"ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಪ್ರಸ್ತುತ ವೇಗ ಮತ್ತು ಪ್ರಮಾಣವು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತಿದೆ"
"ದೇಶದ ಪ್ರತಿಯೊಂದು ಭಾಗವನ್ನು ʻವಂದೇ ಭಾರತ್ʼ ಸಂಪರ್ಕಿಸುವ ದಿನ ದೂರವಿಲ್ಲ"
"ಜಿ-20ಯ ಯಶಸ್ಸು ಭಾರತದ ಪ್ರಜಾಪ್ರಭುತ್ವದ, ಜನಸಂಖ್ಯೆಯ ಮತ್ತು ವೈವಿಧ್ಯತೆಯ ಶಕ್ತಿಯನ್ನು ಪ್ರದರ್ಶಿಸಿದೆ"
"ಭಾರತವು ತನ್ನ ವರ್ತಮಾನ ಮತ್ತು ಭವಿಷ್ಯದ ಅಗತ್ಯಗಳ ನಿಟ್ಟಿನಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ"
"ಮುಂದಿನ ದಿನಗಳಲ್ಲಿ ʻಅಮೃತ್ ಭಾರತ್ ನಿಲ್ದಾಣʼಗಳು ನವ ಭಾರತದ ಗುರುತಾಗಲಿವೆ"
"ಈಗ ರೈಲ್ವೆ ನಿಲ್ದಾಣಗಳ ಜನ್ಮದಿನವನ್ನು ಆಚರಿಸುವ ಸಂಪ್ರದಾಯವನ್ನು ಮತ್ತಷ್ಟು ವಿಸ್ತರಿಸಲಾಗುವುದು ಮತ್ತು ಹೆಚ್ಚು ಹೆಚ್ಚು ಜನರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು"
"ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವವನ್ನು ಒದಗಿಸುವ ಹಾಗೂ ಪ್ರಯಾಣದ ಸುಗಮತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೈಲ್ವೆಯ ಪ್ರತಿಯೊಬ್ಬ ಉದ್ಯೋಗಿಯೂ ಸದಾ ಸಂವೇದನಾಶೀಲರಾಗಿರಬೇಕು "
"ಭಾರತೀಯ ರೈಲ್ವೆ ಮತ್ತು ಸಮಾಜದ ಪ್ರತಿಯೊಂದು ಹಂತದಲ್ಲೂ ನಡೆಯುತ್ತಿರುವ ಬದಲಾವಣೆಗಳು, ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಮಹತ್ವದ ಹೆಜ್ಜೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂಬ ವಿಶ್ವಾಸ ನನಗಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂಬತ್ತು ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ಹೊಸ ʻವಂದೇ ಭಾರತ್ʼ ರೈಲುಗಳು ದೇಶಾದ್ಯಂತ ಸಂಪರ್ಕವನ್ನು ಸುಧಾರಿಸುವ ಮತ್ತು ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ. ಹಸಿರು ನಿಶಾನೆ ತೋರಿದ ಹೊಸ ರೈಲುಗಳೆಂದರೆ:

ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌

ತಿರುನೆಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್‌

ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌

ವಿಜಯವಾಡ - ಚೆನ್ನೈ (ರೇಣಿಗುಂಟಾ ಮೂಲಕ) ವಂದೇ ಭಾರತ್ ಎಕ್ಸ್‌ಪ್ರೆಸ್‌

ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್‌

ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್‌

ರೂರ್ಕೆಲಾ - ಭುವನೇಶ್ವರ - ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್‌

ರಾಂಚಿ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್‌

ಜಾಮ್‌ನಗರ್-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್‌

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಒಂಬತ್ತು ʻವಂದೇ ಭಾರತ್ʼ ರೈಲುಗಳಿಗೆ ಹಸಿರು ನಿಶಾನೆ ತೋರಿರುವುದು ದೇಶದ ಆಧುನಿಕ ಸಂಪರ್ಕದಲ್ಲಿ ಅಭೂತಪೂರ್ವ ಸಂದರ್ಭ ಎಂದು ಬಣ್ಣಿಸಿದರು. "ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಈ ವೇಗ ಮತ್ತು ಪ್ರಮಾಣವು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ" ಎಂದು ಅವರು ಹೇಳಿದರು. ಇಂದು ಪ್ರಾರಂಭವಾದ ರೈಲುಗಳು ಹೆಚ್ಚು ಆಧುನಿಕ ಮತ್ತು ಆರಾಮದಾಯಕವಾಗಿವೆ ಎಂದು ಪ್ರಧಾನಿ ಹೇಳಿದರು. ಈ ʻವಂದೇ ಭಾರತ್ʼ ರೈಲುಗಳು ʻನವ ಭಾರತʼದ ಹೊಸ ಉತ್ಸಾಹದ ಸಂಕೇತಗಳಾಗಿವೆ ಎಂದರು. ʻವಂದೇ ಭಾರತ್ʼ ರೈಲುಗಳಲ್ಲಿ ಒಂದು ಕೋಟಿ ಹನ್ನೊಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದ ಅವರು, ʻವಂದೇ ಭಾರತ್ʼ ಬಗ್ಗೆ ಹೆಚ್ಚುತ್ತಿರುವ ಉತ್ಸಾಹ ಕುರಿತು ಸಂತಸ ವ್ಯಕ್ತಪಡಿಸಿದರು.

 

25 ವಂದೇ ಭಾರತ್ ರೈಲುಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರಿಗೆ ಸೇವೆ ಸಲ್ಲಿಸುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಇಂದು ಅದಕ್ಕೆ ಇನ್ನೂ 9 ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼಗಳನ್ನು ಸೇರಿಸಲಾಗುತ್ತಿದೆ ಎಂದರು. " ದೇಶದ ಪ್ರತಿಯೊಂದು ಭಾಗವನ್ನು ವಂದೇ ಭಾರತ್ ರೈಲುಗಳು ಸಂಪರ್ಕಿಸುವ ದಿನ ದೂರವಿಲ್ಲ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಮಯವನ್ನು ಉಳಿಸಲು ಮತ್ತು ಅದೇ ದಿನ ಪ್ರಯಾಣ ಮಾಡಲು ಬಯಸುವ ಜನರಿಗೆ ʻವಂದೇ ಭಾರತ್ʼನ ಉಪಯುಕ್ತತೆಯ ಬಗ್ಗೆ ಅವರು ಹೇಳಿದರು. ʻವಂದೇ ಭಾರತ್ʼ ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ ಹೆಚ್ಚಿದ ಪ್ರವಾಸೋದ್ಯಮವು ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. 

ದೇಶದ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಪಡುತ್ತಿರುವುದರಿಂದ ದೇಶದಲ್ಲಿ ಭರವಸೆ ಮತ್ತು ವಿಶ್ವಾಸದ ವಾತಾವರಣ ಮೂಡಿದೆ ಪ್ರಧಾನಿ ಮೋದಿ ಒತ್ತಿಹೇಳಿದರು. ʻಚಂದ್ರಯಾನ-3ʼ ಮತ್ತು ʻಆದಿತ್ಯ ಎಲ್-1ʼ ಯೋಜನೆಗಳ ಐತಿಹಾಸಿಕ ಯಶಸ್ಸನ್ನು ಅವರು ಉಲ್ಲೇಖಿಸಿದರು. ಅಂತೆಯೇ, ಜಿ-20ಯ ಯಶಸ್ಸು ಭಾರತದ ಪ್ರಜಾಪ್ರಭುತ್ವದ, ಜನಸಂಖ್ಯೆಯ ಮತ್ತು ವೈವಿಧ್ಯತೆಯ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.

ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ʻನಾರಿಶಕ್ತಿ ವಂದನ ಕಾಯ್ದೆʼಯ ಅನುಮೋದನೆ ನಿರ್ಣಾಯಕ ಕ್ಷಣವಾಗಿದೆ ಎಂದು ಅವರು ಉಲ್ಲೇಖಿಸಿದರು.   ಇದೇ ವೇಳೆ, ಅನೇಕ ರೈಲ್ವೆ ನಿಲ್ದಾಣಗಳನ್ನು ಮಹಿಳಾ ಕಾರ್ಯಕರ್ತರೇ ನಡೆಸುತ್ತಿರುವುದನ್ನು ಅವರು ಉಲ್ಲೇಖಿಸಿದರು.

