ಈ ಅಭಿವೃದ್ಧಿ ಯೋಜನೆಗಳಲ್ಲಿ ಆರೋಗ್ಯ, ರೈಲು, ರಸ್ತೆ, ತೈಲ ಮತ್ತು ಅನಿಲದಂತಹ ಕ್ಷೇತ್ರಗಳು ಸೇರಿವೆ
ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ನೂತನ ದರ್ಶನ ಕ್ಯೂ ಕಾಂಪ್ಲೆಕ್ಸ್ ಉದ್ಘಾಟನೆ
ನಿಲ್ವಾಂಡೆ ಅಣೆಕಟ್ಟಿನ ಎಡದಂಡೆ ಕಾಲುವೆ ಜಾಲದ ಸಮರ್ಪಣೆ
'ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆ'ಗೆ ಚಾಲನೆ
ಫಲಾನುಭವಿಗಳಿಗೆ ʻಆಯುಷ್ಮಾನ್ ಕಾರ್ಡ್ʼ ಮತ್ತು ʻಸ್ವಾಮಿತ್ವ ಕಾರ್ಡ್ʼ ವಿತರಣೆ
"ರಾಷ್ಟ್ರವು ಬಡತನದಿಂದ ಮುಕ್ತವಾಗುವುದು ಮತ್ತು ಬಡವರಿಗೆ ಸಾಕಷ್ಟು ಅವಕಾಶಗಳು ದೊರೆಯುವುದೇ ಸಾಮಾಜಿಕ ನ್ಯಾಯದ ನಿಜವಾದ ಅರ್ಥ"
"ಬಡವರ ಏಳಿಗೆಯು ಡಬಲ್ ಎಂಜಿನ್ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ"
"ರೈತರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ"
"ನಮ್ಮ ಸರ್ಕಾರವು ಸಹಕಾರಿ ಚಳುವಳಿಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ"
"ಮಹಾರಾಷ್ಟ್ರವು ಅಪಾರ ಸಾಮರ್ಥ್ಯ ಮತ್ತು ಸಾಧ್ಯತೆಗಳ ರಾಜ್ಯವಾಗಿದೆ"
"ಭಾರತವು ಮಹಾರಾಷ್ಟ್ರದ ಬೆಳವಣಿಗೆಯಷ್ಟೇ ವೇಗವಾಗಿ ಬೆಳೆಯುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಅಹ್ಮದ್‌ನಗರದ ಶಿರಡಿಯಲ್ಲಿ ಆರೋಗ್ಯ, ರೈಲು, ರಸ್ತೆ, ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಸುಮಾರು 7500 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ  ಉದ್ಘಾಟನೆ/ಲೋಕಾರ್ಪಣೆ ನೆರವೇರಿಸಿದರು. ಬಹು ಅಭಿವೃದ್ಧಿ ಯೋಜನೆಗಳಲ್ಲಿ ಅಹ್ಮದ್‌ನಗರ ಸಿವಿಲ್ ಆಸ್ಪತ್ರೆಯ ಆಯುಷ್ ಆಸ್ಪತ್ರೆ; ಕುರ್ದುವಾಡಿ-ಲಾತೂರ್ ರಸ್ತೆ ರೈಲ್ವೆ ವಿಭಾಗದ ವಿದ್ಯುದ್ದೀಕರಣ (186 ಕಿ.ಮೀ); ಜಲ್‌ಗಾಂವ್ -ಭೂಸಾವಲ್‌ ಸಂಪರ್ಕಿಸುವ 3ನೇ ಮತ್ತು 4ನೇ ರೈಲ್ವೆ ಮಾರ್ಗಗಳು (24.46 ಕಿ.ಮೀ); ರಾಷ್ಟ್ರೀಯ ಹೆದ್ದಾರಿ 166ರ ಸಾಂಗ್ಲಿ-ಬೋರ್ಗಾಂವ್ ಚತುಷ್ಪಥ ರಸ್ತೆ (ಪ್ಯಾಕೇಜ್-1); ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮನ್ಮಾಡ್ ಟರ್ಮಿನಲ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳು ಸೇರಿವೆ. ಅಹ್ಮದ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಮೋದಿ ಅವರು ಫಲಾನುಭವಿಗಳಿಗೆ ʻಆಯುಷ್ಮಾನ್ ಕಾರ್ಡ್ʼ ಮತ್ತು ʻಸ್ವಾಮಿತ್ವ ಕಾರ್ಡ್ʼ ಗಳನ್ನು ವಿತರಿಸಿದರು.

 

ಇತರ ಯೋಜನೆಗಳ ಜೊತೆಗೆ, ಶ್ರೀ ಮೋದಿ ಅವರು ಶಿರಡಿಯಲ್ಲಿ ಹೊಸ ದರ್ಶನ ಕ್ಯೂ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಿದರು. ಅಲ್ಲದೆ, ನಿಲ್ವಾಂಡೆ ಅಣೆಕಟ್ಟಿನ ಎಡದಂಡೆ (85 ಕಿ.ಮೀ) ಕಾಲುವೆ ಜಾಲವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು 86 ಲಕ್ಷಕ್ಕೂ ಹೆಚ್ಚು ರೈತ-ಫಲಾನುಭವಿಗಳಿಗೆ ಪ್ರಯೋಜನವಾಗುವ 'ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆ'ಗೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಶ್ರೀ ಮೋದಿ ಅವರು ಶಿರಡಿಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ  ಮತ್ತು ದರ್ಶನ ಮಾಡಿದರು, ಬಳಿಕ ನಿಲ್ವಾಂಡೆ ಅಣೆಕಟ್ಟಿನಲ್ಲಿ ಗಂಗಾ ಪೂಜೆ ನೆರವೇರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾಯಿಬಾಬಾ ಅವರ ಆಶೀರ್ವಾದದೊಂದಿಗೆ 7500 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಮತ್ತು ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದರು. 5 ದಶಕಗಳಿಂದ ನನೆಗುದಿಗೆ ಬಿದ್ದಿದ್ದ ನಿಲ್ವಾಂಡೆ ಅಣೆಕಟ್ಟಿನ ಕಾಮಗಾರಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇಂದು ಅದರ ಉದ್ಘಾಟನೆಯನ್ನು ಉಲ್ಲೇಖಿಸಿದರು. ಸ್ಥಳದಲ್ಲಿ ಗಂಗಾ ಪೂಜೆ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು. ಶ್ರೀ ಸಾಯಿಬಾಬಾ ಸಮಾಧಿ ದೇವಾಲಯದಲ್ಲಿ ದರ್ಶನ ಕ್ಯೂ ಕಾಂಪ್ಲೆಕ್ಸ್ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, 2018ರ ಅಕ್ಟೋಬರ್‌ನಲ್ಲಿ ಇದರ ಶಂಕುಸ್ಥಾಪನೆ ನೆರವೇರಿಸಿದ್ದಾಗಿ ಮಾಹಿತಿ ನೀಡಿದರು ಮತ್ತು ಇದರಿಂದ ಭಾರತ ಮತ್ತು ವಿದೇಶಗಳ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.

 

ಇಂದು ಬೆಳಿಗ್ಗೆ ವಾರ್ಕರಿ ಸಮುದಾಯದ ಬಾಬಾ ಮಹಾರಾಜ್ ಸತಾರ್ಕರ್ ಅವರ ನಿಧನದ ನೋವಿನ ಸಂಗತಿಯನ್ನು ಪ್ರಧಾನಿ ಉಲ್ಲೇಖಿಸಿದರು. ಬಾಬಾ ಮಹಾರಾಜ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ಕೀರ್ತನೆ ಮತ್ತು ಪ್ರವಚನದ ಅವರ ಸಾಮಾಜಿಕ ಜಾಗೃತಿಯ ಕಾರ್ಯವನ್ನು ಸ್ಮರಿಸಿದರು, ಇದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದರು.

"ರಾಷ್ಟ್ರವು ಬಡತನದಿಂದ ಮುಕ್ತವಾದಾಗ ಮತ್ತು ಬಡವರಿಗೆ ಸಾಕಷ್ಟು ಅವಕಾಶಗಳು ದೊರೆತಾಗ ಸಾಮಾಜಿಕ ನ್ಯಾಯಕ್ಕೆ ನಿಜವಾದ ಅರ್ಥ ಬರಲಿದೆ" ಎಂದು ಪ್ರಧಾನಿ ಒತ್ತಿ ಹೇಳಿದರು.  ಬಡವರ ಕಲ್ಯಾಣವು ಡಬಲ್ ಎಂಜಿನ್ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಒತ್ತಿಹೇಳಿದ ಅವರು, ದೇಶದ ಆರ್ಥಿಕತೆಯು ವಿಸ್ತರಿಸುತ್ತಿರುವುದರಿಂದ ಅದಕ್ಕಾಗಿ ಅನುದಾನವನ್ನು ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದರು. ಮಹಾರಾಷ್ಟ್ರದಲ್ಲಿ 1 ಕೋಟಿ 10 ಲಕ್ಷ ʻಆಯುಷ್ಮಾನ್ ಕಾರ್ಡ್ʼಗಳನ್ನು ವಿತರಿಸಲಾಗಿದ್ದು, ಇದರ ಫಲಾನುಭವಿಗಳು 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆಯನ್ನು ಪಡೆಯಲಿದ್ದಾರೆ, ಇವರಿಗಾಗಿ ಸರ್ಕಾರ 70,000 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಬಡವರಿಗೆ ಉಚಿತ ಪಡಿತರವನ್ನು ಒದಗಿಸಲು ಮತ್ತು ಅವರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಲು ಸರ್ಕಾರವು 4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ಈ ವೆಚ್ಚವು 2014ರ ಹಿಂದಿನ ದಶಕಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಗಮನಸೆಳೆದರು. ಬಡವರ ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡಲು ಸರ್ಕಾರ 2 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ʻಪಿಎಂ ಸ್ವನಿಧಿʼ ಯೋಜನೆಯಡಿ, ಬೀದಿ ಬದಿ ವ್ಯಾಪಾರಿಗಳಿಗೆ ಸಾವಿರಾರು ರೂಪಾಯಿಗಳವರೆಗೆ ನೆರವು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಬಡಗಿಗಳು, ಅಕ್ಕಸಾಲಿಗರು, ಕುಂಬಾರರು ಮತ್ತು ಶಿಲ್ಪಿಗಳ ಕುಟುಂಬಗಳಿಗೆ 13,000 ಕೋಟಿ ರೂ.ಗಿಂತ ಹೆಚ್ಚಿನ ಸರ್ಕಾರಿ ವೆಚ್ಚದೊಂದಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೊಸದಾಗಿ ಪ್ರಾರಂಭಿಸಲಾದ ʻಪಿಎಂ ವಿಶ್ವಕರ್ಮʼ ಯೋಜನೆಯ ಬಗ್ಗೆಯೂ ಶ್ರೀ ಮೋದಿ ಪ್ರಸ್ತಾಪಿಸಿದರು.

 

ಸಣ್ಣ ರೈತರ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಯನ್ನು ಉಲ್ಲೇಖಿಸಿದರು. ಇದರ ಅಡಿಯಲ್ಲಿ ಸಣ್ಣ ರೈತರು 2 ಲಕ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಯಿತು, ಈ ಪೈಕಿ ಮಹಾರಾಷ್ಟ್ರದ ಸಣ್ಣ ರೈತರು 26 ಸಾವಿರ ಕೋಟಿ ರೂ. ಪಡೆದಿದ್ದಾರೆ. ಮಹಾರಾಷ್ಟ್ರ ಸರ್ಕಾರವು 'ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆ' ಯನ್ನು ಪ್ರಾರಂಭಿಸಿದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು, ಇದರ ಅಡಿಯಲ್ಲಿ ಮಹಾರಾಷ್ಟ್ರದ ಶೆಟ್ಕರಿ ಕುಟುಂಬಗಳಿಗೆ ಹೆಚ್ಚುವರಿ 6000 ರೂ. ಸಿಗಲಿದೆ. ಅಂದರೆ ಸ್ಥಳೀಯ ಸಣ್ಣ ರೈತರಿಗೆ 12,000 ರೂ.ಗಳ ʻಸಮ್ಮಾನ್ ನಿಧಿʼ ಸಿಗುತ್ತದೆ ಎಂದು ಅವರು ಹೇಳಿದರು.

1970ರಲ್ಲಿ ಅನುಮೋದನೆ ಪಡೆದ ಮತ್ತು 5 ದಶಕಗಳಿಂದ ಬಾಕಿ ಉಳಿದಿದ್ದ ʻನಿಲ್ವಾಂಡೆ ಯೋಜನೆʼಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಅದು ಪೂರ್ಣಗೊಂಡಿದೆ ಎಂದು ಒತ್ತಿ ಹೇಳಿದರು. "ರೈತರ ಹೆಸರಿನಲ್ಲಿ ಮತ ರಾಜಕೀಯ ಮಾಡುವವರು ಪ್ರತಿ ಹನಿ ನೀರಿಗಾಗಿ ಹಾತೊರೆಯುವಂತೆ ಮಾಡಿದ್ದಾರೆ" ಎಂದು ಅವರು ವಿಷಾದ ವ್ಯಕ್ತಪಡಿಸಿದರು. "ಇಂದು ಇಲ್ಲಿ ಗಂಗಾ ಪೂಜೆ ನಡೆಸಲಾಯಿತು. ಬಲದಂಡೆ ಕಾಲುವೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ,ʼʼ ಎಂದು ಅವರು ಉಲ್ಲೇಖಿಸಿದರು. ರಾಜ್ಯದ ಬರಪೀಡಿತ ಪ್ರದೇಶಗಳಿಗೆ ವರದಾನವಾಗಿ ಪರಿಣಮಿಸಿರುವ ʻಬಲಿರಾಜ ಜಲ ಸಂಜೀವಿನಿ ಯೋಜನೆʼಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಮಹಾರಾಷ್ಟ್ರದಲ್ಲಿ ದಶಕಗಳಿಂದ ಬಾಕಿ ಇರುವ ಇನ್ನೂ 26 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ, ಇದು ಈ ಪ್ರದೇಶದ ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಒತ್ತಿಹೇಳಿದರು.

 

ರೈತರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 7 ವರ್ಷಗಳಲ್ಲಿ ʻಕನಿಷ್ಠ ಬೆಂಬಲ ಬೆಲೆʼ(ಎಂಎಸ್‌ಪಿ)  ಅಡಿಯಲ್ಲಿ 13.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗಿದೆ, ಆದರೆ ಹಿಂದಿನ ಸರ್ಕಾರದಲ್ಲಿ ಹಿರಿಯ ನಾಯಕರ ಅಧಿಕಾರಾವಧಿಯಲ್ಲಿ ಈ ಸಂಖ್ಯೆ ಕೇವಲ 3.5 ಲಕ್ಷ ಕೋಟಿ ಆಗಿತ್ತು ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ಹಿಂದಿನ 500-600 ಕೋಟಿ ರೂ.ಗಳಿಗೆ ಹೋಲಿಸಿದರೆ 2014ರ ನಂತರ 1 ಲಕ್ಷ 15 ಸಾವಿರ ಕೋಟಿ ಮೌಲ್ಯದ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳನ್ನು ಖರೀದಿಸಾಗಿದೆ. ʻನೇರ ಲಾಭ ವರ್ಗಾವಣೆʼಯು ಭ್ರಷ್ಟಾಚಾರ ಮತ್ತು ಸೋರಿಕೆಯನ್ನು ತೊಡೆದುಹಾಕಿದೆ ಎಂದು ಅವರು ಹೇಳಿದರು.

 

ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಇತ್ತೀಚಿನ ಸಂಪುಟದ ನಿರ್ಧಾರಗಳ ಬಗ್ಗೆ ಮಾತನಾಡಿದ ಶ್ರೀ ಮೋದಿ, ಕಡಲೆ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು 105 ರೂ.ಗೆ ಮತ್ತು ಗೋಧಿ ಮತ್ತು ಕುಸುಬೆಯ ಕನಿಷ್ಠ ಬೆಂಬಲ ಬೆಲೆಯನ್ನು 150 ರೂ.ಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಬ್ಬಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 315 ರೂ.ಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ 9 ವರ್ಷಗಳಲ್ಲಿ, ಸುಮಾರು 70,000 ಕೋಟಿ ರೂ.ಗಳ ಮೌಲ್ಯದ ಎಥೆನಾಲ್ ಅನ್ನು ಖರೀದಿಸಲಾಗಿದೆ ಮತ್ತು ಈ ಹಣವು ಕಬ್ಬು ಬೆಳೆಗಾರರನ್ನು ತಲುಪಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುವುದನ್ನು ಖಚಿತಪಡಿಸಿಕೊಳ್ಳಲು, ಸಕ್ಕರೆ ಕಾರ್ಖಾನೆಗಳು ಮತ್ತು ಸಹಕಾರಿ ಸಂಘಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ನೆರವು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.

"ನಮ್ಮ ಸರ್ಕಾರವು ಸಹಕಾರ ಚಳವಳಿಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ,ʼʼ ಎಂದು ಹೇಳಿದರು. ಉತ್ತಮ ಸಂಗ್ರಹಣೆ ಮತ್ತು ಹಳೆಯ ಶೇಖರಣಾ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು, ʻಪಿಎಸಿʼಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 7500ಕ್ಕೂ ಹೆಚ್ಚು ʻಎಫ್‌ಪಿಒʼಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಸಣ್ಣ ರೈತರನ್ನು ʻಎಫ್‌ಪಿಒʼಗಳ ಮೂಲಕ ಸಂಘಟಿಸಲಾಗುತ್ತಿದೆ,ʼʼ ಎಂದು ಮಾಹಿತಿ ನೀಡಿದರು. 

 

ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, "ಮಹಾರಾಷ್ಟ್ರವು ಅಪಾರ ಸಾಮರ್ಥ್ಯ ಮತ್ತು ಸಾಧ್ಯತೆಗಳ ಕೇಂದ್ರವಾಗಿದೆ. ಮಹಾರಾಷ್ಟ್ರ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತದೆಯೋ ಅಷ್ಟು ವೇಗವಾಗಿ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದರು. ಮುಂಬೈ ಮತ್ತು ಶಿರಡಿಯನ್ನು ಸಂಪರ್ಕಿಸುವ ʻವಂದೇ ಭಾರತ್ʼ ರೈಲಿಗೆ ಹಸಿರು ನಿಶಾನೆ ತೋರಿದ್ದನ್ನು ಪ್ರಧಾನಿ ಮೋದಿ ಸ್ಮರಿಸಿದರು ಮತ್ತು ಮಹಾರಾಷ್ಟ್ರದಲ್ಲಿ ರೈಲ್ವೆ ಜಾಲವು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಒತ್ತಿ ಹೇಳಿದರು. ಜಲಗಾಂವ್‌ ಮತ್ತು ಭೂಸಾವಲ್ ನಡುವಿನ ಮೂರನೇ ಮತ್ತು ನಾಲ್ಕನೇ ರೈಲ್ವೆ ಮಾರ್ಗಗಳ ಪ್ರಾರಂಭದೊಂದಿಗೆ ಮುಂಬೈ-ಹೌರಾ ರೈಲು ಮಾರ್ಗದಲ್ಲಿ ಸಂಚಾರ ಸುಲಭವಾಗಲಿದೆ ಎಂದು ಅವರು ತಿಳಿಸಿದರು. ಅಂತೆಯೇ, ಸೋಲಾಪುರದಿಂದ ಬೋರ್ಗಾಂವ್‌ವರೆಗೆ ಚತುಷ್ಪಥ ರಸ್ತೆ ನಿರ್ಮಾಣವು ಇಡೀ ಕೊಂಕಣ ಪ್ರದೇಶದ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಕೈಗಾರಿಕೆಗಳಿಗೆ ಮತ್ತು ಈ ಪ್ರದೇಶದ ಕಬ್ಬು, ದ್ರಾಕ್ಷಿ ಮತ್ತು ಅರಿಶಿನ ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು. "ಈ ಸಂಪರ್ಕವು ಸಾರಿಗೆಗೆ ಮಾತ್ರವಲ್ಲದೆ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ" ಎಂದು ಹೇಳುವ ಮೂಲಕ ಪ್ರಧಾನಿಯವರು ಮಾತು ಮುಗಿಸಿದರು. 

 

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಉದ್ಘಾಟಿಸಿದ ಶಿರಡಿಯ ಹೊಸ ದರ್ಶನ ಕ್ಯೂ ಕಾಂಪ್ಲೆಕ್ಸ್ ಅತ್ಯಾಧುನಿಕ ಆಧುನಿಕ ಮೆಗಾ ಕಟ್ಟಡವಾಗಿದ್ದು, ಭಕ್ತರಿಗೆ ಆರಾಮದಾಯಕ ಕಾಯುವ ವ್ಯವಸ್ಥೆ ಒದಗಿಸುವುದು ಇದರ ಉದ್ದೇಶವಾಗಿದೆ. ಇದು ಹತ್ತು ಸಾವಿರಕ್ಕೂ ಹೆಚ್ಚು ಆಸನ ಸಾಮರ್ಥ್ಯದೊಂದಿಗೆ ಹಲವಾರು ಕಾಯುವ ಸಭಾಂಗಣಗಳನ್ನು ಒಳಗೊಂಡಿದೆ. ಈ ಹವಾನಿಯಂತ್ರಿತ ಕಟ್ಟಡವು ಕ್ಲೋಕ್ ರೂಮ್‌ಗಳು, ಶೌಚಾಲಯಗಳು, ಬುಕಿಂಗ್ ಕೌಂಟರ್‌ಗಳು, ಪ್ರಸಾದ ಕೌಂಟರ್‌ಗಳು, ಮಾಹಿತಿ ಕೇಂದ್ರ ಇತ್ಯಾದಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಹೊಸ ದರ್ಶನ ಕ್ಯೂ ಕಾಂಪ್ಲೆಕ್ಸ್‌ಗೆ ಪ್ರಧಾನಮಂತ್ರಿಯವರು 2018ರ ಅಕ್ಟೋಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

 

ಪ್ರಧಾನಮಂತ್ರಿಯವರು ʻನಿಲ್ವಾಂಡೆʼ ಅಣೆಕಟ್ಟಿನ ಎಡದಂಡೆ (85 ಕಿ.ಮೀ) ಕಾಲುವೆ ಜಾಲವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು 7 ತಹಸಿಲ್‌ಗಳಿಂದ (ಅಹ್ಮದ್‌ನಗರ ಜಿಲ್ಲೆಯ 6 ಮತ್ತು ನಾಸಿಕ್ ಜಿಲ್ಲೆಯ 1) 182 ಗ್ರಾಮಗಳಿಗೆ ನೀರಿನ ಕೊಳವೆ ವಿತರಣಾ ಜಾಲವನ್ನು ಸುಗಮಗೊಳಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ.  ನಿಲ್ವಾಂಡೆ ಅಣೆಕಟ್ಟಿನ ಕಲ್ಪನೆಯನ್ನು ಮೊದಲು 1970ರಲ್ಲಿ ರೂಪಿಸಲಾಯಿತು. ಇದನ್ನು ಸುಮಾರು 5177 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರಧಾನಮಂತ್ರಿಯವರು 'ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆ'ಗೆ ಚಾಲನೆ ನೀಡಿದರು. ಈ ಯೋಜನೆಯು ಮಹಾರಾಷ್ಟ್ರದ `ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 86 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ವರ್ಷಕ್ಕೆ 6000 ರೂ.ಗಳ ಹೆಚ್ಚುವರಿ ಮೊತ್ತವನ್ನು ಒದಗಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ.

ಪ್ರಧಾನಮಂತ್ರಿಯವರು ಅಹ್ಮದ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ʻಆಯುಷ್ ಆಸ್ಪತ್ರೆʼ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ಕುರ್ದುವಾಡಿ-ಲಾತೂರ್ ರೈಲ್ವೆ ವಿಭಾಗದ ವಿದ್ಯುದ್ದೀಕರಣ(186 ಕಿ.ಮೀ); ಜಲಗಾಂವ್-ಭೂಸಾವಲ್‌ ಸಂಪರ್ಕಿಸುವ 3ನೇ ಮತ್ತು 4ನೇ ರೈಲ್ವೆ ಮಾರ್ಗ (24.46 ಕಿ.ಮೀ);  ರಾಷ್ಟ್ರೀಯ ಹೆದ್ದಾರಿ 166ರ ಸಾಂಗ್ಲಿ-ಬೋರ್ಗಾಂವ್ ಚತುಷ್ಪಥ ರಸ್ತೆ (ಪ್ಯಾಕೇಜ್-1); ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮನ್ಮಾಡ್ ಟರ್ಮಿನಲ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳು ಇವುಗಳಲ್ಲಿ ಸೇರಿವೆ. ಅಹ್ಮದ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಮೋದಿ ಅವರು ಫಲಾನುಭವಿಗಳಿಗೆ ʻಆಯುಷ್ಮಾನ್ ಕಾರ್ಡ್ʼ ಮತ್ತು ʻಸ್ವಾಮಿತ್ವ ಕಾರ್ಡ್ʼಗಳನ್ನು ವಿತರಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi