ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ.
ಎಕ್ಸ್ ಪ್ರೆಸ್ ವೇ ಯಿಂದಾಗಿ ಈ ವಲಯದಲ್ಲಿ ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಭಾರೀ ಉತ್ತೇಜನ ಲಭಿಸಲಿದೆ
"ಯುಪಿ ಎಕ್ಸ್ ಪ್ರೆಸ್ ವೇ ಯೋಜನೆಗಳು ರಾಜ್ಯದ ಅನೇಕ ನಿರ್ಲಕ್ಷಿತ ಪ್ರದೇಶಗಳನ್ನು ಜೋಡಿಸುತ್ತಿವೆ"
"ಉತ್ತರ ಪ್ರದೇಶದ ಪ್ರತಿಯೊಂದು ಮೂಲೆಯೂ ಹೊಸ ಕನಸುಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯಲು ಸಿದ್ಧವಾಗಿದೆ"
"ಯುಪಿಯ ಅಸ್ಮಿತೆಯು ದೇಶಾದ್ಯಂತ ಬದಲಾಗುತ್ತಿದೆ, ಏಕೆಂದರೆ ಅದು ಅನೇಕ ಮುಂದುವರಿದ ರಾಜ್ಯಗಳನ್ನು ಮೀರಿಸುತ್ತಿದೆ".
"ಯೋಜನೆಗಳನ್ನು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸುವ ಮೂಲಕ, ನಾವು ಜನಾದೇಶ ಮತ್ತು ಜನರ ವಿಶ್ವಾಸವನ್ನು ಗೌರವಿಸುತ್ತಿದ್ದೇವೆ"
"ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಮತ್ತು ಮುಂದಿನ ಒಂದು ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊಸ ಸಂಕಲ್ಪದ ವಾತಾವರಣವನ್ನು ಸೃಷ್ಟಿಸಬೇಕು"
"ದೇಶಕ್ಕೆ ಹಾನಿ ಮಾಡುವ, ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಪ್ರತಿಯೊಂದನ್ನೂ ದೂರವಿಡಬೇಕು"
"ಡಬಲ್-ಎಂಜಿನ್ ಸರ್ಕಾರಗಳು ಉಚಿತಗಳು ಮತ್ತು 'ರೆವ್ರಿ' ಸಂಸ್ಕೃತಿಯ ಅಡ್ಡದಾರಿಯನ್ನು ಹಿಡಿಯುವುದಿಲ್ಲ, ಕಠಿಣ ಪರಿಶ್ರಮದ ಮೂಲಕ ಕೆಲಸ ಮಾಡಿ ಫಲಿತಾಂಶ ಒದಗಿಸುತ್ತಿವೆ"
"ದೇಶದ ರಾಜಕೀಯದಿಂದ ಉಚಿತದ ಸಂಸ್ಕೃತಿಯನ್ನು ಸೋಲಿಸಿ ಮತ್ತು ತೊಲಗಿಸಿ"
"ಸಮತೋಲಿತ ಅಭಿವೃದ್ಧಿಯು ಸಾಮಾಜಿಕ ನ್ಯಾಯಕ್ಕೆ ದಾರಿ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಜಲೌನ್ ನ ಒರೈ ತಹಸಿಲ್ ನ ಕೈತೇರಿ ಗ್ರಾಮದಲ್ಲಿ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ಸಚಿವರು, ಜನ ಪ್ರತಿನಿಧಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಬುಂದೇಲ್ ಖಂಡ್ ವಲಯದ ಕಠಿಣ ಪರಿಶ್ರಮ, ಶೌರ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಭವ್ಯ ಪರಂಪರೆಯನ್ನು ಸ್ಮರಿಸಿದರು. "ಅಸಂಖ್ಯಾತ ಯೋಧರನ್ನು ಸೃಷ್ಟಿಸಿದ ಈ ಭೂಮಿಯಲ್ಲಿ, ಭಾರತದ ಕುರಿತಾದ ಭಕ್ತಿ ಜನರ ರಕ್ತದಲ್ಲಿ ಹರಿಯುತ್ತಿದೆ, ಸ್ಥಳೀಯ ಪುತ್ರರು ಮತ್ತು ಹೆಣ್ಣುಮಕ್ಕಳ ಪರಾಕ್ರಮ ಹಾಗು ಕಠಿಣ ಪರಿಶ್ರಮವು ಸದಾ ದೇಶದ ಹೆಸರನ್ನು ಬೆಳಗಿಸಿದೆ" ಎಂದು ಹೇಳಿದರು.

