ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಬಿಕಾನೇರ್ ನಲ್ಲಿ 24,300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 11,125 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತಸರ - ಜಾಮನಗರ ಆರ್ಥಿಕ ಕಾರಿಡಾರ್ ನ ಆರು-ಪಥದ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ವಿಭಾಗದ ಲೋಕಾರ್ಪಣೆ, ಸುಮಾರು 10,950 ಕೋಟಿ ರೂಪಾಯಿ ಮೌಲ್ಯದ ಹಸಿರು ಇಂಧನ ಕಾರಿಡಾರ್ಗಾಗಿ ಅಂತರ ರಾಜ್ಯ ಪ್ರಸರಣ ಮಾರ್ಗದ ಹಂತ-1, ಸುಮಾರು 1,340 ಕೋಟಿ ರೂಪಾಯಿ ವೆಚ್ಚದಲ್ಲಿ ಪವರ್ ಗ್ರಿಡ್ ಅಭಿವೃದ್ಧಿಪಡಿಸಲಿರುವ ಬಿಕಾನೇರ್ – ಭಿವಾಡಿ ಪ್ರಸರಣ ಮಾರ್ಗ ಮತ್ತು ಬಿಕಾನೇರ್ ನಲ್ಲಿ ಹೊಸ 30 ಹಾಸಿಗೆಗಳ ನೌಕರರ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ) ಆಸ್ಪತ್ರೆ ಉದ್ಘಾಟನೆಯಾದ ಯೋಜನೆಗಳಲ್ಲಿ ಸೇರಿವೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಕಾನೇರ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಮತ್ತು 43 ಕಿಮೀ ಉದ್ದದ ಚುರು-ರತನಗಢ್ ವಿಭಾಗದ ಜೋಡಿ ರೈಲು ಮಾರ್ಗದ ಕಾಮಗಾರಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಯೋಧರ ನಾಡಿಗೆ ನಮನ ಸಲ್ಲಿಸಿದರು ಮತ್ತು ರಾಜ್ಯದ ಅಭಿವೃದ್ಧಿಗೆ ಸಮರ್ಪಿಸಿಕೊಂಡಿರುವ ಜನರು ಯಾವಾಗಲೂ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲು ತಮಗೆ ಅವಕಾಶವನ್ನು ಒದಗಿಸುತ್ತಾರೆ ಎಂದು ಹೇಳಿದರು. 24,000 ಕೋಟಿಗೂ ಹೆಚ್ಚು ಮೌಲ್ಯದ ಇಂದಿನ ಯೋಜನೆಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ರಾಜಸ್ಥಾನವು ಎರಡು ಆಧುನಿಕ ಆರು-ಪಥದ ಎಕ್ಸ್ಪ್ರೆಸ್ವೇಗಳನ್ನು ತಿಂಗಳ ಅವಧಿಯಲ್ಲಿ ಪಡೆದುಕೊಂಡಿದೆ ಎಂದು ಹೇಳಿದರು. ಫೆಬ್ರವರಿಯಲ್ಲಿ ದೆಹಲಿ - ಮುಂಬೈ ಎಕ್ಸ್ಪ್ರೆಸ್ ಕಾರಿಡಾರ್ ನ ದೆಹಲಿ - ದೌಸಾ - ಲಾಲ್ಸೋಟ್ ವಿಭಾಗವನ್ನು ಉದ್ಘಾಟನೆ ಮಾಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಅಮೃತಸರ - ಜಾಮನಗರ ಎಕ್ಸ್ಪ್ರೆಸ್ವೇಯ 500 ಕಿಮೀ ಆರು-ಪಥದ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ವಿಭಾಗವನ್ನು ಇಂದು ಉದ್ಘಾಟಿಸುವ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ರಾಜಸ್ಥಾನ ಒಂದು ರೀತಿಯಲ್ಲಿ ದ್ವಿಶತಕ ಬಾರಿಸಿದೆ ಎಂದು ಅವರು ಹೇಳಿದರು. ಹಸಿರು ಇಂಧನ ಕಾರಿಡಾರ್ ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ) ಆಸ್ಪತ್ರೆಗಾಗಿ ಬಿಕಾನೇರ್ ಮತ್ತು ರಾಜಸ್ಥಾನದ ಜನರನ್ನು ಪ್ರಧಾನಮಂತ್ರಿ ಅಭಿನಂದಿಸಿದರು.
ರಾಜಸ್ಥಾನ ಯಾವಾಗಲೂ ಸಾಮರ್ಥ್ಯ ಮತ್ತು ಸಾಧ್ಯತೆಗಳಿಂದ ತುಂಬಿದೆ ಎಂದು ಪ್ರಧಾನಿ ಹೇಳಿದರು. ಈ ಬೆಳವಣಿಗೆಯ ಸಾಮರ್ಥ್ಯದಿಂದಾಗಿಯೇ ರಾಜ್ಯದಲ್ಲಿ ದಾಖಲೆಯ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಕೈಗಾರಿಕಾ ಅಭಿವೃದ್ಧಿಗೆ ಅಪರಿಮಿತ ಸಾಧ್ಯತೆಗಳಿರುವುದರಿಂದ ಸಂಪರ್ಕವನ್ನು ಹೈಟೆಕ್ ಮಾಡಲಾಗುತ್ತಿದೆ. ವೇಗದ ಎಕ್ಸ್ಪ್ರೆಸ್ವೇಗಳು ಮತ್ತು ರೈಲ್ವೆಗಳು ಪ್ರವಾಸೋದ್ಯಮ ಅವಕಾಶಗಳಿಗೆ ಉತ್ತೇಜನ ನೀಡುತ್ತಿವೆ, ಇವು ರಾಜ್ಯದ ಯುವಜನರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಅವರು ಹೇಳಿದರು.
ಇಂದು ಉದ್ಘಾಟನೆಗೊಂಡ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ವೇ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಇದು ರಾಜಸ್ಥಾನವನ್ನು ಹರಿಯಾಣ, ಪಂಜಾಬ್, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸಂಪರ್ಕಿಸುತ್ತದೆ, ಹಾಗೆಯೇ ಜಾಮನಗರ ಮತ್ತು ಕಾಂಡ್ಲಾದಂತಹ ಪ್ರಮುಖ ವಾಣಿಜ್ಯ ಬಂದರುಗಳನ್ನು ಬಿಕಾನೇರ್ ಮತ್ತು ರಾಜಸ್ಥಾನದಿಂದ ಪ್ರವೇಶಿಸಬಹುದು ಎಂದು ಹೇಳಿದರು. ಬಿಕಾನೇರ್ ಮತ್ತು ಅಮೃತಸರ ಮತ್ತು ಜೋಧಪುರ ನಡುವಿನ ಅಂತರವು ಕಡಿಮೆಯಾಗುತ್ತದೆ, ಜೊತೆಗೆ ಜೋಧಪುರ ಮತ್ತು ಗುಜರಾತ್ ನಡುವಿನ ಅಂತರವು ಕಡಿಮೆಯಾಗಲಿದ್ದು ಈ ಪ್ರದೇಶದ ರೈತರು ಮತ್ತು ವ್ಯವಹಾರಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. "ಈ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಇಡೀ ಪಶ್ಚಿಮ ಭಾರತದ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುತ್ತದೆ" ಎಂದರು. ತೈಲ ಕ್ಷೇತ್ರ ಸಂಸ್ಕರಣಾಗಾರಗಳೊಂದಿಗೆ ಹೆಚ್ಚಿದ ಸಂಪರ್ಕವು ಪೂರೈಕೆಯನ್ನು ಬಲಪಡಿಸುತ್ತದೆ, ಇದರಿಂದಾಗಿ ದೇಶದ ಆರ್ಥಿಕ ಬೆಳವಣಿಗೆಗಳಿಗೆ ವೇಗವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
ಜೋಡಿ ರೈಲು ಮಾರ್ಗವನ್ನು ಕುರಿತು ಮಾತನಾಡಿದ ಪ್ರಧಾನಿ, ರಾಜಸ್ಥಾನದಲ್ಲಿ ರೈಲ್ವೇ ಅಭಿವೃದ್ಧಿಗೆ ನೀಡಿದ ಆದ್ಯತೆಯನ್ನು ಒತ್ತಿ ಹೇಳಿದರು. 2004-2014 ರ ನಡುವೆ ರಾಜಸ್ಥಾನವು ರೈಲ್ವೇಗಾಗಿ ವರ್ಷಕ್ಕೆ ಸರಾಸರಿ 1000 ಕೋಟಿ ರೂ.ಗಿಂತ ಕಡಿಮೆ ಹಣವನ್ನು ಪಡೆದಿದ್ದರೆ, 2014 ರ ನಂತರ ರಾಜ್ಯವು ಪ್ರತಿ ವರ್ಷ ಸರಾಸರಿ 10,000 ಕೋಟಿ ರೂ.ಗಳನ್ನು ಪಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈ ಮೂಲಸೌಕರ್ಯ ಉತ್ತೇಜನದ ದೊಡ್ಡ ಫಲಾನುಭವಿಗಳು ಸಣ್ಣ ಉದ್ಯಮಿಗಳು ಮತ್ತು ಸಣ್ಣ- ಕೈಗಾರಿಕೆಗಳು ಎಂದು ಪ್ರಧಾನಿ ಹೇಳಿದರು. ಅವರು ಬಿಕಾನೇರ್ ನ ಉಪ್ಪಿನಕಾಯಿ, ಹಪ್ಪಳ, ನಮ್ಕೀನ್ಗಳನ್ನು ಪ್ರಸ್ತಾಪಿಸಿದರು ಮತ್ತು ಉತ್ತಮ ಸಂಪರ್ಕದೊಂದಿಗೆ, ಈ ಸಣ್ಣ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜಸ್ಥಾನದ ಅಭಿವೃದ್ಧಿಯ ಬಗ್ಗೆ ಮಾತು ಮುಂದುವರೆಸಿದ ಅವರು, ದೀರ್ಘಾವಧಿಯಿಂದ ನಿರ್ಲಕ್ಷಿಸಲ್ಪಟ್ಟ ಗಡಿ ಗ್ರಾಮಗಳಿಗೆ ಆರಂಭಿಸಲಾಗಿರುವ ವೈಬ್ರೆಂಟ್ ವಿಲೇಜ್ ಯೋಜನೆಯನ್ನು ಪ್ರಸ್ತಾಪಿಸಿದರು. “ನಾವು ಗಡಿಭಾಗದ ಗ್ರಾಮಗಳನ್ನು ದೇಶದ ‘ಮೊದಲ ಗ್ರಾಮಗಳು’ಎಂದು ಘೋಷಿಸಿದ್ದೇವೆ. ಇದು ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಈ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ದೇಶದ ಜನರಲ್ಲಿ ಹೊಸ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ರಾಜಸ್ಥಾನದಲ್ಲಿ ಕರ್ಣಿ ಮಾತೆ ಮತ್ತು ಸಲಾಸರ್ ಬಾಲಾಜಿ ಅವರ ಆಶೀರ್ವಾದದ ಕುರಿತು ಮಾತನಾಡಿದ ಪ್ರಧಾನಿ, ರಾಜ್ಯವು ಅಭಿವೃದ್ಧಿಯ ಉತ್ತುಂಗದಲ್ಲಿರಬೇಕು ಎಂದು ಹೇಳಿದರು. ಅದಕ್ಕಾಗಿಯೇ ಭಾರತ ಸರ್ಕಾರವು ರಾಜಸ್ಥಾನದ ಬೆಳವಣಿಗೆಗೆ ತನ್ನ ಎಲ್ಲಾ ಶಕ್ತಿಯೊಂದಿಗೆ ಕೆಲಸ ಮಾಡುತ್ತಿದೆ. ಎಲ್ಲರ ಒಗ್ಗಟ್ಟಿನ ಪ್ರಯತ್ನವು ರಾಜಸ್ಥಾನದ ಎಲ್ಲಾ ಅಭಿವೃದ್ಧಿ ಗುರಿಗಳನ್ನು ಸಾಕಾರಗೊಳಿಸುತ್ತದೆ ಎಂಬ ಭರವಸೆಯೊಂದಿಗೆ ಅವರು ಮಾತು ಮುಗಿಸಿದರು.
ರಾಜಸ್ಥಾನದ ರಾಜ್ಯಪಾಲ ಶ್ರೀ ಕಲ್ರಾಜ್ ಮಿಶ್ರಾ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಅಮೃತಸರ - ಜಾಮನಗರ ಆರ್ಥಿಕ ಕಾರಿಡಾರ್ ನ ಆರು-ಪಥದ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ವಿಭಾಗವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ರಾಜಸ್ಥಾನದಲ್ಲಿ 500 ಕಿಲೋಮೀಟರ್ಗೂ ಹೆಚ್ಚು ವ್ಯಾಪಿಸಿರುವ ಈ ವಿಭಾಗವನ್ನು ಹನುಮಾನಗಢ್ ಜಿಲ್ಲೆಯ ಜಖ್ರಾವಲಿ ಗ್ರಾಮದಿಂದ ಜಲೋರ್ ಜಿಲ್ಲೆಯ ಖೆತ್ಲಾವಾಸ್ ಗ್ರಾಮದವರೆಗೆ ಸುಮಾರು 11,125 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಎಕ್ಸ್ಪ್ರೆಸ್ವೇ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಪ್ರಮುಖ ನಗರಗಳು ಮತ್ತು ಕೈಗಾರಿಕಾ ಕಾರಿಡಾರ್ಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಎಕ್ಸ್ಪ್ರೆಸ್ವೇ ಸರಕುಗಳ ತಡೆರಹಿತ ಸಾಗಣೆಗೆ ಅನುಕೂಲವಾಗುವುದು ಮಾತ್ರವಲ್ಲದೆ ಅದರ ಮಾರ್ಗದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಯನ್ನೂ ಹೆಚ್ಚಿಸುತ್ತದೆ.
ಈ ಪ್ರದೇಶದಲ್ಲಿನ ವಿದ್ಯುತ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸುಮಾರು 10,950 ಕೋಟಿ ರೂಪಾಯಿ ಮೌಲ್ಯದ ಹಸಿರು ಇಂಧನ ಎನರ್ಜಿ ಕಾರಿಡಾರ್ಗಾಗಿ ಅಂತರ-ರಾಜ್ಯ ಪ್ರಸರಣ ಮಾರ್ಗದ ಹಂತ-1 ಅನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಹಸಿರು ಇಂಧನ ಕಾರಿಡಾರ್ ಸುಮಾರು 6 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಸಂಯೋಜಿಸುತ್ತದೆ ಮತ್ತು ಪಶ್ಚಿಮ ಭಾಗದಲ್ಲಿ ಥರ್ಮಲ್ ವಿದ್ಯುತ್ ಉತ್ಪಾದನೆ ಮತ್ತು ಉತ್ತರ ಭಾಗದಲ್ಲಿ ಜಲ ವಿದ್ಯುತ್ ಉತ್ಪಾದನೆಯೊಂದಿಗೆ ನವೀಕರಿಸಬಹುದಾದ ವಿದ್ಯುತ್ ಸಮತೋಲನಕ್ಕೆ ಗ್ರಿಡ್ ಸಹಾಯ ಮಾಡುತ್ತದೆ, ಇದರಿಂದಾಗಿ ಉತ್ತರ ಭಾಗ ಮತ್ತು ಪಶ್ಚಿಮ ಭಾಗದ ನಡುವೆ ಸಂವಹನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಸುಮಾರು 1,340 ಕೋಟಿ ರೂಪಾಯಿ ವೆಚ್ಚದಲ್ಲಿ ಪವರ್ ಗ್ರಿಡ್ ಅಭಿವೃದ್ಧಿಪಡಿಸಲಿರುವ ಭಿವಾಡಿ -ಬಿಕಾನೆರ್ ಪ್ರಸರಣ ಮಾರ್ಗವನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದರು. ರಾಜಸ್ಥಾನದಲ್ಲಿ 8.1 ಗಿಗಾವ್ಯಾಟ್ ಸೌರಶಕ್ತಿಯನ್ನು ಸಾಗಿಸಲು ಬಿಕಾನೇರ್ - ಭಿವಾಡಿ ಪ್ರಸರಣ ಮಾರ್ಗವು ಸಹಾಯ ಮಾಡುತ್ತದೆ.
ಬಿಕಾನೇರ್ ನಲ್ಲಿ 30 ಹಾಸಿಗೆಗಳ ಹೊಸ ನೌಕರರ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ) ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು. ಆಸ್ಪತ್ರೆಯು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಬಹುದಾದ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಪ್ರಮುಖ ಆರೋಗ್ಯ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ, ಸ್ಥಳೀಯ ಸಮುದಾಯದ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುತ್ತದೆ.
ಇದಲ್ಲದೆ, ಬಿಕಾನೇರ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನ ಮಂತ್ರಿಯವರು ಅಡಿಪಾಯ ಹಾಕಿದರು. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ನಿಲ್ದಾಣ ಕಾಮಗಾರಿಯು ಎಲ್ಲಾ ಪ್ಲಾಟ್ಫಾರ್ಮ್ಗಳ ನವೀಕರಣ ಮತ್ತು ನೆಲಹಾಸು ಮತ್ತು ಮೇಲ್ಛಾವಣಿಯನ್ನು ಒಳಗೊಂಡಿರುತ್ತದೆ ಮತ್ತು ಪ್ರಸ್ತುತ ರೈಲು ನಿಲ್ದಾಣದ ಪಾರಂಪರಿಕ ಸ್ಥಾನಮಾನದ ಸಂರಕ್ಷಣೆಯನ್ನು ಖಾತ್ರಿಪಡಿಸುತ್ತದೆ.
43 ಕಿಲೋಮೀಟರ್ ಉದ್ದದ ಚುರು-ರತನಗಢ್ ವಿಭಾಗದ ಜೋಡಿ ಮಾರ್ಗಕ್ಕೆ ಅಡಿಪಾಯವನ್ನು ಪ್ರಧಾನಿಯವರು ಹಾಕಿದರು. ಈ ಜೋಡಿ ರೈಲು ಮಾರ್ಗವು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಜಿಪ್ಸಮ್, ಸುಣ್ಣದ ಕಲ್ಲು, ಆಹಾರ ಧಾನ್ಯಗಳು ಮತ್ತು ಗೊಬ್ಬರ ಉತ್ಪನ್ನಗಳನ್ನು ಬಿಕಾನೇರ್ ಪ್ರದೇಶದಿಂದ ದೇಶದ ಇತರ ಭಾಗಗಳಿಗೆ ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ.
राजस्थान अपार सामर्थ्य और संभावनाओं का केंद्र है। pic.twitter.com/sp4xAcwSD9
— PMO India (@PMOIndia) July 8, 2023
हमने सीमांत गाँवों को देश का पहला गाँव घोषित किया है। pic.twitter.com/SVVUJsgthl
— PMO India (@PMOIndia) July 8, 2023