ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಭಾರತ್ ಮಂಟಪ’ದಲ್ಲಿ ʻಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಪಾಲುದಾರಿಕೆʼ(ಜಿಪಿಎಐ) ವಾರ್ಷಿಕ ಶೃಂಗಸಭೆಯನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ʻಗ್ಲೋಬಲ್ ಎಐ ಎಕ್ಸ್‌ಪೋʼ ವಸ್ತು ಪ್ರದರ್ಶನದಲ್ಲಿ ಹೆಜ್ಜೆ ಹಾಕಿ, ಪರಿಶೀಲಿಸಿದರು. ʻಜಿಪಿಎಐʼ ಎಂಬುದು ಬಹು-ಮಧ್ಯಸ್ಥಗಾರರ ಉಪಕ್ರಮವಾಗಿದೆ. 29 ಸದಸ್ಯ ರಾಷ್ಟ್ರಗಳು ಎಐ-ಸಂಬಂಧಿತ ಆದ್ಯತೆಗಳ ಮೇಲೆ ಅತ್ಯಾಧುನಿಕ ಸಂಶೋಧನೆ ಮತ್ತು ಅನ್ವಯಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಕೃತಕ ಬುದ್ಧಿಮತ್ತೆಯಲ್ಲಿ ಸಿದ್ಧಾಂತ ಮತ್ತು ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. 2024ರಲ್ಲಿ ಭಾರತವು ʻಜಿಪಿಎಐʼ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಲಿದೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಡೀ ಜಗತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಚರ್ಚಿಸುತ್ತಿರುವ ಸಮಯದಲ್ಲಿ ಮುಂದಿನ ವರ್ಷ ಭಾರತವು ʻಜಿಪಿಎಐʼ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹೊರಹೊಮ್ಮುತ್ತಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಪ್ರತಿ ರಾಷ್ಟ್ರದ ಮೇಲೆ ಇರಬೇಕಾದ ಜವಾಬ್ದಾರಿಯನ್ನು ಒತ್ತಿಹೇಳಿದರು. ʻಎಐʼನ ವಿವಿಧ ಉದ್ಯಮ ನಾಯಕರೊಂದಿಗೆ ಸಂವಾದ ನಡೆಸಿದ್ದನ್ನು ಮತ್ತು ʻಜಿಪಿಎಐʼ ಶೃಂಗಸಭೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದನ್ನು ಸ್ಮರಿಸಿದರು. ಕೃತಕ ಬುದ್ಧಿಮತ್ತೆಯು ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಪ್ರತಿಯೊಂದು ದೇಶದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಪ್ರಧಾನಿಯವರು, ಇದರ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯುವಂತೆ ಸಲಹೆ ನೀಡಿದರು. ʻಜಿಪಿಎಐʼ ಶೃಂಗಸಭೆಯಲ್ಲಿನ ಚರ್ಚೆಯು ಈ ನಿಟ್ಟಿನಲ್ಲಿ ನಿರ್ದೇಶನ ಒದಗಿಸುತ್ತದೆ ಮತ್ತು ಮಾನವೀಯತೆಯ ಮೂಲಭೂತ ಬೇರುಗಳನ್ನು ಭದ್ರಪಡಿಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಇಂದು ಭಾರತವು ʻಎಐʼ ಪ್ರತಿಭೆ ಮತ್ತು ʻಎಐʼ ಸಂಬಂಧಿತ ವಿಚಾರಗಳ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತೀಯ ಯುವಕರು ʻಎಐʼ ತಂತ್ರಜ್ಞಾನದ ಗಡಿಯನ್ನು ವಿಸ್ತರಿಸುತ್ತಿದ್ದಾರೆ. ಭಾರತದಲ್ಲಿ ರೋಮಾಂಚಕ ʻಎಐʼ ಸ್ಫೂರ್ತಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು. ಶೃಂಗಸಭೆಯಲ್ಲಿ ಏರ್ಪಡಿಸಲಾಗಿದ್ದ ʻಎಐʼ ವಸ್ತುಪ್ರದರ್ಶನದಲ್ಲಿನ ಪ್ರದರ್ಶನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಯುವಕರು ತಂತ್ರಜ್ಞಾನದ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದರು. ಇತ್ತೀಚೆಗೆ ಪ್ರಾರಂಭಿಸಲಾದ ʻಎಐ ಕೃಷಿ ಚಾಟ್ ಬಾಟ್ʼ ಬಗ್ಗೆ ಪ್ರಧಾನಿ ಮಾಹಿತಿ ನೀಡಿದರು. ಇದು ಕೃಷಿಯ ವಿವಿಧ ಅಂಶಗಳಲ್ಲಿ ರೈತರಿಗೆ ಸಹಾಯ ಮಾಡುತ್ತದೆ ಎಂದರು. ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆಯೂ ಪ್ರಧಾನಿ ವಿವರಿಸಿದರು.
'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬುದು ಭಾರತದ ಅಭಿವೃದ್ಧಿ ಮಂತ್ರವಾಗಿದೆ ಎಂದು ಹೇಳಿದ ಪ್ರಧಾನಿ, ʻಎಲ್ಲರಿಗೂ ಎಐʼ ಎಂಬ ಆಶಯದೊಂದಿಗೆ ಸರ್ಕಾರ ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಒತ್ತಿ ಹೇಳಿದರು. ಸಾಮಾಜಿಕ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಗಾಗಿ ʻಎಐʼನ ಸಾಮರ್ಥ್ಯಗಳ ಗರಿಷ್ಠ ಲಾಭವನ್ನು ಪಡೆಯಲು ಸರ್ಕಾರ ಶ್ರಮಿಸುತ್ತದೆ. ಜೊತೆಗೆ ಅದರ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಗೆ ಬದ್ಧವಾಗಿದೆ ಎಂದು ಅವರು ಹೇಳಿದರು. ʻಕೃತಕ ಬುದ್ಧಿಮತ್ತೆ ಕುರಿತ ರಾಷ್ಟ್ರೀಯ ಕಾರ್ಯಕ್ರಮʼದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಜೊತೆಗೆ, ಕೃತಕ ಬುದ್ಧಿಮತ್ತೆಯ ಕಂಪ್ಯೂಟಿಂಗ್ ಶಕ್ತಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಶೀಘ್ರದಲ್ಲೇ ಪ್ರಾರಂಭವಾಗಲಿರುವ ʻಎಐ ಮಿಷನ್ʼ ಬಗ್ಗೆಯೂ ಪ್ರಧಾನಿ ಮಾಹಿತಿ ನೀಡಿದರು. ಇದು ಭಾರತದಲ್ಲಿ ನವೋದ್ಯಮಗಳು ಮತ್ತು ನಾವೀನ್ಯಕಾರರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ʻಎಐʼ ಅನ್ವಯಿಕೆಗಳನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಹೇಳಿದರು. ಶೈಕ್ಷಣಿಕ ತರಬೇತಿ ಸಂಸ್ಥೆಗಳ ಮೂಲಕ ʻಎಐʼ ಸಂಬಂಧಿತ ಕೌಶಲ್ಯಗಳನ್ನು ಶ್ರೇಣಿ 2 ಮತ್ತು 3 ನಗರಗಳಿಗೆ ಕೊಂಡೊಯ್ಯುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ʻಎಐʼ ಉಪಕ್ರಮಗಳನ್ನು ಉತ್ತೇಜಿಸುವ ಭಾರತದ ʻರಾಷ್ಟ್ರೀಯ ಎಐ ಪೋರ್ಟಲ್ʼ ಬಗ್ಗೆ ಮಾತನಾಡಿದ ಪ್ರಧಾನಿ, ʻಎಐರಾವತ್ʼ(AIRAWAT) ಉಪಕ್ರಮವನ್ನು ಉಲ್ಲೇಖಿಸಿದರು. ಶೀಘ್ರದಲ್ಲೇ ಪ್ರತಿ ಸಂಶೋಧನಾ ಪ್ರಯೋಗಾಲಯ, ಉದ್ಯಮ ಮತ್ತು ನವೋದ್ಯಮಗಳಿಗೆ ಒಂದು ಸಾಮಾನ್ಯ ವೇದಿಕೆಯನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.
ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಹೊಸ ಭವಿಷ್ಯವನ್ನು ರೂಪಿಸಲು ʻಎಐʼ ಪ್ರಮುಖ ಆಧಾರವಾಗುತ್ತಿದೆ ಎಂದು ಹೇಳಿದರು. ಕೃತಕ ಬುದ್ಧಿಮತ್ತೆಯು ಜನರನ್ನು ಸಂಪರ್ಕಿಸುವುದರಿಂದ, ಇದು ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ಜೊತೆಗೆ ಇದು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತದೆ. ʻಎಐʼ ಅನ್ನು ಹೆಚ್ಚು ಅಂತರ್ಗತಗೊಳಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. "ಕೃತಕ ಬುದ್ಧಿಮತ್ತೆಯು ಹೆಚ್ಚು ಒಳಗೊಳ್ಳುವಿಕೆಯನ್ನು ಹೊಂದಿದಷ್ಟೂ ಅಭಿವೃದ್ಧಿಯ ಪ್ರಯಾಣವು ಸಹ ಹೆಚ್ಚು ಒಳಗೊಳ್ಳುವಿಕೆಯನ್ನು ಹೊಂದಿರುತ್ತದೆ," ಎಂದು ಹೇಳಿದರು. ಕಳೆದ ಶತಮಾನದಲ್ಲಿ ತಂತ್ರಜ್ಞಾನದ ಅಸಮಾನ ಲಭ್ಯತೆಯು ಸಮಾಜದಲ್ಲಿ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಉಲ್ಲೇಖಿಸಿದರು. ಇದನ್ನು ತಪ್ಪಿಸಲು, ತಂತ್ರಜ್ಞಾನದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿರ್ಲಕ್ಷಿಸಬಾರದು ಎಂದು ಪ್ರಧಾನಿ ಸಲಹೆ ನೀಡಿದರು. "ಎಐ ಅಭಿವೃದ್ಧಿಯ ದಿಕ್ಕು ಸಂಪೂರ್ಣವಾಗಿ ಮಾನವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅವಲಂಬಿಸಿರುತ್ತದೆ. ದಕ್ಷತೆ, ನೈತಿಕತೆ ಮತ್ತು ಪರಿಣಾಮಕಾರಿತ್ವದ ಜೊತೆಗೆ ಭಾವನೆಗಳಿಗೆ ಸ್ಥಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ," ಎಂದು ಅವರು ಹೇಳಿದರು.
ಯಾವುದೇ ವ್ಯವಸ್ಥೆಯನ್ನು ಸುಸ್ಥಿರವಾಗಿಸಲು ಅದನ್ನು ಪರಿವರ್ತಕ, ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸುವುದು ಮುಖ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. "ಕೃತಕ ಬುದ್ಧಿಮತ್ತೆಯು ಪರಿವರ್ತಕ ಅಥವಾ ಕ್ರಾಂತಿಕಾರಿಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅದನ್ನು ಹೆಚ್ಚು ಹೆಚ್ಚು ಪಾರದರ್ಶಕಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ," ಎಂದು ಅವರು ಹೇಳಿದರು. ಬಳಸಲಾಗುವ ಡೇಟಾವನ್ನು ಪಾರದರ್ಶಕವಾಗಿ ಮತ್ತು ಪಕ್ಷಪಾತ ಮುಕ್ತವಾಗಿರಿಸುವುದು ಈ ನಿಟ್ಟಿನಲ್ಲಿ ಉತ್ತಮ ಆರಂಭ ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯ ಪಯಣದಲ್ಲಿ ಯಾರೂ ಹಿಂದೆ ಬೀಳದಂತೆ ಎಂದು ಎಲ್ಲಾ ದೇಶಗಳಿಗೆ ಭರವಸೆ ನೀಡುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಸಂಬಂಧಿತ ನೈತಿಕ, ಆರ್ಥಿಕ ಮತ್ತು ಸಾಮಾಜಿಕ ಅಂಶಗಳ ಕಳವಳಗಳನ್ನು ಪರಿಹರಿಸಿದಾಗ ಮಾತ್ರ ʻಎಐʼ ಮೇಲೆ ನಂಬಿಕೆ ಬೆಳೆಯುತ್ತದೆ. ಇದನ್ನು ಮಾಡಲು ಒಂದು ಮಾರ್ಗವೆಂದರೆ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ರೇಖೆಗೆ ಅನುಗುಣವಾಗಿ ಕೌಶಲ್ಯ ಮತ್ತು ಮರು ಕೌಶಲ್ಯವನ್ನು ವೃದ್ಧಿಗೊಳಿಸುವುದು ಎಂದು ಅವರು ಹೇಳಿದರು. ಜಾಗತಿಕ ದಕ್ಷಿಣದ ದೇಶಗಳಿಗೆ ಡೇಟಾ ಸಂರಕ್ಷಣೆ ಮತ್ತು ಆಶ್ವಾಸನೆಯು ಅನೇಕ ಕಳವಳಗಳನ್ನು ಶಮನಗೊಳಿಸುತ್ತದೆ.
ಕೃತಕ ಬುದ್ಧಿಮತ್ತೆಯ ನಕಾರಾತ್ಮಕ ಅಂಶಗಳನ್ನು ಒತ್ತಿಹೇಳಿದ ಪ್ರಧಾನಿ, ಇದು 21ನೇ ಶತಮಾನದಲ್ಲಿ ಅಭಿವೃದ್ಧಿಗೆ ಬಲವಾದ ಸಾಧನವಾಗುವ ಸಾಮರ್ಥ್ಯವನ್ನು ಹೊಂದಿದ್ದರೂ, ಅದರ ನಾಶದಲ್ಲೂ ಅದು ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು. ʻಡೀಪ್ ಫೇಕ್ʼ, ʻಸೈಬರ್ ವಂಚಕರುʼ, ಡೇಟಾ ಕಳ್ಳರು ಮತ್ತು ಭಯೋತ್ಪಾದಕ ಸಂಘಟನೆಗಳು ಎಐ ಸಾಧನಗಳ ಮೇಲೆ ಕೈಹಾಕುವ ಸವಾಲುಗಳನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಇದನ್ನು ತಡೆಯಲು ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು. ಭಾರತದ ʻಜಿ-20ʼ ಅಧ್ಯಕ್ಷತೆಯ ಅವಧಿಯಲ್ಲಿ ಜವಾಬ್ದಾರಿಯುತ ಮಾನವ ಕೇಂದ್ರಿತ ಕೃತಕ ಬುದ್ಧಿಮತ್ತೆ ಬಳಕೆಗಾಗಿ ನೀತಿ ರೂಪಿಸುವ ಭಾರತದ ಪ್ರಸ್ತಾಪದ ಬಗ್ಗೆ ಪ್ರಧಾನಿ ಬೆಳಕು ಚೆಲ್ಲಿದರು. ʻಜಿ-20 ನವದೆಹಲಿ ಘೋಷಣೆʼಯು 'ಎಐ ತತ್ವಗಳ' ಬಗ್ಗೆ ಎಲ್ಲಾ ಸದಸ್ಯ ರಾಷ್ಟ್ರಗಳ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಹೇಳಿದರು. ವಿವಿಧ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಒಪ್ಪಂದಗಳು ಮತ್ತು ಶಿಷ್ಟಾಚಾರಗಳಂತೆಯೇ, ʻಎಐʼನ ನೈತಿಕ ಬಳಕೆಗೆ ನೀತಿಗಳನ್ನು ರಚಿಸಲು ಒಟ್ಟಿಗೆ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅದರಲ್ಲೂ ಹೆಚ್ಚಿನ ಅಪಾಯದ ಅಥವಾ ಮುಂಚೂಣಿ ʻಎಐʼ ಸಾಧನಗಳ ಪರೀಕ್ಷೆ ಮತ್ತು ಅಭಿವೃದ್ಧಿ ವಿಚಾರವೂ ಇದರಲ್ಲಿರಬೇಕು ಎಂದರು. ದೃಢನಿಶ್ಚಯ, ಬದ್ಧತೆ, ಸಮನ್ವಯ ಮತ್ತು ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ಒಂದು ಕ್ಷಣವನ್ನೂ ವ್ಯರ್ಥ ಮಾಡಬೇಡಿ ಎಂದು ಇಡೀ ಜಗತ್ತಿಗೆ ಕರೆ ನೀಡಿದರು. "ನಾವು ಈ ಕುರಿತು ಜಾಗತಿಕ ನೀತಿಯನ್ನು ನಿರ್ದಿಷ್ಟ ಸಮಯದ ಮಿತಿಯೊಳಗೆ ಪೂರ್ಣಗೊಳಿಸಬೇಕು. ಮನುಕುಲವನ್ನು ರಕ್ಷಿಸಲು ಇದನ್ನು ಮಾಡುವುದು ಬಹಳ ಮುಖ್ಯ," ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆಯನ್ನು ವಿಶ್ವವ್ಯಾಪಿ ಆಂದೋಲನ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದರು. ʻಎಐʼನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ʻಎಐʼ ಉಪಕರಣಗಳ ಪರೀಕ್ಷೆ ಮತ್ತು ತರಬೇತಿಗಾಗಿ ಡೇಟಾ ಸೆಟ್‌ಗಳು, ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಪರೀಕ್ಷೆಯ ಅವಧಿಯಂತಹ ಕೆಲವು ಪ್ರಶ್ನೆಗಳನ್ನು ಪರಿಹರಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು. ಯಾವುದೇ ಮಾಹಿತಿ ಅಥವಾ ಉತ್ಪನ್ನವನ್ನು ʻಎಐನಿಂದ ಸೃಷ್ಟಿಯಾಗಿದ್ದುʼ ಎಂದು ಗುರುತಿಸಲು ʻಸಾಫ್ಟ್‌ವೇರ್ ವಾಟರ್ಮಾರ್ಕ್ʼ ಅನ್ನು ಪರಿಚಯಿಸಬಹುದೇ ಎಂದು ಅವರು ಕೇಳಿದರು.
ಸರ್ಕಾರದ ಮಧ್ಯಸ್ಥಗಾರರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸಾಕ್ಷ್ಯಾಧಾರಿತ ನಿರ್ಧಾರ ಕೈಗೊಳ್ಳಲು ವಿವಿಧ ಯೋಜನೆಗಳ ದತ್ತಾಂಶವನ್ನು ಅನ್ವೇಷಿಸುವಂತೆ ಮತ್ತು ಎಐ ಸಾಧನಗಳಿಗೆ ತರಬೇತಿ ನೀಡಲು ಡೇಟಾವನ್ನು ಬಳಸಬಹುದೇ ಎಂದು ನೋಡುವಂತೆ ಮನವಿ ಮಾಡಿದರು. ʻಎಐʼ ಉಪಕರಣಗಳನ್ನು ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಂಪು, ಹಳದಿ ಅಥವಾ ಹಸಿರು ಎಂದು ವರ್ಗೀಕರಿಸುವ ಕಾರ್ಯವಿಧಾನವಿದೆಯೇ ಎಂದು ಅವರು ಕೇಳಿದರು. "ಸ್ಥಿತಿಸ್ಥಾಪಕ ಉದ್ಯೋಗವನ್ನು ಖಚಿತಪಡಿಸುವ ಸಾಂಸ್ಥಿಕ ಕಾರ್ಯವಿಧಾನವನ್ನು ನಾವು ಸ್ಥಾಪಿಸಬಹುದೇ? ನಾವು ಪ್ರಮಾಣೀಕೃತ ಜಾಗತಿಕ ʻಎಐʼ ಶಿಕ್ಷಣ ಪಠ್ಯಕ್ರಮವನ್ನು ತರಬಹುದೇ? ಕೃತಕ ಬುದ್ಧಿಮತ್ತೆ ಚಾಲಿತ ಭವಿಷ್ಯಕ್ಕಾಗಿ ಜನರನ್ನು ಸಿದ್ಧಪಡಿಸಲು ನಾವು ಮಾನದಂಡಗಳನ್ನು ನಿಗದಿಪಡಿಸಬಹುದೇ?", ಎಂದು ಕೇಳುವ ಮೂಲಕ ಪ್ರಧಾನಿ ಮಾತು ಮುಂದುವರಿಸಿದರು.
ಭಾರತದಲ್ಲಿನ ನೂರಾರು ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಡಿಜಿಟಲ್ ಸೇರ್ಪಡೆಯನ್ನು ಹೆಚ್ಚಿಸಲು ಸ್ಥಳೀಯ ಭಾಷೆಗಳಲ್ಲಿ ಡಿಜಿಟಲ್ ಸೇವೆಗಳು ಲಭ್ಯವಾಗುವಂತೆ ಮಾಡಲು ʻಎಐʼ ಬಳಸುವಂತೆ ಸಲಹೆ ನೀಡಿದರು. ಇನ್ನು ಮುಂದೆ ಮಾತನಾಡದ ಭಾಷೆಗಳನ್ನು ಪುನರುಜ್ಜೀವನಗೊಳಿಸಲು, ಸಂಸ್ಕೃತ ಭಾಷೆಯ ಶ್ರೀಮಂತ ಜ್ಞಾನದ ನೆಲೆ ಮತ್ತು ಸಾಹಿತ್ಯವನ್ನು ಮುಂದಕ್ಕೆ ಕೊಂಡೊಯ್ಯಲು ಹಾಗೂ ವೈದಿಕ ಗಣಿತದ ಕಾಣೆಯಾದ ಸಂಪುಟಗಳನ್ನು ಮತ್ತೆ ಸೇರಿಸಲು ʻಎಐʼ ಅನ್ನು ಬಳಸಲು ಅವರು ಸಲಹೆ ನೀಡಿದರು.
ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ʻಜಿಪಿಎಐʼ ಶೃಂಗಸಭೆಯು ವಿಚಾರಗಳ ವಿನಿಮಯಕ್ಕೆ ಅತ್ಯುತ್ತಮ ಅವಕಾಶವಾಗಿದೆ ಮತ್ತು ಪ್ರತಿಯೊಬ್ಬ ಪ್ರತಿನಿಧಿಗೂ ಉತ್ತಮ ಕಲಿಕೆಯ ಅನುಭವವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ಮುಂದಿನ ಎರಡು ದಿನಗಳಲ್ಲಿ, ನೀವು ʻಎಐʼನ ವಿವಿಧ ಅಂಶಗಳನ್ನು ಪರಿಶೀಲಿಸುತ್ತೀರಿ. ಫಲಿತಾಂಶಗಳು ಅನುಷ್ಠಾನಗೊಂಡಾಗ, ಖಂಡಿತವಾಗಿಯೂ ಜವಾಬ್ದಾರಿಯುತ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ದಾರಿ ಯಾಗುತ್ತದೆ ಎಂದು ನಾನು ಭಾವಿಸುತ್ತೇನೆ", ಎಂದು ಪ್ರಧಾನಿ ಹೇಳಿದರು.
ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್; ನಿರ್ಗಮಿಸುತ್ತಿರುವ ʻಜಿಪಿಎಐʼ ಅಧ್ಯಕ್ಷ ದೇಶವಾದ ಜಪಾನ್ನ ಆಂತರಿಕ ವ್ಯವಹಾರಗಳು ಮತ್ತು ಸಂವಹನ ಸಚಿವಾಲಯದ ನೀತಿ ಸಮನ್ವಯ ವಿಭಾಗದ ಉಪ ಸಚಿವ ಶ್ರೀ ಹಿರೋಶಿ ಯೋಶಿಡಾ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್ ಕೃಷ್ಣನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ʻಜಿಪಿಎಐʼ - ಇದು 29 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಬಹು-ಮಧ್ಯಸ್ಥಗಾರರ ಉಪಕ್ರಮವಾಗಿದೆ. ಎಐ-ಸಂಬಂಧಿತ ಆದ್ಯತೆಗಳ ಮೇಲೆ ಅತ್ಯಾಧುನಿಕ ಸಂಶೋಧನೆ ಮತ್ತು ಅನ್ವಯಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಕೃತಕ ಬುದ್ಧಿಮತ್ತೆಯಲ್ಲಿ ಸಿದ್ಧಾಂತ ಮತ್ತು ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. 2024ರಲ್ಲಿ ಭಾರತವು ʻಜಿಪಿಎಐʼನ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. 2020ರಲ್ಲಿ ʻಜಿಪಿಎಐʼನ ಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿರುವ ಭಾರತ, ʻಜಿಪಿಎಐʼನ ಪ್ರಸ್ತುತ ಅಧ್ಯಕ್ಷತೆ ಬೆಂಬಲಿಸುವ ದೇಶವಾಗಿದೆ. 2024ರಲ್ಲಿ ʻಜಿಪಿಎಐʼನ ಅಧ್ಯಕ್ಷನಾಗಿ ಸಾರಥ್ಯ ವಹಿಸಲಿರುವ ಭಾರತ, ಇದಕ್ಕೆ ಪೂರ್ವಭಾವಿಯಾಗಿ, 2023ರ ಡಿಸೆಂಬರ್ 12ರಿಂದ 14ರವರೆಗೆ ʻಜಿಪಿಎಐʼ ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಿದೆ.
ಕೃತಕ ಬುದ್ಧಿಮತ್ತೆ, ಜಾಗತಿಕ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ, ʻಎಐʼ ಮತ್ತು ಡೇಟಾ ನಿರ್ವಹಣೆ ಮತ್ತು ಎಂಎಲ್ ಕಾರ್ಯಾಗಾರದಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ಶೃಂಗಸಭೆಯಲ್ಲಿ ಅನೇಕ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಶೃಂಗಸಭೆಯ ಇತರ ಆಕರ್ಷಣೆಗಳಲ್ಲಿ ಸಂಶೋಧನಾ ವಿಚಾರ ಸಂಕಿರಣ, ʻಎಐ ಗೇಮ್ ಚೇಂಜರ್ಸ್ ಪ್ರಶಸ್ತಿʼ ಮತ್ತು ʻಇಂಡಿಯಾ ಎಐ ಎಕ್ಸ್‌ಪೋʼ ವಸ್ತು ಪ್ರದರ್ಶನಗಳೂ ಸೇರಿವೆ.
ಈ ಶೃಂಗಸಭೆಯಲ್ಲಿ 50ಕ್ಕೂ ಹೆಚ್ಚು ʻಜಿಪಿಎಐʼ ತಜ್ಞರು ಮತ್ತು ವಿವಿಧ ದೇಶಗಳ 150ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ. ಇದಲ್ಲದೆ, ಇಂಟೆಲ್, ರಿಲಯನ್ಸ್ ಜಿಯೋ, ಗೂಗಲ್, ಮೆಟಾ, ಎಡಬ್ಲ್ಯೂಎಸ್, ಯೋಟಾ, ನೆಟ್ವೆಬ್, ಪೇಟಿಎಂ, ಮೈಕ್ರೋಸಾಫ್ಟ್, ಮಾಸ್ಟರ್ ಕಾರ್ಡ್, ಎನ್ಐಸಿ, ಎಸ್‌ಟಿಪಿಐ, ಇಮ್ಮರ್ಸ್, ಜಿಯೋ ಹ್ಯಾಪ್ಟಿಕ್, ಭಾಶಿನಿ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಅತ್ಯುನ್ನತ ಎಐ ಪರಿವರ್ತಕ ಸಂಸ್ಥೆಗಳು ಭಾಗವಹಿಸಲಿವೆ. ʻಯುವ ಎಐʼ ಉಪಕ್ರಮ ಮತ್ತು ನವೋದ್ಯಮಗಳ ಅಡಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಮ್ಮ ʻಎಐʼ ಮಾದರಿಗಳು ಮತ್ತು ಪರಿಹಾರಗಳನ್ನು ಸಹ ಪ್ರದರ್ಶಿಸಲಿದ್ದಾರೆ.
In India, we are witnessing an AI innovation spirit. pic.twitter.com/NNMmyK0Ftw
— PMO India (@PMOIndia) December 12, 2023
AI for social development and inclusive growth. pic.twitter.com/RqUAh5FVze
— PMO India (@PMOIndia) December 12, 2023
India is committed to responsible and ethical use of AI. pic.twitter.com/Yt9gvK2UP7
— PMO India (@PMOIndia) December 12, 2023
With AI we are entering a new era. pic.twitter.com/zrby0f2T3l
— PMO India (@PMOIndia) December 12, 2023
AI is transformative. But it must be made as transparent as possible. pic.twitter.com/Q0VOPx6hU7
— PMO India (@PMOIndia) December 12, 2023
There are many positive aspects of AI, but the negative aspects related to it are also a matter of equal concern. pic.twitter.com/uZqsDOZNX1
— PMO India (@PMOIndia) December 12, 2023
We have to work together to prepare a global framework for the ethical use of AI. pic.twitter.com/oYtC2NgJpW
— PMO India (@PMOIndia) December 12, 2023