ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಔರಂಗಾಬಾದ್ ನಲ್ಲಿ ಇಂದು ಸುಮಾರು 21,400 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಸ್ತೆ, ರೈಲ್ವೆ ಮತ್ತು ನಮಾಮಿ ಗಂಗೆ ಮತ್ತಿತರ ಯೋಜನೆಗಳು ಸೇರಿವೆ. ಪ್ರಧಾನಮಂತ್ರಿ ಅವರು ಫೋಟೋ ಗ್ಯಾಲರಿಯಲ್ಲಿ ಓಡಾಡಿ ವೀಕ್ಷಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಬಿಹಾರ ವಿಭೂತಿ ಶ್ರೀ ಅನುಗ್ರಹ ನಾರಾಯಣ ಸೇರಿದಂತೆ ಹಲವು ಶ್ರೇಷ್ಠ ವ್ಯುಕ್ತಿಗಳು ಮತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದಂತಹ ಔರಂಗಾಬಾದ್ ನೆಲದಲ್ಲಿ ಇಂದು ಬಿಹಾರದ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲಾಗುತ್ತಿದೆ ಎಂದರು. ಆಧುನಿಕ ಬಿಹಾರದ ನೋಟವನ್ನು ಒದಗಿಸುವ ರಸ್ತೆ ಮತ್ತು ರೈಲು ವಲಯಗಳನ್ನು ಒಳಗೊಂಡಂತೆ ಸುಮಾರು 21,500 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಅಥವಾ ಶಂಕುಸ್ಥಾಒನೆ ನೆರವೇರಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಮಾಸ್-ದರ್ಬಂಗಾ ನಾಲ್ಕು ಪಥದ ಕಾರಿಡಾರ್, ದಾನಪುರ್-ಬಿಹ್ತಾ ನಾಲ್ಕು ಪಥದ ಎತ್ತರಿಸಿದ ರಸ್ತೆ ಮತ್ತು ಪಾಟ್ನಾ ರಿಂಗ್ ರೋಡ್ನ ಶೆರ್ಪುರ್-ದಿಗ್ವಾರಾ ಹಂತದ ಶಂಕುಸ್ಥಾಪನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸುವುದು ಸದ್ಯದ ಸರ್ಕಾರದ ಹೆಗ್ಗುರುತಾಗಿದೆ ಎಂದು ಹೇಳಿದರು. “ಇದು ಮೋದಿ ಗ್ಯಾರಂಟಿ’’ ಎಂದ ಅವರು, ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ಅರಾ ಬೈ ಪಾಸ್ ರೈಲು ಮಾರ್ಗ ಮತ್ತು ಹನ್ನೆರಡು ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದು ಪ್ರಸ್ತಾಪಿಸಿದರು. ಬಿಹಾರದ ಜನರು, ವಿಶೇಷವಾಗಿ ಔರಂಗಾಬಾದ್ನ ನಾಗರಿಕರು ವಾರಣಾಸಿ-ಕೋಲ್ಕತ್ತಾ ಎಕ್ಸ್‌ಪ್ರೆಸ್‌ವೇಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಏಕೆಂದರೆ ಇದು ಉತ್ತರಪ್ರದೇಶ ಮತ್ತು ಕೋಲ್ಕತ್ತಾ ನಡುವೆ ಪ್ರಯಾಣದ ಸಮಯವನ್ನು ಕೆಲವು ಗಂಟೆಗಳವರೆಗೆ ತಗ್ಗಿಸುತ್ತದೆ ಎಂದರು. ಪ್ರಧಾನಿ ಅವರು ಪ್ರಸ್ತುತ ಸರ್ಕಾರದ ಕಾರ್ಯಶೈಲಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಬಿಹಾರದ ಜನರನ್ನು ಅಭಿನಂದಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಜನ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ ಸಲ್ಲಿಸಿದರು. “ಈ ಪ್ರಶಸ್ತಿಯು ಇಡೀ ಬಿಹಾರಕ್ಕೆ ಸಂದ ಗೌರವವಾಗಿದೆ’’ ಎಂದು ಪ್ರಧಾನಿ ಹೇಳಿದರು. ಅಲ್ಲದೆ, ಅಯೋಧ್ಯಾ ಧಾಮದ ಶ್ರೀರಾಮ ಮಂದಿರದಲ್ಲಿ ಪ್ರಾಣ ಪತಿಷ್ಠೆಯನ್ನು ಪ್ರಸ್ತಾಪಿಸಿದ ಅವರು, ಮಾತೆ ಸೀತೆಯ ನಾಡಿನಲ್ಲಿ ಇದು ಅತ್ಯಂತ ಸಂತಸದ ವಿಷಯ ಎಂದರು. ಪ್ರಾಣ ಪ್ರತಿಷ್ಠಾಪನೆಯಲ್ಲಿ ಬಿಹಾರದ ಜನರು ಭಾರಿ ಉತ್ಸಾಹ ಮತ್ತು ಸಂತೋಷದ ಭಾಗವಹಿಸಿದ್ದರು ಎಂದು ಉಲ್ಲೇಖಿಸಿದರು.
ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಪುನರಾರಂಭದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇಂದು ಬಿಹಾರವು ಉತ್ಸಾಹ ಮತ್ತು ಆತ್ಮ ವಿಶ್ವಾಸದಿಂದ ತುಂಬಿದೆ ಎಂದು ಹೇಳಿದರು. ಬಿಹಾರದಲ್ಲಿ ರಾಜವಂಶದ ರಾಜಕಾರಣ ಅಳಿವಿನ ಅಂಚಿನದೆ ಎಂಬ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು.
ಕೇವಲ ಒಂದೇ ದಿನದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಮಾಣವನ್ನು ಸೂಚಿಸಿದ ಪ್ರಧಾನಿ, ಇದು ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಬದಲಾವಣೆಯ ವೇಗದ ಸೂಚನೆಯಾಗಿದೆ ಎಂದು ಹೇಳಿದರು. ರಸ್ತೆ ಯೋಜನೆಗಳು ಪಾಟ್ನಾ, ನಳಂದ, ಜಹಾನಾಬಾದ್, ಗಯಾ, ವೈಶಾಲಿ, ಸಮಸ್ತಿಪುರ ಮತ್ತು ದರ್ಭಾಂಗದಂತಹ ನಗರಗಳ ಚಿತ್ರಣವನ್ನು ಬದಲಾಯಿಸುತ್ತವೆ ಎಂದು ಅವರು ಹೇಳಿದರು. ಅದೇ ರೀತಿ, ಬೋಧಗಯಾ, ವಿಷ್ಣುಪಾದ್, ರಾಜಗೀರ್, ನಳಂದಾ, ವೈಶಾಲಿ ಮತ್ತು ಪಾವಪುರಿಗಳಲ್ಲಿ ಪ್ರವಾಸಿ ಆಸಕ್ತಿಯ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಮುಂಬರುವ ದರ್ಭಾಂಗಾ ವಿಮಾನ ನಿಲ್ದಾಣ ಮತ್ತು ಬಿಹ್ತಾ ವಿಮಾನ ನಿಲ್ದಾಣಗಳು ಸಹ ಈ ರಸ್ತೆ ಮೂಲಸೌಕರ್ಯದೊಂದಿಗೆ ಸಂಪರ್ಕ ಹೊಂದಲಿವೆ ಎಂದರು.
ಬಿಹಾರದ ಪ್ರವಾಸೋದ್ಯಮ ವಲಯದ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ವಂದೇ ಭಾರತ್ ಮತ್ತು ಅಮೃತ ಭಾರತದಂತಹ ಆಧುನೀಕರಿಸಿದ ರೈಲುಗಳ ಹಸಿರು ನಿಶಾನೆ ಮತ್ತು ಅಮೃತ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿಯನ್ನು ಪ್ರಸ್ತಾಪಿಸಿದರು. ಯುವಕರ ವಲಸೆಗೆ ಕಾರಣವಾಗುವ ನಾಗರಿಕರಲ್ಲಿ ಹೆಚ್ಚುತ್ತಿರುವ ಅಭದ್ರತೆಯ ದಿನಗಳ ಬಗ್ಗೆಯೂ ಶ್ರೀ ನರೇಂದ್ರ ಮೋದಿ ಅವರು ನೆನಪಿಸಿಕೊಂಡರು ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಯುವಕರಿಗೆ ತರಬೇತಿ ನೀಡುತ್ತಿರುವ ಇಂದಿನ ಯುಗವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಬಿಹಾರದಿಂದ ಕರಕುಶಲ ವಸ್ತುಗಳನ್ನು ಉತ್ತೇಜಿಸಲು ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಏಕ್ತಾ ಮಾಲ್‌ಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರು ಮತ್ತು ಇದು ರಾಜ್ಯಕ್ಕೆ ಹೊಸ ದಿಕ್ಕು ಮತ್ತು ಸಕಾರಾತ್ಮಕ ಚಿಂತನೆಯನ್ನು ಸೂಚಿಸುತ್ತದೆ ಎಂದು ಹೇಳಿದರು. “ನಾವು ಬಿಹಾರವನ್ನು ಹಳೆಯ ಕಾಲಕ್ಕೆ ಮರಳಲು ಬಿಡುವುದಿಲ್ಲ. ಇದು ಗ್ಯಾರಂಟಿ”, ಎಂದು ಪ್ರಧಾನಿ ಹೇಳಿದರು.
"ಬಿಹಾರದ ಬಡವರು ಅಭಿವೃದ್ಧಿ ಹೊಂದಿದಾಗ ಬಿಹಾರ ಅಭಿವೃದ್ಧಿಗೊಳ್ಳುತ್ತದೆ" ಎಂದ ಪ್ರಧಾನಮಂತ್ರಿ ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟು ಮತ್ತು ವಂಚಿತರ ಮೇಲೆ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ವಿವರಿಸಿದರು. ಸುಮಾರು 9 ಕೋಟಿ ಫಲಾನುಭವಿಗಳು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಉಜ್ವಲಾ ಗ್ಯಾಸ್ ಸಂಪರ್ಕದಿಂದ ಬಿಹಾರದ 1 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಿದೆ. 90 ಲಕ್ಷ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಾಗಿದ್ದು, ಅವರ ಖಾತೆಗಳಿಗೆ 22,000 ಕೋಟಿ ರೂ. ವರ್ಗಾಯಿಸಲಾಗಿದೆ ಎಂದರು. 5 ವರ್ಷಗಳ ಹಿಂದೆ ಕೇವಲ ಶೇ. 2ರಷ್ಟು ಕುಟುಂಬಗಳು ಮಾತ್ರ ಕೊಳಾಯಿ ಮೂಲಕ ಕುಡಿಯುವ ನೀರು ಪಡೆಯುತ್ತಿದ್ದರೆ, ಈಗ ಶೇ.90ಕ್ಕೂ ಅಧಿಕ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ಅವರು ಹೇಳಿದರು. ಬಿಹಾರದಲ್ಲಿ 80 ಲಕ್ಷ ಆಯುಷ್ಮಾನ್ ಕಾರ್ಡ್‌ದಾರರಿದ್ದು, ಬಿಹಾರ ಮತ್ತು ಜಾರ್ಖಂಡ್ನ 4 ಜಿಲ್ಲೆಗಳಲ್ಲಿ 1 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ನೀಡುವ ಉತ್ತರ ಕೋಯಲ್ ಜಲಾಶಯ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.
“ಬಿಹಾರದ ಅಭಿವೃದ್ಧಿ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ, ಮತ್ತು ಬಿಹಾರದಲ್ಲಿ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಕ್ಕುಗಳು - ಇದು ಮೋದಿಯವರ ಗ್ಯಾರಂಟಿ’’ ಎಂದರು. ಅವರು ಮಾತು ಮುಗಿಸುವ ಮುನ್ನ, ಈ ಗ್ಯಾರಂಟಿಗಳನ್ನು ಪೂರೈಸಲು ಮತ್ತು ಮೂರನೇ ಬಾರಿಗೆ ಅಧಿಕಾರವಹಿಸಿಕೊಂಡ ನಂತರ ವಿಕಸಿತ ಬಿಹಾರವನ್ನು ನಿರ್ಮಿಸಲು ಎಲ್ಲಾ ಕೆಲಸ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಅವರ ಮನವಿಯ ಮೇರೆಗೆ ಜನಸಮೂಹವು ತಮ್ಮ ಮೊಬೈಲ್ ಬ್ಯಾಟರಿ ದೀಪಗಳನ್ನು ಆನ್ ಮಾಡಿ ಇಂದಿನ ಅಭಿವೃದ್ಧಿಯ ಉತ್ಸವವನ್ನು ಆಚರಿಸಿದರು.
ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿ ಅರ್ಲೇಕರ್ ಮತ್ತು ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಬಿಹಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಸಾಮ್ರಾಟ್ ಚೌಧರಿ ಮತ್ತು ಶ್ರೀ ವಿಜಯ್ ಕುಮಾರ್ ಸಿನ್ಹಾ, ಸಂಸತ್ ಸದಸ್ಯರು, ಬಿಹಾರ ಸರ್ಕಾರದ ವಿಧಾನಸಭೆಯ ಶಾಸಕರು ಮತ್ತು ಸಚಿವರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿ ಅವರು 18,100 ಕೋಟಿ ರೂ.ಗೂ ಅದಿಕ ಮೌಲ್ಯದ ಹಲವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು. ಉದ್ಘಾಟನೆಗೊಂಡ ಯೋಜನೆಗಳಲ್ಲಿ ಎನ್‌ಎಚ್-227 ರ ಜಯನಗರ-ನರಾಹಿಯಾ ವಿಭಾಗವನ್ನು ಸುಸಜ್ಜಿತ ಪೇವ್ಡ್ ಶೌಲ್ಡರ್ ನೊಂದಿಗೆ 63.4 ಕಿಮೀ ಉದ್ದದ ಜೋಡಿ ಪಥವನ್ನು ಒಳಗೊಂಡಿದೆ; ಎನ್ ಎಚ್ -131ಜಿ ನಲ್ಲಿ ಕನ್ಹೌಲಿಯಿಂದ ರಾಮನಗರಕ್ಕೆ ಆರು ಪಥದ ಪಾಟ್ನಾ ರಿಂಗ್ ರಸ್ತೆಯ ವಿಭಾಗ; ಕಿಶನ್‌ಗಂಜ್ ಪಟ್ಟಣದಲ್ಲಿ ಅಸ್ತಿತ್ವದಲ್ಲಿರುವ ಮೇಲ್ಸೇತುವೆಗೆ ಸಮಾನಾಂತರವಾಗಿ 3.2 ಕಿಮೀ ಉದ್ದದ ಎರಡನೇ ಮೇಲ್ಸೇತುವೆ; 47 ಕಿಮೀ ಉದ್ದದ ಭಕ್ತಿಯಾರ್ಪುರ್-ರಾಜೌಲಿ ನಾಲ್ಕು ಪಥದ ರಸ್ತೆ; ಮತ್ತು ಎನ್‌ಎಚ್–319 ನಲ್ಲಿ 55 ಕಿಮೀ ಉದ್ದದ ಅರಾ - ಪರಾರಿಯಾ ವಿಭಾಗದ ನಾಲ್ಕು ಪಥದ ರಸ್ತೆ ಸೇರಿದೆ.
ಅಮಾಸ್‌ನಿಂದ ಶಿವರಾಂಪುರ ಗ್ರಾಮದವರೆಗೆ 55 ಕಿಮೀ ಉದ್ದದ ನಾಲ್ಕು-ಪಥದ ಲಭ್ಯತೆ -ನಿಯಂತ್ರಿತ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಆರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಿದರು; ಶಿವರಾಂಪುರದಿಂದ ರಾಮನಗರದವರೆಗಿನ 54 ಕಿಮೀ ಉದ್ದದ ನಾಲ್ಕು ಪಥದ ಸಂಪರ್ಕ ನಿಯಂತ್ರಿತ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ; ಕಲ್ಯಾಣಪುರ ಗ್ರಾಮದಿಂದ ಬಲ್ಭದರ್‌ಪುರ ಗ್ರಾಮಕ್ಕೆ 47 ಕಿಮೀ ಉದ್ದದ ನಾಲ್ಕು ಪಥದ ನಿಯಂತ್ರಿತ ಸಂಪರ್ಕದ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ; ಹೆದ್ದಾರಿ ಬಲಭದರ್‌ಪುರದಿಂದ ಬೆಲ ನಾವಡವರೆಗೆ 42 ಕಿಮೀ ಉದ್ದದ ನಾಲ್ಕು-ಪಥದ ನಿಯಂತ್ರಿತ ಸಂಪರ್ಕದ ಗ್ರೀನ್‌ಫೀಲ್ಡ್ ರಾಷ್ಟ್ರೀಯ; ಬಿಹ್ತಾ ವಿಭಾಗದ ದಾನಪುರದಿಂದ 25 ಕಿಮೀ ಉದ್ದದ ನಾಲ್ಕು ಲೇನ್ ಎಲಿವೇಟೆಡ್ ಕಾರಿಡಾರ್ ಮತ್ತು ಬಿಹ್ತಾ - ಕೊಯಿಲ್ವಾರ್ ವಿಭಾಗದ ಅಸ್ತಿತ್ವದಲ್ಲಿರುವ ಎರಡು ಪಥ ರಸ್ತೆಯನ್ನು ನಾಲ್ಕು ಪಥದ ಕ್ಯಾರೇಜ್‌ವೇ (ಸರಕು ಸಾಗಾಣೆ ಮಾರ್ಗವಾಗಿ) ನವೀಕರಿಸುವುದು. ರಸ್ತೆ ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತದೆ, ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತವೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ.
ಪಾಟ್ನಾ ಹೊರವರ್ತುಲ ರಸ್ತೆ ಭಾಗವಾಗಿ ಅಭಿವೃದ್ಧಿಪಡಿಸಲಿರುವ ಗಂಗಾ ನದಿಗೆ ಅಡ್ಡಲಾಗಿರುವ ಆರು ಪಥದ ಸೇತುವೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಿದರು. ಈ ಸೇತುವೆಯು ದೇಶದ ಅತಿ ಉದ್ದದ ನದಿ ಸೇತುವೆಗಳಲ್ಲಿ ಒಂದಾಗಲಿದೆ. ಈ ಯೋಜನೆಯು ಪಾಟ್ನಾ ನಗರದ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಿಹಾರದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವೆ ವೇಗವಾಗಿ ಮತ್ತು ಉತ್ತಮ ಸಂಪರ್ಕವನ್ನು ಒದಗಿಸುತ್ತದೆ, ಇಡೀ ಪ್ರದೇಶದ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಬಿಹಾರದಲ್ಲಿ ನಮಾಮಿ ಗಂಗೆ ಅಡಿಯಲ್ಲಿ ಸುಮಾರು 2,190 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಹನ್ನೆರಡು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಇದರಲ್ಲಿ ಸೈದ್‌ಪುರ ಮತ್ತು ಪಹಾರಿಯಲ್ಲಿನ ಒಳಚರಂಡಿ ಸಂಸ್ಕರಣಾ ಘಟಕ; ಸೈದ್‌ಪುರ, ಬ್ಯೂರ್, ಪಹಾರಿ ವಲಯ ಐವಿಎ ಗಾಗಿ ಒಳಚರಂಡಿ ಜಾಲ; ಕರ್ಮಲಿಚಾಕ್ ನಲ್ಲಿ ಒಳಚರಂಡಿ ಜಾಲದೊಂದಿಗೆ ಒಳಚರಂಡಿ ವ್ಯವಸ್ಥೆ; ಪಹಾರಿ ವಲಯ ವಿ ನಲ್ಲಿ ಒಳಚರಂಡಿ ಯೋಜನೆ; ಮತ್ತು ಬಾರ್ಹ್, ಛಾಪ್ರಾ, ನೌಗಾಚಿಯಾ, ಸುಲ್ತಂಗಂಜ್ ಮತ್ತು ಸೋನೆಪುರ್ ಪಟ್ಟಣದಲ್ಲಿ ಇಂಟರ್ ಸೆಕ್ಷನ್, ಡೈವರ್ಷನ್ ಮತ್ತು ಒಳಚರಂಡಿ ಸಂಸ್ಕರಣಾ ಘಟಕ ಯೋಜನೆಗಳು ಇದರಲ್ಲಿ ಸೇರಿವೆ. ಈ ಯೋಜನೆಗಳು ಹಲವಾರು ಸ್ಥಳಗಳಲ್ಲಿ ಗಂಗಾ ನದಿಗೆ ಬಿಡುಗಡೆ ಮಾಡುವ ಮೊದಲು ತ್ಯಾಜ್ಯನೀರಿನ ಸಂಸ್ಕರಣೆಯನ್ನು ಖಾತ್ರಿಪಡಿಸುತ್ತದೆ, ನದಿಯ ಸ್ವಚ್ಛತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರದೇಶದ ಜನರಿಗೆ ಪ್ರಯೋಜನವನ್ನು ಒದಗಿಸುತ್ತದೆ.
