು. ಆದರೆ, ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ರಾಜಕೀಯವು ಸದಾ ಸಾಮಾನ್ಯ ನಾಗರಿಕರ ಸಾಮರ್ಥ್ಯಗಳಿಗೆ ಅನ್ಯಾಯ ಮಾಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೆಲವು ಪಕ್ಷಗಳ ಅವಕಾಶವಾದಿ ರಾಜಕಾರಣವನ್ನೂ ಪ್ರಧಾನಿ ಎತ್ತಿ ತೋರಿಸಿದರು. ಜಾತೀಯತೆ ಮತ್ತು ಭ್ರಷ್ಟಾಚಾರದ ರಾಜಕೀಯವನ್ನು ಅವರು ಟೀಕಿಸಿದರು. ಭ್ರಷ್ಟಾಚಾರದಲ್ಲಿ ಮುಳುಗೆದ್ದವರನ್ನು, ಕೆಲವು ಸಂದರ್ಭಗಳಲ್ಲಿ ಶಿಕ್ಷೆಗೆ ಒಳಗಾದವರನ್ನು ಹಾಗೂ ಜಾಮೀನಿನ ಮೇಲೆ ಹೊರಬಂದವರನ್ನು ಸ್ವೀಕರಿಸುವುದನ್ನು ಮೋದಿ ಅವರು ಟೀಕಿಸಿದರು. ಸಂವಿಧಾನವನ್ನು ಒತ್ತೆಯಾಳಾಗಿರಿಸುವ ಮನಸ್ಥಿತಿಯ ಮೇಲೆ ಅವರು ದಾಳಿ ಮಾಡಿದರು. ಅಂತಹ ಶಕ್ತಿಗಳು ಸಾಮಾನ್ಯ ನಾಗರಿಕರ ಅಭಿವೃದ್ಧಿಗಿಂತ ಹೆಚ್ಚಾಗಿ ಸ್ವಾರ್ಥಿ ಕೌಟುಂಬಿಕ ಲಾಭಗಳ ಮೇಲೆ ಗಮನ ಕೇಂದ್ರೀಕರಿಸಿವೆ ಎಂದು ಅವರು ಟೀಕಿಸಿದರು. ರಕ್ಷಣೆ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ಭಾರತದ ಯುವಜನರ ಶಕ್ತಿಯನ್ನು ಶ್ರೀ ಮೋದಿ ಒತ್ತಿಹೇಳಿದರು ಮತ್ತು ಯುವಕರ ಈ ಶಕ್ತಿಗೆ ಹಿಂದಿನ ಸರಕಾರಗಳು ಯಾವುದೇ ನ್ಯಾಯವನ್ನು ಒದಗಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು, ದೇಶದ ಅಭಿವೃದ್ಧಿಗಾಗಿ ಜನರು ತಮ್ಮನ್ನು ಸಮರ್ಪಿಸಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ದ್ವೀಪಗಳು ಮತ್ತು ಸಣ್ಣ ಕರಾವಳಿ ದೇಶಗಳು ಇಂದು ಜಗತ್ತಿನಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ ಅನೇಕ ಉದಾಹರಣೆಗಳಿವೆ ಎಂದು ಪ್ರಧಾನಿ ಗಮನ ಸೆಳೆದರು. ಪ್ರಗತಿಯ ಹಾದಿಯು ಸವಾಲುಗಳಿಂದ ತುಂಬಿದ್ದರೂ, ಅಭಿವೃದ್ಧಿಯು ಎಲ್ಲಾ ರೀತಿಯ ಪರಿಹಾರಗಳನ್ನು ಹೊತ್ತು ತರುತ್ತದೆ ಎಂದು ಅವರು ಒತ್ತಿ ಹೇಳಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು ಇಡೀ ಪ್ರದೇಶವನ್ನು ಮತ್ತಷ್ಟು ಬಲಪಡಿಸಲಿವೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

 

ಹಿನ್ನೆಲೆ

ಸಂಪರ್ಕ ಮೂಲಸೌಕರ್ಯವನ್ನು ಹೆಚ್ಚಿಸುವತ್ತ ಸರ್ಕಾರದ ಪ್ರಮುಖವಾಗಿ ಗಮನ ಹರಿಸುತ್ತಿದೆ. ಸುಮಾರು 710 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸಮಗ್ರ ಟರ್ಮಿನಲ್ ಕಟ್ಟಡದ ಉದ್ಘಾಟನೆಯು ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ ನಿಕೋಬಾರ್‌ ದ್ವೀಪಕ್ಕೆ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸುಮಾರು 40,800 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಎರಡು ಬೋಯಿಂಗ್ 767-400 ಮತ್ತು ಎರಡು ಏರ್‌ಬಸ್ -321 ರೀತಿಯ ವಿಮಾನಗಳಿಗೆ ಸೂಕ್ತವಾದ ಏಪ್ರನ್ ಅನ್ನು 80 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಪ್ರಕೃತಿಯಿಂದ ಪ್ರೇರಿತವಾದ ವಿಮಾನ ನಿಲ್ದಾಣದ ಟರ್ಮಿನಲ್‌ನ ವಾಸ್ತುಶಿಲ್ಪ ವಿನ್ಯಾಸವು ಸಮುದ್ರ ಮತ್ತು ದ್ವೀಪಗಳನ್ನು ಚಿತ್ರಿಸುವ ಕಪ್ಪೆಚಿಪ್ಪು ಆಕಾರದ ರಚನೆಯನ್ನು ಹೋಲುತ್ತದೆ. ಹೊಸ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಶಾಖ ಹೆಚ್ಚಳವನ್ನು ಕಡಿಮೆ ಮಾಡಲು ಡಬಲ್ ಇನ್ಸುಲೇಟೆಡ್ ಚಾವಣಿ ವ್ಯವಸ್ಥೆ, ಕಟ್ಟಡದ ಒಳಗೆ ಕೃತಕ ಬೆಳಕಿನ ಬಳಕೆಯನ್ನು ಕಡಿಮೆ ಮಾಡಲು ಹಗಲಿನಲ್ಲಿ ಹೇರಳವಾದ ನೈಸರ್ಗಿಕ ಸೂರ್ಯನ ಗರಿಷ್ಠ ಪ್ರವೇಶವನ್ನು ಒದಗಿಸಲು ಸ್ಕೈಲೈಟ್‌ಗಳು, ಎಲ್ಇಡಿ ಬೆಳಕು ಮತ್ತು ಕಡಿಮೆ ಶಾಖದ ಗ್ಲೇಸಿಂಗ್‌ನಂತಹ ಹಲವಾರು ಸುಸ್ಥಿರ ವೈಶಿಷ್ಟ್ಯಗಳನ್ನು ಹೊಂದಿದೆ. ಭೂಗತ ನೀರಿನ ಟ್ಯಾಂಕ್‌ನಲ್ಲಿ ಮಳೆನೀರು ಕೊಯ್ಲು, 100% ಸಂಸ್ಕರಿಸಿದ ತ್ಯಾಜ್ಯ ನೀರನ್ನು ಉದ್ಯಾನಕ್ಕೆ ಮರುಬಳಕೆ ಮಾಡುವ ಒಳಚರಂಡಿ ನೀರು ಸಂಸ್ಕರಣಾ ಘಟಕ ಮತ್ತು 500 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರ ಮುಂತಾದ ಹಲವು ವೈಶಿಷ್ಟ್ಯಗಳು ದ್ವೀಪಗಳ ಪರಿಸರದ ಮೇಲೆ ಕನಿಷ್ಠ ನಕಾರಾತ್ಮಕ ಪರಿಣಾಮವನ್ನು ಬೀರಲಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹೆಬ್ಬಾಗಿಲಾದ ಪೋರ್ಟ್ ಬ್ಲೇರ್ ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ. ವಿಶಾಲವಾದ ಹೊಸ ಸಮಗ್ರ ಟರ್ಮಿನಲ್ ಕಟ್ಟಡವು ವಾಯು ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಸ್ಥಳೀಯ ಸಮುದಾಯಕ್ಕೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಜೊತೆಗೆ, ಈ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ.

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi