"ಕರ್ನಾಟಕದ ಕೊಡುಗೆಗಳಿಲ್ಲದೆ ಭಾರತದ ಅಸ್ಮಿತೆ, ಸಂಪ್ರದಾಯಗಳು ಮತ್ತು ಸ್ಫೂರ್ತಿಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ"
“ಪ್ರಾಚೀನ ಕಾಲದಿಂದಲೂ ಕರ್ನಾಟಕವು ಭಾರತದಲ್ಲಿ ಹನುಮಂತನ ಪಾತ್ರವನ್ನು ವಹಿಸಿದೆ”
"ಯಾವುದೇ ಬದಲಾವಣೆ ಪರ್ವ ಅಯೋಧ್ಯೆಯಿಂದ ಪ್ರಾರಂಭವಾಗಿ ರಾಮೇಶ್ವರಕ್ಕೆ ಹೋಗುತ್ತದೆ, ಅದು ಕರ್ನಾಟಕದಲ್ಲಿ ಮಾತ್ರ ಬಲಗೊಳ್ಳುತ್ತದೆ"
‘ಅನುಭವ ಮಂಟಪʼದ ಮೂಲಕ ಭಗವಾನ್ ಬಸವೇಶ್ವರರ ನೀಡಿದ ಪ್ರಜಾಸತ್ತಾತ್ಮಕ ಬೋಧನೆಗಳು ಭಾರತಕ್ಕೆ ಬೆಳಕಿನ ಕಿರಣವಿದ್ದಂತೆ”
“ಕರ್ನಾಟಕವು ಸಂಪ್ರದಾಯಗಳು ಮತ್ತು ತಂತ್ರಜ್ಞಾನದ ನಾಡು. ಇದು ಐತಿಹಾಸಿಕ ಸಂಸ್ಕೃತಿಯಂತೆಯೇ ಆಧುನಿಕ ಕೃತಕ ಬುದ್ಧಿಮತ್ತೆಯನ್ನೂ ಹೊಂದಿದೆ”
“2009-2014 ರ ನಡುವೆ ಐದು ವರ್ಷಗಳಲ್ಲಿ ಕರ್ನಾಟಕವು ರೈಲ್ವೆ ಯೋಜನೆಗಳಿಗೆ 4 ಸಾವಿರ ಕೋಟಿ ರೂ.ಗಳನ್ನು ಪಡೆದಿತ್ತು, ಆದರೆ ಈ ವರ್ಷದ ಬಜೆಟ್ ಒಂದರಲ್ಲಿಯೇ ಕರ್ನಾಟಕ ರೈಲು ಮೂಲಸೌಕರ್ಯಕ್ಕೆ 7 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ”
“ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಚಲನಚಿತ್ರಗಳು ಕನ್ನಡೇತರ ಪ್ರೇಕ್ಷಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ ಮತ್ತು ಕರ್ನಾಟಕದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಹಂಬಲವನ್ನು ಹುಟ್ಟುಹಾಕಿವೆ. ಈ ಬಯಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ  ‘ಬಾರಿಸು ಕನ್ನಡ ಡಿಂಡಿಮವ’ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಅವರು ವಸ್ತು ಪ್ರದರ್ಶನವನ್ನು ಸಹ ವೀಕ್ಷಿಸಿದರು. ಈ ಉತ್ಸವವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿದೆ ಮತ್ತು ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಸಂಭ್ರಮಿಸುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೆಹಲಿ-ಕರ್ನಾಟಕ ಸಂಘವು ಭವ್ಯ ಪರಂಪರೆಯನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು. ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ 75 ನೇ ವಾರ್ಷಿಕೋತ್ಸವದ ಆಚರಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು. 75 ವರ್ಷಗಳ ಹಿಂದಿನ ಸನ್ನಿವೇಶಗಳನ್ನು ನಾವು ವಿಶ್ಲೇಷಿಸಿದಾಗ ಭಾರತದ ಅಜರಾಮರ ಚೈತನ್ಯವನ್ನು ನೋಡಬಹುದು ಎಂದು ಪ್ರಧಾನಿ ಹೇಳಿದರು. ಕರ್ನಾಟಕ ಸಂಘದ ಸ್ಥಾಪನೆಯು ತನ್ನ ಮೊದಲ ಕೆಲವು ವರ್ಷಗಳಲ್ಲಿ ರಾಷ್ಟ್ರವನ್ನು ಬಲಪಡಿಸುವ ಜನರ ಸಂಕಲ್ಪಕ್ಕೆ ಪುರಾವೆಯಾಗಿದೆ ಮತ್ತು ಇಂದು ಅಮೃತ ಕಾಲದ ಪ್ರಾರಂಭದಲ್ಲಿ ಸಮರ್ಪಣೆ ಮತ್ತು ಶಕ್ತಿಯು ಅದೇ ಪ್ರಮಾಣದಲ್ಲಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು. ಕರ್ನಾಟಕ ಸಂಘದ ಈ 75 ವರ್ಷಗಳ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಅವರು ಅಭಿನಂದಿಸಿದರು.

ಕರ್ನಾಟಕದ ಕೊಡುಗೆಗಳಿಲ್ಲದೆ ಭಾರತದ ಅಸ್ಮಿತೆ, ಸಂಪ್ರದಾಯಗಳು ಮತ್ತು ಸ್ಫೂರ್ತಿಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಪೌರಾಣಿಕ ಕಾಲದ ಹನುಮಂತನ ಪಾತ್ರದ ಸಾದೃಶ್ಯವನ್ನು ವಿವರಿಸಿದ ಪ್ರಧಾನಿ, ಭಾರತದಲ್ಲಿ ಕರ್ನಾಟಕವು ಅದೇ ರೀತಿಯ ಪಾತ್ರವನ್ನು ವಹಿಸಿದೆ ಎಂದು ಒತ್ತಿಹೇಳಿದರು. ಬದಲಾವಣೆಯ ಪರ್ವ ಅಯೋಧ್ಯೆಯಲ್ಲಿ ಪ್ರಾರಂಭವಾಗಿ ರಾಮೇಶ್ವರದಲ್ಲಿ ಕೊನೆಗೊಂಡರೂ ಅದು ಕರ್ನಾಟಕದಲ್ಲಿ ತನ್ನ ಶಕ್ತಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು. 

ಆಕ್ರಮಣಕಾರರು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದ ಮತ್ತು ಸೋಮನಾಥದಂತಹ ಶಿವಲಿಂಗಗಳನ್ನು ನಾಶಪಡಿಸುತ್ತಿದ್ದ ಮಧ್ಯಕಾಲೀನ ಅವಧಿಯನ್ನು ಉಲ್ಲೇಖಿಸಿದ ಪ್ರಧಾನಿಯವರು, ದೇವರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಮತ್ತು ಭಗವಾನ್ ಬಸವೇಶ್ವರರಂತಹ ಸಂತರು ಜನರನ್ನು ತಮ್ಮ ನಂಬಿಕೆಯೊಂದಿಗೆ ಬೆಸೆದರು. ಹಾಗೆಯೇ ರಾಣಿ ಅಬ್ಬಕ್ಕ, ಒನಕೆ ಓಬವ್ವ, ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದ ಯೋಧರು ವಿದೇಶಿ ಶಕ್ತಿಗಳನ್ನು ಎದುರಿಸಿದರು. ಸ್ವಾತಂತ್ರ್ಯದ ನಂತರ, ಕರ್ನಾಟಕದ ಗಣ್ಯರು ಭಾರತಕ್ಕೆ ಸ್ಫೂರ್ತಿ ನೀಡುವುದನ್ನು ಮುಂದುವರೆಸಿದರು ಎಂದು ಪ್ರಧಾನಿ ಹೇಳಿದರು.

ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಮಂತ್ರವನ್ನು ಪಾಲಿಸುತ್ತಿರುವ ಕರ್ನಾಟಕದ ಜನತೆಯನ್ನು ಪ್ರಧಾನಿ ಶ್ಲಾಘಿಸಿದರು. ಕವಿ ಕುವೆಂಪು ಅವರ ‘ನಾಡಗೀತೆ’ಕುರಿತು ಮಾತನಾಡಿದ ಅವರು, ನಾಡ ಗೀತೆಯಲ್ಲಿ ರಾಷ್ಟ್ರೀಯ ಭಾವನೆಗಳು ಸುಂದರವಾಗಿ ಮೂಡಿಬಂದಿವೆ ಎಂದು ಶ್ಲಾಘಿಸಿದರು. ಈ ಹಾಡಿನಲ್ಲಿ ಭಾರತದ ನಾಗರಿಕತೆಯನ್ನು ಚಿತ್ರಿಸಲಾಗಿದೆ ಮತ್ತು ಕರ್ನಾಟಕದ ಪಾತ್ರಗಳು ಮತ್ತು ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಈ ಗೀತೆಯ ಆತ್ಮವನ್ನು ನಾವು ಅರ್ಥಮಾಡಿಕೊಂಡಾಗ, ನಮಗೆ ಏಕ್ ಭಾರತ್ ಶ್ರೇಷ್ಠ ಭಾರತ್ ತಿರುಳು ಕೂಡ ಸಿಗುತ್ತದೆ ಎಂದು ಅವರು ಹೇಳಿದರು.

ಭಾರತವು ಜಿ-20 ರಂತಹ ಜಾಗತಿಕ ಸಂಘಟನೆಯ ಅಧ್ಯಕ್ಷತೆಯನ್ನು ವಹಿಸಿರುವಾಗ ಪ್ರಜಾಪ್ರಭುತ್ವದ ತಾಯಿಯ ಆದರ್ಶಗಳಿಂದ ಭಾರತವು ಮಾರ್ಗದರ್ಶನ ಪಡೆಯುತ್ತದೆ ಎಂದು ಪ್ರಧಾನಿ ಹೇಳಿದರು. ‘ಅನುಭವ ಮಂಟಪʼದ ಮೂಲಕ ಭಗವಾನ್ ಬಸವೇಶ್ವರರ ವಚನಗಳು ಮತ್ತು ಪ್ರಜಾಸತ್ತಾತ್ಮಕ ಪ್ರವಚನಗಳು ಭಾರತಕ್ಕೆ ಬೆಳಕಿನ ಕಿರಣವಿದ್ದಂತೆ ಎಂದು ಅವರು ಹೇಳಿದರು. ಲಂಡನ್ನಲ್ಲಿ ಹಲವಾರು ಭಾಷೆಗಳಲ್ಲಿ ಅವರ ವಚನಗಳ ಸಂಕಲನದೊಂದಿಗೆ ಭಗವಾನ್ ಬಸವೇಶ್ವರರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಅವಕಾಶ ದೊರೆತಿರುವುದಕ್ಕೆ ಪ್ರಧಾನಮಂತ್ರಿ ಹರ್ಷ ವ್ಯಕ್ತಪಡಿಸಿದರು. ಇದು ಕರ್ನಾಟಕದ ಸಿದ್ಧಾಂತ ಮತ್ತು ಅದರ ಪರಿಣಾಮಗಳ ಅಮರತ್ವಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಕರ್ನಾಟಕವು ಸಂಪ್ರದಾಯಗಳು ಮತ್ತು ತಂತ್ರಜ್ಞಾನದ ನಾಡು. ಇದು ಐತಿಹಾಸಿಕ ಸಂಸ್ಕೃತಿಯೋದಿಗೆ ಆಧುನಿಕ ಕೃತಕ ಬುದ್ಧಿಮತ್ತೆಯನ್ನೂ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯವರು ಜರ್ಮನಿಯ ಚಾನ್ಸೆಲರ್ ಶ್ರೀ ಓಲಾಫ್ ಸ್ಕೋಲ್ಜ್ ಅವರನ್ನು ಇಂದು ಭೇಟಿಯಾದುದನ್ನು ನೆನಪಿಸಿಕೊಂಡರು ಮತ್ತು ಅವರ ಮುಂದಿನ ಕಾರ್ಯಕ್ರಮ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಹತ್ವದ ಜಿ-20 ಸಭೆಯೂ ನಡೆಯುತ್ತಿದೆ ಎಂದು ಅವರು ತಿಳಿಸಿದರು. ತಾನು ಭೇಟಿಯಾಗುವ ಯಾವುದೇ ಅಂತರರಾಷ್ಟ್ರೀಯ ಪ್ರತಿನಿಧಿಗೆ ಭಾರತದ ಪ್ರಾಚೀನತೆ ಮತ್ತು ಆಧುನಿಕತೆ ಎರಡೂ ಬದಿಗಳನ್ನು ಪ್ರದರ್ಶಿಸಲು ಶ್ರಮಿಸುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಸಂಪ್ರದಾಯ ಮತ್ತು ತಂತ್ರಜ್ಞಾನ ನವ ಭಾರತದ ಮನೋಧರ್ಮವಾಗಿದೆ ಎಂದು ಅವರು ಪುನರುಚ್ಚರಿಸಿದರು. ದೇಶವು ಅಭಿವೃದ್ಧಿ ಮತ್ತು ಪರಂಪರೆ, ಪ್ರಗತಿ ಮತ್ತು ಸಂಪ್ರದಾಯಗಳೊಂದಿಗೆ ಒಟ್ಟಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಒಂದೆಡೆ ಭಾರತ ತನ್ನ ಪುರಾತನ ದೇವಾಲಯಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಪುನರುಜ್ಜೀವನಗೊಳಿಸುತ್ತಿದ್ದರೆ, ಇನ್ನೊಂದೆಡೆ ಡಿಜಿಟಲ್ ಪಾವತಿಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಅವರು ಒತ್ತಿ ಹೇಳಿದರು. ಇಂದಿನ ಭಾರತವು ತನ್ನಲ್ಲಿಂದ ಕದಿಯಲಾಗಿದ್ದ ವಿಗ್ರಹಗಳು ಮತ್ತು ಶತಮಾನಗಳಷ್ಟು ಹಳೆಯದಾದ ಕಲಾಕೃತಿಗಳನ್ನು ವಿದೇಶಗಳಿಂದ ಮರಳಿ ತರುತ್ತಿದೆ ಮತ್ತು ಅದು ದಾಖಲೆಯ ಎಫ್ಡಿಐ ಅನ್ನು ಸ್ವೀಕರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇದು ನವ ಭಾರತದ ಅಭಿವೃದ್ಧಿ ಪಥವಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಕರ್ನಾಟಕದ ಅಭಿವೃದ್ಧಿಯು ದೇಶಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 2009-2014ರ ನಡುವೆ ಕರ್ನಾಟಕಕ್ಕೆ ಕೇಂದ್ರದಿಂದ 11 ಸಾವಿರ ಕೋಟಿ ರೂಪಾಯಿ ನೀಡಲಾಗಿತ್ತು, 2019 ರಿಂದ 2023 ರವರೆಗೆ 30 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2009-2014 ರ ನಡುವೆ ಕರ್ನಾಟಕವು ರೈಲ್ವೆ ಯೋಜನೆಗಳಲ್ಲಿ 4 ಸಾವಿರ ಕೋಟಿಗಳನ್ನು ಮಾತ್ರ ಪಡೆದಿತ್ತು, ಆದರೆ ಈ ವರ್ಷದ ಬಜೆಟ್ನಲ್ಲಿ ಒಂದರಲ್ಲಿಯೇ ಕರ್ನಾಟಕ ರೈಲ್ವೆ ಮೂಲಸೌಕರ್ಯಕ್ಕೆ 7 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳು ಆ 5 ವರ್ಷಗಳಲ್ಲಿ 6 ಸಾವಿರ ಕೋಟಿ ರೂ.ಗಳನ್ನು ಪಡೆದಿದ್ದರೆ, ಕಳೆದ 9 ವರ್ಷಗಳಲ್ಲಿ, ಕರ್ನಾಟಕವು ತನ್ನ ಹೆದ್ದಾರಿಗಳಿಗಾಗಿ ಪ್ರತಿ ವರ್ಷ 5 ಸಾವಿರ ಕೋಟಿ ರೂ.ಬಂಡವಾಳವನ್ನು ಪಡೆದಿದೆ. ಪ್ರಸ್ತುತ ಸರ್ಕಾರವು ಭದ್ರಾ ಯೋಜನೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತಿದೆ ಮತ್ತು ಈ ಎಲ್ಲಾ ಬೆಳವಣಿಗೆಗಳು ತ್ವರಿತವಾಗಿ ಕರ್ನಾಟಕದ ಚಿತ್ರಣವನ್ನು ಬದಲಾಯಿಸುತ್ತಿವೆ ಎಂದು ಪ್ರಧಾನಿ ಹೇಳಿದರು.

ದೆಹಲಿ ಕರ್ನಾಟಕ ಸಂಘವು 75 ವರ್ಷಗಳಲ್ಲಿ ಬೆಳವಣಿಗೆ, ಸಾಧನೆ ಮತ್ತು ಜ್ಞಾನದ ಹಲವು ಪ್ರಮುಖ ಕ್ಷಣಗಳನ್ನು ಮುನ್ನೆಲೆಗೆ ತಂದಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ 25 ವರ್ಷಗಳ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಅಮೃತ ಕಾಲ ಮತ್ತು ದೆಹಲಿ ಕರ್ನಾಟಕ ಸಂಘದ ಮುಂದಿನ 25 ವರ್ಷಗಳಲ್ಲಿ ಕೈಗೊಳ್ಳಬಹುದಾದ ಮಹತ್ವದ ಕ್ರಮಗಳನ್ನು ಎತ್ತಿ ತೋರಿಸಿದರು. ಜ್ಞಾನ ಮತ್ತು ಕಲೆಯ ಮೇಲೆ ಗಮನಹರಿಸಬೇಕು ಮತ್ತು ಕನ್ನಡ ಭಾಷೆಯ ಸೌಂದರ್ಯ ಮತ್ತು ಅದರ ಶ್ರೀಮಂತ ಸಾಹಿತ್ಯವನ್ನು ಎತ್ತಿ ತೋರಿಸಬೇಕು ಎಂದು ಅವರು ಒತ್ತಿ ಹೇಳಿದರು. ಕನ್ನಡ ಭಾಷೆಯನ್ನು ಓದುವವರ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರಕಾಶಕರು ಉತ್ತಮ ಪುಸ್ತಕವನ್ನು ಪ್ರಕಟಿಸಿದ ಕೆಲವೇ ವಾರಗಳಲ್ಲಿ ಮರುಮುದ್ರಣ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕಲಾ ಕ್ಷೇತ್ರದಲ್ಲಿ ಕರ್ನಾಟಕದ ಅಸಾಧಾರಣ ಸಾಧನೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕರ್ನಾಟಕವು ಕಂಸಾಳೆಯಿಂದ ಕರ್ನಾಟಕ ಸಂಗೀತದವರೆಗೆ ಮತ್ತು ಭರತನಾಟ್ಯದಿಂದ ಯಕ್ಷಗಾನದವರೆಗೆ ಶಾಸ್ತ್ರೀಯ ಮತ್ತು ಜನಪ್ರಿಯ ಕಲೆಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಿದರು. ಈ ಕಲಾ ಪ್ರಕಾರಗಳನ್ನು ಜನಪ್ರಿಯಗೊಳಿಸುವ ಕರ್ನಾಟಕ ಸಂಘದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಈ ಪ್ರಯತ್ನಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಕನ್ನಡೇತರ ಕುಟುಂಬಗಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರುವಂತೆ ದೆಹಲಿ ಕನ್ನಡಿಗರ ಕುಟುಂಬಗಳನ್ನು ಕೋರಿದರು. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲವು ಚಲನಚಿತ್ರಗಳು ಕನ್ನಡೇತರ ಪ್ರೇಕ್ಷಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ ಮತ್ತು ಕರ್ನಾಟಕದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಬಯಕೆಯನ್ನು ಹುಟ್ಟುಹಾಕಿವೆ ಎಂದು ಪ್ರಧಾನಿ ಹೇಳಿದರು. ಈ ಬಯಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ರಾಷ್ಟ್ರೀಯ ಯುದ್ಧ ಸ್ಮಾರಕ, ಪ್ರಧಾನಮಂತ್ರಿ ಸಂಗ್ರಹಾಲಯ ಮತ್ತು ಕರ್ತವ್ಯ ಪಥಕ್ಕೆ ಭೇಟಿ ನೀಡುವಂತೆ ಅವರು ಕಲಾವಿದರು ಮತ್ತು ವಿದ್ವಾಂಸರನ್ನು ವಿನಂತಿಸಿದರು.

ಪ್ರಧಾನಮಂತ್ರಿಯವರು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷʼವನ್ನು ಪ್ರಪಂಚದಾದ್ಯಂತ ಆಚರಿಸುತ್ತಿರುವುದರ ಬಗ್ಗೆ ಗಮನ ಸೆಳೆದರು ಮತ್ತು ಕರ್ನಾಟಕವು ಭಾರತೀಯ ಸಿರಿಧಾನ್ಯ ಅಂದರೆ ‘ಶ್ರೀ ಧಾನ್ಯ’ದ ಮುಖ್ಯ ಕೇಂದ್ರವಾಗಿದೆ ಎಂದು ಹೇಳಿದರು. ಶ್ರೀ ಅನ್ನ ರಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಸಾಮಾಜಿಕ ಅಸ್ಮಿತೆಯ ಒಂದು ಭಾಗವಾಗಿದೆ, ಯಡಿಯೂರಪ್ಪ ಅವರ ಕಾಲದಿಂದಲೂ ಕರ್ನಾಟಕದಲ್ಲಿ 'ಶ್ರೀ ಧಾನ್ಯ'ದ ಪ್ರೋತ್ಸಾಹಕ್ಕಾಗಿ ಆರಂಭಿಸಲಾದ ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.

 ಇಡೀ ದೇಶವೇ ಕನ್ನಡಿಗರ ಹಾದಿಯಲ್ಲಿ ಸಾಗುತ್ತಿದ್ದು, ಸಿರಿಧಾನ್ಯಗಳನ್ನು ‘ಶ್ರೀ ಅನ್ನʼ ಎಂದು ಕರೆಯಲು ಆರಂಭಿಸಿದೆ ಎಂದು ಹೇಳಿದರು. ಇಡೀ ಜಗತ್ತು ಶ್ರೀ ಅನ್ನದ ಪ್ರಯೋಜನಗಳನ್ನು ಗುರುತಿಸುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಅದರ ಬೇಡಿಕೆಯು ಹೆಚ್ಚಾಗಲಿದೆ, ಇದರಿಂದಾಗಿ ಕರ್ನಾಟಕದ ರೈತರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.

2047 ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದು 100 ವರ್ಷಗಳನ್ನು ಪೂರೈಸಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ, ಭಾರತದ ವೈಭವದ ಅಮೃತ ಕಾಲದಲ್ಲಿ ನೂರನೇ ವರ್ಷಕ್ಕೆ ಕಾಲಿಡಲಿರುವ ದೆಹಲಿ ಕರ್ನಾಟಕ ಸಂಘದ ಕೊಡುಗೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಪ್ರಧಾನಿಯವರು ಭಾಷಣವನ್ನು ಮುಕ್ತಾಯಗೊಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕಾರ್ಯಕ್ರಮ ಆಚರಣಾ ಸಮಿತಿ ಅಧ್ಯಕ್ಷ ಶ್ರೀ ಸಿ.ಟಿ.ರವಿ ಮತ್ತು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಸಿ.ಎಂ.ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

 

ಹಿನ್ನೆಲೆ

ಪ್ರಧಾನಮಂತ್ರಿಯವರ ‘ಏಕ್ ಭಾರತ್ ಶ್ರೇಷ್ಠ ಭಾರತ್’ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಸಂಭ್ರಮಿಸಲು ‘ಬಾರಿಸು ಕನ್ನಡ ಡಿಂಡಿಮವ’ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಉತ್ಸವವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತದೆ ಮತ್ತು ನೂರಾರು ಕಲಾವಿದರಿಗೆ ನೃತ್ಯ, ಸಂಗೀತ, ನಾಟಕ, ಕಾವ್ಯ ಇತ್ಯಾದಿಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi