ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿ ಅನಾವರಣಗೊಳಿಸಿದ ಪ್ರಧಾನಮಂತ್ರಿ
ಈಶಾನ್ಯವು ಭಾರತದ 'ಅಷ್ಟಲಕ್ಷ್ಮಿ': ಪ್ರಧಾನಮಂತ್ರಿ
ಅಷ್ಟಲಕ್ಷ್ಮಿ ಮಹೋತ್ಸವವು ಈಶಾನ್ಯದ ಉಜ್ವಲ ಭವಿಷ್ಯದ ಆಚರಣೆಯಾಗಿದೆ. ಇದು ಅಭಿವೃದ್ಧಿಯ ಹೊಸ ಉದಯದ ಹಬ್ಬವಾಗಿದ್ದು, ವಿಕಸಿತ ಭಾರತದ ಧ್ಯೇಯವನ್ನು ಮುನ್ನಡೆಸುತ್ತದೆ: ಪ್ರಧಾನಮಂತ್ರಿ
ನಾವು ಈಶಾನ್ಯವನ್ನು ಭಾವನೆ, ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ತ್ರಿಮೂರ್ತಿಗಳೊಂದಿಗೆ ಸಂಪರ್ಕಿಸುತ್ತಿದ್ದೇವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿಂದು ಅಷ್ಟಲಕ್ಷ್ಮಿ ಮಹೋತ್ಸವ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಎಲ್ಲ ಗಣ್ಯರನ್ನು ಸ್ವಾಗತಿಸಿದ ಶ್ರೀ ಮೋದಿ, ಇದು ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು 75 ವರ್ಷಗಳನ್ನು ಪೂರೈಸಿದ್ದು, ಎಲ್ಲಾ ನಾಗರಿಕರಿಗೂ ಸ್ಫೂರ್ತಿಯಾಗಿದೆ. ಭಾರತದ ಎಲ್ಲಾ ನಾಗರಿಕರ ಪರವಾಗಿ ಶ್ರೀ ಮೋದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದರು.

ಭಾರತ ಮಂಟಪವು ಕಳೆದ 2 ವರ್ಷಗಳಲ್ಲಿ ಜಿ-20 ಶೃಂಗಸಭೆಯ ಯಶಸ್ವಿ ಸಂಘಟನೆ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ, ಇಂದಿನ ಕಾರ್ಯಕ್ರಮವು ಇನ್ನಷ್ಟು ವಿಶೇಷವಾಗಿದೆ. ಈ ಕಾರ್ಯಕ್ರಮವು ಇಡೀ ದೆಹಲಿಯನ್ನು ಈಶಾನ್ಯ ಭಾರತದ ವೈವಿಧ್ಯಮಯ ಛಾಯೆಗಳೊಂದಿಗೆ ಹೊಳೆಯುವಂತೆ ಮಾಡಿದೆ. ಮೊದಲ ಅಷ್ಟಲಕ್ಷ್ಮಿ ಮಹೋತ್ಸವವನ್ನು ಮುಂದಿನ 3 ದಿನಗಳಲ್ಲಿ ಆಚರಿಸಲಾಗುವುದು ಎಂದು ಹೇಳಿದ ಶ್ರೀ ಮೋದಿ, ಈ ಕಾರ್ಯಕ್ರಮವು ಇಡೀ ಈಶಾನ್ಯ ಭಾರತದ ಸಾಮರ್ಥ್ಯವನ್ನು ದೇಶ ಮತ್ತು ಜಗತ್ತಿಗೆ ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು ಅನೇಕ ವ್ಯಾಪಾರ ಒಪ್ಪಂದಗಳಿಗೆ ಸಾಕ್ಷಿಯಾಗಲಿದೆ. ಸಂಸ್ಕೃತಿ, ಪಾಕಪದ್ಧತಿ ಮತ್ತು ಇತರ ಆಕರ್ಷಣೆಗಳೊಂದಿಗೆ ಈಶಾನ್ಯದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ವಿವಿಧ ಸಾಧಕರ ಸಾಧನೆಗಳಿಂದ ಜನರಿಗೆ ಸ್ಫೂರ್ತಿ ನೀಡುತ್ತದೆ. ಈ ಕಾರ್ಯಕ್ರಮವು ವಿಶಿಷ್ಟ ಮತ್ತು ಮೊದಲನೆಯದು ಎಂದು ಕರೆದ ಶ್ರೀ ಮೋದಿ, ಈ ಕಾರ್ಯಕ್ರಮವು ಈಶಾನ್ಯ ಭಾರತದಲ್ಲಿ ಬೃಹತ್ ಹೂಡಿಕೆ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಪ್ರಪಂಚದಾದ್ಯಂತ ಹೂಡಿಕೆದಾರರ ಜೊತೆಗೆ ರೈತರು, ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಸಮಾರಂಭದಲ್ಲಿ ವಸ್ತು ಪ್ರದರ್ಶನಗಳು ಈಶಾನ್ಯ ಭಾರತದ ವೈವಿಧ್ಯತೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಹಾಗಾಗಿ, ಅಷ್ಟಲಕ್ಷ್ಮಿ ಮಹೋತ್ಸವದ ಆಯೋಜಕರು, ಈಶಾನ್ಯ ಭಾರತದ ಜನರು ಮತ್ತು ಹೂಡಿಕೆದಾರರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

 

ಕಳೆದ 100ರಿಂದ 200 ವರ್ಷಗಳಲ್ಲಿ, ಪಾಶ್ಚಿಮಾತ್ಯ ಪ್ರಪಂಚದ ಉದಯವನ್ನು ಪ್ರತಿಯೊಬ್ಬರೂ ನೋಡಿದ್ದಾರೆ, ಪಾಶ್ಚಿಮಾತ್ಯ ಪ್ರದೇಶವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ - ಪ್ರತಿ ಹಂತದಲ್ಲೂ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಭಾರತವೂ ಪ್ರಾಸಂಗಿಕವಾಗಿ ಪಾಶ್ಚಿಮಾತ್ಯ ಪ್ರದೇಶದ ಪ್ರಭಾವವನ್ನು ಮತ್ತು ಅದರ ಬೆಳವಣಿಗೆಯ ಕಥೆಯಲ್ಲಿ ಅದರ ಪಾತ್ರವನ್ನು ಕಂಡಿದೆ. ಪಶ್ಚಿಮ ಕೇಂದ್ರಿತ ಅವಧಿಯ ನಂತರ, 21ನೇ ಶತಮಾನವು ಪೂರ್ವಕ್ಕೆ, ಅಂದರೆ ಏಷ್ಯಾ ಮತ್ತು ಭಾರತಕ್ಕೆ ಸೇರಿದೆ. ಮುಂಬರುವ ದಿನಗಳಲ್ಲಿ, ಭಾರತದ ಬೆಳವಣಿಗೆಯ ಕಥೆಯು ಪೂರ್ವ ಭಾರತಕ್ಕೆ ಮತ್ತು ನಿರ್ದಿಷ್ಟವಾಗಿ ಈಶಾನ್ಯಕ್ಕೆ ಸೇರಿದೆ. ಕಳೆದ ದಶಕಗಳಲ್ಲಿ ಭಾರತವು ಮುಂಬೈ, ಅಹಮದಾಬಾದ್, ದೆಹಲಿ, ಚೆನ್ನೈ, ಬೆಂಗಳೂರು, ಹೈದರಾಬಾದ್‌ನಂತಹ ದೊಡ್ಡ ನಗರಗಳ ಹೊರಹೊಮ್ಮುವಿಕೆಯನ್ನು ಕಂಡಿದೆ. ಮುಂಬರುವ ದಶಕಗಳಲ್ಲಿ ಭಾರತವು ಗುವಾಹಟಿ, ಅಗರ್ತಲಾ, ಇಂಫಾಲ್, ಇಟಾನಗರ, ಗ್ಯಾಂಗ್‌ಟಾಕ್, ಕೊಹಿಮಾ, ಶಿಲ್ಲಾಂಗ್ ಮತ್ತು ಐಜ್ವಾಲ್‌ನಂತಹ ನಗರಗಳ ಹೊಸ ಸಾಮರ್ಥ್ಯವನ್ನು ನೋಡಲಿದೆ, ಅಷ್ಟಲಕ್ಷ್ಮಿಯಂತಹ ಕಾರ್ಯಕ್ರಮ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು.

ಭಾರತೀಯ ಸಂಪ್ರದಾಯವನ್ನು ಸ್ಪರ್ಶಿಸಿದ ಪ್ರಧಾನಿ, ಲಕ್ಷ್ಮಿ ದೇವಿಯನ್ನು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯ 8 ರೂಪಗಳನ್ನು ಪಟ್ಟಿ ಮಾಡಿದ ಅವರು, ಲಕ್ಷ್ಮಿ ದೇವಿಯನ್ನು ಪೂಜಿಸಿದಾಗ ಎಲ್ಲಾ 8 ರೂಪಗಳನ್ನು ಪೂಜಿಸಲಾಗುತ್ತದೆ. ಅದೇ ರೀತಿ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ಈಶಾನ್ಯ ಭಾರತದ 8 ರಾಜ್ಯಗಳ ಅಷ್ಟಲಕ್ಷ್ಮಿಯು ಪ್ರಸ್ತುತವಾಗಿದೆ. ಈಶಾನ್ಯದ ಈ 8 ರಾಜ್ಯಗಳಲ್ಲಿ ಅಷ್ಟಲಕ್ಷ್ಮಿಯ 8 ರೂಪಗಳನ್ನು ಪ್ರತಿನಿಧಿಸಲಾಗಿದೆ ಎಂದು ಹೇಳಿದರು.

 

ಮೊದಲ ರೂಪ ಆದಿ ಲಕ್ಷ್ಮಿ ಎಂದ ಶ್ರೀ ಮೋದಿ, ನಮ್ಮ ಈಶಾನ್ಯದ ಪ್ರತಿಯೊಂದು ರಾಜ್ಯದಲ್ಲೂ ಆದಿ ಸಂಸ್ಕೃತಿ ಪ್ರಬಲವಾಗಿ ಹರಡಿದೆ. ಈಶಾನ್ಯ ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಂಪ್ರದಾಯ ಮತ್ತು ಸಂಸ್ಕೃತಿ ಆಚರಿಸಿಕೊಂಡಿರುವುದನ್ನು ಗಮನಿಸಿದ ಪ್ರಧಾನಿ, ಮೇಘಾಲಯದ ಚೆರ್ರಿ ಬ್ಲಾಸಮ್ ಫೆಸ್ಟಿವಲ್, ನಾಗಾಲ್ಯಾಂಡ್‌ನ ಹಾರ್ನ್‌ಬಿಲ್ ಹಬ್ಬ, ಅರುಣಾಚಲದ ಆರೆಂಜ್ ಫೆಸ್ಟಿವಲ್, ಮಿಜೋರಾಂನ ಚಾಪ್ಚಾರ್ ಕುಟ್ ಉತ್ಸವ, ಅಸ್ಸಾಂನ ಬಿಹು, ಮಣಿಪುರಿ ನೃತ್ಯಗಳನ್ನು ಪಟ್ಟಿ ಮಾಡಿದರು. ಈಶಾನ್ಯ ಭಾರತದಲ್ಲಿ ಅಂತಹ ದೊಡ್ಡ ವೈವಿಧ್ಯತೆ ಇದೆ ಎಂದರು.

ಲಕ್ಷ್ಮಿ ದೇವಿಯ 2ನೇ ರೂಪ - ಧನಲಕ್ಷ್ಮಿ ಕುರಿತು ಮಾತನಾಡಿದ ಪ್ರಧಾನಿ, ಈಶಾನ್ಯವು ಖನಿಜಗಳು, ತೈಲ, ಚಹಾ ತೋಟಗಳು ಮತ್ತು ಜೈವಿಕ ವೈವಿಧ್ಯತೆಯ ಮಹಾನ್ ಸಂಗಮದೊಂದಿಗೆ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿಂದ ಆಶೀರ್ವದಿಸಲ್ಪಟ್ಟಿದೆ. ನವೀಕರಿಸಬಹುದಾದ ಇಂಧನದ ದೊಡ್ಡ ಸಾಮರ್ಥ್ಯವಿದೆ, "ಧನ ಲಕ್ಷ್ಮಿ" ಯ ಈ ಆಶೀರ್ವಾದವು ಇಡೀ ಈಶಾನ್ಯಕ್ಕೆ ಒಂದು ವರವಾಗಿದೆ ಎಂದರು.

ಲಕ್ಷ್ಮಿ ದೇವಿಯ 3ನೇ ರೂಪವಾದ ಧಾನ್ಯಲಕ್ಷ್ಮಿಯು ಈಶಾನ್ಯಕ್ಕೆ ತುಂಬಾ ಕರುಣಾಮಯಿಯಾಗಿದ್ದಾಳೆ. ಈಶಾನ್ಯದ ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಸಿರಿಧಾನ್ಯಗಳಿಗೆ ಹೆಸರುವಾಸಿಯಾಗಿದೆ. ಸಿಕ್ಕಿಂ ಭಾರತದ ಮೊದಲ ಸಂಪೂರ್ಣ ಸಾವಯವ ರಾಜ್ಯ ಎಂಬ ಹೆಮ್ಮೆ ಭಾರತಕ್ಕೆ ಇದೆ. ಈಶಾನ್ಯದಲ್ಲಿ ಬೆಳೆಯುವ ಅಕ್ಕಿ, ಬಿದಿರು, ಸಾಂಬಾರ ಪದಾರ್ಥಗಳು ಮತ್ತು ಔಷಧೀಯ ಸಸ್ಯಗಳು ಅಲ್ಲಿನ ಕೃಷಿಯ ಶಕ್ತಿಗೆ ಸಾಕ್ಷಿಯಾಗಿದೆ. ಆರೋಗ್ಯಕರ ಜೀವನಶೈಲಿ ಮತ್ತು ಪೋಷಣೆಗೆ ಸಂಬಂಧಿಸಿದಂತೆ ಇಂದಿನ ಭಾರತವು ಜಗತ್ತಿಗೆ ನೀಡಲು ಬಯಸುತ್ತಿರುವ ಪರಿಹಾರಗಳಲ್ಲಿ ಈಶಾನ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಅಷ್ಟಲಕ್ಷ್ಮಿಯ 4ನೇ ರೂಪವಾದ ಗಜಲಕ್ಷ್ಮಿಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಗಜ ಲಕ್ಷ್ಮಿ ದೇವಿಯು ಕಮಲದ ಮೇಲೆ ಆನೆಗಳನ್ನು ಹೊಂದಿರುವಂತೆ ಆಸೀನಳಾಗಿದ್ದಾಳೆ. ಈಶಾನ್ಯವು ವಿಶಾಲವಾದ ಕಾಡುಗಳನ್ನು ಹೊಂದಿದೆ, ಕಾಜಿರಂಗ, ಮಾನಸ್-ಮೆಹಾವೊ ಮತ್ತು ಇತರ ವನ್ಯಜೀವಿ ಅಭಯಾರಣ್ಯಗಳಂತಹ ರಾಷ್ಟ್ರೀಯ ಉದ್ಯಾನಗಳು, ಅದ್ಭುತವಾದ ಗುಹೆಗಳು ಮತ್ತು ಆಕರ್ಷಕ ಸರೋವರಗಳಿವೆ. ಗಜಲಕ್ಷ್ಮಿಯ ಆಶೀರ್ವಾದವು ಈಶಾನ್ಯವನ್ನು ವಿಶ್ವದ ಅತ್ಯಂತ ಅದ್ಭುತ ಪ್ರವಾಸಿ ತಾಣವನ್ನಾಗಿ ಮಾಡುವ ಶಕ್ತಿ ಹೊಂದಿದೆ ಎಂದರು.

 

ಈಶಾನ್ಯವು ಸೃಜನಶೀಲತೆ ಮತ್ತು ಕೌಶಲ್ಯಕ್ಕೆ ಹೆಸರುವಾಸಿಯಾಗಿದೆ. ಇದು ಅಷ್ಟಲಕ್ಷ್ಮಿಯ 5ನೇ ರೂಪದಿಂದ ಪ್ರತಿನಿಧಿಸುತ್ತದೆ. ಸಂತಾನ ಲಕ್ಷ್ಮಿ, ಅಂದರೆ ಉತ್ಪಾದಕತೆ ಮತ್ತು ಸೃಜನಶೀಲತೆ. ಅಸ್ಸಾಂನ ಮುಗಾ ಸಿಲ್ಕ್, ಮಣಿಪುರದ ಮೊಯರಾಂಗ್ ಫೈ, ವಾಂಖೈ ಫೈ, ನಾಗಾಲ್ಯಾಂಡ್‌ನ ಚಖೆಶಾಂಗ್ ಶಾಲ್‌ನಂತಹ ಕೈಮಗ್ಗ ಮತ್ತು ಕರಕುಶಲ ಕೌಶಲ್ಯವು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ಈಶಾನ್ಯದ ಕರಕುಶಲ ಮತ್ತು ಸೃಜನಶೀಲತೆ ಪ್ರದರ್ಶಿಸುವ ಇಂತಹ ಡಜನ್‌ಗಟ್ಟಲೆ ಭೌಗೋಳಿಕ ಸೂಚನೆ (ಜಿಐ) ಟ್ಯಾಗ್ ಮಾಡಲಾದ ಉತ್ಪನ್ನಗಳಿವೆ ಎಂದರು.

ಧೈರ್ಯ ಮತ್ತು ಶಕ್ತಿಯ ಸಂಗಮವನ್ನು ಸೂಚಿಸುವ ಅಷ್ಟಲಕ್ಷ್ಮಿಯ 6ನೇ ರೂಪ ವೀರ ಲಕ್ಷ್ಮಿಯ ಕುರಿತು ಚರ್ಚಿಸಿದ ಶ್ರೀ ಮೋದಿ, ಈಶಾನ್ಯವು ಸ್ತ್ರೀಶಕ್ತಿಯ ಸಂಕೇತವಾಗಿದೆ. ಮಣಿಪುರದ ನೂಪಿ ಲ್ಯಾನ್ ಚಳವಳಿಯ ಉದಾಹರಣೆ ಉಲ್ಲೇಖಿಸಿದ ಅವರು, ಇದು ಸ್ತ್ರೀಶಕ್ತಿಯನ್ನು ತೋರಿಸಿದೆ. ಈಶಾನ್ಯದ ಮಹಿಳೆಯರು ಗುಲಾಮಗಿರಿಯ ವಿರುದ್ಧ ಧ್ವನಿ ಎತ್ತಿದ ರೀತಿ ಭಾರತದ ಇತಿಹಾಸದಲ್ಲಿ ಯಾವಾಗಲೂ ಸುವರ್ಣಾಕ್ಷರಗಳಲ್ಲಿ ದಾಖಲಾಗುತ್ತದೆ. ಜನಪದ ಕಥೆಗಳಿಂದ ಹಿಡಿದು ನಮ್ಮ ಸ್ವಾತಂತ್ರ್ಯ ಹೋರಾಟದ ರಾಣಿ ಗೈಡಿನ್ಲಿಯು, ಕನಕಲತಾ ಬರುವಾ, ರಾಣಿ ಇಂದಿರಾದೇವಿ, ಲಾಲ್ನು ರೋಪಿಲಿಯಾನಿ ಮುಂತಾದ ವೀರ ಮಹಿಳೆಯರು ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ. ಇಂದಿಗೂ ಈಶಾನ್ಯದ ಹೆಣ್ಣು ಮಕ್ಕಳು ಈ ಸಂಪ್ರದಾಯವನ್ನು ಪುಷ್ಟೀಕರಿಸುತ್ತಿದ್ದಾರೆ. ಈಶಾನ್ಯ ಮಹಿಳೆಯರ ಉದ್ಯಮಶೀಲತೆ ಇಡೀ ಈಶಾನ್ಯಕ್ಕೆ ದೊಡ್ಡ ಶಕ್ತಿ ನೀಡಿದೆ, ಅದಕ್ಕೆ ಬೇರೆ ಯಾವುದೂ ಸಮಾನಾಂತರವಾಗಿಲ್ಲ ಎಂದರು.

ಅಷ್ಟಲಕ್ಷ್ಮಿಯ 7ನೇ ರೂಪ - ಜಯಲಕ್ಷ್ಮಿ ಎಂದರೆ ಕೀರ್ತಿ ಮತ್ತು ಸಮೃದ್ಧಿಯನ್ನು ದಯ ಪಾಲಿಸುವವಳು ಎಂದರ್ಥ. ಇಂದು ಇಡೀ ವಿಶ್ವದ ಭಾರತದತ್ತ ನಿರೀಕ್ಷೆ ಹೊಂದಿರುವಾಗ ಈಶಾನ್ಯ ಭಾಗವು ಪ್ರಮುಖ ಪಾಲು ಹೊಂದಿದೆ. ಭಾರತವು ತನ್ನ ಸಂಸ್ಕೃತಿ ಮತ್ತು ವ್ಯಾಪಾರದ ಜಾಗತಿಕ ಸಂಪರ್ಕದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದರೆ, ಈಶಾನ್ಯವು ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷ್ಯಾದ ಅನಂತ ಅವಕಾಶಗಳೊಂದಿಗೆ ಭಾರತವನ್ನು ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು.

 

ಜ್ಞಾನ ಮತ್ತು ಶಿಕ್ಷಣದ ಸಂಕೇತವಾದ ಅಷ್ಟಲಕ್ಷ್ಮಿಯ 8ನೇ ರೂಪ ವಿದ್ಯಾಲಕ್ಷ್ಮಿಯನ್ನು ಸ್ಪರ್ಶಿಸಿದ ಶ್ರೀ ಮೋದಿ, ಆಧುನಿಕ ಭಾರತದ ಸೃಷ್ಟಿಯಲ್ಲಿ ಅನೇಕ ಪ್ರಮುಖ ಶಿಕ್ಷಣ ಕೇಂದ್ರಗಳು ಐಐಟಿ ಗುವಾಹಟಿ, ಎನ್‌ಐಟಿ ಸಿಲ್ಚಾರ್, ಎನ್‌ಐಟಿ ಮೇಘಾಲಯ, ಎನ್‌ಐಟಿ ಅಗರ್ತಲಾ ಮತ್ತು ಐಐಎಂ-ಶಿಲ್ಲಾಂಗ್ ಈಶಾನ್ಯದಲ್ಲಿವೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಮಣಿಪುರದಲ್ಲಿ ನಿರ್ಮಿಸುತ್ತಿರುವಾಗ ಈಶಾನ್ಯವು ಈಗಾಗಲೇ ತನ್ನ ಮೊದಲ ಎಐಐಎಂಎಸ್(ಏಮ್ಸ್) ಪಡೆದುಕೊಂಡಿದೆ. ಮೇರಿ ಕೋಮ್, ಬೈಚುಂಗ್ ಭುಟಿಯಾ, ಮೀರಾಬಾಯಿ ಚಾನು, ಲವ್ಲಿನಾ, ಸರಿತಾ ದೇವಿ ಅವರಂತಹ ಅನೇಕ ಶ್ರೇಷ್ಠ ಕ್ರೀಡಾಪಟುಗಳನ್ನು ಈಶಾನ್ಯ ದೇಶವು ದೇಶಕ್ಕೆ ನೀಡಿದೆ. ಇಂದು, ಈಶಾನ್ಯವು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ಟಾರ್ಟಪ್‌ಗಳು, ಸೇವಾ ಕೇಂದ್ರಗಳು ಮತ್ತು ಸೆಮಿಕಂಡಕ್ಟರ್‌ಗಳಂತಹ ಉದ್ಯಮಗಳಲ್ಲಿ ಸಾವಿರಾರು ಯುವಕರು ಕೆಲಸ ಮಾಡುವುದರೊಂದಿಗೆ ಮುನ್ನಡೆಯಲು ಪ್ರಾರಂಭಿಸಿದೆ. ಈ ಪ್ರದೇಶವು ಯುವಜನರಿಗೆ ಶಿಕ್ಷಣ ಮತ್ತು ಕೌಶಲ್ಯದ ಪ್ರಮುಖ ಕೇಂದ್ರವಾಗುತ್ತಿದೆ ಎಂದರು.

"ಅಷ್ಟಲಕ್ಷ್ಮಿ ಮಹೋತ್ಸವವು ಈಶಾನ್ಯದ ಉತ್ತಮ ಭವಿಷ್ಯದ ಆಚರಣೆಯಾಗಿದೆ". ಇದು ಅಭಿವೃದ್ಧಿಯ ಹೊಸ ಉದಯದ ಆಚರಣೆಯಾಗಿದೆ, ಇದು ವಿಕಸಿತ ಭಾರತದ ಧ್ಯೇಯಕ್ಕೆ ಉತ್ತೇಜನ ನೀಡುತ್ತದೆ. ಇಂದು ಈಶಾನ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಉತ್ಸಾಹವಿದೆ ಮತ್ತು ಕಳೆದ ದಶಕದಲ್ಲಿ ಎಲ್ಲರೂ ಈಶಾನ್ಯ ಪ್ರದೇಶದ ಅಭಿವೃದ್ಧಿಯ ಅದ್ಭುತ ಪ್ರಯಾಣ ವೀಕ್ಷಿಸಿದ್ದಾರೆ. ಪ್ರಯಾಣವು ಸುಲಭವಲ್ಲ, ಆದರೆ ಈಶಾನ್ಯ ರಾಜ್ಯಗಳನ್ನು ಭಾರತದ ಬೆಳವಣಿಗೆಯ ಕಥೆಯೊಂದಿಗೆ ಸಂಪರ್ಕಿಸಲು ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಕಡಿಮೆ ಸಂಖ್ಯೆಯ ಸ್ಥಾನಗಳು ಮತ್ತು ಮತಗಳಿಂದಾಗಿ ಹಿಂದಿನ ಸರ್ಕಾರಗಳಿಂದ ಈಶಾನ್ಯದಲ್ಲಿ ಅಭಿವೃದ್ಧಿ ಕಳಪೆಯಾಗಿತ್ತು. ಈಶಾನ್ಯ ಅಭಿವೃದ್ಧಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಎಂದು ಹೈಲೈಟ್ ಮಾಡಿದರು. .

ಕಳೆದ ದಶಕದಲ್ಲಿ ದೆಹಲಿ ಮತ್ತು ಈಶಾನ್ಯದ ಜನರ ನಡುವಿನ ಅಂತರ ಕಡಿಮೆ ಮಾಡಲು ಸರ್ಕಾರ ಅವಿರತವಾಗಿ ಶ್ರಮಿಸಿದೆ. ಕೇಂದ್ರ ಸಚಿವರು ಈಶಾನ್ಯ ರಾಜ್ಯಗಳಿಗೆ 700ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ, ಜನರೊಂದಿಗೆ ದೀರ್ಘಕಾಲ ಕಳೆದಿದ್ದಾರೆ. ಅಲ್ಲಿ ಸರ್ಕಾರ ಮತ್ತು ಈಶಾನ್ಯ ಮತ್ತು ಅದರ ಅಭಿವೃದ್ಧಿಯ ನಡುವೆ ಭಾವನಾತ್ಮಕ ಸಂಪರ್ಕವನ್ನು ಸೃಷ್ಟಿಸಿದೆ. ಇದು ಅಲ್ಲಿನ ಅಭಿವೃದ್ಧಿಗೆ ಅದ್ಭುತ ವೇಗ ನೀಡಿದೆ. ಈಶಾನ್ಯದ ಅಭಿವೃದ್ಧಿಯನ್ನು ವೇಗಗೊಳಿಸಲು 1990ರ ದಶಕದಲ್ಲಿ ಮಾಡಿದ ನೀತಿಯನ್ನು ಉಲ್ಲೇಖಿಸಿ, ಅದರ ಅಡಿಯಲ್ಲಿ ಕೇಂದ್ರ ಸರ್ಕಾರದ 50ಕ್ಕೂ ಹೆಚ್ಚು ಸಚಿವಾಲಯಗಳು ತಮ್ಮ ಬಜೆಟ್‌ನ 10 ಪ್ರತಿಶತವನ್ನು ಈಶಾನ್ಯದಲ್ಲಿ ಹೂಡಿಕೆ ಮಾಡಬೇಕಾಗಿತ್ತು, ಹಾಗಾಗಿ, ತಮ್ಮ ಸರ್ಕಾರವು ಹೆಚ್ಚಿನದನ್ನು ನೀಡಿದೆ. 1990ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಕಳೆದ ಒಂದು ದಶಕದಲ್ಲಿಯೇ ಈಶಾನ್ಯದಲ್ಲಿ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಮೇಲಿನ ಯೋಜನೆಯಡಿ ಖರ್ಚು ಮಾಡಲಾಗಿದೆ, ಇದು ಈಶಾನ್ಯದ ಕಡೆಗೆ ಪ್ರಸ್ತುತ ಸರ್ಕಾರದ ಆದ್ಯತೆಯನ್ನು ತೋರಿಸುತ್ತದೆ.

 

ಪಿಎಂ-ಡೆವಿನ್, ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಮತ್ತು ಈಶಾನ್ಯ ವೆಂಚರ್ ಫಂಡ್‌ನಂತಹ ಈಶಾನ್ಯಕ್ಕೆ ಸರ್ಕಾರವು ಅನೇಕ ವಿಶೇಷ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳು ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಈಶಾನ್ಯ ಭಾಗದ ಕೈಗಾರಿಕಾ ಸಾಮರ್ಥ್ಯ ಉತ್ತೇಜಿಸಲು ಸರ್ಕಾರ ಉನ್ನತಿ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ. ಹೊಸ ಕೈಗಾರಿಕೆಗಳಿಗೆ ಉತ್ತಮ ವಾತಾವರಣ ನಿರ್ಮಾಣವಾದಾಗ ಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂದರು. ಸೆಮಿಕಂಡಕ್ಟರ್ ವಲಯವು ಭಾರತಕ್ಕೆ ಹೊಸದು, ಈ ಹೊಸ ವಲಯಕ್ಕೆ ಉತ್ತೇಜನ ನೀಡಲು ಸರ್ಕಾರವು ಅಸ್ಸಾಂ ಅನ್ನು ಆಯ್ಕೆ ಮಾಡಿದೆ. ಈಶಾನ್ಯದಲ್ಲಿ ಇಂತಹ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿದಾಗ, ದೇಶ ಮತ್ತು ಪ್ರಪಂಚದ ಹೂಡಿಕೆದಾರರು ಅಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಾರೆ ಎಂದರು.

"ನಾವು ಈಶಾನ್ಯವನ್ನು ಭಾವನೆ, ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ತ್ರಿಮೂರ್ತಿಗಳೊಂದಿಗೆ ಸಂಪರ್ಕಿಸುತ್ತಿದ್ದೇವೆ". ಸರ್ಕಾರವು ಈಶಾನ್ಯದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಜತೆಗೆ, ಭವಿಷ್ಯಕ್ಕಾಗಿ ಬಲವಾದ ಅಡಿಪಾಯ ಹಾಕುತ್ತಿದೆ. ಕಳೆದ ದಶಕಗಳಲ್ಲಿ ಹಲವು ರಾಜ್ಯಗಳಿಗೆ ರೈಲು ಸೌಲಭ್ಯದ ಕೊರತೆಯಿಂದ ಈಶಾನ್ಯಕ್ಕೆ ಸಂಪರ್ಕ ಕಲ್ಪಿಸುವುದೇ ದೊಡ್ಡ ಸವಾಲಾಗಿದೆ. 2014ರ ನಂತರ ತಮ್ಮ ಸರ್ಕಾರವು ಭೌತಿಕ ಮೂಲಸೌಕರ್ಯ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ. ಮೂಲಸೌಕರ್ಯಗಳ ಗುಣಮಟ್ಟ ಮತ್ತು ಈಶಾನ್ಯ ಜನರ ಜೀವನದ ಗುಣಮಟ್ಟ ಎರಡರಲ್ಲೂ ಸುಧಾರಣೆ ತರಲಾಗುತ್ತಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನವನ್ನು ಸರ್ಕಾರ ತ್ವರಿತಗೊಳಿಸಿದೆ. ಬೋಗಿ-ಬೀಲ್ ಸೇತುವೆಯ ಉದಾಹರಣೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ದೀರ್ಘಾವಧಿಯ ಬಾಕಿ ಉಳಿದಿರುವ ಬೋಗಿ-ಬೀಲ್ ಸೇತುವೆ ಪೂರ್ಣಗೊಳ್ಳುವ ಮೊದಲು ಇಡೀ ದಿನದ ಪ್ರಯಾಣಕ್ಕೆ ಹೋಲಿಸಿದರೆ ಈಗ ಧೇಮಾಜಿ ಮತ್ತು ದಿಬ್ರುಗಢ ನಡುವಿನ ಪ್ರಯಾಣವನ್ನು ಕೇವಲ 1 ಅಥವಾ 2 ಗಂಟೆಗಳಲ್ಲಿ ಮಾಡಬಹುದು ಎಂದು ಹೇಳಿದರು.

"ಕಳೆದ ದಶಕದಲ್ಲಿ ಸುಮಾರು 5 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪೂರ್ಣಗೊಂಡಿವೆ". ಅರುಣಾಚಲ ಪ್ರದೇಶದ ಸೆಲಾ ಸುರಂಗ, ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನ ಗಡಿ ರಸ್ತೆಗಳು ಬಲವಾದ ರಸ್ತೆ ಸಂಪರ್ಕವನ್ನು ವಿಸ್ತರಿಸಿವೆ. ಕಳೆದ ವರ್ಷ ಜಿ-20 ಶೃಂಗಸಭೆ ಸಮಯದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ (ಐ-ಎಂಎಸಿ)ನ ದೃಷ್ಟಿಕೋನವನ್ನು ಭಾರತವು ಜಗತ್ತಿಗೆ ಪ್ರಸ್ತುತಪಡಿಸಿದೆ ಎಂದು ನೆನಪಿಸಿಕೊಂಡ ಶ್ರೀ ಮೋದಿ, ಐ-ಎಂಎಸಿ ಭಾರತದ ಈಶಾನ್ಯವನ್ನು ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು.

 

ಈಶಾನ್ಯ ಭಾಗದ ರೈಲು ಸಂಪರ್ಕವನ್ನು ಹಲವು ಪಟ್ಟು ಹೆಚ್ಚಿಸಿರುವುದನ್ನು ಸ್ಪರ್ಶಿಸಿದ ಪ್ರಧಾನಿ, ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ರೈಲಿನ ಮೂಲಕ ಸಂಪರ್ಕಿಸುವ ಕಾರ್ಯವು ಪೂರ್ಣಗೊಳ್ಳಲಿದೆ. ಮೊದಲ ವಂದೇ ಭಾರತ್ ರೈಲು ಈಶಾನ್ಯದಲ್ಲಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಕಳೆದ 10 ವರ್ಷಗಳಲ್ಲಿ ಈಶಾನ್ಯದಲ್ಲಿ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳ ಸಂಖ್ಯೆ ದ್ವಿಗುಣಗೊಂಡಿದೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ಮೇಲೆ ಜಲಮಾರ್ಗಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ, ಸಬ್ರೂಮ್ ಲ್ಯಾಂಡ್‌ಪೋರ್ಟ್‌ನಿಂದ ನೀರಿನ ಸಂಪರ್ಕವು ಸುಧಾರಿಸುತ್ತಿದೆ ಎಂದರು.

ಮೊಬೈಲ್ ಮತ್ತು ಗ್ಯಾಸ್ ಪೈಪ್‌ಲೈನ್ ಸಂಪರ್ಕದ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ, ಈಶಾನ್ಯದ ಪ್ರತಿಯೊಂದು ರಾಜ್ಯವನ್ನು ಈಶಾನ್ಯ ಗ್ಯಾಸ್ ಗ್ರಿಡ್‌ಗೆ ಸಂಪರ್ಕಿಸಲಾಗುತ್ತಿದೆ, 1,600 ಕಿಮೀ ಉದ್ದದ ಗ್ಯಾಸ್ ಪೈಪ್‌ಲೈನ್ ಹಾಕಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ 2,600ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವುದರೊಂದಿಗೆ ಸರ್ಕಾರವು ಇಂಟರ್ನೆಟ್ ಸಂಪರ್ಕದತ್ತ ಗಮನ ಹರಿಸುತ್ತಿದೆ. ಈಶಾನ್ಯದಲ್ಲಿ 13 ಸಾವಿರ ಕಿಲೋಮೀಟರ್‌ಗೂ ಹೆಚ್ಚು ಆಪ್ಟಿಕಲ್ ಫೈಬರ್ ಹಾಕಲಾಗಿದೆ. 5-ಜಿ ಸಂಪರ್ಕವು ಈಶಾನ್ಯದ ಎಲ್ಲಾ ರಾಜ್ಯಗಳನ್ನು ತಲುಪಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.

ಈಶಾನ್ಯದ ಸಾಮಾಜಿಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಕೆಲಸ ಮಾಡಲಾಗುತ್ತಿದೆ. ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗಾಗಿ ಆಧುನಿಕ ಸೌಲಭ್ಯಗಳ ನಿರ್ಮಾಣದೊಂದಿಗೆ ವೈದ್ಯಕೀಯ ಕಾಲೇಜುಗಳನ್ನು ವಿಸ್ತರಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ, ಈಶಾನ್ಯದಲ್ಲಿ ಲಕ್ಷಾಂತರ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ವಯ ವಂದನಾ ಕಾರ್ಡ್ ಅನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಮೋದಿ ಹೇಳಿದರು.

