ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ತಿಂಗಳಿಡೀ ಆಯೋಜಿಸಲಾಗಿರುವ 'ಕಾಶಿ ತಮಿಳು ಸಂಗಮಂ' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಉದ್ದೇಶವೆಂದರೆ ದೇಶದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಕಲಿಕಾ ಕ್ಷೇತ್ರಗಳಲ್ಲಿ ಎರಡು ತಾಣಗಳಾದ ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಂಬಂಧಗಳನ್ನು ಆಚರಿಸುವುದು, ಪುನರುಚ್ಚರಿಸುವುದು ಮತ್ತು ಮರುಶೋಧಿಸುವುದಾಗಿದೆ. ತಮಿಳುನಾಡಿನಿಂದ 2500ಕ್ಕೂ ಹೆಚ್ಚು ಪ್ರತಿನಿಧಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 'ತಿರುಕ್ಕುರಳ್' ಪುಸ್ತಕವನ್ನು ಮತ್ತು ಅದರ 13 ಭಾಷೆಗಳ ಅನುವಾದವನ್ನು ಬಿಡುಗಡೆ ಮಾಡಿದರು. ಆರತಿಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರು ಸಾಕ್ಷಿಯಾದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವದ ಅತ್ಯಂತ ಪ್ರಾಚೀನ ಜ್ವಲಂತ ನಗರದಲ್ಲಿ ನಡೆಯುತ್ತಿರುವ ಸಮಾವೇಶದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನದಿಗಳ ಸಂಗಮವೇ ಆಗಿರಲಿ, ಸಿದ್ಧಾಂತವೇ ಆಗಿರಲಿ, ವಿಜ್ಞಾನವೇ ಆಗಿರಲಿ ಅಥವಾ ಜ್ಞಾನವೇ ಆಗಿರಲಿ ದೇಶದಲ್ಲಿ ಸಂಗಮಗಳ ಮಹತ್ವ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರತಿಯೊಂದು ಸಂಗಮವನ್ನು ಆಚರಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ ಎಂದು ಹೇಳಿದರು. ವಾಸ್ತವವಾಗಿ, ಇದು ಭಾರತದ ಶಕ್ತಿ ಮತ್ತು ಗುಣಲಕ್ಷಣಗಳ ಆಚರಣೆಯಾಗಿದೆ, ಇದರಿಂದಾಗಿ ಕಾಶಿ-ತಮಿಳು ಸಂಘವನ್ನು ಅನನ್ಯವಾಗಿಸುತ್ತದೆ ಎಂದು ಅವರು ಹೇಳಿದರು.
ಕಾಶಿ ಮತ್ತು ತಮಿಳುನಾಡು ನಡುವಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಒಂದು ಕಡೆ ಕಾಶಿ ಭಾರತದ ಸಾಂಸ್ಕೃತಿಕ ರಾಜಧಾನಿಯಾದರೆ, ತಮಿಳುನಾಡು ಮತ್ತು ತಮಿಳು ಸಂಸ್ಕೃತಿ ಭಾರತದ ಪ್ರಾಚೀನತೆ ಮತ್ತು ಹೆಮ್ಮೆಯ ಕೇಂದ್ರವಾಗಿದೆ ಎಂದರು. ಗಂಗಾ ಮತ್ತು ಯಮುನಾ ನದಿಗಳ ಸಂಗಮಕ್ಕೆ ಒಂದು ಹೋಲಿಕೆಯನ್ನು ರಚಿಸಿದ ಪ್ರಧಾನಮಂತ್ರಿಯವರು, ಕಾಶಿ-ತಮಿಳು ಸಂಗಮವು ಅಷ್ಟೇ ಪವಿತ್ರವಾಗಿದ್ದು, ಅದು ಅನಂತ ಅವಕಾಶಗಳು ಮತ್ತು ಶಕ್ತಿಯನ್ನು ತನ್ನಲ್ಲಿಯೇ ಆವರಿಸಿಕೊಂಡಿದೆ ಎಂದರು. ಈ ಮಹತ್ವದ ಸಭೆಗಾಗಿ ಶಿಕ್ಷಣ ಸಚಿವಾಲಯ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು ಮತ್ತು ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಐಐಟಿ, ಮದ್ರಾಸ್ ಮತ್ತು ಬಿಎಚ್,ಯು ನಂತಹ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿಯವರು ವಿಶೇಷವಾಗಿ ಕಾಶಿ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ಧನ್ಯವಾದ ಅರ್ಪಿಸಿದರು.
ಕಾಶಿ ಮತ್ತು ತಮಿಳುನಾಡು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಕಾಲಾತೀತ ಕೇಂದ್ರಗಳಾಗಿವೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಸಂಸ್ಕೃತ ಮತ್ತು ತಮಿಳು ಎರಡೂ ಅಸ್ತಿತ್ವದಲ್ಲಿರುವ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿವೆ ಎಂದು ಅವರು ಮಾಹಿತಿ ನೀಡಿದರು. "ಕಾಶಿಯಲ್ಲಿ ನಮಗೆ ಬಾಬಾ ವಿಶ್ವನಾಥನಿದ್ದರೆ, ತಮಿಳುನಾಡಿನಲ್ಲಿ ರಾಮೇಶ್ವರಂನ ಆಶೀರ್ವಾದವಿದೆ. ಕಾಶಿ ಮತ್ತು ತಮಿಳುನಾಡು ಎರಡೂ ಶಿವನಲ್ಲಿ ಮುಳುಗಿವೆ. ಅದು ಸಂಗೀತವೇ ಆಗಿರಲಿ, ಸಾಹಿತ್ಯ ಅಥವಾ ಕಲೆಯೇ ಆಗಿರಲಿ, ಕಾಶಿ ಮತ್ತು ತಮಿಳುನಾಡು ಯಾವಾಗಲೂ ಕಲೆಯ ಮೂಲಗಳಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ಎರಡೂ ಸ್ಥಳಗಳನ್ನು ಭಾರತದ ಅತ್ಯುತ್ತಮ ಆಚಾರ್ಯರ ಜನ್ಮಸ್ಥಳ ಮತ್ತು ಕಾರ್ಯಸ್ಥಳ ಎಂದು ಗುರುತಿಸಲಾಗಿದೆ ಎಂದರು. ಕಾಶಿ ಮತ್ತು ತಮಿಳುನಾಡಿನಲ್ಲಿ ಇದೇ ರೀತಿಯ ಚೈತನ್ಯವನ್ನು ಅನುಭವಿಸಬಹುದು ಎಂದು ಅವರು ಒತ್ತಿ ಹೇಳಿದರು. "ಇಂದಿಗೂ ಕಾಶಿ ಯಾತ್ರೆಯ ಪ್ರಸ್ತುತತೆಯು ಸಾಂಪ್ರದಾಯಿಕ ತಮಿಳು ವಿವಾಹ ಮೆರವಣಿಗೆಯ ಸಮಯದಲ್ಲಿ ಬರುತ್ತದೆ" ಎಂದು ಅವರು ಹೇಳಿದರು. ತಮಿಳುನಾಡಿನಿಂದ ಕಾಶಿಯ ಬಗ್ಗೆ ಕೊನೆಯಿಲ್ಲದ ಪ್ರೀತಿಯು ನಮ್ಮ ಪೂರ್ವಜರ ಜೀವನ ವಿಧಾನವಾದ ಏಕ ಭಾರತ ಶ್ರೇಷ್ಠ ಭಾರತದ ಭಾವನೆಯನ್ನು ಸೂಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಕಾಶಿಯ ಅಭಿವೃದ್ಧಿಗೆ ತಮಿಳುನಾಡಿನ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತಮಿಳುನಾಡು ಮೂಲದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಬಿಎಚ್.ಯುನ ಕುಲಪತಿಯಾಗಿದ್ದರು ಎಂಬುದನ್ನು ಸ್ಮರಿಸಿದರು. ತಮಿಳುನಾಡಿನಲ್ಲಿ ತಮ್ಮ ಬೇರುಗಳನ್ನು ಹೊಂದಿದ್ದರೂ ಕಾಶಿಯಲ್ಲಿ ವಾಸಿಸುತ್ತಿದ್ದ ವೈದಿಕ ವಿದ್ವಾಂಸ ರಾಜೇಶ್ವರ್ ಶಾಸ್ತ್ರಿಯವರನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕಾಶಿಯ ಹನುಮಾನ್ ಘಾಟ್ ನಲ್ಲಿ ವಾಸಿಸುತ್ತಿದ್ದ ಪಟ್ಟವೀರಮ್ ಶಾಸ್ತ್ರಿ ಅವರನ್ನು ಕಾಶಿಯ ಜನರು ಸಹ ಮರೆಯುವುದಿಲ್ಲ ಎಂದು ಅವರು ಹೇಳಿದರು. ಹರಿಶ್ಚಂದ್ರ ಘಾಟ್ ನ ದಡದಲ್ಲಿರುವ ತಮಿಳಿನ ದೇವಾಲಯವಾದ ಕಾಶಿ ಕಾಮ ಕೋಟೇಶ್ವರ ಪಂಚಾಯತ್ ಮಂದಿರ ಮತ್ತು ಕೇದಾರ್ ಘಾಟ್ ನಲ್ಲಿರುವ ಇನ್ನೂರು ವರ್ಷಗಳಷ್ಟು ಹಳೆಯದಾದ ಕುಮಾರ ಸ್ವಾಮಿ ಮಠ ಮತ್ತು ಮಾರ್ಕಂಡೆ ಆಶ್ರಮದ ಬಗ್ಗೆ ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ತಮಿಳುನಾಡಿನ ಅನೇಕ ಜನರು ಕೇದಾರ್ ಘಾಟ್ ಮತ್ತು ಹನುಮಾನ್ ಘಾಟ್ ದಡದ ಬಳಿ ವಾಸಿಸುತ್ತಿದ್ದಾರೆ ಮತ್ತು ಹಲವಾರು ತಲೆಮಾರುಗಳಿಂದ ಕಾಶಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಮಹಾನ್ ಕವಿ ಮತ್ತು ಕ್ರಾಂತಿಕಾರಿ ಶ್ರೀ ಸುಬ್ರಮಣ್ಯ ಭಾರತಿ ಅವರು ತಮಿಳುನಾಡು ಮೂಲದವರಾಗಿದ್ದರೂ ಕಾಶಿಯಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದರು ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಸುಬ್ರಮಣ್ಯಭಾರತಿಗೆ ಸಮರ್ಪಿತವಾದ ಪೀಠವನ್ನು ಸ್ಥಾಪಿಸುವಲ್ಲಿ ಬಿಎಚ್.ಯು ಹೊಂದಿರುವ ಹೆಮ್ಮೆ ಮತ್ತು ಸವಲತ್ತುಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಆಜಾದಿ ಕಾ ಅಮೃತ್ ಕಾಲ್ ಸಮಯದಲ್ಲಿ ಕಾಶಿ-ತಮಿಳು ಸಂಗಮಂ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. "ಅಮೃತ ಕಾಲದಲ್ಲಿ, ನಮ್ಮ ನಿರ್ಣಯಗಳು ಇಡೀ ದೇಶದ ಏಕತೆಯಿಂದ ನೆರವೇರುತ್ತವೆ" ಎಂದು ಅವರು ಹೇಳಿದರು. ಭಾರತವು ಸಾವಿರಾರು ವರ್ಷಗಳಿಂದ ನೈಸರ್ಗಿಕ ಸಾಂಸ್ಕೃತಿಕ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು. ಬೆಳಗ್ಗೆ ಎದ್ದು 12 ಜ್ಯೋತಿರ್ಲಿಂಗಗಳನ್ನು ಸ್ಮರಿಸುವ ಸಂಪ್ರದಾಯದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ದೇಶದ ಆಧ್ಯಾತ್ಮಿಕ ಏಕತೆಯನ್ನು ಸ್ಮರಿಸುವ ಮೂಲಕ ನಾವು ನಮ್ಮ ದಿನವನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು. ಸಾವಿರಾರು ವರ್ಷಗಳ ಈ ಸಂಪ್ರದಾಯ ಮತ್ತು ಪರಂಪರೆಯನ್ನು ಬಲಪಡಿಸುವ ಪ್ರಯತ್ನಗಳ ಕೊರತೆಯ ಬಗ್ಗೆಯೂ ಶ್ರೀ ಮೋದಿ ವಿಷಾದಿಸಿದರು. ಕಾಶಿ-ತಮಿಳು ಸಂಗಮಂ ಇಂದು ಈ ನಿರ್ಣಯಕ್ಕೆ ವೇದಿಕೆಯಾಗಲಿದೆ ಮತ್ತು ನಮ್ಮ ಕರ್ತವ್ಯಗಳನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಶಕ್ತಿಯ ಮೂಲವಾಗಿದೆ ಎಂದು ಅವರು ಹೇಳಿದರು.
ಭಾಷೆಯನ್ನು ಎಲ್ಲೆಮೀರಿ ಮತ್ತು ಬೌದ್ಧಿಕ ಅಂತರವನ್ನು ಮೀರಿದ ಈ ಮನೋಭಾವದ ಮೂಲಕವೇ ಸ್ವಾಮಿ ಕುಮಾರ ಗುರುಪರ್ ಅವರು ಕಾಶಿಗೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕಾಶಿಯಲ್ಲಿ ಕೇದಾರೇಶ್ವರ ಮಂದಿರವನ್ನು ನಿರ್ಮಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ನಂತರ, ಅವರ ಶಿಷ್ಯರು ಕಾವೇರಿ ನದಿಯ ದಡದಲ್ಲಿರುವ ತಂಜಾವೂರಿನಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ನಿರ್ಮಿಸಿದರು. ತಮಿಳು ರಾಜ್ಯದ ಗೀತೆಯನ್ನು ಬರೆದ ಮನೋನ್ಮಣಿಯಂ ಸುಂದರನಾರ್ ಅವರಂತಹ ವ್ಯಕ್ತಿಗಳನ್ನು ಉಲ್ಲೇಖಿಸುವ ಮೂಲಕ ತಮಿಳು ವಿದ್ವಾಂಸರು ಮತ್ತು ಕಾಶಿ ನಡುವಿನ ಸಂಬಂಧವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು ಮತ್ತು ಕಾಶಿಯೊಂದಿಗೆ ತಮ್ಮ ಗುರುವಿನ ಸಂಬಂಧವನ್ನು ಉಲ್ಲೇಖಿಸಿದರು. ಉತ್ತರ ಮತ್ತು ದಕ್ಷಿಣವನ್ನು ಬೆಸೆಯುವಲ್ಲಿ ರಾಜಾಜಿಯವರು ರಚಿಸಿದ ರಾಮಾಯಣ ಮತ್ತು ಮಹಾಭಾರತದ ಪಾತ್ರವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. "ರಾಮಾನುಜಾಚಾರ್ಯರು, ಶಂಕರಾಚಾರ್ಯರು, ರಾಜಾಜಿ ಅವರಂತಹ ದಕ್ಷಿಣ ಭಾರತದ ವಿದ್ವಾಂಸರನ್ನು ಸರ್ವಪಲ್ಲಿ ರಾಧಾಕೃಷ್ಣನ್ ವರೆಗೆ ಅರ್ಥಮಾಡಿಕೊಳ್ಳದೆ, ನಾವು ಭಾರತೀಯ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ನನ್ನ ಅನುಭವ" ಎಂದು ಶ್ರೀ ಮೋದಿ ಹೇಳಿದರು.
'ಪಂಚ ಪ್ರಾಣ'ದ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದರು. ವಿಶ್ವದ ಅತ್ಯಂತ ಹಳೆಯ ಜೀವಂತ ಭಾಷೆಗಳಲ್ಲಿ ಒಂದಾದ ತಮಿಳು ಹೊಂದಿದ್ದರೂ, ಅದನ್ನು ಸಂಪೂರ್ಣವಾಗಿ ಗೌರವಿಸುವಲ್ಲಿ ನಮಗೆ ಕೊರತೆಯಿದೆ ಎಂದು ಅವರು ಹೇಳಿದರು. "ತಮಿಳಿನ ಪರಂಪರೆಯನ್ನು ಉಳಿಸಿ ಅದನ್ನು ಶ್ರೀಮಂತಗೊಳಿಸುವುದು 130 ಕೋಟಿ ಭಾರತೀಯರ ಜವಾಬ್ದಾರಿಯಾಗಿದೆ. ನಾವು ತಮಿಳನ್ನು ನಿರ್ಲಕ್ಷಿಸಿದರೆ ನಾವು ರಾಷ್ಟ್ರಕ್ಕೆ ದೊಡ್ಡ ಅಪಚಾರವನ್ನು ಮಾಡುತ್ತೇವೆ ಮತ್ತು ನಾವು ತಮಿಳನ್ನು ನಿರ್ಬಂಧಗಳಲ್ಲಿ ಸೀಮಿತಗೊಳಿಸಿದರೆ ನಾವು ಅದಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತೇವೆ. ಭಾಷಾವಾರು ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು ಮತ್ತು ಭಾವನಾತ್ಮಕ ಏಕತೆಯನ್ನು ಸ್ಥಾಪಿಸಲು ನಾವು ನೆನಪಿನಲ್ಲಿಡಬೇಕು", ಎಂದು ಪ್ರಧಾನಮಂತ್ರಿ ಹೇಳಿದರು.
ಸಂಗಮಂ ಎಂಬುದು ಮಾತುಗಳಿಗಿಂತ ಹೆಚ್ಚಿನದನ್ನು ಅನುಭವಿಸುವ ವಿಷಯವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸ್ಮರಣೀಯ ಆತಿಥ್ಯವನ್ನು ನೀಡುವಲ್ಲಿ ಕಾಶಿಯ ಜನರು ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ತಮಿಳುನಾಡು ಮತ್ತು ಇತರ ದಕ್ಷಿಣ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ದೇಶದ ಇತರ ಭಾಗಗಳಿಂದ ಯುವಕರು ಭೇಟಿ ನೀಡುತ್ತಾರೆ ಮತ್ತು ಅಲ್ಲಿನ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿಯವರು ಆಶಯ ವ್ಯಕ್ತಪಡಿಸಿದರು. ಈ ಸಂಗಮಂನ ಲಾಭವನ್ನು ಸಂಶೋಧನೆಯ ಮೂಲಕ ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಮತ್ತು ಈ ಬೀಜವು ದೈತ್ಯ ವೃಕ್ಷವಾಗಬೇಕು ಎಂದು ಪ್ರಧಾನ ಮಂತ್ರಿ ಅವರು ಮಾತು ಮುಗಿಸಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್, ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್, ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಸಂಸದರಾದ ಶ್ರೀ ಇಳಯರಾಜಾ ಮೊದಲಾದವರು ಉಪಸ್ಥಿತರಿದ್ದರು.
ಹಿನ್ನೆಲೆ
'ಏಕ ಭಾರತ ಶ್ರೇಷ್ಠ ಭಾರತ' ಕಲ್ಪನೆಯನ್ನು ಉತ್ತೇಜಿಸುವುದು ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ನಿರ್ದೇಶಿತವಾದ ಸರ್ಕಾರದ ಪ್ರಮುಖ ಗಮನ ಸೆಳೆಯುವ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಮತ್ತೊಂದು ಉಪಕ್ರಮವಾಗಿ, ಕಾಶಿ (ವಾರಣಾಸಿ) ನಲ್ಲಿ 'ಕಾಶಿ ತಮಿಳು ಸಂಗಮಂ' ಎಂಬ ಒಂದು ತಿಂಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದ ಉದ್ದೇಶವೆಂದರೆ ದೇಶದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಕಲಿಕಾ ಕ್ಷೇತ್ರಗಳಲ್ಲಿ ಎರಡು ತಾಣಗಳಾಗಿರುವ ತಮಿಳುನಾಡು ಮತ್ತು ಕಾಶಿ ನಡುವಿನ ಹಳೆಯ ಸಂಬಂಧಗಳನ್ನು ಆಚರಿಸುವುದು, ಪುನರುಚ್ಚರಿಸುವುದು ಮತ್ತು ಮರುಶೋಧಿಸುವುದು -. ವಿದ್ವಾಂಸರು, ವಿದ್ಯಾರ್ಥಿಗಳು, ದಾರ್ಶನಿಕರು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರು ಸೇರಿದಂತೆ ಎರಡೂ ಪ್ರದೇಶಗಳ ಜನರು ಒಗ್ಗೂಡಲು, ತಮ್ಮ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ರೂಢಿಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರರ ಅನುಭವಗಳಿಂದ ಕಲಿಯಲು ಜೀವನದ ಎಲ್ಲಾ ಸ್ತರಗಳ ಜನರಿಗೆ ಅವಕಾಶವನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ತಮಿಳುನಾಡಿನಿಂದ 25೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ. ಒಂದೇ ರೀತಿಯ ವ್ಯಾಪಾರ, ವೃತ್ತಿ ಮತ್ತು ಆಸಕ್ತಿಯ ಸ್ಥಳೀಯ ಜನರೊಂದಿಗೆ ಸಂವಹನ ನಡೆಸಲು ಅವರು ವಿಚಾರ ಸಂಕಿರಣಗಳು, ತಾಣಗಳ ಭೇಟಿ ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ. ಎರಡೂ ಪ್ರದೇಶಗಳ ಕೈಮಗ್ಗಗಳು, ಕರಕುಶಲ ವಸ್ತುಗಳು, ಒಡಿಒಪಿ ಉತ್ಪನ್ನಗಳು, ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಪಾಕಪದ್ಧತಿ, ಕಲಾ ಪ್ರಕಾರಗಳು, ಇತಿಹಾಸ, ಪ್ರವಾಸಿ ಸ್ಥಳಗಳು ಇತ್ಯಾದಿಗಳ ಒಂದು ತಿಂಗಳ ಕಾಲ ಕಾಶಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಪ್ರಯತ್ನವು ಭಾರತೀಯ ಜ್ಞಾನ ವ್ಯವಸ್ಥೆಗಳ ಸಂಪತ್ತನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಎನ್ಇಪಿ 2020 ರ ಆದ್ಯತೆಗಳಿಗೆ ಅನುಗುಣವಾಗಿದೆ. ಐಐಟಿ ಮದ್ರಾಸ್ ಮತ್ತು ಬಿಎಚ್.ಯು ಈ ಕಾರ್ಯಕ್ರಮದ ಎರಡು ಅನುಷ್ಠಾನ ಸಂಸ್ಥೆಗಳಾಗಿವೆ.
Kashi-Tamil Sangamam is exceptional. It is a celebration of India's diversity. pic.twitter.com/gX4495ghod
— PMO India (@PMOIndia) November 19, 2022
A special connect... pic.twitter.com/WBYRwNwqet
— PMO India (@PMOIndia) November 19, 2022
Kashi and Tamil Nadu... They are timeless centers of our culture and civilization. pic.twitter.com/Pn4GDt6gMf
— PMO India (@PMOIndia) November 19, 2022
India believes in the mantra of ‘सं वो मनांसि जानताम्’ pic.twitter.com/R0v4wPCRxn
— PMO India (@PMOIndia) November 19, 2022
Several scholars from the South have made invaluable contributions towards enriching our insights about India. pic.twitter.com/835OjPUVdc
— PMO India (@PMOIndia) November 19, 2022
It is the collective responsibility of 130 crore Indians to preserve the rich Tamil heritage. pic.twitter.com/rTDHEsLTpx
— PMO India (@PMOIndia) November 19, 2022