ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ 15,000 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ವಿದ್ಯುತ್, ರೈಲು ಮತ್ತು ರಸ್ತೆಯಂತಹ ಕ್ಷೇತ್ರಗಳಿಗೆ ಸಂಬಂಧಿಸಿವೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಪಶ್ಚಿಮ ಬಂಗಾಳವನ್ನು ವಿಕಸಿತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡಲಾಗಿದೆ ಎಂದು ಹೇಳಿದರು. ರೈಲ್ವೆ, ಬಂದರು ಮತ್ತು ಪೆಟ್ರೋಲಿಯಂ ಕ್ಷೇತ್ರಗಳಲ್ಲಿ 7,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ನಿನ್ನೆಯ ಆರಂಭಾಗ್ ಕಾರ್ಯಕ್ರಮವನ್ನು ಅವರು ನೆನಪಿಸಿಕೊಂಡರು. ಇಂದೂ ಕೂಡ ಪಶ್ಚಿಮ ಬಂಗಾಳದ ನಾಗರಿಕರ ಜೀವನವನ್ನು ಸುಲಭಗೊಳಿಸಲು 15,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳು ಉದ್ಘಾಟನೆ ಮತ್ತು ವಿದ್ಯುತ್, ರಸ್ತೆ ಮತ್ತು ರೈಲ್ವೇ ಕ್ಷೇತ್ರಗಳಿಗೆ ಅಡಿಗಲ್ಲುಗಳನ್ನು ಹಾಕುತ್ತಿರುವುದು ನನ್ನ ಅದೃಷ್ಟವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಗಳು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ವೇಗ ನೀಡುತ್ತವೆ ಮತ್ತು ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರಧಾನಮಂತ್ರಿಯವರು ನಾಗರಿಕರನ್ನು ಅಭಿನಂದಿಸಿದರು.
ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ವಿದ್ಯುಚ್ಛಕ್ತಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಪಶ್ಚಿಮ ಬಂಗಾಳವನ್ನು ತನ್ನ ವಿದ್ಯುತ್ ಅಗತ್ಯಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಹೇಳಿದರು. ದಾಮೋದರ್ ವ್ಯಾಲಿ ಕಾರ್ಪೊರೇಷನ್ ನ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಯೋಜನೆಯಾದ ಪುರುಲಿಯಾ ಜಿಲ್ಲೆಯ ರಘುನಾಥಪುರದಲ್ಲಿರುವ ರಘುನಾಥಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರ 2 ನೇ ಹಂತ (2x660 MW) ರಾಜ್ಯದಲ್ಲಿ 11,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ತರಲಿದೆ ಎಂದು ಅವರು ಹೇಳಿದರು. ಇದು ರಾಜ್ಯದ ಇಂಧನ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನೂ ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಇದಲ್ಲದೆ, ಸುಮಾರು 650 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಮೆಜಿಯಾ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಘಟಕ 7 ಮತ್ತು 8 ರ ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (ಎಫ್‌ಜಿಡಿ) ವ್ಯವಸ್ಥೆಯು ಪರಿಸರ ಸಮಸ್ಯೆಗಳ ಬಗ್ಗೆ ಭಾರತ ನೀಡುತ್ತಿರುವ ಗಂಭೀರ ನಿಲುವಿಗೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳವು ದೇಶಕ್ಕೆ ಪೂರ್ವ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇಲ್ಲಿಂದ ಪೂರ್ವಕ್ಕೆ ಅಪಾರ ಅವಕಾಶಗಳಿವೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದ, ರಸ್ತೆಗಳು, ರೈಲು ಮಾರ್ಗಗಳು, ವಾಯುಮಾರ್ಗಗಳು ಮತ್ತು ಜಲಮಾರ್ಗಗಳ ಆಧುನಿಕ ಸಂಪರ್ಕಕ್ಕಾಗಿ ಸರ್ಕಾರವು ಕೆಲಸ ಮಾಡುತ್ತಿದೆ ಎಂದರು. ಇಂದು ಉದ್ಘಾಟನೆಗೊಂಡ ರಾಷ್ಟ್ರೀಯ ಹೆದ್ದಾರಿ-12 (100 ಕಿಮೀ) ನ ಫರಕ್ಕಾ-ರಾಯಗಂಜ್ ವಿಭಾಗದ ಚತುಷ್ಪಥ ರಸ್ತೆ ಯೋಜನೆಯು ಸುಮಾರು 2000 ಕೋಟಿ ರೂಪಾಯಿಗಳ ಬಜೆಟ್ ಪಡೆದಿದೆ ಮತ್ತು ಪ್ರಯಾಣದ ಸಮಯವನ್ನು ಅರ್ಧಕ್ಕೆ ಇಳಿಸುತ್ತದೆ ಎಂದು ಅವರು ಹೇಳಿದರು. ಇದು ಹತ್ತಿರದ ಪಟ್ಟಣಗಳಲ್ಲಿ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ರೈತರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಮೂಲಸೌಕರ್ಯದ ದೃಷ್ಟಿಯಿಂದ, ರೈಲ್ವೆಯು ಪಶ್ಚಿಮ ಬಂಗಾಳದ ಭವ್ಯ ಇತಿಹಾಸದ ಭಾಗವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಹಿಂದಿನ ಸರ್ಕಾರಗಳು ಅಭಿವೃದ್ಧಿಯ ಕಂದಕವನ್ನು ಸೃಷ್ಟಿಸುವ ಮೂಲಕ ರಾಜ್ಯದ ಪರಂಪರೆ ಮತ್ತು ಪ್ರಯೋಜನವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕಳೆದ 10 ವರ್ಷಗಳಲ್ಲಿ ಪಶ್ಚಿಮ ಬಂಗಾಳದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು ಮತ್ತು ಹಿಂದಿನದಕ್ಕೆ ಹೋಲಿಸಿದರೆ ಎರಡು ಪಟ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು. ರಾಜ್ಯದ ಆಧುನೀಕರಣ ಮತ್ತು ಅಭಿವೃದ್ಧಿಗೆ ನಾಲ್ಕು ರೈಲು ಯೋಜನೆಗಳನ್ನು ಸಮರ್ಪಿಸಲಾಗುತ್ತಿದೆ ಮತ್ತು ವಿಕಸಿತ ಬಂಗಾಳದ ಸಂಕಲ್ಪವನ್ನು ಸಾಧಿಸಲು ಸಹಾಯ ಮಾಡುತ್ತವೆ ಎಂದು ಅವರು ಒತ್ತಿ ಹೇಳಿದರು. ನಾಗರಿಕರಿಗೆ ಶುಭ ಹಾರೈಕೆಗಳನ್ನು ತಿಳಿಸಿದ ಪ್ರಧಾನಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.
ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ ಸಿ ವಿ ಆನಂದ ಬೋಸ್ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ರಾಜ್ಯ ಸಚಿವ ಶ್ರೀ ಶಂತನು ಠಾಕೂರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪುರುಲಿಯಾ ಜಿಲ್ಲೆಯ ರಘುನಾಥಪುರದಲ್ಲಿ ನೆಲೆಗೊಂಡಿರುವ ರಘುನಾಥಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರ 2 ನೇ ಹಂತಕ್ಕೆ (2x660 MW) ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದರು. ದಾಮೋದರ್ ವ್ಯಾಲಿ ಕಾರ್ಪೊರೇಶನ್ ನ ಈ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಯೋಜನೆ ಹೆಚ್ಚು ದಕ್ಷವಾದ ಸೂಪರ್ ಕ್ರಿಟಿಕಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಹೊಸ ಸ್ಥಾವರವು ದೇಶದ ಇಂಧನ ಭದ್ರತೆಯನ್ನು ಬಲಪಡಿಸುವತ್ತ ಒಂದು ಹೆಜ್ಜೆಯಾಗಿದೆ.
ಮೆಜಿಯಾ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಘಟಕ 7 ಮತ್ತು 8 ರ ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (ಎಫ್ ಜಿ ಡಿ) ವ್ಯವಸ್ಥೆಯನ್ನು ಪ್ರಧಾನಿ ಉದ್ಘಾಟಿಸಿದರು. ಸುಮಾರು 650 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಎಫ್ ಜಿ ಡಿ ವ್ಯವಸ್ಥೆಯು ಫ್ಲೂ ಗ್ಯಾಸ್ ಗಳಿಂದ ಸಲ್ಫರ್ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತದೆ ಮತ್ತು ಕ್ಲೀನ್ ಫ್ಲೂ ಗ್ಯಾಸ್ ಅನ್ನು ಉತ್ಪಾದಿಸುತ್ತದೆ ಮತ್ತು ಜಿಪ್ಸಮ್ ಅನ್ನು ರೂಪಿಸುತ್ತದೆ, ಇದನ್ನು ಸಿಮೆಂಟ್ ಉದ್ಯಮದಲ್ಲಿ ಬಳಸಬಹುದು.
ರಾಷ್ಟ್ರೀಯ ಹೆದ್ದಾರಿ-12 (100 ಕಿಮೀ) ರ ಫರಕ್ಕಾ-ರಾಯಗಂಜ್ ವಿಭಾಗದ ಚತುಷ್ಪಥ ರಸ್ತೆ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು. ಸುಮಾರು 1986 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಉತ್ತರ ಬಂಗಾಳ ಮತ್ತು ಈಶಾನ್ಯ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ದಾಮೋದರ್ - ಮೋಹಿಶಿಲಾ ರೈಲು ಮಾರ್ಗವನ್ನು ಜೋಡಿ ಮಾರ್ಗವಾಗಿಸುವ ಯೋಜನೆ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ 940 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಾಲ್ಕು ರೈಲು ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು; ರಾಮಪುರಹತ್ ಮತ್ತು ಮುರಾರೈ ನಡುವಿನ ಮೂರನೇ ಮಾರ್ಗ; ಬಜಾರ್ಸೌ-ಅಜಿಮಗಂಜ್ ಜೋಡಿ ಮಾರ್ಗ; ಮತ್ತು ಅಜಿಮ್‌ಗಂಜ್-ಮುರ್ಷಿದಾಬಾದ್ ಅನ್ನು ಸಂಪರ್ಕಿಸುವ ಹೊಸ ಮಾರ್ಗ. ಈ ಯೋಜನೆಗಳು ರೈಲು ಸಂಪರ್ಕವನ್ನು ಸುಧಾರಿಸುತ್ತವೆ, ಸರಕು ಸಾಗಣೆಯನ್ನು ಸುಗಮಗೊಳಿಸುತ್ತವೆ ಮತ್ತು ಈ ಪ್ರದೇಶದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.