 

ಈಶಾನ್ಯದ ಸಂಪರ್ಕದ ಹೊರತಾಗಿ, ಸರ್ಕಾರವು ಅದರ ಸಂಪ್ರದಾಯ, ಜವಳಿ ಮತ್ತು ಪ್ರವಾಸೋದ್ಯಮಕ್ಕೂ ಒತ್ತು ನೀಡಿದೆ. ಇದರ ಪ್ರಯೋಜನವೆಂದರೆ ಈಶಾನ್ಯವನ್ನು ಅನ್ವೇಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಕಳೆದ ದಶಕದಲ್ಲಿ ಈಶಾನ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ಹೇಳಿದ ಶ್ರೀ ಮೋದಿ, ಹೂಡಿಕೆ ಮತ್ತು ಪ್ರವಾಸೋದ್ಯಮದ ಹೆಚ್ಚಳದಿಂದಾಗಿ ಹೊಸ ಉದ್ಯಮಗಳು ಮತ್ತು ಉದ್ಯೋಗಾವಕಾಶಗಳು ಹೆಚ್ಚಿವೆ. ಮೂಲಸೌಕರ್ಯದಿಂದ ಏಕೀಕರಣಕ್ಕೆ, ಸಂಪರ್ಕದಿಂದ ನಿಕಟತೆಗೆ, ಆರ್ಥಿಕತೆಯಿಂದ ಭಾವನಾತ್ಮಕವಾಗಿ, ಈ ಸಂಪೂರ್ಣ ಪ್ರಯಾಣವು ಈಶಾನ್ಯದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಅವರು ಹೇಳಿದರು.

ಅಷ್ಟಲಕ್ಷ್ಮಿ ರಾಜ್ಯಗಳ ಯುವಕರೇ ಭಾರತ ಸರ್ಕಾರದ ಹೆಚ್ಚಿನ ಆದ್ಯತೆಯಾಗಿದ್ದಾರೆ, ಅವರು ಯಾವಾಗಲೂ ಅಭಿವೃದ್ಧಿಯನ್ನು ಬಯಸುತ್ತಾರೆ. ಕಳೆದ ದಶಕದಲ್ಲಿ ಈಶಾನ್ಯದ ಪ್ರತಿಯೊಂದು ರಾಜ್ಯದಲ್ಲೂ ಶಾಶ್ವತ ಶಾಂತಿಗಾಗಿ ಅಭೂತಪೂರ್ವ ಸಾರ್ವಜನಿಕ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದಿಂದಾಗಿ ಸಾವಿರಾರು ಯುವಕರು ಹಿಂಸಾಚಾರದ ಹಾದಿ ತೊರೆದು, ಅಭಿವೃದ್ಧಿಯ ಹೊಸ ಮಾರ್ಗವನ್ನು ಅಳವಡಿಸಿಕೊಂಡರು. ಕಳೆದ ದಶಕದಲ್ಲಿ, ಈಶಾನ್ಯದಲ್ಲಿ ಅನೇಕ ಐತಿಹಾಸಿಕ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ರಾಜ್ಯಗಳ ನಡುವಿನ ಗಡಿ ವಿವಾದಗಳು ಸಹ ಬಹಳ ಸೌಹಾರ್ದಯುತವಾಗಿ ಪ್ರಗತಿ ಸಾಧಿಸಿವೆ. ಇದು ಈಶಾನ್ಯದಲ್ಲಿ ಹಿಂಸಾಚಾರ ಪ್ರಕರಣಗಳನ್ನು ಸಾಕಷ್ಟು ಕಡಿಮೆ ಮಾಡಿದೆ. ಅನೇಕ ಜಿಲ್ಲೆಗಳಿಂದ ಸಶಸ್ತ್ರ ಪಡೆಗಳ ವಿಶೇಷ ಧಿಕಾರ ಕಾಯಿದೆ ತೆಗೆದುಹಾಕಲಾಗಿದೆ. ನಾವು ಒಟ್ಟಾಗಿ ಅಷ್ಟಲಕ್ಷ್ಮಿಯ ಭವಿಷ್ಯವನ್ನು ಬರೆಯಬೇಕು ಮತ್ತು ಇದಕ್ಕಾಗಿ ಸರ್ಕಾರವು ಪ್ರತಿ ಹೆಜ್ಜೆ ಇಡುತ್ತಿದೆ ಎಂದರು.

 

ಈಶಾನ್ಯದ ಉತ್ಪನ್ನಗಳು ಪ್ರಪಂಚದ ಪ್ರತಿಯೊಂದು ಮಾರುಕಟ್ಟೆಯನ್ನು ತಲುಪಬೇಕು ಮತ್ತು ಈ ದಿಶೆಯಲ್ಲಿ ಪ್ರತಿ ಜಿಲ್ಲೆಯ ಉತ್ಪನ್ನಗಳನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಅಭಿಯಾನದ ಅಡಿ ಪ್ರಚಾರ ಮಾಡಲಾಗುತ್ತಿದೆ. ಅಷ್ಟಲಕ್ಷ್ಮಿ ಮಹೋತ್ಸವದಲ್ಲಿ ಗ್ರಾಮೀಣ ಹಾತ್ ಬಜಾರ್‌ನಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಈಶಾನ್ಯದ ಅನೇಕ ಉತ್ಪನ್ನಗಳನ್ನು ನೋಡಬಹುದು. "ನಾನು ಈಶಾನ್ಯದ ಉತ್ಪನ್ನಗಳಿಗೆ ಲೋಕಲ್ ಫಾರ್ ವೋಕಲ್ ಮಂತ್ರವನ್ನು ಪ್ರಚಾರ ಮಾಡುತ್ತೇನೆ". ಈಶಾನ್ಯದ ಉತ್ಪನ್ನಗಳನ್ನು ವಿದೇಶಿ ಅತಿಥಿಗಳಿಗೆ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ, ಈಶಾನ್ಯದ ಅದ್ಭುತ ಕಲೆ ಮತ್ತು ಕರಕುಶಲತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ನೀಡುತ್ತಿದೆ. ಈಶಾನ್ಯದ ಉತ್ಪನ್ನಗಳನ್ನು ತಮ್ಮ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ಶ್ರೀ ಮೋದಿ ನಾಗರಿಕರನ್ನು ಒತ್ತಾಯಿಸಿದರು.

