ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ದ್ವಾರಕಾದಲ್ಲಿ 4,150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಓಖಾ ಮುಖ್ಯ ಭೂಮಿ ಮತ್ತು ಬೇತ್ ದ್ವಾರಕಾವನ್ನು ಸಂಪರ್ಕಿಸುವ ಸುದರ್ಶನ ಸೇತು, ವಾಡಿನಾರ್ ಮತ್ತು ರಾಜ್‌ಕೋಟ್-ಓಖಾದಲ್ಲಿ ಪೈಪ್‌ಲೈನ್ ಯೋಜನೆ, ರಾಜ್‌ಕೋಟ್-ಜೇತಲ್ಸರ್-ಸೋಮನಾಥ್ ಮತ್ತು ಜೇತಲ್ಸರ್-ವನ್ಸ್‌ಜಾಲಿಯಾ ರೈಲು ವಿದ್ಯುದ್ದೀಕರಣ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಹೆದ್ದಾರಿ 927ರ ಧೋರಾಜಿ-ಜಮಕಂದೋರ್ನಾ-ಕಲವಾಡ್ ವಿಭಾಗದ ಅಗಲೀಕರಣ, ಜಾಮ್‌ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಜಾಮ್‌ನಗರದ ʻಸಿಕ್ಕಾ ಉಷ್ಣ ವಿದ್ಯುತ್ ಸ್ಥಾವರʼದಲ್ಲಿ ʻಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ʼ(ಎಫ್‌ಜಿಡಿ) ವ್ಯವಸ್ಥೆಯ ಸ್ಥಾಪನೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರೀಕೃಷ್ಣನನ್ನು ದ್ವಾರಕಾಧೀಶನಾಗಿ ಇರಿಸಲಾಗಿರುವ ʻಭಗವಾನ್ ಶ್ರೀಕೃಷ್ಣ ದ್ವಾರಕಾ ಮಯಿʼಯ ಭೂಮಿಗೆ ನಮನ ಸಲ್ಲಿಸಿದರು. ಅವರು ಇಂದು ಬೆಳಗ್ಗೆ ದೇವಾಲಯದಲ್ಲಿ ಸಲ್ಲಿಸಿದ ಪ್ರಾರ್ಥನೆಗಳನ್ನು ನೆನಪಿಸಿಕೊಂಡರು. ಆದಿ ಶಂಕರಾಚಾರ್ಯರು ನಾಲ್ಕು ಪೀಠಗಳಲ್ಲಿ ಒಂದಾದ ʻಶಾರದಾ ಪೀಠʼವನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ರಾಷ್ಟ್ರದ ಧಾರ್ಮಿಕ ಜೀವನದಲ್ಲಿ ತೀರ್ಥ ಕ್ಷೇತ್ರದ ಆಳವಾದ ಮಹತ್ವವನ್ನು ಒತ್ತಿಹೇಳಿದರು. ನಾಗೇಶ್ವರ ಜ್ಯೋತಿರ್ಲಿಂಗ, ರುಕ್ಮಿಣಿ ದೇವಿ ಮಂದಿರದ ವೈಭವವನ್ನೂ ಅವರು ಉಲ್ಲೇಖಿಸಿದರು. 'ರಾಷ್ಟ್ರ ಕಾಜ್' ಸಂದರ್ಭದಲ್ಲಿ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ತಮಗೆ ದೊರೆತ ಇತ್ತೀಚಿನ ಅವಕಾಶಗಳನ್ನು ಅವರು ನೆನಪಿಸಿಕೊಂಡರು. ಮುಳುಗಡೆಯಾಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸಲು ಇಂದು ಸಮುದ್ರದ ಆಳಕ್ಕೆ ಇಳಿದ ಅವಿಸ್ಮರಣೀಯ ಕ್ಷಣದ ಬಗ್ಗೆ ಪ್ರಧಾನಿ ಮಾತನಾಡಿದರು. ಪ್ರಧಾನಮಂತ್ರಿಯವರು ಪುರಾತತ್ವ ಮತ್ತು ಶಾಸ್ತ್ರೀಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ದ್ವಾರಕಾವನ್ನು ಭಗವಾನ್ ವಿಶ್ವಕರ್ಮರೇ ನಿರ್ಮಿಸಿದರು ಎಂಬ ನಂಬಿಕೆಯನ್ನು ಅವರು ಉಲ್ಲೇಖಿಸಿದರು. ದ್ವಾರಕಾ ನಗರವು ಮಹಾನ್ ನಗರ ಯೋಜನೆಗೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು. " ಮುಳುಗಡೆಯಾಗಿರುವ ನಗರದ ಆಳಕ್ಕೆ ನಾನು ಇಳಿಯುತ್ತಿದ್ದಂತೆ ದೈವತ್ವದ ಭವ್ಯತೆಯ ಪ್ರಜ್ಞೆ ನನ್ನನ್ನು ಆವರಿಸಿತು. ನಾನು ನನ್ನ ಪ್ರಾರ್ಥನೆಗಳನ್ನು ಸಲ್ಲಿಸಿದೆ ಮತ್ತು ನಾನು ನನ್ನೊಂದಿಗೆ ತಂದಿದ್ದ ನವಿಲು ಗರಿಗಳನ್ನು ಅರ್ಪಿಸಿದೆ. ಇದರೊಂದಿಗೆ ಹಲವು ವರ್ಷಗಳಿಂದ ಇದ್ದ ಬಯಕೆಯೊಂದು ಸಾಕಾರಗೊಂಡಿತು ಎಂದು ಪ್ರಧಾನಿ ತಮ್ಮ ದೈವಿಕ ಅನುಭವವನ್ನು ವಿವರಿಸಿದರು. ಮುಳುಗಿದ ದ್ವಾರಕಾ ನಗರದ ಬಗ್ಗೆ ಕೇಳಿದಾಗಿನಿಂದಲೂ, ನಾನು ಅಲ್ಲಿ ಹೋಗಿ ದರ್ಶನ ಪಡೆಯಲು ಸದಾ ಬಯಸುತ್ತಿದ್ದೆ," ಎಂದು ಪ್ರಧಾನಿ ಹೇಳಿದರು. ಮುಳುಗಿದ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವಾಗ 21ನೇ ಶತಮಾನದಲ್ಲಿ ಭಾರತದ ಸಾಮರ್ಥ್ಯದ ದೃಶ್ಯಗಳು ತಮ್ಮ ಮುಂದೆ ಕಾಣಿಸಿಕೊಳ್ಳುತ್ತಲೇ ಇದ್ದವು ಎಂದು ಒತ್ತಿ ಹೇಳಿದ ಪ್ರಧಾನಿ, ಇದು ʻವಿಕಸಿತ ಭಾರತʼ ನಿರ್ಮಾಣದ ತಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸುದರ್ಶನ ಸೇತುವನ್ನು ಉದ್ಘಾಟಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, 6 ವರ್ಷಗಳ ಹಿಂದೆ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಿದರು. ಈ ಸೇತುವೆಯು ಓಖಾ ಮುಖ್ಯ ಭೂಮಿ ಮತ್ತು ಬೇತ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುತ್ತದೆ, ಆ ಮೂಲಕ ದ್ವಾರಕಾಧೀಶನ ದರ್ಶನಕ್ಕಾಗಿ ಸಂಪರ್ಕವನ್ನು ಹೆಚ್ಚಿಸುತ್ತದೆ. ಜೊತೆಗೆ, ಈ ಪ್ರದೇಶದ ದೈವತ್ವವನ್ನು ಹೆಚ್ಚಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಸ್ವತಃ ಪ್ರಧಾನಿಯವರೇ ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳನ್ನು ಉದ್ಘಾಟಿಸುವ ವಿಶ್ವಾಸವನ್ನು ಒತ್ತಿ ಹೇಳಿದ ಅವರು, "ಇದು ಮೋದಿಯವರ ಗ್ಯಾರಂಟಿ" ಎಂದು ಹೇಳಿದರು. ಸುದರ್ಶನ ಸೇತುವನ್ನು ಎಂಜಿನಿಯರಿಂಗ್ ಅದ್ಭುತ ಎಂದು ಬಣ್ಣಿಸಿದ ಪ್ರಧಾನಿ, ಸೇತುವೆ ಮತ್ತು ಅದರ ತಾಂತ್ರಿಕತೆಗಳನ್ನು ವಿಶ್ಲೇಷಿಸುವಂತೆ ಎಂಜಿನಿಯರಿಂಗ್ ಭ್ರಾತೃತ್ವಕ್ಕೆ ಕರೆ ನೀಡಿದರು.
