ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಮೊರ್ಬಿಯಲ್ಲಿ ನಡೆದ ದುರದೃಷ್ಟಕರ ಸೇತುವೆ ಅಪಘಾತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸಲು ಸಭೆ ನಡೆಸಿದರು.
ಅಧಿಕಾರಿಗಳು ಸಂತ್ರಸ್ತ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಈ ದುರಂತದ ಸಮಯದಲ್ಲಿ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯ ದೊರೆಯುವಂತೆ ಖಾತರಿಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
ರಕ್ಷಣಾ ಕಾರ್ಯಾಚರಣೆಗಳು ಮತ್ತು ಸಂತ್ರಸ್ತರಿಗೆ ಒದಗಿಸಲಾದ ನೆರವಿನ ಬಗ್ಗೆ ಅಧಿಕಾರಿಗಳು ಪ್ರಧಾನ ಮಂತ್ರಿಯವರಿಗೆ ವಿವರಿಸಿದರು.
ಈ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಗುರುತಿಸುವ ವಿವರವಾದ ಮತ್ತು ವಿಸ್ತೃತವಾದ ತನಿಖೆಯನ್ನು ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತನಿಖೆಯಿಂದ ಹೊರಬರುವ ಪ್ರಮುಖ ಅಂಶಗಳನ್ನು ಪಾಠಗಳನ್ನಾಗಿ ತಿಳಿದು, ಆದಷ್ಟು ಬೇಗ ಜಾರಿಗೆ ತರಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಸಿಎಂ ಭೂಪೇಂದ್ರಭಾಯಿ ಪಟೇಲ್, ಗೃಹ ಸಚಿವ ಹರ್ಷ ಸಾಂಘವಿ, ಗುಜರಾತ್ ಸರಕಾರದ ಸಚಿವ ಬ್ರಿಜೇಶ್ ಮೆರ್ಜಾ, ಗುಜರಾತ್ ಮುಖ್ಯ ಕಾರ್ಯದರ್ಶಿ, ರಾಜ್ಯ ಡಿಜಿಪಿ, ಸ್ಥಳೀಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಶಾಸಕರು ಮತ್ತು ಸಂಸದರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು, ಮೊರ್ಬಿಯನ್ನು ತಲುಪಿದ ನಂತರ, ಪ್ರಧಾನಮಂತ್ರಿಯವರು ಸೇತುವೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಆಸ್ಪತ್ರೆಗೂ ತೆರಳಿದ ಅವರು, ಅಲ್ಲಿ ಗಾಯಾಳುಗಳು ಆರೋಗ್ಯ ವಿಚಾರಿಸಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿರುವವರೊಂದಿಗೆ ಸಂವಾದ ನಡೆಸಿ, ಅವರ ಧೈರ್ಯವನ್ನು ಪ್ರಧಾನಿ ಶ್ಲಾಘಿಸಿದರು.