ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಸಾಹಿಬಾಬಾದ್ ರಾಪಿಡ್ ಎಕ್ಸ್ ನಿಲ್ದಾಣದಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿ ಎಸ್ ಕಾರಿಡಾರ್ ನ ಆದ್ಯತೆಯ ವಿಭಾಗವನ್ನು ಉದ್ಘಾಟಿಸಿದರು. ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ತ ಸಾರಿಗೆ ವ್ಯವಸ್ಥೆ (ಆರ್ ಆರ್ ಟಿ ಎಸ್) ಪ್ರಾರಂಭದ ಗುರುತಾಗಿ ಸಾಹಿಬಾಬಾದ್ ನಿಂದ ದುಹೈ ಡಿಪೋಗೆ ಸಂಪರ್ಕಿಸುವ ನಮೋ ಭಾರತ್ ರಾಪಿಡ್ ಎಕ್ಸ್ ರೈಲಿಗೆ ಅವರು ಹಸಿರುನಿಶಾನೆ ತೋರಿದರು. ಶ್ರೀ ಮೋದಿಯವರು ಬೆಂಗಳೂರು ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ ನ ಎರಡು ವಿಸ್ತರಿತ ಮಾರ್ಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಪ್ರಧಾನಮಂತ್ರಿಯವರು ಪ್ರಾದೇಶಿಕ ಕ್ಷಿಪ್ರ ರೈಲು ನಮೋ ಭಾರತ್ ನಲ್ಲಿ ಪ್ರಯಾಣಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಭಾರತದ ಮೊದಲ ಕ್ಷಿಪ್ರ ರೈಲು ಸೇವೆಯಾಗಿದ್ದು ರಾಷ್ಟ್ರಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದೆ, ನಮೋ ಭಾರತ್ ರೈಲನ್ನು ಜನತೆಗೆ ಸಮರ್ಪಿಸಲಾಗುತ್ತಿದೆ ಎಂದು ಹೇಳಿದರು. ನಾಲ್ಕು ವರ್ಷಗಳ ಹಿಂದೆ ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿ ಎಸ್ ಕಾರಿಡಾರ್ ಗೆ ಶಂಕುಸ್ಥಾಪನೆ ಮಾಡಿದ್ದನ್ನು ಶ್ರೀ ಮೋದಿ ನೆನಪಿಸಿಕೊಂಡರು ಮತ್ತು ಇಂದು ಸಾಹಿಬಾಬಾದ್ ನಿಂದ ದುಹೈ ಡಿಪೋ ವಿಭಾಗದಲ್ಲಿ ಅದರ ಕಾರ್ಯಾಚರಣೆ ಆರಂಭವಾಗಿದೆ ಎಂದರು. ತಾನು ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ಉದ್ಘಾಟಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಒಂದೂವರೆ ವರ್ಷಗಳ ನಂತರ ಪೂರ್ಣಗೊಳ್ಳುವ ಆರ್ ಆರ್ ಟಿ ಎಸ್ ಮೀರತ್ ವಿಭಾಗವನ್ನು ಉದ್ಘಾಟಿಸಲು ತಾವು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಶ್ರೀ ಮೋದಿ ಅವರು ಇಂದು ಬೆಳಿಗ್ಗೆ ನಮೋ ಭಾರತ್ ನಲ್ಲಿ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡರು ಮತ್ತು ದೇಶದ ರೈಲ್ವೆಯ ಪರಿವರ್ತನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನವರಾತ್ರಿಯ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಿ, ನಮೋ ಭಾರತಕ್ಕೆ ಮಾತಾ ಕಾತ್ಯಾಯನಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು. ಹೊಸದಾಗಿ ಉದ್ಘಾಟನೆಗೊಂಡಿರುವ ನಮೋ ಭಾರತ್ ರೈಲಿನ ಸಂಪೂರ್ಣ ಸಹಾಯಕ ಸಿಬ್ಬಂದಿ ಮತ್ತು ಲೋಕೋಮೋಟಿವ್ ಪೈಲಟ್ ಗಳು ಮಹಿಳೆಯರೇ ಆಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. "ನಮೋ ಭಾರತ್ ದೇಶದಲ್ಲಿ ಮಹಿಳಾ ಶಕ್ತಿಯನ್ನು ಬಲಪಡಿಸುವ ಸಂಕೇತವಾಗಿದೆ" ಎಂದು ಶ್ರೀ ಮೋದಿ ಹೇಳಿದರು. ನವರಾತ್ರಿಯ ಶುಭ ಸಂದರ್ಭದಲ್ಲಿ ಇಂದಿನ ಯೋಜನೆಗಳಿಗಾಗಿ ದೆಹಲಿ, ಎನ್ ಸಿ ಆರ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಜನರನ್ನು ಪ್ರಧಾನಿ ಅಭಿನಂದಿಸಿದರು. ನಮೋ ಭಾರತ್ ರೈಲು ಆಧುನಿಕತೆ ಮತ್ತು ವೇಗವನ್ನು ಹೊಂದಿದೆ ಎಂದು ಅವರು ಹೇಳಿದರು. "ನಮೋ ಭಾರತ್ ರೈಲು ನವ ಭಾರತದ ಹೊಸ ಪ್ರಯಾಣ ಮತ್ತು ಅದರ ಹೊಸ ಸಂಕಲ್ಪಗಳನ್ನು ವ್ಯಾಖ್ಯಾನಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ರಾಜ್ಯಗಳ ಅಭಿವೃದ್ಧಿಯಲ್ಲಿ ಭಾರತದ ಅಭಿವೃದ್ಧಿ ಅಡಗಿದೆ ಎಂಬ ತಮ್ಮ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಮೆಟ್ರೋದ ಎರಡು ಮಾರ್ಗಗಳು ಬೆಂಗಳೂರಿನ ಐಟಿ ಹಬ್ ನಲ್ಲಿ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ಹೇಳಿದರು. ಪ್ರತಿನಿತ್ಯ ಸುಮಾರು 8 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ ಎಂದು ಅವರು ಹೇಳಿದರು.
"21 ನೇ ಶತಮಾನದ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಪ್ರಗತಿ ಮತ್ತು ಅಭಿವೃದ್ಧಿಯ ಕಥೆಯನ್ನು ಬರೆಯುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಚಂದ್ರಯಾನ- 3 ರ ಇತ್ತೀಚಿನ ಯಶಸ್ಸನ್ನು ಪ್ರಸ್ತಾಪಿಸಿದರು ಮತ್ತು ಭಾರತವನ್ನು ಇಡೀ ಪ್ರಪಂಚದ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದ ಜಿ20 ರ ಯಶಸ್ವಿ ಸಂಘಟನೆಯ ಮೇಲೆ ಸಹ ಬೆಳಕು ಚೆಲ್ಲಿದರು. ಏಷ್ಯನ್ ಕ್ರೀಡಾಕೂಟದಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಬಾಚಿಕೊಂಡ ದಾಖಲೆಯ ಸಾಧನೆ, ಭಾರತದಲ್ಲಿ 5ಜಿ ಆರಂಭ ಹಾಗೂ ವಿಸ್ತರಣೆ ಮತ್ತು ದಾಖಲೆ ಸಂಖ್ಯೆಯ ಡಿಜಿಟಲ್ ವಹಿವಾಟುಗಳನ್ನು ಅವರು ಪ್ರಸ್ತಾಪಿಸಿದರು. ಶ್ರೀ ಮೋದಿ ಅವರು ಮೇಡ್ ಇನ್ ಇಂಡಿಯಾ ಲಸಿಕೆಗಳ ಬಗ್ಗೆ ಪ್ರಸ್ತಾಪಿಸಿದರು, ಇದು ವಿಶ್ವದ ಕೋಟ್ಯಂತರ ಜನರಿಗೆ ಜೀವರಕ್ಷಕವಾಗಿದೆ ಎಂದರು. ಉತ್ಪಾದನಾ ವಲಯದಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ ಮೊಬೈಲ್ ಫೋನ್, ಟಿವಿ, ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬಹುರಾಷ್ಟ್ರೀಯ ಕಂಪನಿಗಳ ಉತ್ಸುಕತೆಯ ಬಗ್ಗೆ ಮಾತನಾಡಿದರು. ಫೈಟರ್ ಜೆಟ್ ಗಳು ಮತ್ತು ವಿಮಾನವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ್ ಸೇರಿದಂತೆ ರಕ್ಷಣಾ ಉತ್ಪಾದನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ನಮೋ ಭಾರತ್ ರೈಲು ಕೂಡ ಮೇಡ್ ಇನ್ ಇಂಡಿಯಾ" ಎಂದು ಅವರು ಹೇಳಿದರು. ಪ್ಲಾಟ್ ಫಾರ್ಮ್ ಗಳಲ್ಲಿ ಅಳವಡಿಸಲಾದ ಪರದೆಯ ಬಾಗಿಲುಗಳು ಸಹ ಭಾರತದಲ್ಲಿಯೇ ತಯಾರಿಸಲ್ಪಟ್ಟಿವೆ ಎಂದು ಅವರು ಒತ್ತಿ ಹೇಳಿದರು. ನಮೋ ಭಾರತ್ ರೈಲಿನಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನಗಳಿಗಿಂತ ಕಡಿಮೆ ಶಬ್ದವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ನಮೋ ಭಾರತ್ ಭವಿಷ್ಯದ ಭಾರತದ ಒಂದು ನೋಟವಾಗಿದೆ ಮತ್ತು ಬೆಳೆಯುತ್ತಿರುವ ಆರ್ಥಿಕ ಶಕ್ತಿಯೊಂದಿಗೆ ರಾಷ್ಟ್ರದ ಪರಿವರ್ತನೆಗೆ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮೊದಲ ಹಂತದಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಹಲವು ಪ್ರದೇಶಗಳು ನಮೋ ಭಾರತ್ ರೈಲಿನೊಂದಿಗೆ ಸಂಪರ್ಕ ಹೊಂದಲಿದ್ದು, ಈ 80 ಕಿಮೀ ದೆಹಲಿ-ಮೀರತ್ ವಿಸ್ತರಣೆಯು ಕೇವಲ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ, ಸಂಪರ್ಕವನ್ನು ಸುಧಾರಿಸಲು ಮತ್ತು ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸಲು ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಎಂದು ಶ್ರೀ ಮೋದಿ ತಿಳಿಸಿದರು.
ಪ್ರಸ್ತುತ ಶತಮಾನದ ಈ ಮೂರನೇ ದಶಕವು ಭಾರತೀಯ ರೈಲ್ವೆಯ ಪರಿವರ್ತನೆಯ ದಶಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ನನಗೆ ಸಣ್ಣ ಕನಸುಗಳನ್ನು ಕಾಣುವ ಮತ್ತು ನಿಧಾನವಾಗಿ ನಡೆಯುವ ಅಭ್ಯಾಸವಿಲ್ಲ. ಈ ದಶಕದ ಅಂತ್ಯದ ವೇಳೆಗೆ, ಜಗತ್ತಿನ ಯಾವ ರೈಲಿಗೂ ಕಡಿಮೆ ಇಲ್ಲದ ಭಾರತೀಯ ರೈಲುಗಳನ್ನು ನೀವು ಕಾಣುತ್ತೀರಿ ಎಂಬ ಭರವಸೆಯನ್ನು ಇಂದಿನ ಯುವ ಪೀಳಿಗೆಗೆ ನೀಡಲು ನಾನು ಬಯಸುತ್ತೇನೆ”ಎಂದು ಪ್ರಧಾನಿ ಮೋದಿ ಹೇಳಿದರು. ಸುರಕ್ಷತೆ, ಸ್ವಚ್ಛತೆ, ಸೌಲಭ್ಯಗಳು, ಸಮನ್ವಯತೆ, ಸೂಕ್ಷ್ಮತೆ ಮತ್ತು ಸಾಮರ್ಥ್ಯದಲ್ಲಿ ಭಾರತೀಯ ರೈಲ್ವೆ ವಿಶ್ವದಲ್ಲಿ ಹೊಸ ಎತ್ತರವನ್ನು ಸಾಧಿಸಲಿದೆ ಎಂದು ಅವರು ಹೇಳಿದರು. ಭಾರತೀಯ ರೈಲ್ವೆಯು 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸುವ ಗುರಿಯಿಂದ ಬಹಳ ದೂರವಿಲ್ಲ ಎಂದು ಅವರು ಹೇಳಿದರು. ಆಧುನಿಕ ರೈಲುಗಳಾದ ನಮೋ ಭಾರತ್ ಮತ್ತು ವಂದೇ ಭಾರತ್ ಮತ್ತು ಅಮೃತ ಭಾರತ್ ರೈಲ್ವೇ ನಿಲ್ದಾಣ ಯೋಜನೆಯಡಿ ರೈಲ್ವೆ ನಿಲ್ದಾಣದ ಮೇಲ್ದರ್ಜೆಯಂತಹ ಉಪಕ್ರಮಗಳನ್ನು ಅವರು ಪಟ್ಟಿ ಮಾಡಿದರು. "ಅಮೃತ ಭಾರತ್, ವಂದೇ ಭಾರತ್ ಮತ್ತು ನಮೋ ಭಾರತ್ ತ್ರಿಭುಜಗಳು ಈ ದಶಕದ ಅಂತ್ಯದ ವೇಳೆಗೆ ಆಧುನಿಕ ರೈಲ್ವೆಯ ಸಂಕೇತವಾಗಲಿವೆ" ಎಂದು ಅವರು ಹೇಳಿದರು.
ಬಹು-ಮಾದರಿ ಸಂಪರ್ಕ ವ್ಯವಸ್ಥೆಯ ಬಗ್ಗೆ ಒತ್ತಿಹೇಳುತ್ತಾ, ದೆಹಲಿಯ ಸರಾಯ್ ಕಾಲೇ ಖಾನ್, ಆನಂದ್ ವಿಹಾರ್, ಗಾಜಿಯಾಬಾದ್ ಮತ್ತು ಮೀರತ್ ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳನ್ನು ನಮೋ ಭಾರತ್ ವ್ಯವಸ್ಥೆಯಿಂದ ಸಂಪರ್ಕಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಎಲ್ಲಾ ನಾಗರಿಕರ ಜೀವನಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು, ಗುಣಮಟ್ಟದ ಉತ್ತಮ ಗಾಳಿಯನ್ನು ಒದಗಿಸಲು, ಕಸದ ಗುಡ್ಡೆಗಳನ್ನು ತೊಡೆದುಹಾಕಲು, ಉತ್ತಮ ಶೈಕ್ಷಣಿಕ ಸೌಲಭ್ಯಗಳು ಮತ್ತು ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸುಧಾರಿಸಲು ಸರ್ಕಾರದ ಒತ್ತು ನೀಡಿದೆ ಎಂದು ಮೋದಿಯವರು ಒತ್ತಿ ಹೇಳಿದರು. ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಎಂದಿಗಿಂತಲೂ ಹೆಚ್ಚು ವೆಚ್ಚ ಮಾಡುತ್ತಿದೆ ಎಂದು ತಿಳಿಸಿದ ಪ್ರಧಾನಿ, ಭೂಮಿ, ವಾಯು ಮತ್ತು ಸಮುದ್ರದಲ್ಲಿ ಮಾಡಲಾಗುತ್ತಿರುವ ಸರ್ವತೋಮುಖ ಅಭಿವೃದ್ಧಿಯ ಪ್ರಯತ್ನಗಳನ್ನು ಪ್ರಸ್ತಾಪಿಸಿದರು. ಜಲ ಸಾರಿಗೆ ವ್ಯವಸ್ಥೆಗಳ ಉದಾಹರಣೆಗಳನ್ನು ನೀಡಿದ ಪ್ರಧಾನಿ, ವಾರಾಣಸಿಯಿಂದ ಹಲ್ದಿಯಾ ವರೆಗೆ ಗಂಗಾನದಿಯಲ್ಲಿ ಅತಿದೊಡ್ಡ ಜಲಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದ್ದು, ಭಾರತದ ನದಿಗಳಲ್ಲಿ ನೂರಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. ಒಳನಾಡು ಜಲಮಾರ್ಗದ ಸಹಾಯದಿಂದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಪ್ರದೇಶದ ಹೊರಗೆ ಕಳುಹಿಸಬಹುದು ಎಂದು ಅವರು ಹೇಳಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಗಂಗಾವಿಲಾಸ್ ನದಿ ವಿಹಾರ ನೌಕೆಯು 3200 ಕಿಲೋಮೀಟರ್ ಗೂ ಹೆಚ್ಚು ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ಮತ್ತು ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆ ಎಂಬ ವಿಶ್ವದಾಖಲೆಯನ್ನು ನಿರ್ಮಿಸಿದ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ದೇಶದ ಬಂದರು ಮೂಲಸೌಕರ್ಯಗಳ ವಿಸ್ತರಣೆ ಮತ್ತು ಆಧುನೀಕರಣದ ಬಗ್ಗೆ ಮಾತನಾಡಿದ ಅವರು, ಅದರ ಲಾಭವನ್ನು ಕರ್ನಾಟಕದಂತಹ ರಾಜ್ಯಗಳು ಸಹ ಪಡೆದುಕೊಳ್ಳುತ್ತವೆ ಎಂದರು. ಭೂ ಸಾರಿಗೆ ಜಾಲದ ಬಗ್ಗೆ ಉಲ್ಲೇಖಿಸಿದ ಅವರು, ಆಧುನಿಕ ಎಕ್ಸ್‌ಪ್ರೆಸ್‌ವೇಗಳ ಜಾಲವನ್ನು ವಿಸ್ತರಿಸಲು 4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಲಾಗುತ್ತಿದ್ದು, ನಮೋ ಭಾರತ್ ಅಥವಾ ಮೆಟ್ರೋ ರೈಲುಗಳಂತಹ ಆಧುನಿಕ ರೈಲುಗಳಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದರು. ದೆಹಲಿಯಲ್ಲಿ ಮೆಟ್ರೋ ಜಾಲದ ವಿಸ್ತರಣೆಯ ಬಗ್ಗೆ ಗಮನ ಸೆಳೆದ ಪ್ರಧಾನಿ, ಉತ್ತರ ಪ್ರದೇಶದ ನೋಯ್ಡಾ, ಗಾಜಿಯಾಬಾದ್, ಲಕ್ನೋ, ಮೀರತ್, ಆಗ್ರಾ ಮತ್ತು ಕಾನ್ಪುರದಂತಹ ನಗರಗಳು ಇದೇ ಮಾರ್ಗವನ್ನು ಅನುಸರಿಸುತ್ತಿವೆ ಎಂದು ಹೇಳಿದರು. ಕರ್ನಾಟಕದಲ್ಲಿಯೂ ಮೆಟ್ರೋ ವಿಸ್ತರಣೆಯಾಗುತ್ತಿದೆ ಎಂದರು. ಹೆಚ್ಚಿದ ವಾಯು ಸಂಪರ್ಕದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಕಳೆದ 9 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಭಾರತದ ವಿಮಾನಯಾನ ಸಂಸ್ಥೆಗಳು 1000 ಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಖರೀದಿ ಆದೇಶ ನೀಡಿವೆ ಎಂದು ಮಾಹಿತಿ ನೀಡಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕ್ಷಿಪ್ರ ಪ್ರಗತಿಯ ಬಗ್ಗೆ ಮಾತನಾಡಿದ ಪ್ರಧಾನಿ, ಚಂದ್ರನ ಮೇಲೆ ಕಾಲಿಟ್ಟ ಚಂದ್ರಯಾನವನ್ನು ಪ್ರಸ್ತಾಪಿಸಿದರು. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಗಗನಯಾನ್ ಮತ್ತು ಭಾರತದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಸರ್ಕಾರವು 2040 ರವರೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಶ್ರೀ ಮೋದಿ ತಿಳಿಸಿದರು. "ನಮ್ಮ ಬಾಹ್ಯಾಕಾಶ ನೌಕೆಯಲ್ಲಿ ನಾವು ಮೊದಲ ಭಾರತೀಯನನ್ನು ಚಂದ್ರನ ಮೇಲೆ ಇಳಿಸುವ ದಿನ ದೂರವಿಲ್ಲ" ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಅಭಿವೃದ್ಧಿಗಳನ್ನು ದೇಶದ ಯುವಕರಿಗಾಗಿ ಮಾಡಲಾಗಿದೆ ಮತ್ತು ಇವು ಅವರಿಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುತ್ತವೆ ಎಂದು ಅವರು ಪುನರುಚ್ಚರಿಸಿದರು.
ನಗರ ಮಾಲಿನ್ಯವನ್ನು ಕಡಿಮೆ ಮಾಡುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಇದು ದೇಶದಲ್ಲಿ ಎಲೆಕ್ಟ್ರಿಕ್ ಬಸ್ ಗಳ ಬೆಳೆಯುತ್ತಿರುವ ಜಾಲಕ್ಕೆ ಕಾರಣವಾಗುತ್ತದೆ. ರಾಜ್ಯಗಳಿಗೆ 10,000 ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ದೆಹಲಿಯಲ್ಲಿ 600 ಕೋಟಿ ರೂಪಾಯಿ ವೆಚ್ಚದಲ್ಲಿ 1300 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದರು. ಈ ಪೈಕಿ 850ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಈಗಾಗಲೇ ದೆಹಲಿಯಲ್ಲಿ ಸಂಚಾರ ಆರಂಭಿಸಿವೆ. ಅದೇ ರೀತಿ ಬೆಂಗಳೂರಿನಲ್ಲಿ ಕೂಡ 1200ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸಲು ಭಾರತ ಸರ್ಕಾರ 500 ಕೋಟಿ ರೂ.ಗಳ ನೆರವು ನೀಡುತ್ತಿದೆ ಎಂದರು. "ಕೇಂದ್ರ ಸರ್ಕಾರವು ಪ್ರತಿ ನಗರದಲ್ಲಿ ಅದು ದೆಹಲಿ, ಉತ್ತರ ಪ್ರದೇಶ ಅಥವಾ ಕರ್ನಾಟಕ ಯಾವುದೇ ಆಗಿರಲಿ, ಆಧುನಿಕ ಮತ್ತು ಹಸಿರು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದರು.
ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ಮೂಲಸೌಕರ್ಯಗಳಲ್ಲಿ ನಾಗರಿಕ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಮೆಟ್ರೋ ಅಥವಾ ನಮೋ ಭಾರತ್ ನಂತಹ ರೈಲುಗಳು ಪ್ರಯಾಣಿಕರ ಜೀವನವನ್ನು ಸುಲಭಗೊಳಿಸುತ್ತವೆ ಮತ್ತು ಗುಣಮಟ್ಟದ ಮೂಲಸೌಕರ್ಯವು ದೇಶದ ಯುವಕರು, ಉದ್ಯಮಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಹೇಗೆ ಹೊಸ ಅವಕಾಶಗಳನ್ನು ತರುತ್ತದೆ ಎಂಬುದನ್ನು ಅವರು ಎತ್ತಿ ತೋರಿಸಿದರು. “ಆಸ್ಪತ್ರೆಗಳಂತಹ ಸಾಮಾಜಿಕ ಮೂಲಸೌಕರ್ಯವು ರೋಗಿಗಳು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಡಿಜಿಟಲ್ ಮೂಲಸೌಕರ್ಯವು ಸೋರಿಕೆಯನ್ನು ತಡೆಗಟ್ಟುತ್ತದೆ ಮತ್ತು ಹಣದ ಸುಗಮ ವಹಿವಾಟನ್ನು ಖಚಿತಪಡಿಸುತ್ತದೆ”ಎಂದು ಅವರು ಹೇಳಿದರು.
ಹಬ್ಬದ ಋತುವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ರೈತರು, ನೌಕರರು ಮತ್ತು ಪಿಂಚಣಿದಾರರ ಅನುಕೂಲಕ್ಕಾಗಿ ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳನ್ನು ಉಲ್ಲೇಖಿಸಿದರು. ಹಿಂಗಾರು ಬೆಳೆಗಳ ಎಂ ಎಸ್ ಪಿ ಯಲ್ಲಿ ಸರ್ಕಾರ ಭಾರಿ ಹೆಚ್ಚಳ ಮಾಡಿದ್ದು, ಉದ್ದು ಕ್ವಿಂಟಲ್‌ಗೆ 425 ರೂ., ಸಾಸಿವೆಗೆ 200 ರೂ., ಗೋಧಿಗೆ 150 ರೂ. ಹೆಚ್ಚಳ ಮಾಡಲಾಗಿದೆ. 2014 ರಲ್ಲಿ ಕ್ವಿಂಟಲ್‌ಗೆ 1400 ರೂ ಇದ್ದ ಗೋಧಿಯ ಎಂ ಎಸ್ ಪಿ ಈಗ 2000 ರೂ ದಾಟಿದೆ, ಕಳೆದ 9 ವರ್ಷಗಳಲ್ಲಿ ಉದ್ದಿನ ಎಂ ಎಸ್ ಪಿ ಎರಡು ಪಟ್ಟು ಹೆಚ್ಚಾಗಿದೆ ಮತ್ತು ಈ ಅವಧಿಯಲ್ಲಿ ಸಾಸಿವೆ ಎಂ ಎಸ್ ಪಿ ಕ್ವಿಂಟಲ್‌ಗೆ 2600 ರೂ.ಗಳಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. "ಇದು ರೈತರಿಗೆ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು.
ಕೈಗೆಟಕುವ ದರದಲ್ಲಿ ಯೂರಿಯಾ ಲಭ್ಯತೆಯನ್ನು ಖಾತ್ರಿಪಡಿಸುವ ಕ್ರಮಗಳ ಬಗ್ಗೆ ಪ್ರಧಾನಿ ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3000 ರೂಪಾಯಿ ಬೆಲೆ ಬಾಳುವ ಯೂರಿಯಾ ಚೀಲಗಳು ಭಾರತದ ರೈತರಿಗೆ 300 ರೂಪಾಯಿಗಿಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ 2.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ ಎಂದು ಅವರು ಹೇಳಿದರು.
ಕಟಾವಿನ ನಂತರ ಉಳಿದಿರುವ ತ್ಯಾಜ್ಯವನ್ನು, ಅದು ಭತ್ತದ ಒಣಹುಲ್ಲು ಅಥವಾ ಕೂಳೆಯ ಬಳಕೆಗೆ ಸರ್ಕಾರ ಒತ್ತು ನೀಡಿರುವುದನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ದೇಶಾದ್ಯಂತ ಜೈವಿಕ ಇಂಧನ ಮತ್ತು ಎಥೆನಾಲ್ ಘಟಕಗಳನ್ನು ಸ್ಥಾಪಿಸುವ ಮೂಲಕ 9 ವರ್ಷಗಳ ಹಿಂದಿನ ಎಥೆನಾಲ್ ಉತ್ಪಾದನೆಯನ್ನು ಈಗ 10 ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಇದುವರೆಗೆ ಎಥೆನಾಲ್ ಉತ್ಪಾದನೆಯಿಂದ ರೈತರಿಗೆ ಅಂದಾಜು 65 ಸಾವಿರ ಕೋಟಿ ರೂಪಾಯಿ ಬಂದಿದೆ ಎಂದು ಪ್ರಧಾನಿ ಹೇಳಿದರು. ಕಳೆದ ಹತ್ತು ತಿಂಗಳಲ್ಲೇ ದೇಶದ ರೈತರಿಗೆ ಒಟ್ಟು 18 ಸಾವಿರ ಕೋಟಿಗೂ ಹೆಚ್ಚು ಹಣ ಪಾವತಿ ಮಾಡಲಾಗಿದೆ ಎಂದು ಅವರು ಹೇಳಿದರು. ಮೀರತ್-ಗಾಜಿಯಾಬಾದ್ ಪ್ರದೇಶದ ರೈತರ ಬಗ್ಗೆ ಮಾತನಾಡಿದ ಅವರು, 2023 ರ ಕೇವಲ 10 ತಿಂಗಳಲ್ಲಿ ಎಥೆನಾಲ್ ಗಾಗಿ 300 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಪಾವತಿಸಲಾಗಿದೆ ಎಂದು ತಿಳಿಸಿದರು.
ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ದರದಲ್ಲಿ 500 ರೂಪಾಯಿ ಇಳಿಕೆ, 80 ಕೋಟಿಗೂ ಹೆಚ್ಚು ನಾಗರಿಕರಿಗೆ ಉಚಿತ ಪಡಿತರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 4 ರಷ್ಟು ತುಟ್ಟಿಭತ್ಯೆ ಮತ್ತು ಬಿ ಮತ್ತು ಸಿ ನಾನ್ ಗೆಜೆಟೆಡ್ ರೈಲ್ವೆ ನೌಕರರಿಗೆ ದೀಪಾವಳಿ ಬೋನಸ್ ನೀಡುವ ಹಬ್ಬದ ಉಡುಗೊರೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. "ಇದು ಇಡೀ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ಇದು ಮಾರುಕಟ್ಟೆಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ" ಎಂದು ಅವರು ಹೇಳಿದರು.
ಇಂತಹ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಂಡಾಗ ಪ್ರತಿ ಕುಟುಂಬದಲ್ಲಿ ಹಬ್ಬದ ಸಂತೋಷ ಹೆಚ್ಚಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ದೇಶದ ಪ್ರತಿಯೊಂದು ಕುಟುಂಬದ ಸಂತೋಷವು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ ಎಂದರು. “ನೀವು ನನ್ನ ಕುಟುಂಬ, ಆದ್ದರಿಂದ ನೀವು ನನ್ನ ಆದ್ಯತೆ. ಈ ಕೆಲಸವನ್ನು ನಿಮಗಾಗಿ ಮಾಡಲಾಗುತ್ತಿದೆ. ನೀವು ಸಂತೋಷವಾಗಿದ್ದರೆ, ನಾನು ಸಂತೋಷವಾಗಿರುತ್ತೇನೆ. ನೀವು ಸಮರ್ಥರಾಗಿದ್ದರೆ ದೇಶ ಸಮರ್ಥವಾಗುತ್ತದೆ”ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿ ಎಸ್ ಕಾರಿಡಾರ್
ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿ ಎಸ್ ಕಾರಿಡಾರ್ ನ 17 ಕಿಮೀ ಆದ್ಯತಾ ವಿಭಾಗವು ಸಾಹಿಬಾಬಾದ್ ನಿಂದ 'ದುಹೈ ಡಿಪೋ' ವರೆಗೆ ಘಾಜಿಯಾಬಾದ್, ಗುಲ್ಧಾರ್ ಮತ್ತು ದುಹಾಯ್ ನಲ್ಲಿ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ಗೆ 8 ಮಾರ್ಚ್ 2019 ರಂದು ಪ್ರಧಾನ ಮಂತ್ರಿಯವರು ಅಡಿಪಾಯ ಹಾಕಿದ್ದರು.
ಹೊಸ ವಿಶ್ವ ದರ್ಜೆಯ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣದ ಮೂಲಕ ದೇಶದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಪರಿವರ್ತಿಸುವ ಪ್ರಧಾನ ಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ ಆರ್ ಟಿ ಎಸ್) ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆರ್ ಆರ್ ಟಿ ಎಸ್ ಹೊಸ ರೈಲು-ಆಧಾರಿತ, ಸೆಮಿ ಹೈ ಸ್ಪೀಡ್, ಹೆಚ್ಚು ಆವರ್ತನದ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯಾಗಿದೆ. ಗಂಟೆಗೆ 180 ಕಿಮೀ ವೇಗದ ವಿನ್ಯಾಸದೊಂದಿಗೆ, ಆರ್ ಆರ್ ಟಿ ಎಸ್ ಒಂದು ಪರಿವರ್ತನಾಶೀಲ, ಪ್ರಾದೇಶಿಕ ಅಭಿವೃದ್ಧಿ ಉಪಕ್ರಮವಾಗಿದೆ, ಇದನ್ನು ಪ್ರತಿ 15 ನಿಮಿಷಗಳಿಗೊಮ್ಮೆ ಇಂಟರ್ ಸಿಟಿ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಇದು ಅವಶ್ಯಕತೆಗೆ ಅನುಗುಣವಾಗಿ ಪ್ರತಿ 5 ನಿಮಿಷಗಳಿಗೊಮ್ಮೆಯೂ ರೈಲು ಓಡಿಸಬಹುದು.
ಎನ್ ಸಿ ಆರ್ ನಲ್ಲಿ ಒಟ್ಟು ಎಂಟು ಆರ್ ಆರ್ ಟಿ ಎಸ್ ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ, ಅವುಗಳಲ್ಲಿ ಮೂರು ಕಾರಿಡಾರ್‌ಗಳನ್ನು ದೆಹಲಿ - ಘಾಜಿಯಾಬಾದ್ - ಮೀರತ್ ಕಾರಿಡಾರ್ ಸೇರಿದಂತೆ ಹಂತ-1 ರಲ್ಲಿ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗಿದೆ; ದೆಹಲಿ - ಗುರುಗ್ರಾಮ್ – ಎಸ್ ಎನ್ ಬಿ - ಅಲ್ವಾರ್ ಕಾರಿಡಾರ್; ಮತ್ತು ದೆಹಲಿ - ಪಾಣಿಪತ್ ಕಾರಿಡಾರ್. ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿ ಎಸ್ ಅನ್ನು 30,000 ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ದೆಹಲಿಯಿಂದ ಮೀರತ್ ಗೆ ಒಂದು ಗಂಟೆಯ ಪ್ರಯಾಣದ ಸಮಯದಲ್ಲಿ ಗಾಜಿಯಾಬಾದ್, ಮುರಾದ್ ನಗರ ಮತ್ತು ಮೋದಿನಗರ ಮೂಲಕ ಸಂಪರ್ಕ ಕಲ್ಪಿಸುತ್ತದೆ.
ಆರ್ ಆರ್ ಟಿ ಎಸ್ ಅನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಅತ್ಯಾಧುನಿಕ ಪ್ರಾದೇಶಿಕ ಸಾರಿಗೆ ಪರಿಹಾರವಾಗಿದೆ ಮತ್ತು ಇದನ್ನು ವಿಶ್ವದ ಅತ್ಯುತ್ತಮ ಸಾರಿಗೆ ವ್ಯವಸ್ಥೆಗೆ ಹೋಲಿಸಬಹುದಾಗಿದೆ. ಇದು ದೇಶದಲ್ಲಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆಧುನಿಕ ಇಂಟರ್ ಸಿಟಿ ಪ್ರಯಾಣಕ್ಕೆ ಪರಿಹಾರಗಳನ್ನು ಒದಗಿಸುತ್ತದೆ. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಗೆ ಅನುಗುಣವಾಗಿ, ಆರ್ ಆರ್ ಟಿ ಎಸ್ ನೆಟ್‌ವರ್ಕ್ ರೈಲ್ವೇ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಬಸ್ ಸೇವೆಗಳು ಇತ್ಯಾದಿಗಳೊಂದಿಗೆ ವ್ಯಾಪಕವಾದ ಬಹು-ಮಾದರಿ ಸಂಪರ್ಕವನ್ನು ಹೊಂದಿರುತ್ತದೆ. ಇಂತಹ ಪರಿವರ್ತಕ ಪ್ರಾದೇಶಿಕ ಸಾರಿಗೆ ಪರಿಹಾರಗಳು ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ; ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಅವಕಾಶಗಳಿಗೆ ಸುಧಾರಿತ ಪ್ರವೇಶವನ್ನು ಒದಗಿಸುತ್ತವೆ; ಮತ್ತು ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಬೆಂಗಳೂರು ಮೆಟ್ರೋ
ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮತ್ತು ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಎರಡು ಮೆಟ್ರೋ ಮಾರ್ಗಗಳನ್ನು ಪ್ರಧಾನಮಂತ್ರಿ ಅವರು ಔಪಚಾರಿಕವಾಗಿ ರಾಷ್ಟ್ರಕ್ಕೆ ಸಮರ್ಪಿಸಿದರು. ಔಪಚಾರಿಕ ಉದ್ಘಾಟನೆಗೆ ಕಾಯದೆ, ಈ ಕಾರಿಡಾರ್ ನಲ್ಲಿ ಸಾರ್ವಜನಿಕರು ಪ್ರಯಾಣಿಸಲು ಅನುಕೂಲವಾಗುವಂತೆ ಈ ಎರಡು ಮೆಟ್ರೋ ಮಾರ್ಗಗಳನ್ನು 9ನೇ ಅಕ್ಟೋಬರ್ 2023 ರಿಂದ ಸಾರ್ವಜನಿಕ ಸೇವೆಗಾಗಿ ಮುಕ್ತಗೊಳಿಸಲಾಗಿದೆ.
Today India's first rapid rail service, Namo Bharat Train, has begun. pic.twitter.com/L0FoYi8vKU
— PMO India (@PMOIndia) October 20, 2023
नमो भारत ट्रेन, नए भारत के नए सफर और नए संकल्पों को परिभाषित कर रही है। pic.twitter.com/E7f2r7hy0J
— PMO India (@PMOIndia) October 20, 2023
I congratulate all the people of Bengaluru for the new metro facility: PM @narendramodi pic.twitter.com/itGdGc1tZE
— PMO India (@PMOIndia) October 20, 2023
Namo Bharat Trains are a glimpse of India's promising future. pic.twitter.com/fpD7dVrcqY
— PMO India (@PMOIndia) October 20, 2023
By the end of this decade, the combination of Amrit Bharat, Vande Bharat and Namo Bharat will represent transformation of Indian Railways into a modernised system. pic.twitter.com/SeSwR8Qwef
— PMO India (@PMOIndia) October 20, 2023
Civic amenities are receiving utmost attention in infrastructure development today. pic.twitter.com/G6xAMlIuvM
— PMO India (@PMOIndia) October 20, 2023