ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ, ಗೌರವಾನ್ವಿತ ಜೋಸೆಫ್ ಆರ್. ಬೈಡನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೂರವಾಣಿ ಮೂಲಕ ಸಂವಾದ ನಡೆಸಿದರು.
ಇಬ್ಬರೂ ನಾಯಕರು ತಮ್ಮ ದೇಶಗಳಲ್ಲಿನ ಕೋವಿಡ್–19 ಪರಿಸ್ಥಿತಿ ಕುರಿತು ಸಮಾಲೊಚನೆ ನಡೆಸಿದರು. ಪ್ರಮುಖವಾಗಿ ಭಾರತದಲ್ಲಿ ಕೋವಿಡ್–19 ಎರಡನೇ ಅಲೆ ನಿಯಂತ್ರಿಸಲು ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲಾಗಿದ್ದು, ನಿರ್ಣಾಯಕ ಔಷಧಿಗಳು, ಚಿಕಿತ್ಸೆ, ಆರೋಗ್ಯ ಸಾಧನಗಳ ಪೂರೈಕೆಯನ್ನು ಖಚಿತಪಡಿಸಿರುವ ಬಗ್ಗೆ ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.
ಅಧ್ಯಕ್ಷ ಶ್ರೀ ಬೈಡನ್ ಭಾರತದೊಂದಿಗೆ ಅಮೆರಿಕ ಒಗ್ಗಟ್ಟಿನ ಬಾಂಧವ್ಯ ಹೊಂದಿರುವುದನ್ನು ತಿಳಿಸಿದರಲ್ಲದೇ ಚಿಕಿತ್ಸೆಗೆ ಅಗತ್ಯವಾಗಿರುವ ಸಂಪನ್ಮೂಲಗಳು, ಕೃತಕ ಉಸಿರಾಟ ಸಾಧನಗಳು ಮತ್ತು ಕೋವಿಶೀಲ್ಡ್ ತಯಾರಿಕೆಗೆ ಅಗತ್ಯವಾಗಿರುವ ಕಚ್ಚಾ ವಸ್ತುಗಳನ್ನು ಪೂರೈಸುವ ತಮ್ಮ ದೃಢತೆಯನ್ನು ವ್ಯಕ್ತಪಡಿಸಿದರು.
ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರ ಬೆಂಬಲ ಮತ್ತು ನೆರವು ನೀಡಿದ್ದಾಗಿ ಹೃದಯ ಪೂರ್ವಕ ಮೆಚ್ಚುಗೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಲಸಿಕೆ ಮೈತ್ರಿಯೊಂದಿಗೆ ಜಾಗತಿಕವಾಗಿ ಕೋವಿಡ್–19 ಸಾಂಕ್ರಾಮಿಕ ನಿವಾರಿಸುವ ಕುರಿತು ಭಾರತದ ಬದ್ಧತೆಯನ್ನು ಪ್ರಸ್ತಾಪಿಸಿರುವ ಅವರು, ಕೋವ್ಯಾಕ್ಸ್ ಮತ್ತು ಕ್ವಾಡ್ ಲಸಿಕೆ ತಯಾರಿಕೆಯಲ್ಲಿ ಪಾಲ್ಗೊಳ್ಳುವಿಕೆಯ ಕ್ರಮಗಳನ್ನು ಉಲ್ಲೇಖಿಸಿದ್ದಾರೆ. ಕೋವಿಡ್–19 ಗೆ ಸಂಬಂಧಿಸಿದ ಲಸಿಕೆಗಳು, ಔಷಧಿಗಳು, ಚಿಕಿತ್ಸೆಗೆ ಅಗತ್ಯವಾದ ಕಚ್ಚಾ ವಸ್ತುಗಳು, ಒಳಹರಿವಿನ ಸುಗಮ ಮತ್ತು ಮುಕ್ತ ಪೂರೈಕೆ ಸರಪಳಿಗಳನ್ನು ಖಚಿತಪಡಿಸಿಕೊಳ‍್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಭಾರತ – ಅಮೆರಿಕದ ಸಹಭಾಗಿತ್ವ ಮತ್ತು ಕೋವಿಡ್–19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಪೂರೈಕೆ ಹಾಗೂ ಈ ವಲಯದಲ್ಲಿ ನಿಕಟ ಸಮನ್ವಯತೆ, ಸಹಕಾರದಿಂದ ಕಾರ್ಯನಿರ್ವಹಿಸುವಂತೆ ಉಭಯ ನಾಯಕರು ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಔಷಧಗಳು, ತ್ವರಿತವಾಗಿ ಕೈಗೆಟುಕ ದರದಲ್ಲಿ ಲಸಿಕೆಗಳು ದೊರೆಕುವಂತೆ ಮಾಡಲು ಡಬ್ಲ್ಯೂಟಿಓ ದಲ್ಲಿ “ಟಿ.ಅರ್.ಐ.ಪಿ.ಎಸ್” ಒಪ್ಪಂದದಂತೆ ನಿಯಮಗಳನ್ನು ಸರಳಗೊಳಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಧ್ಯಕ್ಷ ಶ್ರೀ ಬೈಡನ್ ಅವರಿಗೆ ಮಾಹಿತಿ ನೀಡಿದ್ದಾರೆ.
ಉಭಯ ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಸಹ ಸಮ್ಮತಿಸಿದ್ದಾರೆ.