ಪಾಟ್ನಾದಲ್ಲಿ ಯೂನಿಟಿ ಮಾಲ್ನ ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಿದರು. 200 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯು ಅಂತಾರಾಷ್ಟ್ರೀಯ ವಿನ್ಯಾಸದ ಮಾದರಿಗಳು, ತಂತ್ರಜ್ಞಾನ, ಸೌಕರ್ಯ ಮತ್ತು ಸೌಂದರ್ಯಶಾಸ್ತ್ರವನ್ನು ಒಳಗೊಂಡಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮಾಲ್ ನಲ್ಲಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ನಿರ್ದಿಷ್ಠ ಸ್ಥಳಗಳನ್ನು ಒದಗಿಸುತ್ತದೆ, ಇದು ಅವರ ವಿಶಿಷ್ಟ ಉತ್ಪನ್ನಗಳು ಮತ್ತು ಕರಕುಶಲತೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 36 ದೊಡ್ಡ ಮಳಿಗೆಗಳು ಮತ್ತು ಬಿಹಾರದ ಪ್ರತಿ ಜಿಲ್ಲೆಗೆ 38 ಸಣ್ಣ ಮಳಿಗೆಗಳು ಇರುತ್ತವೆ.
ಯೂನಿಟಿ ಮಾಲ್ ಒಂದು ಜಿಲ್ಲೆ ಒಂದು ಉತ್ಪನ್ನಗಳು, ಭೌಗೋಳಿಕ ಸೂಚಕಗಳು (ಜಿಐ) ಉತ್ಪನ್ನಗಳು ಮತ್ತು ಬಿಹಾರ ಮತ್ತು ಭಾರತದ ಕರಕುಶಲ ಉತ್ಪನ್ನಗಳ ಸ್ಥಳೀಯ ಉತ್ಪಾದನೆ ಮತ್ತು ಪ್ರಚಾರವನ್ನು ಉತ್ತೇಜಿಸುತ್ತದೆ. ಈ ಯೋಜನೆಯು ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ರಾಜ್ಯದಿಂದ ರಫ್ತುಗಳ ವಿಷಯದಲ್ಲಿ ಗಮನಾರ್ಹ ಸಾಮಾಜಿಕ-ಆರ್ಥಿಕ ಪ್ರಯೋಜನವನ್ನು ಹೊಂದಿರುತ್ತದೆ.
ಪಾಟಲಿಪುತ್ರದಿಂದ ಪಹ್ಲೇಜಾ ರೈಲು ಮಾರ್ಗವನ್ನು ಜೋಡಿ ಮಾರ್ಗವನ್ನಾಗಿ ಪರಿವರ್ತಿಸುವ ಯೋಜನೆ ಸೇರಿದಂತೆ ಬಿಹಾರದಲ್ಲಿ ಮೂರು ರೈಲ್ವೆ ಯೋಜನೆಗಳನ್ನು ಸಹ ಪ್ರಧಾನಿ ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸಿದರು; ಬಂಧುವಾ - ಪೈಮಾರ್ ನಡುವೆ 26 ಕಿಮೀ ಉದ್ದದ ಹೊಸ ರೈಲು ಮಾರ್ಗ; ಮತ್ತು ಗಯಾದಲ್ಲಿ ಮೆಮು ಶೆಡ್. ಅರಾ ಬೈ ಪಾಸ್ ರೈಲು ಮಾರ್ಗದ ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಿದರು. ರೈಲು ಯೋಜನೆಗಳು ಉತ್ತಮ ರೈಲು ಸಂಪರ್ಕಕ್ಕೆ ಕಾರಣವಾಗುತ್ತದೆ, ಮಾರ್ಗದ ಸಾಮರ್ಥ್ಯ ಮತ್ತು ರೈಲುಗಳ ಸಂಚಾರವನ್ನು ಸುಧಾರಿಸುತ್ತದೆ ಮತ್ತು ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಮತ್ತಷ್ಟು ಉತ್ತೇಜಿಸುತ್ತದೆ.
कुछ दिन पहले ही बिहार के गौरव कर्पूरी ठाकुर जी को देश ने भारत रत्न दिया है।
— PMO India (@PMOIndia) March 2, 2024
ये सम्मान पूरे बिहार का सम्मान है। pic.twitter.com/Vnp2zsh0QN
हमारी सरकार देश के हर गरीब, आदिवासी, दलित, वंचित का सामर्थ्य बढ़ाने में जुटी है: PM @narendramodi pic.twitter.com/wi63tGcSZB
— PMO India (@PMOIndia) March 2, 2024