ಗುಜರಾತ್‌ನ ಪೋರ್‌ಬಂದರ್‌ನಲ್ಲಿ ನಡೆಯಲಿರುವ ಮಾಧವಪುರ ಮೇಳದಲ್ಲಿ ಪಾಲ್ಗೊಳ್ಳುವಂತೆ ಶ್ರೀ ಮೋದಿ ಅವರು ಜನರಿಗೆ ಆಹ್ವಾನ ನೀಡಿದರು. ಮಾಧವಪುರ ಮೇಳವು ಶ್ರೀಕೃಷ್ಣ ಮತ್ತು ಈಶಾನ್ಯದ ಮಗಳಾದ ರುಕ್ಮಿಣಿ ದೇವಿಯ ವಿವಾಹದ ಆಚರಣೆಯನ್ನು ಸಂಕೇತಿಸುತ್ತದೆ. 2025ರಲ್ಲಿ ಈಶಾನ್ಯದ ಎಲ್ಲಾ ಜನರು ಮೇಳಕ್ಕೆ ಸೇರಬೇಕೆಂದು ಅವರು ಒತ್ತಾಯಿಸಿದರು. ಶ್ರೀಕೃಷ್ಣ ಮತ್ತು ಅಷ್ಟಲಕ್ಷ್ಮಿಯ ಆಶೀರ್ವಾದದೊಂದಿಗೆ, ಭಾರತವು ಖಂಡಿತವಾಗಿಯೂ ಈಶಾನ್ಯವು ಅಭಿವೃದ್ಧಿಯ ಹೊಸ ಮಾದರಿಯನ್ನು 21ನೇ ಶತಮಾನದಲ್ಲಿ ಸ್ಥಾಪಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ತ್ರಿಪುರಾ ಮುಖ್ಯಮಂತ್ರಿ, ಡಾ. ಮಾಣಿಕ್ ಸಹಾ, ಮೇಘಾಲಯ ಮುಖ್ಯಮಂತ್ರಿ ಶ್ರೀ ಕಾನ್ರಾಡ್ ಸಂಗ್ಮಾ, ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಕೇಂದ್ರ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಮತ್ತಿತರರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಅಷ್ಟಲಕ್ಷ್ಮಿ ಮಹೋತ್ಸವವು 3 ದಿನಗಳ ಸಾಂಸ್ಕೃತಿಕ ಹಬ್ಬವಾಗಿದ್ದು, ಇದನ್ನು ಮೊದಲ ಬಾರಿಗೆ ಡಿಸೆಂಬರ್ 6ರಿಂದ 8ರ ವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಆಚರಿಸಲಾಗುತ್ತಿದೆ. ಇದು ಈಶಾನ್ಯ ಭಾರತದ ವಿಶಾಲವಾದ ಸಾಂಸ್ಕೃತಿಕ ವೈಭವವನ್ನು ಎತ್ತಿ ತೋರಿಸುತ್ತದೆ, ಸಾಂಪ್ರದಾಯಿಕ ಕಲೆಗಳು, ಕರಕುಶಲ ಮತ್ತು ಸಾಂಸ್ಕೃತಿಕ ಆಚರಣೆಗಳ ಒಂದು ಶ್ರೇಣಿಯನ್ನು ಒಟ್ಟುಗೂಡಿಸುತ್ತದೆ.

 

ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕೈಮಗ್ಗಗಳು, ಕೃಷಿ ಉತ್ಪನ್ನಗಳು ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಆರ್ಥಿಕ ಅವಕಾಶಗಳನ್ನು ಉತ್ತೇಜಿಸಲು, ಮಹೋತ್ಸವವು ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಉತ್ಸವವು ಕುಶಲಕರ್ಮಿಗಳ ಪ್ರದರ್ಶನಗಳು, ಗ್ರಾಮೀಣ ಹಾಟ್‌ಗಳು, ರಾಜ್ಯ ನಿರ್ದಿಷ್ಟ ಮಂಟಪಗಳು ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ನಿರ್ಣಾಯಕವಾದ ಪ್ರಮುಖ ಕ್ಷೇತ್ರಗಳ ತಾಂತ್ರಿಕ ಅವಧಿಗಳನ್ನು ಹೊಂದಿದೆ. ಪ್ರಮುಖ ಘಟನೆಗಳಲ್ಲಿ ಹೂಡಿಕೆದಾರರ ರೌಂಡ್‌ಟೇಬಲ್ ಮತ್ತು ಖರೀದಿದಾರ-ಮಾರಾಟಗಾರರ ಭೇಟಿಗಳು,  ಪಾಲುದಾರಿಕೆಗಳು ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಜಂಟಿ ಉಪಕ್ರಮಗಳನ್ನು ನಿರ್ಮಿಸಲು ಮತ್ತು ಬಲಪಡಿಸಲು ಒಂದು ಅನನ್ಯ ಅವಕಾಶವಾಗಿ ವಿನ್ಯಾಸಗೊಳಿಸಲಾಗಿದೆ.

 

ಮಹೋತ್ಸವವು ಈಶಾನ್ಯ ಭಾರತದ ಶ್ರೀಮಂತ ಕೈಮಗ್ಗ ಮತ್ತು ಕರಕುಶಲ ಸಂಪ್ರದಾಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ ಡಿಸೈನ್ ಸಮಾವೇಶ ಮತ್ತು ಫ್ಯಾಶನ್ ಶೋಗಳನ್ನು ಹೊಂದಿದೆ. ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತದೆ, ಉತ್ಸವವು ರೋಮಾಂಚಕ ಸಂಗೀತ ಪ್ರದರ್ಶನಗಳು ಮತ್ತು ಈಶಾನ್ಯ ಭಾರತದ ಸ್ಥಳೀಯ ಪಾಕಪದ್ಧತಿಗಳನ್ನು ಪ್ರದರ್ಶಿಸುತ್ತದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"91.8% of India's schools now have electricity": Union Education Minister Pradhan
NM on the go

Nm on the go

Always be the first to hear from the PM. Get the App Now!
...
Naming the islands in Andaman and Nicobar after our heroes is a way to ensure their service to the nation is remembered for generations to come: PM
December 18, 2024
Nations that remain connected with their roots that move ahead in development and nation-building: PM

The Prime Minister, Shri Narendra Modi today remarked that naming the islands in Andaman and Nicobar after our heroes is a way to ensure their service to the nation is remembered for generations to come. He added that nations that remain connected with their roots that move ahead in development and nation-building.

Responding to a post by Shiv Aroor on X, Shri Modi wrote:

“Naming the islands in Andaman and Nicobar after our heroes is a way to ensure their service to the nation is remembered for generations to come. This is also part of our larger endeavour to preserve and celebrate the memory of our freedom fighters and eminent personalities who have left an indelible mark on our nation.

After all, it is the nations that remain connected with their roots that move ahead in development and nation-building.

Here is my speech from the naming ceremony too. https://www.youtube.com/watch?v=-8WT0FHaSdU

Also, do enjoy Andaman and Nicobar Islands. Do visit the Cellular Jail as well and get inspired by the courage of the great Veer Savarkar.”