ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಉದ್ಯೋಗ ಮೇಳ ಬಿಂಬಿಸುತ್ತದೆ. ಇದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರನ್ನು ಸಬಲಗೊಳಿಸುತ್ತದೆ.
ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಧನ್ತೇರಸ್ ಪವಿತ್ರ ಸಂದರ್ಭವನ್ನು ಪ್ರಸ್ತಾಪಿಸಿದರು ಮತ್ತು ತಮ್ಮ ಶುಭಾಶಯಗಳನ್ನು ತಿಳಿಸಿದರು. ಈ ವರ್ಷದ ದೀಪಾವಳಿಯನ್ನು ವಿಶೇಷ ಎಂದು ಬಣ್ಣಿಸಿದ ಪ್ರಧಾನಿ, 500 ವರ್ಷಗಳ ನಂತರ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಶ್ರೀರಾಮನನ್ನು ಪ್ರತಿಷ್ಠಾಪಿಸಿದ ನಂತರ ಮೊದಲ ದೀಪಾವಳಿ ಇದಾಗಿದೆ ಎಂದು ಹೇಳಿದರು. ಈ ದೀಪಾವಳಿಗಾಗಿ ಹಲವು ತಲೆಮಾರುಗಳು ಕಾಯುತ್ತಿದ್ದರೆ, ಅನೇಕ ಜನರು ಅದಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ ಅಥವಾ ಪ್ರತಿಕೂಲತೆಯನ್ನು ಎದುರಿಸಿದ್ದಾರೆ ಎಂದು ಅವರು ಹೇಳಿದರು. ಅಂತಹ ಆಚರಣೆಗಳಿಗೆ ಸಾಕ್ಷಿಯಾಗಲು ಮತ್ತು ಅವುಗಳ ಭಾಗವಾಗಲು ಇಂದಿನ ಪೀಳಿಗೆಯು ಅತ್ಯಂತ ಅದೃಷ್ಟಶಾಲಿಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಹಬ್ಬದ ವಾತಾವರಣದಲ್ಲಿ 51,000 ಯುವಜನರಿಗೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹೊಸದಾಗಿ ಸೇರ್ಪಡೆಗೊಂಡವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಲಕ್ಷಾಂತರ ಯುವಕರಿಗೆ ಖಾಯಂ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದು ನಿರಂತರವಾಗಿ ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ ಎಂದು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಬಿಜೆಪಿ ಮತ್ತು ಎನ್ ಡಿ ಎ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿಯೂ ಲಕ್ಷಾಂತರ ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಹರಿಯಾಣದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದಿಂದ 26,000 ಯುವಕರು ಉದ್ಯೋಗ ಪಡೆದಿರುವುದರಿಂದ ಹಬ್ಬದ ವಾತಾವರಣವಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಹರಿಯಾಣದಲ್ಲಿನ ಯಾವುದೇ ವೆಚ್ಚ ಅಥವಾ ಶಿಫಾರಸುಗಳಿಲ್ಲದೆ ಉದ್ಯೋಗಗಳನ್ನು ನೀಡುವ ವಿಶೇಷ ಗುರುತನ್ನು ತಮ್ಮ ಸರ್ಕಾರವು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ಇಂದಿನ ಉದ್ಯೋಗ ಮೇಳದಲ್ಲಿ 51,000 ಉದ್ಯೋಗಗಳನ್ನು ಹೊರತುಪಡಿಸಿ, ಇಂದು ತಮ್ಮ ನೇಮಕಾತಿ ಪತ್ರಗಳನ್ನು ಪಡೆಯುತ್ತಿರುವ ಹರಿಯಾಣದ 26,000 ಯುವಜನರಿಗೂ ಅವರು ಶುಭಾಶಯ ಕೋರಿದರು.
ದೇಶದ ಯುವಜನರು ಗರಿಷ್ಠ ಉದ್ಯೋಗ ಪಡೆಯಬೇಕು ಎಂಬ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಉದ್ಯೋಗ ಸೃಷ್ಟಿಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ತಿಳಿಸಿದ ಪ್ರಧಾನಿ, ಎಕ್ಸ್‌ಪ್ರೆಸ್ ವೇಗಳು, ಹೆದ್ದಾರಿಗಳು, ರಸ್ತೆಗಳು, ರೈಲು, ಬಂದರುಗಳು, ವಿಮಾನ ನಿಲ್ದಾಣಗಳ ಅಭಿವೃದ್ಧಿ, ಫೈಬರ್ ಕೇಬಲ್ ಗಳ ಅಳವಡಿಕೆ, ಮೊಬೈಲ್ ಟವರ್ ಗಳ ಸ್ಥಾಪನೆ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಕೈಗಾರಿಕೆಗಳ ಹೊಸ ವಿಸ್ತರಣೆಗಳನ್ನು ಅವರು ಎತ್ತಿ ತೋರಿಸಿದರು. ನೀರು ಮತ್ತು ಅನಿಲ ಪೈಪ್‌ಲೈನ್ ಗಳನ್ನು ಹಾಕುವುದು, ಹೊಸ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಮೂಲಸೌಕರ್ಯಕ್ಕೆ ಖರ್ಚು ಮಾಡುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ನಾಗರಿಕರಿಗೆ ಪ್ರಯೋಜನಕಾರಿಯಾಗುವುದು ಮಾತ್ರವಲ್ಲ, ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ ಎಂದು ಹೇಳಿದರು.
ನಿನ್ನೆ ಗುಜರಾತಿನ ವಡೋದರಾಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ರಕ್ಷಣಾ ವಲಯಕ್ಕೆ ವಿಮಾನ ತಯಾರಿಕಾ ಘಟಕದ ಉದ್ಘಾಟನೆಯನ್ನು ಪ್ರಸ್ತಾಪಿಸಿದರು. ಇದು ಸಾವಿರಾರು ನಾಗರಿಕರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಎಂ ಎಸ್ ಎಂ ಇ ಕೈಗಾರಿಕೆಗಳು ಬಿಡಿ ಭಾಗಗಳು ಮತ್ತು ಇತರ ಸಲಕರಣೆಗಳ ತಯಾರಿಕೆಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತವೆ, ಇದರಿಂದಾಗಿ ಪೂರೈಕೆ ಸರಪಳಿಗಳ ವಿಶಾಲವಾದ ಜಾಲವನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು. ಒಂದು ವಿಮಾನವು 15,000 ರಿಂದ 25,000 ಬಿಡಿಭಾಗಗಳನ್ನು ಒಳಗೊಂಡಿದೆ ಎಂದು ಹೇಳಿದ ಶ್ರೀ ಮೋದಿ, ಒಂದು ದೊಡ್ಡ ಕಾರ್ಖಾನೆಯ ಬೇಡಿಕೆಗಳನ್ನು ಪೂರೈಸುವಲ್ಲಿ ಸಾವಿರಾರು ಸಣ್ಣ ಕಾರ್ಖಾನೆಗಳು ಸಕ್ರಿಯ ಪಾತ್ರವನ್ನು ವಹಿಸುತ್ತವೆ, ಇದರಿಂದಾಗಿ ಭಾರತದ ಎಂ ಎಸ್ ಎಂ ಇ ಗಳಿಗೆ ಲಾಭವಾಗುತ್ತದೆ ಎಂದು ಒತ್ತಿ ಹೇಳಿದರು.
ಯಾವುದೇ ಯೋಜನೆಯನ್ನು ಪ್ರಾರಂಭಿಸಿದಾಗಲೆಲ್ಲಾ ಅದರ ಗಮನವು ನಾಗರಿಕರಿಗೆ ಸಿಗುವ ಪ್ರಯೋಜನಗಳ ಮೇಲೆ ಮಾತ್ರವಲ್ಲ, ವಿಶಾಲ ವ್ಯಾಪ್ತಿಯಲ್ಲಿ ಯೋಚಿಸುವ ಮೂಲಕ, ಅದನ್ನು ಮಾಧ್ಯಮವಾಗಿ ಬಳಸಿಕೊಂಡು ಉದ್ಯೋಗ ಸೃಷ್ಟಿಯ ಸಂಪೂರ್ಣ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯನ್ನು ಉದಾಹರಣೆ ನೀಡಿದ ಅವರು, ಕಳೆದ 6 ತಿಂಗಳಲ್ಲಿ ಸುಮಾರು 2 ಕೋಟಿ ಗ್ರಾಹಕರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ, 9,000 ಕ್ಕೂ ಹೆಚ್ಚು ಮಾರಾಟಗಾರರು ಈ ಯೋಜನೆಯೊಂದಿಗೆ ಸಂಬಂಧ ಹೊಂದಿದ್ದಾರೆ, 5 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯಡಿಯಲ್ಲಿ 800 ಸೌರ ಗ್ರಾಮಗಳನ್ನು ನಿರ್ಮಿಸುವ ಯೋಜನೆ ಇದೆ. 30,000 ಜನರಿಗೆ ಸೋಲಾರ್ ಅಳವಡಿಸಲು ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು. ಹೀಗಾಗಿ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯು ದೇಶಾದ್ಯಂತ ತಯಾರಕರು, ಮಾರಾಟಗಾರರು, ಜೋಡಣೆ ಮಾಡುವವರು ಮತ್ತು ದುರಸ್ತಿ ಮಾಡುವವರಿಗೆ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.
ಕಳೆದ 10 ವರ್ಷಗಳಲ್ಲಿ ಸರ್ಕಾರದ ನೀತಿಗಳಿಂದಾಗಿ ಭಾರತದ ಖಾದಿ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಮತ್ತು ಇದು ಹಳ್ಳಿಗಳ ಜನರ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ ಹೇಳಿದರು. ಇಂದು ಖಾದಿ ಗ್ರಾಮೋದ್ಯೋಗದ ವಹಿವಾಟು ಒಂದೂವರೆ ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದರು. 10 ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ, ಖಾದಿ ಮಾರಾಟವು 400 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಕಲಾವಿದರು, ನೇಕಾರರು ಮತ್ತು ಉದ್ಯಮಿಗಳಿಗೆ ಲಾಭದಾಯಕವಾಗಿದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ಹೇಳಿದರು. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಒದಗಿಸುವ ಲಕ್ಷಾಪತಿ ದೀದಿ ಯೋಜನೆಯನ್ನು ಅವರು ಪ್ರಸ್ತಾಪಿಸಿದರು. ಕಳೆದ ದಶಕದಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವ-ಸಹಾಯ ಗುಂಪುಗಳಿಗೆ ಸೇರಿದ್ದಾರೆ. 10 ಕೋಟಿ ಮಹಿಳೆಯರು ಈಗ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು, 3 ಕೋಟಿ ಲಕ್ಷಾಪತಿ ದೀದಿಗಳನ್ನು ರಚಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಇದುವರೆಗೆ 1.25 ಕೋಟಿಗೂ ಹೆಚ್ಚು ಮಹಿಳೆಯರು ಲಕ್ಷಾಪತಿ ದೀದಿಗಳಾಗಿದ್ದು, ಅವರ ವಾರ್ಷಿಕ ಆದಾಯ 1 ಲಕ್ಷ ರೂಪಾಯಿ ದಾಟಿದೆ ಎಂದು ಹೇಳಿದರು.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶದ ಪ್ರಗತಿಯನ್ನು ಪ್ರತಿಬಿಂಬಿಸುತ್ತಾ, ಭಾರತವು ಈ ವೇಗವನ್ನು ಈ ಮೊದಲು ಏಕೆ ಸಾಧಿಸಲಿಲ್ಲ ಎಂದು ಆಗಾಗ್ಗೆ ಕೇಳುವ ಭಾರತದ ಯುವಕರ ಕುತೂಹಲವನ್ನು ಪ್ರಸ್ತಾಪಿಸಿದರು. ಇದಕ್ಕೆ ಹಿಂದಿನ ಸರ್ಕಾರಗಳಲ್ಲಿನ ಸ್ಪಷ್ಟ ನೀತಿಗಳು ಮತ್ತು ಉದ್ದೇಶಗಳ ಕೊರತೆಯಲ್ಲಿ ಉತ್ತರವಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಭಾರತವು ಅನೇಕ ಕ್ಷೇತ್ರಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನದಲ್ಲಿ ಹಿಂದುಳಿಯಿತು ಎಂದು ತಿಳಿಸಿದರು. ಭಾರತವು ಪ್ರಪಂಚದಾದ್ಯಂತದ ಹೊಸ ತಂತ್ರಜ್ಞಾನಗಳಿಗಾಗಿ ಕಾಯುತ್ತಿತ್ತು ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಹಳೆಯದು ಎಂದು ಪರಿಗಣಿಸಲ್ಪಟ್ಟದ್ದು ಅಂತಿಮವಾಗಿ ದೇಶವನ್ನು ತಲುಪುತ್ತಿತ್ತು ಎಂದು ಅವರು ನೆನಪಿಸಿದರು. ಭಾರತದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂಬ ದೀರ್ಘಕಾಲದ ನಂಬಿಕೆಯು ಭಾರತವನ್ನು ಅಭಿವೃದ್ಧಿಯ ವಿಷಯದಲ್ಲಿ ಹಿಂದಕ್ಕೆ ತಳ್ಳಿದ್ದು ಮಾತ್ರವಲ್ಲದೆ ದೇಶವನ್ನು ಪ್ರಮುಖ ಉದ್ಯೋಗಾವಕಾಶಗಳಿಂದ ವಂಚಿತಗೊಳಿಸಿತು ಎಂದು ಅವರು ಹೇಳಿದರು.
ಈ ಹಳೆಯ ಮನಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ಮೂಲಕ ಬಾಹ್ಯಾಕಾಶ, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಕ್ಷೇತ್ರಗಳಲ್ಲಿ ದೇಶವನ್ನು ಈ ಹಳೆಯ ಮನಸ್ಥಿತಿಯಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ತಾಂತ್ರಿಕ ಪ್ರಗತಿ ಮತ್ತು ಹೂಡಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೊಸ ತಂತ್ರಜ್ಞಾನ ಮತ್ತು ವಿದೇಶಿ ನೇರ ಹೂಡಿಕೆಯನ್ನು ಭಾರತಕ್ಕೆ ತರಲು ಪಿ ಎಲ್ ಐ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಇದು ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸಿದೆ ಎಂದು ಹೇಳಿದರು. ಈಗ ಪ್ರತಿಯೊಂದು ಕ್ಷೇತ್ರಕ್ಕೂ ಉತ್ತೇಜನ ನೀಡಿ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. "ಇಂದು, ಭಾರತವು ಬೃಹತ್ ಹೂಡಿಕೆ ಮತ್ತು ದಾಖಲೆಯ ಅವಕಾಶಗಳನ್ನು ಸೃಷ್ಟಿಸುತ್ತಿದೆ" ಎಂದು ಅವರು ಹೇಳಿದರು, ಕಳೆದ ಎಂಟು ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಗಳನ್ನು ಪ್ರಾರಂಭಿಸಲಾಗಿದೆ, ಇದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪೂರಕ ವ್ಯವಸ್ಥೆಯಾಗಿಸಿದೆ. ಈ ಕ್ಷೇತ್ರಗಳು ನಮ್ಮ ಯುವಕರಿಗೆ ಬೆಳೆಯಲು ಮತ್ತು ಉದ್ಯೋಗ ಪಡೆಯಲು ಅವಕಾಶಗಳನ್ನು ನೀಡುತ್ತಿವೆ ಎಂದು ಅವರು ಹೇಳಿದರು.
ಭಾರತದ ಯುವಜನತೆಯ ಸಾಮರ್ಥ್ಯವನ್ನು ಹೆಚ್ಚಿಸಲು ಇಂದು ಸರ್ಕಾರವು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಆದ್ದರಿಂದ ಸರಕಾರ ಸ್ಕಿಲ್ ಇಂಡಿಯಾದಂತಹ ಮಿಷನ್ ಗಳನ್ನು ಆರಂಭಿಸಿದ್ದು, ಹಲವು ಕೌಶಲ್ಯಾಭಿವೃದ್ಧಿ ಕೇಂದ್ರಗಳಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಭಾರತದ ಯುವಕರು ಅನುಭವ ಮತ್ತು ಅವಕಾಶಕ್ಕಾಗಿ ಅಲೆದಾಡುವ ಅಗತ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಮೋದಿ ಹೇಳಿದರು. ಪ್ರಧಾನ ಮಂತ್ರಿಗಳ ಇಂಟರ್ನ್‌ಶಿಪ್ ಯೋಜನೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಭಾರತದ ಪ್ರಮುಖ 500 ಕಂಪನಿಗಳಲ್ಲಿ ಪಾವತಿಸಿದ ಇಂಟರ್ನ್‌ಶಿಪ್ ಗಳಿಗೆ ನಿಬಂಧನೆಗಳನ್ನು ಮಾಡಲಾಗಿದೆ, ಅಲ್ಲಿ ಪ್ರತಿ ಇಂಟರ್ನ್ ಗೆ ಒಂದು ವರ್ಷದವರೆಗೆ ತಿಂಗಳಿಗೆ 5,000 ರೂಪಾಯಿಗಳನ್ನು ನೀಡಲಾಗುತ್ತದೆ. ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು. ಇದು ಯುವಜನರಿಗೆ ವಿವಿಧ ಕ್ಷೇತ್ರಗಳಲ್ಲಿ ನೈಜ ವ್ಯವಹಾರದ ವಾತಾವರಣದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ವೃತ್ತಿಜೀವನಕ್ಕೆ ಪ್ರಯೋಜನಕಾರಿ ಅನುಭವವನ್ನು ಸೇರಿಸಲು ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಭಾರತ ಸರ್ಕಾರವು ಭಾರತೀಯ ಯುವಕರಿಗೆ ವಿದೇಶದಲ್ಲಿ ಉದ್ಯೋಗಗಳನ್ನು ಸುಲಭವಾಗಿ ಪಡೆಯಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಜರ್ಮನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಭಾರತಕ್ಕಾಗಿ ಕೌಶಲ್ಯದ ಕಾರ್ಮಿಕ ಕಾರ್ಯತಂತ್ರವನ್ನು ಉಲ್ಲೇಖಿಸಿದ ಶ್ರೀ ಮೋದಿ, ಜರ್ಮನಿಯು ಪ್ರತಿ ವರ್ಷ ನುರಿತ ಭಾರತೀಯ ಯುವಕರಿಗೆ ನೀಡುವ ವೀಸಾಗಳ ಸಂಖ್ಯೆಯನ್ನು 20 ಸಾವಿರದಿಂದ 90 ಸಾವಿರಕ್ಕೆ ಹೆಚ್ಚಿಸಿದೆ ಎಂದು ಹೇಳಿದರು. ಇದರಿಂದ ಭಾರತದ ಯುವಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಗಲ್ಫ್ ದೇಶಗಳಲ್ಲದೆ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಮಾರಿಷಸ್, ಇಸ್ರೇಲ್, ಯುಕೆ ಮತ್ತು ಇಟಲಿಯನ್ನು ಒಳಗೊಂಡಂತೆ 21 ದೇಶಗಳೊಂದಿಗೆ ಭಾರತವು ಇತ್ತೀಚಿನ ವರ್ಷಗಳಲ್ಲಿ ವಲಸೆ ಮತ್ತು ಉದ್ಯೋಗ ಸಂಬಂಧಿತ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಶ್ರೀ ಮೋದಿ ತಿಳಿಸಿದರು. ಪ್ರತಿ ವರ್ಷ 3 ಸಾವಿರ ಭಾರತೀಯರು ಯುಕೆಯಲ್ಲಿ ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು 2 ವರ್ಷಗಳ ವೀಸಾವನ್ನು ಪಡೆಯಬಹುದು, 3 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದರು. "ಭಾರತದ ಪ್ರತಿಭೆಯು ಭಾರತದ ಪ್ರಗತಿಗೆ ಮಾತ್ರವಲ್ಲದೆ ಪ್ರಪಂಚದ ಪ್ರಗತಿಗೆ ಮಾರ್ಗದರ್ಶನ ನೀಡುತ್ತದೆ" ಎಂದು ಶ್ರೀ ಮೋದಿ ಹೇಳಿದರು. ಆ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಯುವಕರು ಅವಕಾಶವನ್ನು ಪಡೆಯುವ ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸುವ ಆಧುನಿಕ ವ್ಯವಸ್ಥೆಯನ್ನು ರಚಿಸುವುದು ಇಂದಿನ ಸರ್ಕಾರದ ಪಾತ್ರವಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಆದ್ದರಿಂದ ಭಾರತದ ಯುವಕರಿಗೆ ಮತ್ತು ನಾಗರಿಕರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುವುದು ಅವರ ಗುರಿಯಾಗಬೇಕು ಎಂದು ಅವರು ವಿವಿಧ ಹುದ್ದೆಗಳಿಗೆ ಹೊಸದಾಗಿ ನೇಮಕಗೊಂಡ ಯುವಕರಿಗೆ ಕರೆ ನೀಡಿದರು.
ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ತೆರಿಗೆದಾರರು ಮತ್ತು ನಾಗರಿಕರ ಪ್ರಮುಖ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ಸರ್ಕಾರವು ನಾಗರಿಕರಿಂದ ಅಸ್ತಿತ್ವದಲ್ಲಿದೆ ಮತ್ತು ಅವರಿಗೆ ಸೇವೆ ಸಲ್ಲಿಸಲು ನೇಮಕಗೊಂಡಿದೆ ಎಂದು ಹೇಳಿದರು. ಪೋಸ್ಟ್ ಮ್ಯಾನ್ ಅಥವಾ ಪ್ರೊಫೆಸರ್ ಹುದ್ದೆಯೇ ಆಗಿರಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ಅವರ ಆದ್ಯ ಕರ್ತವ್ಯ ಎಂದು ಪುನರುಚ್ಚರಿಸಿದರು. ದೇಶವು ಅಭಿವೃದ್ಧಿ ಹೊಂದಲು ನಿರ್ಧರಿಸಿರುವ ಸಮಯದಲ್ಲಿ ಹೊಸ ನೇಮಕಾತಿಗಳು ಸರ್ಕಾರಕ್ಕೆ ಸೇರ್ಪಡೆಗೊಂಡಿವೆ ಎಂದು ಮೋದಿ ಒತ್ತಿ ಹೇಳಿದರು. ಆದ್ದರಿಂದ, ಈ ಗುರಿಯನ್ನು ಸಾಧಿಸಲು, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಕೃಷ್ಟತೆಯನ್ನು ಸಾಧಿಸಬೇಕು ಮತ್ತು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕೊಡುಗೆ ನೀಡಬೇಕು ಎಂದು ಪ್ರಧಾನಿ ಹೇಳಿದರು. ಹೊಸದಾಗಿ ಸೇರ್ಪಡೆಗೊಂಡವರು ಉತ್ತಮ ಸಾಧನೆ ಮಾಡುವುದಲ್ಲದೆ ಶ್ರೇಷ್ಠತೆಗಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. "ನಮ್ಮ ದೇಶದ ಸರ್ಕಾರಿ ನೌಕರರು ಪ್ರಪಂಚದಾದ್ಯಂತ ಗುರುತಿಸಲ್ಪಡುವ ಮಾದರಿಯನ್ನು ಸ್ಥಾಪಿಸಬೇಕು" ಎಂದು ಅವರು ಹೇಳಿದರು. ರಾಷ್ಟ್ರವು ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಬದ್ಧತೆಗಳನ್ನು ಈಡೇರಿಸಲು ಈ ನಿರೀಕ್ಷೆಗಳನ್ನು ಪೂರೈಸಬೇಕು ಎಂದು ಹೇಳಿದರು.
ಉದ್ಯೋಗಗಳಿಗೆ ನೇಮಕಗೊಂಡವರ ಹೊಸ ಪ್ರಯಾಣದ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಯಾವಾಗಲೂ ವಿನಮ್ರರಾಗಿರುವಂತೆ ಮತ್ತು ಅವರ ಪ್ರಯಾಣದ ಸಮಯದಲ್ಲಿ ಕಲಿಯುವ ಅಭ್ಯಾಸವನ್ನು ಕಾಪಾಡಿಕೊಳ್ಲೂವಂತೆ ಕರೆ ನೀಡಿದರು. iGOT ಕರ್ಮಯೋಗಿ ವೇದಿಕೆಯಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ವಿವಿಧ ಕೋರ್ಸ್‌ಗಳ ಲಭ್ಯತೆಯನ್ನು ಅವರು ಪ್ರಸ್ತಾಪಿಸಿದರು ಮತ್ತು ಅವರ ಅನುಕೂಲಕ್ಕೆ ತಕ್ಕಂತೆ ಈ ಡಿಜಿಟಲ್ ತರಬೇತಿ ಮಾಡ್ಯೂಲ್ ಅನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಇಂದು ನೇಮಕಾತಿ ಪತ್ರಗಳನ್ನು ಪಡೆದ ಅಭ್ಯರ್ಥಿಗಳನ್ನು ಮತ್ತೊಮ್ಮೆ ನಾನು ಅಭಿನಂದಿಸುತ್ತೇನೆ" ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಹಿನ್ನೆಲೆ
ದೇಶದಾದ್ಯಂತ 40 ಸ್ಥಳಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ, ಇದರಲ್ಲಿ ಹೊಸದಾಗಿ ನೇಮಕಗೊಂಡವರು ಕೇಂದ್ರ ಸರ್ಕಾರದ ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಂತಹ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ.
ಹೊಸದಾಗಿ ನೇಮಕಗೊಂಡವರು iGOT ಕರ್ಮಯೋಗಿ ಪೋರ್ಟಲ್ ನಲ್ಲಿ ಲಭ್ಯವಿರುವ ಆನ್‌ಲೈನ್ ಮಾಡ್ಯೂಲ್ 'ಕರ್ಮಯೋಗಿ ಪ್ರಾರಂಭ್' ಮೂಲಕ ಮೂಲಭೂತ ತರಬೇತಿಯನ್ನು ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ. 1400 ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳು ಲಭ್ಯವಿವೆ, ಇದು ಉದ್ಯೋಗಿಗಳನ್ನು ಅವರ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತದೆ.
Click here to read full text speech
देश के युवाओं को ज्यादा से ज्यादा रोजगार मिले, ये हमारा कमिटमेंट है: PM @narendramodi pic.twitter.com/EHRCSp54XZ
— PMO India (@PMOIndia) October 29, 2024
आज भारत दुनिया की तीसरी सबसे बड़ी अर्थव्यवस्था बनने की दिशा में आगे बढ़ रहा है: PM @narendramodi pic.twitter.com/IglW9zAgdB
— PMO India (@PMOIndia) October 29, 2024
हमने हर नई तकनीक में Make in India को आगे बढ़ाया।
— PMO India (@PMOIndia) October 29, 2024
हमने आत्मनिर्भर भारत पर काम किया: PM @narendramodi pic.twitter.com/vvMH2nJ0Ju
प्रधानमंत्री इंटर्नशिप योजना के तहत भारत की टॉप 500 कंपनीज में पेड इंटर्नशिप का प्रावधान किया गया है: PM @narendramodi pic.twitter.com/9Otush3bDw
— PMO India (@PMOIndia) October 29, 2024