ದೋಣಿಗಳ ಮೇಲಿನ ಅವಲಂಬನೆ ಮತ್ತು ದೀರ್ಘ ರಸ್ತೆ ಪ್ರಯಾಣದಿಂದಾಗಿ ದ್ವಾರಕಾ ಮತ್ತು ಬೇತ್ ದ್ವಾರಕಾದ ನಾಗರಿಕರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿದ ಪ್ರಧಾನಮಂತ್ರಿಯವರು, ಉಬ್ಬರವಿಳಿತದ ಸಮಯದಲ್ಲಿ ದೋಣಿ ಸೇವೆಗಳನ್ನು ಸ್ಥಗಿತಗೊಳಿಸುವುದರಿಂದ ಜನರಿಗೆ ತೊಂದರೆಯಾಗುತ್ತಿತ್ತು ಎಂದು ಹೇಳಿದರು. ಪ್ರಸ್ತುತ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಕೈಗೊಂಡ ಕಾರ್ಯಗಳು ಪೂರ್ಣಗೊಂಡಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು ಮತ್ತು ಅವರ ಸಂಕಲ್ಪವನ್ನು ಶ್ಲಾಘಿಸಿದರು.
ಈ ಹಿಂದೆ ಆಗಿನ ಕೇಂದ್ರ ಸರ್ಕಾರಕ್ಕೆ ಸೇತುವೆಯನ್ನು ಮಂಜೂರು ಮಾಡುವಂತೆ ನಿರಂತರವಾಗಿ ವಿನಂತಿಗಳನ್ನು ಮಾಡಿದರೂ ನಿರಾಕರಿಸುತ್ತಿದ್ದ ಬಗ್ಗೆ ಪ್ರಧಾನಿ ಮೋದಿ ಗಮನಸೆಳೆದರು ಮತ್ತು ಅಂತಿಮವಾಗಿ ಇಂದು ಕೆಲಸವನ್ನು ಪೂರ್ಣಗೊಳಿಸಿದ್ದಕ್ಕಾಗಿ ತಮ್ಮ ಅದೃಷ್ಟಕ್ಕೆ ಧನ್ಯವಾದ ಅರ್ಪಿಸಿದರು. "ಭಗವಾನ್ ಶ್ರೀ ಕೃಷ್ಣನ ಆಶೀರ್ವಾದದಿಂದ, ನಾನು ಅವನ ನಿರ್ದೇಶನಗಳನ್ನು ಅನುಸರಿಸಿದ್ದೇನೆ ಮತ್ತು ನನ್ನ ಜವಾಬ್ದಾರಿಯನ್ನು ಪೂರೈಸಿದ್ದೇನೆ," ಎಂದು ಪ್ರಧಾನಿ ಹೇಳಿದ್ದಾರೆ. ಸೇತುವೆಯನ್ನು ಬೆಳಗಿಸಲು ವಿದ್ಯುತ್ ಬಳಕೆಯನ್ನು ಅದಕ್ಕೆ ಅಳವಡಿಸಲಾದ ಸೌರ ಫಲಕಗಳಿಂದ ಉತ್ಪಾದಿಸಲಾಗುವುದು ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದರು. ಸುದರ್ಶನ ಸೇತು ಒಟ್ಟು 12 ಪ್ರವಾಸಿ ಗ್ಯಾಲರಿಗಳನ್ನು ಹೊಂದಿದ್ದು, ಸಮುದ್ರದ ವಿಸ್ತಾರವಾದ ನೋಟವನ್ನು ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು. "ನಾನು ಇಂದು ಈ ಗ್ಯಾಲರಿಗಳಿಗೆ ಭೇಟಿ ನೀಡಿದ್ದೇನೆ ಮತ್ತು ಇದು ನಿಜವಾಗಿಯೂ ಸುದರ್ಶನೀಯವಾಗಿದೆ." ಎಂದು ಪಿಎಂ ಮೋದಿ ಬಣ್ಣಿಸಿದರು.
ಸ್ವಚ್ಛತಾ ಅಭಿಯಾನದ ಬಗ್ಗೆ ದ್ವಾರಕಾದ ಜನತೆಯ ಬದ್ಧತೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ವಿಶ್ವಾದ್ಯಂತ ಗಮನ ಸೆಳೆಯುತ್ತಿರುವ ಸ್ವಚ್ಛತೆಯ ಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.
ʻನವ ಭಾರತʼ ನಿರ್ಮಾಣದ ತಮ್ಮ ʻಗ್ಯಾರಂಟಿʼಗೆ ವ್ಯಕ್ತವಾದ ವಿರೋಧವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ʻನವ ಭಾರತʼದ ಉದಯವನ್ನು ಜನರು ತಮ್ಮ ಕಣ್ಣ ಮುಂದೆಯೇ ನೋಡುತ್ತಿದ್ದಾರೆ ಎಂದರು. ರಾಜಕೀಯ ಇಚ್ಛಾಶಕ್ತಿಯ ಕೊರತೆ, ವಂಶಪಾರಂಪರ್ಯ ರಾಜಕೀಯದ ಸ್ವಾರ್ಥ ಹಿತಾಸಕ್ತಿ ಹಾಗೂ ಬಡವರಿಗೆ ಸಹಾಯ ಮಾಡಲು ಇಷ್ಟವಿಲ್ಲದ ಕಾರಣ ಈ ಹಿಂದೆ ಇದನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದರು. ವಂಶಪಾರಂಪರ್ಯದ ರಾಜಕೀಯವು ʻವಿಕಸಿತ ಭಾರತʼದ ಭವ್ಯ ಗುರಿಗಳಿಗಾಗಿ ಆರ್ಥಿಕತೆಯ ಗಾತ್ರವನ್ನು ಚಿಕ್ಕದಾಗಿರಿಸಿತ್ತು ಎಂದು ಅವರು ಹೇಳಿದರು. ಹಿಂದಿನ ಆಡಳಿತಾವಧಿಯಲ್ಲಿ ಪುನರಾವರ್ತಿತ ಹಗರಣಗಳು ನಡೆಯುತ್ತಿದ್ದವು ಎಂದು ಅವರು ಟೀಕಿಸಿದರು.
2014ರಲ್ಲಿ ತಾವು ಅಧಿಕಾರಕ್ಕೆ ಆಯ್ಕೆಯಾದಾಗ ದೇಶವನ್ನು ಲೂಟಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನೀಡಿದ್ದ ಭರವಸೆಯನ್ನು ಪ್ರಧಾನಿ ನೆನಪಿಸಿಕೊಂಡರು. "ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ರೂ.ಗಳ ಹಗರಣಗಳನ್ನು ಈಗ ತಡೆಯಲಾಗಿದೆ," ಎಂದು ಅವರು ಹೇಳಿದರು. ದೇಶವು 10 ವರ್ಷಗಳಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಒತ್ತಿಹೇಳಿದರು. ಇದರ ಪರಿಣಾಮವಾಗಿ, ಒಂದೆಡೆ ದೈವಿಕ ನಂಬಿಕೆ ಮತ್ತು ಯಾತ್ರಾ ಸ್ಥಳಗಳ ಪುನರುಜ್ಜೀವನಕ್ಕೆ ಸಾಕ್ಷಿಯಾಗಬಹುದು ಮತ್ತು ಮತ್ತೊಂದೆಡೆ ಬೃಹತ್ ಯೋಜನೆಗಳ ಮೂಲಕ ನವ ಭಾರತದ ಅಭಿವೃದ್ಧಿಯನ್ನು ನೋಡಬಹುದು ಎಂದು ಪ್ರಧಾನಿ ಹೇಳಿದರು. ಗುಜರಾತ್‌ನಲ್ಲಿ ಭಾರತದ ಅತಿ ಉದ್ದದ ಕೇಬಲ್ ಆಧಾರಿತ ಸುದರ್ಶನ ಸೇತು, ಮುಂಬೈನಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ, ಜಮ್ಮು ಮತ್ತು ಕಾಶ್ಮೀರದ ಚೆನಾಬ್‌ನಲ್ಲಿ ನಿರ್ಮಿಸಲಾದ ಭವ್ಯವಾದ ಸೇತುವೆ, ತಮಿಳುನಾಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಪಂಬನ್ ಸೇತುವೆ ಮತ್ತು ಅಸ್ಸಾಂನಲ್ಲಿ ಭಾರತದ ಅತಿ ಉದ್ದದ ನದಿ ಸೇತುವೆಯ ಉದಾಹರಣೆಗಳನ್ನು ಅವರು ನೀಡಿದರು. "ಇಂತಹ ಆಧುನಿಕ ಸಂಪರ್ಕವು ಸಮೃದ್ಧ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸುವ ಮಾರ್ಗವಾಗಿದೆ," ಎಂದು ಅವರು ಹೇಳಿದರು.
ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಂಪರ್ಕದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸುಧಾರಿತ ಸಂಪರ್ಕದಿಂದಾಗಿ ಗುಜರಾತ್ ಪ್ರವಾಸೋದ್ಯಮದ ಕೇಂದ್ರಬಿಂದುವಾಗುತ್ತಿರುವುದನ್ನು ಉಲ್ಲೇಖಿಸುವ ಮೂಲಕ ಈ ಅಂಶವನ್ನು ವಿವರಿಸಿದರು. ಗುಜರಾತ್‌ನ ಹೊಸ ಆಕರ್ಷಣೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಗುಜರಾತ್‌ನಲ್ಲಿ 22 ಅಭಯಾರಣ್ಯಗಳು ಮತ್ತು 4 ರಾಷ್ಟ್ರೀಯ ಉದ್ಯಾನವನಗಳಿವೆ ಎಂದರು. ಸಾವಿರಾರು ವರ್ಷಗಳಷ್ಟು ಹಳೆಯದಾದ ಬಂದರು ನಗರ ಲೋಥಾಲ್ ಬಗ್ಗೆ ಪ್ರಪಂಚದಾದ್ಯಂತ ಚರ್ಚಿಸಲಾಗಿದೆ. ಇಂದು ಅಹ್ಮದಾಬಾದ್ ನಗರ, ʻರಾಣಿ ಕಿ ವಾವ್ʼ, ʻಚಂಪಾನೇರ್ʼ ಮತ್ತು ʻಧೋಲಾವಿರಾʼ ವಿಶ್ವ ಪಾರಂಪರಿಕ ತಾಣಗಳಾಗಿವೆ. ಶಿವರಾಜ್‌ಪುರಿಯು ದ್ವಾರಕಾದ ʻಬ್ಲೂ ಫ್ಲ್ಯಾಗ್ʼ ಕಡಲತೀರದ ಹಿರಿಮೆ ಪಡೆದಿದೆ. ಏಷ್ಯಾದ ಅತಿ ಉದ್ದದ ರೋಪ್ ವೇ ಗಿರ್ನಾರ್‌ನಲ್ಲಿದೆ. ಗಿರ್ ಅರಣ್ಯವು ಏಷ್ಯಾಟಿಕ್ ಸಿಂಹಗಳ ಏಕೈಕ ಆವಾಸಸ್ಥಾನವಾಗಿದೆ. ವಿಶ್ವದ ಅತಿ ಎತ್ತರದ ಪ್ರತಿಮೆ, ಸರ್ದಾರ್ ಸಾಹೇಬ್ ಅವರ ಏಕತಾ ಪ್ರತಿಮೆ ಏಕತಾ ನಗರದಲ್ಲಿದೆ. ಇಂದು ರಥೋತ್ಸವದ ಸಮಯದಲ್ಲಿ ಪ್ರಪಂಚದಾದ್ಯಂತದ ಪ್ರವಾಸಿಗರ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಕಛ್‌ನ ಧೋರ್ಡೊ ಗ್ರಾಮವು ವಿಶ್ವದ ಅತ್ಯುತ್ತಮ ಪ್ರವಾಸಿ ಹಳ್ಳಿಗಳಲ್ಲಿ ಒಂದಾಗಿದೆ. ʻನಾದಬೆಟ್ʼ ದೇಶಭಕ್ತಿ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗುತ್ತಿದೆ ಎಂದರು.
'ವಿಕಾಸವೂ ಇರಲಿ, ಪರಂಪರೆಯೂ ಇರಲಿʼ(ವಿಕಾಸ್ ಭಿ ವಿರಾಸತ್ ಭಿ) ಮಂತ್ರಕ್ಕೆ ಅನುಗುಣವಾಗಿ, ಧಾರ್ಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅವರು ಗಮನಸೆಳೆದರು. ದ್ವಾರಕಾ, ಸೋಮನಾಥ, ಪಾವಗಢ, ಮೊಧೇರಾ ಮತ್ತು ಅಂಬಾಜಿಯಂತಹ ಎಲ್ಲಾ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತಕ್ಕೆ ಭೇಟಿ ನೀಡಿದ ಪ್ರತಿ ಐದು ಪ್ರವಾಸಿಗರಲ್ಲಿ ಒಬ್ಬರು ಗುಜರಾತ್‌ಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು. ಕಳೆದ ವರ್ಷ ಆಗಸ್ಟ್‌ವರೆಗೆ ಸುಮಾರು 15.5 ಲಕ್ಷ ಪ್ರವಾಸಿಗರು ಗುಜರಾತ್‌ಗೆ ಬಂದಿದ್ದಾರೆ. ʻಇ-ವೀಸಾʼ ಸೌಲಭ್ಯಗಳು ಪ್ರವಾಸಿಗರನ್ನು ಗುಜರಾತ್‌ಗೆ ಕರೆತರುತ್ತಿವೆ ಎಂದು ಅವರು ಹೇಳಿದರು.
"ಸಂಕಲ್ಪದ ಮೂಲಕ ಸಾಧನೆಗೆ ಸೌರಾಷ್ಟ್ರದ ಭೂಮಿಯು ಒಂದು ದೊಡ್ಡ ಉದಾಹರಣೆಯಾಗಿದೆ" ಎಂದು ಹೇಳಿದ ಪ್ರಧಾನಿ, ಈ ಪ್ರದೇಶಕ್ಕೆ ಪ್ರತಿಬಾರಿ ಭೇಟಿ ನೀಡಿದಾಗಲೂ ಅದು ಹೇಗೆ ಹೇಗೆ ಹೊಸ ಶಕ್ತಿಯನ್ನು ತುಂಬುತ್ತದೆ ಎಂಬುದನ್ನು ಒತ್ತಿ ಹೇಳಿದರು. ಸೌರಾಷ್ಟ್ರದ ಜನರು ಪ್ರತಿ ಹನಿ ನೀರಿಗಾಗಿ ಹಾತೊರೆಯುತ್ತಿದ್ದ ಮತ್ತು ವಲಸೆ ಹೋಗಬೇಕಾದ ಕಠಿಣ ಸಮಯಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸೌರಾಷ್ಟ್ರದ ನೂರಾರು ಹಳ್ಳಿಗಳಿಗೆ ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ 1300 ಕಿಲೋಮೀಟರ್ ಉದ್ದದ ಪೈಪ್ ಲೈನ್ ಗಳನ್ನು ಹಾಕಲು ನಿಯೋಜಿಸಿದ ಸೌನಿ ಯೋಜನೆಯ ಬಗ್ಗೆ ಬೆಳಕು ಚೆಲ್ಲಿದರು. ಭಾಷಣವನ್ನು ಮುಕ್ತಾಯಗೊಳಿಸಿಸುವ ಮುನ್ನ ಪ್ರಧಾನಮಂತ್ರಿಯವರು, ಮುಂಬರುವ ವರ್ಷಗಳಲ್ಲಿ ಗುಜರಾತ್ ಜೊತೆಗೆ ಸೌರಾಷ್ಟ್ರದ ಸಂಪೂರ್ಣ ಪ್ರದೇಶವು ಯಶಸ್ಸಿನ ಹೊಸ ಎತ್ತರವನ್ನು ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ದ್ವಾರಕಾಧೀಶನ ಆಶೀರ್ವಾದ ನಮ್ಮ ಮೇಲಿದೆ. ಒಟ್ಟಾಗಿ ನಾವು ʻವಿಕಸಿತ ಸೌರಾಷ್ಟ್ರʼ ಮತ್ತು ʻವಿಕಸಿತ ಗುಜರಾತ್ʼ ಅನ್ನು ಮಾಡುತ್ತೇವೆ," ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ತಮ್ಮ ಮಾತು ಮುಗಿಸಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಸಂಸತ್ ಸದಸ್ಯ ಶ್ರೀ ಸಿ.ಆರ್. ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಸುಮಾರು 980 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಓಖಾ ಮುಖ್ಯ ಭೂಭಾಗ ಮತ್ತು ಬೇತ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಸುಮಾರು 2.32 ಕಿ.ಮೀ ಉದ್ದದ ದೇಶದ ಅತಿ ಉದ್ದದ ಕೇಬಲ್-ಸ್ಟೇ ಸೇತುವೆಯಾಗಿದೆ.
ʻಸುದರ್ಶನ ಸೇತುʼ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳು ಮತ್ತು ಎರಡೂ ಬದಿಗಳಲ್ಲಿ ಭಗವಾನ್ ಕೃಷ್ಣನ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿಯನ್ನು ಒಳಗೊಂಡಿದೆ. ಇದರ ಪಾದಾಚಾರಿ ಮಾರ್ಗದ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಸ್ಥಾಪಿಸಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಈ ಸೇತುವೆಯು ಸಾರಿಗೆ ಸಂಪರ್ಕವನ್ನು ಸುಲಭಗೊಳಿಸುತ್ತದೆ ಮತ್ತು ದ್ವಾರಕಾ ಮತ್ತು ಬೇತ್-ದ್ವಾರಕಾ ನಡುವೆ ಪ್ರಯಾಣಿಸುವ ಭಕ್ತರ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸೇತುವೆಯ ನಿರ್ಮಾಣದ ಮೊದಲು, ಯಾತ್ರಿಕರು ಬೇತ್ ದ್ವಾರಕಾವನ್ನು ತಲುಪಲು ದೋಣಿ ಸಾರಿಗೆಯನ್ನು ಅವಲಂಬಿಸಬೇಕಾಗಿತ್ತು. ಈ ಅಪ್ರತಿಮ ಸೇತುವೆಯು ದೇವಭೂಮಿ ದ್ವಾರಕಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ವಾಡಿನಾರ್‌ನಲ್ಲಿ ಪೈಪ್ ಲೈನ್ ಯೋಜನೆಯನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಅಸ್ತಿತ್ವದಲ್ಲಿರುವ ಕಡಲಾಚೆಯ ಮಾರ್ಗಗಳ ಬದಲಾವಣೆ, ಅಸ್ತಿತ್ವದಲ್ಲಿರುವ ಪೈಪ್‌ಲೈನ್ ಎಂಡ್ ಮ್ಯಾನಿಫೋಲ್ಡ್ (ಪಿಎಲ್‌ಇಎಂ) ಅನ್ನು ತ್ಯಜಿಸುವುದು ಮತ್ತು ಇಡೀ ವ್ಯವಸ್ಥೆಯನ್ನು (ಪೈಪ್ ಲೈನ್‌ಗಳು, ಪಿಎಲ್‌ಇಎಂಗಳು ಮತ್ತು ಅಂತರಸಂಪರ್ಕ ಲೂಪ್ ಲೈನ್) ಹತ್ತಿರದ ಹೊಸ ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಒಳಗೊಂಡಿದೆ. ಪ್ರಧಾನಮಂತ್ರಿಯವರು ರಾಜ್ ಕೋಟ್-ಓಖಾ, ರಾಜ್ ಕೋಟ್-ಜೇತಲ್ಸರ್-ಸೋಮನಾಥ್ ಮತ್ತು ಜೇತಲ್ಸರ್-ವನ್ಸ್‌ಜಾಲಿಯಾ ರೈಲು ವಿದ್ಯುದ್ದೀಕರಣ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 927ಡಿಯ ಜಮಕಂದೋರ್ನಾ-ಕಲವಾಡ್ ವಿಭಾಗದ ಅಗಲೀಕರಣ; ಜಾಮ್‌ಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ; ಜಾಮ್ ನಗರದ ʻಸಿಕ್ಕಾ ಥರ್ಮಲ್ ಪವರ್ ಸ್ಟೇಷನ್ʼನಲ್ಲಿ ʻಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (ಎಫ್‌ಜಿಡಿ) ಸಿಸ್ಟಮ್ ಸ್ಥಾಪನೆಗೂ ಶಂಕುಸ್ಥಾಪನೆ ನೆರವೇರಿಸಿದರು.
मुझे बीते दिनों में देव-काज के निमित्त, देश के अनेक तीर्थों की यात्रा का सौभाग्य मिला है।
— PMO India (@PMOIndia) February 25, 2024
आज द्वारका धाम में भी उसी दिव्यता को अनुभव कर रहा हूं: PM @narendramodi pic.twitter.com/ZJVw2xbcb2
जिसका सपना देखा, जिसकी आधारशिला रखी, उसको पूरा किया: PM @narendramodi pic.twitter.com/j5zXB0al4Y
— PMO India (@PMOIndia) February 25, 2024
आधुनिक कनेक्टिविटी समृद्ध और सशक्त राष्ट्र के निर्माण का रास्ता है: PM @narendramodi pic.twitter.com/cyOWzxKL6h
— PMO India (@PMOIndia) February 25, 2024