ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ 100 '5ಜಿ ಬಳಕೆ ಪ್ರಯೋಗಾಲಯ' ಪ್ರದಾನ
ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಉದ್ಯಮದ ಮುಖಂಡರು
"ಭವಿಷ್ಯವು ಇಲ್ಲಿ ಮತ್ತು ಈಗ ಇದೆ"
"ನಮ್ಮ ಯುವ ಪೀಳಿಗೆ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ"
"ಭಾರತವು ದೇಶದಲ್ಲಿ ʻ5ಜಿʼ ಸಂಪರ್ಕಜಾಲವನ್ನು ವಿಸ್ತರಿಸುತ್ತಿರುವುದಷ್ಟೇ ಅಲ್ಲದೆ, ʻ6ಜಿʼ ಯಲ್ಲಿ ನಾಯಕನಾಗಲು ಒತ್ತು ನೀಡುತ್ತಿದೆ"
"ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಜಾಪ್ರಭುತ್ವದ ಶಕ್ತಿಯನ್ನು ನಂಬುತ್ತೇವೆ"
"ಬಂಡವಾಳದ ಲಭ್ಯತೆ, ಸಂಪನ್ಮೂಲಗಳ ಲಭ್ಯತೆ ಮತ್ತು ತಂತ್ರಜ್ಞಾನದ ಲಭ್ಯತೆಯು ನಮ್ಮ ಸರ್ಕಾರದ ಆದ್ಯತೆಯಾಗಿದೆ"
"ಭಾರತದ ʻಸೆಮಿಕಂಡಕ್ಟರ್ ಮಿಷನ್ʼ ದೇಶೀಯ ಬೇಡಿಕೆಗಳನ್ನು ಮಾತ್ರವಲ್ಲದೆ ಜಾಗತಿಕ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಪ್ರಗತಿಯ ಹಾದಿಯಲ್ಲಿದೆ"
"ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ, ಭಾರತವು ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಿಂತಲೂ ಹಿಂದುಳಿದಿಲ್ಲ "
"ತಂತ್ರಜ್ಞಾನವು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ತ್ವರಿತವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವೇಗವರ್ಧಕವಾಗಿ ಕೆಲಸ ಮಾಡುತ್ತದೆ"
"21ನೇ ಶತಮಾನವು ಭಾರತದ ಚಿಂತನೆಯ ನಾಯಕತ್ವದ ಯುಗವನ್ನು ಸೂಚಿಸುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ʻಭಾರತ್ ಮಂಟಪʼದಲ್ಲಿ ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼನ 7ನೇ ಆವೃತ್ತಿಗೆ (ಐಎಂಸಿ-2023) ಚಾಲನೆ ನೀಡಿದರು. ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, 2023ರ ಅಕ್ಟೋಬರ್ 27 ರಿಂದ 29 ರವರೆಗೆ 'ಗ್ಲೋಬಲ್ ಡಿಜಿಟಲ್ ಇನ್ನೋವೇಶನ್' ಎಂಬ ವಿಷಯಾಧಾರಿತವಾಗಿ ನಡೆಯಲಿದೆ. ʻಐಎಂಸಿ-2023ʼ ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳ ಡೆವಲಪರ್, ತಯಾರಕ ಮತ್ತು ರಫ್ತುದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳಿಗೆ 100 '5ಜಿ ಯೂಸ್ ಕೇಸ್ ಲ್ಯಾಬ್'ಗಳನ್ನು (5ಜಿ ಬಳಕೆ ಪ್ರಯೋಗಾಲಯ) ಪ್ರದಾನ ಮಾಡಿದರು.

 

ಪ್ರಧಾನಮಂತ್ರಿಯವರು ಸಭಾಂಗಣ 5ರಲ್ಲಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ವಸ್ತು ಪ್ರದರ್ಶನದಲ್ಲಿ ಹೆಜ್ಜೆ ಹಾಕಿದರು. 

ಉದ್ಯಮದ ಮುಖಂಡರು ಸಹ ಈ ಸಂದರ್ಭದಲ್ಲಿ ಮಾತನಾಡಿದರು. ʻರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ʼನ ಅಧ್ಯಕ್ಷ ಶ್ರೀ ಆಕಾಶ್ ಎಂ ಅಂಬಾನಿ ಅವರು, ಇತ್ತೀಚಿನ ತಂತ್ರಜ್ಞಾನಗಳ ಬಳಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಯುವ ಪೀಳಿಗೆಯ ಜೀವನವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಶ್ಲಾಘಿಸಿದರು. ʻಡಿಜಿಟಲ್ ಇಂಡಿಯಾʼ ಕಾರ್ಯಕ್ರಮವನ್ನು ಎಲ್ಲರನ್ನೂ ಒಳಗೊಂಡ, ನವೀನ ಮತ್ತು ಸುಸ್ಥಿರವಾಗಿಸುವಲ್ಲಿ ಪ್ರಧಾನಿಯವರು ದೇಶದ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು. ʻಜಿಯೋʼ ಭಾರತದ ಎಲ್ಲಾ 22 ಸರ್ಕ್ಯೂಟ್ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ʻ5 ಜಿʼ ಸೆಲ್ಗಳನ್ನು ಸ್ಥಾಪಿಸಿದೆ, ಒಟ್ಟಾರೆ ʻ5ಜಿʼ ವಿತರಣೆಗೆ ಶೇಕಡಾ 85 ರಷ್ಟು ಕೊಡುಗೆ ನೀಡಿದೆ. ʻ5ಜಿʼ ಸ್ಟ್ಯಾಕ್ ಅನ್ನು ಭಾರತೀಯ ಪ್ರತಿಭೆಗಳು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ತಯಾರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. "125 ದಶಲಕ್ಷ ಬಳಕೆದಾರರನ್ನು ಹೊಂದಿರುವ ಭಾರತವು ಅಗ್ರ 3 `5ಜಿ’-ಶಕ್ತ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಧಾನಿಯವರು ಇಡೀ ರಾಷ್ಟ್ರವನ್ನು ಏಕೀಕರಿಸಿದ್ದಾರೆ ಎಂದು ಹೇಳಿದ ಆಕಾಶ್ ಅಂಬಾನಿ ಅವರು, ಇದಕ್ಕೆ ಜಿಎಸ್ಟಿ, ಭಾರತದ ಡಿಜಿಟಲ್ ಕ್ರಾಂತಿ ಮತ್ತು ವಿಶ್ವದ ಅತಿ ಎತ್ತರದ ಪ್ರತಿಮೆಯ ಉದಾಹರಣೆಗಳನ್ನು ನೀಡಿದರು. "ಇಂಡಿಯಾ ಮೊಬೈಲ್ ಕಾನ್ಫರೆನ್ಸ್ನಲ್ಲಿ ನಮ್ಮೆಲ್ಲರಿಗೂ ನಿಮ್ಮ ಪ್ರಯತ್ನಗಳು ಸ್ಫೂರ್ತಿ ನೀಡುತ್ತವೆ" ಎಂದು ಅವರು ಪುನರುಚ್ಚರಿಸಿದರು. ಎಲ್ಲಾ ಡಿಜಿಟಲ್ ಉದ್ಯಮಿಗಳು, ಆವಿಷ್ಕಾರಕರು ಮತ್ತು ನವೋದ್ಯಮಗಳ ಪರವಾಗಿ, ಶ್ರೀ ಅಂಬಾನಿ ಅವರು ಭಾರತದ ʻಅಮೃತ ಕಾಲʼ ಸಂದರ್ಭದಲ್ಲಿ ಭಾರತದ ಕನಸನ್ನು ನನಸು ಮಾಡುವುದಾಗಿ ಭರವಸೆ ನೀಡಿದರು.

 

ʻಭಾರ್ತಿ ಎಂಟರ್ಪ್ರೈಸಸ್ʼನ ಅಧ್ಯಕ್ಷರಾದ ಶ್ರೀ ಸುನಿಲ್ ಭಾರ್ತಿ ಮಿತ್ತಲ್ ಅವರು ಮಾತನಾಡಿ, ಡಿಜಿಟಲ್ ಇಂಡಿಯಾದ ರೂಪದಲ್ಲಿ ಪ್ರಧಾನಮಂತ್ರಿಯವರು ನೀಡಿದ ದೃಷ್ಟಿಕೋನವನ್ನು ಸ್ಮರಿಸಿದರು. ಇದು ಅತೀವ ವೇಗದಲ್ಲಿ ಡಿಜಿಟಲ್ ಮೂಲಸೌಕರ್ಯದ ಅಭಿವೃದ್ಧಿಗೆ ಕಾರಣವಾಯಿತು ಎಂದರು. ಪ್ರಧಾನಮಂತ್ರಿಯವರ ʻಜೆಎಎಂʼ(ಜನ್ಧನ್-ಆಧಾರ್-ಮೊಬೈಲ್) ತ್ರಿಶಕ್ತಿಗಳ ಕಾರ್ಯವಿಧಾನದಿಂದ ಉಂಟಾದ ಪರಿವರ್ತನೆ ಮತ್ತು ಭಾರತದ ಡಿಜಿಟಲ್ ರೂಪಾಂತರವನ್ನು ಜಗತ್ತು ಹೇಗೆ ಗಮನಿಸಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನೇಕ ದೇಶಗಳನ್ನು ಚಕಿತಗೊಳಿಸಿದೆ ಎಂದು ಅವರು ಹೇಳಿದರು. ಶ್ರೀ ಮಿತ್ತಲ್ ಅವರ ಪ್ರಕಾರ ಪ್ರಧಾನಮಂತ್ರಿಯವರ ದೃಷ್ಟಿಕೋನದ ಎರಡನೇ ಪ್ರಮುಖ ಆಧಾರಸ್ತಂಭವೆಂದರೆ ʻಮೇಕ್ ಇನ್ ಇಂಡಿಯಾʼ. ಇದರ ಅಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ಉತ್ಪಾದನೆಯಲ್ಲಿ ಆಗಿರುವ ಪ್ರಗತಿಯನ್ನು ಮಿತ್ತಲ್ ಅವರು ಉಲ್ಲೇಖಿಸಿದರು. "ಭಾರತವು ಉತ್ಪಾದನೆಯಲ್ಲಿ ಬಹಳ ಮುಂದುವರಿದಿದೆ. ʻಆಪಲ್ʼನಿಂದ ಡಿಕ್ಸನ್, ʻಸ್ಯಾಮ್ಸಂಗ್ʼನಿಂದ ಟಾಟಾ ಹೀಗೆ ಪ್ರತಿಯೊಂದು ಕಂಪನಿಯು ಅದು ಸಣ್ಣದಿರಲಿ ದೊಡ್ಡದಿರಲಿ ಅಥವಾ ನವೋದ್ಯಮವಾಗಿರಲಿ ಉತ್ಪಾದನೆಯಲ್ಲಿ ತೊಡಗಿವೆ. ಭಾರತವು ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದೆ. ವಿಶೇಷವಾಗಿ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಅತಿದೊಡ್ಡ ಪ್ರಮಾಣದ ಉತ್ಪಾದನೆ ಮೂಲಕ ವಿಶ್ವ ನಾಯಕನಾಗಿ ಹೊರಹೊಮ್ಮಿದೆ,ʼʼ ಎಂದು ಅವರು ಹೇಳಿದರು. 5000 ಪಟ್ಟಣಗಳು ಮತ್ತು 20,000 ಹಳ್ಳಿಗಳಲ್ಲಿ ಏರ್ಟೆಲ್ ʻ5ಜಿʼ ಸೇವೆಗೆ ಈಗಾಗಲೇ ಚಾಲನೆ ನೀಡಿದೆ ಎಂದು ಮಾಹಿತಿ ನೀಡಿದ ಅವರು, ಮಾರ್ಚ್ 2024ರ ವೇಳೆಗೆ ʻ5ಜಿʼ ಇಡೀ ದೇಶವನ್ನು ಒಳಗೊಳ್ಳಲಿದೆ ಎಂದರು. ಈ ನಿಟ್ಟಿನಲ್ಲಿ ಪ್ರಧಾನಿಯವರು ನೀಡಿದ ಕರೆಯನ್ನು ಸ್ಮರಿಸಿದರು. ಇದು ನಿಜವಾಗಿಯೂ ವಿಶ್ವದ ಅತ್ಯಂತ ವೇಗದ ʻ5ಜಿʼ ಚಾಲನೆ ಆಗಲಿದೆ ಎಂದು ಅವರು ಹೇಳಿದರು.

ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷರಾದ ಶ್ರೀ ಕುಮಾರ ಮಂಗಲಂ ಬಿರ್ಲಾ ಅವರು ಮಾತನಾಡಿ, ಭಾರತದ ಡಿಜಿಟಲ್ ರೂಪಾಂತರವನ್ನು ಮುನ್ನಡೆಸುವಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ಅಲ್ಲದೆ, ಪ್ರತಿಯೊಬ್ಬರಿಗೂ ಪ್ರಯೋಜನಗಳನ್ನು ಖಾತ್ರಿಪಡಿಸುವ 'ಅಂತ್ಯೋದಯ' ತತ್ವವನ್ನು ಆಧರಿಸಿದ ʻಡಿಜಿಟಲ್ ಸೇರ್ಪಡೆʼಯತ್ತ ಪ್ರಧಾನಿಯವರ ಬದ್ಧತೆಯನ್ನು ಶ್ಲಾಘಿಸಿದರು. ಜಾಗತಿಕ ಮನ್ನಣೆಯನ್ನು ಗಳಿಸಿರುವ ಡಿಜಿಟಲ್ ವಿಕಾಸದಲ್ಲಿ ಭಾರತದ ಬೆಳವಣಿಗೆಗೆ ಈ ಕಾರ್ಯವಿಧಾನವೇ ಕಾರಣ ಅವರು ಶ್ಲಾಘಿಸಿದರು. "ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದ ಪ್ರೇರಿತರಾಗಿ ಭಾರತವು ಜಾಗತಿಕ ದಕ್ಷಿಣದ ಚಾಂಪಿಯನ್ ಆಗಿ ಹೊರಹೊಮ್ಮಿದೆ" ಎಂದು ಶ್ರೀ ಬಿರ್ಲಾ ಹೇಳಿದರು. ಗುರುತು, ಪಾವತಿ ಮತ್ತು ದತ್ತಾಂಶ ನಿರ್ವಹಣೆಯಲ್ಲಿ ಭಾರತದ ಕ್ರಾಂತಿಕಾರಿ ಸಾರ್ವಜನಿಕ ಮೂಲಸೌಕರ್ಯ ಅಳವಡಿಸಿಕೊಳ್ಳಲು ಅನೇಕ ದೇಶಗಳು ಉತ್ಸುಕವಾಗಿವೆ ಎಂದು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಧಿಸುವಲ್ಲಿ ಜವಾಬ್ದಾರಿಯುತ ಪಾಲುದಾರರಾಗಲು ʻವೊಡಾಫೋನ್-ಐಡಿಯಾʼ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು. ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ʻ6ಜಿʼಯಂತಹ ಕ್ಷೇತ್ರಗಳಲ್ಲಿ ಭವಿಷ್ಯದ ತಂತ್ರಜ್ಞಾನಗಳ ಮಾನದಂಡಗಳ ಅಭಿವೃದ್ಧಿಯಲ್ಲಿ ಭಾರತ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಅವರು ಉಲ್ಲೇಖಿಸಿದರು. ಸರಕಾರ ನೀಡುತ್ತಿರುವ ಅಪಾರ ಬೆಂಬಲಕ್ಕಾಗಿ ಅವರು ಧನ್ಯವಾದ ಅರ್ಪಿಸಿದರು.

 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 21ನೇ ಶತಮಾನದ ಬದಲಾಗುತ್ತಿರುವ ಕಾಲದಲ್ಲಿ, ಈ ಕಾರ್ಯಕ್ರಮವು ಕೋಟ್ಯಂತರ ಜನರ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎಂದರು. ತಂತ್ರಜ್ಞಾನದ ವೇಗದ ಗತಿಯನ್ನು ಅರ್ಥಮಾಡಿಕೊಂಡ ಪ್ರಧಾನಮಂತ್ರಿಯವರು, "ಭವಿಷ್ಯವು ಇಲ್ಲಿ ಮತ್ತು ಈಗ ಇದೆ" ಎಂದು ಹೇಳಿದರು. ದೂರಸಂಪರ್ಕ, ತಂತ್ರಜ್ಞಾನ ಮತ್ತು ಸಂಪರ್ಕದಲ್ಲಿ ಭವಿಷ್ಯದ ಇಣುಕುನೋಟಗಳನ್ನು ಒದಗಿಸಲು ಈ ಸಂದರ್ಭದಲ್ಲಿ ಆಯೋಜಿಸಲಾದ ಪ್ರದರ್ಶನವನ್ನು ಅವರು ಶ್ಲಾಘಿಸಿದರು. ʻ6 ಜಿʼ, ʻಎಐʼ, ಸೈಬರ್ ಭದ್ರತೆ, ಅರೆವಾಹಕಗಳು, ಡ್ರೋನ್ ಅಥವಾ ಬಾಹ್ಯಾಕಾಶ ಕ್ಷೇತ್ರಗಳು, ಆಳ ಸಮುದ್ರ, ಹಸಿರು ತಂತ್ರಜ್ಞಾನ ಅಥವಾ ಇತರ ಕ್ಷೇತ್ರಗಳನ್ನು ಉಲ್ಲೇಖಿಸಿದ ಅವರು, "ಭವಿಷ್ಯವು ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ ಮತ್ತು ನಮ್ಮ ಯುವ ಪೀಳಿಗೆಯು ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿರುವುದು ಸಂತೋಷದ ವಿಷಯವಾಗಿದೆ" ಎಂದು ಹೇಳಿದರು.

ಕಳೆದ ವರ್ಷ ಭಾರತದಲ್ಲಿ ʻ5ಜಿʼ ಸೇವೆಗೆ ಚಾಲನೆ ದೊರೆತದ್ದು ವಿಶ್ವದ ಉಳಿದ ದೇಶಗಳನ್ನು ಚಕಿತಗೊಳಿಸಿತು ಎಂದು ಶ್ರೀ ಮೋದಿ ಸ್ಮರಿಸಿದರು. ʻ5ಜಿʼ ಯಶಸ್ಸಿನ ನಂತರ ಭಾರತವು ವಿರಮಿಸಲಿಲ್ಲ, ಮತ್ತು ಅದನ್ನು ಪ್ರತಿಯೊಬ್ಬ ವ್ಯಕ್ತಿಗೆ ಕೊಂಡೊಯ್ಯುವ ಕೆಲಸವನ್ನು ಕೈಗೆತ್ತಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು. "ಭಾರತವು ʻ5ಜಿʼಗೆ ಚಾಲನೆ ಹಂತದಿಂದ ʻ5 ಜಿʼ ತಲುಪಿಸುವ ಹಂತಕ್ಕೆ ಸಾಗಿದೆ," ಎಂದು ಅವರು ಹೇಳಿದರು. ʻ5ಜಿʼ ಜಾರಿಯಾದ ಒಂದು ವರ್ಷದೊಳಗೆ, 4 ಲಕ್ಷ ʻ5ಜಿʼ ಬೇಸ್ ಸ್ಟೇಷನ್ಗಳ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಮಾಹಿತಿ ನೀಡಿದರು, ಇದು ಶೇ.97ರಷ್ಟು ನಗರಗಳು ಮತ್ತು ಶೇ.80ರಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ. ಒಂದು ವರ್ಷದಲ್ಲಿ ಸರಾಸರಿ ಮೊಬೈಲ್ ಬ್ರಾಡ್ ಬ್ಯಾಂಡ್ ವೇಗವು 3 ಪಟ್ಟು ಹೆಚ್ಚಾಗಿದೆ ಎಂದು ಅವರು ಒತ್ತಿಹೇಳಿದರು. ಬ್ರಾಡ್ಬ್ಯಾಂಡ್  ವೇಗದ ವಿಷಯದಲ್ಲಿ ಭಾರತವು 118ನೇ ಸ್ಥಾನದಿಂದ 43 ನೇ ಸ್ಥಾನಕ್ಕೆ ಏರಿದೆ ಎಂದು ಅವರು ಹೇಳಿದರು. "ಭಾರತವು ದೇಶದಲ್ಲಿ ʻ5ಜಿʼ ಸಂಪರ್ಕಜಾಲವನ್ನು ವಿಸ್ತರಿಸುತ್ತಿರುವುದು ಮಾತ್ರವಲ್ಲದೆ, ʻ6ಜಿʼಯಲ್ಲಿ ನಾಯಕನಾಗಲು ಒತ್ತು ನೀಡುತ್ತಿದೆ" ಎಂದು ಅವರು ಹೇಳಿದರು. ʻ2ಜಿʼ ಅವಧಿಯಲ್ಲಿ ನಡೆದ ಹಗರಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಪ್ರಸ್ತುತ ಸರ್ಕಾರದ ಅಧಿಕಾರಾವಧಿಯಲ್ಲಿ ನಡೆದ ʻ4ಜಿʼ ಜಾರಿಯು ಕಳಂಕಗಳಿಂದ ಮುಕ್ತವಾಗಿದೆ ಎಂದರು. ʻ6ಜಿʼ ತಂತ್ರಜ್ಞಾನದೊಂದಿಗೆ ಭಾರತವು ಮುನ್ನಡೆ ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ಇಂಟರ್ನೆಟ್ ಸಂಪರ್ಕ ಮತ್ತು ವೇಗದಲ್ಲಿನ ಸುಧಾರಣೆಯು ಕೇವಲ ಶ್ರೇಯಾಂಕ ಮತ್ತು ಸಂಖ್ಯೆಗೆ ಸೀಮಿತವಾಗಿಲ್ಲ. ಅದನ್ನೂ ಮೀರಿ ಅದು ಜೀವನವನ್ನು ಸುಲಭಗೊಳಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದರು. ಶಿಕ್ಷಣ, ಔಷಧ, ಪ್ರವಾಸೋದ್ಯಮ ಮತ್ತು ಕೃಷಿಯಲ್ಲಿ ಸುಧಾರಿತ ಸಂಪರ್ಕ ಮತ್ತು ವೇಗದ ಪ್ರಯೋಜನಗಳ ಬಗ್ಗೆ ಅವರು ವಿವರಿಸಿದರು.

"ನಾವು ಪ್ರಜಾಪ್ರಭುತ್ವದ ಶಕ್ತಿಯನ್ನು ನಂಬುತ್ತೇವೆ. ಅಭಿವೃದ್ಧಿಯ ಲಾಭವು ಪ್ರತಿಯೊಂದು ವರ್ಗ ಮತ್ತು ಪ್ರದೇಶವನ್ನು ತಲುಪಬೇಕು, ಪ್ರತಿಯೊಬ್ಬರೂ ಭಾರತದ ಸಂಪನ್ಮೂಲಗಳಿಂದ ಪ್ರಯೋಜನ ಪಡೆಯಬೇಕು, ಪ್ರತಿಯೊಬ್ಬರೂ ಘನತೆಯ ಜೀವನವನ್ನು ಹೊಂದಿರಬೇಕು ಮತ್ತು ತಂತ್ರಜ್ಞಾನದ ಪ್ರಯೋಜನ ಎಲ್ಲರಿಗೂ ತಲುಪಬೇಕು. ಈ ದಿಕ್ಕಿನಲ್ಲಿ ನಾವು ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿದ್ದೇವೆ", ಎಂದು ಪ್ರಧಾನಿ ಹೇಳಿದರು. "ನನ್ನ ಪ್ರಕಾರ ಇದುವೇ ಇದು ಅತಿದೊಡ್ಡ ಸಾಮಾಜಿಕ ನ್ಯಾಯ" ಎಂದು ಅವರು ಹೇಳಿದರು. "ಬಂಡವಾಳದ ಲಭ್ಯತೆ, ಸಂಪನ್ಮೂಲಗಳ ಲಭ್ಯತೆ ಮತ್ತು ತಂತ್ರಜ್ಞಾನದ ಲಭ್ಯತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮುದ್ರಾ ಯೋಜನೆಯಡಿ ಅಡಮಾನ ರಹಿತ ಸಾಲಗಳು, ಶೌಚಾಲಯಗಳ ಲಭ್ಯತೆ ಮತ್ತು ʻಜೆಎಎಂʼ (ಜನಧನ್-ಆಧಾರ್-ಮೊಬೈಲ್) ತ್ರಿಶಕ್ತಿಗಳ ಮೂಲಕ ಜಾರಿಗೊಳಿಸಲಾದ ʻನೇರ ನಗದು ವರ್ಗಾವಣೆʼ(ಡಿಬಿಟಿ) ವ್ಯವಸ್ಥೆಯು ಸಾಮಾನ್ಯ ನಾಗರಿಕರಿಗೆ ಈ ಹಿಂದೆ ದೊರೆಯದ ಹಕ್ಕುಗಳನ್ನು ಖಾತ್ರಿಪಡಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ದೂರಸಂಪರ್ಕ ತಂತ್ರಜ್ಞಾನದ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ʻಭಾರತ್ ನೆಟ್ʼ ಸುಮಾರು 2 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಬ್ರಾಡ್ಬ್ಯಾಂಡ್ ನೊಂದಿಗೆ ಸಂಪರ್ಕಿಸಿದೆ ಎಂದರು. 10,000 ʻಅಟಲ್ ಟಿಂಕರಿಂಗ್ ಲ್ಯಾಬ್ʼಗಳು ಸುಮಾರು 75 ಲಕ್ಷ ಮಕ್ಕಳನ್ನು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಪರಿಚಯಿಸುತ್ತಿವೆ. ಇಂದು ಪ್ರಾರಂಭಿಸಲಾದ ʻ5 ಜಿ ಬಳಕೆಯ ಪ್ರಯೋಗಾಲಯʼಗಳು ಇದೇ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. "ಈ ಪ್ರಯೋಗಾಲಯಗಳು ಯುವಕರನ್ನು ದೊಡ್ಡ ಕನಸು ಕಾಣಲು ಪ್ರೇರೇಪಿಸುತ್ತವೆ ಮತ್ತು ಅವುಗಳನ್ನು ಸಾಧಿಸುವ ವಿಶ್ವಾಸವನ್ನು ನೀಡುತ್ತವೆ," ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ವಿಶ್ವದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಗಳಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಭಾರತವು ಕಡಿಮೆ ಸಮಯದಲ್ಲಿ 100 ʻಯುನಿಕಾರ್ನ್ʼಗಳನ್ನು ಗಳಿಸಿದೆ ಮತ್ತು ಈಗ ವಿಶ್ವದ ಅಗ್ರ 3 ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ" ಎಂದು ಶ್ರೀ ಮೋದಿ ಹೇಳಿದರು. 2014ಕ್ಕೂ ಮೊದಲು ಭಾರತವು ಕೆಲವೇ ನೂರು ನವೋದ್ಯಮಗಳಿಗೆ ನೆಲೆಯಾಗಿತ್ತು, ಆದರೆ ಇಂದು ಆ ಸಂಖ್ಯೆ ಸುಮಾರು ಒಂದು ಲಕ್ಷಕ್ಕೆ ಏರಿದೆ ಎಂದು ಪ್ರಧಾನಿ ಹೇಳಿದರು. ದೇಶದ ನವೋದ್ಯಮಗಳಿಗೆ ಮಾರ್ಗದರ್ಶನ ನೀಡಲು ʻಭಾರತೀಯ ಮೊಬೈಲ್ ಕಾಂಗ್ರೆಸ್ʼ ಕೈಗೊಂಡಿರುವ 'ಆಸ್ಪೈರ್' ಕಾರ್ಯಕ್ರಮದ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು ಮತ್ತು ಈ ಕ್ರಮವು ಭಾರತದ ಯುವಕರಿಗೆ ಭಾರಿ ಪ್ರಯೋಜನವನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಭಾರತದ ಪ್ರಯಾಣವನ್ನು ಸ್ಮರಿಸಬೇಕು ಎಂದು ಅವರು ಒತ್ತಿ ಹೇಳಿದರು. ಹಳೆಯ ತಂತ್ರಜ್ಞಾನದಿಂದಾಗಿ ಎದುರಿಸಿದ ತೊಂದರೆಗಳನ್ನು ಸ್ಮರಿಸಿದ ಶ್ರೀ ಮೋದಿ, ಹಿಂದಿನ ಸರ್ಕಾರಗಳು ಇದೇ ಸ್ಥಿತಿಯಲ್ಲಿದ್ದವು ಎಂದು ಗಮನಸೆಳೆದರು. ಹಿಂದಿನ ಸರ್ಕಾರಗಳ ಹಳೆಯ ವಿಧಾನಗಳನ್ನು ಕೆಲಸ ಮಾಡದ ಮೊಬೈಲ್ ಸಾಧನಕ್ಕೆ ಹೋಲಿಕೆ ಮಾಡುವ ಮೂಲಕ ಪ್ರಧಾನಿ ಗಮನಸೆಳೆದರು. "2014ರ ನಂತರ, ಜನರು ಹಳೆಯ ತಂತ್ರಜ್ಞಾನಗಳನ್ನು ಬಳಸುವುದನ್ನು ನಿಲ್ಲಿಸಿದರು, ಬ್ಯಾಟರಿಗಳನ್ನು ಬದಲಾಯಿಸುವುದು ಅಥವಾ ಸಿಸ್ಟಂ ರೀಸ್ಟಾರ್ಟ್ ಮಾಡುವಂತಹ ಕೆಲಸಗಳು ವ್ಯರ್ಥ ಪ್ರಯತ್ನಗಳಾದವು," ಎಂದು ಅವರು ಹೇಳಿದರು.  ಭಾರತವು ಮೊಬೈಲ್ ಫೋನ್ಗಳ ಆಮದುದಾರನಾಗಿತ್ತು, ಆದರೆ ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ ಎಂದು ಅವರು ಸ್ಮರಿಸಿದರು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ವಿಷಯಕ್ಕೆ ಬಂದಾಗ ಹಿಂದಿನ ಸರ್ಕಾರಗಳ ಅವಧಿಯಲ್ಲಿ ದೂರದೃಷ್ಟಿಯ ಕೊರತೆಯ ಬಗ್ಗೆ ಹೇಳಿದ ಶ್ರೀ ಮೋದಿ, ಭಾರತವು ಇಂದು ದೇಶಿಯವಾಗಿ ತಯಾರಿಸಿದ ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಅನ್ನು ರಫ್ತು ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ಭಾರತದಲ್ಲಿ ʻಪಿಕ್ಸೆಲ್ ಫೋನ್ʼಗಳನ್ನು ತಯಾರಿಸುವುದಾಗಿ ʻಗೂಗಲ್ʼ ಇತ್ತೀಚೆಗೆ ಘೋಷಿಸಿದ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ʻಸ್ಯಾಮ್ಸಂಗ್ ಫೋಲ್ಡ್ ಫೈವ್ʼ ಮತ್ತು ʻಆಪಲ್ ಐಫೋನ್ 15ʼ ಅನ್ನು ಈಗಾಗಲೇ ಇಲ್ಲಿ ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದರು.

 

ಮೊಬೈಲ್ ಮತ್ತು ವಿದ್ಯುನ್ಮಾನ ಉತ್ಪಾದನೆಯಲ್ಲಿ ಈ ಯಶಸ್ಸನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. "ಟೆಕ್ ಪರಿಸರ ವ್ಯವಸ್ಥೆಯಲ್ಲಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಎರಡರ ಯಶಸ್ಸಿಗೆ, ನಾವು ಭಾರತದಲ್ಲಿ ಬಲವಾದ ಸೆಮಿಕಂಡಕ್ಟರ್ ಉತ್ಪಾದನಾ ವಲಯವನ್ನು ನಿರ್ಮಿಸುವುದು ಮುಖ್ಯ" ಎಂದು ಅವರು ಹೇಳಿದರು. ಅರೆವಾಹಕಗಳ ಅಭಿವೃದ್ಧಿಗೆ 80 ಸಾವಿರ ಕೋಟಿ ರೂ.ಗಳ ʻಪಿಎಲ್ಐʼ ಯೋಜನೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು. ಇಂದು, ಪ್ರಪಂಚದಾದ್ಯಂತದ ಸೆಮಿಕಂಡಕ್ಟರ್ ಕಂಪನಿಗಳು ಭಾರತೀಯ ಕಂಪನಿಗಳ ಸಹಯೋಗದೊಂದಿಗೆ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷಾ ಸೌಲಭ್ಯಗಳಲ್ಲಿ ಹೂಡಿಕೆ ಮಾಡುತ್ತಿವೆ. ಭಾರತದ ʻಸೆಮಿಕಂಡಕ್ಟರ್ ಮಿಷನ್ʼ ತನ್ನ ದೇಶೀಯ ಬೇಡಿಕೆಯನ್ನು ಮಾತ್ರವಲ್ಲದೆ ವಿಶ್ವದ ಅಗತ್ಯಗಳನ್ನು ಪೂರೈಸುವ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಶೀಲ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾರ್ಪಡಿಸುವಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಭಾರತವು ಇತರೆ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಿಂತಲೂ ಹಿಂದುಳಿದಿಲ್ಲ ಎಂದರು. ವಿವಿಧ ಕ್ಷೇತ್ರಗಳನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವ ಉಪಕ್ರಮಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಲಾಜಿಸ್ಟಿಕ್ಸ್ನಲ್ಲಿ ʻಪಿಎಂ ಗತಿಶಕ್ತಿʼ, ಆರೋಗ್ಯ ಕ್ಷೇತ್ರದಲ್ಲಿ ʻರಾಷ್ಟ್ರೀಯ ಆರೋಗ್ಯ ಮಿಷನ್ʼ ಮತ್ತು ಕೃಷಿ ವಲಯದಲ್ಲಿ ʻಅಗ್ರಿ ಸ್ಟ್ಯಾಕ್ʼನಂತಹ ವೇದಿಕೆಗಳನ್ನು ಉಲ್ಲೇಖಿಸಿದರು. ವೈಜ್ಞಾನಿಕ ಸಂಶೋಧನೆ, ʻಕ್ವಾಂಟಮ್ ಮಿಷನ್ʼ ಮತ್ತು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಹಾಗೂ  ದೇಶೀಯ ವಿನ್ಯಾಸಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ ನೀಡುವಲ್ಲಿ ಭಾರಿ ಹೂಡಿಕೆಗಳ ಬಗ್ಗೆ ಅವರು ಉಲ್ಲೇಖಿಸಿದರು

ಪ್ರಮುಖ ವಿಷಯವಾದ ಸೈಬರ್ ಭದ್ರತೆ ಮತ್ತು ಸಂಪರ್ಕಜಾಲ ಮೂಲಸೌಕರ್ಯದ ಸುರಕ್ಷತೆ ಬಗ್ಗೆ ಪ್ರಧಾನಿ ಮೋದಿ ಗಮನ ಸೆಳೆದರು. ʻಜಿ 20ʼ ಶೃಂಗಸಭೆಯಲ್ಲಿ 'ಸೈಬರ್ ಭದ್ರತೆಯ ಜಾಗತಿಕ ಅಪಾಯಗಳು' ಕುರಿತ ಚರ್ಚೆಯನ್ನು ಸ್ಮರಿಸಿದರು. ಸೈಬರ್ ಭದ್ರತೆಗೆ ಇಡೀ ಉತ್ಪಾದನಾ ಮೌಲ್ಯ ಸರಪಳಿಯಲ್ಲಿ ಸ್ವಾವಲಂಬನೆ ಬಹಳ ಮುಖ್ಯ ಎಂದು ಹೇಳಿದ ಪ್ರಧಾನಿ, ಅದು ಹಾರ್ಡ್ವೇರ್, ಸಾಫ್ಟ್ವೇರ್ ಅಥವಾ ಸಂಪರ್ಕಜಾಲ ಯಾವುದೇ ಆಗಿರಲಿ, ಮೌಲ್ಯ ಸರಪಳಿಯಲ್ಲಿರುವ ಎಲ್ಲವೂ ರಾಷ್ಟ್ರೀಯ ಡೊಮೇನ್ಗೆ ಸೇರಿದಾಗ ಭದ್ರತೆಯನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಒತ್ತಿ ಹೇಳಿದರು. ವಿಶ್ವದ ಪ್ರಜಾಪ್ರಭುತ್ವ ಸಮಾಜಗಳನ್ನು ಸುರಕ್ಷಿತವಾಗಿಡುವ ಬಗ್ಗೆ ʻಭಾರತೀಯ ಮೊಬೈಲ್ ಕಾಂಗ್ರೆಸ್ʼನಲ್ಲಿ ಚರ್ಚೆ ನಡೆಸುವ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು

 

ಈ ಹಿಂದೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ವಿಷಯಕ್ಕೆ ಬಂದಾಗ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕಾಗಿ ಪ್ರಧಾನಿ ವಿಷಾದಿಸಿದರು. ಭಾರತದ ಐಟಿ ವಲಯವನ್ನು ಉಲ್ಲೇಖಿಸಿದ ಅವರು, ಈಗಾಗಲೇ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳಲ್ಲಿ ಭಾರತ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದೆ. "21ನೇ ಶತಮಾನದ ಈ ಅವಧಿಯು ಭಾರತದ ಚಿಂತನೆಯ ನಾಯಕತ್ವದ ಸಮಯವಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು ಮತ್ತು ಇತರರು ಅನುಸರಿಸಬಹುದಾದ ಹೊಸ ಕ್ಷೇತ್ರಗಳನ್ನು ಕಂಡು ಹಿಡಿಯುವಂತೆ ಚಿಂತಕರಿಗೆ ಕರೆ ನೀಡಿದರು. ಇಂದು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಇಡೀ ಜಗತ್ತನ್ನು ಮುನ್ನಡೆಸುತ್ತಿರುವ ʻಯುಪಿಐʼನ ಉದಾಹರಣೆಯನ್ನು ಅವರು ನೀಡಿದರು. "ಭಾರತವು ಯುವ ಜನಶಕ್ತಿ ಮತ್ತು ಸದೃಢ ಪ್ರಜಾಪ್ರಭುತ್ವದ ಶಕ್ತಿಯನ್ನು ಹೊಂದಿದೆ" ಎಂದು ಪ್ರಧಾನಿ ಹೇಳಿದರು. ʻಭಾರತೀಯ ಮೊಬೈಲ್ ಕಾಂಗ್ರೆಸ್ʼನ ಸದಸ್ಯರು, ವಿಶೇಷವಾಗಿ ಯುವ ಸದಸ್ಯರು ಈ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು. "ಇಂದು, ನಾವು ಅಭಿವೃದ್ಧಿ ಹೊಂದಿದ ಭಾರತವಾಗುವ ಗುರಿಯನ್ನು ಸಾಕಾರಗೊಳಿಸುತ್ತಿರುವ ಹೊತ್ತಿನಲ್ಲಿ, ನಾವು ಚಿಂತನೆಯ ನಾಯಕರಾಗಿ ಮುಂದುವರಿದರೆ,  ಆ ಪರಿವರ್ತನೆಯು ಇಡೀ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲದು," ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

ಕೇಂದ್ರ ಸಂವಹನ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಸಂವಹನ ಖಾತೆ ಸಹಾಯಕ ಸಚಿವ ಶ್ರೀ ದೇವುಸಿನ್ಹ ಚೌಹಾಣ್, ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಶ್ರೀ ಆಕಾಶ್ ಎಂ ಅಂಬಾನಿ, ಭಾರ್ತಿ ಎಂಟರ್ಪ್ರೈಸಸ್ ಅಧ್ಯಕ್ಷ ಶ್ರೀ ಸುನಿಲ್ ಭಾರ್ತಿ ಮಿತ್ತಲ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಶ್ರೀ ಕುಮಾರ್ ಮಂಗಲಂ ಬಿರ್ಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

'100 5ಜಿ ಲ್ಯಾಬ್ಸ್ ಉಪಕ್ರಮ'ವು, ಭಾರತದ ವಿಶಿಷ್ಟ ಅಗತ್ಯಗಳು ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸುವ ʻ5 ಜಿʼ ಅನ್ವಯಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ 5 ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅವಕಾಶಗಳನ್ನು ಅರಿತುಕೊಳ್ಳುವ ಪ್ರಯತ್ನವಾಗಿದೆ. ಈ ವಿಶಿಷ್ಟ ಉಪಕ್ರಮವು ಶಿಕ್ಷಣ, ಕೃಷಿ, ಆರೋಗ್ಯ, ವಿದ್ಯುತ್, ಸಾರಿಗೆ ಮುಂತಾದ ವಿವಿಧ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು 5ಜಿ ತಂತ್ರಜ್ಞಾನದ ಬಳಕೆಯಲ್ಲಿ ದೇಶವನ್ನು ಮುಂಚೂಣಿಗೆ ಕೊಂಡೊಯ್ಯುತ್ತದೆ. ಈ ಉಪಕ್ರಮವು ದೇಶದಲ್ಲಿ ʻ6ಜಿ-ಸನ್ನದ್ಧ ಶೈಕ್ಷಣಿಕ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಉಪಕ್ರಮವು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾದ ದೇಶೀಯ ಟೆಲಿಕಾಂ ತಂತ್ರಜ್ಞಾನದ ಅಭಿವೃದ್ಧಿಯತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.

ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼ(ಐಎಂಸಿ) ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, 2023 ರ ಅಕ್ಟೋಬರ್ 27 ರಿಂದ 29 ರವರೆಗೆ ನಡೆಯಲಿದೆ. ದೂರಸಂಪರ್ಕ ಮತ್ತು ತಂತ್ರಜ್ಞಾನದಲ್ಲಿ ಭಾರತದ ಅದ್ಭುತ ಪ್ರಗತಿಯನ್ನು ಎತ್ತಿ ತೋರಿಸಲು, ಮಹತ್ವದ ಪ್ರಕಟಣೆಗಳನ್ನು ಹೊರಡಿಸಲು ಮತ್ತು ನವೋದ್ಯಮಗಳಿಗೆ ತಮ್ಮ ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಲು ಈ ಕಾರ್ಯಕ್ರಮವು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

'ಗ್ಲೋಬಲ್ ಡಿಜಿಟಲ್ ಇನ್ನೋವೇಶನ್' ಎಂಬ ಧ್ಯೇಯವಾಕ್ಯದೊಂದಿಗೆ, ʻಐಎಂಸಿ-2023ʼ ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳ ಡೆವಲಪರ್, ತಯಾರಕ ಮತ್ತು ರಫ್ತುದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.  ಮೂರು ದಿನಗಳ ಸಮ್ಮೇಳನದಲ್ಲಿ 5ಜಿ, 6ಜಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ನಂತಹ ತಂತ್ರಜ್ಞಾನಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು ಮತ್ತು ಸೆಮಿಕಂಡಕ್ಟರ್ ಉದ್ಯಮ, ಹಸಿರು ತಂತ್ರಜ್ಞಾನ, ಸೈಬರ್ ಭದ್ರತೆ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

ಈ ವರ್ಷ, ʻಐಎಂಸಿʼಯು 'ಆಸ್ಪೈರ್' ಎಂಬ ನವೋದ್ಯಮ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ. ಇದು ಹೊಸ ಉದ್ಯಮಶೀಲತಾ ಉಪಕ್ರಮಗಳು ಮತ್ತು ಸಹಯೋಗಗಳಿಗೆ ವೇಗ ನೀಡುವ ಉದ್ದೇಶದಿಂದ ನವೋದ್ಯಮಗಳು, ಹೂಡಿಕೆದಾರರು ಮತ್ತು ಸ್ಥಾಪಿತ ವ್ಯವಹಾರಗಳ ನಡುವೆ ಸಂಪರ್ಕವನ್ನು ಬೆಳೆಸುತ್ತದೆ.

ʻಐಎಂಸಿ-2023ʼರಲ್ಲಿ ಸುಮಾರು 5000 ಸಿಇಒ ಮಟ್ಟದ ಪ್ರತಿನಿಧಿಗಳು, 230 ಪ್ರದರ್ಶಕರು, 400 ನವೋದ್ಯಮಗಳು ಮತ್ತು ಇತರ ಪಾಲುದಾರರು ಸೇರಿದಂತೆ ಸುಮಾರು 22 ದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”