ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತೀಯ ಆಟಿಕೆಗಳು ಜಾಗತಿಕ ಮನ್ನಣೆಗಳಿಸಲು ಹಾಗೂ ಅವುಗಳ ಉತ್ಪಾದನೆ ಉತ್ತೇಜನಕ್ಕೆ ಮಾರ್ಗೋಪಾಯಗಳ ಕುರಿತಂತೆ ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಪ್ರಧಾನಮಂತ್ರಿ ಅವರು, ಭಾರತ ಹಲವು ಆಟಿಕೆ ಕ್ಲಸ್ಟರ್ ಗಳು ಮತ್ತು ದೇಶೀಯವಾಗಿ ಆಟಿಕೆಗಳನ್ನು ಉತ್ಪಾದಿಸುವ ಸಾವಿರಾರು ಕರಕುಶಲಕರ್ಮಿಗಳ ತವರೂರು. ಇದು ಕೇವಲ ಸಾಂಸ್ಕೃತಿಕ ಸಂಬಂಧ ಮಾತ್ರ ಹೊಂದಿಲ್ಲ. ಅದು ಜನರ ಜೀವನ ಕೌಶಲ್ಯಕ್ಕೆ ನೆರವಾಗುತ್ತಿದೆ ಮತ್ತು ಬಾಲ್ಯಾವಸ್ಥೆಯಲ್ಲಿ ಮಕ್ಕಳಲ್ಲಿ ಮನೋ ಕೌಶಲ್ಯ ವೃದ್ಧಿಸುತ್ತಿವೆ. ಅಂತಹ ಕ್ಲಸ್ಟರ್ ಗಳನ್ನು ಆವಿಷ್ಕಾರಿ ಮತ್ತು ಸೃಜನಾತ್ಮಕ ವಿಧಾನಗಳ ಮೂಲಕ ಉತ್ತೇಜಿಸಬೇಕಿದೆ ಎಂದು ಅವರು ಹೇಳಿದರು.
ಭಾರತೀಯ ಆಟಿಕೆ ಉದ್ಯಮದಲ್ಲಿ ವಿಪುಲ ಅವಕಾಶಗಳಿವೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನದಡಿ ‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗುವುದನ್ನು’(ವೋಕಲ್ ಫಾರ್ ಲೋಕಲ್) ಉತ್ತೇಜಿಸಲು ಉದ್ಯಮದಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕಾಗಿದೆ ಎಂಬುದನ್ನು ಸಭೆಯಲ್ಲಿ ತಿಳಿಸಲಾಯಿತು. ಪ್ರಧಾನಮಂತ್ರಿ ಅವರು, ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಜಾಗತಿಕ ಮಾನದಂಡಕ್ಕೆ ಹೊಂದುವಂತಹ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆಟಿಕೆಗಳು ಮಕ್ಕಳಲ್ಲಿ ಮನೋ ಕೌಶಲ್ಯ ಹಾಗೂ ಅರಿವಿನ ಕೌಶಲ್ಯ ವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಮಾಜದಲ್ಲಿ ಅವು ಹೇಗೆ ಬದಲಾವಣೆಗಳನ್ನು ಉಂಟುಮಾಡುತ್ತವೆ. ಆ ಮೂಲಕ ರಾಷ್ಟ್ರದ ಭವಿಷ್ಯದ ಪೀಳಿಗೆ ರೂಪಿಸುವಲ್ಲಿ ಹೇಗೆ ಸಹಾಯಕವಾಗುತ್ತದೆ ಎಂಬ ಬಗ್ಗೆ ಚರ್ಚಿಸಲಾಯಿತು.
ಮಕ್ಕಳ ಮನಸ್ಥಿತಿ ರೂಪಿಸುವಲ್ಲಿ ಆಟಿಕೆಗಳು ಎಷ್ಟು ಪ್ರಾಮುಖ್ಯತೆ ಪಡೆಯುತ್ತವೆ ಎಂಬುದರ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತೀಯ ಸಂಸ್ಕೃತಿ ಮತ್ತು ಪುರಾಣಗಳೊಂದಿಗೆ ಬೆಸೆದುಕೊಂಡಿರುವ ಆಟಿಕೆಗಳನ್ನು ದೇಶಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಮಕ್ಕಳ ಸಮಗ್ರ ಬೆಳವಣಿಗೆಗೆ ಕಲಿಕಾ ಸಾಮಗ್ರಿಯನ್ನಾಗಿ ಬಳಸಿಕೊಳ್ಳಬೇಕು ಎಂದರು. ಅಲ್ಲದೆ ಅವರು, ಯುವಕರು ಆವಿಷ್ಕಾರಿ ವಿನ್ಯಾಸಗಳನ್ನು ಮತ್ತು ಆಟಿಕೆಗಳನ್ನು ರೂಪಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿ, ಆಟಿಕೆಗಳು ಮಕ್ಕಳಲ್ಲಿ ರಾಷ್ಟ್ರೀಯ ಗುರಿಗಳು ಮತ್ತು ಸಾಧನೆಗಳ ನಿಟ್ಟಿನಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸುತ್ತವೆ ಎಂದರು.
ಆಟಿಕೆಗಳು ‘ಏಕ ಭಾರತ್, ಶ್ರೇಷ್ಠ ಭಾರತ್’ ಭಾವನೆ ಮತ್ತಷ್ಟು ಹೆಚ್ಚಿಸಲು ಅತ್ಯುತ್ತಮ ವಿಧಾನವಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು ಹಾಗೂ ಆಟಿಕೆಗಳು ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯಲ್ಲಿ ಅಡಗಿರುವ ಪರಿಸರಸ್ನೇಹಿ ಮನೋಭಾವವನ್ನು ಪ್ರತಿಬಿಂಬಿಸುವಂತಾಗಬೇಕು ಎಂದರು. ಅವರು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ವಿಶೇಷವಾಗಿ ಕರಕುಶಲಕರ್ಮಿಗಳು ತಯಾರಿಸುವ ಆಟಿಕೆಗಳಿಗೆ ಹೆಸರಾದ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಸಾಧನವನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತೀಯ ಪುರಾಣಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವಂತಹ ಆನ್ ಲೈನ್ ಆಟಗಳು ಸೇರಿದಂತೆ ಆಟಿಕೆ ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಯುವಕರು ಹಾಗೂ ವಿದ್ಯಾರ್ಥಿಗಳಿಗಾಗಿ ಹ್ಯಾಕಥಾನ್ ಗಳನ್ನು ಆಯೋಜಿಸುವ ಅಗತ್ಯತೆ ಇದ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಆಟಗಳ ಯುಗದ ಬಗ್ಗೆ ಒತ್ತು ನೀಡುತ್ತಾ ಪ್ರಧಾನಮಂತ್ರಿ ಅವರು, ಈ ವಲಯದಲ್ಲಿ ಲಭ್ಯವಿರುವ ಭಾರೀ ಅವಕಾಶಗಳನ್ನು ಭಾರತ ಬಳಸಿಕೊಳ್ಳಬೇಕು ಎಂದು ಹೇಳಿದರು ಹಾಗೂ ಭಾರತೀಯ ಸಂಸ್ಕೃತಿ ಮತ್ತು ಜಾನಪದ ಕತೆಗಳಿಂದ ಸ್ಫೂರ್ತಿ ಪಡೆಯುವ ಆಟಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಡಿಜಿಟಲ್ ಆಟಗಳ ವಲಯದಲ್ಲಿ ಮುಂಚೂಣಿಗೆ ಬರಬೇಕು ಎಂದರು.