ಹೊಸ ಎಕ್ಸ್ ಪ್ರೆಸ್ ವೇಯಿಂದ ಉಂಟಾಗಲಿರುವ ಬದಲಾವಣೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಮೂಲಕ ಚಿತ್ರಕೂಟದಿಂದ ದೆಹಲಿಗೆ ಇರುವ ದೂರವನ್ನು 3-4 ಗಂಟೆಗಳಷ್ಟು ಕಡಿಮೆ ಮಾಡಲಾಗಿದೆ, ಆದರೆ ಅದರ ಪ್ರಯೋಜನವು ಅದಕ್ಕಿಂತ ಹೆಚ್ಚಿನದಾಗಿದೆ. ಈ ಎಕ್ಸ್ ಪ್ರೆಸ್ ವೇ ಇಲ್ಲಿನ ವಾಹನಗಳಿಗೆ ವೇಗವನ್ನು ನೀಡುವುದಲ್ಲದೆ, ಇಡೀ ಬುಂದೇಲ್ಖಂಡದ ಕೈಗಾರಿಕಾ ಪ್ರಗತಿಗೆ ವೇಗ ನೀಡಲಿದೆ” ಎಂದರು.

ಅಂತಹ ಮಹಾನ್ ಮೂಲಸೌಕರ್ಯ ಮತ್ತು ಸೌಲಭ್ಯಗಳು ದೊಡ್ಡ ನಗರಗಳು ಮತ್ತು ದೇಶದ ಆಯ್ದ ಪ್ರದೇಶಗಳಿಗೆ ಸೀಮಿತವಾಗಿದ್ದ ದಿನಗಳು ಕಳೆದುಹೋದವು ಎಂಬುದನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈಗ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನ ಸ್ಫೂರ್ತಿಯ ಅಡಿಯಲ್ಲಿ, ದೂರದ ಮತ್ತು ನಿರ್ಲಕ್ಷಿತ ಪ್ರದೇಶಗಳು ಸಹ ಅಭೂತಪೂರ್ವ ಸಂಪರ್ಕಕ್ಕೆ ಸಾಕ್ಷಿಯಾಗುತ್ತಿವೆ. ಎಕ್ಸ್ ಪ್ರೆಸ್ ವೇಯಿಂದಾಗಿ, ಈ ವಲಯವು ಅಭಿವೃದ್ಧಿ, ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅನೇಕ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ಮುಂದುವರಿದು ವಿವರಿಸಿದರು. ಈ ಹಿಂದೆ ನಿರ್ಲಕ್ಷಿಸಲಾದ ಅನೇಕ ಪ್ರದೇಶಗಳನ್ನು ಉತ್ತರ ಪ್ರದೇಶದ ಸಂಪರ್ಕ ಯೋಜನೆಗಳು ಜೋಡಿಸುತ್ತಿವೆ ಎಂದು ಅವರು ಹೇಳಿದರು. ಉದಾಹರಣೆಗೆ, ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇ ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಅವುಗಳೆಂದರೆ ಚಿತ್ರಕೂಟ, ಬಾಂಡಾ, ಮಹೋಬಾ, ಹಮೀರ್ಪುರ್, ಜಲೌನ್, ಔರೈಯಾ ಮತ್ತು ಇಟಾವಾ. ಅದೇ ರೀತಿ, ಇತರ ಎಕ್ಸ್ ಪ್ರೆಸ್ ವೇಗಳು ರಾಜ್ಯದ ಮೂಲೆ ಮೂಲೆಗಳನ್ನು ಜೋಡಿಸುತ್ತಿವೆ, ಇದರಿಂದ "ಉತ್ತರ ಪ್ರದೇಶದ ಪ್ರತಿಯೊಂದು ಮೂಲೆಯೂ ಹೊಸ ಕನಸುಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯಲು ಸಿದ್ಧವಾಗಿದೆ". ಡಬಲ್ ಇಂಜಿನ್ ಸರ್ಕಾರವು ಆ ದಿಕ್ಕಿನಲ್ಲಿ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಾಯು ಸಂಪರ್ಕವನ್ನು ಸುಧಾರಿಸುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಯಾಗ್ ರಾಜ್ ನಲ್ಲಿ ಹೊಸ ವಿಮಾನ ನಿಲ್ದಾಣಗಳ ಟರ್ಮಿನಲ್ ಗಳು ತಲೆ ಎತ್ತಿವೆ ಎಂದರು. ಕುಶಿನಗರವು ಹೊಸ ವಿಮಾನ ನಿಲ್ದಾಣವನ್ನು ಪಡೆದುಕೊಂಡಿದೆ ಮತ್ತು ನೋಯ್ಡಾದ ಜೇವರ್ ನಲ್ಲಿ ಹೊಸ ವಿಮಾನ ನಿಲ್ದಾಣಕ್ಕಾಗಿ ಕಾಮಗಾರಿ ನಡೆಯುತ್ತಿದೆ ಮತ್ತು ಇನ್ನೂ ಅನೇಕ ನಗರಗಳನ್ನು ವಿಮಾನಯಾನ ಸೌಲಭ್ಯಗಳೊಂದಿಗೆ ಜೋಡಿಸಲಾಗುತ್ತಿದೆ. ಇದು ಪ್ರವಾಸೋದ್ಯಮ ಮತ್ತು ಇತರ ಅಭಿವೃದ್ಧಿ ಅವಕಾಶಗಳಿಗೆ ಉತ್ತೇಜನ ನೀಡುತ್ತದೆ ಎಂದೂ ಅವರು ಹೇಳಿದರು.

ಈ ವಲಯದ ಅನೇಕ ಕೋಟೆಗಳ ಸುತ್ತಲೂ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿಪಡಿಸುವಂತೆ ಪ್ರಧಾನಮಂತ್ರಿಯವರು ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಕೋಟೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸುವಂತೆಯೂ ಅವರು ಮುಖ್ಯಮಂತ್ರಿಗಳನ್ನು ಕೋರಿದರು.

ಸರಯೂ ಕಾಲುವೆ ಯೋಜನೆ ಪೂರ್ಣಗೊಳ್ಳಲು 40 ವರ್ಷಗಳನ್ನು ತೆಗೆದುಕೊಂಡ ಉತ್ತರಪ್ರದೇಶದಲ್ಲಿ, ಗೋರಖ್ ಪುರ್ ರಸಗೊಬ್ಬರ ಕಾರ್ಖಾನೆಯನ್ನು 30 ವರ್ಷಗಳ ಕಾಲ ಮುಚ್ಚಿದ್ದ ಉತ್ತರ ಪ್ರದೇಶದಲ್ಲಿ, ಅರ್ಜುನ್ ಅಣೆಕಟ್ಟು ಯೋಜನೆ ಪೂರ್ಣಗೊಳ್ಳಲು 12 ವರ್ಷಗಳನ್ನು ತೆಗೆದುಕೊಂಡ ಉತ್ತರ ಪ್ರದೇಶದಲ್ಲಿ, ಅಮೇಥಿ ರೈಫಲ್ ಕಾರ್ಖಾನೆಯು ಕೇವಲ ಒಂದೇ ಒಂದು ನಾಮಫಲಕದ ಅಸ್ತಿತ್ವವನ್ನು ಹೊಂದಿರುವ ಉತ್ತರಪ್ರದೇಶದಲ್ಲಿ, ರಾಯ್ ಬರೇಲಿ ರೈಲು ಬೋಗಿ ಕಾರ್ಖಾನೆಯು ಬೋಗಿಗಳಿಗೆ ಬಣ್ಣ ಬಳಿಯುವ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಯುಪಿಯಲ್ಲಿ, ಈಗ ಮೂಲಸೌಕರ್ಯ ಕೆಲಸವನ್ನು ಎಷ್ಟು ಗಂಭೀರವಾಗಿ ಮಾಡಲಾಗುತ್ತಿದೆಯೆಂದರೆ ಅದು ಉತ್ತಮ ರಾಜ್ಯಗಳನ್ನು ಸಹ ಮೀರಿಸಿದೆ. ದೇಶಾದ್ಯಂತ ಯುಪಿಯ ಅಸ್ಮಿತೆ ಬದಲಾಗುತ್ತಿದೆ.

ವೇಗದಲ್ಲಿ ಸಾಗುತ್ತಿರುವ ಬದಲಾವಣೆಯ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿ ಅವರು, ರೈಲ್ವೆ ಮಾರ್ಗವನ್ನು ದ್ವಿಗುಣಗೊಳಿಸುವ ಕಾರ್ಯದ ಪ್ರಮಾಣ ವರ್ಷಕ್ಕೆ 50 ಕಿ.ಮೀ.ನಿಂದ 200 ಕಿ.ಮೀ.ಗೆ ಏರಿದೆ ಎಂದು ಹೇಳಿದರು. ಅದೇ ರೀತಿ ಉತ್ತರಪ್ರದೇಶದಲ್ಲಿ 2014ರಲ್ಲಿ 11,000 ಇದ್ದ ಸಾಮಾನ್ಯ ಸೇವಾ ಕೇಂದ್ರಗಳ ಸಂಖ್ಯೆ ಇಂದು 1 ಲಕ್ಷದ 30 ಸಾವಿರ ಸಾಮಾನ್ಯ ಸೇವಾ ಕೇಂದ್ರಗಳಿಗೆ ಏರಿಕೆಯಾಗಿದೆ. ಯುಪಿಯಲ್ಲಿದ್ದ 12 ವೈದ್ಯಕೀಯ ಕಾಲೇಜುಗಳ ಸಂಖ್ಯೆ ಇಂದು 35 ವೈದ್ಯಕೀಯ ಕಾಲೇಜುಗಳಿಗೇರಿದೆ ಮತ್ತು ಇನ್ನೂ 14 ವೈದ್ಯಕೀಯ ಕಾಲೇಜುಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದೂ ಹೇಳಿದರು.

ದೇಶವು ಇಂದು ಸಾಗುತ್ತಿರುವ ಅಭಿವೃದ್ಧಿಯ ಝರಿಯ ಕೇಂದ್ರದಲ್ಲಿ ಎರಡು ಅಂಶಗಳಿರುವುದನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಒಂದು ಉದ್ದೇಶ ಮತ್ತು ಇನ್ನೊಂದು ಗೌರವ (ಇರಾದಾ ಮತ್ತು ಮರ್ಯಾದಾ). ನಾವು ದೇಶದ ವರ್ತಮಾನದಲ್ಲಿ ಹೊಸ ಸೌಲಭ್ಯಗಳನ್ನು ಸೃಷ್ಟಿಸುವುದಲ್ಲದೆ, ದೇಶದ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ಉತ್ತರ ಪ್ರದೇಶದಲ್ಲಿ ಪೂರ್ಣಗೊಂಡ ಯೋಜನೆಗಳು 'ಮರ್ಯಾದಾ'ವನ್ನು ಅಂದರೆ ಗಡುವಿನ ಮಿತಿಯನ್ನು ಸಂಪೂರ್ಣವಾಗಿ ಗೌರವಿಸುತ್ತವೆ ಎಂದು ಅವರು ಹೇಳಿದರು. ಬಾಬಾ ವಿಶ್ವನಾಥ ಧಾಮ್, ಗೋರಖ್ ಪುರ ಎ.ಐ.ಐ.ಎಂ.ಎಸ್., ದಿಲ್ಲಿ-ಮೀರತ್ ಎಕ್ಸ್ ಪ್ರೆಸ್ ವೇ ಮತ್ತು ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇಗಳಲ್ಲಿ ಸೌಲಭ್ಯಗಳ ಉನ್ನತೀಕರಣ ಮತ್ತು ನವೀಕರಣದಂತಹ ಯೋಜನೆಗಳು ಇದಕ್ಕೆ ಉದಾಹರಣೆಗಳಾಗಿವೆ, ಏಕೆಂದರೆ ಪ್ರಸ್ತುತ ಸರ್ಕಾರವು ಈ ಯೋಜನೆಗಳಿಗೆ ಅಡಿಪಾಯ ಹಾಕಿದ್ದು ಮಾತ್ರವಲ್ಲ ಈ ಯೋಜನೆಗಳನ್ನು ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಿದೆ. ಯೋಜನೆಗಳನ್ನು ನಿಗದಿತ ಗಡುವಿಗಿಂತ ಮುಂಚಿತವಾಗಿ ಪೂರ್ಣಗೊಳಿಸಿ ಜನತೆಗೆ ನೀಡುವ ಮೂಲಕ, ನಾವು ಜನಾದೇಶ ಮತ್ತು ಜನರ ವಿಶ್ವಾಸವನ್ನು ಗೌರವಿಸುತ್ತಿದ್ದೇವೆ ಎಂದೂ ಅವರು ಹೇಳಿದರು. ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ಜನರಿಗೆ ಕರೆ ನೀಡಿದರು. ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಮತ್ತು ಮುಂದಿನ ಒಂದು ತಿಂಗಳಲ್ಲಿ ಹೊಸ ಸಂಕಲ್ಪದ ವಾತಾವರಣವನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು.

ನಿರ್ಧಾರ ತೆಗೆದುಕೊಳ್ಳುವುದು ಮತ್ತು ನೀತಿಯನ್ನು ರೂಪಿಸುವುದರ ಹಿಂದಿನ ದೊಡ್ಡ ಚಿಂತನೆಯು ದೇಶದ ಅಭಿವೃದ್ಧಿಯನ್ನು ಮತ್ತಷ್ಟು ತ್ವರಿತಗೊಳಿಸುವುದಾಗಿದೆ ಎಂದು ಪ್ರಧಾನಿ ಹೇಳಿದರು. ದೇಶಕ್ಕೆ ಹಾನಿ ಮಾಡುವ, ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಪ್ರತಿಯೊಂದನ್ನೂ ದೂರವಿಡಬೇಕು. 'ಅಮೃತ್ ಕಾಲ್' ಒಂದು ಅಪರೂಪದ ಅವಕಾಶವಾಗಿದೆ ಮತ್ತು ದೇಶದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದೂ ಅವರು ಹೇಳಿದರು.

ನಮ್ಮ ದೇಶದಲ್ಲಿ ಉಚಿತ ಕೊಡುಗೆಗಳನ್ನು ವಿತರಿಸುವ ಮೂಲಕ ಮತ ಯಾಚಿಸುವ ಸಂಸ್ಕೃತಿಯ ಬಗ್ಗೆ ಗಮನ ಸೆಳೆದ ಪ್ರಧಾನ ಮಂತ್ರಿ ಅವರು ಈ ಉಚಿತ ಕೊಡುಗೆಯ ಸಂಸ್ಕೃತಿಯು ದೇಶದ ಅಭಿವೃದ್ಧಿಗೆ ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದರು. ದೇಶದ ಜನರು ಈ ಉಚಿತ ಕೊಡುಗೆಗಳ ಸಂಸ್ಕೃತಿಯ ಬಗ್ಗೆ ('ರಿವ್ರಿ' ಸಂಸ್ಕೃತಿ) ಬಹಳ ಜಾಗರೂಕರಾಗಿರಬೇಕು. ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಹೊಂದಿರುವವರು ನಿಮಗಾಗಿ ಹೊಸ ಎಕ್ಸ್ ಪ್ರೆಸ್ ವೇಗಳು, ಹೊಸ ವಿಮಾನ ನಿಲ್ದಾಣಗಳು ಅಥವಾ ರಕ್ಷಣಾ ಕಾರಿಡಾರ್ ಗಳನ್ನು ಎಂದಿಗೂ ನಿರ್ಮಿಸುವುದಿಲ್ಲ. ಶ್ರೀಸಾಮಾನ್ಯನಿಗೆ ಉಚಿತ ಕೊಡುಗೆಗಳನ್ನು ವಿತರಿಸುವ ಮೂಲಕ ಮತಗಳನ್ನು ಖರೀದಿಸಬಹುದು ಎಂದು ಉಚಿತ ಕೊಡುಗೆಗಳ ಸಂಸ್ಕೃತಿಯ ಜನರು ಭಾವಿಸುತ್ತಾರೆ. ಈ ಚಿಂತನೆಯನ್ನು ಸಾಮೂಹಿಕವಾಗಿ ಸೋಲಿಸಲು ಮತ್ತು ದೇಶದ ರಾಜಕೀಯದಿಂದ ಈ ಉಚಿತದ ಸಂಸ್ಕೃತಿಯನ್ನು ತೆಗೆದುಹಾಕಲು ಮುಂದಾಗಬೇಕು ಎಂದವರು ಕರೆ ನೀಡಿದರು. ಈ ರಿವ್ರಿ ಸಂಸ್ಕೃತಿಯಿಂದ ದೂರವಿರುವ ಸರಕಾರ ಪಕ್ಕಾ ಮನೆಗಳು, ರೈಲ್ವೆ ಮಾರ್ಗಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳು, ನೀರಾವರಿ, ವಿದ್ಯುತ್ ಯೋಜನೆಗಳಂತಹ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳಲ್ಲಿ ತೊಡಗಿಕೊಂಡಿದೆ ಎಂದು ಅವರು ಹೇಳಿದರು. "ಡಬಲ್-ಎಂಜಿನ್ ಸರ್ಕಾರಗಳು ಉಚಿತಗಳ ಅಡ್ಡದಾರಿಯನ್ನು (ಶಾರ್ಟ್-ಕಟ್) ಅನುಸರಿಸುತ್ತಿಲ್ಲ ಬದಲು ಕಠಿಣ ಪರಿಶ್ರಮದ ಮೂಲಕ ಜನರಿಗೆ ಸೌಲಭ್ಯಗಳನ್ನು ತಲುಪಿಸುತ್ತಿವೆ" ಎಂದವರು ಹೇಳಿದರು.

ಸಮತೋಲಿತ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅಭಿವೃದ್ಧಿಯು ನಿರ್ಲಕ್ಷಿತ ಮತ್ತು ಸಣ್ಣ ನಗರಗಳನ್ನು ತಲುಪುತ್ತಿದ್ದಂತೆ, ಅದು ಸಾಮಾಜಿಕ ನ್ಯಾಯದ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು. ಆಧುನಿಕ ಮೂಲಸೌಕರ್ಯವು ಹೆಚ್ಚು ನಿರ್ಲಕ್ಷಿಸಲ್ಪಟ್ಟ ಪೂರ್ವ ಭಾರತ ಮತ್ತು ಬುಂದೇಲ್ ಖಂಡವನ್ನು ತಲುಪುವುದರಿಂದ, ಇದು ಸಾಮಾಜಿಕ ನ್ಯಾಯಕ್ಕೆ ಕಾರಣವಾಗಿದೆ. ತಮ್ಮ ಪಾಡನ್ನು ತಾವೇ ನೋಡಿಕೊಳ್ಳುವಂತಹ ಸ್ಥಿತಿಯಲ್ಲಿದ್ದ ಹಿಂದುಳಿದ ಜಿಲ್ಲೆಗಳು ಈಗ ಅಭಿವೃದ್ಧಿಯನ್ನು ಕಾಣುತ್ತಿವೆ, ಇದು ಕೂಡ ಸಾಮಾಜಿಕ ನ್ಯಾಯ. ಬಡವರಿಗೆ ಶೌಚಾಲಯಗಳು, ಹಳ್ಳಿಗಳನ್ನು ರಸ್ತೆಗಳು ಮತ್ತು ನಳದ/ನಲ್ಲಿ/ಕೊಳಾಯಿ ನೀರಿನೊಂದಿಗೆ ಜೋಡಿಸುವುದು ಕೂಡಾ ಸಾಮಾಜಿಕ ನ್ಯಾಯ ಎಂದು ಅವರು ಅಭಿಪ್ರಾಯಪಟ್ಟರು. ಬುಂದೇಲ್ ಖಂಡದ ಮತ್ತೊಂದು ಸವಾಲನ್ನು ನಿಭಾಯಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಪ್ರತಿ ಮನೆಗೂ ಕೊಳವೆ ಮೂಲಕ ನೀರು ಒದಗಿಸಲು ಸರ್ಕಾರ ಜಲ ಜೀವನ್ ಮಿಷನ್ ಮೂಲಕ ಕಾರ್ಯೋನ್ಮುಖವಾಗಿದೆ ಎಂದೂ ಅವರು ವಿವರಿಸಿದರು.

ಬುಂದೇಲ್ ಖಂಡ್ ನದಿಗಳ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಸ್ಥಳೀಯ ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನ ಪ್ರಯತ್ನವಾಗಿ ರತೌಲಿ ಅಣೆಕಟ್ಟು, ಭವಾನಿ ಅಣೆಕಟ್ಟು, ಮಜ್ಗಾಂವ್-ಚಿಲ್ಲಿ ತುಂತುರು ನೀರಾವರಿ ಯೋಜನೆಯನ್ನು ಪ್ರಧಾನಮಂತ್ರಿಯವರು ಪಟ್ಟಿ ಮಾಡಿದರು. ಕೆನ್-ಬೆಟ್ವಾ ಸಂಪರ್ಕ ಯೋಜನೆಯು ಈ ಪ್ರದೇಶದ ಜನರ ಜೀವನವನ್ನು ಬದಲಾಯಿಸುತ್ತದೆ ಎಂದವರು ಹೇಳಿದರು.

ಪ್ರತಿ ಜಿಲ್ಲೆಯಲ್ಲೂ 75 ಅಮೃತ್ ಸರೋವರ್ ಗಳ ಆಂದೋಲನಕ್ಕೆ ಬುಂದೇಲ್ ಖಂಡದ ಜನತೆಯೂ ಕೊಡುಗೆ ನೀಡುವಂತೆ ಪ್ರಧಾನಮಂತ್ರಿಯವರು ತಮ್ಮ ಕೋರಿಕೆಯನ್ನು ಪುನರುಚ್ಚರಿಸಿದರು.

ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಬಲಪಡಿಸುವಲ್ಲಿ ಮೇಕ್ ಇನ್ ಇಂಡಿಯಾ ಅಭಿಯಾನದ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ಆಟಿಕೆ ಉದ್ಯಮದ ಯಶೋಗಾಥೆಯನ್ನು ಒತ್ತಿ ಹೇಳಿದರು. ಸರ್ಕಾರ, ಕುಶಲಕರ್ಮಿಗಳು, ಕೈಗಾರಿಕೆಗಳು ಮತ್ತು ನಾಗರಿಕರ ಪ್ರಯತ್ನಗಳಿಂದಾಗಿ ಆಟಿಕೆಗಳ ಆಮದಿನಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಅವರು ಹೇಳಿದರು. ಇದರಿಂದ ಬಡವರು, ಅವಕಾಶ ವಂಚಿತರು, ಹಿಂದುಳಿದವರು, ಬುಡಕಟ್ಟುಗಳ ಜನರು, ದಲಿತರು ಮತ್ತು ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದು ಅವರು ಇದರ ಪರಿಣಾಮದತ್ತ ಗಮನಸೆಳೆದರು.

ಕ್ರೀಡಾ ಕ್ಷೇತ್ರದಲ್ಲಿ ಬುಂದೇಲ್ ಖಂಡ್ ಪ್ರದೇಶದ ಕೊಡುಗೆಯನ್ನು ಪ್ರಧಾನ ಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಅತ್ಯುನ್ನತ ಕ್ರೀಡಾ ಗೌರವಕ್ಕೆ ಸ್ಥಳೀಯ ಪುತ್ರ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಡಲಾಗಿದೆ ಎಂದು ಅವರು ಹೇಳಿದರು. 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕೀರ್ತಿ ತಂದ ಈ ಪ್ರದೇಶದ ಅಂತಾರಾಷ್ಟ್ರೀಯ ಅಥ್ಲೀಟ್ ಶೈಲಿ ಸಿಂಗ್ ಅವರನ್ನೂ ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ

ದೇಶಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ, ಇದರ ಪ್ರಮುಖ ಅಂಶವೆಂದರೆ ರಸ್ತೆ ಮೂಲಸೌಕರ್ಯದ ಸುಧಾರಣೆಯತ್ತ ಕೆಲಸ ಮಾಡುವುದಾಗಿದೆ. 2020 ರ ಫೆಬ್ರವರಿ 29 ರಂದು ಪ್ರಧಾನಮಂತ್ರಿಯವರು ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಇದರ ಒಂದು ಮಹತ್ವದ ಪ್ರಯತ್ನವಾಗಿದೆ. ಎಕ್ಸ್ ಪ್ರೆಸ್ ವೇಯ ಕೆಲಸವು 28 ತಿಂಗಳಲ್ಲಿ ಪೂರ್ಣಗೊಂಡಿದೆ, ಇದು ನವ ಭಾರತದ ಕೆಲಸದ ಸಂಸ್ಕೃತಿಯನ್ನು ಸೂಚಿಸುತ್ತದೆ, ಇಲ್ಲಿ ಯೋಜನೆಗಳನ್ನು ಗಡುವಿನೊಳಗೆ ಪೂರ್ಣಗೊಳಿಸಿ ಜನರಿಗೆ ಒದಗಿಸಲಾಗುತ್ತದೆ.  

ಉತ್ತರ ಪ್ರದೇಶ ಎಕ್ಸ್ ಪ್ರೆಸ್ ವೇಗಳ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) ಆಶ್ರಯದಲ್ಲಿ ಸುಮಾರು 14,850 ಕೋಟಿ ರೂ.ಗಳ ವೆಚ್ಚದಲ್ಲಿ 296 ಕಿ.ಮೀ, ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದ್ದು, ಮುಂದಿನ ಹಂತದಲ್ಲಿ ಇದನ್ನು ಆರು ಪಥಗಳಿಗೆ ವಿಸ್ತರಿಸಬಹುದಾಗಿದೆ. ಇದು ಚಿತ್ರಕೂಟ ಜಿಲ್ಲೆಯ ಭರತ್ಕೂಪ್ ಬಳಿಯ ಗೊಂಡಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ -35 ರಿಂದ ಇಟಾವಾ ಜಿಲ್ಲೆಯ ಕುದ್ರೈಲ್ ಗ್ರಾಮದ ಬಳಿಯವರೆಗೆ ಹರಡಿಕೊಂಡಿದೆ, ಅಲ್ಲಿ ಇದು ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇ ಯಲ್ಲಿ ವಿಲೀನಗೊಳ್ಳುತ್ತದೆ. ಇದು ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಅವುಗಳೆಂದರೆ ಚಿತ್ರಕೂಟ, ಬಾಂಡಾ, ಮಹೋಬಾ, ಹಮೀರ್ಪುರ್, ಜಲೌನ್, ಔರೈಯಾ ಮತ್ತು ಇಟಾವಾ.

ಈ ವಲಯದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇ ಯು ಆರ್ಥಿಕ ಅಭಿವೃದ್ಧಿಗೆ ಭಾರೀ ಉತ್ತೇಜನವನ್ನು ನೀಡುತ್ತದೆ, ಇದರ ಪರಿಣಾಮವಾಗಿ ಸ್ಥಳೀಯ ಜನರಿಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎಕ್ಸ್ ಪ್ರೆಸ್ ವೇ ಪಕ್ಕದಲ್ಲಿರುವ ಬಾಂಡಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಕೆಲಸ ಈಗಾಗಲೇ ಪ್ರಾರಂಭವಾಗಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi