ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಇಂದಿರಾಗಾಂಧಿ ಒಳ ಕ್ರೀಡಾಂಗಣದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜಯಂತಿ ಸ್ಮರಣಾರ್ಥ ಒಂದು ವರ್ಷವಿಡೀ ನಡೆಯುವ ಆಚರಣೆಗೆ ಚಾಲನೆ ನೀಡಿದರು. ಅಲ್ಲದೆ ಅವರು ಅದರ ಸ್ಮರಣಾರ್ಥ ಲಾಂಛನವನ್ನೂ ಸಹ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ನಂತರ, ಪ್ರಧಾನ ಮಂತ್ರಿ ಅವರು ಆರ್ಯ ಸಮಾಜದ ಪನೋರಮಾ ಮತ್ತು ನೇರ ಪ್ರಸಾರ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಯಾಗದ ಆಹುತಿಯ ಸಮರ್ಪಣೆ ಮಾಡಿದರು. ನಂತರ, ಮಹರ್ಷಿ ದಯಾನಂದ ಸರಸ್ವತಿ ಅವರ ಸಂದೇಶಗಳನ್ನು ಭಾರತ ಮತ್ತು ಪ್ರಪಂಚದ ಇತರ ಭಾಗಗಳಿಗೆ ಪಸರಿಸುವ ಈ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅದನ್ನು ಸಾಂಕೇತಿಕವಾಗಿ ಯುವ ಪ್ರತಿನಿಧಿಗಳಿಗೆ ಅವರು ಎಲ್ಇಡಿ ಮಶಾಲ್ ಹಸ್ತಾಂತರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜಯಂತಿಯ ಆಚರಣೆಯ ಸಂದರ್ಭವನ್ನು ಐತಿಹಾಸಿಕ ಎಂದು ಬಣ್ಣಿಸಿದರು. ಇದು ಇಡೀ ಜಗತ್ತಿಗೆ ಭವಿಷ್ಯವನ್ನು ಮತ್ತು ಸ್ಫೂರ್ತಿಯನ್ನು ಸೃಷ್ಟಿಸುವ ಸಂದರ್ಭವಾಗಿದೆ. ಜಗತ್ತನ್ನು ಉತ್ತಮ ತಾಣನ್ನಾಗಿ ಮಾಡುವ ಮಹರ್ಷಿ ದಯಾನಂದ ಅವರ ಆದರ್ಶವನ್ನು ಉಲ್ಲೇಖಿಸಿದ ಪ್ರಧಾನಿ, ದ್ವೇಷ, ಹಿಂಸೆ ಮತ್ತು ಅಸ್ಥಿರತೆಯ ಈ ಯುಗದಲ್ಲಿ ಮಹರ್ಷಿ ದಯಾನಂದರು ತೋರಿಸಿದ ಮಾರ್ಗವು ಹೊಸ ಭರವಸೆ ನೀಡುತ್ತದೆ ಎಂದು ಹೇಳಿದರು.
ಈ ಪವಿತ್ರ ಸಂದರ್ಭವನ್ನು ಎರಡು ವರ್ಷಗಳ ಕಾಲ ಆಚರಿಸಲಾಗುವುದು ಎಂದು ಒತ್ತಿ ಹೇಳಿದ ಪ್ರಧಾನಿ, ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜಯಂತಿಯನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಮನುಕುಲದ ಕಲ್ಯಾಣಕ್ಕಾಗಿ ಇರುವ ನಿರಂತರ ರೂಢಿಗತ ಅಭ್ಯಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು ಯಾಗದಲ್ಲಿ ಆಹುತಿ ಅರ್ಪಿಸಲು ಸಾಧ್ಯವಾಗಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಸ್ವಾಮೀಜಿ ಅವರು ಜನಿಸಿದ ನೆಲದಲ್ಲಿಯೇ ಹುಟ್ಟುವ ಸೌಭಾಗ್ಯ ತಮಗೆ ದೊರಕಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಮಹರ್ಷಿ ದಯಾನಂದರ ಆದರ್ಶಗಳು ತಮ್ಮ ಜೀವನದಲ್ಲಿ ನಿರಂತರ ಆಕರ್ಷಣೆಯಾಗಿವೆ ಎಂದರು.
ದಯಾನಂದ ಸರಸ್ವತಿ ಅವರು ಜನಿಸಿದಾಗ ಭಾರತದ ಸ್ಥಿತಿಯನ್ನು ಸ್ಮರಿಸಿಕೊಂಡ ಪ್ರಧಾನಿ, ಶತಮಾನಗಳ ಗುಲಾಮಗಿರಿಯ ನಂತರ ಭಾರತವು ದುರ್ಬಲಗೊಂಡಿತ್ತು ಮತ್ತು ಶೋಚನೀಯವಾಗಿತ್ತು. ಅದರ ವರ್ಚಸ್ಸು ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿತ್ತು ಎಂದು ಹೇಳಿದರು. ಭಾರತದ ಆದರ್ಶಗಳು, ಸಂಸ್ಕೃತಿ ಮತ್ತು ಬೇರುಗಳನ್ನು ಹತ್ತಿಕ್ಕಲು ನಡೆದ ಹಲವು ಪ್ರಯತ್ನಗಳನ್ನು ಪ್ರಧಾನಿಯವರು ನೆನಪು ಮಾಡಿಕೊಂಡರು. ಭಾರತದ ಸಂಪ್ರದಾಯಗಳು ಮತ್ತು ಧರ್ಮಗ್ರಂಥಗಳಲ್ಲಿನ ಯಾವುದೇ ನ್ಯೂನತೆಯ ಕಲ್ಪನೆಯನ್ನು ತೊಡೆದುಹಾಕಿದ ಸ್ವಾಮೀಜಿ, ಅವುಗಳ ನಿಜವಾದ ಅರ್ಥವನ್ನು ಮರೆತುಬಿಡಲಾಗಿದೆ ಎಂದಿದ್ದರು. ಭಾರತವನ್ನು ತುಚ್ಛವಾಗಿ ಕಾಣಲು ವೇದಗಳ ಸುಳ್ಳು ವ್ಯಾಖ್ಯಾನವನ್ನು ಬಳಸಲಾಗುತ್ತಿದೆ ಮತ್ತು ಸಂಪ್ರದಾಯಗಳನ್ನು ವಿರೂಪಗೊಳಿಸಲಾಗುತ್ತಿದ್ದ ಸಮಯದಲ್ಲಿ ಮಹರ್ಷಿ ದಯಾನಂದರ ಪ್ರಯತ್ನಗಳು ಸಂರಕ್ಷಕರಾಗಿ ಬಂದವು ಎಂದು ಪ್ರಧಾನಿಯವರು ನೆನಪು ಮಾಡಿಕೊಂಡರು. "ಮಹರ್ಷಿ ಜಿ ಅವರು ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಬಲವಾದ ಅಭಿಯಾನವನ್ನು ಪ್ರಾರಂಭಿಸಿದರು." ಮಹರ್ಷಿಗಳ ಶ್ರಮದ ತೀವ್ರತೆಯನ್ನು ವಿವರಿಸಲು ಅವರು ಕರ್ತವ್ಯಕ್ಕೆ ಒತ್ತು ನೀಡಿದ್ದರ ಕುರಿತು ಅನಿಸಿಕೆಗಳನ್ನು ಶ್ರೀ ನರೇಂದ್ರ ಮೋದಿ ಅವರು ಉದಾಹರಣೆ ಸಹಿತ ವಿವರಿಸಿದರು. "ಧರ್ಮಕ್ಕೆ ತಪ್ಪಾಗಿ ಆರೋಪಿಸಲಾದ ಅನಿಷ್ಟಗಳನ್ನು ಸ್ವಾಮಿಜಿ ಧರ್ಮದ ಬೆಳಕಿನಿಂದಲೇ ತೊಡೆದುಹಾಕಿದರು" ಎಂದು ಪ್ರಧಾನಿ ವಿವರಿಸಿದರು. ಅಸ್ಪೃಶ್ಯತೆ ವಿರುದ್ಧ ಸ್ವಾಮೀಜಿ ಅವರ ಹೋರಾಟವನ್ನು ಮಹಾತ್ಮ ಗಾಂಧಿ ದೊಡ್ಡ ಕೊಡುಗೆ ಎಂದು ಬಣ್ಣಿಸಿದ್ದರು ಎಂದು ಪ್ರಧಾನಿ ಅವರು ಹೇಳಿದರು.
ಮಹಿಳೆಯರ ಬಗ್ಗೆ ಸಮಾಜದಲ್ಲಿ ವಾಡಿಕೆಯಾಗಿ ಬಂದಿರುವ ತಥಾಕಥಿತ ಅನಿಸಿಕೆಗಳ ವಿರುದ್ಧ ಮಹರ್ಷಿ ದಯಾನಂದ್ ಜಿ ಅವರು ತಾರ್ಕಿಕ ಮತ್ತು ಪರಿಣಾಮಕಾರಿ ಧ್ವನಿಯಾಗಿ ಹೊರಹೊಮ್ಮಿದರು ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಮಹರ್ಷಿ ದಯಾನಂದ ಜಿ ಅವರು ಮಹಿಳೆಯರ ವಿರುದ್ಧದ ತಾರತಮ್ಯವನ್ನು ಬಲವಾಗಿ ವಿರೋಧಿಸಿದರು ಮತ್ತು ಈ ಸಂಗತಿಗಳು 150 ವರ್ಷಗಳಿಗಿಂತಲೂ ಹಳೆಯದಾಗಿದೆ ಎಂದು ಒತ್ತಿಹೇಳುತ್ತಾ ಮಹಿಳೆಯರ ಶಿಕ್ಷಣಕ್ಕಾಗಿ ಅಭಿಯಾನ ಆರಂಭಿಸಿದರು. ಇಂದಿನ ದಿನಗಳು ಮತ್ತು ಯುಗದಲ್ಲಿಯೂ ಸಹ ಮಹಿಳೆಯರ ಶಿಕ್ಷಣ ಮತ್ತು ಗೌರವದ ಹಕ್ಕನ್ನು ಕಸಿದುಕೊಳ್ಳುವ ಸಮಾಜಗಳಿವೆ, ಆದರೆ ಮಹಿಳೆಯರಿಗೆ ಸಮಾನ ಹಕ್ಕುಗಳು ದೂರದ ಕನಸಾಗಿ, ವಾಸ್ತವದಲ್ಲಿ ಅವು ಸಿಗದಿದ್ದಾಗ ಧ್ವನಿ ಎತ್ತಿದ್ದು ಮಹರ್ಷಿ ದಯಾನಂದರು ಎಂದು ಹೇಳಿದರು.
ಮಹರ್ಷಿ ಜಿ ಅವರ ಸಾಧನೆಗಳು ಮತ್ತು ಪ್ರಯತ್ನಗಳ ಅಸಾಧಾರಣ ಸ್ವರೂಪವನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಆರ್ಯಸಮಾಜ ಸ್ಥಾಪನೆಯಾಗಿ 150 ವರ್ಷಗಳ ನಂತರ ಮತ್ತು ಅವರ ಜನನದ 200 ವರ್ಷಗಳ ನಂತರ ಜನರ ಮನೋಭಾವ ಮತ್ತು ಅವರ ಮೇಲಿನ ಗೌರವವು ರಾಷ್ಟ್ರದ ಪಯಣದಲ್ಲಿ ಅವರ ಪ್ರಮುಖ ಸ್ಥಾನದ ದೋತ್ಯಕವಾಗಿದೆ ಎಂದು ಅವರು ಹೇಳಿದರು. "ಅಮೃತ ಕಾಲದಲ್ಲಿ, ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜಯಂತಿ ಆಚರಣೆ ಪವಿತ್ರ ಸ್ಫೂರ್ತಿಯಾಗಿ ಮೂಡಿಬಂದಿದೆ" ಎಂದು ಅವರು ಹೇಳಿದರು.
ಸ್ವಾಮೀಜಿ ಅವರ ಬೋಧನೆಯನ್ನು ದೇಶವು ಅತ್ಯಂತ ವಿಶ್ವಾಸದಿಂದ ಅನುಸರಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. 'ವೇದಗಳಿಗೆ ಹಿಂತಿರುಗಿ' (ಬ್ಯಾಕ್ ಟು ವೇದಾಸ್ ) ಎಂಬ ಸ್ವಾಮೀಜಿಯವರ ಕರೆಯನ್ನು ಉಲ್ಲೇಖಿಸಿದ ಪ್ರಧಾನಿ, "ಇಂದು ದೇಶವು ‘ನಮ್ಮ ಪರಂಪರೆಯಲ್ಲಿ ಹೆಮ್ಮೆ ಇದೆ' ಎಂದು ವಿಶ್ವಾಸದಿಂದ ಕರೆ ನೀಡುತ್ತಿದೆ’’ ಎಂದು ಹೇಳಿದರು. ಏಕೆಂದರೆ ಅವರು ಅದೇ ಸಮಯದಲ್ಲಿ ಸಂಪ್ರದಾಯ, ಸಂಸ್ಕೃತಿ ಶ್ರೀಮಂತಗೊಳಿಸುವುದರೊಂದಿಗೆ ಆಧುನಿಕತೆಯ ಅಡಿಪಾಯ ಹಾಕಿ ಭಾರತೀಯ ಜನರ ವಿಶ್ವಾಸ ಹೆಚ್ಚಿಸಿದರು ಎಂದರು.
ಭಾರತದಲ್ಲಿ ಧರ್ಮದ ವಿಸ್ತೃತ ಕಲ್ಪನೆಯ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಆಚರಣೆಗಳನ್ನು ಮೀರಿದ ಮತ್ತು ಸಂಪೂರ್ಣ ಜೀವನ ವಿಧಾನವೆಂದು ವ್ಯಾಖ್ಯಾನಿಸಲಾಗಿದೆ ಎಂದರು.’ನಮ್ಮೊಂದಿಗೆ, ಧರ್ಮದ ಮೊದಲ ವ್ಯಾಖ್ಯಾನವು ಕರ್ತವ್ಯದ ಕುರಿತದ್ದಾಗಿದೆ' ಎಂದು ಪ್ರಧಾನಿ ಹೇಳಿದರು. ಸ್ವಾಮೀಜಿ ಅಂತರ್ಗತ ಮತ್ತು ಸಮಗ್ರ ವಿಧಾನದೊಂದಿಗೆ ರಾಷ್ಟ್ರ ಜೀವನದ ಹಲವು ಆಯಾಮಗಳ ಜವಾಬ್ದಾರಿ ಮತ್ತು ನಾಯಕತ್ವವನ್ನು ವಹಿಸಿಕೊಂಡರು ಎಂದು ಪ್ರಧಾನಿ ಹೇಳಿದರು. ತತ್ತ್ವಶಾಸ್ತ್ರ, ಯೋಗ, ಗಣಿತ, ನೀತಿ, ರಾಜತಾಂತ್ರಿಕತೆ, ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ಭಾರತೀಯ ಋಷಿಗಳ ಸಾಧನೆಗಳನ್ನು ಉಲ್ಲೇಖಿಸುವ ಮೂಲಕ ಭಾರತೀಯ ಜೀವನದಲ್ಲಿ ಋಷಿಗಳು ಮತ್ತು ಸಂತರ ವ್ಯಾಪಕ ಪಾತ್ರವನ್ನು ಪ್ರಧಾನಮಂತ್ರಿ ವಿಸ್ತೃತವಾಗಿ ವಿವರಿಸಿದರು. ಆ ಪ್ರಾಚೀನ ಸಂಪ್ರದಾಯವನ್ನು ಪುನರುಜ್ಜೀವಗೊಳಿಸುವಲ್ಲಿ ಸ್ವಾಮೀಜಿ ಬಹು ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಮಹರ್ಷಿ ದಯಾನಂದರ ಬೋಧನೆಗಳ ಕುರಿತು ಬೆಳಕು ಚೆಲ್ಲಿದ ಪ್ರಧಾನಿ, ಅವರ ಜೀವಿತಾವಧಿಯಲ್ಲಿ ಅವರು ಸ್ಥಾಪಿಸಿದ ವಿವಿಧ ಸಂಸ್ಥೆಗಳನ್ನು ಉಲ್ಲೇಖಿಸಿದರು. ಮಹರ್ಷಿ ಅವರು ಕ್ರಾಂತಿಕಾರಿ ಸಿದ್ಧಾಂತದೊಂದಿಗೆ ಬದುಕಿದ್ದರೂ ಸಹ ಅವರು ತಮ್ಮ ಎಲ್ಲ ಆಲೋಚನೆಗಳನ್ನು ವ್ಯವಸ್ಥಿತವಾಗಿ ಹೇಗೆ ಜೋಡಿಸಿದರು ಮತ್ತು ದಶಕಗಳಿಂದ ನಾನಾ ಕ್ಷೇತ್ರಗಳಲ್ಲಿ ವಿವಿಧ ಕಲ್ಯಾಣ ಕಾರ್ಯಗಳನ್ನು ಸಕ್ರಿಯವಾಗಿ ಕೈಗೊಂಡಿರುವ ವಿವಿಧ ಸಂಸ್ಥೆಗಳನ್ನು ಸ್ಥಾಪಿಸಲು ಅವುಗಳಿಗೆ ಹೇಗೆ ಸಾಂಸ್ಥಿಕ ರೂಪ ನೀಡಿದರು ಎಂಬುದನ್ನು ಪ್ರಧಾನಿ ವಿವರಿಸಿದರು. ಪರೋಪಕಾರಿಣಿ ಸಭಾದ ಉದಾಹರಣೆ ನೀಡಿದ ಪ್ರಧಾನಿ, ಸಂಸ್ಥೆಯು ಸ್ವತಃ ಮಹರ್ಷಿಗಳಿಂದಲೇ ಸ್ಥಾಪಿಸಲ್ಪಟ್ಟಿದೆ ಮತ್ತು ಇಂದು ಗುರುಕುಲಗಳು ಮತ್ತು ಪ್ರಕಾಶನದ ಮೂಲಕ ಮಾಧ್ಯಮವಾಗಿ ವೈದಿಕ ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಿದೆ ಎಂದು ಹೇಳಿದರು. ಅವರು ಕುರುಕ್ಷೇತ್ರ ಗುರುಕುಲ, ಸ್ವಾಮಿ ಶ್ರದ್ಧಾನಂದ ಟ್ರಸ್ಟ್ ಮತ್ತು ಮಹರ್ಷಿ ದಯಾನಂದ ಟ್ರಸ್ಟ್‌ಗಳ ಉದಾಹರಣೆಗಳನ್ನು ನೀಡಿದರು ಮತ್ತು ಈ ಸಂಸ್ಥೆಗಳಿಂದ ಹಲವು ಯುವಕರು ತಮ್ಮ ಜೀವನಗಳನ್ನು ರೂಪಿಸಿಕೊಂಡಿದ್ದಾರೆ ಎಂದರು. 2001 ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ಸಮಾಜ ಸೇವೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಜೀವನ್ ಪ್ರಭಾತ್ ಟ್ರಸ್ಟ್‌ನ ಮಹತ್ವದ ಕೊಡುಗೆಗಳನ್ನು ಪ್ರಧಾನಿ ಉಲ್ಲೇಖಿಸಿದರು ಮತ್ತು ಸಂಸ್ಥೆಯು ಮಹರ್ಷಿ ಜಿ ಅವರ ಆದರ್ಶಗಳಿಂದ ಪ್ರೇರಿತವಾಗಿದೆ ಎಂದು ಹೇಳಿದರು.
ತಾರತಮ್ಯರಹಿತ ನೀತಿಗಳು ಮತ್ತು ಪ್ರಯತ್ನಗಳಿಂದ ದೇಶವು ಪ್ರಗತಿಯನ್ನು ಕಾಣುತ್ತಿದೆ ಎಂದ ಪ್ರಧಾನಿ ಅವರು ಇದು ಸ್ವಾಮಿ ಜಿ ಅವರ ಆದ್ಯತೆಯಾಗಿತ್ತು ಎಂದರು. “ಬಡವರು, ಹಿಂದುಳಿದವರು ಮತ್ತು ದೀನದಲಿತರ ಸೇವೆ ಇಂದು ದೇಶಕ್ಕೆ ಮೊದಲ ಯಾಗವಾಗಿದೆ. ಈ ನಿಟ್ಟಿನಲ್ಲಿ ವಸತಿ, ವೈದ್ಯಕೀಯ ಚಿಕಿತ್ಸೆ ಮತ್ತು ಮಹಿಳಾ ಸಬಲೀಕರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಅವರು ಉಲ್ಲೇಖಿಸಿದರು. ನೂತನ ಶಿಕ್ಷಣ ನೀತಿಯು ಸ್ವಾಮೀಜಿ ಅವರು ಬೋಧಿಸಿದಂತೆ ಭಾರತೀಯತೆಗೆ ಒತ್ತು ನೀಡುವ ಮೂಲಕ ಆಧುನಿಕ ಶಿಕ್ಷಣವನ್ನು ಉತ್ತೇಜಿಸುತ್ತದೆ’’ ಎಂದರು.
ಸಾಕ್ಷಾತ್ಕಾರ ಪಡೆದ ವ್ಯಕ್ತಿ ಎಂಬುದರ ಕುರಿತ ಸ್ವಾಮೀಜಿ ಅವರ ವ್ಯಾಖ್ಯಾನವನ್ನು ನೆನಪಿಸಿಕೊಂಡ ಪ್ರಧಾನಿ ಅವರು, ಸಾಕ್ಷಾತ್ಕಾರಗೊಂಡ ವ್ಯಕ್ತಿ, ತಾನು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನದನ್ನು ನೀಡುವ ವ್ಯಕ್ತಿಯಾಗಿರುತ್ತಾನೆ ಎಂದರು. ಪರಿಸರ ಸೇರಿದಂತೆ ಅಸಂಖ್ಯಾತ ಕ್ಷೇತ್ರಗಳಲ್ಲಿ ಇದು ಅತ್ಯಂತ ಪ್ರಸ್ತುತವಾಗಿದೆ. ವೇದಗಳ ಈ ಜ್ಞಾನವನ್ನು ಸ್ವಾಮೀಜಿ ಆಳವಾಗಿ ಅರ್ಥಮಾಡಿಕೊಂಡಿದ್ದರು ಎಂದು ಪ್ರಧಾನಿ ಹೇಳಿದರು. "ಮಹರ್ಷಿ ಜಿ ವೇದಗಳ ವಿದ್ಯಾರ್ಥಿ ಮತ್ತು ಜ್ಞಾನ ಮಾರ್ಗದ ಸಂತ" ಎಂದು ಪ್ರಧಾನಿ ಬಣ್ಣಿಸಿದರು. ಸುಸ್ಥಿರ ಅಭಿವೃದ್ಧಿಯ ಅನ್ವೇಷಣೆಯಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಿಷನ್ ಲೈಫ್ ಅನ್ನು ಉಲ್ಲೇಖಿಸಿದ ಪ್ರಧಾನಿ, ಪರಿಸರವನ್ನು ಜಿ-20ರ ವಿಶೇಷ ಕಾರ್ಯಸೂಚಿಯಾಗಿ ಮುಂದಿಡಲಾಗುತ್ತಿದೆ ಎಂದು ಹೇಳಿದರು. ಪುರಾತನ ಜ್ಞಾನದ ಭದ್ರಬುನಾದಿಯೊಂದಿಗೆ ಈ ಆಧುನಿಕ ಆದರ್ಶಗಳನ್ನು ಪ್ರಚಾರ ಮಾಡುವ ಮೂಲಕ ಆರ್ಯ ಸಮಾಜವು ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ನೈಸರ್ಗಿಕ ಕೃಷಿಗೆ ಒತ್ತುನೀಡುವಂತೆ ಹೇಳಿದ ಪ್ರಧಾನಮಂತ್ರಿಯವರು ಶ್ರೀ ಅನ್ನಕ್ಕೆ ಉತ್ತೇಜನದ ಬಗ್ಗೆಯೂ ಪ್ರಸ್ತಾಪಿಸಿದರು.
ಮಹರ್ಷಿ ಅವರ ವ್ಯಕ್ತಿತ್ವದಿಂದ ಬಹಳಷ್ಟು ಕಲಿಯಬಹುದು ಎಂದು ಒತ್ತಿ ಹೇಳಿದ ಪ್ರಧಾನಿ, ಮಹರ್ಷಿಯನ್ನು ಭೇಟಿಯಾಗಲು ಬಂದ ಒಬ್ಬ ಆಂಗ್ಲ ಅಧಿಕಾರಿಯ ಕಥೆಯನ್ನು ವಿವರಿಸಿದರು ಮತ್ತು ಭಾರತದಲ್ಲಿ ನಿರಂತರ ಬ್ರಿಟಿಷ್ ಆಳ್ವಿಕೆಗಾಗಿ ಪ್ರಾರ್ಥಿಸುವಂತೆ ಕೇಳಿಕೊಂಡರು, ಅದಕ್ಕೆ ಮಹರ್ಷಿ ನಿರ್ಭಯದಿಂದ ಉತ್ತರಿಸಿ “ಸ್ವಾತಂತ್ರ್ಯ ನನ್ನ ಆತ್ಮ ಮತ್ತು ಭಾರತದ ಧ್ವನಿ" ಎಂದಿದ್ದರು, ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂಸ್ಥೆಗಳ ನಿರ್ಮಾತೃಗಳು ಮತ್ತು ದೇಶಭಕ್ತರು ಸ್ವಾಮೀಜಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ಲೋಕಮಾನ್ಯ ತಿಲಕ್, ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ್ ಸಾವರ್ಕರ್, ಲಾಲಾ ಲಜಪತ್ ರಾಯ್, ಲಾಲಾ ಹರದಯಾಳ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳ ಉದಾಹರಣೆಗಳನ್ನು ಪ್ರಧಾನಿ ನೀಡಿದರು. ಮಹಾತ್ಮ ಹಂಸರಾಜ್, ಸ್ವಾಮಿ ಶ್ರದ್ಧಾನಂದ ಜಿ, ಭಾಯಿ ಪರಮಾನಂದ ಜಿ ಮತ್ತು ಮಹರ್ಷಿಯಿಂದ ಸ್ಫೂರ್ತಿ ಪಡೆದ ಅನೇಕ ನಾಯಕರ ಉದಾಹರಣೆಗಳನ್ನೂ ಪ್ರಧಾನಿ ನೀಡಿದರು.
ಆರ್ಯ ಸಮಾಜವು ಸ್ವಾಮೀಜಿ ಅವರ ಬೋಧನೆಗಳ ಪರಂಪರೆ ಹೊಂದಿದೆ ಮತ್ತು ದೇಶವು ಪ್ರತಿಯೊಬ್ಬ ‘ಆರ್ಯ ವೀರ’ ರಿಂದ ಸಾಕಷ್ಟು ನಿರೀಕ್ಷಿಸುತ್ತದೆ ಎಂದು ಪ್ರಧಾನಿ ಹೇಳಿದರು. ಮುಂದಿನ ವರ್ಷ ಆರ್ಯ ಸಮಾಜ 150ನೇ ವರ್ಷಕ್ಕೆ ಕಾಲಿಡಲಿದೆ ಎಂದು ತಿಳಿಸಿದರು. ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿ ಅವರು ಮಹತ್ವದ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ನಿರ್ವಹಣೆಯೊಂದಿಗೆ ಈ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪ್ರತಿಯೊಬ್ಬರನ್ನು ಅಭಿನಂದಿಸುವುದಾಗಿ ಹೇಳಿದರು. "ಅಮೃತ ಕಾಲದಲ್ಲಿ, ನಾವೆಲ್ಲರೂ ಮಹರ್ಷಿ ದಯಾನಂದ ಜಿ ಅವರ ಪ್ರಯತ್ನಗಳಿಂದ ಸ್ಫೂರ್ತಿ ಪಡೆಯೋಣ" ಎಂದು ಹೇಳಿ ಪ್ರಧಾನಿ ಭಾಷಣ ಮುಗಿಸಿದರು.
ಗುಜರಾತಿನ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ, ಸಂಸ್ಕೃತಿ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ, ದೆಹಲಿ ಆರ್ಯ ಪ್ರತಿನಿಧಿ ಸಭಾದ ಅಧ್ಯಕ್ಷ ಶ್ರೀ ದರಮ್ ಪಾಲ್ ಆರ್ಯ, ದೆಹಲಿ ಆರ್ಯ ಪ್ರತಿನಿಧಿ ಸಭೆ ಮಹಾಮಂತ್ರಿ ಶ್ರೀ ವಿನಯ್ ಆರ್ಯ ಮತ್ತು ಸರ್ವದೇಶಿಕ್ ಆರ್ಯ ಪ್ರತಿನಿಧಿ ಸಭಾದ ಅಧ್ಯಕ್ಷರಾದ ಶ್ರೀ ಸುರೇಶ್ ಚಂದ್ರ ಆರ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
1824ರ ಫೆಬ್ರವರಿ 12 ರಂದು ಜನಿಸಿದ ಮಹರ್ಷಿ ದಯಾನಂದ ಸರಸ್ವತಿ ಅವರು ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು, ಅವರು 1875ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು ಮತ್ತು ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಿದರು. ಆರ್ಯ ಸಮಾಜವು ಸಾಮಾಜಿಕ ಸುಧಾರಣೆಗಳು ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.
ಸಮಾಜ ಸುಧಾರಕರು ಮತ್ತು ಪ್ರಮುಖ ವ್ಯಕ್ತಿಗಳು, ವಿಶೇಷವಾಗಿ ಅವರ ಕೊಡುಗೆಗಳಿಗೆ ಹೆಚ್ಚು ಮಾನ್ಯತೆ ಕೊಡಲಾಗಿಲ್ಲವೋ ಅಂತಹ ಮಹಾನ್ ಸಾಧಕರ ಆಚರಣೆಗಳನ್ನು ದೇಶದಾದ್ಯಂತ ನಡೆಸಲು ಸರ್ಕಾರವು ಬದ್ಧವಾಗಿದೆ, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸುವುದರಿಂದ ಹಿಡಿದು ಶ್ರೀ ಅರಬಿಂದೋ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುವವರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂತಹ ಉಪಕ್ರಮಗಳನ್ನು ತಮ್ಮ ಮುಂದಾಳತ್ವದಿಂದ ಮುನ್ನಡೆಸುತ್ತಿದ್ದಾರೆ.
महर्षि दयानंद सरस्वती जी का दिखाया मार्ग करोड़ों लोगों में आशा का संचार करता है। pic.twitter.com/BpLHb0A2Ik
— PMO India (@PMOIndia) February 12, 2023
महर्षि दयानन्द जी ने आगे आकर वेदों के बोध को समाज में पुनर्जीवित किया। pic.twitter.com/rFuMEzois3
— PMO India (@PMOIndia) February 12, 2023
महिलाओं को लेकर भी समाज में जो रूढ़ियाँ पनप गईं थीं, महर्षि दयानन्द जी उनके खिलाफ भी एक तार्किक और प्रभावी आवाज़ बनकर उभरे। pic.twitter.com/gKKBYcnCAj
— PMO India (@PMOIndia) February 12, 2023
आज देश पूरे गर्व के साथ ‘अपनी विरासत पर गर्व’ का आवाहन कर रहा है। pic.twitter.com/BdKXqYdST0
— PMO India (@PMOIndia) February 12, 2023
जो गरीब है, जो पिछड़ा और वंचित है, उसकी सेवा आज देश के लिए सबसे पहला यज्ञ है। pic.twitter.com/AWEHh1EuQP
— PMO India (@PMOIndia) February 12, 2023