ಭಾರತವು ಆತ್ಮವಿಶ್ವಾಸದೊಂದಿಗೆ ತನ್ನ ವರ್ತಮಾನ ಮತ್ತು ಭವಿಷ್ಯದ ಅಗತ್ಯಗಳ ಮೇಲೆ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತಡೆರಹಿತ ಸಮನ್ವಯಕ್ಕಾಗಿ ʻಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ʼ ಮತ್ತು ಸಾರಿಗೆ ಮತ್ತು ರಫ್ತು ಸಂಬಂಧಿತ ಶುಲ್ಕಗಳನ್ನು ಕಡಿಮೆ ಮಾಡಲು ಹೊಸ ಸರಕು ಸಾಗಣೆಯ ನೀತಿಯನ್ನು ಅವರು ಉಲ್ಲೇಖಿಸಿದರು. ಯಾವುದೇ ಒಂದು ಸಾರಿಗೆ ವಿಧಾನವು ಇತರ ವಿಧಾನಗಳನ್ನು ಬೆಂಬಲಿಸಬೇಕಾಗಿರುವುದರಿಂದ ಬಹು ಮಾದರಿ ಸಂಪರ್ಕದ ಬಗ್ಗೆಯೂ ಅವರು ಮಾತನಾಡಿದರು.  ಇದೆಲ್ಲವೂ ಸಾಮಾನ್ಯ ನಾಗರಿಕರಿಗೆ ಪ್ರಯಾಣದ ಸುಗಮನತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದರು.

 

ಸಾಮಾನ್ಯ ನಾಗರಿಕರ ಜೀವನದಲ್ಲಿ ರೈಲ್ವೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹಿಂದಿನ ಕಾಲದಲ್ಲಿ ಈ ಪ್ರಮುಖ ವಲಯವನ್ನು ನಿರ್ಲಕ್ಷಿಸಲಾಗಿತ್ತು ಎಂದು ವಿಷಾದಿಸಿದರು. ಭಾರತೀಯ ರೈಲ್ವೆಯ ಪರಿವರ್ತನೆಗಾಗಿ ಪ್ರಸ್ತುತ ಸರ್ಕಾರದ ಪ್ರಯತ್ನಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ರೈಲ್ವೆಗಾಗಿ ಈ ವರ್ಷ ಒದಗಿಸಲಾದ ಬಜೆಟ್ ಅನುದಾನವು 2014ರ ರೈಲ್ವೆ ಬಜೆಟ್‌ಗಿಂತ 8 ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. ಅಂತೆಯೇ, ರೈಲ್ವೆ ಹಳಿಗಳ ಡಬ್ಲಿಂಗ್‌, ವಿದ್ಯುದ್ದೀಕರಣ ಮತ್ತು ಹೊಸ ಮಾರ್ಗಗಳ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದರು.

"ಭಾರತವು ಅಭಿವೃದ್ಧಿಯ ಪಥದಲ್ಲಿರುವುದರಿಂದ ಈಗ ತನ್ನ ರೈಲ್ವೆ ನಿಲ್ದಾಣಗಳನ್ನು ಸಹ ಆಧುನೀಕರಿಸಬೇಕಾಗುತ್ತದೆ" ಎಂದು ಪ್ರಧಾನಿ ಒತ್ತಿ ಹೇಳಿದರು.  ಈ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಮೊದಲ ಬಾರಿಗೆ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮತ್ತು ಆಧುನೀಕರಣಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇಂದು, ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ದೇಶದಲ್ಲಿ ದಾಖಲೆ ಸಂಖ್ಯೆಯ ಪಾದಚಾರಿ ಮೇಲ್ಸೇತುವೆಗಳು, ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ, ದೇಶದ 500ಕ್ಕೂ ಹೆಚ್ಚು ಪ್ರಮುಖ ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಲಾಯಿತು. ʻಅಮೃತಕಾಲʼದ ಅವಧಿಯಲ್ಲಿ ನಿರ್ಮಿಸಲಾದ ಈ ಹೊಸ ನಿಲ್ದಾಣಗಳನ್ನು ʻಅಮೃತ್ ಭಾರತ್ ನಿಲ್ದಾಣಗಳುʼ ಎಂದು ಕರೆಯಲಾಗುವುದು ಎಂದು ಪ್ರಧಾನಿ ಹೇಳಿದರು. "ಈ ನಿಲ್ದಾಣಗಳು ಮುಂಬರುವ ದಿನಗಳಲ್ಲಿ ಹೊಸ ಭಾರತದ ಹೆಗ್ಗುರುತುಗಳಾಗಲಿವೆ" ಎಂದು ಅವರು ಹೇಳಿದರು.

ರೈಲ್ವೆ ನಿಲ್ದಾಣದ ಸ್ಥಾಪನೆಯ ಸ್ಮರಣಾರ್ಥವಾಗಿ 'ಸ್ಥಾಪನಾ ದಿವಸ್' ಆಚರಣೆಯನ್ನು ರೈಲ್ವೆ ಆರಂಭಿಸಿರುವುದಕ್ಕೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಕೊಯಮತ್ತೂರು, ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಮುಂಬೈನಲ್ಲಿ ನಡೆದ ಇಂತಹ ಆಚರಣೆಗಳನ್ನು ಉಲ್ಲೇಖಿಸಿದರು. ಕೊಯಮತ್ತೂರು ರೈಲ್ವೆ ನಿಲ್ದಾಣಕ್ಕೆ 150 ವರ್ಷ ತುಂಬಿದೆ. "ಈಗ ರೈಲ್ವೆ ನಿಲ್ದಾಣಗಳ ಜನ್ಮದಿನವನ್ನು ಆಚರಿಸುವ ಈ ಸಂಪ್ರದಾಯವನ್ನು ಮತ್ತಷ್ಟು ವಿಸ್ತರಿಸಲಾಗುವುದು ಮತ್ತು ಹೆಚ್ಚು ಹೆಚ್ಚು ಜನರನ್ನು ತೊಡಗಿಸಿಕೊಳ್ಳಲಾಗುವುದು," ಎಂದು ಅವರು ಹೇಳಿದರು.

 

ದೇಶವು ʻಏಕ ಭಾರತ, ಶ್ರೇಷ್ಠ ಭಾರತʼದ ದೃಷ್ಟಿಕೋನವನ್ನು ʻಸಂಕಲ್ಪದಿಂದ ಸಿದ್ಧಿಯʼ ಮಾಧ್ಯಮವನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು. "2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು, ಪ್ರತಿ ರಾಜ್ಯ ಮತ್ತು ಪ್ರತಿ ರಾಜ್ಯದ ಜನರ ಅಭಿವೃದ್ಧಿ ಅಗತ್ಯ" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ರೈಲ್ವೆ ಸಚಿವರ ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಸ್ವಾರ್ಥ ಚಿಂತನೆಯು ದೇಶಕ್ಕೆ ಸಾಕಷ್ಟು ಹಾನಿ ಮಾಡಿದೆ ಮತ್ತು ಈಗ ನಾವು ಯಾವುದೇ ರಾಜ್ಯವನ್ನು ಹಿಂದುಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. "ನಾವು ʻಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ದೃಷ್ಟಿಕೋನದೊಂದಿಗೆ ಮುಂದುವರಿಯಬೇಕಾಗಿದೆ," ಎಂದರು.

ಕಷ್ಟಪಟ್ಟು ದುಡಿಯುವ ರೈಲ್ವೆ ನೌಕರರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಯಾಣಿಕರ ಪ್ರತಿಯೊಂದು ಪ್ರಯಾಣವನ್ನು ಸ್ಮರಣೀಯವನ್ನಾಗಿ ಮಾಡುವಂತೆ ಸಲಹೆ ನೀಡಿದರು. "ರೈಲ್ವೆಯ ಪ್ರತಿಯೊಬ್ಬ ಉದ್ಯೋಗಿಯು ಪ್ರಯಾಣವನ್ನು ಸುಲಭಗೊಳಿಸುವ ಬಗ್ಗೆ ಮತ್ತು ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ಒದಗಿಸುವ ಬಗ್ಗೆ ಸದಾ ಸಂವೇದನಾಶೀಲರಾಗಿರಬೇಕು," ಎಂದು ಪ್ರಧಾನಿ ಕೋರಿದರು.

ರೈಲ್ವೆಯ ಸ್ವಚ್ಛತೆಯ ಹೊಸ ಮಾನದಂಡಗಳು ಪ್ರತಿಯೊಬ್ಬ ನಾಗರಿಕರ ಗಮನಕ್ಕೆ ಬಂದಿವೆ ಎಂದು ಪ್ರಧಾನಿ ಹೇಳಿದರು. ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ಅಕ್ಟೋಬರ್ 1ರಂದು ಬೆಳಿಗ್ಗೆ 10 ಗಂಟೆಗೆ ಉದ್ದೇಶಿತ ಸ್ವಚ್ಛತಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಅವರು ಕರೆ ನೀಡಿದರು. ಸರ್ದಾರ್ ಪಟೇಲ್ ಅವರ ಜಯಂತಿಯಾದ ಅಕ್ಟೋಬರ್ 2ರಿಂದ 31ರವರೆಗೆ ಖಾದಿ ಮತ್ತು ಸ್ವದೇಶಿ ಉತ್ಪನ್ನಗಳ ಖರೀದಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವಂತೆ ಮತ್ತು ʻವೋಕಲ್‌ ಫಾರ್‌ ಲೋಕಲ್‌ʼಗೆ ಒತ್ತು ನೀಡುವಂತೆ ಪ್ರಧಾಣಿಯವರು ಪ್ರತಿಯೊಬ್ಬರಿಗೂ ಕರೆ ನೀಡಿದರು.

"ಭಾರತೀಯ ರೈಲ್ವೆ ಮತ್ತು ಸಮಾಜದ ಪ್ರತಿಯೊಂದು ಹಂತದಲ್ಲೂ ಆಗುತ್ತಿರುವ ಬದಲಾವಣೆಗಳು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಒಂದು ಪ್ರಮುಖ ಹೆಜ್ಜೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂಬ ವಿಶ್ವಾಸ ನನಗಿದೆ,ʼʼ ಎಂದು ಹೇಳುವ ಮೂಲಕ ಪ್ರಧಾನಿ ತಮ್ಮ ಮಾತು ಮುಗಿಸಿದರು.

ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಸಂಸತ್ ಸದಸ್ಯರು ಮತ್ತು ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹಿನ್ನೆಲೆ

ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ ಹನ್ನೊಂದು ರಾಜ್ಯಗಳಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತವೆ.

ಈ ʻವಂದೇ ಭಾರತ್ʼ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತ್ಯಂತ ವೇಗದ ರೈಲುಗಳಾಗಲಿವೆ ಮತ್ತು ಪ್ರಯಾಣಿಕರ ಗಣನೀಯ ಸಮಯವನ್ನು ಉಳಿಸಲು ಸಹಾಯ ಮಾಡುತ್ತವೆ. ʻರೂರ್ಕೆಲಾ-ಭುವನೇಶ್ವರ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್‌ʼ ಮತ್ತು ʻಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲುಗಳು ಸುಮಾರು 3 ಗಂಟೆಗಳಷ್ಟು ವೇಗವಾಗಿರುತ್ತವೆ. ʻಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ʼ 2.5 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿಸಲಿದೆ. ʻತಿರುನೆಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್‌ 2 ಗಂಟೆಗೂ ಹೆಚ್ಚು ಬೇಗ ತಲುಪಲಿದೆ. ʻರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್‌, ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮತ್ತು ಜಾಮ್‌ನಗರ್-ಅಹಮದಾಬಾದ್ ವಂದೇ ಭಾರತ್ ಎಪ್ಸ್‌ಪ್ರೆಸ್‌ ರೈಲುಗಳು ಸುಮಾರು 1 ಗಂಟೆ ಮುಂಚಿತವಾಘಿ ಸೇರಲಿವೆ; ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು ಅರ್ಧ ಗಂಟೆ ಬೇಗ ತಲುಪಲಿದೆ.

ದೇಶಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳ ನಡುವೆ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ʻರೂರ್ಕೆಲಾ-ಭುವನೇಶ್ವರ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ʼ ಮತ್ತು ʻತಿರುನೆಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲುಗಳನ್ನು ಆರಂಭಿಸಲಾಗಿದೆ. ಇವು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಪುರಿ ಮತ್ತು ಮಧುರೈಗಳನ್ನು ಸಂಪರ್ಕಿಸಲಿವೆ. ಅಲ್ಲದೆ, ʻವಿಜಯವಾಡ - ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೇಣಿಗುಂಟ ಮಾರ್ಗದ ಮೂಲಕ ಚಲಿಸಲಿದ್ದು, ತಿರುಪತಿ ಯಾತ್ರಾ ಕೇಂದ್ರಕ್ಕೆ ಸಂಪರ್ಕವನ್ನು ಒದಗಿಸುತ್ತದೆ.

ಈ ʻವಂದೇ ಭಾರತ್ʼ ರೈಲುಗಳ ಪರಿಚಯವು ದೇಶದಲ್ಲಿ ಹೊಸ ಗುಣಮಟ್ಟದ ರೈಲು ಸೇವೆಗೆ ನಾಂದಿ ಹಾಡಲಿದೆ. ವಿಶ್ವದರ್ಜೆಯ ಸೌಲಭ್ಯಗಳು ಮತ್ತು ʻಕವಚ್ ತಂತ್ರಜ್ಞಾನʼ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ರೈಲುಗಳ ಸೇವೆಯು ಸಾಮಾನ್ಯ ಜನರು, ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಪ್ರವಾಸಿಗರಿಗೆ ಆಧುನಿಕ, ವೇಗದ ಹಾಗೂ ಆರಾಮದಾಯಕ ಪ್ರಯಾಣದ ಸಾಧನಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi