860 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು
"ರಾಜ್ ಕೋಟ್ ಅನ್ನು ಸೌರಾಷ್ಟ್ರದ ಬೆಳವಣಿಗೆಯ ಪ್ರಮುಖ ಗುರಿಕಾರ ಎಂದು ಗುರುತಿಸಲಾಗಿದೆ"
"ನಾನು ಯಾವಾಗಲೂ ರಾಜ್ಕೋಟ್ ಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತೇನೆ"
"ನಾವು ಉತ್ತಮ ಆಡಳಿತದ ಭರವಸೆಯನ್ನು ನೀಡಿದ್ದೇವೆ. ಅದನ್ನು ಸದಾ ಪಾಲಿಸುತ್ತಿದ್ದೇವೆ"
"ನವ-ಮಧ್ಯಮ ಮತ್ತು ಮಧ್ಯಮ ವರ್ಗಗಳ ಉನ್ನತೀಕರಣ ಸರ್ಕಾರದ ಆದ್ಯತೆಯಾಗಿದೆ"
"ವಾಯುಸೇವಾ ವಿಸ್ತರಣೆಯು ಭಾರತದ ವಾಯುಯಾನ ಕ್ಷೇತ್ರದ ಪರಾಕಾಷ್ಠೆಯಾಗಿದೆ"
"ಸುಗಮ ಜೀವನ ಮತ್ತು ಜೀವನದ ಗುಣಮಟ್ಟವು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ"
"ಇಂದು, ರೇರಾ ಕಾನೂನು ಲಕ್ಷಾಂತರ ಜನರ ಹಣ ಕೊಳ್ಳೆಹೋಗುವುದನ್ನು ತಪ್ಪಿಸುತ್ತಿದೆ"
"ಇಂದು, ನಮ್ಮ ನೆರೆ-ಹೊರೆಯ ದೇಶಗಳಲ್ಲಿ ಹಣದುಬ್ಬರವು ಶೇಕಡಾ 25-30ರಷ್ಟು ಹೆಚ್ಚುತ್ತಿದೆ. ಆದರೆ ಭಾರತದ ಸ್ಥಿತಿ ಹಾಗಿಲ್ಲ."

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್ ನ ರಾಜ್ ಕೋಟ್ ನಲ್ಲಿ ರಾಜ್ ಕೋಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು 860 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳಲ್ಲಿ ಸೌನಿ ಯೋಜನಾ ಲಿಂಕ್ 3ರ ಪ್ಯಾಕೇಜ್ 8 ಮತ್ತು 9; ದ್ವಾರಕಾ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ (RWSS) ಯೋಜನೆಯ ಉತ್ತಮೀಕರಣ; ಉಪರ್ಕೋಟ್ ಕೋಟೆಯ ಸಂರಕ್ಷಣೆ, ಪುನಃಸ್ಥಾಪನೆ ಮತ್ತು ಅಭಿವೃದ್ಧಿಯ ಹಂತ 1 ಮತ್ತು 2; ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ ಮತ್ತು ಮೇಲ್ಸೇತುವೆಯ ನಿರ್ಮಾಣ ಸೇರಿವೆ. ಪ್ರಧಾನಮಂತ್ರಿಯವರು ಹೊಸದಾಗಿ ಉದ್ಘಾಟಿಸಲಾದ ರಾಜ್ ಕೋಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೂ ಭೇಟಿ ನೀಡಿದರು.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ರಾಜ್ ಕೋಟ್ ಗೆ ಮಾತ್ರವಲ್ಲ, ಇಡೀ ಸೌರಾಷ್ಟ್ರ ಪ್ರದೇಶಕ್ಕೆ ಉತ್ತಮವಾದ ದಿನವಾಗಿದೆ ಎಂದರು. ಈ ಪ್ರದೇಶದಲ್ಲಿ ಚಂಡಮಾರುತ ಮತ್ತು ಪ್ರವಾಹದಂತಹ ಇತ್ತೀಚಿನ ನೈಸರ್ಗಿಕ ವಿಪತ್ತುಗಳಿಂದ ನಷ್ಟ ಅನುಭವಿಸಿದವರಿಗೆ ಅವರು ಗೌರವ ಸಲ್ಲಿಸಿದರು. ಸರ್ಕಾರ ಮತ್ತು ಜನತೆ ಒಟ್ಟಾಗಿ ಬಿಕ್ಕಟ್ಟನ್ನು ಎದುರಿಸಿದ್ದೇವೆ. ರಾಜ್ಯ ಸರ್ಕಾರದ ಸಹಾಯದಿಂದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಪ್ರಧಾನಿ ಭರವಸೆ ನೀಡಿದರು. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ ಎಂದು ಅವರು ಭರವಸೆ ನೀಡಿದರು.

ಈಗ ರಾಜ್ ಕೋಟ್ ಸೌರಾಷ್ಟ್ರದ ಬೆಳವಣಿಗೆಯ ಪ್ರಮುಖ ಭಾಗವಾಗಿ ಗುರುತಿಸಲ್ಪಟ್ಟಿದೆ ಎಂದು ಪ್ರಧಾನಿಯವರು ಹೇಳಿದರು. ರಾಜ್ ಕೋಟ್ ನ ಉದ್ಯಮ, ಸಂಸ್ಕೃತಿ ಮತ್ತು ಪಾಕಪದ್ಧತಿಯ ಹೊರತಾಗಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವನ್ನು ಇಂದು ಪೂರೈಸಲಾಗಿದೆ ಎಂದು ಅವರು ಹೇಳಿದರು. ರಾಜ್ ಕೋಟ್ ತಮ್ಮನ್ನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದನ್ನು ಸ್ಮರಿಸಿದ ಪ್ರಧಾನಿಯವರು, ಈ ನಗರವು ತಮಗೆ ಸಾಕಷ್ಟು ಕಲಿಸಿದೆ ಎಂದು ಉಲ್ಲೇಖಿಸಿದರು. "ರಾಜ್ ಕೋಟ್ ಗೆ ನಾನು ಸದಾ ಋಣಿಯಾಗಿರುತ್ತೇನೆ. ಇಲ್ಲಿ ಸೇವೆ ಸಲ್ಲಿಸಲು ನಾನು ಸದಾ ಸಿದ್ದನಿದ್ದೇನೆ" ಎಂದು ಅವರು ಹೇಳಿದರು.

ಇಂದು ಉದ್ಘಾಟಿಸಲಾದ ವಿಮಾನ ನಿಲ್ದಾಣವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪ್ರಯಾಣವನ್ನು ಸುಲಭಗೊಳಿಸುವುದರ ಹೊರತಾಗಿ, ಈ ಪ್ರದೇಶದ ಕೈಗಾರಿಕೆಗಳಿಗೆ ವಿಮಾನ ನಿಲ್ದಾಣದಿಂದ ಭಾರಿ ಲಾಭವಾಗಲಿದೆ ಎಂದು ತಿಳಿಸಿದರು. ಹೊಸ ಮುಖ್ಯಮಂತ್ರಿಯಾಗಿ ತಾವು ಕಂಡ 'ಮಿನಿ ಜಪಾನ್' ಕನಸನ್ನು ರಾಜ್ ಕೋಟ್ ಸಾಕಾರಗೊಳಿಸಿದೆ ಎಂದು ಪ್ರಧಾನಿಯವರು ಹೇಳಿದರು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರೂಪದಲ್ಲಿ, ರಾಜ್ ಕೋಟ್ ಗೆ ಶಕ್ತಿ ಕೇಂದ್ರ ದೊರೆತಿದೆ, ಅದು ಹೊಸ ಶಕ್ತಿ ಮತ್ತು ಹುಮ್ಮಸ್ಸನ್ನು ನೀಡುತ್ತದೆ ಎಂದು ಅವರು ಹೇಳಿದರು. 

ಇಂದು ಹಲವಾರು ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಸೌನಿ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಯೋಜನೆಗಳು ಪೂರ್ಣಗೊಳ್ಳುವುದರಿಂದ ಈ ಪ್ರದೇಶದ ಹಲವಾರು ಹಳ್ಳಿಗಳಿಗೆ ಕುಡಿಯಲು ಮತ್ತು ನೀರಾವರಿಗೆ ನೀರು ದೊರೆಯಲಿದೆ ಎಂದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ರಾಜ್ ಕೋಟ್ ಜನರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.

 

ಕಳೆದ 9 ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಪ್ರತಿಯೊಂದು ಸಾಮಾಜಿಕ ವರ್ಗ ಮತ್ತು ಪ್ರದೇಶದ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೆಲಸ ಕೈಗೊಂಡಿದೆ ಎಂದು ಪ್ರಧಾನಿಯವರು ತಿಳಿಸಿದರು. "ನಾವು 'ಸುಶಾಸನ್' ಅಥವಾ ಉತ್ತಮ ಆಡಳಿತದ ಭರವಸೆಯನ್ನು ನೀಡಿದ್ದೇವೆ. ನಾವು ಇಂದು ಅದನ್ನು ಅನುಸರಿಸುತ್ತಿದ್ದೇವೆ" ಎಂದು ಪ್ರಧಾನಿ ಹೇಳಿದರು. "ಬಡವರು, ದಲಿತರು, ಬುಡಕಟ್ಟು ಜನಾಂಗದವರು ಅಥವಾ ಹಿಂದುಳಿದ ವರ್ಗವರು ಯಾರೇ ಇರಲಿ, ನಾವು ಯಾವಾಗಲೂ ಅವರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು. ದೇಶದಲ್ಲಿ ಬಡತನದ ಮಟ್ಟವು ಅತ್ಯಂತ ವೇಗವಾಗಿ ಕುಸಿಯುತ್ತಿದೆ ಎಂದು ಒತ್ತಿಹೇಳಿದ ಪ್ರಧಾನಿ, ಕಳೆದ 5 ವರ್ಷಗಳಲ್ಲಿ 13.5 ಕೋಟಿ ನಾಗರಿಕರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂಬ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದರು. ಈ ಜನರು ದೇಶದಲ್ಲಿ ನವ-ಮಧ್ಯಮ ವರ್ಗವಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಹೇಳಿದರು. ಆದ್ದರಿಂದ, ನವ-ಮಧ್ಯಮ ಮತ್ತು ಮಧ್ಯಮ ವರ್ಗಗಳೆರಡನ್ನೂ ಮಧ್ಯಮ ವರ್ಗಕ್ಕೆ ಸೇರಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿಯವರು ಹೇಳಿದರು.

ಸಂಪರ್ಕದ ಬಗ್ಗೆ ಮಧ್ಯಮ ವರ್ಗದವರ ದೀರ್ಘಕಾಲೀಯ ಬೇಡಿಕೆಯ ಬಗ್ಗೆ ಪ್ರಧಾನಿಯವರು ಮಾತನಾಡಿ, ಸಂಪರ್ಕವನ್ನು ಸುಧಾರಿಸಲು ಕಳೆದ 9 ವರ್ಷಗಳಲ್ಲಿ ಕೈಗೊಂಡ ಕ್ರಮಗಳನ್ನು ಅವರು ಮನವರಿಕೆ ಮಾಡಿಕೊಟ್ಟರು. 2014ರಲ್ಲಿ, ಕೇವಲ 4 ನಗರಗಳು ಮೆಟ್ರೋ ಜಾಲವನ್ನು ಹೊಂದಿದ್ದವು, ಇಂದು ಮೆಟ್ರೋ ಜಾಲವು ಭಾರತದ 20 ಕ್ಕೂ ಹೆಚ್ಚು ನಗರಗಳಿಗೆ ವ್ಯಾಪಿಸಿದೆ. ವಂದೇ ಭಾರತ್ ರೈಲಿನಂತಹ ಆಧುನಿಕ ರೈಲುಗಳು 25 ಮಾರ್ಗಗಳಲ್ಲಿ ಚಲಿಸುತ್ತಿವೆ. 2014ರಲ್ಲಿ 70ರಷ್ಟಿದ್ದ ವಿಮಾನ ನಿಲ್ದಾಣಗಳು ಈ ಅವಧಿಯಲ್ಲಿ ದ್ವಿಗುಣಗೊಂಡಿದೆ. "ವಿಮಾನ ಸೇವೆಗಳ ವಿಸ್ತರಣೆಯು ಭಾರತದ ವಾಯುಯಾನ ಕ್ಷೇತ್ರಕ್ಕೆ ಹೊಸ ಪರಾಕಾಷ್ಠೆಯನ್ನು ನೀಡಿದೆ. ಭಾರತೀಯ ಕಂಪನಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಿಮಾನಗಳನ್ನು ಖರೀದಿಸುತ್ತಿವೆ." ವಿಮಾನಗಳನ್ನು ನಿರ್ಮಿಸುವ ದಿಕ್ಕಿನಲ್ಲಿ ಗುಜರಾತ್ ಮುಂದುವರಿಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

 

"ಸುಗಮ ಜೀವನ ಮತ್ತು ಜನತೆಯ ಜೀವನದ ಗುಣಮಟ್ಟವು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಹಿಂದೆ ಜನರು ಅನುಭವಿಸಿದ ಅನಾನುಕೂಲತೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆಸ್ಪತ್ರೆಗಳು ಮತ್ತು ಯುಟಿಲಿಟಿ ಪಾವತಿ ಕೇಂದ್ರಗಳಲ್ಲಿ ಉದ್ದನೆಯ ಸರತಿ ಸಾಲುಗಳು, ವಿಮೆ ಮತ್ತು ಪಿಂಚಣಿ ಸಂಬಂಧಿತ ಸಮಸ್ಯೆಗಳು ಮತ್ತು ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿನ ತೊಂದರೆಗಳನ್ನು ಉಲ್ಲೇಖಿಸಿದರು. ಈ ಎಲ್ಲಾ ಸಮಸ್ಯೆಗಳನ್ನು ಡಿಜಿಟಲ್ ಇಂಡಿಯಾ ಅಭಿಯಾನದ ಮೂಲಕ ನಿವಾರಿಸಲಾಗಿದೆ ಎಂದು ಅವರು ಹೇಳಿದರು. ತೆರಿಗೆ ರಿಟರ್ನ್ಸ್ ಸಲ್ಲಿಸಲು ಮೊಬೈಲ್ ಬ್ಯಾಂಕಿಂಗ್ ಮತ್ತು ಆನ್ ಲೈನ್ ಫೈಲಿಂಗ್ ಸುಲಭತೆಯನ್ನು ಪ್ರಸ್ತಾಪಿಸಿದ ಅವರು, ಅಲ್ಪಾವಧಿಯಲ್ಲಿ ರಿಟರ್ನ್ ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂಬ ವಿಚಾರವನ್ನು ಒತ್ತಿ ಹೇಳಿದರು.

ವಸತಿಯ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ನಾವು ಬಡವರ ವಸತಿಯ ಅಗತ್ಯಗಳನ್ನು ಪೂರೈಸಿದ್ದೇವೆ, ಮಧ್ಯಮ ವರ್ಗದವರ ಸ್ವಂತ ಮನೆಯ ಕನಸನ್ನು ಈಡೇರಿಸಿದ್ದೇವೆ" ಎಂದು ಹೇಳಿದರು. ಮಧ್ಯಮ ವರ್ಗದವರಿಗೆ ಪಿಎಂ ಆವಾಸ್ ಯೋಜನೆಯಡಿ 18 ಲಕ್ಷ ರೂ.ಗಳವರೆಗೆ ವಿಶೇಷ ಸಬ್ಸಿಡಿಯ ನೀಡಿಕೆಯನ್ನು ಅವರು ಉಲ್ಲೇಖಿಸಿದರು. ಗುಜರಾತ್ ನ 60 ಸಾವಿರ ಕುಟುಂಬಗಳು ಸೇರಿದಂತೆ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಇದರ ಪ್ರಯೋಜನ ಪಡೆದಿವೆ ಎಂದು ಅವರು ಮಾಹಿತಿ ನೀಡಿದರು.

ವಸತಿಯ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕಾನೂನಿನ ಅನುಪಸ್ಥಿತಿಯಿಂದಾಗಿ ಹಿಂದಿನ ಸರ್ಕಾರಗಳ ಅವಧಿಯಲ್ಲಿ ವಸತಿಯ ಹಕ್ಕುದಾರರಿಗೆ ಮನೆಯ ಸ್ವಾಧೀನತ್ವವನ್ನು ಪಡೆಯಲಾಗಿರಲಿಲ್ಲ ಎಂದು ಉಲ್ಲೇಖಿಸಿದರು. ಪ್ರಸ್ತುತ ಸರ್ಕಾರವು ರೇರಾ ಕಾನೂನನ್ನು ಜಾರಿಗೆ ತಂದು ಜನರ ಹಿತಾಸಕ್ತಿಗಳನ್ನು ರಕ್ಷಿಸಿದೆ ಎಂದು ಅವರು ಹೇಳಿದರು. "ಇಂದು, ರೇರಾ ಕಾನೂನು ಲಕ್ಷಾಂತರ ಜನರ ಹಣ ಲೂಟಿಯಾಗುವುದನ್ನು ತಡೆಯುತ್ತಿದೆ" ಎಂದು ಅವರು ಹೇಳಿದರು.

 

ಈ ಹಿಂದೆ ಹಣದುಬ್ಬರ ದರ ಶೇ.10ನ್ನು ತಲುಪಿತ್ತು ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕ ರೋಗ ಮತ್ತು ಯುದ್ಧದ ಹೊರತಾಗಿಯೂ ಪ್ರಸ್ತುತ ಸರ್ಕಾರ ಹಣದುಬ್ಬರವನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು. "ಇಂದು, ನಮ್ಮ ನೆರೆಯ ದೇಶಗಳಲ್ಲಿ ಹಣದುಬ್ಬರವು ಶೇಕಡಾ 25-30ರ ದರದಲ್ಲಿ ಹೆಚ್ಚುತ್ತಿದೆ. ಆದರೆ ಭಾರತದ ಸ್ಥಿತಿ ಹಾಗಿಲ್ಲ. ನಾವು ಹಣದುಬ್ಬರವನ್ನು ಪೂರ್ಣ ಸೂಕ್ಷ್ಮತೆಯಿಂದ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ಅದನ್ನು ಭವಿಷ್ಯದಲ್ಲಿಯೂ ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು.

ಬಡವರು ಮತ್ತು ಮಧ್ಯಮ ವರ್ಗದವರ ವೆಚ್ಚಗಳನ್ನು ಉಳಿಸುವುದರ ಜೊತೆಗೆ, ಇಂದಿನ ಸರ್ಕಾರವು ಮಧ್ಯಮ ವರ್ಗದವರಿಗೆ ಗರಿಷ್ಠ ಉಳಿತಾಯವನ್ನು ಖಾತ್ರಿಪಡಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 9 ವರ್ಷಗಳ ಹಿಂದೆ ವಾರ್ಷಿಕ 2 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು, ಆದರೆ ಇಂದು 7 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದರು. "ಇಂದು 7 ಲಕ್ಷ ರೂ.ಗಳ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ" ಎಂದು ಹೇಳಿದ ಪ್ರಧಾನಮಂತ್ರಿಯವರು, ಇದರಿಂದಾಗಿ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರತಿವರ್ಷ ಸಾವಿರಾರು ರೂಪಾಯಿಗಳು ಉಳಿಯುತ್ತಿದೆ ಎಂದು ಹೇಳಿದರು. ಸಣ್ಣ ಉಳಿತಾಯಗಳ ಮೇಲೆ ಹೆಚ್ಚಿನ ಬಡ್ಡಿ ಪಾವತಿ ಮತ್ತು ಇಪಿಎಫ್ಒಗೆ ಶೇಕಡಾ 8.25ರಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಇಂದಿನ ಸರ್ಕಾರದ ನೀತಿಗಳು ನಾಗರಿಕರಿಗೆ ಹೇಗೆ ಹಣವನ್ನು ಉಳಿಸುತ್ತಿವೆ ಎಂಬುದನ್ನು ವಿವರಿಸಲು ಮೊಬೈಲ್ ಫೋನ್ ಬಳಕೆಯ ವೆಚ್ಚದ ಉದಾಹರಣೆಯನ್ನು ಪ್ರಧಾನಿಯವರು ನೀಡಿದರು. 2014ರಲ್ಲಿ 1 ಜಿಬಿ ಡೇಟಾದ ಬೆಲೆ 300 ರೂ. ಆಗಿತ್ತು. ಇಂದು, ಪ್ರತಿ ವ್ಯಕ್ತಿಯು ತಿಂಗಳಿಗೆ ಸರಾಸರಿ 20 ಜಿಬಿ ಡೇಟಾವನ್ನು ಬಳಸುತ್ತಾರೆ. ಇದು ಸರಾಸರಿ ಪ್ರತಿ ನಾಗರಿಕರಿಗೆ ತಿಂಗಳಿಗೆ 5000 ರೂ.ಗಿಂತ ಹೆಚ್ಚು ಉಳಿತಾಯವಾಗಿದೆ ಎಂದು ಅವರು ಹೇಳಿದರು.

 

ಜನೌಷಧಿ ಕೇಂದ್ರಗಳು ಅಗ್ಗದ ಬೆಲೆಯಲ್ಲಿ ಔಷಧಿಗಳನ್ನು ನೀಡುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕಾದವರಿಗೆ ಇದು ವರದಾನವಾಗಿದೆ. ಈ ಕೇಂದ್ರಗಳು ಬಡವರು ಮತ್ತು ಮಧ್ಯಮ ವರ್ಗದವರಿಗೆ ಸುಮಾರು 20,000 ಕೋಟಿ ರೂ.ಗಳನ್ನು ಉಳಿಸಿದೆ ಎಂದು ತಿಳಿಸಿದರು. "ಬಡವರು ಮತ್ತು ಮಧ್ಯಮ ವರ್ಗದವರಿಗೆ ಸೂಕ್ಷ್ಮ ಸರ್ಕಾರವು ಈ ರೀತಿ ಕಾರ್ಯನಿರ್ವಹಿಸುತ್ತದೆ"  ಎಂದು ಅವರು ಹೇಳಿದರು.

ಗುಜರಾತ್ ಮತ್ತು ಸೌರಾಷ್ಟ್ರದ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಂವೇದನಾಶೀಲತೆಯಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸೌನಿ ಯೋಜನೆಯು ಈ ಪ್ರದೇಶದ ನೀರಿನ ಅವಶ್ಯಕತೆಗೆ ತಂದ ಬದಲಾವಣೆಯನ್ನು ಅವರು ಉಲ್ಲೇಖಿಸಿದರು. "ಸೌರಾಷ್ಟ್ರದಲ್ಲಿ ಡಜನ್ ಗಟ್ಟಲೆ ಅಣೆಕಟ್ಟುಗಳು ಮತ್ತು ಸಾವಿರಾರು ಚೆಕ್ ಡ್ಯಾನ್ ಗಳು ಇಂದು ಜನತೆಯ ನೀರಿನ ಮೂಲಗಳಾಗಿವೆ. 'ಹರ್ ಘರ್ ಜಲ್' ಯೋಜನೆಯ ಅಡಿಯಲ್ಲಿ ಗುಜರಾತ್ ನ ಕೋಟ್ಯಂತರ ಕುಟುಂಬಗಳು ಈಗ ನಲ್ಲಿ ನೀರನ್ನು ಪಡೆಯುತ್ತಿವೆ" ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಕಳೆದ 9 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾದ ಈ ಮಾದರಿಯ ಆಡಳಿತವು ಸಮಾಜದ ಪ್ರತಿಯೊಂದು ವರ್ಗದ ಜನತೆಯ ಅಗತ್ಯತೆಗಳು ಮತ್ತು ಆಕಾಂಕ್ಷೆಗಳಿಗೆ ಬದ್ಧವಾಗಿದೆ ಎಂದರು. "ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಇದು ನಮ್ಮ ಮಾರ್ಗವಾಗಿದೆ. ಇದೇ ಹಾದಿಯಲ್ಲಿ ನಡೆಯುವ ಮೂಲಕ ನಾವು ಅಮೃತಕಾಲದ ಸಂಕಲ್ಪಗಳನ್ನು ಪೂರೈಸುತ್ತೇವೆ" ಎಂದು ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಗುಜರಾತ್ ರಾಜ್ಯದ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಸಂಸತ್ ಸದಸ್ಯ ಶ್ರೀ ಸಿ. ಆರ್. ಪಾಟೀಲ್, ಗುಜರಾತ್ ಸರ್ಕಾರ ಮತ್ತು ಗುಜರಾತ್ ವಿಧಾನಸಭೆಯ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:
ರಾಜ್ ಕೋಟ್ ನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯೊಂದಿಗೆ ದೇಶಾದ್ಯಂತ ವಾಯು ಸಂಪರ್ಕವನ್ನು ಹೆಚ್ಚಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಉತ್ತೇಜನ ದೊರೆತಿದೆ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಒಟ್ಟು 2500 ಎಕರೆ ಪ್ರದೇಶದಲ್ಲಿ 1400 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ವಿಮಾನ ನಿಲ್ದಾಣವು ಆಧುನಿಕ ತಂತ್ರಜ್ಞಾನ ಮತ್ತು ಸುಸ್ಥಿರ ವೈಶಿಷ್ಟ್ಯಗಳ ಸಂಯೋಜನೆಯನ್ನು ಹೊಂದಿದೆ. ಟರ್ಮಿನಲ್ ಕಟ್ಟಡವು ಗ್ರಿಹ-4 ಅನುಸರಣೆಯ (GRIHA, ಗ್ರೀನ್ ರೇಟಿಂಗ್ ಫಾರ್ ಇಂಟಿಗ್ರೇಟೆಡ್ ಹ್ಯಾಬಿಟೇಟ್ ಅಸೆಸ್ಮೆಂಟ್) ಮತ್ತು ಡಬಲ್ ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಸ್ಕೈಲೈಟ್ ಗಳು, ಎಲ್ಇಡಿ ಲೈಟಿಂಗ್, ಲೋ ಹೀಟ್ ಗೇನ್ ಗ್ಲೇಸಿಂಗ್ ಮುಂತಾದ ವಿವಿಧ ಸುಸ್ಥಿರ ವೈಶಿಷ್ಟ್ಯಗಳನ್ನು ಹೊಂದಿದ ಹೊಸ ಟರ್ಮಿನಲ್ ಕಟ್ಟಡವನ್ನು ((NITB) ಹೊಂದಿದೆ.

ರಾಜ್ ಕೋಟ್ ನ ಸಾಂಸ್ಕೃತಿಕ ಅಭಿವೃದ್ದಿಯು ವಿಮಾನ ನಿಲ್ದಾಣದ ಟರ್ಮಿನಲ್ ನ ವಿನ್ಯಾಸಕ್ಕೆ ಸ್ಫೂರ್ತಿ ನೀಡಿದೆ. ಲಿಪ್ಪಾನ್ ಕಲೆಯಿಂದ ದಾಂಡಿಯಾ ನೃತ್ಯದವರೆಗೆ ಎಲ್ಲಾ ಕಲಾ ಪ್ರಕಾರಗಳನ್ನು ಕ್ರಿಯಾತ್ಮಕವಾಗಿ ಬಾಹ್ಯ ಮುಂಭಾಗ ಮತ್ತು ಭವ್ಯವಾದ ಒಳಾಂಗಣಗಳಲ್ಲಿ ಚಿತ್ರಿಸಲಾಗಿದೆ. ಈ ವಿಮಾನ ನಿಲ್ದಾಣವು ಸ್ಥಳೀಯ ವಾಸ್ತುಶಿಲ್ಪದ ಪರಂಪರೆಯ ಸಾರಾಂಶವಾದಿದೆ. ಗುಜರಾತ್ ನ ಕಾಥೇವಾಡ ಪ್ರದೇಶದ ಕಲೆ ಮತ್ತು ನೃತ್ಯ ಪ್ರಕಾರಗಳ ಸಾಂಸ್ಕೃತಿಕ ವೈಭವವನ್ನು ಇದು ಪ್ರತಿಬಿಂಬಿಸುತ್ತದೆ.  ರಾಜ್ ಕೋಟ್ ನ ಹೊಸ ವಿಮಾನ ನಿಲ್ದಾಣವು ರಾಜ್ ಕೋಟ್ ನ ಸ್ಥಳೀಯ ಆಟೋಮೊಬೈಲ್ ಉದ್ಯಮದ ಅಭಿವೃದ್ಧಿಗೆ ಕೊಡುಗೆ ನೀಡುವುದಲ್ಲದೆ, ಗುಜರಾತ್ ನಾದ್ಯಂತ ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಉತ್ತೇಜಿಸುತ್ತದೆ.

 

ಪ್ರಧಾನಮಂತ್ರಿಯವರು 860 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಸೌನಿ ಯೋಜನೆಯ ಲಿಂಕ್ 3ರ ಪ್ಯಾಕೇಜ್ 8 ಮತ್ತು 9 ನೀರಾವರಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಸೌರಾಷ್ಟ್ರ ಪ್ರದೇಶಕ್ಕೆ ಕುಡಿಯುವ ನೀರಿನ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ದ್ವಾರಕಾ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯವನ್ನು ಉತ್ತಮೀಕರಿಸುವುದರಿಂದ ಪೈಪ್ ಲೈನ್ ಮೂಲಕ ಹಳ್ಳಿಗಳಿಗೆ ಸಾಕಷ್ಟು ಮತ್ತು ಕುಡಿಯುವ ನೀರನ್ನು ಒದಗಿಸಲು ಸಹಾಯ ಮಾಡುತ್ತದೆ. ಈಗ ಕೈಗೊಳ್ಳಲಾಗುತ್ತಿರುವ ಇತರ ಯೋಜನೆಗಳಲ್ಲಿ ಉಪರ್ಕೋಟ್ ಕೋಟೆಯ ಸಂರಕ್ಷಣೆ, ಪುನಃಸ್ಥಾಪನೆ ಮತ್ತು ಅಭಿವೃದ್ಧಿಯ ಹಂತ 1 ಮತ್ತು 2; ನೀರು ಸಂಸ್ಕರಣಾ ಘಟಕ ನಿರ್ಮಾಣ; ಒಳಚರಂಡಿ ಸಂಸ್ಕರಣಾ ಘಟಕ; ಫ್ಲೈಓವರ್ ಸೇತುವೆ, ಇತ್ಯಾದಿಗಳು ಸೇರಿವೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi